Friday, August 01, 2025

ಪಾಪ ಶಾರೂಖ್‍ಗೆ ಪ್ರಶಸ್ತಿ ಸಿಕ್ಕಿರಲಿಲ್ಲ, ಅದಕ್ಕೇ …

 





ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ಪ್ರಶಸ್ತಿಗಳ ಬಗ್ಗೆ ನಂಬಿಕೆಯೇ ಕಡಿಮೆ ಆಗಿದೆ. ಅದು ಈ ವರ್ಷ ಮತ್ತೊಮ್ಮೆ ಸಾಬೀತಾಗಿದೆ. 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಸಂಜೆ ಘೋಷಣೆಯಾಗಿದೆ. ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರಿಗೆ ಹಂಚಲಾಗಿದೆ. ‘12th Fail’ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಕ್ರಾಂತ್‍ ಮಾಸ್ಸಿಯ ಜೊತೆಗೆ ‘ಜವಾನ್‍’ ಚಿತ್ರದ ಅಭಿನಯಕ್ಕಾಗಿ ಶಾರೂಖ್‍ ಖಾನ್‍ಗೂ ಪ್ರಶಸ್ತಿ ನೀಡಲಾಗಿದೆ. ‘12th Fail’ ಚಿತ್ರದ ಮನೋಜ್‍ ಕುಮಾರ್‍ ಶರ್ಮಾ ಪಾತ್ರದಲ್ಲಿ ವಿಕ್ರಾಂತ್‍ ಜೀವ ತುಂಬ ನಟಿಸಿದ್ದರು. ಅವರ ಅಭಿನಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಶಾರೂಖ್‍ ಖಾನ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಯಾಕೆ?

ಈ ವಿಷಯ ಅರಗಿಸಿಕೊಳ್ಳುವುದು ಕಷ್ಟ. ‘ಜವಾನ್‍’ ಚಿತ್ರದಲ್ಲಿ ಶಾರೂಖ್‍ ಖಾನ್‍ ಅಭಿನಯ ಅತ್ಯಂತ ಸಾಧಾರಣವಾಗಿತ್ತು. ಅದರಲ್ಲಿ ಯಾವುದೇ ವಿಶೇಷತೆಯೂ ಇರಲಿಲ್ಲ ಮತ್ತು ಈ ತರಹದ ಪಾತ್ರಗಳು ಮತ್ತು ಅಭಿನಯ ಯಾವುದೂ ಹೊಸದೇನಲ್ಲ. ಅಂಥದ್ದೊಂದು ಅಭಿನಯಕ್ಕೆ ಯಾವುದೋ ಖಾಸಗೀ ಪ್ರಶಸ್ತಿ ಬಂದಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ರಾಷ್ಟ್ರ ಪ್ರಶಸ್ತಿ ಕೊಟ್ಟಿರುವುದು ನಿಜಕ್ಕೂ ಆಶ್ಚರ್ಯ ಮತ್ತು ವಿಚಿತ್ರ. ಯಾವ ಮಾನದಂಡದ ಮೇಲೆ ಇಂಥದ್ದೊಂದು ಪ್ರಶಸ್ತಿಯನ್ನು ಅವರಿಗೆ ನೀಡಲಾಯ್ತೋ ಗೊತ್ತಿಲ್ಲ. ಹಿಂದೆ ಇದೇ ಶಾರೂಖ್‍ ಖಾನ್‍ಗೆ ‘ಚಕ್‍ದೇ ಇಂಡಿಯಾ’, ‘ಸ್ವದೇಸ್‍’, ‘ಮೈ ನೇಮ್‍ ಈಸ್ ‍ಖಾನ್‍’ ಚಿತ್ರದಲ್ಲಿ ತಮ್ಮ ಅಭಿನಯದಿಂದ ಗಮನಸೆಳೆದಿದ್ದರು. ಆದರೆ, ಆ ಯಾವ ಚಿತ್ರಗಳ ಅಭಿನಯಕ್ಕೂ ಶಾರೂಖ್‍ಗೆ ಪ್ರಶಸ್ತಿ ಬಂದಿರಲಿಲ್ಲ. ಆದರೆ, ‘ಜವಾನ್‍’ನಲ್ಲಿ ಶಾರೂಖ್‍ ಖಾನ್‍ ಅದೇನು ಮಾಡಿದ್ದಾರೆ ಎಂದು ಗುರುತಿಸಿ ಬಾಲಿವುಡ್‍ನ ಜನಪ್ರಿಯ ನಿರ್ದೇಶಕ ಅಶುತೋಷ್ ಗೊವಾರಿಕರ್‍ ನೇತೃತ್ವದ ಸಮಿತಿ ಪ್ರಶಸ್ತಿ ಕೊಟ್ಟಿತೋ ಗೊತ್ತಿಲ್ಲ. ಸಮಿತಿಯೇನೋ ಪ್ರಶಸ್ತಿ ಕೊಟ್ಟಿರಬಹುದು. ಆದರೆ, ಅದನ್ನು ಪಡೆಯುವುದಕ್ಕೆ ಶಾರೂಖ್ ಸಹ ಮುಜುಗರ ಪಟ್ಟರೆ ಆಶ್ಚರ್ಯವಿಲ್ಲ.

ಇಷ್ಟಕ್ಕೂ ಶಾರೂಖ್‍ಗೆ ಯಾಕೆ ಒತ್ತಾಯಪೂರ್ವಕವಾಗಿ ಪ್ರಶಸ್ತಿ ನೀಡಲಾಗಿದೆ? ಬಹುಶಃ ಇದುವರೆಗೂ ನೀಡಿರಲಿಲ್ಲ ಎಂಬ ಕಾರಣಕ್ಕೆ ನೀಡಿರುವ ಸಾಧ್ಯತೆ ಇದೆ. ಶಾರೂಖ್‍ ಹೇಳಿಕೇಳಿ ಭಾರತದ ಜನಪ್ರಿಯ, ಬೇಡಿಕೆಯ ಮತ್ತು ದುಬಾರಿ ನಟ. ಅವರು ತಮ್ಮ ಅಭಿನಯಕ್ಕೆ ಹಲವು ಖಾಸಗೀ ಪ್ರಶಸ್ತಿಗಳನ್ನು ಪಡೆದುಕೊಂಡಿರಬಹುದು. ಜನಪ್ರಿಯ ನಟರ ಪೈಕಿ ಹಲವು ವರ್ಷಗಳಿಂದ ಕಾಣಿಸಿಕೊಂಡಿರಬಹುದು. ಆದರೆ, ಇದುವರೆಗೂ ರಾಷ್ಟ್ರ ಪ್ರಶಸ್ತಿಯನ್ನೇ ಪಡೆದಿರಲಿಲ್ಲ. ಅವರು ನೊಂದುಕೊಳ್ಳಬಾರದು ಮತ್ತು ಆ ಕೊರತೆಯನ್ನು ನೀಗಿಸುವುದಕ್ಕೆ ಆಯ್ಕೆ ಸಮಿತಿಯೇ ಅತೀ ಕಾಳಜಿ ವಹಿಸಿ ಪ್ರಶಸ್ತಿ ನೀಡಿದೆಯಾ? ಗೊತ್ತಿಲ್ಲ. ಒಟ್ಟಿನಲ್ಲಿ ಶಾರೂಖ್‍ಗೆ ಪ್ರಶಸ್ತಿ ಕೊಟ್ಟಿದ್ದಿಕ್ಕೆ ಆಯ್ಕೆ ಸಮಿತಿಯ ಅಧ್ಯಕ್ಷ ಅಶುತೋಶ್‍ ಗೊವಾರಿಕರ್‍ ಈ ರೀತಿಯ ಕಾರಣ ನೀಡಿದ್ದಾರೆ. ‘‘ಜವಾನ್‍’ ಚಿತ್ರದಲ್ಲಿನ ಶಾರೂಖ್‍ ಅವರ ಭಾವತೀವ್ರ ಅಭಿನಯ ಅದ್ಭುತವಾಗಿತ್ತು. ಬರೀ ಶತ್ರುಗಳ ಜೊತೆಗೆ ಹೊಡೆದಾಡುವುದಷ್ಟೇ ಅಲ್ಲ, ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡುವ ನಾಯಕನ ಪಾತ್ರಕ್ಕೆ ಜೀವ ತುಂಬಿದ್ದಾರೆ’ ಎಂದು ಹೇಳಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಚಿತ್ರಗಳು ನಿರ್ಮಾಣವಾಗುತ್ತವೆ. ಈ ಪೈಕಿ ಸದಭಿರುಚಿಯ, ಕಲಾತ್ಮಕ, ಪ್ರಯೋಗಾತ್ಮಕ ಮತ್ತು ಗುಣಾತ್ಮಕ ಚಿತ್ರಗಳನ್ನು ಮತ್ತು ಕೆಲಸವನ್ನು ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರ ಪ್ರಶಸ್ತಿಗಳನ್ನು ನೀಡುವ ಪರಿಪಾಠ ಹಲವು ದಶಕಗಳಿಂದ ನಡೆದುಬಂದಿದೆ. ಅದರಲ್ಲೂ ಕಮರ್ಷಿಯಲ್‍ ಮತ್ತು ಮುಖ್ಯವಾಹಿನಿಯ ಸಿನಿಮಾಗಳ ಮಧ್ಯೆ ಕಳೆದು ಹೋಗುವ ಸಾಕಷ್ಟು ಕಡಿಮೆ ಬಜೆಟ್‍ನ ಸದಭಿರುಚಿಯ ಚಿತ್ರಗಳನ್ನು ಗುರುತಿಸುವ ಮತ್ತು ಎತ್ತಿ ಹಿಡಿಯುವ ಕೆಲಸ ಈ ಪ್ರಶಸ್ತಿಗಳಿಂದ ಆಗುತ್ತಿತ್ತು. ಒಂದು ಚಿತ್ರಕ್ಕೆ ಅಥವಾ ಒಂದು ಕೆಲಸಕ್ಕೆ ಅತ್ಯುತ್ತಮ ಪ್ರಶಸ್ತಿ ಸಿಕ್ಕಿದೆ ಎಂದರೆ ಅದಕ್ಕೊಂದು ಮೌಲ್ಯ ಇರುತ್ತಿತ್ತು. ಆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಆ ಚಿತ್ರಗಳನ್ನು ನೋಡುವುದಕ್ಕೆ ದೇಶಾದ್ಯಂತ ಜನ ಕಾಯುತ್ತಿದ್ದರು.

ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಒಟ್ಟಾರೆ ಇದರ ಸ್ವರೂಪವೇ ಬದಲಾಗಿದೆ. ರಾಷ್ಟ್ರ ಪ್ರಶಸ್ತಿಗಳು ಎಂದರೆ ಅದು ಬಾಲಿವುಡ್‍ ಅಥವಾ ಕಮರ್ಷಿಯಲ್‍ ಸಿನಿಮಾಗಳಿಗೆ ಸೀಮಿತ ಎನ್ನುವಂತಾಗಿದೆ. ಅದಕ್ಕೆ ಪೂರಕವಾಗಿ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಎರಡು ವಿಷಯಗಳು ಎದ್ದು ನಿಲ್ಲುತ್ತವೆ. ಇದೇ ವರ್ಷ, ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯನ್ನು ತೆಗೆದುಕೊಂಡರೆ, ಬಾಲಿವುಡ್‍ಗೆ ಪ್ರಶಸ್ತಿ ಕೊಡಬೇಕು ಎಂದಿದ್ದರೆ, ವಿಕ್ರಾಂತ್‍ ಜೊತೆಗೆ ‘ಸ್ಯಾಮ್‍ ಬಹದ್ದೂರ್‍’ ಚಿತ್ರದ ಅಭಿನಯಕ್ಕಾಗಿ ವಿಕ್ಕಿ ಕೌಶಾಲ್‍ಗೆ ನೀಡಬಹುದಿತ್ತು. ಸ್ಯಾಮ್‍ ಬಹದ್ದೂರ್‍ ಪಾತ್ರದಲ್ಲಿ ವಿಕ್ಕಿ ನಿಜಕ್ಕೂ ಗಮನಸೆಳೆದಿದ್ದರು. ಅದು ಬಿಟ್ಟು, ಯಾರೂ ಗಣನೆಗೇ ತೆಗೆದುಕೊಳ್ಳದ ‘ಜವಾನ್‍’ ಚಿತ್ರದ ಅಭಿನಯಕ್ಕೆ ಶಾರೂಖ್‍ಗೆ ಪ್ರಶಸ್ತಿ ನೀಡಲಾಗಿದೆ.

ಕಳೆದ ವರ್ಷ ‘ಕಾಂತಾರ’ ಚಿತ್ರದ ಅಭಿನಯಕ್ಕಾಗಿ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಾಗಲೂ, ಆಯ್ಕೆ ಸೂಕ್ತವಲ್ಲ ಎಂಬ ಮಾತು ತೆರೆಮರೆಯಲ್ಲಿ ಕೇಳಿಬಂದಿತ್ತು. ಕನ್ನಡಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದು ಹೆಮ್ಮೆ ಮತ್ತು ಖುಷಿ ಒಂದು ಕಡೆಯಾದರೆ, ಅದು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಗುವ ಅಭಿನಯವಲ್ಲ ಎಂಬ ಚರ್ಚೆ ಸಹ ತೆರೆಯ ಹಿಂದೆ ಆಗಿತ್ತು. ಚಿತ್ರ ಮತ್ತು ರಿಷಭ್‍ ಶೆಟ್ಟಿ ಜನಪ್ರಿಯತೆಯನ್ನು ಮಾತ್ರ ಗಮನಿಸಿ ಪ್ರಶಸ್ತಿ ನೀಡಲಾಗಿದೆ ಎಂಬ ಅಪಸ್ವರ ಕೇಳಿಬಂದಿತ್ತು. ಅದರ ಹಿಂದಿನ ವರ್ಷ ‘ಪುಷ್ಪ’ ಚಿತ್ರದ ಅಭಿನಯಕ್ಕಾಗಿ ಅಲ್ಲು ಅರ್ಜುನ್‍ಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಅಭಿನಯ ಹೇಗಾದರೂ ಇರಲಿ, ಅದೊಂದು ಪಕ್ಕಾ ಸಮಾಜ ಘಾತುಕ ಪಾತ್ರ. ಅಂಥದ್ದೊಂದು ಪಾತ್ರ ಮತ್ತು ಪಾತ್ರಪೋಷಣೆಯನ್ನು ಪ್ರಶಸ್ತಿಗೆ ಪರಿಗಣಿಸಿದ್ದು ದೊಡ್ಡ ತಪ್ಪು ಎಂದು ಸಾಕಷ್ಟು ಕಟುಟೀಕೆಗಳು ಕೇಳಿಬಂದವು. ಆದರೆ, ಅದ್ಯಾವುದನ್ನೂ ಪರಿಗಣಿಸದ ಆಯ್ಕೆ ಸಮಿತಿಯು, ಅಲ್ಲು ಅರ್ಜುನ್‍ಗೆ ಪ್ರಶಸ್ತಿ ನೀಡಿ ಗೌರವಿಸಿತು. ಒಂದು ಚಿತ್ರ ಯಶಸ್ವಿಯಾಗುವುದು, ಆ ಚಿತ್ರದಲ್ಲಿನ ಅಭಿನಯವನ್ನು ಅಭಿಮಾನಿಗಳು ಮೆಚ್ಚುವುದು ಬೇರೆ ವಿಷಯ. ಆದರೆ, ಕೇಂದ್ರ ಸರ್ಕಾರ ಕೊಡುವ ಪ್ರಶಸ್ತಿಗೆ ಒಂದಿಷ್ಟು ಮಾನದಂಡ, ಮೌಲ್ಯಗಳಿರುತ್ತವೆ. ಅದನ್ನೆಲ್ಲಾ ಪರಿಗಣಿಸಿ ಪ್ರಶಸ್ತಿ ನೀಡಬೇಕು. ಆದರೆ, ಆಯ್ಕೆ ಸಮಿತಿಗಳು ಇತ್ತೀಚೆಗೆ ಗಮನಿಸುತ್ತಿರುವುದು ಎರಡೇ ವಿಷಯಗಳನ್ನು. ಒಂದು ಬಾಲಿವುಡ್‍, ಇನ್ನೊಂದು ಮುಖ್ಯವಾಹಿನಿಯ ಸಿನಿಮಾ.

ಅದರಲ್ಲೂ ಬಾಲಿವುಡ್‍ ಚಿತ್ರಗಳಿಗೆ ಇಲ್ಲಿ ಮೊದಲ ಪ್ರಾಶಸ್ತ್ಯ ಎನ್ನುವಂತಾಗಿದೆ. ಮೊದಲೆಲ್ಲಾ ಬಾಲಿವುಡ್‍ ನಟ-ನಟಿಯರಿಗೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಸಿಗುತ್ತಿದ್ದು ಕಡಿಮೆಯೇ. ಪ್ರಾದೇಶಿಕ ಸಿನಿಮಾ ಮತ್ತು ನಟ-ನಟಿಯರ  ಎದುರು ಬಾಲಿವುಡ್‍ ಮಂದಿ ಪ್ರಶಸ್ತಿ ಪಡೆದಿದ್ದು ಕಡಿಮೆಯೇ.  ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆಯುತ್ತಿರುವ ಬಾಲಿವುಡ್‍ ನಟ-ನಟಿಯರ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ, ಪ್ರತೀ ವರ್ಷ ಅತ್ಯುತ್ತಮ ನಟ ಅಥವಾ ನಟಿ ಪ್ರಶಸ್ತಿ ಎರಡರಲ್ಲಿ ಒಂದಂತೂ ಬಾಲಿವುಡ್‍ಗೆ ಹೋಗುವುದು ಗಮನಿಸಬಹುದು. ಈ ವರ್ಷ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೆ’ ಚಿತ್ರದ ಅಭಿನಯಕ್ಕೆ ರಾಣಿ ಮುಖರ್ಜಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಕರಣ್‍ ಜೋಹರ್‍ ನಿರ್ದೇಶನದ ‘ರಾಕಿ ಔರ್‍ ರಾಣಿ ಕೀ ಪ್ರೇಮ್‍ ಕಹಾನಿ’ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಎರಡು ವರ್ಷಗಳ ಹಿಂದೆ ಆಲಿಯಾ ಭಟ್‍ ಮತ್ತು ಕೃತಿ ಸನೋನ್ಗೆ ಪ್ರಶಸ್ತಿ ಸಿಕ್ಕಿತ್ತು. ಅದರ ಹಿಂದಿನ ವರ್ಷ ಅಜಯ್ ದೇವಗನ್‍ಗೆ, ಅದರ ಹಿಂದಿನ ವರ್ಷ ಕಂಗನಾ ರಣಾವತ್‍ಗೆ, 66ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ವಿಕ್ಕಿ ಕೌಶಾಲ್‍ ಮತ್ತು ಆಯುಷ್ಮಾನ್‍ ಖುರಾನಾಗೆ … ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.

ಬಾಲಿವುಡ್‍ ಅಥವಾ ಕಮರ್ಷಿಯಲ್‍ ಸಿನಿಮಾಗಳಿಗೆ ಪ್ರಶಸ್ತಿ ನೀಡಬಾರದು ಎಂಬುದು ವಾದವಲ್ಲ. ಮುಖ್ಯವಾಹಿನಿಯೋ, ಪ್ರಯೋಗಾತ್ಮಕ ಚಿತ್ರಗಳೋ ಅರ್ಹರಿಗೆ ಖಂಡಿತಾ ಪ್ರಶಸ್ತಿ ಸಿಗಬೇಕು. ಆದರೆ, ಮಾನದಂಡ ಬದಲಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಇಲ್ಲಿ ಒತ್ತಾಯಪೂರ್ವಕವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅರ್ಹರೋ ಅಲ್ಲವೋ ಬೇರೆ ಮಾತು, ಅವರು ಜನಪ್ರಿಯರು, ಅವರಿಗೆ ಇದುವರೆಗೂ ಪ್ರಶಸ್ತಿ ಸಿಕ್ಕಿಲ್ಲ, ಹಾಗಾಗಿ ಈ ಬಾರಿಯಾದರೂ ಕೊಡಬೇಕು ಎನ್ನುವ ಧೋರಣೆ ಸರಿಯಲ್ಲ. ಹೀಗೆ ಹಂಚುತ್ತಾ ಹೋದರೆ, ಅದಕ್ಕೊಂದು ಅಂತ್ಯವೂ ಇಲ್ಲ ಮತ್ತು ಯಾವ ಉದ್ದೇಶದಿಂದ ಈ ಪ್ರಶಸ್ತಿಗಳು ಸ್ಥಾಪನೆಯಾದವೋ, ಅದರ ಉದ್ದೇವೇ ಈಡೇರುವುದಿಲ್ಲ. ಇದರಿಂದ ನಿಜವಾಗಿ ಏಟು ಬೀಳುವುದು ಅರ್ಹರಿಗೆ, ಪ್ರಾದೇಶಿಕ ಸಿನಿಮಾಗಳಿಗೆ ಮತ್ತು ಪ್ರಯೋಗಾತ್ಮಕ ಸಿನಿಮಾಗಳಿಗೆ ಮಾತ್ರ.