Wednesday, November 12, 2014

ಸಚಿನ್ ಮನದಾಳವನ್ನು ತೆರೆದಿಟ್ಟ ಪುಸ್ತಕ: ಪ್ಲೇಯಿಂಗ್ ಇಟ್ ಮೈ ವೇ

ಕಳೆದ ವಾರ ಬಿಡುಗಡೆಯಾದ ಕ್ರಿಕೆಟ್ ಲೋಕದ ದಂತಕಥೆ, ಅಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು, ಸಚಿನ್ ತೆಂಡೂಲ್ಕರ್ ರವರ ಆತ್ಮಕಥೆ “ಪ್ಲೇಯಿಂಗ್ ಇಟ್ ಮೈ ವೇ” ನ ಆಯ್ದ ಭಾಗಗಳ ಕನ್ನಡಾನುವಾದವನ್ನು ಕನ್ನಡದ ಖ್ಯಾತ ದಿನಪತ್ರಿಕೆ “ಪ್ರಜಾ ವಾಣಿ” ಯ ಪತ್ರಿಕಾ ಮಿತ್ರರು ಪ್ರಕಟಿಸಿರುತ್ತಾರೆ. ಕೆಲವು ಮೂಲಗಳ ಪ್ರಕಾರವಾಗಿ ಈ ಸಚಿನ್ ಆತ್ಮಕಥೆಯು ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಲ್ಲಿಯೂ ಶೀಘ್ರದಲ್ಲಿ ಪ್ರಕಟವಾಗಲಿಕ್ಕಿದೆಯಂತೆ... ಇದೇ ಕುತೂಹಲದಲ್ಲಿ ನಾನು ಈ ಅನುವಾದವನ್ನು ತಮ್ಮಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸಚಿನ್ ಆತ್ಮಕಥೆ ಆದಷ್ಟು ಬೇಗನೇ ಕನ್ನಡದಲ್ಲಿಯೂ ಸಿಗುವಂತಾಗಲಿ, ಆ ಮುಖೇನ ಇಂಗ್ಲಿಷ್ ತಿಳಿಯದವರೂ ಸಹ ಸಚಿನ್ ರನ್ನು ತಿಳಿದುಕೊಳ್ಳುವುದಕ್ಕೆ ಅವಕಾಶವಾಗಲಿ. ಎಂದು ಆಶಿಸೋಣ....


***

ಅಕ್ಕ ನೀಡಿದ ಆ ಬ್ಯಾಟು

‘ಅಕ್ಕ ಸವಿತಾ ಕೂಡಾ ನನ್ನಪ್ಪನಂತೆ, ಅತ್ಯಂತ ಶಾಂತ ಸ್ವಭಾವದವಳು. ಅವಳು ಒಮ್ಮೆ ಕಾಶ್ಮೀರಕ್ಕೆ ಹೋಗಿ ಬರುವಾಗ ನನಗೊಂದು ಕ್ರಿಕೆಟ್‌ ಬ್ಯಾಟ್‌ ತಂದಿದ್ದಳು. ಅದು ವಿಲೊ ಮರದಿಂದ ತಯಾರಿಸಿದ್ದ ಪುಟ್ಟ ಬ್ಯಾಟು. ಆಗ ನನಗೆ ಐದು ವರ್ಷ ವಯಸ್ಸು. ಬ್ಯಾಟಿನೊಂದಿಗಿನ ಪ್ರೀತಿ ಆ ದಿನಗಳಲ್ಲೇ ನನ್ನಲ್ಲಿ ಮೊಳೆಯಿತು’ ಎಂದು ತಾವು ಮೊದಲ ಬಾರಿಗೆ ಬ್ಯಾಟು ಹಿಡಿದ ದಿನಗಳನ್ನು ಸಚಿನ್‌ ನೆನಪಿಸಿಕೊಂಡಿದ್ದಾರೆ.

ಅಚ್ರೇಕರ್‌ ಸರ್‌ ಮಾಡಿದ ‘ಮ್ಯಾಜಿಕ್‌’

‘ನನಗೆ ಕ್ರಿಕೆಟ್‌ ಕುರಿತು ಅಪಾರ ಪ್ರೀತಿ ಇತ್ತು, ನಿಜ. ಆದರೂ ನಮ್ಮ ಮನೆ ಇದ್ದ ಅಪಾರ್ಟ್‌ಮೆಂಟ್‌ನ ಹೊರಗೆ ಹುಡುಗರೊಡನೆ ಹತ್ತು ಹಲವು ಆಟಗಳಲ್ಲಿ ತಲ್ಲೀನನಾಗಿ ಬಿಡುತ್ತಿದ್ದೆ. ಅದಾಗಲೇ ನಾನು ಶಿವಾಜಿ ಪಾರ್ಕ್‌ನಲ್ಲಿ ರಮಾಕಾಂತ ಅಚ್ರೇಕರ್‌ ಸರ್‌ ಬಳಿ ತರಬೇತಿ ಸೇರಿಯಾಗಿತ್ತು. ಅದನ್ನೂ ಮರೆತು ನಮ್ಮ ಮನೆಯ ಹೊರಗೆ ಇತರ ಹುಡುಗರೊಡನೆ ಆಟದಲ್ಲಿ ಮಗ್ನವಾಗುತ್ತಿದ್ದೆ. ಆಗ ಅಚ್ರೇಕರ್‌ ಸರ್‌ ನನಗಾಗಿ ಒಂದಷ್ಟು ಹೊತ್ತು ಕಾದು, ರೋಸಿ ಹೋಗುತ್ತಿದ್ದರು. ಸ್ಕೂಟರ್‌ ಏರಿ ನೇರವಾಗಿ ನನ್ನ ಮನೆಯ ಬಳಿ ಬರುತ್ತಿದ್ದರು.

ಹುಡುಗರ ಗುಂಪಿನಲ್ಲಿರುತ್ತಿದ್ದ ನನ್ನ ರಟ್ಟೆಗಳನ್ನು ಹಿಡಿದು ದರದರನೆ ಎಳೆದೊಯ್ಯುತ್ತಿದ್ದರು. ಸ್ಕೂಟರ್‌ನ ಹಿಂಬದಿ ಸೀಟಿನಲ್ಲಿ ಕುಳ್ಳಿರಿಸಿಕೊಂಡು ‘ನೆಟ್ಸ್‌’ ಅಭ್ಯಾಸಕ್ಕೆ ಶಿವಾಜಿ ಪಾರ್ಕ್‌ನತ್ತ ಸಾಗುತ್ತಿದ್ದರು. ನಾನು ಮೈದಾನಕ್ಕೆ ಹೋಗದಿದ್ದುದಕ್ಕೆ ಏನೇ ಸಬೂಬು ಹೇಳಿದರೂ, ಅವರು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ. ‘ಏನೇನೋ ಆಟವಾಡುತ್ತಾ ಸಮಯ ವ್ಯರ್ಥ ಮಾಡಬೇಡ. ನೆಟ್ಸ್‌ ಬಳಿ ಕ್ರಿಕೆಟ್‌ ನಿನಗಾಗಿ ಕಾಯುತ್ತಿದೆ. ಕಷ್ಟ ಪಟ್ಟು ಅಭ್ಯಾಸ ಮಾಡು. ಮುಂದೆ ಅದೆಂತಹ ಮ್ಯಾಜಿಕ್‌ ನಡೆಯುತ್ತೆ ಎಂಬುದು ನಿನಗೇ ಗೊತ್ತಾಗುತ್ತದೆ...’ ಎಂಬುದಾಗಿ ದಾರಿಯುದ್ದಕ್ಕೂ ನನಗೆ ಹಿತವಚನ ಹೇಳುತ್ತಾ ಸ್ಕೂಟರ್‌ ಚಲಾಯಿಸುತ್ತಿದ್ದರು.

ಅವರು ಅಂದು ನನ್ನನ್ನು ನನ್ನ ವಾರಗೆಯ ಹುಡುಗರ ನಡುವಿನಿಂದಲೇ ಕೈ ಹಿಡಿದು ಎಳೆದೊಯ್ದಾಗ ತೀವ್ರ ಅಸಮಾಧಾನವಾಗಿತ್ತು. ಮುಖ ಗಂಟಿಕ್ಕಿಕೊಂಡಿದ್ದೆ. ಅಂದಿನ ನನ್ನ ವರ್ತನೆಯನ್ನು ನೆನಪಿಸಿಕೊಂಡಾಗ ಇವತ್ತು ನಾಚಿಕೆ ಎನಿಸುತ್ತದೆ. ಹೌದು, ಅಚ್ರೇಕರ್‌ ಸರ್‌ ಇಲ್ಲದಿದ್ದಿದ್ದರೆ ನಾನು ಇವತ್ತಿನ ಈ ಎತ್ತರದಲ್ಲಿರುತ್ತಲೇ ಇರಲಿಲ್ಲ’ ಎಂದೂ ತಮ್ಮ ಕ್ರಿಕೆಟ್‌ ಗುರು ಅಚ್ರೇಕರ್‌ ಅವರ ಬಗ್ಗೆ ಸಚಿನ್‌ ಅತೀವ ಕೃತಜ್ಞತೆಯಿಂದ ಮಾತನಾಡುತ್ತಾರೆ.

ದೈವಭಕ್ತರಾದ ಸಚಿನ್‌ ಅವರಿಗೆ ತಮ್ಮ ತಂದೆ, ತಾಯಿ, ಗುರುಗಳ ಬಗ್ಗೆ ಅಪಾರ ಗೌರವ. ತಮಗೆ ನೆರವು ನೀಡಿದವರನ್ನಂತೂ ಅವರು ಮರೆಯುವುದೇ ಇಲ್ಲ. ಈ ಕೃತಿಯ ಹಲವು ಕಡೆ ಇದಕ್ಕೆ ನಿದರ್ಶನಗಳು ಸಿಗುತ್ತವೆ. ‘ನಾನು ಯಾವುದೇ ಸರಣಿಯಲ್ಲಿ ಆಡುವುದಕ್ಕೆ ಮೊದಲು ಅಥವಾ ಹೊರಗೆ ಪ್ರವಾಸಕ್ಕೆ ತೆರಳಬೇಕಾದ ಸಂದರ್ಭಗಳಲ್ಲಿ, ಅದೆಷ್ಟೇ ಒತ್ತಡವಿದ್ದರೂ ಮುಂಬೈನ ನಾಲ್ಕು ಕಡೆ ಭೇಟಿ ನೀಡುತ್ತೇನೆ.

ಶಿವಾಜಿ ಪಾರ್ಕ್‌ನಲ್ಲಿರುವ ಗಣೇಶ ದೇವಸ್ಥಾನ, ಪ್ರಭಾವತಿಯಲ್ಲಿರುವ ಸಿದ್ಧಿ ವಿನಾಯಕ ದೇಗುಲಗಳಿಗೆ ಹೋಗಿ ಪ್ರಾರ್ಥಿಸುತ್ತೇನೆ. ನಂತರ ನನ್ನ ಆಂಟಿ ಮತ್ತು ಅಂಕಲ್‌ ಮನೆಗೆ ಹೋಗಿ ಮಾತನಾಡುತ್ತೇನೆ. ಅಚ್ರೇಕರ್‌ ಸರ್‌ ಮನೆಗೆ ಹೋಗಿ ಕೆಲವು ನಿಮಿಷ ಅವರೊಂದಿಗೆ ಚರ್ಚಿಸಿ ಅವರ ಆಶೀರ್ವಾದ ಪಡೆಯುತ್ತೇನೆ. ಈ ನಾಲ್ಕು ಸ್ಥಳಗಳಿಗೆ ಭೇಟಿ ನೀಡಿದ ನಂತರವೇ ನಾನು ಮುಂಬೈನಿಂದ ಹೊರಗೆ ಕಾಲಿಡುವುದು’ ಎಂದೂ ಸಚಿನ್‌ ಒಂದು ಕಡೆ ಬರೆದಿದ್ದಾರೆ.

ರಿಚರ್ಡ್ಸ್‌ ಜತೆಗಿನ ಭೇಟಿ ಸಂಭ್ರಮ
‘ಕ್ರಿಕೆಟಿಗನಾಗಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದ ದಿನಗಳಿಂದಲೇ ವೆಸ್ಟ್‌ ಇಂಡೀಸ್‌ನ ವಿವ್‌ ರಿಚರ್ಡ್‌್ಸ ನನ್ನ ‘ಹೀರೊ’ ಆಗಿದ್ದರು. ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನಾನು ಹೇಗೆ ತಾನೆ ಮರೆಯಲಿ. ಅದೊಂದು ದಿನ ಅಡಿಲೇಡ್‌ನ ಹೋಟೆಲ್‌ ಒಂದರ ಮೊಗಸಾಲೆಯಲ್ಲಿ ನಾನು ಮತ್ತು ಸಂಜಯ್‌ ಮಂಜ್ರೇಕರ್‌ ಲೋಕಾಭಿರಾಮ ಮಾತನಾಡುತ್ತಾ ನಿಂತಿದ್ದೆವು. ಕಾರೊಂದು ಬಂದು ಹೋಟೆಲ್‌ನ ಪ್ರವೇಶ ದ್ವಾರದಲ್ಲಿ ನಿಂತಿತು.

ಅದರೊಳಗಿಂದ ಹ್ಯಾಟು ಧರಿಸಿದ ವ್ಯಕ್ತಿಯೊಬ್ಬರು ಇಳಿದು, ಹೋಟೆಲ್‌ನ ಒಳಗೆ ನಡೆದು ಬಂದರು. ‘ಇವರನ್ನು ಹಿಂದೆ ಎಲ್ಲಿಯೋ ನೋಡಿದಂತಿದೆಯಲ್ಲಾ...’ ಎಂದು ಸಂಜಯ್‌ಗೆ ಹೇಳಿದೆ. ಅಷ್ಟರಲ್ಲಿ ಅವರು ನಮ್ಮ ಸಮೀಪದಿಂದಲೇ ನಡೆದು ಹೋದರು. ‘ಏಯ್‌, ನನಗೆ ನಂಬಲಿಕ್ಕೇ ಆಗುತ್ತಿಲ್ಲ. ಇವರು ವಿವ್‌ ರಿಚರ್ಡ್‌್ಸ. ನನ್ನ ಬಾಲ್ಯ ಕಾಲದ ಹೀರೊ’ ಎಂದು ಸಂಜಯ್‌ ಮುಖ ನೋಡಿ ನಾನು ಉದ್ಗರಿಸಿದ್ದೆ. ರಿಚರ್ಡ್‌್ಸ ತಮ್ಮ ಕೊಠಡಿಯತ್ತ ಹೊರಟು ಹೋದರು. ‘ಸಂಜಯ್‌, ನಡಿ ಮಾರಾಯಾ. ನನಗೆ ಅವರನ್ನು ಭೇಟಿಯಾಗಲೇ ಬೇಕು’ ಎಂದು ದುಂಬಾಲು ಬಿದ್ದೆ. ಆಗ ಸಂಜಯ್‌ ಹೋಟೆಲ್‌ ಸ್ವಾಗತಕಾರಿಣಿಯ ಬಳಿ ಹೋಗಿ ರಿಚರ್ಡ್ಸ್ ಕೊಠಡಿಯ ಸಂಖ್ಯೆ ತಿಳಿದುಕೊಂಡರು.

ಸಂಜಯ್‌ 1989ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದದ ಕ್ರಿಕೆಟ್‌ ಸರಣಿ ಆಡಿದ್ದ ಭಾರತ ತಂಡದಲ್ಲಿದ್ದವರು. ಆಗಿನ ಆ ಪರಿಚಯವನ್ನೇ ನೆಪ ಮಾಡಿಕೊಂಡು ಸಂಜಯ್‌ ಬಾಗಿಲು ತಟ್ಟಿದರು. ನಾವು ಕೊಠಡಿಯ ಒಳಗೆ ಹೋದೆವು. ಅಲ್ಲಿದ್ದುದು ಕೇವಲ ಮೂರು ನಿಮಿಷಗಳಷ್ಟೇ. ನಾನು ರಿಚರ್ಡ್ಸ್‌ ಅವರಿಗೆ ಹಲೋ ಎಂದಿದ್ದೆ ಅಷ್ಟೆ. ಆದರೆ ಅದೊಂದು ರೋಚಕ ಅನುಭವ’. ಈ ಅನುಭವವನ್ನು ಹಂಚಿಕೊಳ್ಳುವಾಗ ಸಚಿನ್‌ ತಾವು ಕ್ರಿಕೆಟ್‌ ರಂಗದ ಉತ್ತುಂಗಕ್ಕೆ ಏರಿದ್ದನ್ನು ಮರೆತು ಬಿಡುತ್ತಾರೆ. ದಶಕಗಳ ಹಿಂದೆ ಇನ್ನೊಂದು ಶಿಖರವನ್ನು  ಬೆರಗಿನಿಂದ ನೋಡಿದ್ದ ಕ್ಷಣಗಳನ್ನು ನೆನೆದು ಸಂಭ್ರಮಿಸುತ್ತಾರೆ.

ಸಚಿನ್‌ ಕಣ್ಣ ಬೆಳಕಲ್ಲಿ ಅಂಜಲಿ

ಸಚಿನ್‌ ಬದುಕಲ್ಲಿ ಸ್ಫೂರ್ತಿಯ ಚೇತನವಾದವರು ಅಂಜಲಿ. ಇವರಿಬ್ಬರ ಪ್ರೇಮ ಪ್ರಕರಣದ ಮೊದಲ ದಿನಗಳ ಬಗ್ಗೆ ಸಚಿನ್‌ ಈ ಕೃತಿಯಲ್ಲಿ ಮನಮೋಹಕವಾಗಿ ಬರೆದಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ..
***
‘1990ರ ಒಂದು ದಿನ. ನಾನು ಇಂಗ್ಲೆಂಡ್‌ ಪ್ರವಾಸ ಮುಗಿಸಿ ತಂಡದ ಜತೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದು, ನನ್ನ ಬ್ಯಾಗ್‌ಗಾಗಿ ಕಾಯುತ್ತಾ ನಿಂತಿದ್ದೆ. ಆಗ ಸ್ವಲ್ಪ ದೂರದಲ್ಲಿ ನಿಂತಿದ್ದ ಚೆಲುವೆಯೊಬ್ಬಳು ನನ್ನ ಮನ ಸೆಳೆದಿದ್ದಳು. ಆಕೆಯೂ ನನ್ನನ್ನು ದಿಟ್ಟಿಸಿದ್ದು ಗಮನಿಸಿ, ತಲೆ ತಗ್ಗಿಸಿಕೊಂಡು ಬ್ಯಾಗು ಎತ್ತಿಕೊಂಡು ಹೊರನಡೆದೆ. ವಿಮಾನ ನಿಲ್ದಾಣದಿಂದ ಹೊರ ಬರುವಾಗ ಮತ್ತೊಮ್ಮೆ ಆಕೆ ಕಣ್ಣಿಗೆ ಬಿದ್ದಳು.

ಕಿತ್ತಳೆ ಬಣ್ಣದ ಟೀಶರ್ಟ್‌, ನೀಲಿ ಜೀನ್ಸ್‌ ಧರಿಸಿದ್ದ ಅವಳು ನನ್ನ ಹಿಂದೆಯೇ ಓಡೋಡಿ ಬರುತ್ತಿರುವುದು ಕಂಡು ಬಂದಿತು. ‘ಬಲು ಮುದ್ದಾಗಿದ್ದಾನೆ...’ ಎಂದು ತನ್ನ ಗೆಳತಿಯ ಜತೆಗೆ ಹೇಳಿದ್ದೂ ಕೇಳಿಸಿತ್ತು. ಹೊರಗಡೆ ಅಣ್ಣ ಅಜಿತ್‌, ನಿತಿನ್‌ ಅಲ್ಲದೆ, ಬಾಲ್ಯದ ಗೆಳೆಯ ಸುನಿಲ್‌ ಹರ್ಷೆ ಕಾಯುತ್ತಿದ್ದರು. ನಾನು ಹಿಂತಿರುಗಿ ನೋಡಲಿಲ್ಲ. ಆದರೆ ನನ್ನ ಹೃದಯ ಅದೇಕೋ ಏನೋ ಹಿಂತಿರುಗಿ ನೋಡುತಿತ್ತು !
ವಿಮಾನ ನಿಲ್ದಾಣದಲ್ಲಿ ನನ್ನನ್ನು ನೋಡಿದ ಆ ಹುಡುಗಿ ಸುಮ್ಮನಿರಲಿಲ್ಲ. ಆ ದಿನಗಳಲ್ಲಿ ಕ್ಲಬ್‌ ಕ್ರಿಕೆಟ್‌ ಆಡುತ್ತಿದ್ದ ಆಕೆಯ ಪರಿಚಿತ ಮುಫಿ ಮುಫಾಜಲ್‌ ಲಡ್ಕವಾಲಾ ನೆರವಿನಿಂದ ನನ್ನ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಳು.

ಒಂದು ದಿನ ಮನೆಯ ಫೋನ್‌ ಟ್ರಿಣ್‌ ಟ್ರಿಣ್‌ ಎಂದಿತು. ಸಾಮಾನ್ಯವಾಗಿ ನಾನು ಊರಿಗೆ ಬಂದರೂ ಮನೆಯಲ್ಲಿರುವುದೇ ಕಡಿಮೆ. ಇದ್ದರೂ ಫೋನ್‌ ಎತ್ತುವ ಪ್ರಶ್ನೆ ಇಲ್ಲವೇ ಇಲ್ಲ ಬಿಡಿ. ಆದರೆ ಅವತ್ತು ಅದೇಕೋ ಏನೋ ರಿಸೀವರ್‌ ಎತ್ತಿದೆ. ಅತ್ತ ಕಡೆಯಿಂದ ‘ಮೊನ್ನೆ ಏರ್‌ಪೋರ್ಟ್‌ನಲ್ಲಿ ನಿಮ್ಮನ್ನು ನೋಡಿದ್ದೆನಲ್ಲಾ ಆ ಹುಡುಗಿ ನಾನು. ನೆನಪಾಯಿತಾ’ ಎಂಬ ಮಧುರ ಧ್ವನಿ ಕೇಳಿಸಿತು. ನಾನು ‘ನೆನಪಾಗುತ್ತಿದೆ. ಕಿತ್ತಳೆ ಬಣ್ಣದ ಟೀಶರ್ಟ್‌, ನೀಲಿ ಜೀನ್ಸ್‌ ಧರಿಸಿದ್ದವಳಲ್ಲವೇ’ ಎಂದೆ. ಆಕೆಗೆ ತುಂಬಾ ಖುಷಿಯಾದಂತೆನಿಸಿತು.

‘ಭೇಟಿಯಾಗಲು ಸಾಧ್ಯವಾ’ ಎಂದು ಕೇಳಿದಳು. ಆಗ ನಾನು ‘ಇಂಡಿಯ ಕ್ರಿಕೆಟ್‌ ಕ್ಲಬ್‌ನಲ್ಲಿ ಭೇಟಿಯಾಗುವಾ’ ಎಂದೆ. ಆಕೆ ಕ್ಲಬ್‌ಗೆ ಬಂದಳು. ಅಲ್ಲಿ ನಾವಿಬ್ಬರೂ ಮಾತನಾಡುವುದಾದರೂ ತಾನೆ ಏನು. ಏಕೆಂದರೆ ಸುತ್ತಲೂ ನೂರಾರು ಜನ ತುಂಬಿಕೊಂಡಿದ್ದರು. ನಮ್ಮ ಟೆಲಿಫೋನ್‌ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡೆವು, ಅಷ್ಟೇ. ನಂತರ ಆಗಿಂದಾಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಈ ನಡುವೆ ಮನೆಯಲ್ಲಿ ಮೀನಾ ಅತ್ತಿಗೆಗೆ ಏನೋ ಅನುಮಾನ. ಫೋನು ಬರುತ್ತಿದ್ದಂತೆ ನಾನು ಮುಖ ಅರಳಿಸಿ ಮಾತನಾಡುವುದನ್ನೆಲ್ಲಾ ಆಕೆ ಗಮನಿಸಿಬಿಟ್ಟಿದ್ದಳು. ‘ಯಾರೋ ಆ ಹುಡುಗಿ, ಪದೇ ಪದೇ ಫೋನ್‌ ಮಾಡ್ತಾಳಲ್ಲಾ..’ ಎಂದು ಅತ್ತಿಗೆ ಕೇಳಿದಾಗ ಸುಮ್ಮನಿದ್ದು ಬಿಟ್ಟಿದ್ದೆ.

‘ವರದಿಗಾರ್ತಿ’ಗೆ ಚಾಕಲೆಟ್‌ ಕೊಟ್ಟಿದ್ದು...
ಅದೊಂದು ದಿನ ಆ ಹುಡುಗಿ ಅಂಜಲಿ ನನ್ನ ಮನೆಗೆ ಬರುತ್ತೇನೆಂದಳು. ಬಾ ಎಂದೆ. ಆಕೆ ನಮ್ಮ ಮನೆಗೆ ಬಂದು ಪತ್ರಿಕೆಯೊಂದರ ವರದಿಗಾರ್ತಿ ಎಂದು ಪರಿಚಯಿಸಿಕೊಂಡಳು. ನಾನು ಆಕೆಯ ಎದುರು ಸಂದರ್ಶನಕ್ಕೆ ಕುಳಿತು ಕೊಳ್ಳುವ ಬದಲು ಇಂಗ್ಲೆಂಡಿನಿಂದ ತಂದಿದ್ದ ಚಾಕ್‌ಲೇಟ್‌ಗಾಗಿ ಹುಡುಕಾಟ ನಡೆಸಿದ್ದೆ. ಎರಡೇ ಚಾಕ್‌ಲೆಟ್‌ ಉಳಿದಿದ್ದವು. ಅವುಗಳನ್ನೇ ಮುತುವರ್ಜಿಯಿಂದ ತುಂಡು ಮಾಡಿ ಬಟ್ಟಲಲ್ಲಿಟ್ಟು ಅದನ್ನು ಆಕೆಯ ಮುಂದಿಟ್ಟು, ವಿಧೇಯನಾಗಿ ನಿಂತಿದ್ದೆ. ಆಕೆಯೂ ಹೆಚ್ಚು ಹೊತ್ತು ಇರಲಿಲ್ಲ. ಬೇಗನೆ ಹೊರಟು ಹೋದಳು. ಆದರೆ ಅವಳ ಆ ಇರುವಿಕೆ ನನ್ನ ಮನಸ್ಸನ್ನು ಇನ್ನಿಲ್ಲದಂತೆ ಮುದಗೊಳಿಸಿತ್ತು.

ನಾನು ಅಂದು ಆ ‘ವರದಿಗಾರ್ತಿ’ಯ ಎದುರು ಹೆಚ್ಚು ಮಾತನಾಡಿರಲಿಲ್ಲ. ಏನೇನೋ ಪೆದ್ದು ಪೆದ್ದಾಗಿ ಮಾತನಾಡಬಾರದೆಂದು ನಿರ್ಧರಿಸಿ ಮೌನವಾಗಿದ್ದೆ. ಆಕೆಯೇ ಮಾತನಾಡಿದ್ದಳು. ಆ ದಿನಗಳಲ್ಲಿ ನನ್ನ ಇಂಗ್ಲಿಷ್‌ ಭಾಷೆ ಕೂಡಾ ಅಷ್ಟೇನೂ ಚೆನ್ನಾಗಿರಲಿಲ್ಲ, ಬಿಡಿ. ಅದು ಅವಳಿಗೆ ಗೊತ್ತಾಗದಿರಲಿ ಎಂಬ ‘ರಕ್ಷಣಾ’ ತಂತ್ರವೂ ನನ್ನದಾಗಿತ್ತು. ಅಂಜಲಿ ‘ವರದಿಗಾರ್ತಿ’ಯಾಗಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಆದರೆ ನನ್ನ ಅತ್ತಿಗೆಗೆ ಮಾತ್ರ ಈ ‘ವಿಶೇಷ ವರದಿಗಾರ್ತಿ’ ಬಗ್ಗೆ ಅನುಮಾನ ಇನ್ನೂ ಹೆಚ್ಚಾಗಿತ್ತು.

ಆ ನಂತರ ಫೋನ್‌ನಲ್ಲಿ ನಾವು ಬಹಳ ಸಂಭಾಷಣೆ ನಡೆಸಿದ್ದೇವೆ. ಆದರೆ ಭೇಟಿಯಾಗುತ್ತಿದ್ದುದು ಕಡಿಮೆ. ರಾತ್ರಿ ಎಂಟೂವರೆ ಸುಮಾರಿಗೆ ಅವಳ ಮನೆಯ ಬಳಿ ಹೋಗಿ ಅಲ್ಲಿಂದ ಕಾರಿನಲ್ಲಿ ಕೆಲವು ನಿಮಿಷ ತಿರುಗಾಡಿ ಅವಳನ್ನು ಮನೆಯ ಬಳಿ ಬಿಟ್ಟು ಬರುತ್ತಿದ್ದೆ. ಆ ಕೆಲವೇ ನಿಮಿಷಗಳ ಭೇಟಿಗಾಗಿ ನಾನು ಬಾಂದ್ರಾದಿಂದ 40 ನಿಮಿಷಗಳ ಕಾಲ ಕಾರು ಚಲಾಯಿಸಿಕೊಂಡು ವಾರ್ಡನ್‌ ರಸ್ತೆಗೆ ಹೋಗುತ್ತಿದ್ದೆ. ಕೆಲವೊಮ್ಮೆ ನಮ್ಮ ಭೇಟಿಯ ಸಮಯ ಹೆಚ್ಚು ಕಡಿಮೆ ಆಗಿ ಬಿಡುತಿತ್ತು.

ನಾನು ಅಷ್ಟು ದೂರದಿಂದ ಆಕೆಯ ಮನೆಯ ರಸ್ತೆಯ ಬಳಿ ಬಂದು ಕಾರು ನಿಲ್ಲಿಸಿ ಕಾಯುತ್ತಿದ್ದರೆ, ನನ್ನ ಕಾಯುವಿಕೆ ಆಕೆಗೆ ಗೊತ್ತಿರುತ್ತಿರಲಿಲ್ಲ. ಅಲ್ಲಿದ್ದ ಪಬ್ಲಿಕ್‌ ಬೂತ್‌ನಿಂದ ಫೋನ್‌ ಮಾಡಲೂ ನನಗೆ ಸಾಧ್ಯವಾಗುತ್ತಿರಲಿಲ್ಲ. ಮತ್ತೆ ಬಾಂದ್ರಾಕ್ಕೆ ವಾಪಸಾಗುತ್ತಿದ್ದೆ. ಆಗ ಆಕೆಯ ಫೋನು ಬರುತಿತ್ತು. ಮತ್ತೆ ವಾರ್ಡನ್‌ ರಸ್ತೆಗೆ ನನ್ನ ಕಾರು  ಸಾಗುತಿತ್ತು. ಅದಾಗಲೇ, ಜನ ನನ್ನ ಗುರುತು ಹಿಡಿಯ ತೊಡಗಿದ್ದರು. ಹೀಗಾಗಿ ನಮ್ಮಿಬ್ಬರ ನಡುವಣ ಮಾತುಕತೆ, ಭೇಟಿಗೆ ಆ ದಿನಗಳಲ್ಲಿ ಅದೆಷ್ಟು ಅಡಚಣೆ ಇತ್ತು ಗೊತ್ತಾ ? ಹೀಗಾಗಿಯೇ ನೋಡಿ, ದಶಕದ ಹಿಂದೆ ಈ ಮೊಬೈಲ್‌ ಫೋನ್‌ ತಂತ್ರಜ್ಞಾನ ಬಂದಾಗ ಬಹಳ ಖುಷಿ ಪಟ್ಟಿದ್ದೆ. ಅದರ ಮಹತ್ವ ಎಷ್ಟೆಂಬುದರ ಅರಿವು ನನಗಿದೆ.

ನಾನು ಮತ್ತು ಅಂಜಲಿ ಸಾರ್ವಜನಿಕ ಸ್ಥಳಗಳಲ್ಲಿ ಖುಷಿಯಾಗಿ ಕೈ ಕೈ ಹಿಡಿದು ನಡೆದಾಡಿದ್ದೇ ಕಡಿಮೆ. 90ರ ದಶಕದ ಆರಂಭದ ದಿನಗಳವು. ಅದೊಂದು ದಿನ ಅಂಜಲಿಯ ಮನೆಯ ಬಳಿ ಹೋಗಿದ್ದೆ. ಆಕೆಯ ಮಾರುತಿ 800 ಕಾರಿನಲ್ಲಿ ಕುಳಿತೆ. ನಾವಿಬ್ಬರೂ ಮರೀನ್‌ ಡ್ರೈವ್‌ ಬಳಿ ಸಾಗಿದೆವು. ಅಲ್ಲಿ ಏರ್‌ ಇಂಡಿಯಾ ಕಟ್ಟಡದ ಎದುರು ಕಲ್ಲು ಬೆಂಚಿನ ಮೇಲೆ ಕುಳಿತೆವು. ಮನಸಾರೆ ಮಾತನಾಡಿದ್ದೆವು. ಎಳನೀರು ಕುಡಿದಿದ್ದೆವು. ಬಹುಶಃ ಅದೇ ಕೊನೆ ನೋಡಿ.

ಮತ್ತೆ ಆ ರೀತಿ ಈ ಮಹಾನಗರದ ಸಾರ್ವಜನಿಕ ಸ್ಥಳಗಳೆಲ್ಲಿಯೂ ಕುಳಿತು ಮುಕ್ತವಾಗಿ ಹರಟಲು ಸಾಧ್ಯವೇ ಆಗಲಿಲ್ಲ. ಎಲ್ಲಿಗೆ ಹೋದರೂ ಜನ ನನ್ನನ್ನು ಗುರುತಿಸುತ್ತಿದ್ದರು. ಎಲ್ಲರಂತೆ ನಾವು ಫುಟ್‌ಪಾತ್‌ನಲ್ಲಿ ಮಾತನಾಡುತ್ತಾ ನಡೆಯಲಾಗಲಿಲ್ಲ, ಸಮುದ್ರ ಕಿನಾರೆಯಲ್ಲಿ ಮನದಣಿಯ ಸುತ್ತಾಡಲು ಆಗಲಿಲ್ಲ. ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ ಮಾರುವ ತಿನಿಸುಗಳನ್ನು ತಿನ್ನಲಾಗಲಿಲ್ಲ.

ವಿಗ್‌ ಧರಿಸಿ ಚಿತ್ರಮಂದಿರಕ್ಕೆ ಹೋಗಿದ್ದು...

1993ರ ವರ್ಷ ಇರಬೇಕು. ದಕ್ಷಿಣ ಮುಂಬೈಯ ವರ್ಲಿಯಲ್ಲಿರುವ ಚಿತ್ರ ಮಂದಿರ ಒಂದರಲ್ಲಿ ‘ರೋಜಾ’ ಚಿತ್ರ ಪ್ರದರ್ಶನಗೊಳ್ಳುತಿತ್ತು. ಅಂಜಲಿ, ಆಕೆಯ ತಂದೆ ಆನಂದ್‌ ಮೆಹ್ತಾ ಮತ್ತು ನಮ್ಮ ಕೆಲವು ಗೆಳೆಯರು ಆ ಚಿತ್ರ ನೋಡಲು ಹೋದೆವು. ನಾನು ತಲೆಗೊಂದು ವಿಗ್‌ ಹಾಕಿಕೊಂಡಿದ್ದೆ. ಮೀಸೆಯೊಂದನ್ನು ಅಂಟಿಸಿಕೊಂಡಿದ್ದೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದೆ. ಯಾರೂ ನನ್ನ ಗುರುತು ಹಿಡಿಯಲು ಸಾಧ್ಯವೇ ಇಲ್ಲ ಎಂದುಕೊಂಡು ಚಿತ್ರ ಮಂದಿರದೊಳಗೆ ಹೋಗಿ ಕುಳಿತೆ.

ಮಧ್ಯಂತರದವರೆಗೂ ಎಲ್ಲವೂ ನಾವು ಅಂದು ಕೊಂಡಂತೆ ನಡೆಯಿತು. ಆದರೆ ನನ್ನ ಕಪ್ಪು ಕನ್ನಡಕ ಆಕಸ್ಮಾತ್‌ ಕೆಳಗೆ ಬಿದ್ದಿತು. ಅದರ ಒಂದು ಮಸೂರ ಒಡೆದು ಹೋಯಿತು. ‘ಒಡೆದ ಕನ್ನಡಕ ಬಳಸುವುದರಿಂದ ಕಣ್ಣಿಗೆ ಹಾನಿಯಾಗುತ್ತದೆ’ ಎಂದು ನನ್ನ ಗೆಳೆಯರು ಹೇಳಿದ್ದರಿಂದ ಅದನ್ನು ತೆಗೆದು ಕಿಸೆಯಲ್ಲಿಟ್ಟು ಕೊಂಡೆ. ಈ ಗೊಂದಲದಲ್ಲಿ ನನ್ನ ಮೀಸೆ ಅರ್ಧ ಕಿತ್ತು ಬಂದಿತ್ತು. ಅದು ನನಗೆ ಗೊತ್ತಾಗಲೇ ಇಲ್ಲ. ಅಷ್ಟರಲ್ಲಿ ಸುತ್ತಮುತ್ತಲಿದ್ದ ಜನ ನನ್ನ ಗುರುತು ಹಿಡಿದು ಬಿಟ್ಟಿದ್ದರು. ಅವರ ಅಭಿಮಾನದ ಅತಿರೇಕದಿಂದಾಗಿ ನಾವೆಲ್ಲರೂ ಇನ್ನಿಲ್ಲದ ಮುಜುಗರ ಅನುಭವಿಸುವಂತಾಗಿ, ಚಿತ್ರ ಮುಗಿಯುವ ಮೊದಲೇ ಚಿತ್ರ ಮಂದಿರದಿಂದ ಜಾಗ ಖಾಲಿ ಮಾಡಿದ್ದೆವು.

ವಿದೇಶಗಳಲ್ಲಿಯೂ ನನಗೆ ಇಂತಹದೆ ಸಮಸ್ಯೆ ಹಲವು ಬಾರಿ ಎದುರಾಗಿದೆ. ಕೆಲವು ವರ್ಷಗಳ ಹಿಂದೆ ನಾನು ಕುಟುಂಬ ಸಮೇತ ಸ್ವಿಟ್ಜರ್‌ಲೆಂಡ್‌ಗೆ ತೆರಳಿದ್ದೆ. ಅಲ್ಲೊಂದು ರೆಸಾರ್ಟ್‌ನಲ್ಲಿ ಇಳಿದು ಕೊಂಡಿದ್ದೆವು. ಅಲ್ಲಿ ಇಂಟರ್‌ ಲ್ಯಾಕೆನ್‌ ಎಂಬ ಸ್ಥಳಕ್ಕೆ ಹೋಗಲು ನಿರ್ಧರಿಸಿದೆವು. ಆ ಪ್ರೇಕ್ಷಣೀಯ ಸ್ಥಳದಲ್ಲಿ ಬಾಲಿವುಡ್‌ನ ಕೆಲವು ಜನಪ್ರಿಯ ಚಲನಚಿತ್ರಗಳಿಗೆ ಶೂಟಿಂಗ್‌ ನಡೆದಿದೆ. ನಾವು ಅಲ್ಲಿಗೆ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕೆಂದು ಮೊದಲು ನಿರ್ಧರಿಸಿದ್ದೆವು.

ಆಗ ಗೆಳೆಯರು ‘ಬೇಡ ಮಾರಾಯ, ಅಲ್ಲಿ ಭಾರತೀಯ ಪ್ರವಾಸಿಗಳು ಇದ್ದೇ ಇರುತ್ತಾರೆ, ಸುಮ್ಮನೆ ಕಿರಿಕಿರಿ ಏಕೆ’ ಎಂದಿದ್ದರು. ಅದಕ್ಕಾಗಿ ನಾವೊಂದು ಕುದುರೆ ಗಾಡಿಯಲ್ಲಿ ಕುಳಿತು ಸಾಗಿದೆವು. ದಾರಿಯಲ್ಲಿ ಕೆಲವು ಭಾರತೀಯರು ನಮ್ಮನ್ನು ಗುರುತಿಸಿಯೇ ಬಿಟ್ಟರು. ಕೆಲವು ನಿಮಿಷಗಳಲ್ಲಿ ಅವರ ಸಂಖ್ಯೆ ದೊಡ್ಡದಾಯಿತು. ಅವರೆಲ್ಲಾ ನಮ್ಮ ಬೆನ್ನು ಹಿಡಿದು ಬಿಟ್ಟರು. ವೇಗವಾಗಿ ಹೋಗಲು ನಮ್ಮ ಬಂಡಿಯ ಚಾಲಕನಿಗೆ ಹೇಳಿದೆ. ಅವರೂ ಅಷ್ಟೇ ವೇಗವಾಗಿ ಬರತೊಡಗಿದರು. ಕೊನೆಗೂ ನಮ್ಮ ವೇಗದ ಮುಂದೆ ಅವರ ಕೈಸಾಗಲಿಲ್ಲ.

ಪರೀಕ್ಷೆಗೆ ಕುಳಿತವಳಿಗೆ ಸಲಹೆ ಕೊಟ್ಟಿದ್ದು !

ಅಂಜಲಿ ತನ್ನ ವೈದ್ಯಕೀಯ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಆಗ ನಾನು ಆಸ್ಟ್ರೇಲಿಯ ಪ್ರವಾಸದಲ್ಲಿದ್ದೆ. ಮುಂಜಾನೆ ಅಷ್ಟೊತ್ತಿಗೇ ಆಕೆಗೆ ಫೋನ್‌ ಮಾಡಿ ‘ಚೆನ್ನಾಗಿ ಓದಬೇಕಮ್ಮ. ಯಾವುದೇ ತೆರನಾದ ಗಾಬರಿ ಪಡಬೇಡ. ಪರೀಕ್ಷೆ ನಿನಗೇನು ಸುಲಭವಾಗಿಯೇ ಇರುತ್ತೆ ಬಿಡು...’ ಎಂದೆಲ್ಲಾ ಧೈರ್ಯ ತುಂಬುತ್ತಿದ್ದೆ. ಆಗ ಆಕೆ ‘ನನಗೆ ಆತಂಕ ಶುರುವಾಗಿದೆ. ಈ ಸಲ ಪಾಸಾಗುತ್ತೇನೋ ಇಲ್ಲವೋ ದೇವರಿಗೇ ಗೊತ್ತು’ ಎನ್ನತೊಡಗಿದ್ದಳು. ಆಗ ಗಮನವಿಟ್ಟು ಓದಲು ಸಲಹೆಗಳನ್ನು ನೀಡಿದ್ದೆ. ಅವಳು ತೇರ್ಗಡೆಗೊಂಡಿದ್ದಳು. ನನ್ನ ಆತ್ಮವಿಶ್ವಾಸದ ನುಡಿಗಳು ಮತ್ತು ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬ ಕಿವಿಮಾತು ಆಕೆಗೆ ಸಾಕಷ್ಟು ನೆರವಾಯಿತಂತೆ! ವಿಪರ್ಯಾಸ ಏನು ಗೊತ್ತುಂಟಾ ? ಆಕೆ  ಒಂದು ದಿನದಲ್ಲಿ ಎಷ್ಟು ಗಂಟೆ ಓದಿದ್ದಳೋ, ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ 1 ತಿಂಗಳಲ್ಲಿ ಅಷ್ಟು ಗಂಟೆ ಓದಿರಲಿಲ್ಲ !!
***
ದಿಲೀಪ್‌ ವೆಂಗ್‌ಸರ್ಕರ್‌ 1988ರ ಸುಮಾರಿನಲ್ಲಿ ತಮ್ಮ ಪ್ರತಿಭೆಯನ್ನು ಗುರುತಿಸಿ ಗೌರವದಿಂದ ಕಂಡಿದ್ದು, ಗಾವಸ್ಕರ್‌ ಜತೆಗೆ ಆಡುವ ಅವಕಾಶ ಸ್ವಲ್ಪದರಲ್ಲಿ ತಪ್ಪಿ ಹೋಗಿದ್ದು, ತಮ್ಮ ಕ್ರಿಕೆಟ್‌ ಬದುಕಿನ ಕೊನೆಯ ದಿನಗಳಲ್ಲಿ ಟೀಕಾ ಪ್ರವಾಹ ಹರಿದು ಬರುತ್ತಿರುವಾಗ ತಮ್ಮ ಜತೆಗೆ ನಿಂತವರ ಬಗ್ಗೆ ಕೃತಜ್ಞತೆ, ವಿಶ್ವಕಪ್‌ನ ದಿನಗಳ ರೋಚಕ ನೆನಪುಗಳ ಬುತ್ತಿಯನ್ನು ಬಿಚ್ಚಿಡುವ ಸಚಿನ್‌ ಓದುಗನ ಕುತೂಹಲಕ್ಕೆ ನಿರಾಸೆ ಉಂಟು ಮಾಡುವುದಿಲ್ಲ.

ತಮ್ಮ ತಾಯಿಯ ಕೈ ಅಡುಗೆಯ ರುಚಿಯನ್ನು ಓದುಗರೊಂದಿಗೆ ಹಂಚಿಕೊಳ್ಳುವ ಅವರು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದಾಗಿನ ಘಟನೆಯನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. ‘ನನ್ನ ನಿವೃತ್ತಿ ಬಗ್ಗೆ ಮಗ ಅರ್ಜುನ್‌ಗೆ ಅಂಜಲಿ ಹೇಳಿದಳಂತೆ. ಆಗ ಅವನು ಮೌನವಾಗಿ ಕಿಟಕಿಯ ಬಳಿ ನಡೆದು ಆಕಾಶ ನೋಡುತ್ತಾ ನಿಂತು ಬಿಡುತ್ತಾನಂತೆ. ಅವನ ಕೆನ್ನೆಗಳ ಮೇಲೆ ಕಣ್ಣೀರು ಹರಿಯುತಿತ್ತಂತೆ. ಆದರೆ ಮಗಳು ಪ್ರೌಢಿಮೆಯಿಂದ ನಡೆದುಕೊಂಡಳಂತೆ. ಈ ವಿಷಯವನ್ನು ಅಂಜಲಿ ನನಗೆ ಹೇಳಿದಾಗ ನಾನು ಪಕ್ಕದಲ್ಲಿ ಕುಳಿತ್ತಿದ್ದ ಮಗಳ ತಲೆ ನೇವರಿಸಿದ್ದೆ...‘ ಹೀಗೆ ಸಚಿನ್‌ ಭಾವಲೋಕ ತೆರೆದುಕೊಳ್ಳುತ್ತಾ ಹೋಗಿದೆ.

ಸಚಿನ್‌ ಆಟದಷ್ಟೇ ಉತ್ತಮವಾಗಿ ಈ ಕೃತಿ ಮೂಡಿ ಬಂದಿದೆ. ಹಲವು ಭಾವನಾತ್ಮಕ ಕ್ಷಣಗಳಿವೆ. ಕಲಾತ್ಮಕ ನಿರೂಪಣೆ ಇದೆ. ಅಂಕಿ ಅಂಶ, ಆಟದ ಶೈಲಿಗಳೆಲ್ಲವೂ ಕ್ರಿಕೆಟ್‌ ಜಗತ್ತಿನ ಮಂದಿಗೆ ಚಿರಪರಿಚಿತ, ನಿಜ. ಆದರೆ ಈ ಕೃತಿಯ ಮೂಲಕ ಸಚಿನ್‌ ಭಾವಲೋಕದ ಪರಿಚಯವಾಗುತ್ತದೆ. ಈ ಕೃತಿಯನ್ನು ಒಂದೇ ಉಸಿರಿಗೆ ಓದಿ ಮುಗಿಸಿದ ನಂತರ, ಆ ಗುಂಗಿನಿಂದ ಹೊರಬರಲು ಕೆಲವು ಗಂಟೆಗಳು ಬೇಕು.

No comments:

Post a Comment