ತಿರುವಣ್ಣಾಮಲೈ(Thiruvannamalai)
ಇಂದು ತಮಿಳು ನಾಡಿನ ಜಿಲ್ಲಾ ಕೆಂದ್ರವಾಗಿರುವ ತಿರುವಣ್ಣಾಮಲೈ ದಕ್ಷಿಣ ಭಾರತದ ಪ್ರಖ್ಯಾತ ಶೈವ ಕ್ಷೇತ್ರವೂ ಹೌದು. ಶ್ರೀ ಅರುಣಾಚಲೇಶ್ವರನೆನ್ನುವ ಹೆಸರಿನಲ್ಲಿ ಇಲ್ಲಿ ನೆಲೆಸಿರುವ ಪರಮೇಶ್ವರ ಭಕ್ತರ ಕಷ್ಟಗಳ ದೂರ ಮಾಡುತ್ತಾ ಅವರ ಸೇವೆಯನ್ನು ಯಥೊಚಿತ ಪಡೆಯುತ್ತಾ ಅಗ್ನಿಲಿಂಗ ಸ್ವರೂಪದಲಿ ಪೂಜೆಗೊಳ್ಳುತ್ತಿದ್ದಾನೆ.
ಹಿಂದೊಮ್ಮೆ ಸೃಷ್ಟಿಕರ್ತನಾದ ಬ್ರಹ್ಮನಿಗೂ ಮಹಾವಿಷ್ಣುವಿಗೂ ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠರೆನ್ನುವ ಪ್ರಶ್ನೆ ಮೂಡಿತು. ಅದಾಗ ಇಬ್ಬರೂ ಪರಮೇಶ್ವರನ ಬಳಿ ಧಾವಿಸಿದರು. ಪರಮೇಶ್ವರನು ಇಬ್ಬರ ವಾದಗಳನ್ನೂ ಆಲಿಸಿ ತಾನೋಂದು ಪಂದ್ಯವನ್ನೇರ್ಪಡಿಸಲು ಮುಂದಾದನು. ಅದೆಂದರೆ, ಶಿವನು ಜ್ಯೋತಿ ಸ್ವರೂಪನಾಗುವುದು, ಆ ಜ್ಯೋತಿಅ ಶಿರ ಭಾಗ ಹಾಗೂ ತಳಭಾಗವನ್ನು ಯಾರು ಕಂಡು ಹಿಡಿಯುವರೋ ಅವರೇ ಶ್ರೇಷ್ಠರಾಗುತ್ತಾರೆ. ಇಬ್ಬರೂ ಆ ಷರತ್ತಿಗೆ ಒಪ್ಪಿದರು,
ವಿಷ್ಣುವು ವರಾಹ ರೂಪದಲ್ಲಿ ಪಾತಾಳಕ್ಕೆ ಜ್ಯೋತಿಯ ತಳವನ್ನು ಹುಡುಕಲು ಹೊರಟರೆ, ಬ್ರಹ್ಮನು ತಾನು ರಾಜ ಹಂಸದ ರೂಪುತಾಳಿ ಜ್ಯೋತಿಯ ತಲೆಯನ್ನು ತಲುಪುವದಕ್ಕೆ ಹೋದನು. ದಿನಗಳು, ವಾರಗಳು, ಕೊನೆಗೆ ವರ್ಷಗಳು, ಮನ್ವಂತರಗಳು ಉರುಳಿದರೂ ಜ್ಯೋತಿ ಸ್ವರೂಪನಾದ ಪರಶಿವನ ತಲೆ ಯಾಗಲೀ ತಳವಾಗಲೀ ದೊರೆಯಲಿಲ್ಲ. ಕೊನೆಗೊಮ್ಮೆ ವಿಷ್ಣುವು ತಾನು ಪಣದಲ್ಲಿ ಸೋತುದಾಗಿ ಒಪ್ಪಿದನು. ಬ್ರಹ್ಮನೂ ಸಹ ಜ್ಯೋತಿಯ ತಲೆಯನ್ನು ಕಾಣುವಲ್ಲಿ ವಿಫಲನಾಗಿ ಮರಳುವ ವೇಳೆ ಅವನಿಗೊಂದು ತುಂಬೆ ಪುಷ್ಪ ಮೇಲಿನಿಂದ ಬಿಳುತ್ತಿರುವುದು ಕಂಡಿತು. ತಕ್ಷಣ ಜಾಗೃತನಾದ ಬ್ರಹ್ಮನು ಅದರ ಬಳಿ ಕೇಳಿದನು, ”ಎಲೆ ಪುಷ್ಪವೇ ನೀನು ಶಿವನ ತಲೆತಿಂದ ಬೀಳುತ್ತಿರುವಿಯಷ್ಟೆ, ಪರಮೇಶ್ವರನ ತಲೆ ಇಲ್ಲಿಂದ ಎಷ್ಟು ದೂರದಲ್ಲಿದೆ?” ಅದಕ್ಕೆ ಪುಷ್ಪವೆಂದಿತು ;;ಅದರ ಬಗ್ಗೆ ನನಗೆ ಅರಿವಿಲ್ಲ, ನಾನು ಸುಮಾರು ನಲವತ್ತು ಸಾವಿರ ವರುಷಗಳಿಂದಲೂ ಹೀಗೆ ಬೀಳುತ್ತಿರುವೆನು, ಇನ್ನೂ ತಳ ಮುಟ್ಟಿಲ್ಲ.” ಹೀಗೆಂದಾಗ ಬ್ರಹ್ಮನಿಗೆ ತಾನು ಈ ಜ್ಯೋತಿಯ ತಲೆ ಮುಟ್ಟುವುದು ಸಾದ್ಯವಿಲ್ಲ ಎನ್ನುವುದು ಖಚಿತವಾಯಿತು. ಮತ್ತು ಅವನು ಆ ತುಂಬೆ ಹೂವಿನ ಬಳಿ ಹೀಗೆಂದನು, ”ನೀನು ನನಗೊಂದು ಸಹಾಯ ಮಾಡಬೇಕು ಅದೆಂದರೆ ಶಿವನ ಬಳಿ ಸಾರಿ ಬ್ರಹ್ಮನು ಈ ಜ್ಯೋತಿಯ ತಲೆಯನ್ನು ತಲುಪಿದನೆಂದು ಸುಳ್ಳು ಹೇಳಬೇಕು”. ಅದಕ್ಕೊಪ್ಪಿದ ಪುಷ್ಪ ಹಾಗೆಯೇ ಮಾಡಿತು. ಈ ಎಲ್ಲದರ ಮರ್ಮವನ್ನರಿತ ಪರಮೇಶ್ವರನು ಬ್ರಹ್ಮನ ಮೋಸಕ್ಕಾಗಿ ಆತನಿಗೆ ಭೂಮಿಯಲ್ಲೆಲ್ಲೂ ದೇವಾಲಯವಿಲ್ಲದಂತಾಗಲೆಂದು ಶಪಿಸಿದನು. ಹಾಗೆ ತುಂಬೆ ಹೂವಿಗೆ ಪೂಜೆಗೆ ನೀನು ಅರ್ಹನಲ್ಲದವಳಾಗೆಂದು ಶಾಪವನ್ನು ನೀಡಿದನು. ಹೀಗೆ ಬ್ರಹ್ಮನ ಅಹಂಕಾರವನ್ನು ಪರಮೇಶ್ವರನು ಮುರಿದಂತಹಾ ಆ ಸ್ಥಳವೇ ಇಂದಿನ ತಿರುವಣ್ಣಾಮಲೈ ಎನ್ನಲಾಗಿದೆ.
ಅದಾಗಿ ಹಲವು ಮನ್ವಂತರಗಳಾದ ಮೇಲೆ ಒಮ್ಮೆ ಪಾರ್ವತಿಯು ಹುಡುಗಾಟಕ್ಕಾಗಿ ಶಿವನ ಕಣ್ಣುಗಳನ್ನು ಮುಚ್ಚಿದಳು. ಅದಾಗ ಲೋಕದ ಕಣ್ಣೆ ಅವನಾಗಿರುವ ಕಾರಣ ಲೋಕವೆಲ್ಲಾ ಗಾಢ ಅಂಧಕಾರದಲ್ಲಿ ಮುಳುಗಿತು. ಅದಾಗ ಪಾರ್ವತಿದೇವಿಗೆ ತಾನು ಮಾಡಿದ ಪಾಪದ ಅರಿವಾಗಿ ಅದರ ಪ್ರಯಶ್ಚಿತ್ತವಾಗಿ ಮರಳಿನ ಒಂದು ಲಿಂಗವನ್ನು ತಯಾರಿಸಿ ಕಂಚಿಯಲ್ಲಿ ನಿಂತು ಪೂಜಿಸಲು ಮುಂದಾದಳು. ಪರಮೇಶ್ವರನು ಆ ಸಮಯದಲ್ಲಿ ಆ ಲಿಂಗವನ್ನು ತಿರುವಣ್ಣಾಮಲೈಗೆ ತರಲು ಹಾಗೂ ಅಲ್ಲೇ ಪೂಜಿಯನ್ನು ಮಾಡಲು ತನ್ನ ಸತಿಯಾದ ಪಾರ್ವತಿಗೆ ಆದೇಶಿಸಿದ. ಅದರಂತೆ ಗೌತಮ ಮುನಿಗಳ ನೆರವಿನೊಂದಿಗೆ ಉಮೆಯು ಆ ಲಿಂಗವನ್ನು ತಿರುವಣ್ಣಮಲೈಗೆ ಸಾಗಿಸುತ್ತಿರಲು ಮಾರ್ಗದ ಮದ್ಯೆ ಮಕಿದಾಸುರನೆಂಬ ರಕ್ಕಸ ಅವಳಿಗೆ ಉಪಟಳವನ್ನು ನೀಡಲು ಬಂದಾಗ ಆಕೆ ಆದಿ ದುರ್ಗಾ ಪರಮೇಶ್ವರಿಯ ರೂಪವನ್ನು ಧರಿಸಿ ಅವನನ್ನು ವಧಿಸಿದಳು. ಹಾಗೆ ತಾಯಿಯು ರಕ್ಕಸನನ್ನು ವಧಿಸಿದ ದಿನ ಕಾರ್ತಿಕ ಪೌರ್ಣಮಿಯಾಗಿದ್ದು, ಅಂದೆ ಪರಮೇಶ್ವರನು ತಾಯಿಯ ಎಡಪಾರ್ಶ್ವದಲ್ಲಿ ಒಂದಾಗಿ ಅರ್ಧನಾರೀಶ್ವರ ಸ್ವರೂಪವನ್ನು ತಾಳಿದನು. ಈ ಘಟನೆಗಳು ನಡೆದುದು ಸಹ ತಿರುವಣ್ಣ್ಣಾಮಲೈನ ಬೆಟ್ಟದಲ್ಲಿಯೇ ಎನ್ನುವುದು ಪ್ರತೀತಿ.
ಅದಕ್ಕೆಂದೇ ಜ್ಯೋತಿಸ್ವರೂಪಿಯಾದ ಪರಮೇಶ್ವರನ ಸನ್ನಿಧಾನದಲ್ಲಿ ಪ್ರತಿ ವರ್ಷ ಕಾರ್ತಿಕ ದೀಪೋತ್ಸವ ಅತ್ಯಂತ ವೈಭವಯುತವಾಗಿ ಆಚರಿಸಲಾಗುತ್ತದೆ.
No comments:
Post a Comment