ಫಂಡರಾಪುರ (Phandarapur)
ಇಂದಿನ ಮಹಾರಾಷ್ಟ್ರದಲ್ಲಿರುವ ಸೊಲ್ಲಾಪುರ ಜಿಲ್ಲೆಯ ಫಂಡರಾಪುರ ಹಿಂದೂಗಳ ಅದರಲ್ಲೂ ಕೃಷ್ಣಭಕ್ತರ ಮೆಚ್ಚಿನ ಯಾತ್ರಾಸ್ಥಳ. ಚಂದ್ರಭಾಗಾ ನದಿದಂಡೆಯ ಮೇಲೆ ನೆಲೆಸಿರುವ ರುಕ್ಮಿಣಿ ಸಮೇತನಾದ ಶ್ರೀ ಕೃಷ್ಣನ ಭವ್ಯ ಮೂರ್ತಿ ಎಂಥವರಲ್ಲಿಯೂ ಭಕ್ತಿಯನ್ನು ಚಿಮ್ಮಿಸುವಂತಹುದು. ಪಾಂಡುರಂಗ, ವಿಠಲ, ವಿಠೋಬಾ ಎಂದೆಲ್ಲಾ ಕರೆಸಿಕೊಳ್ಳುವ ಶ್ರೀಕೃಷ್ಣನ ದರ್ಶನಕ್ಕೆ ದಿನನಿತ್ಯವೂ ಲಕ್ಷಾಂತರ ಮಂದಿ ಪಾದಯಾತ್ರೆಯ ಮೂಲಕ, ವಾಹನಗಳ ಮುಖೇನ ಆಗಮಿಸುತ್ತಾರೆ.
ಈ ಹಿಂದೆಯೂ ಭಕ್ತ ಕುಂಬಾರನಂತಹಾ ಹಲವು ವೈಷ್ಣವ ಸಂತರ ಆರಾದ್ಯದೈವವೆನಿಸಿದ್ದ ವಿಠ್ಠಲ ತನ್ನ ನಿಜ ಭಕ್ತರಿಗೆ ಅತಿ ಸುಲಭದಲ್ಲಿ ಒಲಿವ ದೇವರೆನ್ನಿಸಿದ್ದಾನೆ. ಇದಕ್ಕೆ ಈ ದೇವಾಲಯ, ಕ್ಷೇತ್ರದ ಹಿಂದಿರುವ ಪೌರಾಣಿಕ ಹಿನ್ನೆಲೆಯ ಕಥೆಯೊಂದು ಉತ್ತಮ ಉದಾಹರಣೆ.
ಹಿಂದೊಮ್ಮೆ ದಂಡಿರವನವೆನ್ನುವ ಅರಣ್ಯ ಪ್ರದೇಶದಲ್ಲಿ ವಾಸವಿದ್ದ ಜುನದೇವ ಹಾಗೂ ಸತ್ಯವತಿ ಎನ್ನುವ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಅದಾಗ ಅವರಿಬ್ಬರೂ ದೇವರ ಮೊರೆಹೋದರು. ಆಗ ಆ ಭಗವಂತನ ಕೃಪೆಯಿಂದ ಆ ದಂಪತಿಗಳಿಗೆ ಪುತ್ರ ಜನನವಾಗಲು ಅವನಿಗೆ ಪುಂಡರೀಕನೆಂದು ಹೆಸರಿಟ್ಟು ಬೆಳೆಸಿದರು. ಕೆಲ ವರ್ಷಗಳ ಕಾಲ ಮೂವರ ಜೀವನವೂ ಚೆನ್ನಾಗಿ ಸಾಗಿರಲು ಮಗ ಪುಂಡರೀಕನು ಬೆಳೆದು ಪ್ರಾಪ್ತವಯಸ್ಕನಾದನು. ಅದಾಗ ಅವನಿಗೆ ಯೋಗ್ಯ ಕನ್ಯೆಯನ್ನು ನೋಡಿ ವಿವಾಹವನ್ನು ಮಾಡಿ ಅವನ ಮಾತಾ ಪಿತರು ಆಶೀರ್ವದಿಸಿದರು.
ಆದರೆ ಪುಂಡರೀಕನಿಗೆ ಯಾವಾಗ ಮದುವೆಯಾಯಿತೋ ಅದಾದ ಬಳಿಕ ಅವನು ತಂದೆ ತಾಯಿಯರ ಬಗ್ಗೆ ಬಹಳ ಅಸಡ್ಡೆಯನ್ನು ತಾಳಿದನು, ಅಷ್ಟೇ ಅಲ್ಲ ಹಿರಿಯರಾದ ಅವರಿಗೆ ನಾನಾ ನಮೂಮೆಯ ಕಿರುಕುಳ, ತೊಂದರೆಯನ್ನು ನೀಡಲು ಆರಂಭಿಸಿದನು. ಇದರಿಂದ ಬೇಸತ್ತ ಆ ಮಾತಾ ಪಿತರು ತಾವು ಕಾಶಿಗೆ ಹೋಗಿ ಅಲ್ಲೇ ಪ್ರಾಣತ್ಯಾಗ ಮಾಡಲು ನಿರ್ಧರಿಸಿದರು. ಇಲ್ಲಿಗೂ ಅವರ ಕಷ್ಟಗಳು ಕಳೆಯಲಿಲ್ಲ. ತಂದೆ ತಾಯಿಯರ ಕಾಶೀ ಯಾತ್ರೆಯ ಯೋಜನೆಯ ಬಗ್ಗೆ ತಿಳಿದುಕೊಂಡ ಪುಂಡರೀಕ ಮತ್ತಾತನ ಪತ್ನಿ ತಾವೂ ಅವರ ಜೊತೆಗೂಡಿ ಕಾಶಿಗೆ ಬರುವುದಾಗಿ ನಿರ್ಧರಿಸಿದರು. ಹಾಗೆ ಕಾಶಿಗೆ ಹೋಗುವ ಮಾರ್ಗದುದ್ದಕ್ಕೂ ಮತ್ತೆ ಆ ಹಿರಿಜೀವಗಳಿಗೆ
ಮಗ-ಸೊಸೆಯರ ತೊಂದರೆ ಮುಂದುವರಿಯಿತು, ಪುಂಡರೀಕ ಮತ್ತವನ ಪತ್ನಿ ತಾವು ಹಾಯಾಗಿ ಕುದುರೆಯ ಮೇಲೆ ಕುಳಿತು ಪಯಣಿಸಿದರೆ ಅವನ ತಂದೆ-ತಾಯಿಯರು ಆ ವೃದ್ದಾಪ್ಯದಲ್ಲಿಯೂ ನಡೆದುಕೊಂಡೆ ಸಾಗುತ್ತಿದ್ದರು. ಅದಲ್ಲದೆ ರಾತ್ರಿಯ ವೇಳೆಯಲ್ಲಿ ಮಾರ್ಗಮದ್ಯೆ ತಂಗಲು ವ್ಯವಸ್ಥೆ ಮಾಡಿದಾಗಲೂ ಪುಂಡರೀಕನ ಕುದುರೆಯನ್ನು ಮೇಯಿಸುವುದು, ಅವನಿಗೂ ಅವನ ಪತ್ನಿಗೂ ಆಹಾರವನ್ನು ಬೇಯಿಸುವುದೂ ಆ ವೃದ್ದರ ಪಾಲಿಗೆ ಒದಗಿತ್ತು. ಇದೆಲ್ಲವನ್ನೂ ಅವರು ಅದು ಹೇಗೋ ಕಷ್ಟದಿಂದ ಸಹಿಸಿದ್ದರು.
ಹೀಗಿರಲು ಅದೊಂದು ದಿನ ಅವರೆಲ್ಲರೂ ಕಾಶಿಗೆ ಹೋಗುವ ಮಾರ್ಗದಲ್ಲಿ ಇರುವ ಬಹಳ ಪವಿತ್ರವಾದ ಕುಕ್ಕುಟಸ್ವಾಮಿಗಳ ಆಶ್ರಮವನ್ನು ತಲುಪಿದರು. ವೃದ್ದ ದಂಪತಿಗಳು ತಾವು ಕೆಲಕಾಲ ಅಲ್ಲೆ ನೆಲೆಸಲು ತೀರ್ಮಾನಿಇದರು. ಅಂತಹದರಲ್ಲಿ ಅದೊಂದು ರಾತ್ರಿ ಎಲ್ಲರೂ ಮಲಗಿ ನಿದ್ರಿಸುತ್ತಿರಲು ಅದೇಕೋ ಪುಂಡರೀಕನಿಗೆ ಎಚ್ಚರವಾಯಿತು. ಅದೇ ಸಮಯದಲ್ಲಿ ಒಳ್ಳೆಯ ಬೆಲೆಯುಳ್ಳ ವಸ್ತ್ರಗಳನ್ನುಟ್ಟ, ಸುಂದರವಾದ ಆಭರಣಗಳಿಂದ ಅಲಂಕೃತರಾದ ಇಬ್ಬರು ದೇವಕನ್ನಿಕೆಯರು ಪ್ರವೇಶಿಸಿದರು. ಅವರು ಬಂದವರೇ ಆಶ್ರಮವನ್ನೆಲ್ಲಾ ಸಾರಿಸಿ, ಒರೆಸಿ ಸ್ವಚ್ಚಗೊಳಿಸಿದರು. ಮತ್ತೆ ಅಲ್ಲಿದ್ದ ಸಾಧುಗಳ ಕೊಳೆಯಾದ ಉಡುಪುಗಳನ್ನೆಲ್ಲವನ್ನೂ ಒಗೆದು ಹಾಕಿದರು. ಹೀಗೆ ಎರಡು ಗಂಟೆಗಳಲ್ಲಿ ತಮ್ಮ ಕಾರ್ಯಗಳನ್ನು ಮುಗಿಸಿದ ಅವರು ಬಳಿಕ ಅಲ್ಲಿದ್ದ ಪ್ರಾರ್ಥನಾ ಕೊಠಡಿಗೆ ಹೋಗಿ ತಾವೂ ಶುಭ್ರ ವಸ್ತ್ರಧಾರಿಗಳಾಗಿ ಬಂದು ಆಶ್ರಮದಿಂದ ವಾಪಾಸಾದರು. ಇದೆಲ್ಲವನ್ನೂ ನೋಡುತ್ತಿದ್ದ ಪುಂಡರೀಕನಿಗೆ ತನ್ನ ಕಣ್ಣನ್ನು ತಾನು ನಂಬದಂತಾಯಿತು. ಪುಂಡರೀಕನ ಕುತೂಹಲ ತಡೆಯದಾಯಿತು. ಆ ದಿನವೆಲ್ಲಾ ಅವನ ಮನದಲ್ಲಿ ಆ ಎರಡು ದೇವಕನ್ಯೆಯರ ಬಗ್ಗೆ ನಾನಾ ಪ್ರಶ್ನೆಗಳೆದ್ದು ಅವನನ್ನು ಬಾಧಿಸಿದವು. ಅಂದು ರಾತ್ರಿಯೇ ಇದಕ್ಕೆಲ್ಲ ಉತ್ತರವನ್ನು ಕಂಡುಕೊಳ್ಳಬೇಕೆಂದು ಆಗಲೇ ಅವನು ನಿರ್ಧರಿಸಿದನಿ. ಅಂತೆಯೇ ರಾತ್ರಿಯಾಗುತ್ತಲೇ ಆ ಇಬ್ಬರು ದೇವಕನ್ಯೆಯರ ಬರವಿಗಾಗಿ ಕಾದು ಕುಳಿತನು. ಅಂತೂ ಆ ಸಮಯವೂ ಬಂದಿತು. ಪುಂಡರೀಕನಿಗೆ ಕುತೂಹಲವನ್ನು ಹೆಚ್ಚು ಸಮಯ ತಡೆದಿಡಲಾಗದೆ ಒಬ್ಬ ಸುಂದರಿಯೊಂದಿಗೆ ಕೇಳಿದನು-“ನೀವು ಯಾರು? ಇಲ್ಲಿಗೇಕೆ ಬಂದಿರುವಿರಿ?” ಆಗ ಆ ದೇವಕನ್ಯೆಯು ಪ್ರತಿಕ್ರಯಿಸಿ-“ ನಾವು ದೇವ ನದಿಗಳಾದ ಗಂಗಾ ಮತ್ತು ಯಮುನೆಯರು, ನಮ್ಮಲ್ಲಿಗೆ ಬರುವ ಲಕ್ಷಾಂತರ ಭಕ್ತರ ಪಾಪವನ್ನು ನಾವು ತೊಳೆಯುತ್ತೇವೆ ಅದರ ಕಲ್ಮಷದ ಸೊಂಕು ನಮಗೂ ತಗುಲಿ ನಾವೂ ಮಲಿನರಾಗುತ್ತೇವೆ, ಆ ಮಲಿನತೆಯನ್ನು ತೊಳೆದುಕೊಳ್ಳಲು ನಾವಿಲ್ಲ್ ಬಂದು ಈ ಪುಣ್ಯಜೀವಿಗಳ ಬಟ್ಟೆ ಬರೆಗಳನ್ನು ತೊಳೆದು ಅವರು ವಾಸಿಸುವ ಈ ಆಶ್ರಮವನ್ನು ಶುಚಿಯಾಗಿಸಿ ಹೋಗುತ್ತೇವೆ, ಹೀಗೆ ಹಿರಿಯರ ಸೇವೆ ಮಾಡುವುದರಿಂದ ನಮ್ಮಲ್ಲಿ ಅಂಟಿದ್ದ ಅಲ್ಪ ಪಾಪಗಳೂ ಇನ್ನಿಲ್ಲದಂತಾಗುತ್ತವೆ.”ಎಂದಳು. ಹಾಗೆ ಅವಳು ಮುಂದುವರಿದು ಹೀಗೆಂದಳು-“ ಎಲೈ ಪುಂಡರೀಕ ನೀನು ಮಾತ್ರ ನಿನ್ನ ತಂದೆ-ತಾಯಿಯರಿಗೆ ಕೊಡಬಾರದ ತೊಂದರೆಗಳನ್ನು ಕೊಡುತ್ತಿರುವೆ, ಆ ಮುಖೇನ ನಿನ್ನ ಪಾಪದ ಕೊಡವನ್ನು ತುಂಬಿಸಿಕೊಳ್ಳುತ್ತಿರುವೆಯಲ್ಲ?” ಇದಾಗ ಪುಂಡರೀಕನಿಗೆ ಇನ್ನಿಲ್ಲದ ಆಘಾತ, ವಿಸ್ಮಯಗಳಾಯಿತು. ತಾನು ಎಂತಹಾ ಮಹಾ ತಪ್ಪನ್ನೆಸಗುತ್ತಿದ್ದೇನೆನ್ನುವ ಅರಿವಾಯಿತು. ಅಂದಿನಿಂದ ಪುಂಡರೀಕ ತನ್ನ ತಂದೆ-ತಾಯಿಯರನ್ನು ದೇವರೆಂದು ಕಾಣಲು ಆರಂಭಿಇದನು. ಅವರಿಗೆ ಎಲ್ಲ ಬಗೆಯ ಅರೈಕೆಯನ್ನು ಮಾಡಲು ಮುಂದಾದನು.
ಭಕ್ತಿಯು ಅದಾವ ರೂಪದಲ್ಲಿದ್ದರೂ ಭಗವಂತನನ್ನು ತಲುಪುತ್ತದೆ. ಅಂತೆಯೇ ಪುಂಡರೀಕನಲ್ಲಿನ ಮಾತಾ ಪಿತೃ ಸೇವೆಯಲ್ಲಿನ ಭಕ್ತಿ, ಶ್ರದ್ದೆಗಳು ವೈಕುಂಠದಲ್ಲಿದ್ದ ಮಹಾವಿಷ್ಣುವನ್ನು ತಲುಪಿತು. ಅದೇ ತಕ್ಷಣ ವಿಷ್ಣುವು ವೈಕುಂಠದಿಂದ ಹೊರಟು ಪುಂಡರೀಕನಿದ್ದ ಆಶ್ರಮಕ್ಕೆ ಬಂದನು. ಹಾಗೆ ಬಂದ ಮಹಾವಿಷ್ಣು ಪುಂಡರೀಕನ ಆಶ್ರಮದ ದ್ವಾರವನ್ನು ತಟ್ಟಿದನು. ಅದಾಗ ತನ್ನ ತಂದೆ ತಾಯಿಯರಿಗಾಗಿ ಊಟ ತಯಾರಿಸುವಲ್ಲಿ ತನ್ಮಯನಾಗಿದ್ದ ಪುಂಡರೀಕ ತನ್ನ ಆಶ್ರಮದ ಬಾಗಿಲಲ್ಲಿ ಮಹಾವಿಷ್ಣುವು ಬಂದಿರುವುದನ್ನು ಗುರುತಿಸಿದನು, ಆದರೂ ತಾನು ಮಾಡುತ್ತಿರುವ ಕೆಲಸ ಪೂರ್ಣವಾಗುವವರೆಗೆ ಆ ಕಡೆ ಗಮನ ಕೊಡಲಿಲ್ಲ, ಬದಲಾಗಿ ತಾನು ತನ್ನ ತಂದೆ ತಾಯಿಯರ ಸೇವೆಯನ್ನು ಪೂರ್ತಿಗೊಳಿಸುವವರೆಗೂ ಬಂದ ಅತಿಥಿ ಅಲ್ಲೇ ಹೊರಗೆ ನಿಂತಿರಲೆಂದು ಒಂದು ಇಟ್ಟಿಗೆಯನ್ನು ಅತ್ತ ಎಸೆಯುತ್ತಾನೆ. ಇದನ್ನು ಕಂಡ ಮಹಾವಿಷ್ಣುವೂ ಅತ್ಯಂತ ಆಶ್ಚರ್ಯ ಹೊಂದುತ್ತಾನೆ. ಆದರೆ ಪುಂಡರೀಕನಲ್ಲಿ ಮಾತಾ ಪಿತರ ಬಗ್ಗೆ ಇದ್ದ ನಿಜಭಕ್ತಿಗೆ ಮೆಚ್ಚಿದ ವಿಷ್ಣು ಪುಂಡರೀಕ ತಾನಾಗಿ ಬರುವವರೆಗೂ ಕಾದು ನಿಲ್ಲುತ್ತಾತೆ. ತಂತೆ ತಾಯಿಯರ ಸೇವೆ ಪೂರೈಸಿದ ಬಳಿಕ ಬಂದಂತಹಾ ಪುಂಡರೀಕನಿಗೆ ವಿಷ್ಣು ಏನಾದರೂ ವರವನ್ನು ಕೇಳಲು ಸಲಹೆ ಮಾಡುತ್ತಾನೆ, ಆಗ ಪುಂಡರೀಕ “ನೀನು ಪುನಃ ಭೂಮಿಯಲ್ಲಿಯೇ ನೆಲೆಸಿ ನನ್ನಂತಹಾ ಸಾವಿರಾರು ನಿಜಭಕ್ತರಿಗೆ ಅನುಗ್ರಹಿಸಬೇಕು” ಎಂದು ಬೇಡುತ್ತಾನೆ. ಇದಕ್ಕೆ ಮೆಚ್ಚಿ ಒಪ್ಪಿಗೆ ಸೂಚಿಸಿದ ಮಹಾವಿಷ್ಣು ಫಂಡರಾಪುರದಲ್ಲಿ ರುಕ್ಮಿಣಿ ಸಮೇತನಾಗಿ “ವಿಠ್ಠಲ” ಎನ್ನುವ ಹೆಸರನ್ನು ಹೊತ್ತು ನೆಲೆಸುತ್ತಾನೆ.
ಮುಂದೆ ಅಲ್ಲೆ ವಿಠ್ಠಲ ದೇವಾಲಯ ನಿರ್ಮಾಣವಾಗುತ್ತದೆ. ಲಕ್ಷಾಂತರ ಭಕ್ತರ ಕೋರಿಕೆಯನ್ನು ಈಡೆರಿಸುತ್ತಾ ಸಾಕ್ಷಾತ್ ಶ್ರೀಕೃಷ್ಣ ಸ್ವರೂಪಿಯಾದ ವಿಷ್ಣು ಇಂದಿಗೂ ನಮ್ಮೆಲ್ಲರನ್ನೂ ಹರಸುತ್ತಿದ್ದಾನೆ.
No comments:
Post a Comment