ಬರಹಗಾರ್ತಿ ಗೀತಾ ಕುಂದಾಪುರ ಅವರು ಎಂಕಾಂ ಪದವಿ ಪಡೆದಿರುವ ಇವರು ವಿದೇಶಗಳಲ್ಲಿ ಪ್ಲಾನರ್ ಮತ್ತು ಪ್ರಾಜೆಕ್ಟ್ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಾಸಕ್ತರಾಗಿದ್ದ ಇವರು ವಿವಿಧ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಿಗೆ ಲೇಖನ ಕತೆಗಳನ್ನು ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಬರೆದ ಸಣ್ಣ ಕತೆಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದು ‘ಅಪ್ರಮೇಯ’ ಶೀರ್ಷಿಕೆಯಡಿ ಪುಸ್ತಕವಾಗಿ ಪ್ರಕಟಗೊಂಡಿದೆ. ಇವರ ಇನ್ನೊಂದು ಕೃತಿ ದ್ವೀಪಗಳತ್ತ ಯಾನ - ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕಥನ. ಕಡಲ್ಗಳ್ಳರ ಸರಹದ್ದಿನಲ್ಲಿ ಎನ್ನುವುದು ಅವರ ಪ್ರವಾಸ ಕಥನ ‘ ಇಲ್ಲಿ ಲೇಖಕಿ ರಷ್ಯಾ ಮತ್ತು ಸ್ಕ್ಯಾಂಡಿನೆವಿಯಾ ಪ್ರವಾಸ ಕೈಗೊಂಡವೇಳೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಂಟಿ ಪಯಣಿಗರು.ಎನ್ನುವುದು ಇವರ ಇನ್ನೊಂದು ಕಥಾ ಸಂಕಲನ. ಇದೀಗ ಲೇಖಕಿ ಗೀತಾ ತಮ್ಮ ಮೊಟ್ಟ ಮೊದಲ ಕಾದಂಬರಿ ಪ್ರಕಟಿಸಿದ್ದು "ಪಾರ್ಲರ್ ಹುಡುಗಿಯೂ ಮರಳುಗಾಡಿನ ಮಹಲು" ಎನ್ನುವುದು ಈ ಕಾದಂಬರಿಯ ಶೀರ್ಷಿಕೆ.
ಈ ಕಾದಂಬರಿ ಲಾವಣ್ಯ ಎನ್ನುವ ಮದ್ಯಮವರ್ಗದ ಕುಟುಂಬದಿಂದ ಬಂದ ಹುಡುಗಿಯೊಬ್ಬಳ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ. ಮದುವೆ ವಯಸ್ಸಿಗೆ ಬಂದಿದ್ದರೂ ನಾನಾ ಕಾರಣದಿಂದ ಸೂಕ್ತ ವರ ಸಿಕ್ಕದೆ ಮದುವೆಯಾಗದೆ ಇದ್ದ ಲಾವಣ್ಯ ತನ್ನ ಸಂಬಂಧಿಕರಿಂದ ನಾನಾ ಬಗೆಯ ಚುಚ್ಚುಮಾತುಗಳನ್ನು ಕೇಳಬೇಕಾಗುತ್ತದೆ. ಆದರೆ ಇದರಿಂದ ನೊಂದು ಕುಗ್ಗಿ ಹೋಗದ ಆಕೆ ತನ್ನ ಆತ್ಮವಿಶ್ವಾಸ, ಪ್ರಯತ್ನದಿಂದ ಮುಂದುವರಿದು ಗಲ್ಫ್ ರಾಷ್ಟ್ರ ಕತಾರ್ ಗೆ ತೆರಳಿ ಅಲ್ಲಿ ಬ್ಯೂಟಿಷಿಯನ್ ಆಗಿ ಬೆಳೆಯುತ್ತಾಳೆ.
ಮೇಲ್ನೋಟಕ್ಕೆ ಕಾದಂಬರಿ ಹೆಣ್ಣೊಬ್ಬಳ ಜೀವನದ ಕಥೆಯಾಗಿ ಅಲ್ಲದೆ ಹೆಣ್ಣೊಬ್ಬಳು ತನ್ನ ಸಾಹಸ ಪ್ರವೃತ್ತಿಯಿಂದ ಎಲ್ಲವನ್ನೂ ಎದುರಿಸಿ ದಿಟ್ಟವಾಗಿ ಮುನ್ನಡೆಯುವ, ಬೆಳೆದು ಎತ್ತರಕ್ಕೇರುವ ಕಥೆ ಎನಿಸುತ್ತದೆ. ಲಾವಣ್ಯ ತಾನು ಕತಾರ್ ನಲ್ಲಿ ಕೆಲಸ ಮಾಡಿ ತನ್ನ ತಾಯಿ, ಮನೆಯವರಿಗೆ ಹಣ ಕಳಿಸುತ್ತಾ ಜೊತೆಗೆ ತನ್ನನ್ನು ಆಡಿಕೊಂಡಿದ್ದವರ ಮುಂದೆ ತಾನು ಏನೆನ್ನುವುದನ್ನು ಕೆಲಸದ ಮೂಲಕವೇ ತೋರಿಸಿಕೊಡುವ ಕಥೆ ಈ ಕಾದಂಬರಿ.
ಇಲ್ಲಿ ನನಗೆ ಕಂಡ ಹಾಗೆ ಲಾವಣ್ಯಳ ಜೀವನದ ಕಥೆಯ ಜೊತೆಗೆ ಕತಾರ್ ಅಥವಾ ಇತರೆ ಗಲ್ಫ್ ರಾಷ್ಟ್ರಗಳಲ್ಲಿ ಹೆಣ್ಣುಮಕ್ಕಳ ಜೀವನ ಹೇಗಿರುತ್ತದೆ ಎನ್ನುವುದನ್ನೂ ಲೇಖಕಿ ತೆರೆದಿಡುತ್ತಾರೆ. ದೂರ ದೇಶಗಳಿಗೆ ಕನಸುಗಳನ್ನು ಕಟ್ಟಿಕೊಂಡು ಕೆಲಸಕ್ಕೆ ಬರುವ ಹೆಣ್ನು ಮಕ್ಕಳು ಅಲ್ಲಿ ಪಡುವ ಬವಣೆಗಳ ಚಿತ್ರಣ ಇಲ್ಲಿದೆ. ಇಲ್ಲಿನ ಕಥಾ ನಾಯಕಿಗೆ ಒಲಿದು ಬಂದಂತೆ ಎಲ್ಲಾ ಹೆಣ್ಣು ಮಕ್ಕಳ ಜೀವನದಲ್ಲಿ ಅದೃಷ್ಟ ಕೈಗೂಡಿ ಬರುವುದಿಲ್ಲ ಎನ್ನುವುದು ಸತ್ಯ. ಇದರಲ್ಲಿ ಬರುವ ಪಾರ್ವತಿ, ಪಸೀದ, ಲೋಲಿಟಾ ಅಂತಹಾ ಪಾತ್ರಗಳು ಇದಕ್ಕೆ ನಿದರ್ಶನ.
ಒಟ್ಟಾರೆ ಕಾದಂಬರಿ ಸರಳವಾಗಿದ್ದು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಗುರಿ, ಮಹತ್ವಾಕಾಂಕ್ಷೆಯಿದ್ದು ಸಾಧನೆಯ ಛಲ, ಪ್ರಯತ್ನ ಸೇರಿದರೆ ಯಾವುದೇ ಕಷ್ಟಗಳನ್ನೆದುರಿಸಿ ಬದುಕಬಹುದು ಎನ್ನುವುದಕ್ಕೆ ಲಾವಣ್ಯ ಪಾತ್ರ ಒಂದು ಉದಾಹರಣೆ. ಹಾಗೆಯೇ ಇಲ್ಲಿ ಮದ್ಯಮವರ್ಗದ ಮನೆ, ಅಲ್ಲಿನ ಸಂಬಂಧಗಳ ನಡುವಿನ ತಾರತಮ್ಯವನ್ನೂ ಲೇಖಕಿ ಸೂಕ್ತವಾಗಿ ಚಿತ್ರಿಸಿದ್ದಾರೆ. ಆದರೆ ಕಾದಂಬರಿಯ ಪ್ರಾರಂಭದಲ್ಲಿದ್ದ ಸಮಾಧಾನಕರ ಕಥನ ಶೈಲಿ ಕಾದಂಬರಿಯ ಕಡೆ ಕಡೆಯಲ್ಲಿ ತುಸು ಹೆಚ್ಚಿನ ವೇಗದ ಗತಿಯಲ್ಲಿ ಸಾಗಿದಂತೆ ಎನಿಸುತ್ತದೆ. ಲಾವಣ್ಯಗೆ ಸಲ್ಮಾ ಸಿಕ್ಕ ನಂತರ ಮತ್ತು ಕಾದಂಬರಿಯನ್ನು ಸುಖಾಂತಗೊಳಿಸಬೇಕೆನ್ನುವ ಕಾರಣದಿಂದ ಶ್ರೀಕಾಂತನ ಪಾತ್ರ ಪ್ರವೇಶವಾಗಿದೆ ಎನಿಸಿತು. ಅಲ್ಲದೆ ಅವನ ಲಾವಣ್ಯಳ ಮದುವೆ ಆಗುತ್ತದೆ ಎನ್ನುವುದರೊಂದಿಗೆ ಕಥೆ ಮುಕ್ತಾಯವಾಗಿದ್ದು ಕೊನೆಯಲ್ಲಿ ಕಥೆ ಅವಸರದಲ್ಲಿ ಸಾಗಿತು ಎನಿಸಿತು. ಇದು ಹೊರತು ಲೇಖಕಿಯ ಮೊದಲ ಪ್ರಯತ್ನಕ್ಕೆ ನಾವು ಮೆಚ್ಚುಗೆ ಸೂಚಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ.
No comments:
Post a Comment