ಕನ್ಯಾಕುಮಾರಿ(Kanyakumari )
ಕನ್ಯಾಕುಮಾರಿ ದಕ್ಷಿಣ ಭಾರತದಲ್ಲಿ ಮುಖ್ಯ ಭೂಮಿಯ ತುತ್ತ ತುದಿಯಲ್ಲಿರುವ ಊರು. 'ಕನ್ಯಾಕುಮಾರಿ' ಎಂಬ ಹೆಸರು ಪೌರಾಣಿಕ ಕಥೆಯಿಂದ ಬಂದದ್ದು. ಇದಕ್ಕೆ ಕೇಪ್ ಕೊಮೆರಿನ್ ಎಂಬ ಹೆಸರೂ ಇದ್ದಿತು.ಕೇಪ್ ಕಾಮೊರಿನ್ ಎಂದೇ ಹೆಸರುವಾಸಿಯಾದ ಕನ್ಯಾಕುಮಾರಿ ಭಾರತದ ತಮಿಳುನಾಡಿನಲ್ಲಿದೆ. ಭಾರತದ ದಕ್ಷಿಣದ ತುತ್ತ ತುದಿಯಲ್ಲಿ ಕನ್ಯಾಕುಮಾರಿ ಇದೆ. ಕನ್ಯಾಕುಮಾರಿಯು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಭಿ ಸಮುದ್ರ ಸೇರುವ ಸ್ಥಳದಲ್ಲಿ ಇದೆ. ಇದರ ವಾಯುವ್ಯ ಮತ್ತು ಪಶ್ಚಿಮ ಭಾಗದಲ್ಲಿ ಕೇರಳ ರಾಜ್ಯವಿದ್ದು, ತಿರುನೆಲ್ವೇಲಿ ಜಿಲ್ಲೆಯು ಇದರ ಉತ್ತರ ಮತ್ತು ಪೂರ್ವ ಭಾಗದಲ್ಲಿ ಬರುತ್ತದೆ. ಕೇರಳದ ರಾಜಧಾನಿ ತಿರುವನಂತಪುರಮ್ ಕನ್ಯಾಕುಮಾರಿಯಿಂದ 85 ಕಿ.ಮೀ ದೂರದಲ್ಲಿದೆ.
ಇಲ್ಲಿಂದ ಕಾಣುವ ಸೂರ್ಯೋದಯ, ಸೂರ್ಯಾಸ್ಥಗಳ ದೃಶ್ಯ ರಮಣೀಯ, ಕಡಲ ತಡಿಯ ಮರಳು ರಾಶಿ ಮುತ್ತು ರತ್ನಗಳಂತೆ ಹೊಳೆಯುತ್ತಿರುತ್ತದೆ. ಈ ಭೂಶಿರದಲ್ಲಿ ಸಮುದ್ರಕ್ಕೆ ಎದುರಾಗಿ ದಂಡೆಯ ಮರಳಿನ ಮೇಲೆ ಕುಳಿತು ದೃಷ್ಟಿ ಹರಿದಷ್ಟು ಹಾಯಿಸಿ ನಿರ್ಮಲ ಆಕಾಶ ಹಾಗೂ ಸಮುದ್ರದ ಅಲೆಗಳನ್ನು ವೀಕ್ಷಿಸಿ ಆನಂದಿಸುವುದು ಸುಯೋಗ ಎನ್ನಬಹುದು.ಕನ್ಯಾಕುಮಾರಿ ದೇವಾಲಯದಿಂದಾಗಿ ಈ ಊರಿಗೆ ಅದೇ ಹೆಸರು, ಮಾತೃ ತೀರ್ಥ, ಪಿತೃ ತೀರ್ಥ, ಗಾಯತ್ರಿ ತೀರ್ಥ ಹಾಗೂ ಸಾವಿತ್ರಿ ತೀರ್ಥಗಳು ಇಲ್ಲಿದೆ.
ವಿವೇಕಾನಂದ ರಾಕ್ ಮೆಮೋರಿಯಲ್
ಭಾರತದ ದಕ್ಷಿಣದ ತುತ್ತತುದಿಯಲ್ಲಿ ಕನ್ಯಾಕುಮಾರಿಯಿಂದ ಸುಮಾರು 400 ಮೀಟರ್ ದೂರದಲ್ಲಿ ಹಿಂದೂ ಮಹಾಸಾಗರದಲ್ಲಿರುವ ಬಂಡೆಗಳ ಮೇಲೆ ವಿವೇಕಾನಂದ ರಾಕ್ ಮೆಮೋರಿಯಲ್ ನಿಂತಿದೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಬಂಡೆಯ ಮೇಲೆ ಧ್ಯಾನಾಸಕ್ತರಾಗಿ ಕುಳಿತಿದ್ದರ ಸವಿ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಸ್ಮಾರಕದಲ್ಲಿ ವಿವೇಕಾನಂದರ ಪೂರ್ಣಾಕಾರದ 2.2 ಮೀಟರ್ ಎತ್ತರದ ಕಂಚಿನ ವಿಗ್ರಹವಿದೆ. ನೆಲಮಾಳಿಗೆಯಲ್ಲಿ ಧ್ಯಾನ ಮಂದಿರವಿದೆ. ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಜೀವನ ಹಾಗೂ ಸಾಧನೆಗಳ ಬಗ್ಗೆ ಸಂಬಂಧಿಸಿದ ವಸ್ತುಸಂಗ್ರಹಾಲಯವಿದೆ.
ಕನ್ಯಾಕುಮಾರಿ ತೀರದಲ್ಲಿ ಮತ್ತೊಂದು ಬಂಡೆಯ ಮೇಲಿರುವ ತಮಿಳು ಮಹಾಕವಿ ತಿರುವಳ್ಳುವರ್ 133 ಅಡಿ ಕಾಂಕ್ರೀಟ್‍ನಲ್ಲಿ ನಿರ್ಮಿಸಿರುವ ಬೃಹತ್ ವಿಗ್ರಹವಿದೆ.
ಗಾಂಧಿ ಮಂಟಪ
1848 ಫೆಬ್ರವರಿಯಲ್ಲಿ ಕನ್ಯಾಕುಮಾರಿಯಲ್ಲಿ ಮಹಾತ್ಮಾ ಗಂಧಿಯವರ ಅಸ್ಥಿ ಸಿಂಚನ ನೆರವೇರಿತ್ತು. ಇದರ ಸ್ಮರಣಾರ್ಥ ಆಚಾರ್ಯ ಕೃಪಲಾನಿಯವರಿಂದ ಶಂಕು ಸ್ಥಾಪಿತವಾಗಿ ಗಾಂಡಿ ಮಂಟಪವನ್ನು ನಿರ್ಮಿಸಲಾಗಿದೆ.1956ರಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು ಗಾಂಧಿ ಜಯಂತಿ (ಅಕ್ಟೋಬರ್ 2)ರಂದು ಈ ಕಟ್ಟಡದ ನಡುವಿರುವ ಗಾಂಧಿ ಪ್ರತಿಮೆ ಮೇಲೆ ಕಟ್ಟಡದ ಮೇಲ್ಭಾಗದ ರಂದ್ರ್ದಿಂದ ಸೂರ್ಯನ ಬೆಳಕು ಬೀಳುತ್ತದೆ.
***
ಕನ್ಯಾಕುಮಾರಿ ಎಂದು ಈ ಪ್ರದೇಶಕ್ಕೆ ಹೆಸರು ಬರಲು ಹಿಂದಿನ ಕಾರಣವೆಂದರೆ ಅದು ಪಾರ್ವತಿ ದೇವಿಯ ತಪಸ್ಸು. ಸತಿ ದೇವಿಯ ತಂದೆ ದಕ್ಷ ಪ್ರಜಾಪತಿ ತಾನು ನಡೆಸುತ್ತಿದ್ದ ಯಾಗಕ್ಕೆ ಶಿವನಿಗೆ ಆಹ್ವಾನ ನೀಡಲಿಲ್ಲ ಎಂಬ ಕಾರಣಕ್ಕೆ ಸತಿ ಯಾಗದ ಕುಂಡಕ್ಕೆ ಧುಮುಕಿ ತನ್ನನ್ನೇ ಆಹುತಿ ನೀಡುತ್ತಾಳೆ. ನಂತರ ಸತಿ ದೇವಿಯೇ ಪಾರ್ವತಿಯಾಗಿ ಮತ್ತೆ ಹುಟ್ಟಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು ಮಾಡುತ್ತಾಳೆ. ಶಿವನನ್ನು ಪಡೆಯಲು ಪಾರ್ವತಿ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡಿದ್ದು ಇಂದಿನ ಕನ್ಯಾಕುಮಾರಿ ಪ್ರದೇಶದಲ್ಲೇ. ಆದ್ದರಿಂದಲೇ ಇದಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂತು ಎಂಬ ನಂಬಿಕೆ ಇದೆ.
***
ಹಿಂದೆ ಇದೇ ಪ್ರದೇಶದಲ್ಲಿ ಬಾಣಾಸುರನೆಂಬ ರಾಕ್ಷಸನು ಅಮರತ್ವ ಸಾಧನೆಗಾಗಿ ಈಶ್ವರನನ್ನು ಕುರಿತು ತಪಸ್ಸು ಮಾಡುತ್ತಿದ್ದನು. ದೀರ್ಘಕಾಲದ ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ನಿನಗೆ ಕುಮಾರಿ ಕನ್ಯೆಯಿಂದಲ್ಲದೇ ಇನ್ಯಾರಿಂದಲೂ ಸಾವು ಬಾರದಿರಲಿ ಎಂದು ವರ ಕೊಟ್ಟನು. ಗರ್ವಿತನಾದ ಬಾಣಾಸುರನ ಉಪಟಳ ಮೂರು ಲೋಕದಲ್ಲೂ ಹೆಚ್ಚಾಗುತ್ತದೆ.
ದೇವಾನುದೇವತೆಗಳ ಕೋರಿಕೆಯಂತೆ ಭಗವಾನ್ ವಿಷ್ಣು ಯಜ್ಞವೊಂದನ್ನು ಮಾಡುವಂತೆ ಸೂಚಿಸುತ್ತಾನೆ. ಯಜ್ಞಕುಂಡದಿಂದ ಕನ್ಯಾಕುಮಾರಿ ಜನ್ಮತಾಳುತ್ತಾಳೆ. ಶಂಕರನನ್ನೇ ಮದುವೆಯಾಗಲು ಬಯಸಿ ಕಠೋರ ತಪಸ್ಸನ್ನು ಮಾಡುತ್ತಾಳೆ. ಆದರೆ ಕನ್ಯಾಕುಮಾರಿಯ ತಪಸ್ಸನ್ನು ನಾರದರು ತಡೆಯುತ್ತಾರೆ. ಕೋಪಗೊಂಡ ಕನ್ಯಾಕುಮಾರಿಯ ಕೈಯಲ್ಲಿ ಹಿಡಿದುಕೊಂಡಿದ್ದ ಮಂತ್ರಾಕ್ಷತೆ ಕಾಳುಗಳು ಬಿಳಿ ಮರಳಿನ ಕಣವಾಗುತ್ತವೆ. ಇತ್ತ ಕನ್ಯಾಕುಮಾರಿಯನ್ನು ಪಡೆಯಲು ಬಾಣಾಸುರ ಆಸೆ ಪಡುತ್ತಾನೆ.
ಮದೋನ್ಮತ್ತ ಹಾಗೂ ಕಾಮವಂತನಾಗಿದ್ದ ಬಾಣಾಸುರನೊಂದಿಗೆ ಕನ್ಯಾಕುಮಾರಿ ಯುದ್ಧ ಮಾಡುತ್ತಾಳೆ. ಬಾಣಾಸುರನನ್ನು ವಧೆಗೆ ಕಾರಣಳಾಗುತ್ತಾಳೆ. ಲೋಕ ಕಂಟಕನಾಗಿದ್ದ ಬಾಣಾಸುರನನ್ನು ವಧೆ ಮಾಡುವ ಮೂಲಕ ಆಕೆ ಕನ್ಯಾಕುಮಾರಿಯಾಗಿ ಅದೇ ಸ್ಥಳದಲ್ಲಿ ನೆಲೆಸುತ್ತಾಳೆ.