Wednesday, January 01, 2025

ಚದುರಂಗರ ಕಾದಂಬರಿಗಳು - ಒಂದು ಪರಿಚಯ

-ರಾಘವೇಂದ್ರ ಅಡಿಗ ಎಚ್ಚೆನ್.

 ಚದುರಂಗ  ಹೆಸರಿನಿಂದ ಬರೆಯುತ್ತಿದ್ದ ಲೇಖಕರ ಹೆಸರು ಸುಬ್ರಹ್ಮಣ್ಯ ರಾಜು ಅರಸು. ಸರ್ವಮಂಗಳಾ, ಉಯ್ಯಾಲೆ, ವೈಶಾಖ, ಹೆಜ್ಜಾಲ ಕಾದಂಬರಿಗಳಲ್ಲದೆ ಅನೇಕ ಕಥಾಸಂಕಲನ, ನಾಟಕಗಳು, ಕವನಸಂಕಲನ ಬರೆದ ಹೆಗ್ಗಳಿಕೆ ಚದುರಂಗರದು. ಚಲನಚಿತ್ರ ನಿರ್ದೇಶಕರಾಗಿದ್ದುಕೊಂಡು "ಭಕ್ತ ಕುಂಬಾರ "ಕಥಾ ಲೇಖಕರಾಗಿದ್ದು, " ಸರ್ವಮಂಗಳಾ" ಪ್ರಶಸ್ತಿ ವಿಜೇತ ಚಿತ್ರದ ನಿರ್ಮಾಪಕರಾಗಿದ್ದು,   " ಉಯ್ಯಾಲೆ"  ಚಿತ್ರಕಥೆಯನ್ನು ಬರೆದು ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. "ವೈಶಾಖ " ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುತ್ತದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿ.ವಿ.ಯ ಗೌರವ ಡಾಕ್ಟರೇಟ್ ಗೆ ಕೂಡಾ ಪಾತ್ರರಾಗಿದ್ದಾರೆ.


ಚದುರಂಗ ಅವರ ಕಾದಂಬರಿ-ಸರ್ವಮಂಗಳಾ. 1958ರಲ್ಲಿ ಬರೆದ ಈ ಕಾದಂಬರಿ, ಅದೇ ಹೆಸರಿನಿಂದ 1968 ರಲ್ಲಿ ಚಲನಚಿತ್ರವಾಯಿತು. ಈ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಕೌಟುಂಬಿಕ ಕಥಾ ವಸ್ತುವನ್ನು ಒಳಗೊಂಡ ಈ ಕಾದಂಬರಿಯು ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆಯೊಂದಿಗೆ ಓದುಗರ ಗಮನ ಸೆಳೆಯುತ್ತದೆ. ಈ ಮೊದಲು ಈ ಕಾದಂಬರಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತ್ತು. ಈ ಕಾದಂಬರಿ ಇದೇ ಹೆಸರಿನಲ್ಲಿ ಚಲನಚಿತ್ರವಾಗಿತ್ತು. ಇದರಲ್ಲಿ ರಾಜ್ ಕುಮಾರ್, ಕಲ್ಪನಾ, ಅಶ್ವಥ್ , ಸಂಪತ್ ನಟಿಸಿದ್ದಾರೆ. 

ಐವತ್ತು ವರ್ಷಗಳ ಅವಧಿಯಲ್ಲಿ ಬೆಳೆದು ಬಂದ ಎರಡು ತಲೆಮಾರುಗಳ ಜೀವನದ ಕಥೆ ಈ ಸರ್ವಮಂಗಳಾ. ಸಹಜವಾದ ಪ್ರಕೃತಿ ಸೌಂದರ್ಯ ಇಡೀ ಕಾದಂಬರಿಯಲ್ಲಿ ತುಂಬಿಕೊಂಡಿದ್ದು ಓದುಗನ ಮನಸ್ಸಿಗೆ ಸುಖ ಶಾಂತಿಯ ಅನುಭವ ನೀಡುತ್ತದೆ. ಇಲ್ಲಿ ಬಳಸಿದ ಆಡುಭಾಷೆ ಕಥೆಗೆ ಇನ್ನೂ ಮೆರುಗು ನೀಡಿದೆ. ಹಳ್ಳಿಯ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತ ಆಚಾರ ವ್ಯವಹಾರ, ಅಲ್ಲಿನ ಜಾತ್ರೆ, ಹಬ್ಬ ಹರಿದಿನ, ದೇವರ ಸೇವೆ, ಮದುವೆ ಇತ್ಯಾದಿ ವಿವರಗಳು ಮನ ತುಂಬುತ್ತವೆ. ಕಥಾ ಕಾಲ ಘಟ್ಟ ೧೯೩೦ರ ಆಸುಪಾಸಿನಲ್ಲಿ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ನಡೆಯುತ್ತದೆ. ವಿಶೇಷವೆಂದರೆ ಚದುರಂಗರ ಹುಟ್ಟೂರು ಸಹ ಕಲ್ಲಹಳ್ಳಿ. ಅವರ ನಿಜ ನಾಮಧೇಯ ಸುಬ್ರಹ್ಮಣ್ಯರಾಜು ಅರಸು.  ಇದೊಂದು 'ಅಮರ ಪ್ರೇಮ'ದ ಕಥೆಯೆನ್ನಬಹುದು.  ಇಷ್ಟೇ ಅಲ್ಲದೆ  ಇಲ್ಲಿ ಕಥೆಯ ಮೂಲಕ ಅಂದಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳೆಡೆಗೆ ಓದುಗರ ಗಮನ ಸೆಳೆದಿದ್ದಾರೆ.


ಚದುರಂಗದ ಇನ್ನೊಂದು ಮಹತ್ವದ ಕಾದಂಬರಿ "ಉಯ್ಯಾಲೆ"  ಉಯ್ಯಾಲೆ ಹೆಸರಿನಲ್ಲೇ ನಿರ್ಮಾಣಗೊಂಡ ಚಲನಚಿತ್ರಕ್ಕೆ ಅವರೇ ಚಿತ್ರಕಥೆಯನ್ನು ಬರೆದರು. ಈ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿಯೂ ಬಂದಿದೆ. ಹೆಣ್ಣುಗಂಡಿನ ಸೂಕ್ಷ್ಮ ಮನಸ್ಸಿನ ಚಿತ್ರಣ.ವನ್ನು ಕಾದಂಬರಿ ಒಳಗೊಂಡಿದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. . ಬರೆದು 60 ವರ್ಷಗಳೇ 


ಕಳೆದುಹೋಗಿದ್ದರೂ, ಇದರಲ್ಲಿ ವಿಶ್ಲೇಷಣೆ ಗೊಳಗಾದ  ಪತಿಪತ್ನಿಯರ ಮಧ್ಯದಲ್ಲೇಳುವ ಸಾಮರಸ್ಯದ ಸಮಸ್ಯೆ ಇಂದಿಗೂ ಹಳತಾಗಿಲ್ಲ. ಕಾನೂನು ರೀತ್ಯಾ ಸಮಸ್ಯೆಗೆ ಈ ಕಾಲದಲ್ಲಿ ಪರಿಹಾರ ಸಿಗಬಹುದು.ಆದರೆ ಮನದ ಭಾವನೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿಡಲು ಸಾಧ್ಯವಿಲ್ಲ. ಹಾಗೊಂದು ಪ್ರಯತ್ನ ನಡೆದರೂ ಫಲ ಪ್ರದವಾಗಲಿಕ್ಕಿಲ್ಲ, ಅದರಲ್ಲೂ ಹೆಣ್ಣಿನ ಮನಸ್ಸಿನ ನೆಮ್ಮದಿ ಉಳಿಯುವುದು ಅಸಾಧ್ಯ. ಮಧ್ಯದಲ್ಲಿ ಸಿಲುಕಿದ ಮಕ್ಕಳು ಅನಾಥ ಪ್ರಜ್ಞೆಯಲ್ಲಿ ಬೆಳೆದು ತಮ್ಮ  ಜೀವನದಲ್ಲಿ ಸೋಲುವುದು ಮಾತ್ರವಲ್ಲ, ಸುತ್ತಲಿನ ಸಮಾಜಕ್ಕೂ ಕಂಟಕಪ್ರಾಯರಾಗುವ ಸಾಧ್ಯತೆ ಹೆಚ್ಚು.  ಉಯ್ಯಾಲೆಯ ಕಥೆಯು ಏಕಕಾಲದಲ್ಲಿ ಸರಳವೂ ಮತ್ತುಗಹನವೂ ಆಗಿದೆ.  ವಿವಾಹಬಾಹಿರ ಪ್ರೇಮ ಸಾರ್ವಕಾಲಿಕ ವಸ್ತು. ಸುಂದರ ಭಾಷೆ, ಮನ ಮೋಹಕ ಶೈಲಿ. ವಿಚಾರಪೂರ್ಣ ಕಥೆಯನ್ನು ಹೊಂದಿದ ಕಾದಂಬರಿ "ಉಯ್ಯಾಲೆ". ಇದರಲ್ಲಿ ಸಿಕ್ಕಲಾರದ ಮತ್ತು ಸಿಕ್ಕಬಾರದವರ ನಡುವಿನ ಪ್ರೇಮಕಥೆಗಳಲ್ಲಿನ ' ರೊಮ್ಯಾಂಟಿಸಂ' ನ ಗುಣ ಕಾಣಬಹುದು. 


ಚದುರಂಗರಿಗೆ ಕೇಂದ್ರ ಸಾಹಿತ್ಯ ಅಕಾಶೆಮಿ ಪ್ರಶಸ್ತಿ ಗಳಿಸಿಕೊಟ್ಟ ಮಹತ್ವದ ಕೃತಿ "ವೈಶಾಖ" . ‘ದರುಮನಳ್ಳಿ’ ಈ ಕಾದಂಬರಿಯ ಕೇಂದ್ರ ಬಿಂದುವಾಗಿದ್ದು ಅಂದಿನ ಜಾತಿಕಲಹ, ಪಂಚಾಯ್ತಿ ರಾಜಕೀಯ, ಸಂಪ್ರದಾಯದ ಕುರಿತು ಗ್ರಾಮೀಣ ಸೊಗಡಿನಲ್ಲಿ ಓದಿಸಿಕೊಂಡು ಹೋಗುತ್ತದೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಮತ್ತು ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿರುವುದು ಈ ಕೃತಿಯ ‘ಶ್ರೇಷ್ಠತೆ-ಒಳದನಿ’ಗೆ ಸಾಕ್ಷಿ. ವೈಶಾಖ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸಿರುವ ಕಾದಂಬರಿ.   ಈ ಕಾದಂಬರಿಯಲ್ಲಿ ಅತ್ಯಂತ ಸುಸಂಸ್ಕೃತ ಭಾಷಾ ಬಳಕೆಯ ಜೊತೆ ಜೊತೆಗೇ ಗ್ರಾಮ್ಯ ಭಾಷೆಯನ್ನೂ ಅತ್ಯಂತ ಸಮರ್ಥವಾಗಿ ಬಳಸಿದ್ದಾರೆ.  ಮೇಲ್ವರ್ಗ ಮತ್ತು ಕೆಳವರ್ಗದ ಜನ ಜೀವನ, ಅವರ ಆಗು ಹೋಗುಗಳನ್ನು ಜೊತೆಜೊತೆಗೇ ಕಟ್ಟಿಕೊಡುತ್ತಾ ಹೋಗುತ್ತಾರೆ.  ಕಾರಂತರ ಮರಳಿ ಮಣ್ಣಿಗೆ, ಕುವೆಂಪುರವರ ಮಲೆಗಳಲ್ಲಿ ಮದುಮಗಳುಗಳಂತೆ ಅಪ್ಪಟ ಪ್ರಾದೇಶಿಕ ಕಂಪನ್ನು ಇದು ಪಸರಿಸುತ್ತದೆ.  ಕಥಾ  ಸಾಂದ್ರತೆ ಮತ್ತು ಅನುಭವ ಸಾಂದ್ರತೆಗಳೆರಡನ್ನೂ ನಾವಿಲ್ಲಿ ಕಾಣಬಹುದು.  ಈ ಕಾದಂಬರಿಯಲ್ಲಿ ಗ್ರಾಮೀಣ ಪರಿಸರದ, ಸಂಕೀರ್ಣತೆ ಇದೆ, ಗ್ರಾಮ್ಯ ಭಾಷೆ ಹೇರಳವಾಗಿ ಸೊಗಸಾಗಿ ಮೂಡಿಬಂದಿದೆ .ಈ ಮೊದಲೇ ಹೇಳಿದಂತೆ  ಹಳ್ಳಿಯೊಳಗಿನ ಜಾತಿಕಲಹ, ಪಂಚಾಯ್ತಿ ರಾಜಕೀಯ,ದ್ವೇಷ, ವಂಚನೆ,ಅಸೂಯೆ, ಪ್ರೀತಿ, ಕಾಮ, ಧಾರ್ಮಿಕತೆ, ಸಂಪ್ರದಾಯ, ಪ್ಲೇಗ್ ರೋಗ, ಮುಗ್ಧತೆ ಹೀಗೆ ಎಲ್ಲವೂ ಇಲ್ಲಿದೆ. ಹಲವಾರು ವರ್ಷಗಳವರೆಗೆ  ಕಾವು ಕುಳಿತು ಅನುಭವವೇ ಹೂವಾಗಿ ಅರಳಿದಂತಿರುವ ಚದುರಂಗ ರ   ಬಹು ನಿರೀಕ್ಷಿತ ಕಾದಂಬರಿ ಇದು. ಕಾವೇರಿ-ಲಕ್ಷ್ಮಣ ತೀರ್ಥ  ನದಿಗಳ  ನಡುವಿನ ಪ್ರದೇಶದ  ಜೀವನ ಇಲ್ಲಿ ಒಡ ಮೂಡಿದೆ.  ಪ್ರಾದೇಶಿಕತೆಯ ಬಂಧನ ಗಳನ್ನು  ಕಿತ್ತೆಸೆದು  ಸಾರ್ವತ್ರಿಕತೆ ಯತ್ತ ಈ  ಕಾದಂಬರಿ ಹೆಜ್ಜೆ  ಇಡುತ್ತದೆ. "ಗ್ರಾಮ ಭಾರತ 'ವಾಗಿ ತೋರುವ ಈ  ಕಾದಂಬರಿಯಲ್ಲಿ ಬರುವ ನೋವು ,ವಿಸ್ಮಯ ,ಕ್ರೌರ್ಯ, ಇವೆಲ್ಲವೂ ಭಾರತದ ಮೂಲ ಜೀವನಾಡಿಯಲ್ಲಿ ಅಭೇದ್ಯ ವಾಗಿ  ನುಸುಳಿರುವ ಅಂಶ ಗಳೆಂದು ಈ  ಕಾದಂಬರಿ ಬಹು ಮಾರ್ಮಿಕವಾಗಿ ಧ್ವನಿಸುತ್ತದೆ. ಇಲ್ಲಿಯ ಹರಿಜನರ ಸಂಕಟ ಇಡೀ  ಮಾನವ ಜನಾಂಗದಲ್ಲಿ ತುಳಿತಕ್ಕೆ  ಸಿಕ್ಕ  ಮೌನಿಗಳ ವ್ಯಸನವಾಗಿ ತೋರುವುದರಿಂದಲೆ ಕನ್ನಡ ಸಾಹಿತ್ಯಕ್ಕೆ  "ವೈಶಾಖ " ಒಂದು ಅಪೂರ್ವ  ಕಾಣಿಕೆಯಾಗಿದೆ.


ಚದುರಂಗ ಅವರ ನಾಲ್ಕನೆ ಹಾಗೂ ಕಡೆಯ ಕಾದಂಬರಿ "ಹೆಜ್ಜಾಲ" ಈ ಕೃತಿಯು ಕೃಷಿ ಕಾರ್ಮಿಕ ಜೀವನದ ಚಿತ್ರಣವನ್ನು ನೀಡುತ್ತದೆ. ಹೆಜ್ಜಾಲ ಎಂಬುದು ದೊಡ್ಡ ಆಲದ ಮರ. ಕಾಲೂರ ಎಂಬುವವನು ೀ ಕಾದಂಬರಿಯ ಕಥಾನಾಯಕ. ಈತ ಸ್ವಭಾವದಲ್ಲಿ ಅಲೆಮಾರಿ. ನಿಂತಲ್ಲಿ ನಿಲ್ಲಲಾರ; ಕೂತಲ್ಲಿ ಕೂಡಲಾರ. ಈತನ ಜೀವನವು ಅಲದೂರಿನಲ್ಲಿ ಆರಂಭವಾಗಿ ದಾವಣಗೆರೆ ಬಳಿಯ ಜಗಳೂರಿನಲ್ಲಿ ಮುಕ್ತಾಯಗೊಳ್ಳುತ್ತದೆ. ಆದರೆ, ಕಥೆ ಆರಂಭವಾಗುವುದು ಜಗಳೂರಿನಿಂದಲೇ. ಅಲದೂರು-ಕಾಲೂರಿನ ಹುಟ್ಟೂರು. ಬೆಟ್ಟದಪುರ, ರಾಮನಾಥಪುರ, ಶ್ರೀನಿವಾಸಪುರ ಹೀಗೆ ಜೀವನ ಸಾಹಿ, ಕೆಲವು ದಿನಗಳು ಕಾಫಿ ತೋಟದಲ್ಲಿ ಕಳೆಯುತ್ತಾನೆ. ಈ ಬದುಕಿನ ಸುಂದರ ಘಟನೆಗಳನ್ನು ಚಿತ್ರಿಸುವ ಕಾದಂಬರಿಯು, ಬದುಕಿನ ಅತಂತ್ರತೆಯನ್ನು, ಎಷ್ಟೊಂದು ಎಚ್ಚರಿಕೆಯೊಂದಿಗೆ ಹೆಜ್ಜೆ ಇಡಬೇಕು ಎಂಬುದರ ಸೂಕ್ಷ್ಮತೆಯನ್ನು ಕಾಣಿಸುತ್ತದೆ.   "ವೈಶಾಖ"ದಂತೆಯೇ ಇಲ್ಲಿಯೂ ಹಳ್ಳಿಯ ಪರಿಸರವಿದೆ. ಅಲ್ಲಿ ಕಥೆ ನೆನಪುಗಳ ಮುಖಾಂತರವೇ ವಿಸ್ತರಿಸಿಕೊಳ್ಳುತ್ತದೆ ಹಾಗೆ ಇಲ್ಲಿಯೂ ಕೂಡ ಕಥೆ ವಿಸ್ತಾರವಾಗುವುದು ನೆನಪುಗಳಿಂದಲೇ. ಈ ಕಾದಂಬರಿಯನ್ನು ಗಂಗೂರ ಎಂಬ ಪಾತ್ರದ ಆತ್ಮಕಥೆ  ಎಂದೂ ಕರೆಯಬಹುದು.  ವಿಶಿಷ್ಟ ರೀತಿಯ ವಸ್ತು ವಿನ್ಯಾಸ, ಪಾತ್ರ ವೈವಿಧ್ಯ, ಜಾನಪದ ಪ್ರಜ್ಞೆ, ಗ್ರಾಮೀಣ ಜೀವನ ಸಂಸ್ಕೃತಿಯ ಗಾಢ ಚಿತ್ರಣ, ತಾಂತ್ರಿಕ ಕೌಶಲ, ಜೀವನ ದರ್ಶನದ ಸಮಗ್ರತೆ ಈ ಕಾದಂಬರಿಯ ವೈಶಿಷ್ಟ್ಯ. ಬರಹದ ಸವಿ, ಗಟ್ಟಿತನದ ಮೂಲಕ ಈ ಕಾದಂಬರಿ ಮನಸೆಳೆಯುತ್ತದೆ. ಕಥೆಯ ಚೌಕಟ್ಟು ಈ ಕೃತಿಯ ಧನಾತ್ಮಕ ಮತ್ತು ಋಣಾತ್ಮಕ ಅಂಶ.  ಆದರೆ ಕಾದಂಬರಿ ಎಲ್ಲಿಯೂ ಬೋರ್ ಎನಿಸುವುದಿಲ್ಲ. ಸಾವಕಾಶವಾಗಿ ಓದಬಹುದು.  ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ.  ಪ್ರೀತಿ, ದಯೆ, ಹಠ, ಅಹಂಕಾರ, ದಾಯಾದಿತನ ಹೀಗೆ ಅನೇಕ ಅಂಶಗಳನ್ನೊಳಗೊಂಡ ಒಂದೊಳ್ಳೆ ಗ್ರಾಮೀಣ ಸೊಗಡಿನ ಕಾದಂಬರಿ ಹೆಜ್ಜಾಲ.

No comments:

Post a Comment