Friday, November 21, 2014

ಕಂಬಳ: ಇತಿಹಾಸ, ವರ್ತಮಾನ ಭವಿಷ್ಯ

(ಇದು ನಿನ್ನೆ - 21/11/2014 ರಂದು ಕರಾವಳಿ ಕರ್ನಾಟಕ ಜಾಲತಾಣದಲ್ಲಿ ಪ್ರಕಟವಾದ ನನ್ನ ಲೇಖನ.)
ಶತಮಾನಗಳ ಇತಿಹಾಸ ಹೊಂದಿರುವ ಕರ್ನಾತಕದ ಕರಾವಳಿಯಲ್ಲಿನ ಕಂಬಳ ಕ್ರೀಡೆಗೆ ಇದೀಗ ಕಂತಕವು ಎದುರಾಗಿದೆ. ಹೋರಿಗಳನ್ನು ಹಿಂಸಾತ್ಮಕವಾಗಿ ಬೆದರಿಸುವ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ ಕೋರ್ಟ್ 2014ರ ಮೇ 7ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರಾಣಿಗಳನ್ನು ಮನರಂಜನೆಗಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಬಾರದು ಎಂಬುದು ನ್ಯಾಯಾಲಯದ ತೀರ್ಪಿನ ತಾತ್ಪರ್ಯವಾಗಿತ್ತು. ಇದೀಗ ಸುಪ್ರೀಂ ಕೊರ್ಟ್ ತೀರ್ಪಿನ ಹಿನ್ನೆಲೆಯನ್ನಿಟ್ಟುಕೊಂಡು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಂಬಳ ನಡೆಸದಂತೆ ಸೂಚಿಸಿದೆ. ಹೀಗಾಗಿ ದ.ಕ ಜಿಲ್ಲಾಡಳಿತದ ಕ್ರೀಡೆಗೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಕಂಬಳದ ಆಚರಣೆ, ಇತಿಹಾಸ, ಹಿನ್ನೆಲೆಯ ಮೇಲೆಂದು ಇಣುಕು ನೋಟವಿಲ್ಲಿದೆ.


ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ.  ಬೇಸಾಯಗಾರರು ಬತ್ತದ ಗದ್ದೆಗಳಲ್ಲಿ ಉತ್ತಿದ ಬಳಿಕ ಕೋಣ ಎತ್ತುಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟ ‘ಕಂಬಳ’. ಕಂಬಳ ಅತವಾ ತುಳು ಬಾಶೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ದವಾಗಿರುವ ಕೆಸರುಗದ್ದೆ ಎಂದೇ ಹುರುಳು. ಕೆಸರುಗದ್ದೆಯಲ್ಲಿ, ಬಾಕಿಮಾರು ಗದ್ದೆಯಲ್ಲಿ, ಕಂಬಳ ಗದ್ದೆಯಲ್ಲಿ ದಪ್ಪನೆ ಮಯ್ಯ, ಸಾಕಿದ ಕೋಣಗಳನ್ನು ಓಡಿಸುವುದು ಒಂದು ಮನೋರಂಜನೆ ಆಟ. ಹೀಗೆಂದ ಮಾತ್ರಕ್ಕೆ ಕಂಬಳವು ಕೇವಲ ಕೋಣಗಳ ಓಟದ ಸ್ಪರ್ಧೆಯು ಮಾತ್ರವೇ ಎಂದು ತಿಳಿಯಬೇಕಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ರೈತರು ಭತ್ತದ ಕೊಯ್ಲಿನ ಬಳಿಕದಲ್ಲಿ ಮನರಂಜನೆಗಾಗಿ ಏರ್ಪಡಿಸುತ್ತಿದ್ದ ಆಟವಿದಾಗಿದ್ದು ಇಂತಹಾ ಆಚರಣೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಯೂ ಮಿಳಿತಗೊಂಡಿದೆ.

ಕಂಬಳ ಪದದ ನಿಷ್ಪತ್ತಿ
ಕಂಪ ಎಂಬುದಕ್ಕೆ ಕೆಸರು ಎಂಬ ಅರ್ಥವಿದೆ. ಆದ್ದರಿಂದ ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳಲಾಗುತ್ತದೆ. ಕಳ ಎಂಬುದಕ್ಕೆ ಸ್ಪ್ರರ್ಧೆಯ ವೇದಿಕೆ, ಕಣ ಎಂಬ ಅರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದೂ ನಂಬಿಕಕೆಯಿದೆ. ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ನುಡಿಯರಿಮೆಯ ಕಣ್ಣಿನಿಂದ ನೋಡಿದಾಗ ಳ>ಡ ಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ.

ಕಂಬಳದ ಇತಿಹಾಸ
ಕರಾವಳಿಯಲ್ಲಿ ಕಂಬಳದ ಆಚರಣೆ ಸುಮಾರು 800-900 ವರುಶಗಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಉಡುಪಿ ತಾಲೂಕಿನ ಕೆಂಜೂರಿನ ಸಮೀಪ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂದಿಸಿದ ಶಾಸನದಲ್ಲಿ ಕಂಬಳದ ಬಗ್ಗೆ ಹೇಳಲಾಗಿದೆ. ಇದರ ಕಾಲ ಕ್ರಿ. ಶ.1200 (ಶಕ ವರುಶ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಇದರಿಂದ ಕಂಬಳ ಕನಿಶ್ಟ ಎಂಟುನೂರು ವರುಶಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಶ್ಟವಾಗುತ್ತದೆ. ಕ್ರಿ. ಶ. 1421ರ ಬಾರಕೂರು ಶಾಸನದಲ್ಲಿ “ದೇವರು ಸಾವಂತನ ಕಂಬಳ ಗದ್ದೆಯ ಮೇಲೆ” ಎಂದು ಕಂಬಳಗದ್ದೆಯನ್ನು ಹೇಳಲಾಗಿದೆ. ಇನ್ನು  ಕ್ರಿ. ಶ. 1424ರ ಬಾರಕೂರು ಶಾಸನದಲ್ಲಿ, ಕ್ರಿ. ಶ. 1437ರ ಉಡುಪಿ ಶಾಸನ, ಕ್ರಿ. ಶ. 1482ರ ಕೊಲ್ಲೂರು ಶಾಸನ, ಕ್ರಿ. ಶ. 1521ರ ಬಾರಕೂರು ಶಾಸನ, ಕ್ರಿ. ಶ. 1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನಗಳಲ್ಲಿ ನಮಗೆ ಕಂಬಳ ಹಾಗೂ ಕಂಬಳ ಗದ್ದೆಗಳ ಉಲ್ಲೇಖ ದೊರಕುತ್ತದೆ.

ಕಂಬಳದ ಆಚರಣೆ ಹಾಗೂ ವಿಧಾನಗಳು
ಮೊದಲ ಭತ್ತದ ಬೆಳೆಯ ಕೊಯ್ಲು ಮುಗಿದು ಎರಡನೆಯ ಸುಗ್ಗಿ ಬೆಳೆಗೆ ಭೂಮಿ ಹದಮಾಡುವ ಸಮಯದಲ್ಲಿ ದೊರೆಯುವ ಬಿಡುವಿನ ವೇಳೆಯಲ್ಲಿ ನಡೆಯುವ ಆಚರಣೆಯೇ ಕಂಬಳ. ಕಂಬಳ ಅಥವಾ ತುಳು ಭಾಷೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ಧವಾಗಿರುವ ಕೆಸರುಗದ್ದೆ ಎಂಬ ಅರ್ಥವಿದ್ದು ಕಂಬಳ ಎಂದರೆ ಕೇವಲ ಕೋಣಗಳ ಓಟದ ಪಂದ್ಯವಲ್ಲ. ಅದಕ್ಕೆ ಸಂಬಂಧಿಸಿದ ಅನೇಕ ಆಚರಣೆಗಳಿವೆ.  
ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಚಳಿಗಾಲದಲ್ಲಿ ಆರಂಭವಾಗುವ ಈ ಜಾನಪದ ಕ್ರೀಡೆಯನ್ನು, ಮಾರ್ಚ್ ತಿಂಗಳವರೆಗೂ ಅವಳಿ ಜಿಲ್ಲೆಯ ವಿವಿಧ ಭಾಗದಲ್ಲಿ ಆಯೋಜಿಸಲಾಗುತ್ತದೆ. ಈ ಕಂಬಳದಲ್ಲಿ ಒಟ್ಟು ಎರಡು ವಿಧವಿದೆ, ಒಂಟಿ ಗೆದ್ದೆಯ ಕಂಬಳ ಮತ್ತು ಜೋಡುಕರೆ ಕಂಬಳ. ಅಂದಾಜು 100-200 ಮೀಟರ್ ಉದ್ದದ ಓಟದ ಕಣಗಳಲ್ಲಿ ಕಂಬಳ ಸಾಮಾನ್ಯವಾಗಿ ನಡೆಯುತ್ತದೆ. ಗದ್ದೆಯ ಮಣ್ಣಿಗೆ ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಲಾಗುತ್ತದೆ. ಕಂಬಳದ ಅಂಕಣವು ನೆಲ ಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಆಳದಲ್ಲಿರುತ್ತದೆ. ನೀರುತುಂಬಿದ ಕೆಸರುಗದ್ದೆ ಅಥವಾ ನದಿಯ ದಡದ ಮರಳುದಂಡೆಗಳ ಬದಿಯಲ್ಲಿ ಕೃತಕವಾಗಿ ನಿರ್ಮಿಸಿರುವ ಕೊಳದಲ್ಲಿ, ಕೋಣಗಳ ನಡುವೆ ಓಟದ ಪಂದ್ಯವನ್ನು ನಡೆಸಲಾಗುತ್ತದೆ
ಇನ್ನು ಕಂಬಳದಲ್ಲಿ ‘ಬಾರೆ ಕಂಬಳ’, ‘ಪೂಕರೆ ಕಂಬಳ’, ‘ಅರಸು ಕಂಬಳ’ ಮತ್ತು ಈಗ ನಡೆಯುತ್ತಿರುವ ‘ಆಧುನಿಕ ಕಂಬಳ’ ಎಂಬ ನಾಲ್ಕು ಬಗೆಗಳನ್ನು ಗುರುತಿಸಬಹುದು. ಬಾರೆ ಕಂಬಳ ಮತ್ತು ಪೂಕರೆ ಕಂಬಳಗಳಲ್ಲಿ ಕೋಣಗಳ ಪಂದ್ಯಕ್ಕಿಂತ, ಇತರ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ. ಬಾರೆಕಂಬಳದಲ್ಲಿ, ಗದ್ದೆಯ ನಡುವೆ ಒಂದು ಬಾಳೆಯ ಗಿಡವನ್ನು ನೆಡುವುದೇ ಬಹಳ ಮುಖ್ಯ. ಕೋಣಗಳ ಓಟ ಕೇವಲ ಸಾಂಕೇತಿಕವಾದುದು. ಅರಸು ಕಂಬಳದಲ್ಲಿ ಆಚರಣೆಗಳು ಮತ್ತು ಪಂದ್ಯ ಎರಡಕ್ಕೂ ಸಮಾನ ಮಹತ್ವವಿದೆ
ಕಂಬಳಕ್ಕೆ ಸಂಬಂಧಿಸಿದ ಆಚರಣೆಗಳು, ಅದಕ್ಕಾಗಿ ನಿಗದಿ ಪಡಿಸಿರುವ ದಿನಕ್ಕಿಂತ, ಕೆಲವು ದಿನಗಳು ಮುಂಚಿತವಾಗಿಯೇ ಪ್ರಾರಂಭವಾಗಿ, ಅದು ಮುಗಿದ ನಂತರವೂ ಮುಂದುವರಿಯುತ್ತವೆ. ಹಳ್ಳಿಯ ಹಿರಿಯರನ್ನು ಕಂಬಳಕ್ಕೆ ಆಹ್ವಾನಿಸುವುದು, ಕಂಬಳದ ಗದ್ದೆಯನ್ನು ಅಲಂಕರಿಸುವುದು, ಬೇರೆ ಬೇರೆ ಜಾನಪದ ದೈವಗಳನ್ನು ಪೂಜಿಸುವುದು, ಡೋಲು ಕುಣಿತ, ಕೊರಗ ಮತ್ತು ಮುಂಡಾಲ ಜಾತಿಗಳಿಗೆ ಸೇರಿದವರು ಹಾಡುವ ಹಾಡುಗಳು ಮತ್ತು ಕೋಣಗಳ ಮೆರವಣಿಗೆ ಇವೆಲ್ಲವನ್ನೂ ವಿಜೃಂಭಣೆಯಿಂದ ಆರಾಧನೆಯ ಹಾಗೆ ನಡೆಸಲಾಗುವುದು. ಕೋಣಗಳ ಓಟದ ಪಂದ್ಯವನ್ನು ನಡೆಸುವ ವಿಧಾನವನ್ನು ಅವಲಂಬಿಸಿ ಕಂಬಳದಲ್ಲಿ ಮತ್ತೆ ನಾಲ್ಕು ಬಗೆಗಳಿವೆ. ಹಗ್ಗದ ಓಟ, ಅಡ್ಡಹಲಗೆ ಓಟ, ನೇಗಿಲ ಓಟ ಮತ್ತು ಕಣೆ ಹಲಗೆ ಓಟ ಎಂಬ ಹೆಸರುಗಳಿಂದ ಅವುಗಳನ್ನು ಕರೆಯುತ್ತಾರೆ. ಹಗ್ಗದ ಓಟದಲ್ಲಿ, ಕೋಣಗಳು ಒಂದು ನೊಗವನ್ನು ಕಟ್ಟಿಕೊಂಡು ಓಡುತ್ತವೆ. ಆ ನೊಗದ ಮಧ್ಯಕ್ಕೆ ಕಟ್ಟಿದ ಹಗ್ಗಗಳನ್ನು ಹಿಡಿದುಕೊಂಡಿರುವ ಮನುಷ್ಯನು ಕೋಣಗಳ ಸಂಗಡ ತಾನೂ ಓಡುತ್ತಾನೆ. ಅಡ್ಡ ಹಲಗೆ ಓಟದಲ್ಲಿ ಆ ಮನುಷ್ಯನು, ನೊಗಕ್ಕೆ ಸೇರಿಸಿರುವ ಹಲಗೆಯ ಮೇಲೆ ನಿಂತುಕೊಂಡು ಕೋಣಗಳ ಓಟವನ್ನು ನಿಯಂತ್ರಿಸುತ್ತಾನೆ. ನೇಗಿಲ ಓಟದಲ್ಲಿ ನೊಗದ ಜಾಗದಲ್ಲಿ ನೇಗಿಲು ಇರುತ್ತದೆ. ಇಲ್ಲಿ ಸಾರಥಿಯು ನೇಗಿಲನ್ನು ಹಿಡಿದಿರುತ್ತಾನೆ. ಆ ನೇಗಿಲಿಗೆ ಕೋಣಗಳನ್ನು ಕಟ್ಟಿರುತ್ತಾರೆ. ಈ ಮೂರು ಪ್ರಭೇದಗಳಲ್ಲಿ, ‘ಮಂಜೊಟ್ಟಿ’ಯನ್ನು (ಪಂದ್ಯದ ಹಾದಿಯ ಕೊನೆ ಬಿಂದು), ಮೊದಲು ತಲುಪುವ ಕೋಣಗಳ ಜೋಡಿಯನ್ನು ವಿಜಯಿಯೆಂದು ಘೋಷಿಸಲಾಗುವುದು. ಆದರೆ, ‘ಕಣೆ ಹಲಗೆ ಓಟ’ದಲ್ಲಿ ಪಂದ್ಯದಲ್ಲಿ ಗೆಲ್ಲುವ ಜೋಡಿಯನ್ನು ನಿರ್ಧರಿಸುವ ವಿಧಾನ ಬೇರೆ. ಕಂಬಳದ ಗದ್ದೆಯ ಎರಡೂ ಬದಿಗಳಲ್ಲಿ, ನೆಲಮಟ್ಟದಿಂದ ಸುಮಾರು ಎರಡು ಮೀಟರುಗಳ ಎತ್ತರದಲ್ಲಿ, ಅಗಲವಾದ ಬಟ್ಟೆ ಅಥವಾ ಮರದ ಹಲಗೆಗಳನ್ನು ಕಟ್ಟಿರುತ್ತಾರೆ. ಇವುಗಳನ್ನು ‘ನಿಶಾನೆ’ ಎಂದು ಕರೆಯುತ್ತಾರೆ. ಕೋಣಗಳು ಓಡುವಾಗ, ನೀರು ಮತ್ತು ಕೆಸರುಗಳ ಮಿಶ್ರಣವು ಎಗರುವ ಎತ್ತರವನ್ನು ಪರಿಗಣಿಸಿ, ಗೆಲ್ಲುವ ಜೋಡಿಯನ್ನು ತೀರ್ಮಾನಿಸುತ್ತಾರೆ. ಪಂದ್ಯದಲ್ಲಿ ಗೆದ್ದ ಜೋಡಿಯ ಒಡೆಯರಿಗೆ ಬಂಗಾರದ ಪದಕ ಮತ್ತು ಷೀಲ್ಡುಗಳನ್ನು ಬಹುಮಾಣವಾಗಿ ಕೊಡುತ್ತಾರೆ. ಗೆಲುವನ್ನು ತಂದಿಕೊಟ್ಟ ಕೋಣಗಳಿಗೆ ಬಾಳೇಹಣ್ಣು, ಎಳನೀರು ಮುಂತಾದ ರುಚಿಯಾದ ಆಹಾರ ದೊರೆಯುತ್ತದೆ.

ಕೋಣಗಳಿಗೆ ರಾಜ ಮರ್ಯಾದೆ
ಕಂಬಳದಲ್ಲಿ ಬಳಸುವ ಕೋಣಗಳನ್ನು ಬೇರೆ ಯಾವ  ಕೆಲಸಕ್ಕೂ ಬಳಸುವುದಿಲ್ಲ . ಒಂದು ಜೋಡಿ ಕಂಬಳದ ಕೋಣಗಳ ವಾರ್ಷಿಕ ಸಾಕಣೆ ವೆಚ್ಚ 3 ಲಕ್ಷದಷ್ಟು ಇರುತ್ತದೆ. ವರ್ಷವಿಡೀ ಜತನದಿಂದ ಸಾಕಲ್ಪಡುವ ಈ ಕೋಣಗಳಿಗೆ ರಾಜ ಮರ್ಯಾದೆ ಹಾಗೂ ಕಂಬಳದಲ್ಲಿ ಓಡುವ ನಿರಂತರ ತರಬೇತಿ ಯನ್ನು ನೀಡಲಾಗಿರುತ್ತದೆ. ಕೋಣಗಳಿಗೆ ತಿನ್ನಲು ಬಹುವಿಧದ ಪುಷ್ಟಿದಾಯಕ ಆಹಾರವನ್ನು ನೀಡಲಾಗುತ್ತದೆ. , ಕಂಬಳದ ಸೀಸನ್‌ನಲ್ಲಿ ದಿನಕ್ಕೆ 4 ಕೇಜಿ ಹುರುಳಿಯನ್ನು ಬೇಯಿಸಿ ಕೊಡಲಾಗುತ್ತದೆ! ಈ ಅವಧಿಯಲ್ಲಿ ಅಪ್ಪಟ ಬೈಹುಲ್ಲಿನ ಮೇವನ್ನು ನೀಡಲಾಗುತ್ತದೆ. ಕಂಬಳ ಸೀಸನ್ ಮುಗಿದು ಬೇಸಗೆ ಬಂದಾಗ ಕೋಣಗಳ ಮೈ ತಂಪಾಗಿರಲು ಕುಂಬಳ ಕಾಯಿ ಕೊಡುತ್ತಾರೆ. ಕಂಬಳದ ಕೋಣಗಳಿಗೆ  ಪ್ರತಿ ದಿನ ಎಣ್ಣೆ ಸ್ನಾನ ಕಡ್ಡಾಯ .
ಒಂದು ಕೋಣವನ್ನು ನೋಡಿಕೊಳ್ಳಲು ನಿತ್ಯ ಮೂವರಾದರೂ ಬೇಕು. ವರ್ಷದ ಆರು ತಿಂಗಳ ಪ್ರತಿ ಶನಿವಾರ-ಭಾನುವಾರಗಳಲ್ಲಿ ನಡೆಯುವ ಕಂಬಳಕ್ಕೆ ಕೋಣ ಒಯ್ಯುವಾಗ 15 ಜನರಾದರೂ ಬೇಕು. ಎರಡು ದಿನಗಳ ಅವರ ವೇತನವೊಂದೇ 15 ಸಾವಿರ ರೂ. ದಾಟುತ್ತದೆ. ಕೋಣ ಓಡಿಸುವವರು ಸಹ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವನಾಗಿದ್ದು ವಾರ್ಷಿಕ ಗುತ್ತಿಗೆ. 26 ಪ್ರಮುಖ ಕಂಬಳ ಮತ್ತು ಐದಾರು ಟ್ರಯಲ್‌ಗಳಿರುತ್ತವೆ. ಓಡಿಸುವ ತಾಕತ್ತು, ಗೆಲ್ಲುವ ಪದಕಗಳ ಆಧಾರದಲ್ಲಿ ವರ್ಷಕ್ಕೆ ಕನಿಷ್ಠ 50 ಸಾವಿರದಿಂದ ಮೂರು ಲಕ್ಷದವರೆಗೆ ವೇತನ ನೀಡಲಾಗುತ್ತದೆ. ಜತೆಗೆ ಕಂಬಳ ಭತ್ಯ ದಿನ ಒಂದಕ್ಕೆ 1000ದಿಂದ 3 ಸಾವಿರ ಇರುತ್ತದೆ. ಇನ್ನು ಕೋಣಗಳ ಮಾರುಕಟ್ಟೆಯಲ್ಲಿ ಸಾಮಾನ್ಯ ಕೋಣಗಳಿಗೆ ರೂ. 15000 ಇದ್ದರೆ ಕಂಬಳ ಕೋಣಗಳಿಗೆ 1 -5 ಲಕ್ಷಗಳಷ್ಟಿರುತ್ತದೆ.
ಕಂಬಳದ ಕೋಣ ಸಾಕುವುದು ಒಂದು ಪ್ರತಿಷ್ಠೆಯಾಗಿದ್ದು ಅವುಗಳಿಗೆ ತೋರುವ ಪ್ರೀತಿಯೂ ಸಹ ಯಾವು ನಿಲುಕಿಗೂ ಸಿಗದಷ್ಟಾಗಿರುತ್ತದೆ. ಅವುಗಳಿಗೆ ಹೊಟ್ಟೆ ತುಂಬಾ ಪೌಷ್ಟಿಕ ಆಹಾರ, ಪ್ರತಿ ದಿನದ ಎಣ್ಣೆ ಸ್ನಾನ, ಕೆಲ ಸಮಯದ ಹೊರಗಿನ ವಾಕಿಂಗ್, ಹೀಗೆ ಅವುಗಳನ್ನು ರಾಜ ವೈಭೋಗಗಳಿಂದ ನೋಡಿಕೊಳ್ಳಲಾಗುತ್ತದೆ.

ಆಧುನಿಕ ಕಾಲದಲ್ಲಿ ಕಂಬಳ
ಇಂದಿನ ಆಧುನಿಕ ಜಗತ್ತಿನ ಧಾವಂತದ ಬದುಕಿನಲ್ಲಿ ಸಂಪ್ರದಾಯಿಕ ಆಚರಣೆಗಳೆಲ್ಲವೂ ಪ್ರಶ್ನಾರ್ಹವೆಂದು ತಿಳಿದಿರುವಾಗ ಕಂಬಳವೂ ಸಹ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಈ ಹಿಂದೆ ಕಂಬಳ ಕೋಣಗಳ ಓಟ ಸ್ಪರ್ಧೆಯ ಹಿಂದಿದ್ದ ಧಾರ್ಮಿಕ ಶ್ರದ್ದೆ ಮಾಯವಾಗಿ ಶುದ್ದ ಮನೋರಂಜನಾತ್ಮಕ ಕ್ರೀಡೆಯಾಗಿ ಮಾರ್ಪಟ್ಟಿದೆ. ಹಿಂದೆಲ್ಲಾ ಕೃಷಿಗೆ ಉಪಯೋಗವಾಗುತ್ತಿದ್ದ ಕೋಣಗಳೇ ಕಂಬಳದಲ್ಲಿ ಓಡಿ ಶಾಸ್ತ್ರ ಪೂರೈಸುತ್ತಿದ್ದವಾದರೂ ಕಂಬಳವು ಆಟದ ಹದಕ್ಕೆ ಹೊಂದಿಕೊಂಡ ನಂತರ  ವಿಶೇಷ ಅಕ್ಕರೆಯಿಂದ ಕಂಬಳಕ್ಕೆಂದೇ ಕೋಣಗಳನ್ನು ಸಾಕುವ ಹವ್ಯಾಸವು ಬೆಳೆದು ಬಿಟ್ಟಿದೆ. ಅಲ್ಲದೆಯೇ, ಇತ್ತೀಚಿನ ದಿನಗಳಲ್ಲಿ ಕಂಬಳವು ಬಹಳ ವೈಭವಯುತವಾಗಿದೆ. ಸೋಲು-ಗೆಲುವುಗಳು ಮರ್ಯಾದೆಯ ಪ್ರಶ್ನೆಯಾಗಿಬಿಟ್ಟಿವೆ.

ಕಂಬಳಕ್ಕೆ ಕಂಟಕ`
ಅರ್ವಾಚೀನ ಇತಿಹಾಸ ವನ್ನು ಹೊಂದಿರುವ ಕರಾವಳಿಯ ಮಣ್ಣಿನಲ್ಲಿ ಬೆರೆತು ಹೋಗಿರುವ ಜಾನಪದ ಕ್ರೀಡೆ ಕಂಬಳದ ಮೇಲೆ ಇದೀಗ ನಿಷೇಧದ ತೂಗುಗತ್ತಿ ತೂಗುತ್ತಿದೆ. ಹೋರಿಗಳನ್ನು ಹಿಂಸಾತ್ಮಕವಾಗಿ ಬೆದರಿಸುವ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ ಕೋರ್ಟ್ 2014ರ ಮೇ 7ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರಾಣಿಗಳನ್ನು ಮನರಂಜನೆಗಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಬಾರದು ಎಂಬುದು ನ್ಯಾಯಾಲಯದ ತೀರ್ಪಿನ ತಾತ್ಪರ್ಯವಾಗಿತ್ತು. ಇದೀಗ ಸುಪ್ರೀಂ ಕೊರ್ಟ್ ತೀರ್ಪಿನ ಹಿನ್ನೆಲೆಯನ್ನಿಟ್ಟುಕೊಂಡು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಂಬಳ ನಡೆಸದಂತೆ ಸೂಚಿಸಿದೆ. ಹೀಗಾಗಿ ದ.ಕ ಜಿಲ್ಲಾಡಳಿತದ ಕ್ರೀಡೆಗೆ ನಿಷೇಧ ಹೇರಿದೆ.
ಆದರೆ ವಾಸ್ತವದಲ್ಲಿ ಜಲ್ಲಿ ಕಟ್ಟು ಕ್ರೀಡೆಯ ರೀತಿಗೂ, ಕಂಬಳದ ರೀತಿ ನೀತಿಗೂ ಸಾಕಷ್ಟು ವ್ಯತ್ಯಾಸವಿದ್ದು ಇಲ್ಲಿ ಕೋಣಗಳೆಗೆ ಯಾವುದೇ ಬಗೆಯ ಹಿಂಸೆಯಾಗದಂತೆ ಸಾಕಷ್ಟು ಮುತುವರ್ಜಿಯನ್ನು ವಹಿಸಲಾಗುತ್ತದೆ. ಜಲ್ಲಿಕಟ್ಟು ನಿಷೇಧಕ್ಕೆ ಪ್ರಮುಖ ಹಿನ್ನೆಲೆ ಇದ್ದಿದ್ದು ಸಾವು-ನೋವು. ಆದರೆ, ಕಂಬಳದ ಇಷ್ಟೂ ಇತಿಹಾಸದಲ್ಲಿ ಒಂದೇ ಒಂದು ಸಾವು ಸಂಭವಿಸಿದ ಉಲ್ಲೆಖವಿಲ್ಲ. ಪ್ರಾಣಿಗಳಾಗಲೀ, ನೋಡಿಕೊಳ್ಳುವವರಾಗಲೀ, ಪ್ರೇಕ್ಷಕರಿಗಾಗಲೀ ಗಾಯಗಳಾದದ್ದೂ ಕಡಿಮೆ ಕೋಣಗಳ ಸಾಕುವಿಕೆ, ಅದರ ಪಾಲನೆ, ಕಂಬಳದ ಗದ್ದೆಯಲ್ಲಿನ ವಸತಿ, ಆಹಾರ ವ್ಯವಸ್ಥೆಗಳಲ್ಲಿ ಯಾವುದೇ ನಕಾರಾತ್ಮಕ ಅಂಶಗಳಿಲ್ಲ. ಇನ್ನೂ ಹೇಳಬೇಕೆಂದರೆ ಹಿಂದೆಲ್ಲಾ ಕಂಬಳದ ಜತೆಗೆ ನಡೆಯುತ್ತಿದ್ದ ಕೊರಗರ ಡೋಲು, ಪನಿ ಕುಲ್ಲುನು ಮೊದಲಾದ ಆಚರಣೆಗಳನ್ನು ಅದಾಗಲೇ ಕೈಬಿಡಲಾಗಿದೆ. ಆಧುನಿಕ ಕಂಬಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಕೋಣಗಳನ್ನು ಓಡಿಸಲು ಶಿಸ್ತುಬದ್ಧವಾದ ತರಬೇತಿ ನೀಡಲು ಅಕಾಡೆಮಿಕ್ ಶಾಲೆಯನ್ನೇ ಸ್ಥಾಪಿಸಲಾಗಿದೆ. ಇದರಲ್ಲಿ ಕ್ರೀಡಾಳು, ದೈಹಿಕ ಶಿಕ್ಷಕರು ಮತ್ತು ಸಮಾಜದ ಎಲ್ಲ ವರ್ಗದವರು ತರಬೇತಿ ಪಡೆದವರಾಗಿರುತ್ತಾರೆ. ಅತ್ಯಂತ ನಿಕಟ ಸ್ಪರ್ಧೆಗಳು ನಡೆಯುವುದರಿಂದ ಫಲಿತಾಂಶ ನಿಖರತೆಗೆ ಟೀವಿ ಎಂಬ ಥರ್ಡ್ ಅಂಪಾಯರ್, ಸೆನ್ಸಾರ್ ಪಟ್ಟಿಗಳನ್ನು ವ್ಯವಸ್ಥೆ ಮಾಡಲಾಗಿರುತ್ತದೆ. ಕಂಬಳ ಗದ್ದೆಗಳಲ್ಲಿ ಓಡುತಿರುವ ಕೋಣಗಳ ಮೇಲೆ ಕ್ಯಾಮರಾ ಅಳವಡಿಸಲಾಗಿರುತ್ತದೆ. ಕಂಬಳದ ವೇಳೆ ಕೋಣಗಳಿಗೆ ಒಂದೇ ಒಂದು ಪೆಟ್ಟು ನೀಡದೆ ಓಡಿಸುವ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ಕೆಲವು ಮಾಲೀಕರೇ ತಮ್ಮ ಮನೆಗಳಲ್ಲಿ ಕೋಣಗಳಿಗಾಗಿ ಈಜುಕೊಳ ನಿರ್ಮಿಸಿದ್ದಾರೆ. ಸ್ಥಳದಲ್ಲಿಯೇ ಪಶುವೈದ್ಯರ ಉಪಸ್ಥಿತಿ ಇದ್ದು ಅಗತ್ಯ ಸಮಯದಲ್ಲಿ ಉಚಿತ ವೈದ್ಯಕೀಯ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಈ ಕಾರಣಗಳಿಂದಾಗಿ ಕಂಬಳವನ್ನು ನಿಷೇಧಿಸುವುದು ಯಾವ ಕಾರಣಕ್ಕೂ ಸಾಧುವಲ್ಲ.

ಕಂಬಳ ಉಳಿಸಿ
ಕಂಬಳವನ್ನೇ ನಂಬಿಕೊಂಡಿರುವ ಸಾವಿರಾರು ಜನರ ಹಿತದೃಷ್ಟಿಯಿಂದಲೂ, ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದಲೂ ಕಂಬಳವನ್ನು ನಿಷೇಧಿಸುವುದು ಎಷ್ಟು ಮಾತ್ರಕ್ಕೂ ಸರಿಯಾದ ಕ್ರಮವಲ್ಲ. ಬದಲಾಗಿ ಕಂಬಳವನ್ನು ಒಂದು ಕ್ರೀಡೆಯಾಗಿ ಅಭಿವೃದ್ದಿ ಪಡಿಸಬೇಕು. ಸಾಂಪ್ರದಾಯಿಕ ಕಂಬಳಗಳನ್ನು ನಂಬಿಕೆ, ಆಚರಣೆ ಹಿನ್ನೆಲೆಯಲ್ಲಿ ಮುಂದುವರೆಸುವುದು ಅನಿವಾರ್ಯ. ನಿರ್ವಿವಾದವಾಗಿ ಕಂಬಳ ಅಹಿಂಸಾತ್ಮಕವಾಗಿ ಸಂಘಟಿಸಲ್ಪಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಪ್ರಾಣಿ ದಯಾ ಸಂಘದವರು, ಕಂಬಳಾಭಿಮಾನಿಗಳು ಒಂದೆಡೆ ಸೇರಿ ಕಂಬಳವನ್ನು ಮುಂದುವರೆಸುವ ಕುರಿತು ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ.  ಎಂದಿನಂತೆಯೇ ಕಂಬಳದ ವೈಭೋಗ ಮುಂದುವರಿಯಬೇಕಿದೆ. 

No comments:

Post a Comment