Monday, September 30, 2024

“ಯೇಗ್ದಾಗೆಲ್ಲಾ ಐತೆ ” [ಯೋಗದಲ್ಲಿ ಎಲ್ಲವೂ ಇದೆ] ಬೆಳಗೆರೆ ಕೃಷ್ಣಶಾಸ್ತ್ರಿಗಳ ಕೃತಿ ಕುರಿತು..

 ಆಯಮ್ಮ ಮಾಯಮ್ಮ ಕಣೋ

ಒಂದು ಮಾತಿನ ಮಧ್ಯೆ ಸ್ವಾಮಿಗಳು   "ಒಬ್ಬಮ್ಮಾ ಇದಾಳೆ. ಆಯಮ್ಮ ಆರುಜನ ಮಕ್ಳನ್ನ ಹಡೆದವ್ಳೆ. ಆ  ಆರು ಜನಾನೂ ಒಳ್ಳೇ ಒಗ್ಗಟ್ಟಾಗಿರ್ತಾರೆ. ಒಬ್ಬನ್ ಬಿಟ್ ಒಬ್ಬನಿರಲ್ಲ.'ಎಂಥಾ ಒಳ್ಳೆ ಹುಡ್ಗುರಪ್ಪಾ ' ಅಂತ ನೀನೇನಾರಾ ಒಬ್ಬನ್ನ ಹತ್ರ ಕರಕೊಂಡ್ರೆ ಆರೂ ಜನಾನೂ ಬಂದ್ ಬಿಡ್ತಾರೆ. ಯಾಕಂದ್ರೆ ಅಂಥಾ ಒಗ್ಗಟ್ಟು ಅವ್ರುದು. ನೀನೂ ಅವ್ರು ಕುಟೆ ( ಜೊತೆ) ಆಟ ಆಡ್ಕೊಂಡು ಕಾಲ ಕಳಿತೀಯ. ಅವ್ರ ತಾಯಿ ಇದಾಳ್ ನೋಡು -"ಆಯಮ್ಮ ನನ್ ಮಕ್ಳು ಎಲ್ಲಿಗೋದ್ವು " ಅಂತ ಹುಡಿಕ್ಯಾಡಿಕೊಂಡು ಬತ್ತಾಳೆ. ನಿನ್ ತಾವ ಅವಿರದ್ನ ಕಂಡು ಸಿಟ್ಟಾಗಿ, ನಿನ್ನಿಡಕೊಂಡು ಕೆನ್ನೆ ಕೆನ್ನೆಗೆ ಒಡ್ದು, ಕಾಲಾಗ್ ತುಳ್ದು ಒಸಗ್ಹಾಕಿ ತನ್ನ ಮಕ್ಳುನ ಕರಕೊಂಡು ಅದೇ ಹೋಗ್ತಾಳೆ. ನಿನ್ ಕಥೆನೇ ಮುಗಿದೋಯ್ತು... ಅಂಥೋಳು ಆ ಯಮ್ಮ... " ಎಂದರು.

   ಪಕ್ಕದ್ದವರು " ಯಾರ್ ಸ್ವಾಮಿ ಆಯಮ್ಮ? " ಎಂದು ಕೇಳಿದಾಗ :


    " ಲೇ ಆಯಮ್ಮ ಮಾಯಮ್ಮ ಕಣೋ " ಎಂದು ನಕ್ಕರು. ಎಲ್ಲರೂ ನಕ್ಕೆವು. ಅರಿಷಡ್ ವರ್ಗಗಳಲ್ಲಿ  ಕಾಮ ಎಂಬ ಒಂದನ್ನು ಹತ್ತಿರಕ್ಕೆ ಕರೆದುಕೊಂಡರೂ ಉಳಿದ ಐದು ವರ್ಗಗಳು ಒಳಹೊಕ್ಕು ನಮ್ಮನ್ನು ನಾಶಮಾಡಿಬಿಡುತ್ತವೆ  ಎಂಬುದನ್ನು ಎಷ್ಟೊಂದು ಹಾಸ್ಯಮಯವಾಗಿ ವಿವರಿಸಿದರಲ್ಲಾ! ಎಂದು ನನಗೆ ಆಶ್ಚರ್ಯವಾಯಿತು.

ಒಮ್ಮೆ ಮಾತಿನ ಮಧ್ಯೆ ಸ್ವಾಮಿಗಳು ಹೀಗೆಂದರು: “ಸಾವ್ಕಾರಂತಾವ ದುಡ್ಡಿರೋದು ಸನ್ಯಾಸಿತಾವ ಸಿದ್ಧಿ ಇರೋದು ಎಳ್ಡು ಒಂದೇ ಕಣೋ ಮಗ. ಅವ್ನಿಗೂ ಹಾಂಕಾರ ಬಿಟ್ಟಿಲ್ಲ ಇವ್ನಿಗೂ ಬಿಟ್ಟಿಲ್ಲ… ಏಸು ಖರ್ಚಾದವಲೇ ನಿನ್ನ ಮನೆತನ ನಿರ್ನಾಮ ಮಾಡ್ತಿನಿ ಅಂತಾನೆ ಸಾವ್ಕಾರ. ಒಂದು ಬಿರುಗಣ್ಣು ಬಿಟ್ಟು ನಿನ್ನ ಸುಟ್ಟು ಬಿಡ್ತೀನಿ ಅಂತಾನೆ ಸನ್ಯಾಸಿ. ಇಬ್ರಿಗೂ ಗರಾ (ಅಹಂಕಾರ) ಬಿಟ್ಟಿಲ್ಲ. ಗರಾ ಬಿಟ್ರೇನೆ ಗುರು ನೋಡಪ್ಪ”.

” ಅಲಲಲಾಲ, ಅದು ನೋಡಪ್ಪಾ ಏನ್ ಸೊಗಸು! ಅಲ್ನೋಡು ಅವ್ನು ಎಂಥ ಬಣ್ಣ ಹಾಕ್ಕೊಂಡವ್ನೆ! ಎಲೆಲೇ, ಇವ್ನು ನೋಡಪ್ಪಾ ಆನೆ ಮುಖಾ! ಆಗೋ, ಅಲ್ನೋಡು ಇವನೆಲ್ಲೋ ಅರ್ಜೆಂಟಾಗಿ ಹೊಂಟವ್ನೆ! ಇಗೋ ಕುದುರೆ ಓಟ ಓಡುತ್ತ! (ನಗುತ್ತ ಆ ಮೋಡಗಳ ಬಣ್ಣ ಆಕಾರಗಳನ್ನು ವಿವರಿಸುತ್ತ) ಅಗೋ ಆ ಆನೆ ಮುಖದೋನು, ಆ ಕುದುರೆ! ಅವೆಲ್ಲೋದ್ವಪ್ಪಾ! ಇಂಗೇ ನೋಡು ಈಗ ಇದ್ದಿದ್ದು ಇನ್ನೊಂದು ಗಳಿಗಿಲ್ಲ. ಇಂಗೇ ಅಲ್ವೇ ಲೋಕ! ಇಂಥಾದ್ರಾಗೆ ನಾನೇ ಧೀರ. ನಂದೆ ಕೋಡು ಅಂತಾನೇ ಈ ಬಡ್ಡೀ ಮಗ”.

 ರಾಮಾಯಣ ಕುರಿತು ಒಬ್ಬರು, "ಅದರಲ್ಲೇನು ವಿಶೇಷ? ರಾವಣಾಸುರ ಸೀತೇನ ಕದ್ದ, ಕಪಿಸೈನ್ಯ ಕಟ್ಕೊಂಡು ಲಂಕಾ ಪಟ್ಣಕ್ಕೆ ಹೋಗಿ ಅವನನ್ನು ಕೊಂದು ರಾಮ ಸೀತಮ್ಮನ್ನ ತಂದ ಅಷ್ಟೇ ತಾನೆ?" ಎಂದಾಗ ಅವಧೂತರು, "ಅದು ಮ್ಯಾಗಳ ಕಥೆ ನೀನೇಳೋದು. ಆದರೆ ಒಳಗೈತಪ್ಪಾ ಅದರ ಸಕೀಲು. ಆ ಸಕೀಲು ಇಡಕಂಡ್ರೆ ನೋಡಪ್ಪ ಆ ಕತೇನೇ ಬೇರೆ." 

  "ಆ ಸಕೀಲನ್ನು ನಮಗೂ ತಿಳಿಯುವಂತೆ ಹೇಳಿ ಸ್ವಾಮಿ ನೋಡೋಣ" ಎಂದಾಗ ಅವರು, "ಅದು ಸಕೀಲು ಅಂದ್ರೆ ನೋಡೋದಲ್ಲ ಮಗ. ಅದನ್ನು ಇಡೀಬೇಕು. ಇಡಿದು ನಡೀಬೇಕು. ನಡೆದು ಪಡೀಬೇಕು. ಆಗ ಅದರ ಸವಿ, ಸೊಗಸು, ಸುಖ. ಅದಕ್ಕೇನಪ್ಪಾ ರಾಮಣ್ಯ ಅಂದ್ರೆ ಸಾಮನ್ಯ ಅಲ್ಲ. ಅದೊಂದು ಇನ್ನೊಂದು ಮಾತೈತೆ. ಅದೇನು ಮಹಾ ಬ್ರಹ್ಮವಿದ್ಯೆನೇನೋ ಅಂತಾರೆ. ಬ್ರಹ್ಮವಿದ್ಯೆ ಅಂದ್ರೆ ಸಾಮಾನ್ಯ ಅಲ್ಲ. ಅದು ಎಲ್ರಿಗೂ ಎಂಗಂದ್ರಂಗೆ ಸಿಗೋದಲ್ಲ. ಸಾಧಿಸಿ ತಿಳಿದವರಿಗೆ ಸಿಗತೈತೆ ಅದರ ರಾಸ್ಯ."

    "ನೋಡಪ್ಪಾ ದಸರತ ಅಂತ ಒಬ್ಬ. ಅಂಗಂದ್ರೇನು? ಕರ್ಮೇಂದ್ರಿಯಗಳು ಐದು. ಜ್ಞಾನೇಂದ್ರಿಯಗಳು ಐದು. ಇವು ಅತ್ತು ಸೇರಿಸಿ ರಥ ಮಾಡಿಕೊಂಡು ಹತ್ತಿ ಸವಾರಿ ಮಾಡಿದ ಅವನು, ಅಂದ್ರೆ ಇಂದ್ರಿಯಗಳನ್ನು ಸ್ವಾಧೀನ ಮಾಡಿಕೊಂಡವನು ಯಾರೇ ಆಗಿರಲಿ ಅವನು ದಸರತ. ಅಂತವನು ಯಾವಾಗಲೂ ಸಂತೋಸಾನೇ ಪಡೀತಾನೆ. ಆ ಸಂತೋಸಾನೇ ರಾಮ. ಅವನೇ ಆನಂದ, ರಾಮ ಅಂದ್ರೆ ಆನಂದ. ಅವನ ತಮ್ಮಗಳು ಲಕ್ಷ್ಮಣ, ಭರತ, ಸತೃಗ್ನ, ಆನಂದದ ಬೆಳಕು ಮನಾನಂದ, ಆತ್ಮಾನಂದ, ಬ್ರಹ್ಮಾನಂದ."

 "ಸೀತಮ್ಮನಿಗೆ ತಂದೆ ತಾಯಿ ಇಲ್ಲ. ಅಂಗೇ ತಾನಾಗೇ ಬಂದವಳು ಸೀತೆ. ಜ್ಞಾನಾಂಬಿಕೆ. ಜನಕ ರಾಜ ಯಗ್ನ ಮಾಡಿದ. ಸಾಧನೆ ಮಾಡಿದ. ಜ್ಞಾನಾಂಬಿಕೆ ಸಿಕ್ಕಿದಳು. ಜನಕರಾಜನು ರುಸೀನೂ ಆಗಿದ್ದ. ರಾಮ ಧನಸ್ಸು ಮುರಿದ. ಧನಸ್ಸು ಅಂದ್ರೆ ಶರೀರ. ಇದನ್ನು ಮುರಿದ್ರು, ಅಂದ್ರೆ ಸ್ಥೂಲ ಶರೀರ ದಾಟಿ ವೋಗಿ ಸೀತೆಯನ್ನು ಪಡೆದ. ಅಲ್ಲಿಗೆ ರಾಮ ಅಂದ್ರೆ ಆನಂದ, ಸೀತೆ ಅಂದ್ರೆ ಜ್ಞಾನ. ಎರಡೂ ಬಂದದ್ದು ಅಂದ್ರೆ ಜ್ಞಾನಾನಂದ ಅಂಬೋದು ಮೂಡಿಬಂತು."


   "ಇನ್ನು ಮಾಯಾಮೃಗ. ಅದು ಜಿಂಕೆ. ಬಂಗಾರದ ಜಿಂಕೆ. ಅಂದಮೇಲೆ ಇದ್ದ ಕಡೆ ಇರೋದಲ್ಲ. ಅದನ್ನ ಇಡ್ಕೊಂಡು ಬಾ ಅಂದ್ಲು ಸೀತಮ್ಮ. ರಾಮ ಕೊಂದೇಬಿಟ್ಟ. ಅಂದ್ರೆ ಈ ಜಗತ್ತಿನ ಐಶ್ವರ್ಯದ ಆಸೆ ಮಾಯೆ. ಅದನ್ನು ಕೊಂದೇಬಿಟ್ಟ. ಅಂದ್ರೆ ಜ್ಞಾನಾನಂದ ಇದ್ದಲ್ಲಿ ಮಾಯೆ ಸತ್ತುಹೋಗುತ್ತೆ ಅಂಬೋ ಮಾತು ಅದು."

  "ರಾವಣ ಅತ್ತು ತಲೆ. ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಸರತ ಅವನ್ನೇ ರತ ಊಡಿಕೊಂಡು ಸವಾರಿ ಮಾಡ್ದ. ಅಂದ್ರೆ ಅವನ್ನ ತಾನೇಳ್ದಂಗೆ ಕೇಳಾಂಗೆ ಸ್ವಾಧೀನ ಮಾಡಿಕೊಂಡಿದ್ದ. ಅದೇ ರಾವಣಾಸುರ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ತಲೆ ತುಂಬ ತುಂಬಿಕೊಂಡು ಅವನ್ನೇ ಒತ್ಕೊಂಡು ಓಡಾಡ್ತಿದ್ದ. ಅವು ಅವನ್ತಲೆ ಮೇಲೆ ಕುಂತು ಅವನ್ನ ಆಟ ಆಡಿಸ್ತಿದ್ವು. ಅಂದ್ರೆ ಇಂದ್ರಿಯಗಳಿಗೆ ದಾಸನಾಗಿದ್ದ. ಇವನಿಗೆ ಇಪ್ಪತ್ತು ಕೈಗಳು. ನಿಜ-ನಿಜ ಇಪ್ಪತ್ತು ಕೈಗಳು, ಸಪ್ತಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳು. ಅಲ್ಲಿಗೆ ಇಪ್ಪತ್ತು ಕೈಗಳು ಆದವಲ್ಲಾ, ಅವುಗಳದೇ ಕಾರುಬಾರು. (ನಗುತ್ತಾ) ಎಂಗೈತೆ ನೋಡು."

 "ಅವನು ಸೀತಮ್ಮನನ್ನು ಬಯಸಿದ. ಅಂದರೆ ಜ್ಞಾನಾಂಬಿಕೆಯನ್ನು ಅಲ್ಲ. ಸಪ್ತ ಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳನ್ನು ಒತ್ಕೊಂಡು ಮೆರೆಯೋರಿಗೆ ಜ್ಞಾನಾಂಬಿಕೆ ವಶವಾದಾಳೆ? ಅವಳು ಅಶೋಕವನದಾಗಿದ್ಲು. ಅವಳಿಗೆ ಶೋಕ ಎಲ್ಲೀದು?" ನಕ್ಕರು.

  "ನೋಡು ಸುಗ್ರೀವ ಅಂದ್ರೆ ಒಳ್ಳೆ ತಲೆ, ಅಂದ್ರೆ ಒಳ್ಳೆ ಯೋಚನೆಗಳು. ಜಾಂಬುವಂತ, ಅವನು ಬ್ರಮ್ಮನ ಮಗ, ಅಂದ್ರೆ ಬ್ರಮ್ಮಾನಂದ. ಇನ್ನು ಆಂಜನೇಯ ಒಳ್ಳೇ ದೃಷ್ಟಿ ಇರೋ ಇವರೆಲ್ಲಾ ಆನಂದ ಅಂಬೋ ರಾಮರ ಗುಂಪು. ರಾವಣ ಅಂಬೋ ಅಹಂಕಾರ, ಮಮಕಾರಗಳನ್ನು ಕತ್ತರಿಸಿ ಆಕಿಬಿಟ್ರೆ ಆಗ ಒಳ್ಳೆ ಮನಸ್ಸು, ಒಳ್ಳೇ ದೃಷ್ಟಿ ಬ್ರಮ್ಮಗ್ನಾನ, ಎಲ್ಲಾ ಒಂದಾದವು. ಅಂದ್ರೆ ಗ್ನಾನಾನಂದ ಸಿಕ್ಕಿತು."

  "ನೋಡಪ್ಪ ಸಾಧಿಸಿದರೆ (ತಮ್ಮ ಶರೀರವನ್ನು ತೋರಿಸಿ) ಎಲ್ಲಾ ಇದ್ರಾಗೆ ಐತೆ ರಾಮಾಯಣ. ಇದೇ ಅದರ ಸಕೀಲು."

 "ಅವನ್ನೋಡು, ವಾಲ್ಮೀಕಿ ರುಸಿ, ಅವನೇ ಅಂತೆ ಈ ಸಕೀಲೆಲ್ಲಾ ಇಂಗಡಿಸಿ ಕತೆ ಮಾಡಿ ಬರೆದೋನು. ಅವನಿನ್ಯಾರು? ವಾಲ್ಮೀಕಿ ಅಂದ್ರೆ ವುತ್ತ ಅಂತಾರೆ. ಈ ಶರೀರವೇ ವುತ್ತ. ಇದ್ರಾಗೆ ತಯಾರಾದ ಗ್ನಾನಾನಂದ ಪಡೆದೋನೆ ರುಸಿ. ಅವನೇ ವಾಲ್ಮೀಕಿ ರುಸಿ. ಅವನಿಗಲ್ದೆ ಇನ್ಯಾರಿಗೆ ಸಾಧ್ಯ ಆದಾತು ಈ ಒಳಗಿನ ಸಕೀಲೆಲ್ಲಾ ಸೇರಿಸಿ ಅನುಭವ ತಕ್ಕಂಡು ಅವನ್ನೇ ಇಂಗೆ ಕತೆ ಕಟ್ಟಿ ಏಳಾಕೆ? ಆನ ಪುರಾಣ ಓದಿ ವರಗೇ ತಿಳ್ಕಂಡು ವರಗೇ ಅದಕ್ಕೆ ತಕ್ಕಂತ ವರಗಿನ ಆಟ ಆಡ್ತಾರೆ."

“ಸಾವ್ಕಾರಂತಾವ ದುಡ್ಡಿರೋದು.. ಸನ್ಯಾಸಿತಾವ ಸಿದ್ದಿ ಇರೋದು.. ಎಳ್ಡೂ ಒಂದೇ ಮಗಾ. ಅವ್ನಿಗೂ ಹಾಂಕಾರ ಬಿಟ್ಟಿಲ್ಲ. ಇವ್ನಿಗೂ ಬಿಟ್ಟಿಲ್ಲ. ಏಸೂ ಖರ್ಚಾದವಲೇ, ನಿನ್ನ ಮನೆತನ ನಿರ್ನಾಮ ಮಾಡ್ತೀನಿ ಅಂತಾನೆ ಸಾವ್ಕಾರ. ಒಂದು ಬಿರುಗಣ್ಣು ಬಿಟ್ಟು ನಿನ್ನ ಸುಟ್ಬಿಡ್ತೀನಿ ಅಂತಾನೆ ಸನ್ಯಾಸಿ. 

ಇಬ್ರಿಗೂ ಗರಾ [ಗರ್ವ] ಬಿಟ್ಟಿಲ್ಲ. “ಗರಾ ಬಿಟ್ಟೋನೇ ಗುರು ನೋಡಪ್ಪ.”

“ಶಿವಾ… ಶಿವನಿಗೆ ಮಡಿ ಬೇಡ… ಶಿವನಿಗಾಗಿ ‘ಮಡೀ’ ಬೇಕು.”

“ಬಂದದ್ದು ಹೋಗುತ್ತದೆ, ಇದ್ದದ್ದು ಹೋಗುವುದಿಲ್ಲ.”  

“ಒಂದು ಮಗು ಹುಟ್ಟುತ್ತೆ. ತಾಯಿ ಹಾಲು ಕುಡಿಯುತ್ತೆ. ಸ್ವಲ್ಪ ಕಾಲದ ನಂತರ ಬಾಟಲಿಯಿಂದ, ಆಮೇಲೆ ಲೋಟದಿಂದ ಕುಡಿಯುತ್ತೆ. ಇವೆಲ್ಲಾ ಸಾಧನೆಗೆ ಮೆಟ್ಟಿಲುಗಳು.” 

-ಮುಕುಂದೂರು ಸ್ವಾಮಿಗಳು  

[ಭಜನೆ, ಪೂಜೆ, ಧ್ಯಾನ, ಯೋಗ, ಸಮಾಧಿ ಸಾಧನೆಗೆ ಸ್ವಾಮಿಗಳ ಸರಳ ಉದಾಹರಣೆ] 

 ದೇವರಿಗೆ ಪೂಜಿಸಿ ಎಡೆಯಿಡುವ ಕುರಿತು ಸ್ವಾಮಿಗಳು ಆಡುವ ಮಾತು : ” ಅಲ್ಲಾ ಯೆಡೆ ಅಂದ್ರೆ ಜಾಗ…ಜಾಗ ತಂದಿಕ್ಕೋದೆಂಗೆ? ಯೆಡೆ ತಂದಿಕ್ಕು ಅಂತಾರೆ (ನಕ್ಕು) ಅವ್ನೆಂದು ಉಪಾಸ ಇದ್ದ. ಅದೂ ಐತೆ ಅವನಿಗೆ ಯೆಡೆ ಮಾಡು ಅಂದ್ರೆ ಅವನಿಗೆ ಜಾಗ ಮಾಡು ನನ್ನೊಳಗೆ ಅಂಬೋ ಮಾತು….. ‘

. ಬಯಲಾಟದ ನೆಪದಲ್ಲಿ ಬೋಧಿಸಿದ ಆಧ್ಯಾತ್ಮವಿದು. ಜೂಜಿನಲ್ಲಿ ಗೆದ್ದು ದ್ರೌಪದಿಯ ವಸ್ತ್ರಾಪಹರಣ ಮಾಡಲು ನಿಂತ ದುಶ್ಯಾಸನನೊಡನೆ ನಡೆವ ಸಂವಾದದ ತುಣುಕು: (ಪುಸ್ತಕ ಓದುವಾಗ ಗಮನಿಸಿ : ಪಂಚಪಾಂಡವರು-ಪಂಚೆಂದ್ರಿಯಗಳು, ದ್ರೌಪತಿ – ಪ್ರಕೃತಿ, ದುಶ್ಯಾಸನ – ದುಸ್ವಾಸ)

‘…. (ಪಂಚೇಂದ್ರಿಯಗಳನ್ನು ತೋರಿಸಿ) ಪಂಚ ಪಾಂಡವರು ಸೋತ ಮೇಲೆ ಆ ದ್ರೌಪತಿ ಅನ್ನೋ ಗ್ನಾನಾಂಬಿಕೆ ಆಗೋದು – ಪ್ರಕೃತಿ ಅನ್ನೋ ಆವರ್ಣ ಅಳಿದು ಸುದ್ಧ ಗ್ನಾನಾಂಬಿಕೆ ಆಗೋದು……’ ‘ಸುದ್ದ ಗ್ನಾನಾಂಬಿಕೆ ಆದ ಮ್ಯಾಲೆ ಪ್ರಕೃತಿ ಇದ್ದರೂ ಇರಬೌದು , ಇಲ್ಲದಿರಲೂ ಬಹುದು. ಅದು ಸುದ್ಧ ಅಂದ್ರೆ ಸುದ್ಧ. ಅದಕ್ಕೆ ದುಸ್ವಾಸ ಅವಳ ಸೀರೆ ಸೆಳೆದ. ಅದು ಕೊನೆ ಮೊದಲು ಇಲ್ಲದ್ದು. ಅದನ್ನ ಸೆಳೆಯಾಕೆ ಆಗಲೇ ಇಲ್ಲ ನೋಡು.’

 ಬೆಟ್ಟ ಹತ್ತುವಾಗ :ಕೃಷ್ಣಶಾಸ್ತ್ರಿಗಳು: ‘ಇಲ್ಲಿಂದ ಎಲ್ಲಿಯೂ ನಿಲ್ಲದೆ ಒಂದೇ ಸಮನಾಗಿ ಹತ್ತಿ, ಈ ಬೆಟ್ಟದ ನೆತ್ತಿಯ ಮೇಲಿರುವ ಗುಹೆಯೊಳಗೆ ಹೋಗಿ, ಅಲ್ಲಿಯ ಗಂಟೆಯನ್ನು ಬಾರಿಸಬೇಕು. ಯಾರು ಗೆಲ್ಲುತ್ತಾರೋ ನೋಡೋಣ..’

ಸ್ವಾಮಿಗಳು:ಹೂಂ! ಒಳ್ಳೆಯ ಪಂದ್ಯ ಕಣೋ ( ತಮ್ಮ ಎದೆಯನ್ನು ತೋರಿಸುತ್ತ ) ಈ ಗವಿಯೊಳಗೆ ಹೊಕ್ಕು ನೋಡ್ ಬೇಕು ಅಂದ್ರೆ ನಾಮುಂದು ತಾಮುಂದು ಅಂತ ನುಗ್ಗಬೇಕು’

 ಶರೀರಕ್ಕಾದ ವ್ರಣವೊಂದರ ಬಗೆ: ‘ಬಂದವನು ಹೋಗ್ತಾನೇ, ಇರುವವನು ಹೋಗೋಲ್ಲ’

 ರಾಮಾಣ್ಯ ಅಂದ್ರೆ ಸಾಮಾನ್ಯ ಅಲ್ಲಾ..!

‘ ….ದಸರತ ಅಂತ ಒಬ್ಬ. ಅಂಗಂದ್ರೇನು ? ಕರ್ಮೇಂದ್ರಿಯಗಳು ಐದು. ಜ್ಞಾನೇಂದ್ರಿಯಗಳು ಐದು. ಇವು ಅತ್ತು ಸೇರಿ ರಥ ಮಾಡಿಕೊಂಡು ಹತ್ತಿ ಸವಾರಿ ಮಾಡಿದ ಅವನು. ಅಂದ್ರೆ ಇಂದ್ರಿಯಗಳನ್ನು ಸ್ವಾಧೀನ ಮಾಡ್ಕೊಂಡವನು ಯಾರೇ ಆಗಿರಲಿ ಅವನು ದಸರತ..’

‘ರಾವಣ ಅತ್ತು ತಲೆ, ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಸರತ ಅವನ್ನೇ ರತ ಊಡಿಕೊಂಡು ಸವಾರಿ ಮಾಡ್ದ. ಅಂದ್ರೆ ಅವನ್ನ ತಾನೇಳ್ದಂಗೆ ಕೇಳಾಂಗೆ ಸ್ವಾಧೀನ ಮಾಡ್ಕೊಂಡಿದ್ದ. ಅದೇ ರಾವಣಾಸುರ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳನ್ನು ತಲೆ ತುಂಬ ತುಂಬಿಕೊಂಡು ಅವನ್ನೇ ಒತ್ಕೊಂಡು ಓಡಾಡ್ತಿದ್ದ. ಅವು ಅವನ್ತಲೇ ಮೇಲೆ ಕುಂತು ಅವನ್ನ ಆಟ ಆಡಿಸ್ತಿದ್ವು. ಅಂದ್ರೆ ಇಂದ್ರಿಯಗಳಿಗೆ ದಾಸನಾಗಿದ್ದ. ಇವನಿಗೆ ಇಪ್ಪತ್ತು ಕೈಗಳು. ನಿಜ-ನಿಜ ಇಪ್ಪತ್ತು ಕೈಗಳು ಸಪ್ತಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳು. ಅಲ್ಲಿಗೆ ಇಪ್ಪತ್ತು ಕೈಗಳು ಆದವಲ್ಲಾ. ಅವುಗಳದೇ ಕಾರುಬಾರು..’

‘ ಅವನು ಸೀತಮ್ಮನನ್ನು ಬಯಸಿದ. ಅಂದರೆ ಜ್ಞಾನಾಂಬಿಕೆಯನ್ನು. ಅಲ್ಲ, ಸಪ್ತ ಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳನ್ನು ಒತ್ಕೊಂಡು ಮೆರೆಯೋರಿಗೆ ಜ್ಞಾನಾಂಬಿಕೆ ವಶವಾದಾಳೆ ? ಅವಳು ಅಶೋಕವನದಾಗಿದ್ಲು. ಅವಳಿಗೆ ಶೋಕ ಎಲ್ಲೀದು ?’

ಬೆಳಗೆರೆ ಕೃಷ್ಣಶಾಸ್ತ್ರಿ ಯವರು ಮುಕುಂದೂರು  ಸ್ವಾಮಿಗಳನ್ನು ಕುರಿತ ನೆನಪು   "ಯೇಗ್ದಾಗೆಲ್ಲಾ ಐತೆ " ಪುಸ್ತಕದಿಂದ ಆಯ್ದ ಭಾಗ....

‘ಯೇಗ್ದಾಗೆಲ್ಲಾ ಐತೆ’ ಶ್ರೀ ಮುಕುಂದೂರು ಸ್ವಾಮಿಗಳ ನೆನಪು, ವಿಚಾರ, ಆದರ್ಶ ಹಶಾಗೂ ಜೀವನ ದರ್ಶನಗಳನ್ನು ಕಟ್ಟಿಕೊಡುವ ಕೃತಿ ಇದು. ಬೆಳೆಗೆರೆ ಕೃಷ್ಣಶಾಸ್ತ್ರಿ  ಅವರು ಕೃತಿಕಾರರು. ಶ್ರೀ ಮುಕುಂದೂರು ಸ್ವಾಮೀಜಿಗಳ ದಿವ್ಯ ವ್ಯಕ್ತಿತ್ವದ ಪರಿಚಯವನ್ನು ಸವಿಸ್ತಾರವಾಗಿ ಮಾಡಲಾಗಿದೆ. ’ಯೇಗ್ದಾಗೆಲ್ಲಾ ಐತೆ’ ಅ೦ದರೆ ’ಯೋಗದಲ್ಲಿ ಎಲ್ಲವೂ ಇದೆ’ ಎ೦ದು ಅರ್ಥ. ಶ್ರೀ ಮುಕು೦ದೂರು ಸ್ವಾಮಿಗಳನ್ನು ಕುರಿತ ತಮ್ಮ ನೆನಪುಗಳನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಈ ಕಿರು ಹೊತ್ತಿಗೆಯಲ್ಲಿ ಹ೦ಚಿಕೊ೦ಡಿದ್ದಾರೆ. ಶ್ರೀ ಸ್ವಾಮಿಗಳು ತಮ್ಮ ಮಾತಿನ ಮಧ್ಯೆ ’ಯೇಗ್ದಾಗೆಲ್ಲಾ ಐತೆ’ ಎ೦ಬ ಮಾತನ್ನು ಮತ್ತೆ ಮತ್ತೆ ಆಡುತ್ತಿದ್ದುದರಿ೦ದ ಪುಸ್ತಕಕ್ಕೆ ಆಡುನುಡಿಯ ಹೆಸರೊ೦ದನ್ನು ಇಡಲಾಗಿದೆ ಎ೦ದು ಶಾಸ್ತ್ರಿಗಳು ಹೇಳುತ್ತಾರೆ.

ಇಂತಹಾ ಅಪರೂಪದ ಪುಸ್ತಕವನ್ನು ನಾನು ಎರಡು ಬಾರಿ ಓದಿದ್ದೇನೆ... ನೀವೂ ಓದಬೇಕೆನ್ನುವುದು ನನ್ನ ಮಹದಭಿಲಾಷೆ..

Tuesday, September 10, 2024

ಇದು ನಿಮ್ಮ ವಾಹಿನಿ ಕಲಾ ವೇದಿಕೆ ಸರ್ವಪಲ್ಲಿ ರಾಧಾಕೃಷ್ಣನ್ ಸ್ಮರಣೆಯಲ್ಲಿ12ನೇ ಸಾಂಸ್ಕೃತಿಕ ಸಿಂಚನ

 ಇದು ನಿಮ್ಮ ವಾಹಿನಿ ಕಲಾ ವೇದಿಕೆ ವತಿಯಿಂದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ 12ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಸೆಪ್ಟೆಂಬರ್ 8ರ ಭಾನುವಾರದಂದು ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು..



ಈ ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಾಯಿತು..


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಸಂತೋಷ ಹೆಗ್ಡೆ, ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಅವರು, ಸಂಭಾಷಣೆಕಾರರಾದ ಮಾಸ್ತಿ ಉಪ್ಪಾರಹಳ್ಳಿ, ಭೀಮಾ ಚಿತ್ರದ ನಟ ಡ್ರ್ಯಾಗನ್ ಮಂಜು, ಕೆಜಿಎಫ್ ಖ್ಯಾತಿಯ ಬಾಲ ನಟ ಅನ್ಮೋಲ್ ವಿಜಯ್, ಸೋಲ್ ಬೀಟ್ ಸಂಸ್ಥೆಯ ಪ್ರಕಾಶ್ ಅವ್ರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.



ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಗುರುತಿಸುವ ಕೆಲಸ ನಡೆಯಲಿದೆ ಎಂದು ಇದು ನಿಮ್ಮ ವಾಹಿನಿ ಕಲಾವೇದಿಕೆಯ ಸಂಸ್ಥಾಪಕರಾದ ಕಿಶೋರ್ ಕುಮಾರ್ ಅವರು ತಿಳಿಸಿದರು