Thursday, December 05, 2024

‘ತಾಯಿಯೇ ದೇವರು, ವರನಟಿ ಲೀಲಾವತಿ ದೇಗುಲ’ ಲೋಕಾರ್ಪಣೆ

 ವಿನೋದ್ ರಾಜ್ ಅವರು ತಾಯಿ ನೆನಪಲ್ಲಿ ಸ್ಮಾರಕ ಒಂದನ್ನು ನಿರ್ಮಾಣ ಮಾಡಿದ್ದಾರೆ. ಇದರ ಉದ್ಘಾಟನೆ ಇಂದು (ಡಿ.5) ಸೋಲದೇವನಹಳ್ಳಿಯಲ್ಲಿ ನಡೆದಿದೆ. “‘ತಾಯಿಯೇ ದೇವರು, ವರನಟಿ ಡಾ|ಎಂ. ಲೀಲಾವತಿ ದೇಗುಲ” ಎಂದು ಇದಕ್ಕೆ ಅವರು ಹೆಸರು ಇಟ್ಟಿದ್ದಾರೆ. ಅಮ್ಮ-ಮಗ ಅಂದ್ರೆ ಲೀಲಾವತಿ-ವಿನೋದ್​ ರಾಜ್ ಎನ್ನುವಷ್ಟು ಇಬ್ಬರೂ ಸದಾ ಜೊತೆಯಲ್ಲಿರುತ್ತಿದ್ರು. ಅಮ್ಮನನ್ನು ಕಳೆದುಕೊಂಡ ವಿನೋದ್​ ರಾಜ್​ ಒಬ್ಬಂಟಿಯಾಗಿದ್ದಾರೆ. ಅಮ್ಮನ ನೆನಪಿಗಾಗಿ ತಾಯಿಯ ಸ್ಮಾರಕ ಕಟ್ಟಿದ್ದಾರೆ. ಕನ್ನಡದ ಖ್ಯಾತ ನಟಿ ಲೀಲಾವತಿ ಇಹಲೋಕ ತ್ಯಜಿಸಿ ಡಿಸೆಂಬರ್​ 8ಕ್ಕೆ ಒಂದು ವರ್ಷವಾಗುತ್ತಿದ್ದು. ಇದರ ಹಿನ್ನಲೆಯಲ್ಲಿ ಅವರ ಭವ್ಯ ಸ್ಮಾರಕ ನಿರ್ಮಾಣ ಆಗಿದೆ. ಅವರ ಅಂತ್ಯಕ್ರಿಯೆಯಾದ ಸ್ಥಳದಲ್ಲಿ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದು. ಸುಮಾರು 1 ಕೋಟಿ ವೆಚ್ಚದಲ್ಲಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲಾಗಿದೆ.

ಸಂಪೂರ್ಣವಾಗಿ ಅಮೃತ ಶಿಲೆ ಕಲ್ಲಿನಿಂದ ಸ್ಮಾರಕವನ್ನು ನಿರ್ಮಾಣ ಮಾಡಿದ್ದು. ಸಮಾಧಿ ಸುತ್ತಲು ಬೃಹತ್​ ಕಲ್ಲಿನ ಕಂಬಗಳಿಂದ ಮಂಟಪ ನಿರ್ಮಾಣ ಮಾಡಿಸಿದ್ದಾರೆ. ಇಂದು ಸಚಿವ ಕೆ.ಎಚ್ ಮುನಿಯಪ್ಪ ​ ಅವರು ಸ್ಮಾರಕವನ್ನು ಉದ್ಘಾಟನೆ ಮಾಡಿದ್ದು ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ವಿನೋದ್ ರಾಜ್ ಮತ್ತು ಅವರ ಕುಟುಂಬ ವರ್ಗದವರು, ಚಿತ್ರರಂಗದ ಹಿರಿಯ ನಟ – ನಟಿಯರು ಕಲಾವಿದರು, ಸ್ಥಳೀಯ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಇಂದಿನಿಂದಲೇ ಅಭಿಮಾನಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ದೊರೆತಿದೆ. ನಟಿ ಲೀಲಾವತಿ ಸ್ಮಾರಕ ನೋಡಲು ಬರುವವರಿಗೆ ವಿನೋದ್ ರಾಜ್ ಊಟದ ವ್ಯವಸ್ಥೆ ಕೂಡ ಮಾಡಿದ್ದಾರಂತೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಸ್ಮಾರಕ ತೆರೆದಿರಲಿದೆ. ಅಷ್ಟೇ ಅಲ್ಲದೇ ಪ್ರಕೃತಿಯ ಮಡಿಲಲ್ಲಿ. ಅಮ್ಮನ ಸ್ಮಾರಕದ ಬಳಿಯೇ ಒಂದೆರಡು ದಿನ ಕಳೆಯಬೇಕು ಅಂತ ಇಚ್ಛಿಸುವವರಿಗೂ ಸ್ಮಾರಕದ ಬಳಿಕ ವಸತಿ ಗೃಹ ಕೂಡ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.


ಇದಕ್ಕೂ ಮುನ್ನ ಇಂದು (ಡಿ.5) ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿದೆ. ಈ ವರ್ಷದ ಆರಂಭದಲ್ಲಿ ಲೀಲಾವತಿ ಸ್ಮಾರಕಕ್ಕೆ ವಿನೋದ್ ರಾಜ್ ಗುದ್ದಲಿ ಪೂಜೆ ನೆರವೇರಿಸಿದ್ದರು. ಇದೀಗ ಸ್ಮಾರಕ ಲೋಕಾರ್ಪಣೆ ಆಗಿದೆ.


ಬಹುಭಾಷಾ ನಟಿಯಾಗಿ ಮಿಂಚಿದ ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ.



ಲೀಲಾವತಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದರು. ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000ದ ಸಾಲಿನಲ್ಲಿ ಲೀಲಾವತಿಗೆ ನೀಡಲಾಗಿದೆ. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಲಾಯ್ತು. ಲೀಲಾವತಿ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗ್ಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ, ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು. ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.


No comments:

Post a Comment