Tuesday, August 23, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 75

ಸನ್ನತಿ (Sannathi)

ಸನ್ನತಿ, ಕಲ್ಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿರುವ ಒಂದು ಪ್ರಸಿದ್ದ ಶಕ್ತಿಪೀಠ. ದೇವಿಯ ಪಾದುಕೆಗಳಿಂದಾಗಿ ಪ್ರಸಿದ್ದವಾದ ಈ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿಯು ಚಂದ್ರಲಾ ಪರಮೇಶ್ವರಿ ಎನ್ನುವ ಹೆಸರಿನಲ್ಲಿ ನೆಲೆಸಿರುವಳು. ತಾಲೂಕಾ ಕೇಂದ್ರ ಚಿತ್ತಪೂರದಿಂದ 48 ಕಿ.ಮೀ. ಪ್ರಮುಖ ರೈಲ್ವೆ ಜಂಕ್ಷನ್ ವಾಡಿ ಇಂದ ಸುಮಾರು 35 ಕಿ.ಮೀ. ದೂರದಲ್ಲಿದೆ. ಹಾಗೂ ಶಹಾಪೂರದಿಂದ ಪೂರ್ವಕ್ಕೆ 19ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರಕ್ಕೆ ದಿನನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹುಣ್ಣಿಮೆ ಮತ್ತಿತರೆ ವಿಶೇಷ ದಿನಗಳಂದು ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಿರುತ್ತದೆ. ಆದರೆ ಇಲ್ಲಿಗೆ ತಲುಪಲು ಉತ್ತಮ ಬಸ್ ಸೌಲಭ್ಯವಾಗಲೀ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಲಿ ಇರುವುದಿಲ್ಲ. ಭಕ್ತಜನರು ತಾವು ಖಾಸಗಿ ವಾಹನದಲ್ಲಿಯೋ, ಆಟೋ ರಿಕ್ಷಾಗಳಲ್ಲಿಯೋ ಆಗಮಿಸಬೇಕಿದೆ. 

Goddess Sri Lakshmi Chandrala Parameshwari



ಸುಮಾರು ಸಾವಿರದ ಇನ್ನೂರು ವರ್ಷದ ಇತಿಹಾಸ ಹೊಂದಿರುವ ಈ ಸನ್ನಿಧಿಯಲ್ಲಿ  ದವನದ ಹುಣ್ಣಿಮೆಯಂದು ಚಂದ್ರಲಾ ಪರಮೇಶ್ವರಿಯ ಉತ್ಸವ ಹಾಗೂ ಪಂಚಮಿಯಂದು ದೇವಿ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭಕ್ಕೆ ಸಾವಿರಾರು ಜನರು ಸಾಕ್ಷಿಯಾಗುವರು.

***

ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಸೀತಾದೇವಿ ಸಮೇತನಾಗಿ ಸನ್ನತಿಗೆ ಬಂದು ನಾರಾಯಣ ಹಾಗೂ ಚಂದ್ರವದರಾಗಿ ಇಲ್ಲಿ ನೆಲೆಸಿದ್ದರು.  ಆಗ ಇಲ್ಲಿನ ಸೇತುರಾಜ ಎಂಬುವನು ಚಂದ್ರವದಳತ್ತ ಆಕರ್ಷಿತನಾಗಿ ಅವಳಲ್ಲಿ ಅನುರಕ್ತನಾದ. ತನ್ನನ್ನೇ ವಿವಾಹವಾಗುವಂತೆ ಒತ್ತಾಯಿಸತೊಡಗಿದ. ಇದರಿಂದ ಚಂದ್ರವದ ಚಿಂತಾಕ್ರಾಂತಳಾದಳು. `ನಾನೀಗ ಒಂದು ವ್ರತಾಚರಣೆಯಲ್ಲಿರುವುದರಿಂದ ನೀನು ನನ್ನ ಬಳಿ ಸುಳಿಯಬೇಡ~ ಎಂದು ಅವನಿಗೆ ಹೇಳಿ ಅವನಿಂದ ವಾಗ್ದಾನ ಪಡೆದಳು. ಈ ವಿಷಯವನ್ನು ಚಂದ್ರವದ ನಾರಾಯಣನಿಗೆ ಹೇಳುವಳು. ಆಗ ನಾರಾಯಣ ಕಾಶ್ಮೀರಕ್ಕೆ ತೆರಳಿ ಹಿಂಗುಳಾಂಬಿಕೆಯನ್ನು ಕುರಿತು ತಪ್ಪಸ್ಸು ಮಾಡುವನು. 

ನಾರಾಯಣನ ತಪಸ್ಸಿಗೆ ದೇವಿ ಪ್ರತ್ಯಕ್ಷಳಾಗಿ ನೀನು ಹಿಂದಕ್ಕೆ ನೋಡದೆ ಮುಂದೆ ನಡೆ  ನಾನು ನಿನ್ನ ಹಿಂದೆ ಹಿಂದೆಯೇ ಬರುತ್ತೇನೆ ಎಂದು ಹೇಳುವಳು. ನಾರಾಯಣನು ದೇವಿಯ ಗೆಜ್ಜೆ ಸಪ್ಪಳ ಆಲಿಸುತ್ತಾ ಸನ್ನತಿ ಕಡೆಗೆ ನಡೆದು ಬರುತ್ತಿರುವಾಗ ಚಿತ್ತಾಪುರ ತಾಲೂಕಿನ ಹೊನಗುಂಟಿಯ ಬಳಿ ದೇವಿಯ ಗೆಜ್ಜೆ ಸಪ್ಪಳ ಕೇಳದೇ ಇದ್ದಾಗ ಹಿಂದಿರುಗಿ ನೋಡಿದನು. ಆಗ ಹಿಂಗುಳಾಂಬಿಕೆ ದೇವಿಯು ಅಲ್ಲೇ ತಟಸ್ಥಳಾಗುವಳು.


 Sri Lakshmi Chandrala Parameshwari Temple Sannathi
ನಂತರ ನಾರಾಯಣನಿಗೆ ತನ್ನ ಪಾದುಕೆಗಳನ್ನು ನೀಡಿ ಅವನ್ನು ಸನ್ನತಿಯಲ್ಲಿ  ಪ್ರತಿಷ್ಠಾಪಿಸಿ ನಂತರ ತೆಂಗಿನಕಾಯಿ ಒಡೆ. ಅದರಿಂದ ಬರುವ ಭೃಂಗಗಳು ಸೇತುರಾಜನಿಗೆ ತಕ್ಕ ಶಾಸ್ತಿ ಮಾಡುತ್ತವೆ ಎಂದು ಹೇಳುವಳು. ಇದರಿಂದ ಸಂತುಷ್ಟನಾದ ನಾರಾಯಣನು ಸನ್ನತಿಗೆ ಬಂದು ಪಾದುಕೆಗಳನ್ನು ಅಲ್ಲಿ ಪ್ರತಿಷ್ಠಾಪಿಸಿ, ಭಕ್ತಿಯಿಂದ  ತೆಂಗಿನಕಾಯಿ ಒಡೆಯುವನು. ಆಗ ಅದರಿಂದ ಹೊರಬಂದ ಭೃಂಗಗಳು ಸೇತುರಾಜನನ್ನು  ಬೆನ್ನಟ್ಟುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸೇತುರಾಜ ಭೀಮಾ ನದಿಯಲ್ಲಿ ಮುಳುಗಿ ಜಲಸಮಾಧಿಯಾದ.  ನಂತರ ಭೃಂಗಗಳು ದೇವಿಯ ಪಾದುಕೆಗಳನ್ನು ಸೇರಿದವು. ಆನಂತರ ಈ ಕ್ಷೇತ್ರ ಹಿಂಗುಳಾಂಬಿಕೆ, ಭ್ರಮರಾಂಬಿಕೆ, ಚಂದ್ರಲಾ ಪರಮೇಶ್ವರಿ ಎಂಬ ಹೆಸರುಗಳಿಂದ  ಪ್ರಸಿದ್ಧವಾಯಿತು. ಸೇತುರಾಜನು ಜಲಸಮಾಧಿ ಹೊಂದಿದ ಸ್ಥಳವನ್ನು `ಸೇತುರಾಜನ ಮಡುವು~ ಎಂದು ಹೆಸರಾಯಿತು.

1 comment: