“ಕಲಿಯಲು ಆಸಕ್ತಿ ಇರುವವರಿಗೆ ನಮ್ಮಲ್ಲಿ ಸದಾ ಅವಕಾಶಗಳಿರುತ್ತವೆ. ಕಲಾವಿದರನ್ನು ಬೆಳೆಸಬೇಕು, ಕಲೆಯನ್ನು ಗುರುತಿಸಿ ಪ್ರೊತ್ಸಾಹಿಸಬೇಕೆನ್ನುವುದೇ ನಮ್ಮ ಸಂಸ್ಥೆಯ ಮುಖ್ಯ ದ್ಯೇಯೋದ್ದೇಶ. ಕಲಾವಿದರು ಉಳಿಯಬೇಕು, ಬೆಳೆಯಬೇಕು. ಅವರಿಗೆ ಎಂದೆಂದೂ ಜನಮನ್ನಣೆ ಸಿಗುವಂತಾಗಬೇಕು.”
ಇದು ಕರ್ನಾಟಕದ ಹೆಮ್ಮೆಯ ಕಲಾ ಸಂಸ್ಥೆ ಪ್ರಭಾತ್ ಕಲಾವಿದರು ಸಂಸ್ಥೆಯ ಸಹ ನಿರ್ದೇಶಕರಲ್ಲಿ ಒಬ್ಬರಾದ ಹೇಮಾ ಪಂಚಮುಖಿ ಅವರ ಮಾತುಗಳು.
ತುಮಕೂರಿನವರಾದ ಖ್ಯಾತ ಹರಿಕಥಾ ವಿದ್ವಾನ್ ಗೋಪಿನಾಥ ದಾಸರಿಂದ ಪ್ರಾರಂಭವಾದ ಸಂಸ್ಥೆಯೊಂದು ಇಂದು ನೂರಾರು ಕಲಾವಿದರನ್ನು ಸೃಷ್ಟಿಸುವ ರಂಗಶಾಲೆಯಾಗಿ ಪರಿವರ್ತನೆಗೊಂಡಿದ್ದು ಈಗ ಇತಿಹಾಸ. ಇಂತಹಾ ಮಹಾನ್ ಸಂಸ್ಥೆ ಪ್ರಭಾತ್ ಕಲಾವಿದರು ಕುರಿತಾದ ಕಿರು ಪರಿಚಯವೇ ಈ ಲೇಖನ.
ಹರಿಕಥಾ ರತ್ನ ಟಿ.ವಿ.ಗೋಪೀನಾಥ ದಾಸರು ತಮ್ಮ ಸಹೋದರರೊಂದಿಗೆ 1930 ರಲ್ಲಿ "ಗುರುರಾಜ ವಾದ್ಯವೃಂದ" ಎನ್ನುವ ಹೆಸರಿನಲ್ಲಿ ಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಮುಂದೆ ಪೌರಾಣಿಕ ನಾಟಕಗಳನ್ನು ಆಡಲು ಪ್ರಾರಂಭಿಸಿದ ಬಳಿಕ ಪ್ರಭಾತ್ ಕಲಾಸಂಘ ಅಥವಾ ಪ್ರಭಾತ್ ಕಲಾವಿದರು ಎನ್ನುವ ಹೆಸರಿನಡಿ ಗೋಪಿನಾಥ ದಾಸರೇ ಬರೆದು ನಿರ್ದೇಶಿಸಿದ ಹಲವಾರು ನಾಟಕಗಳು ಪ್ರದರ್ಶನಗೊಂಡವು.
1969ರ ಕಾವಧಿಯಲ್ಲಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ರೆಕಾರ್ಡೆಡ್ ಮ್ಯೂಸಿಕ್ ನೊಂದಿಗೆ ಬ್ಯಾಲೆ ಶೈಲಿಯ ನೃತ್ಯ ನಾಟಕಗಳನ್ನು ಇದೇ ಪ್ರಬಾತ್ ಕಲಾವಿದರು ತಂಡವು ಪ್ರದರ್ಶಿಸಿತು. ಈ ನೂತನ ಪ್ರಯೋಗದಿಂದಾಗಿ ಭಾರತೀಯ ನೃತ್ಯ ರೂಪಕಗಳು ಇತಿಹಾಸದಲ್ಲೇ ಒಂದು ಮೈಲಿಗಲ್ಲು ಸ್ಥಾಪಿತವಾಯೊತು. ಗೋವಿನ ಕಥೆ, ಕಿಂದರ ಜೋಗಿ, ಸೀತಾದೇವಿ ಎನ್ನುವ ಪ್ರಯೋಗಗಳಿಂದ ಪ್ರಾರಂಭವಾದ ಈ ನೃತ್ಯ ನಾಟಕ ಪರಂಪರೆ ಇಂದಿಗೂ ಮುಂದುವರಿದು ಬಂದಿದೆ.
ಇಂದು ಈ ನೃತ್ಯ ನಾಟಕ ಶೈಲಿಯಲ್ಲಿ ಮೂರು ವಿಭಾಗಗಳಿದ್ದು ಅವುಗಳೆಂದರೆ ಪೌರಾಣಿಕ, ಐತಿಹಾಸಿಕ ಹಾಗೂ ಕಾಲ್ಪನಿಕ ಕಥೆಗಳು. ಪೌರಾಣಿಕ ಕಥೆಗಳಲ್ಲಿ ಶ್ರೀ ಕೃಷ್ಣ ವೈಜಯಂತೀ, ಶ್ರೀ ರಾಮ ಪ್ರತೀಕ್ಷಾ, ಮಹಿಷಾಸುರ ಮರ್ಧಿನಿ, ಮೋಹಿನಿ ಭಸ್ಮಾಸುರ ಇದೇ ಮೊದಲಾದವುಗಳಿದ್ದರೆ ಐತಿಹಾಸಿಕ ಕಥಾನಕಗಳಲ್ಲಿ ಧರ್ಮ ಭೂಮಿ, ಕರ್ನಾಟಕ ವೈಭವ, ಕರುನಾಡ ವೈಭವಗಳಂತಹಾ ಅದ್ಭುತ ಪ್ರದರ್ಶನಗಳಿರುತ್ತವೆ. ಕಾಲ್ಪನಿಕ ವಿಭಾಗದಲ್ಲಿ ಪುಣ್ಯಕೋಟಿ, ಕಿಂದರಿ ಜೋಗಿ ಹಾಗೂ ಸಿಂಡ್ರೆಲಾ ನೃತ್ಯ ನಾಟಕಗಳು ಪ್ರಮುಖವಾದವು.
ಸಿಂಡ್ರೆಲಾ
ಇದರಲ್ಲಿ ಸಿಂಡ್ರೆಲಾ ಅತ್ಯಂತ ಅದ್ಭುತವಾದ ನೃತ್ಯ ನಾತಕವಾಗಿದ್ದು ಪ್ರಬಾತ್ ಕಲಾವಿದರು ಸಂಸ್ಥೆಯ ಹೆಮ್ಮೆಯ ಕೃತಿ ಎನಿಸಿದೆ. ಪಾಶ್ಚಿಮಾತ್ಯ ಕಥಾಹಂದರವನ್ನು ಹೊಂದಿದ ಸಿಂಡ್ರೆಲಾ ನೃತ್ಯ ನಾಟಕ ಹೊಸ ರೀತಿಯ
ಪ್ರಯೋಗವಾಗಿದ್ದು ಮಾನವೀಯತೆಯ ನೆಲೆಗಟ್ಟಿನ
ಕಥಾಹಂದರವನ್ನು ಹೊಂದಿದೆ. ಇದು ಜನವರಿ 29, 2007ರಂದು ಒಂದು ಸಾವಿರ ಪ್ರದರ್ಶನಗಳನ್ನು ಪೂರೈಸಿ
1001ನೇ ಪ್ರದರ್ಶನ ಕಂಡಿತು. ರೇಷ್ಮೆ ಬಟ್ಟೆಯ ಉಗಮ, ವಿಕಾಸಕ್ಕೆ ಸಂಬಂಧಿಸಿದ ಕಥಾ ವಸ್ತುವನ್ನೊಳಗೊಂದ ಕ್ರೌನ್ ಆಫ್ ಕ್ರಿಯೇಷನ್ (ದಿವ್ಯ ಸೃಷ್ಟಿ), ಪರಿಸರದ ಪ್ರಾಮುಖ್ಯತೆಯನ್ನು
ಹೇಳುವ ಅಭಿಜ್ಞಾನ ಇವು ಪ್ರಭಾತ್ ಕಲಾವಿದರು ತಂಡದ ಹೊಸ ಬಗೆಯ ಪ್ರಯೋಗಗಳಿಗೆ ಸಾಕ್ಷಿಯಾಗಿವೆ.
1982ರ ನಂತರ, ಸಂಸ್ಥೆಯ ರೂವಾರಿ ಗೋಪೀನಾಥ ದಾಸರು ದಿವಂಗತರಾದ ಮೇಲೆ, ಅವರ ಹಿರಿಯ ಮಗನಾದ ಟಿ.ಜಿ. ವೆಂಕಟೇಶಾಚಾರ್ ಮತ್ತು ಸಹೋದರರು
ಸಂಸ್ಥೆಯ ರೂವಾರಿಗಳಾಗಿ ಮುನ್ನಡೆಸಿಕೊಂಡು ಬಂದರು. ಮತ್ತು ಇಂದು ಅವರ ಮಕ್ಕಳಾದ ಹೇಮಾ ಪಂಚಮುಖಿ ಮತ್ತು
ಅವರ ಸೋದರ ಟಿ.ವಿ. ಹರೀಶ್ ಅವರು ಈ ಸಂಸ್ಥೆಯ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
ಪ್ರಭಾತ ಕಲಾವಿದರು ಕರ್ನಾಟಕವಲ್ಲದೆ ದೇಶಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ದೆಹಲಿಯಲ್ಲಿ ಪ್ರತಿ ವರ್ಷವೂ ನಡೆಯುತ್ತಿದ್ದ ಇಂಡಸ್ಟ್ರಿಯಲ್ ಟ್ರೆಂಡ್ ಫೇರ್ನಲ್ಲಿ ಏಳು ವರ್ಷಗಳೂ ಸತತವಾಗಿ ವಿಭಿನ್ನ ಪ್ರದರ್ಶನಗಳನ್ನು ನೀಡಲಾಗಿದೆ. ಸಿಂಗಪುರ, ಮಲೇಶಿಯಾ ದೇಶಗಳಲ್ಲಿ ಬ್ಯಾಲೆ ಪ್ರದರ್ಶನಗಳನ್ನು ನೀಡಿರುವ ಇವರು 1993ರಲ್ಲಿ ಅಮೇರಿಕಾದ ಬೇರೆ ಬೇರೆ ನಗರಗಳಲ್ಲಿ ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಗಳಿಸಿದ್ದಾರೆ. ಹೀಗೆ ಇವರ ಅನೇಕ ನೃತ್ಯ ನಾಟಕಗಳು 5,000ಕ್ಕೂ ಮೇಲ್ಪಟ್ಟು ಪ್ರದರ್ಶನಗಳನ್ನು ಕಂಡಿವೆ.
ನೃತ್ಯ ವೈವಿದ್ಯತೆ
ಬೇರೆ ಸಂಸ್ಥೆಗಳ ನೃತ್ಯ ನಾಟಕಗಳಿಗೂ ಪ್ರಭಾತ್ ಕಲಾವಿದರ ನೃತ್ಯ ಶೈಲಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಬೇರೆ ಸಂಸ್ಥೆಗಳಲ್ಲಿ ನೃತ್ಯವೆಂದರೆ ಭರತನಾಟ್ಯವನ್ನೇ ಪ್ರಧಾನವಾಗಿ ತೋರಿಸಲಾಗುತ್ತದೆ ಆದರೆ ಇಲ್ಲಿ ಭರತನಾಟ್ಯ ಒಂದೇ ಅಲ್ಲದೆ ಇತರೆ ಭಾರತೀಯ ನೃತ್ಯ ಶೈಲಿಗಳು, ಪಾಶ್ಚಾತ್ಯ ನೃತ್ಯ ಪ್ರಕಾರಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಆಂಗಿಕ, ವಾಚಿಕ, ಸಾತ್ವಿಕ ಹಾಗೂ ಆಹಾರ್ಯ ಅಭಿನಯವೆನ್ನುವ ನಾಲ್ಕು ಶೈಲಿಯ ಅಭಿನಯಗಳೂ ಇಲ್ಲಿವೆ. ಹೀಗಾಗಿ ಇವರ ಪ್ರದರ್ಶನಗಳು ಸಹೃದಯರ ಮನಸೂರೆಗೊಳ್ಳುತ್ತವೆ. ಜತೆಗೆ ಇವರು ಆಧುನಿಕುಪಕರಣಗಳು, ಲೈಟಿಂಗ್ಸ್ ಗಳನ್ನು ಉಪಯೋಗಿಸಿಕೊಂಡು ದೃಷ್ಯಗಳನ್ನು ಹೆಚ್ಚು ಹೆಚ್ಚು ಮನಮುಟ್ಟುವಂತೆ ತೋರಿಸುವಲ್ಲಿ ಸಫಲಾರಾಗಿದ್ದಾರೆ. ಗೋಪಿನಾಥ ದಾಸರು ಸುಮಾರು ಅರವತ್ತರ ದಶಕದಲ್ಲಿಯೇ ಈ ಬಗೆಯ ವಿಶೇಷ ಪ್ರಯೋಗಗಳನ್ನು ನಡೆಸಿದ್ದರು ಎಂದರೆ ನಂಬಲೇ ಬೇಕು.
ಪ್ರಭಾತ್ ಕಲಾವಿದರ ಪ್ರದರ್ಶನಗಳಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ ಜೀವನ ಮೌಲ್ಯಗಳು, ನಮ್ಮ ಸಂಸ್ಕೃತಿಯ ಕುರಿತಾದ ತಿಳುವಳಿಕೆ ಮೂಡಿಸುವ ಅಂಶಗಳೂ ಇರುವುದು ಇದರ ಇನ್ನೊಂದು ಅಗ್ಗಳಿಕೆಯ ಅಂಶವಾಗಿದೆ. ಗ್ಲಾಮರ್ ಮತ್ತು ಮೋರೆಲ್ ಎರಡೂ ಸೇರಿದ ಒಂದು ವಿಶಿಷ್ಟ ಶೈಲಿಯಿಂದಾಗಿಯೇ ಇವರ ನೃತ್ಯ ನಾಟಕಗಳಿಗೆ ಇಂದು ಇಷ್ಟೊಂದು ಬೇಡಿಕೆ ಬರಲು ಕಾರಣವೆನ್ನಬಹುದು.
ಪ್ರಭಾತ್ ಕಲಾವಿದರು ಕೇವಲ ರಂಗ ಪ್ರದರ್ಶನ ನೀಡುವ ತಂಡವಾಗಿರದೆ ರಂಗ ಕಲಾವಿದರಿಗೆ, ಸಂಗೀತಗಾರರಿಗೆ ತರಬೇತಿ ನೀಡುವ ಸಂಸ್ಥೆಯೂ ಆಗಿದೆ. ಹರಿಕಥೆ, ಶಾಸ್ತ್ರೀಯ ಸಂಗೀತ, ಲಘು ಸಂಗೀತ, ವಿವಿಧ ಪ್ರಕಾರದ ನೃತ್ಯಗಳೂ ಸೇರಿದಂತೆ ನಾನಾ ವಿಧದ ತರಬೇತಿಗಳನ್ನು ಇಲ್ಲಿ ಪಡೆಯಬಹುದಾಗಿದೆ.
ಇದೀಗ ಪ್ರಭಾತ್ ಕಲಾವಿದರ್ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ಹೇಮಾ ಪಂಚಮುಖಿಯವರು ಹದಿನಾರು ವರ್ಷಗಳ ಹಿಂದೆ "ಸುಕೃತಿ ನಾಟ್ಯಾಲಯ" ಹೆಸರಿನ ನೃತ್ಯ ತರಬೇತಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಇಲ್ಲಿ ಭರತನಾಟ್ಯ, ಸಂಗೀತ, ಯೋಗ, ನೃತ್ಯ ನಾಟಕ ಹೀಗೆ ನಾನಾ ವಿಧದ ತರಬೇತಿ ನೀಡಲಾಗುತ್ತದೆ, ಯಾವುದೇ ಒಬ್ಬ ಮಗು ಇಲ್ಲವೆ ವ್ಯಕ್ತಿ ಆಸಕ್ತಿಯಿಂದ ಇಲ್ಲಿ ಸೇರಿಕೊಂಡರೆಂದರೆ ಅವರನ್ನು ಈ ಎಲ್ಲಾ ವಿಧಗಳಲ್ಲಿಯೂ ತರಬೇತುಗೊಳಿಸಿ ಅವರನ್ನು ಪರಿಪೂರ್ಣ ಕಲಾವಿದರನ್ನಾಗಿ ರೂಪಿಸುವುದು ಈ ಸಂಸ್ಥೆಯ ಹಿಂದಿರುವ ಉದ್ದೇಶ.
ಸುಮಾರು ನೂರೈವತ್ತು ಮಕ್ಕಳು ಇಲ್ಲಿ ಕಲಿಯುತ್ತಿದ್ದು ಇಲ್ಲಿ ಮೈಸೂರು ಶೈಲಿಯ ನೃತ್ಯ ಹೇಳಿಕೊಡಲಾಗುತ್ತಿದ್ದು ರಂಗ ಪ್ರವೇಶ ಸೇರಿದಂತೆ ಎಲ್ಲಾ ತರಬೇತಿಯೂ ಕನ್ನಡ ಭಾಷೆಯಲ್ಲಿಯೇ ಇರುತ್ತದೆ. ಸುಕೃತಿ ನಾಟ್ಯಾಲಯದಲ್ಲಿ ಕಲಿತ ನೃತ್ಯ ಕಲಾವಿದರಿಗೆ ಪ್ರಭಾತ್ ಕಲಾವಿದರ ತಂಡದಲ್ಲಿ ಅವಕಾಶ ನೀಡಲಾಗುತ್ತದೆ. ಇನ್ನು ಎಲ್ಲಾ ವಿದ್ಯಾರ್ಥಿಗಳೊಂದಿಗೆ ಮನೆ ಮಂದಿಯಂತೆ ಬೆರೆತು ಕಲಿಸುವ ವಿಧಾನ ಇಲ್ಲಿಯದು ಇದರಿಂದ ವಿದ್ಯಾರ್ಥಿಗಳಿಗೆ ಇಲ್ಲಿನ ತರಬೇತಿ ಕೇವಲ ತರಬೇತಿಯಷ್ಟೇ
ಆಗಿರದೆ ಹೃದಯಕ್ಕೆ ಹತ್ತಿರವಾದ ಾಭ್ಯಾಸವೂ ಆಗಿರುತ್ತದೆ. ಒಟ್ಟಾರೆ ಇಲ್ಲಿ ಎಲ್ಲರೂ ಒಂದಾಗಿರುತ್ತಾರೆ.
ಇದಕ್ಕೇ ಅವರನ್ನು ಪ್ರಭಾತ್ ಕುಟುಂಬ ಎಂದೇ ಗುರುತಿಸಲಾಗುತ್ತದೆ.
ಒಟ್ಟಾರೆಯಾಗಿ ಕಳೆದ ಎಂಭತ್ತು ವರ್ಷಕ್ಕೂ ಮಿಗಿಲಾದ ಕಾಲಾವಧಿಯಲ್ಲಿ ಪ್ರಭಾತ್ ಕಲಾವಿದರು ತಂದವು ಏರಿದ ಎತ್ತರ ಸಂಪಾದಿಸಿದ ಕೀರ್ತಿಯನ್ನು ಅಳೆಯುವುದು ಅತ್ಯಂತ ದುಸ್ತರ. ಆದರೆ
ಕರ್ನಾಟಕದ ರಂಗಭೂಮಿ, ಸಂಗೀತ ಕ್ಷೇತ್ರ ಸೇರಿದಂತೆ ಸಾಸ್ಕೃತಿಕ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಈ ತಂಡವುಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನೀಡಲಿ, ಕನ್ನಡ ತಾಯಿಯ ಸೇವೆಯನ್ನು ಇನ್ನಷ್ಟು ಶ್ರದ್ದೆಯಿಂದ ಮಾಡಲಿ ಎನ್ನುವುದು ನಮ್ಮ ಆಶಯ.
***
ಹೇಮಾ ಪಂಚಮುಖಿ - ಒಂದು ಪರಿಚಯ
ಹರಿಕಥಾ ವಿದ್ವಾಂಸ ಗೋಪಿನಾಥ ದಾಸರ ಮೊಮ್ಮಗಳಾದ ಹೇಮಾ ಪಂಚಮುಖಿ ಇದೀಗ ಪ್ರಭಾತ್ ಕಲಾವಿದರು ತಂಡದ ಮುಖ್ಯ ರೂವಾರಿಗಳಲ್ಲಿ ಒಬ್ಬರು. ಹೇಮಾ ಅವರ ತಂದೆ ಟಿ.ವಿ.ವೆಂಕಟೇಶ್ಠ್ ಹಾಗೂ ತಾಯಿ ಸುಧಾ ಅವರಾಗಿದ್ದು ಇವರ ಸೋದರಿ ಪ್ರೇಮಾ ವಿದೇಶದಲ್ಲಿದ್ದು ಸೋದರ ಹರೀಶ್ ಅವರೊಂದಿಗೆ ಪ್ರಭಾತ್ ಕಲಾವಿದರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರ ಪತಿ ಸುಯಮೀಂದ್ರ ಪಂಚಮುಖಿ ಪ್ರಖ್ಯಾತ ಪಂಚಮುಖಿ ಮನೆತನದವರಾಗಿದ್ದು ಮಗಳು ಅರುಣಿಮಾ ಪಂಚಮುಖಿ. ಇದೀಗ ಆರನೇ ತರಗತಿ ಓದುತ್ತಿದ್ದಾರೆ.
ಕಲಾವಿದರ ಕುಟುಂಬದ ಹಿನ್ನೆಲೆ ಇರುವ ಇವರು ಯು.ಎಸ್.ಕೃಷ್ಣರಾವ್ ಹಾಗೂ ಚನ್ನಭಾಗಾದೇವಿಯವರ ಬಳಿ ನೃತ್ಯಾಭ್ಯಾಸ ನಡೆಸಿದ್ದರು. ಮುಂದೆ ಚಿತ್ರರಂಗದತ್ತ ಮುಖ ಮಾಡಿದ ಹೇಮಾ ಅವರು ಕೆಲವು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಬಾಲ ಕಲಾವಿದೆಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ಇವರು ಡಾ.ರಾಜ್ ಕುಮಾರ್ ಅಭಿನಯದ ಜೀವನ ಚೈತ್ರ ಚಿತ್ರದಲ್ಲಿ ವಿಶೇಷವಾಗಿ ಸರಸ್ವತಿ ಪಾತ್ರಧಾರಿಯಾಗಿ ಅಭಿನಯಿಸಿದ್ದರು. (ಈ ಪಾತ್ರವು ಆ ಚಿತ್ರದ ಪ್ರಮುಖ ಗೀತೆಯಾದ ನಾದಮಯ... ಹಾಡಿನಲ್ಲಿ ಬರುತ್ತದೆ.) ತದನಂತರದಲ್ಲಿ ಗೋಲಿಬಾರ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಇವರಿಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ "ಅಮೆರಿಕಾ ಅಮೆರಿಕಾ" ಚಿತ್ರವು ಬಹಳ ಜನಪ್ರಿಯತೆ ಗಳಿಸಿಕೊಟ್ಟಿತು.
ಇದಾಗಿ ಕೆಲವು ಕಾಲ ವಿವಿಧ ಧಾರಾವಾಹಿಗಳಲ್ಲಿ ಅಭಿನಯಿಸಿದ ಇವರು ಮತ್ತೆ ತಮ್ಮ ಸಂಸ್ಥೆ, ವಿದ್ಯಾರ್ಥಿಗಳ ತರಬೇತಿಯಲ್ಲಿ ಸಕ್ರಿಯರಾದ ಪರಿಣಾಮ ಚಿತ್ರರಂಗ ಮತ್ತು ಕಿರಉತೆರೆ ಅಭಿನಯದಿಂದ ದೂರ ಸರಿದರು. ಆದರೆ ಅವರೇ ಹೇಳುವಂತೆ “ನಾನು ಮಾಡಿದ್ದು ಕೆಲವೇ ಚಿತ್ರಗಳಾದರೂ ಆ ಪಾತ್ರಗಳಲ್ಲಿ ನಟಿಸಿದುದೇ ನನಗೆ ಸಾಕಷ್ಟು ತೃಪ್ತಿ ನೀಡಿದೆ. ಇಂದಿಗೂ ಜನರು ನನ್ನನ್ನು ಪ್ರಭಾತ್ ಕಲಾವಿದರ ಮನೆಯವರಾಗಿಯೂ, ಅಮೆರಿಕಾ ಅಮೆರಿಕಾದ ಭೂಮಿಕಾ ಎಂದೋ ಗುರುತಿಸುವುದನ್ನು ಕಂಡಾಗ ಆಗುವ ಸಂತೋಷವೇ ಬೇರೆ.”
ಮುಂದೆ ಪ್ರಭಾತ್ ಕಲಾವಿದರು ಸಂಘದ ಹೆಸರಿನಲ್ಲಿ ಸ್ವಂತ ಜಾಗವೊಂದನ್ನು ಪಡೆದುಕೊಳ್ಳಬೇಕು ಮತ್ತು ಅದರಲ್ಲಿ ಪ್ರಭಾತ್ ಕಲಾವಿದರು ಸ್ಥಾಪಕರಾದ ಗೋಪಿನಾಥ ದಾಸರ ಹೆಸರಿನಲ್ಲಿ ಗುರುಕುಲವೊಂದನ್ನು ಪ್ರಾರಂಭಿಸಬೇಕು ಎನ್ನುವುದು ಹೇಮಾ ಅವರ ಭವಿಷ್ಯದ ಕನಸಾಗಿದೆ.
***
(ನನ್ನ ಈ ಲೇಖನವು ಡಿಸೆಂಬರ್ 2016ರ "ಗೃಹಶೋಭಾ" ಸಂಚಿಕೆಯಲ್ಲಿ ಪ್ರಕಟವಾಗಿತ್ತು. )