Monday, August 01, 2016

ಸಂಗೀತದ ಅರ್ಚನೆಯಲ್ಲಿ ತೊಡಗಿರುವ ಸುಮಧುರ ಗಾಯಕಿ ಅರ್ಚನಾ ಉಡುಪ

ಭಾವಗೀತೆ ಗಾಯನ ಪ್ರಪಂಚದಲ್ಲಿ ನೂತನ ಛಾಪು ಮೂಡಿಸಿದ ಹೊಸ ತಲೆಮಾರಿನ ಕನ್ನಡ ಗಾಯಕಿಯರಲ್ಲಿ ಅರ್ಚನಾ ಉಡುಪ ಅವರ ಹೆಸರು ಅತ್ಯಂತ ಪ್ರಮುಖವಾದದ್ದು. ಅರ್ಚನಾ ಉಡುಪ ತಾವು ಚಲನಚಿತ್ರ ಗೀತೆಗಳ ಹಾಡುವಿಕೆಯೊಂದಿಗೇ ಸುಗಮ ಸಂಗೀತದ ಪ್ರಕಾರದಲ್ಲಿಯೂ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಾ ಬಂದಿದ್ದಾರೆ.   ಸಂತ ಶಿಶುನಾಳ ಷರೀಫರ ಹಾಡುಗಳಿಗೆ ಹೊಸರೂಪ ನೀಡಿ 'ಸೂಫಿಯಾನ ಶರೀಫ್' ಕಾರ್ಯಕ್ರಮ ನೀಡುವ ಮೂಲಕ ಸುಗಮ ಸಂಗೀತ ಲೋಕದಲ್ಲಿ ಹೊಸ ಮಜಲೊಂದನ್ನು ತೆರೆದಿದ್ದಾರೆ. ಝೀ ಟಿವಿ ಜನಪ್ರಿಯ ಕಾರ್ಯಕ್ರಮ "ಸರಿಗಮಪ" ನಲ್ಲಿ ವಿಜೇತರಾದ ಪ್ರಪ್ರಥಮ ದಕ್ಷಿಣ ಭಾರತೀಯರೆನ್ನುವುದು ಇವರ ಸಂಗೀತ ಸಾಧಬೆಗೆ ಇನ್ನೊಂದು ಗರಿ. ಮೈಸೂರು ಅನಂತ ಸ್ವಾಮಿ ಮತ್ತು ಸಿ. ಅಶ್ವಥ್ರಂಥ ಮಹಾನ್ ಗಾಯಕರ  ಮಾರ್ಗದರ್ಶನದಲ್ಲಿ ಅನೇಕ ಕವಿಗಳ ಗೀತೆಗಳಿಗೆ ಜೀವ ತುಂಬಿ ಹಾಡಿರುವ ಅರ್ಚನಾ ಹರಿಹರನ್, ಜೇಸುದಾಸ್, ಸೋನು ನಿಗಮ್, ಷಾನ್, ಜಗಜೀತ್ ಸಿಂಗ್, ಮನ್ನಾಡೆ ಹಾಗು ಎಸ್.ಪಿ. ಬಾಲಸುಬ್ರಮಣ್ಯರೊಂದಿಗೆ ದನಿಗೂಡಿಸಿ ಅನೇಕ ಸಮಾರಂಭಗಳಲ್ಲಿ ಸಮನಾಗಿ ವೇದಿಕೆ ಹಂಚಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ.



ಇಷ್ಟೇ ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ "ಆಟಗಾರ" ಕನ್ನಡ ಚಿತ್ರದಲ್ಲಿಯೂ, ನೂತನ ಕನ್ನಡ ಚಿತ್ರ "ಮಡಾಮಕ್ಕಿ" ಚಿತ್ರದಲ್ಲಿಯೂ ಅರ್ಚನಾ ಅವರ ನೂತನ ವಿಶಿಷ್ಟ್ಯಪೂರ್ಣವಾದ ಹಾಡುಗಳಿವೆ ಎನ್ನುವುದು ಕನ್ನಡ ಸಂಗೀತ ಪ್ರೇಮಿಗಳು ಗಮನಿಸಬೇಕಾದ ಅಂಶ.

ಹಿನ್ನೆಲೆ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿ ಗಳಿಸಿರುವ ಅರ್ಚನಾ ತಾವು ಚಿಕ್ಕ ವಯಸ್ಸಿನಿಂದಲೇ ಹಾಡುಹಕ್ಕಿಯೆಂದು ಚಿರಪರಿಚಿತರಾಗಿದ್ದವರು. ಇವರ ತಂದೆ ಕಾಶವಾಣಿಾ ಗಾಯಕರಾಗಿ ಪ್ರಸಿದ್ದರಾದ ನಗರ ಶ್ರೀನಿವಾಸ ಉಡುಪ ಅವರೇ ಅರ್ಚನಾಗೆ ಮೊದಲ ಗುರು ಹಾಗು ವಿಮರ್ಶಕ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಪಟ್ಟಣ ಸಮೀಪ ಬಿದನೂರು ಇವರ ಮೂಲ ಸ್ಥಳವಾಗಿದ್ದು ತಮ್ಮ 5 ನೇ ವಯಸ್ಸಿಗೆ ಬೆಂಗಳೂರಿಗೆ ಬಂದರು.

ಬಿದನೂರಿನ ಮನೆಯಲ್ಲಿರುವಾಗಲೇ ಅರ್ಚನಾ ಅವರಿಗೆ ಸಂಗೀತದ ವಾತಾವರಣ ದೊರಕಿತ್ತು. ಮಲೆನಾಡಿನ ಹಚ್ಚ ಹಸಿರಿನ ಪರಿಸರ, ಜತೆಗೆ ಮನೆಯಲ್ಲಿ ನಿತ್ಯವೂ ನಡೆಯುತ್ತಿದ್ದ ಭಜನೆಗಳು ಅವರಲ್ಲಿ ಸಂಗೀತದ ಕುರಿತ ಆಸಕ್ತಿ ಕೆರಳಿಸಿದ್ದವು. ಅವರಿಗೆ ಚಿಕ್ಕಂದಿನಿಂದಲೂ ತಾನೂ ತಂದೆಯಂತೆಯೇ ಹಾಡುಗಾರಳಾಗಬೇನ್ನುವ ತುಡಿತ ಇದ್ದಿತು.  ಇದಕ್ಕೆ ತಕ್ಕಂತೆಯೇ ತಂದೆ ಶ್ರೀನಿವಾಸ ಉಡುಪರೂ ಮಗಳ ಆಸಕ್ತಿಯನ್ನು ಪೋಷಿಸಿದ್ದರು. ನಗರದಲ್ಲಿ ಬಾಲಕೃಷ್ಣ್ ಎನ್ನುವವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸದಲ್ಲಿ ತೊಡಗಿದ್ದ ಅರ್ಚನ ಬೆಂಗಳೂರಿಗೆ ಬಂದ ನಂತರ ರಾಧಾಕೃಷ್ಣ ಅವರ ಬಳಿ ಹಿಂದೂಸ್ತಾನಿ ಗಾಯನ, ಪಂಡಿತ್ ಬಿ.ವಿ. ರವೀಂದ್ರ, ಡಾ. ಶಕುಂತಲಾ ನರಸಿಂಹನ್ ಅವರ ಬಳಿ ಸಂಗೀತಾಭ್ಯಾಸ ನಡಿಸಿದ್ದಾರೆ.

ಇಂದು "ಗಾಂಧಾರ" ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮೂಲಕ ಸಂಗೀತ ಪ್ರಿಯರ ಮನದಣಿಸುತ್ತಿರುವ ಅರ್ಚನಾ ಅವರೊಡನೆ ನಿಮ್ಮ "ಗೃಹಶೋಭಾ" ನಡೆಸಿದ ಸಂದರ್ಶನದ ಪ್ರಮುಖ ಭಾಗ ಇಲ್ಲಿದೆ-



"ಗಾಂಧಾರ"ಸಂಸ್ಥೆಯ ಹಿನ್ನೆಲೆ...
ಒಳ್ಳೆಯ ಕಿವಿಗಳಿಗೆ ಒಳ್ಳೆಯ ಸಂಗೀತ ಕೊಡುವ ಉದ್ದೇಶದಿಂದ "ಗಾಂಧಾರ" ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಚಿತ್ರ ಸಂಗೀತ, ಶಾಸ್ತ್ರೀಯ ಸಂಗೀತ ಎರ್ಡರಲ್ಲಿಯೂ ಒಳ್ಳೆಯ ಉತ್ತಮವಾದ ಸಂಗೀತವನ್ನು ಆಯ್ದುಕೊಂಡು ಅದನ್ನು ಜನಗಳಿಗೆ ತಲುಪಿಸಬೇಕು ಎನ್ನುವುದು ಇದರ ಮೂಲ ಉದ್ದೇಶವಾಗಿದೆ. ಕಳೆದ ಆರು ವರ್ಷಗ್ಳಿಂದ್ಲೂ ಇದೇ ಉದ್ದೇಶವನ್ನಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ.

ಮೊದಲ ಕಾರ್ಯಕ್ರಮ ರಾಜನ್ ನಾಗೇಂದ್ರ ಅವರಿಗೆ ಮೀಸಲಾಗಿತ್ತು. ಅಂದು ರಾಜನ್ ಅವರನ್ನು ಸನ್ಮಾನಿಸಿದ್ದಲ್ಲದೆ ಅವರ ಸಂಗೀತ ನಿರ್ದೇಶನದ ಗೀತೆಗಳನ್ನೇ ಹಾಡಲಾಗಿತ್ತು. ಆ ಕಾರ್ಯಕ್ರಮವನ್ನು ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಉದ್ಘಾಟಿಸಿದ್ದರುಮುಂದೆ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕಿಯರನ್ನು ಒಟ್ಟು ಸೇರಿಸಿ ಅವರ ಗೀತೆಗಳನ್ನು ಹಾಡುವ ಕಾರ್ಯಕ್ರಾಮ ನಡೆಸಿ ಕೊಟ್ಟೆವು. ಅದೇ ಸಮಯದಲ್ಲಿ ನಾನು ಸಂಗೀತ ಸಂಯೋಜನೆ ಮಾಡಿದ "ಬಾಳೇ ಗಾಯನ" ಹೆಸರಿನ ಹಾಡುಗಳ ಸಿ.ಡಿ.ಯನ್ನು ಬಿಡುಗಡೆಗೊಳಿಸಲಾಯಿತು. ಮೂರನೇ ವರ್ಷದ ಕಾರ್ಯಕ್ರಮದಲ್ಲಿ ಶಿಶುನಾಳ್ ಷರೀಫರ ಹಾಡುಗಳಿಗೆ ಹೊಸ ರೂಪ ನೀಡಿ ಹಾಡುವ ಪ್ರಯತ್ನ ನಡೆಯಿತು. ಇದರಲ್ಲಿ ಸೂಫಿ ಸಂಗೀತಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಬಹುತೇಕ ಗೀತೆಗಳಿಗೆ ನಾನೇ ಸಂಗೀತ ಸಂಯೋಜನೆ ಮಾಡಿದ್ದೆ. ಇನು ಕಳೆದ ವರ್ಷದ "ಗಾಂಧಾರ" ವಾರ್ಷಿಕ ಕಾರ್ಯಕ್ರಮವನ್ನು ಪ್ರೇಮಿಗಳ ದಿನದ ವಿಶೇಷವಾಗಿ ರೂಪಿಸಲಾಯಿತು. ಇದರಲ್ಲಿ ಕನ್ನಡ, ಹಿಂದಿ, ತಮಿಳು ಹೀಗೆ ಎಲ್ಲಾ ಭಾಷೆಗಳ ಉತ್ತಮ ಯುಗಳ ಗೀತೆಗಳನ್ನು ಆಯ್ಕೆ ಮಾಡಿ ಹಾಡಲಾಗಿತ್ತು.

ತಂದೆ, ಮಾವನವರ ಕುಟುಂಬದ ಕುರಿತಾಗಿ......
ನಾನು ಇಂದು ಇಷ್ಟರ ಮಟ್ಟಿಗೆ ಬೆಳೆಯಲು ನನ್ನ ತಂದೆ, ತಾಯಿಗಳೇ ಕಾರಣ. ತಾಯಿ ನನಗೆ ತೆರೆಮರೆಯಿಂದ ಬೆಂಬಲ ನೀಡಿದರೆ ತಂದೆ ನನ್ನಲ್ಲಿನ ಸಂಗೀತಾಸಕ್ತಿಯನ್ನು ಗುರುತಿಸಿ ಬೆಳೆಸಿದವರು. ನಗರದಂತಹಾ ಚಿಕ್ಕ ಊರಿನಲ್ಲಿದ್ದರೆ ನನ್ನ ಪ್ರತಿಭೆಗೆ ತಕ್ಕ ಪೋಷಣೆ ಸಿಗಲಾರದೆಂದು ಬೆಂಗಳೂರಿಗೆ ತಮ್ಮ ವಾಸವನ್ನು ಬದಲಾಯಿಸಿದರು. ಇಂದು ಅವರ ಕನಸನ್ನು ನಾನು ಜೀವಿಸುತ್ತಿದ್ದೇನೆ. ನಾನು ದೊಡ್ಡ ಗಾಯಕಿ ಆಗಬೇಕು ಎನ್ನುವುದು ಅವರ ಮುಖ್ಯ ಕನಸು.ಐಂದು ನಾನು ಅದನ್ನು ತಕ್ಕ ಮಟ್ಟಿಗೆ ನನಸಾಗಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ.

ಮದುವೆಯ ನಂತರ ನಾನು ಸೇರಿದ ಮನೆಯಲ್ಲಿಯೂ ನನಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ನನ್ನ ಅತ್ತೆ ನನ್ನನ್ನು ಸಹ ಅವರ ಮಗಳಂತೆಯೇ ಕಂಡಿದ್ದಾರೆ. ನನ್ನ ಪತಿ ಸಹ ನನ್ನ ಹಾಡುಗಳನ್ನು ಕೇಳಿ ಸಂತೋಷ ಪಡುವರಲ್ಲದೆ ನನಗೆ, ನನ್ನ ಹಾಡುಗಾರಿಕೆಗೆ  ಎಂದೂ ತಡೆಯೊಡ್ಡಿದವರಲ್ಲ. ನನ್ನ ಮಕ್ಕಳಿಗೂ ಸಹ ಸಂಗೀತದ ಬಗ್ಗೆ ಆಸಕ್ತಿ ಇದೆ. ಆದರೆ ಇನ್ನೂ ಶಾಸ್ತ್ರೀಯವಾಗಿ ಸಂಗೀತಾಭ್ಯಾಸದಲ್ಲಿ ತೊಡಗಿಕೊಂಡಿಲ್ಲ ಅಷ್ಟೆ. ನನ್ನ ಮಾವನವರು, ಅವರು ಸಹ ದೊಡ್ಡ ಸಂಗೀತಗಾರರು, ನನಗೂ ಸಾಕಷ್ಟು ಸಹಕಾರ ನೀಡುತ್ತಾ ಬಂದಿದ್ದಾರೆ. ಇವರೆಲ್ಲರ ಒಟ್ಟೂ ಬೆಂಬಲದಿಂದ ನಾನು ಇಂದು ಇಷ್ಟರ  ಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಗಿದೆ.



ಸಂಗೀತ ನಿರ್ದೇಶನದ ಕುರಿತಂತೆ...
ನನಗೆ ಚಿಕ್ಕಂದಿನಲ್ಲಿ ಸಂಗೀತದ ಕುರಿತಂತೆ ಆಸಕ್ತಿ ಇತ್ತಾದರೂ ಸಂಗೀತ ನಿರ್ದೇಶನದ ಯೋಚನೆ ಇರಲಿಲ್ಲ. ಆದರೆ ನಾನು ಚಿಕ್ಕವಳಿದ್ದಾಗಲೇ ಮಕ್ಕಳ ಶಿಶು ಗೀತೆಗಳಿಗೆ ತನ್ನದೇ ಆದ ರೀತಿಯಲ್ಲಿ ರಾಗ ಸಂಯೋಜನೆ ಮಾಡುತ್ತಿದ್ದೆ. ಆದರೆ ಅದಾವುದನ್ನೂ ಸಂಗ್ರಹಿಸಿಟ್ಟಿಲ್ಲ. ನನಗೆ ಖುಷಿ ಎನಿಸಿದ್ದನ್ನು ತನಗಿಷ್ಟವಾಗುವಂತೆ ಹಾಡಿಕೊಳ್ಳುತ್ತಿದ್ದೆ, ಬಳಿಕ ಮರೆತೂ ಹೋಗುತ್ತಿತ್ತು. ಆದರೆ ಬೆಂಗಳೂರಿಗೆ ಬಂದ ನಂತರ ನನಗೆ ಸುಗಮ ಸಂಗೀತದ ಆಲ್ಬಂ ಮಾಡಲು ಯೋಚನೆ ಬಂದಿತ್ತು. ಆಗ ನನಗೆ ಮೊದಲಿನಿಂದ ಪರಿಚಯವಿದ್ದ ಲಕ್ಷ್ಮಿ ನಾರಾಯಣ ಭಟ್ಟರು ಹಾಗೂ ಎಚ್.ಎಸ್. ವೆಂಕಟೇಶ ಮೂರ್ತಿಗಳ ಕವನ ಸಂಗ್ರಹಗಳನ್ನು ಆಯ್ಕೆ ಮಾಡಿಕೊಂಡು ಕೆಲವು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದೆ. ಮತ್ತು ಇಬ್ಬರಿಗೂ ಹಾಡಿ ತೋರಿಸಲು ಅವರಿಗೂ ಅದು ಸಂತೋಷವನ್ನು ತಂದಿತ್ತು. ಇದರಿಂದ ನನಗೂ ಸಹ ಸಂತಸ ಜತೆಗೆ ನಾನೂ ಸಂಗೀತ ನಿರ್ದೇಶನಕ್ಕೆ ತೊಡಗಬಹುದು ಎನ್ನುವ ಧೈರ್ಯ ಬಂದಿತು.

ಸುಗಮ ಸಂಗೀತದ ಇಂದಿನ ಸ್ಥಿತಿ ಗತಿ....
ಮೈಸೂರು ಅನಂತಸ್ವಾಮಿ, ಕಾಂಳಿಂಗರಾಯರ ಕಾಲದಲ್ಲಿದ್ದ ವೈಭವ ಈಗಿಲ್ಲ ಎನ್ನುವುದು ನಿಜ. ಆದರೆ ಇಂದು ಸಹ ಸುಗಮ ಸಂಗೀತಕ್ಕೆ ಅದರದೇ ಆದ ಕೇಳುಗರಿದ್ದಾರೆ. ಇದು "ಕ್ಲಾಸ್ ಮ್ಯೂಸಿಕ್". ಸುಗಮ ಸಂಗೀತಕ್ಕೆ ಉತ್ತಮ ಭವಿಷ್ಯವಿದೆ ಎನ್ನಲು ಒಂದು ಉದಾಹರಣೆ ನೀಡುವುದಾದರೆ ಇತ್ತೀಚೆಗೆ ಝೀ ಕನ್ನಡದಲ್ಲಿ ನಡೆದ ಸರಿಗಮಪ ಕಾರ್ಯಕ್ರಮಕ್ಕೆ ನನ್ನನ್ನು ತೀರ್ಪುಗಾರಳಾಗಿ ಆಹ್ವಾನಿಸಿದ್ದಾಗ ಅಲ್ಲಿ ಸುಗಮ ಸಂಗೀತಕ್ಕಾಗಿ ಎರಡು ದಿನಗಳ ಕಾರ್ಯಕ್ರಮ ಆಯೋಜಿಸಿದ್ದದ್ದು, ಅಲ್ಲಿನ ಸ್ಪರ್ಧಿಗಳೆಲ್ಲರೂ ಉತ್ತಮ ರೀತಿಯಲ್ಲಿ ಸುಗಮ ಸಂಗೀತ ಹಾಡಲು ಪ್ರಯತ್ನ ನಡೆಸಿದ್ದರೆನ್ನುವುದು ಗಮನಾರ್ಹ.

ಚಿತ್ರ ಸಂಗೀತಕ್ಕೂ ಸುಗಮ ಸಂಗೀತಕ್ಕೂ ಇರುವ ವಿಭಿನ್ನತೆ ಕುರಿತಂತೆ....
ಸಂಗೀತದಲ್ಲಿ ಭೇಧವಿಲ್ಲವೆನ್ನುವುದು ನನ್ನ ಅನಿಸಿಕೆ. ಸಾಹಿತ್ಯದಲ್ಲಿ ಕೆಟ್ಟ ಸಾಹಿತ್ಯವಿರಬಹುದು ಆದರೆ ಸಂಗೀತದಲ್ಲಿ ಒಳ್ಳೆಯದು, ಕೆಟ್ಟದ್ದು ಎನ್ನುವುದು ಇಲ್ಲ ಎಂದು ರಾಜನ್ ಅವರೊಮ್ಮೆ ಹೇಳಿದ್ದನ್ನು ನೆನೆಯಬಹುದು. ಸಂಗೀತ ಕೇಳುಗರು ಹಾಗೂ ಹಾಡುವವರನ್ನು ಅವಲಂಬಿಸಿ ಅದು ಒಳ್ಳೆಯದೋ ಕೆಟ್ಟದ್ದೋ ಆಗಬಹುದು. ಆದರೆ ಎಲ್ಲಾ ಸಂಗೀತಕ್ಕೂ ಅದರದೇ ಆದ ಸೌಂದರ್ಯವಿದೆ. ಹೀಗಾಗಿ ಶ್ರೇಷ್ಠವಾದ ಸಂಗೀತ ಅದು ಚಿತ್ರಗೀತೆಯಾಗಲಿ, ಸುಗಮ ಸಂಗೀತವೇ ಆಗಲಿ ಸರ್ವ ಕಾಲಕ್ಕೂ ಸಲ್ಲುತ್ತದೆ.

ಇನ್ನು ನನ್ನ ಮಟ್ಟಿಗೆ ಹೇಳುವುದಾದಲ್ಲಿ ಸ್ಟುಡಿಯೋದಲ್ಲಿ ಹಾಡುವುದಕ್ಕಿಂತಲೂ ಲೈವ್ ಆಗಿ ಹಾಡುವುದು ಸ್ವಲ್ಪ ಕಷ್ಟ್ದ ಕೆಲಸ. ಏಕೆಂದರೆ ಸ್ಟುಡಿಯೋದಲ್ಲಿ ನಮಗೆ ಹಲವು ಟೇಕ್ ಗಳು ದೊರೆಯುತ್ತವೆ. ಲೈವ್ ನಲ್ಲಿ ಹಾಗಾಗುವುದಿಲ್ಲ. ಜತೆಗೆ ನಾವ್ ಸಾಹಿತ್ಯಕ್ಕೆ ತಕ್ಕಂತೆ ಭಾವನೆಗಳನ್ನು ವ್ಯಕ್ತಪಡಿಸಿ ಒಂದೇ ಟೇಕ್ ನಲ್ಲಿ ಹಾಡವುದು ಸಾಹಸವೇ ಎನ್ನಬಹುದು.

ಭವಿಷ್ಯದ ಸಂಗೀತಗಾರರಿಗೆ ಸಲಹೆಗಳು....
ಈಗ ಅವಕಾಶಗಳು ಹೇರಳವಾಗಿವೆ. ಯು ಟ್ಯೂಬ್ ನಿಂದ ಹಿಡಿದು ರಿಯಾಲಿಟಿ ಶೋ ವರೆಗೂ ಅವಕಾಶಗಳಿದ್ದರೂ ಜನರು ಬೇಗನೇ ಬೇಸರ್ಗೊಳ್ಳುತ್ತಿದ್ದಾರೆ ಎನಿಸುತ್ತಿದೆ. ಎಂದರೆ ಇಂದಿನ ಪೀಳಿಗೆಯವರು ನಿತ್ಯವೂ ಹೊಸತನ್ನು ನಿರೀಕ್ಷಿಸುತ್ತಾರೆ. ಇದು ಸ್ವಲ್ಪ ಮಟ್ಟಿಗೆ ಆಘಾತಕರ ಸನ್ನಿವೇಶವೇ ಹೌದು. ಈಗಿನ ಪೀಳಿಗೆಯವರಿಗೆ ಕಾಯುವ ತಾಳ್ಮೆ ಇಲ್ಲ. ತಕ್ಷಣವೇ ಪ್ರಸಿದ್ದರಾಗಬೇಕು. ಅವರಿಗೆ ಕಲಿಯಬೇಕೆನ್ನುವ ಹಸಿವು ಕಡಿಮೆಯಾಗಿದೆ ಎನ್ನುವುದು ನನ್ನ ಭಾವನೆ.

 ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯುವುದು ಬಹಳ ಮುಖ್ಯ. ಯಾರು ಏನನ್ನು ಸಹ ಹಾಡಬಹುದು ಆದರೆ ಕಲಿಯುವುದನ್ನು ಕ್ರಮಬದ್ದವಾಗಿ ಕಲಿಯಬೇಕು. ಬೇರು ಗಟ್ಟಿಯಾಗಿದ್ದಾಗ ಮಾತ್ರ ಮರ ಗಟ್ಟಿಯಾಗಿರಲು ಸಾಧ್ಯ. ಅವಕಾಶಗಳ ಹಿಂದೆ ನಾವು ಬೀಳುವ ಬದಲು ನಮ್ಮನ್ನು ಅವಕಾಶಗಳು ಹುಡುಕಿ ಬರುವಂತೆ ಮಾಡಬೇಕು. ನಮ್ಮತನವನ್ನು ನಾವು ಕಾಯ್ದುಕೊಳ್ಳಬೇಕು. ಆತ್ಮಗೌರವ ಕಾಪಾಡಿಕೊಂಡಾಗ ಆತ್ಮ ವಿಶ್ವಾಸ ಹೆಚ್ಚುತ್ತದೆ. ಹೀಗೆ ಮಾಡಿದಾಗ ನಾವು ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಸಭುದು.

(ಈ ನನ್ನ ಲೇಖನವು ಕನ್ನಡದ ಹೆಸರಾಂತ ಮಹಿಳಾ ಮಾಸಿಕ "ಗೃಹಶೋಭಾ"ದ ಜುಲೈ 2016ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.)


No comments:

Post a Comment