Wednesday, April 04, 2018

ಶಿಲ್ಪಿಯ ಕೈಯಲ್ಲಿ ಅರಳಿದ ಕೈಲಾಸ

ಕಾಂಚೀಪುರ ದೇವಳಗಳ ನಗರಿ, ರೇಷ್ಮೆ ಸೀರೆಗಳಿಗೆ ಪ್ರಸಿದ್ದಿ, ತಮಿಳುನಾಡಿನ ವಿಶಿಷ್ಟ ಪೊಂಗಲ್, ಕೈ ಮುರುಕು, ತೆಂಗೋಳು, ಹಲ್ಲಿಗೆ ಷಾಕ್, ಪುಳಿಯೋಗರೆಗಳಿಗೆ ಹೆಸರುವಾಸಿ.

 ಕೈಲಾಸನಾಥ ದೇವಾಲಯ ಹೊರಾಂಗಣ ನೋಟ



ಇಲ್ಲಿನ ಏಕಾಂಬರನಾಥ, ಕಾಮಾಕ್ಷಿ, ವರದರಾಜ ಪೆರುಮಾಳ್, ಕೈಲಾಸನಾಥ ದೇವಾಲಯ ಸೇರಿ ಅನೇಕ ದೇವಾಲಯಗಳು ಜನರನ್ನು ತಮ್ಮತ್ತ ಆಕರ್ಷಿಸುತ್ತದೆ.

ಇಂತಹಾ ಸಿಂಹದ ಕೆತ್ತನೆಗಳು ಈ ದೇವಾಲಯದಲ್ಲಿ ಬಹಳಷ್ಟು ಕಾಣಿಸುತ್ತದೆ
ಇದರಲ್ಲಿಯೂ ಕೈಲಾಸನಾಥ ದೇವಾಲಯ ಶಿಲ್ಪಕಲೆ ಕುಸುರಿ ಕೆತ್ತನೆಗಳಿಂದ ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಭಾರತದಲ್ಲಿನ ಮೂರು ಪ್ರಮುಖ ಕೈಲಾಸನಾಥ ಮಂದಿರಗಳಲ್ಲಿ ಇದೂ ಒಂದು (ಇನ್ನೆರಡು ದೇವಾಲಯಗಳು ಕ್ರಮವಾಗಿ ಮಹಾರಾಷ್ಟ್ರದ ಎಲ್ಲೋರಾ ಹಾಗೂ ತಮಿಳುನಾಡಿನ ಉತ್ತಿರೂರು ಎನ್ನುವಲ್ಲಿದೆ)

ಕಾಂಚೀಪುರದಲ್ಲಿ ಪಲ್ಲವರಿಂದ ನಿರ್ಮಿತವಾಗಿರುವ ಈ ದೇವಾಲಯ ಸುಮಾರು 1200 ವರ್ಷಗಳಷ್ಟು ಹಳೆಯದು. ಪಲ್ಲವ ರಾಜ 2ನೆಯ ನರಸಿಂಹ ವರ್ಮ ನಿರ್ಮಾಣ ಮಾಡಿದ್ದ ಈ ದೇವಾಲಯ ಎದುರಿನ ಗೋಪುರ ಹಾಗೂ ಬಸವ ಅತ್ಯಂತ ಆಕರ್ಷಕವಾಗಿದೆ.



ಸುಂದರವಾದ ಗರ್ಭಗುಡಿಯ ಮೇಲಿರುವ 
ವಿಮಾನ, ಕಂಬಗಳಿಂದ ಕೂಡಿದ ಮಂಟಪ, ಮುಂಭಾಗ ಮತ್ತು ಸುತ್ತಲೂ ಪ್ರಾಕಾರದಲ್ಲಿರುವ 58 ಪುಟ್ಟ ಗುಡಿಗಳೂ ಅವುಗಳಲ್ಲಿರುವ ಮೆದುವಾದ ಮರಳುಗಲ್ಲಿನಿಂದ ಮಾಡಲ್ಪಟ್ಟಿರುವ ಶಿವ ವಿಗ್ರಹಗಳೂ ಈ ದೇವಾಲಯದ ಹಿರಿಮೆಯ ಪ್ರತೀಕಗಳು. ಮೊದಲಿಗೆ ಈ ವಿಗ್ರಹಗಳನ್ನು ಅಲಂಕರಿಸಲು ಬಳಸಿದ ಆ ಬಣ್ಣಗಳ ಚಿಹ್ನೆಗಳು ಮಾತ್ರ ಈಗ ಉಳಿದುಬಂದಿದೆ.

ಒಂದು ಐತಿಹ್ಯದ ಪ್ರಕಾರ, ರಾಜ ರಾಜ ಚೋಳ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಮೇಲೆಯೇ ತಂಜಾವೂರಿನಲ್ಲಿ ಬೃಹದೀಶ್ವರ ದೇವಸ್ಥಾನ ಸ್ಥಾಪಿಸಲು ಸ್ಪೂರ್ತಿ ದೊರೆಯಿತು ಎನ್ನಲಾಗುತ್ತದೆ.

ದೇವಾಲಯದ ಮುಂಭಾಗದಲ್ಲಿ ಹಲವಾರು ಪುಟ್ಟ ಗುಡಿಗಳಿವೆ ಮತ್ತು ಕೋಷ್ಟಕಗಳಿದ್ದು ಅದರಲ್ಲಿ ಶಿವಲಿಂಗಗಳಿವೆ.ಒಳಾಂಗಣದ ಭಿತ್ತಿಯಲ್ಲಿ ಸಾಲು ಸಾಲು ಕಂಭಗಳು, ಎಲ್ಲೆಲ್ಲು ನೋಡಿದರೂ ಸಿಂಹಗಳ ಚಿತ್ರ! ದೊಡ್ಡ ಸಿಂಹಗಳು ಬಾಯ್ದೆರೆದು ನಮ್ಮನ್ನು ನೋಡುತ್ತದೆ!














ಮಧ್ಯದಲ್ಲಿರುವ ಕೈಲಾಸನಾಥನ ಆಲಯದ ಗೋಪುರ ಸಾಧಾರಣ ಎತ್ತರವಿದೆ. ಗರ್ಭಗೃಹದಲ್ಲಿ ಕರಿಶಿಲೆಯಲ್ಲಿ ಕೆತ್ತಿದ ದೊಡ್ಡ ಶಿವಲಿಂಗವಿದೆ. ಬಹಳ ಸುಂದರವಾಗಿದೆ. ಇಲ್ಲೇ ಪಕ್ಕದ ಗೋಡೆಗೆ ಒರಗಿಸಿರುವ ಭಿನ್ನವಾಗಿರುವ ಬಹಳ ದೊಡ್ಡ ಪಾಣಿ ಪೀಠ ಒಂದನ್ನು ಇರಿಸಿದ್ದಾರೆ. ಇದು ಮುರುಕಲು ಆದ್ದರಿಂದ ಪೂಜೆಗೆ ಯೋಗ್ಯವಲ್ಲ. ಅದರ ಗಾತ್ರ ನೋಡಿಯೇ ಅಚ್ಚರಿಪಡಬೇಕು. 

ದೇವಾಲಯ ಪ್ರಾಕಾರದಲ್ಲಿ ಶಬರ ಶಂಕರ ವಿಳಾಸದ ಚಿತ್ರಗಳು ಕಣ್ಣಿಗೆ ಕಟ್ಟಿದಂತಿದೆ ಒಟ್ಟಾರೆ ಪಲ್ಲವ ಶಿಲ್ಪಕಲಾ ವೈಭವಕ್ಕೆ ಈ ದೇವಾಲಯ ಸಾಕ್ಷಿಯಾಗಿದೆ.  ಭಾರತದಲ್ಲಿ ಬೇರಾವ ದೇವಾಲಯದಲ್ಲಿಯೂ ಸಿಕ್ಕದ ಶಿವನ ಅರವತ್ತ ನಾಲ್ಕು ಕಲಾ ವೈಭವಯುತ ರೂಪವನ್ನು ಈ ದೇವಾಲಯದಲ್ಲಿ ಮಾತ್ರ ಕಾಣಬಹುದು. 

ಇನ್ನು ಈ ದೇವಾಲಯದಲ್ಲಿ ಕಂಬವೊಂದರ ಮೇಲೆ ಚಾಲುಕ್ಯ ಅರಸ 2ನೆಯ ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಕೆತ್ತಿಸಿದ ಕನ್ನಡ ಶಾಸನ ಇರುವುದು ಗಮನಾರ್ಹ ಸಂಗತಿ.
















(ಈ ನನ್ನ ಲೇಖನವು 15 ಏಪ್ರಿಲ್ 2018ರಂದು ಕನ್ನಡ ಪ್ರಭ ಡಾಟ್ ಕಾಂ ನಲ್ಲಿ ಪ್ರಕಟವಾಗಿತ್ತು https://bit.ly/2HtBWjx)

No comments:

Post a Comment