Tuesday, June 12, 2018

ನಮ್ಮಲ್ಲಿನ ಸ್ಥಳ ಪುರಾಣಗಳು (Mythes) -92

ಕೇದಾರನಾಥ (Kedaranath)

ಕೇದಾರನಾಥ ದೇವಾಲಯ ಭಾರತದ ಪ್ರಸಿದ್ದ ಪುಣ್ಯಕ್ಷೇತ್ರದಲ್ಲಿ ಒಂದು. ಉತ್ತರಾಖಂಡದ ಕೇದಾರನಾಥ ಧಾಮದಲ್ಲಿ ಮಂದಾಕಿನೀ ನದಿ ತಟದಲ್ಲಿರುವ ಹಿಮಾಲಯದ ಗಡ್ವಾಲ್ ಪ್ರದೇಶದಲ್ಲಿದೆ. ತೀವ್ರವಾದ ಹಿಮಪಾತದ ಕಾರಣದಿಂದ ವರ್ಷದಲ್ಲಿ ಕೇವಲ ಆರು ತಿಂಗಳ ಕಾಲ (ಏಪ್ರಿಲ್ ಅಂತ್ಯದಿಂದ ನವೆಂಬರ್ ಅಂತ್ಯದವರೆಗೆ) ಮಾತ್ರ ತೆರೆದಿರುವ ಈ ದೇವಾಲಯಕ್ಕೆ ನೇರ್ವಾದ ರಸ್ತೆ ಸಂಪರ್ಕವಿಲ್ಲ. ಗೌರಿಕುಂಡ್ ನಿಂದ 18 ಕಿಮೀ ಚಾರಣ ಮಾಡಬೇಕಾಗುವುದು.ಭಾರತದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯವನ್ನು ಪಾಂಡವರು ಕಟ್ಟಿಸಿದ್ದು ಶಂಕರಾಚಾರ್ಯರು ಜೀರ್ಣೋದ್ದಾರ ಮಾಡಿದರು ಎನ್ನಲಾಗುತ್ತದೆ. ಋಷಿಕೇಶದಿಂದ 223 ಕಿಮೀ ದೂರ್ದಲ್ಲಿರುವ ಈ ದೇವಾಲಯಕ್ಕೆ ವರ್ಷ ವರ್ಷವೂ ಲಕ್ಷಾಂತರ ಭಕ್ತರು ಬೇಟಿ ಕೊಡುತ್ತಾರೆ. 
ಶ್ರೀ ಕೇದಾರನಾಥ ಜ್ಯೋತಿರ್ಲಿಂಗ
ಇಲ್ಲಿನ ಲಿಂಗವನ್ನು ಮುಟ್ಟಿ ಪೂಜಿಸಬಹುದಾಗಿದೆ. ದೇವಾಲಯದ ಪ್ರಾಕಾರದಲ್ಲಿ ಪಾಂಡವರು ಕೃಷ್ಣ ಹಾಗೂ ವೀರಭದ್ರರ ಮೂರ್ತಿಗಳಿದೆ. ಸಮುದ್ರ ಮಟ್ಟದಿಂದ ಸುಮಾರು ೬೫೦೦ ಮೀಟರ್ ಎತ್ತರದಲ್ಲಿರುವ ಈ ಕ್ಷೇತ್ರದ ಹಿಂಭಾಗದಲ್ಲಿಯೇ ಶಂಕರಾಚಾರ್ಯರ ಸಮಾಡಿ ಇದ್ದು ಅದಕ್ಕೆ ಮುಂದೆಸ್ ಆಗಿದರೆ ಗೌರಿಕುಂಡ್ ಸಿಗುತ್ತದೆ. 
ಉತ್ತರಾಖಂಡದಲ್ಲಿರುವ ಚಾರ್ ಧಾಮ್ (ಗಂಗೋತ್ರಿ, ಯಮುನೋತ್ರಿ, ಕೇದಾರ ಮತ್ತು ಬದರಿ) ಗಳಲ್ಲಿ ಒಂದಾದ ಕೇದಾರನಾಥದ ಸ್ಥಳ ಪುರಾಣವನ್ನು ನಾವೀಗ ತಿಳಿಯೋಣ

***
ಕೇದಾರನಾಥ ದೇವಾಲಯ
ಮಹಾಭಾರತದ ಕುರುಕ್ಷೇತ್ರ ಯುದ್ಧ ಮುಕ್ತಾಯವಾಗುತ್ತದೆ. ಕೃಷ್ಣ ಮತ್ತಿತರೆ ಋಷಿಗಳ ಸಲಹೆಯಂತೆ ಯುದ್ಧದ ಸಮಯದಲ್ಲಿ ಬ್ರಾಹ್ಮಣಾದಿಗಳನ್ನು ಕೊಂದ ಪಾಪವನ್ನು ಕಳೆದುಕೊಳ್ಳಲು ಹಾಗೂ ಮೋಕ್ಷವನ್ನು ಹೊಂದಲು ಕಾಶಿಯಲ್ಲಿ ಶಿವನನ್ನು ಪ್ರಾರ್ಥಿಸಲು ತೀರ್ಮಾನಿಸುತ್ತಾರೆ. ಆದರೆ ಶಿವನು ಅವರಿಗೆ ಕಾಣಿಸಿಕೊಳ್ಳುವುದಿಲ್ಲ. ಆತನು ಹಿಮಾಲಯದಲ್ಲಿರುವ ಗುಪ್ತಕಾಶಿಗೆ ತೆರಳುತ್ತಾನೆ. ಹಿಮಾಲಯಕ್ಕೆ ತೆರಳಿ ಅವಿತುಕೊಳ್ಳುತ್ತಾನೆ. ಆಗ ಧರ್ಮರಾಯನು ತನ್ನ ಕೈಗಳನ್ನು ಮುಗಿದು "ಶಂಕರ, ನಾವು ಪಾಪಾತ್ಮರೆಂದು ನೀನು ನನಗೆ ದರ್ಶನ ನೀಡದೆ ಹೋಗುವೆಯಾ? ನನಗೆ ತಿಳಿದಿದೆ. ನೀನು ನಮಗೆ ದರ್ಶನ ನೀಡುವುದಕ್ಕೆ ಮನ ಮಾಡುತ್ತಿಲ್ಲ. ಆದರೆ ನಾವು ಭಕ್ತಿಯಿಂದ ನಿನ್ನ ದರ್ಶ್ನ ಮಾಡಬೇಕೆಂದಿದ್ದೇವೆ. ಮತ್ತು ನಮ್ಮ ಪಾಪಗಳಿಂದ ಮುಕ್ತರಾಗಬೇಕೆಂದಿದ್ದೇವೆ. ಇದು ನಮ್ಮ ಸಂಕಲ್ಪ" ಎಂದು ಬೇಡಿಕೊಳ್ಳುತ್ತಾನೆ ಶಿವ ಹಿಮಾಲಯದ ಯಾವ ಭಾಗದಲ್ಲಿ ಪಾಂಡವರಿಗೆ ಕಾಣದಂತೆ ಅವಿತಿದ್ದನೋ ಅದೇ ಕ್ಷೇತ್ರಕ್ಕೆ ಇಂದು ಗುಪ್ತ ಕಾಶಿ ಎಂದು ಹೆಸರಾಗುತ್ತದೆ.
ರುದ್ರನಾಥ ದೇವಾಲಯ
ಆಗ ಪಾಂಡವರು ಅಲ್ಲಿಗೂ ಅವನನ್ನು ಹಿಂಬಾಲಿಸಲು ಶಿವನು ಮಾರುವೇಷದಲ್ಲಿ ಬಸವನ ಎತ್ತಾಗಿ ಈಗಿನ ಕೇದಾರವಿರುವ ಸ್ಥಳದಲ್ಲಿ ಮೇಯುತ್ತಿರುತ್ತಾನೆ. ದ್ವಿತೀಯ ಪಾಂಡವ ಭೀಮನಿಗೆ ಸಂದೇಹ ಬಂದು ಆತ ಎರಡು ಪರ್ವತಗಳ ನಡುವೆ ಒಂದೊಂದು ಕಾಲನ್ನಿಟ್ಟು ನಿಲ್ಲುತ್ತಾನೆ. ಆಗ ಎಲ್ಲಾ ಹಸುಗಳೂ, ಎತ್ತುಗಳೂ ಅವನ ಕಾಲಡಿಯಿಂದ ನುಸುಳಿ ಹೋಗುತ್ತದೆ. ಆದರೆ ಬಸವನ ಎತ್ತಾಗಿದ್ದ ಶಿವ ಮಾತ್ರ ಹಾಗೆ ಮಾಡದೆ ನೆಲದಡಿಯಲ್ಲಿ ಇಳಿದು ಬಿಡುತ್ತಾನೆ. ಆಗ ಭೀಮನಿಗೆ ಆತನೇ ಶಿವ ಪರಮಾತ್ಮನೆನ್ನುವುದು ತಿಳಿದು ಬಿಡುತ್ತದೆ. ಆಗ ಅವನು ಬಸವನ ಎತ್ತಿನ ಭುಜ (ಡುಬ್ಬ)ವನ್ನು ಹಿಡಿದು ಎಳೆದುಬಿಡುವನು. ಹೀಗಾಗಿ ಎತ್ತಿನ ಭುಜ ಮಾತ್ರ ಕೇದಾರದಲ್ಲಿಯೇ ಉಳಿಯುತ್ತದೆ. (ಕೇದಾರದ ಲಿಂಗವು ತ್ರಿಭುಜಾಕಾರದಲ್ಲಿದೆ ಎನ್ನುವುದು ವಿಶೇಷ).

ಇನ್ನು ಎತ್ತಿನ ಉಳಿದ ಭಾಗಗಳು ಕ್ರಮವಾಗಿ ರುದ್ರನಾಥ್ (ಶಿರ), ಮಧ್ಯಮ ಮಹೇಶ್ವರ (ಮುಂಡ), ತುಂಗಾನಾಥ (ತೋಳುಗಳು), ನೇಪಾಳದ ಪಶುಪತಿನಾಥ ಹಾಗೂ ಕರೈಶ್ವರ (ದೇಹದ ಉಳಿದ ಅಂಗಗಳು) ಹಂಚಿ ಹೋಗುತ್ತದೆ.
ತುಂಗಾನಾಥ ದೇವಾಲಯ

ಕಡೆಗೂ ಪ್ರಸನ್ನನಾದ ಪರಮೇಶ್ವರ ಕೇದಾರದಲ್ಲಿ ಪಾಂಡವರಿಗೆ ದರ್ಶನ ನೀಡಿ ಆಶೀರ್ವದಿಸುತ್ತಾನೆ.

ಹಾಗೆ ಭೀಮನಿಗೆ ನಂದಿಯ ಭುಜ ಸಿಕ್ಕಿದ ಜಾಗದಲ್ಲಿ ಪಾಂಡವರು ತ್ರಿಭುಜಾಕೃತಿಯ ನಂದಿಯ ಭುಜ ಹೊತ್ತ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಅಲ್ಲಿಂದ ಮುಂದೆ ಬದರಿನಾಥದ ಸಮೀಪವಿರುವ ಹಿಮಾಲಯ ಪರ್ವತ ಶಿಖರದ ’ಸ್ವರ್ಗಾರೋಹಣ’ ಶಿಖರವೇರಿ ಸ್ವರ್ಗಕ್ಕೆ ತೆರಳುತ್ತಾರೆ. 

***
ಮಧ್ಯ ಮಾಹೇಶ್ವರ ದೇವಾಲಯ
ನರ ನಾರಾಯಣನೊಮ್ಮೆ ಬದರಿಕಾಶ್ರಮದಲ್ಲಿ ಪಾರ್ಥಿವ ಪೂಜೆಯಲ್ಲಿ ತೊಡಗಿದ್ದಾಗ ಪರಮೇಶ್ವರನು ಅವರಿಗೆ ದರ್ಶ್ನ ನೀಡಿದ್ದನು. ಆಗ ನಾರಾಯಣನು ’ಮಾನವಕುಲದ ಕಲ್ಯಾಣಕ್ಕಾಗಿ ಪರಮೇಶ್ವರನು ತನ್ನ ಮೂಲರೂಪದಲ್ಲಿ ಇಲ್ಲಿಯೇ ನೆಲೆಸಬೇಕು’ ಎಂದು ಬೇಡಿಕೊಂಡನು. ಪರಮೇಶ್ವನು ನಾರಾಯಣನ ಕೋರಿಕೆಯನ್ನು ಮನ್ನಿಸಿ ಹಿಮಾಲಯದ ಕೇದಾರ್ ಎನ್ನುವ ಪ್ರದೇಶದಲ್ಲಿ ಮೂಲ ಸ್ವರೂಪವಾದ ಜ್ಯೋತಿಯ ರೂಪದಲ್ಲಿ ಉಳಿದನು. ***
ಕಲ್ಪೇಶ್ವರ ದೇವಾಲಯ
ಇನ್ನು ಸತ್ಯಯುಗದಲ್ಲಿ ಈ ಪ್ರದೇಶವನ್ನು ಕೇದಾರನೆನ್ನುವ ರಾಜನು ಆಳಿದ್ದನು. ಅವನು ಧರ್ಮಾತ್ಮನಾಗಿದ್ದು ಆತನ ಸ್ಮರಣಾರ್ಥ ಈ ಸುತ್ತಲ ಪ್ರದೇಶಕ್ಕೆ ಕೇದಾರನಾಥ ಎಂದು ಹೆಸರಾಯಿತು