Monday, October 17, 2022

ನಮ್ಮಲ್ಲಿನ ಸ್ಥಳ ಪುರಾಣಗಳು (Myths)- 116

  ಮುಜಂಗಾವು  (Mujungavu)


ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯಲ್ಲಿದೆ ಮುಜಂಗಾವು ಪಾರ್ಥಸಾರಥಿ ದೇವಾಲಯ ನಾಡಿನೆಲ್ಲೆಡೆಯ ಭಕ್ತರ ಶ್ರದ್ದಾಕೇಂದ್ರವಾಗಿದೆ.  ಮುಜುಂಗಾರೆ ಎಂದು ಕರೆಯಲ್ಪಡುವ ಈ ಸ್ಥಳ ತಾಲ್ಲೂಕು ಕೇಂದ್ರ ಕುಂಬಳೆಯಿಂದ ಪೂರ್ವಕ್ಕೆ ಸುಮಾರು 5 ಕಿಮೀ ದೂರದಲ್ಲಿದೆ.  ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆಯಿಂದ ಬದಿಯಡ್ಕದ ಕಡೆಗೆ ತೆರಳುವ ರಸ್ತೆಯಲ್ಲಿ ೩ ಕಿ.ಮೀ. ಸಂಚರಿಸಿದಾಗ ಸಿಕ್ಕುವ ನಯ್ಯಾಪು ಎನ್ನುವ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ಈ ಕ್ಷೇತ್ರವಿದೆ. ದೇವಾಲಯದಲ್ಲಿ ಪಾರ್ಥಸಾರಥಿ ಹೆಸರಿನಿಂದ ಕೃಷ್ಣನನ್ನು ಆರಾಧಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಚರ್ಮ ರೋಗದ ಪರಿಹಾರಕ್ಕಾಗಿಯೇ ಬರುತ್ತಾರೆ. ಚರ್ಮರೋಗವಿದ್ದಾಗ ದೇವಸ್ಥಾನಕ್ಕೆ ಆಗಮಿಸಿ ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡು ಹರಕೆ ಹೇಳಿಕೊಳ್ಳಬೇಕು.  ದೇವಸ್ಥಾನಕ್ಕೆ ಬರುವ ಭಕ್ತರಿಗೆ ಚರ್ಮರೋಗ ನಿವಾರಣೆ ಆಗಲು ಇಲ್ಲಿನ ಕೆರೆಯೇ ಕಾರಣ ಎಂದು ಇಲ್ಲಿನ ಭಕ್ತರ ನಂಬಿಕೆ. ಹೀಗಾಗಿ ದೇವರ ಮುಂದೆ ನಿಂತು ಹರಕೆ ಕಟ್ಟಿಕೊಳ್ಳುವ ಭಕ್ತರು ಇಲ್ಲಿನ ಕೆರೆಯಲ್ಲಿ ಸ್ನಾನ ಮಾಡಲೇ ಬೇಕು. ಇನ್ನು ಈ ಕೆರೆಯಲ್ಲಿ ಪುಟ್ಟ ಪುಟ್ಟ ಮೀನುಗಳಿದ್ದು, ಹರಕೆ ಹೇಳಿಕೊಳ್ಳುವ ಭಕ್ತರು ಮೀನುಗಳಿಗೆ ದೇವಸ್ಥಾನದಿಂದ ನೀಡಲಾಗುವ ಅಕ್ಕಿ ಹಾಗೂ ಹುರುಳಿಯನ್ನು ನೀಡುತ್ತಾರೆ. ಕೆರೆಗೆ ಸುತ್ತು ಬರುತ್ತಾ ಕೆರೆಗೆ ಹುರುಳಿ, ಅಕ್ಕಿ ಹಾಕುವ ಮೂಲಕ ಪ್ರದಕ್ಷಿಣೆ ಮುಗಿಸಿ ಕೆರೆಯಲ್ಲಿ ಮಿಂದೆದ್ದು ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ತುಲಾ ಸಂಕ್ರಮಣದ ದಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದಲ್ಲಿ ಸೇರುತ್ತಾರೆ. ಅವರು ಪವಿತ್ರ ಕೆರೆಯಲ್ಲಿ  ಸ್ನಾನ ಮಾಡಿ ಭಗವಂತನನ್ನು ಪೂಜಿಸುತ್ತಾರೆ.  

****

ಸೂರ್ಯವಂಶದ ಮಾಂಧಾತ ರಾಜನ ಪುತ್ರನಾದ ಮುಚಕುಂದನು ಪ್ರಬಲನಾಗಿದ್ದರಿಂದ  ದೇವತೆಗಳೂ ಸಹ ಅವನ ನೆರವು ಯಾಚಿಸುತ್ತಿದ್ದರು. ಮುಚಕುಂದನ ಪರಾಕ್ರಮಕ್ಕೆ ಸೋತ ದೇವತೆಗಳು ಹಲವಾರು ಯುದ್ಧಗಳಲ್ಲಿ ಅವನನ್ನು ತಮ್ಮ ಸೇನಾಪತಿಯನ್ನಾಗಿಸಿಕೊಂಡಿದ್ದರು. 

ಆದರೆ ದೇವತೆಗಳ ಸೇನಾಪತಿ ಅಧಿಕಾರವನ್ನು ಮುಚಕುಂದನು ಸುಬ್ರಹ್ಮಣ್ಯನಿಗೆ ಬಿಟ್ಟುಕೊಟ್ಟು ತಾನು ಇಂದಿನ ಮುಜಂಗಾವುವಿನಲ್ಲಿನ ಪ್ರಶಾಂತ ಸ್ಥಳದಲ್ಲಿ ತಪಸ್ಸನ್ನು ಆಚರಿಸತೊಡಗಿದ. ಆ ಸಮಯ ಶ್ರೀಕೃಷ್ಣನೊಮ್ಮೆ ವಿಹಾರದಲ್ಲಿದ್ದ ವೇಳೆ ಈ ಪ್ರದೇಶಕ್ಕೆ ಬಂದಾಗ ಕೃಷ್ಣನನ್ನು ಹಿಂಬಾಲಿಸಿ ಬಂದ ಕಾಲಯವನ ಗುಹೆಯಲ್ಲಿ ತಪಸ್ಸು ಮಾಡುತ್ತಿದ್ದ ಮುಚಕುಂದನನ್ನು ಕೃಷ್ಣ ಎಂದು ಭ್ರಮಿಸಿ ಕಾಲಿನಿಂದ ಒದ್ದನು. ಆಗ ತಪೋಭಂಗವಾಗಿ ಮುಚಕುಂದ ಕಣ್ತೆರೆಯಲು ಕಾಲಯವನನು ಭಸ್ಮವಾಗಿ ಹೋದನು.  ಆಗ ಮುಚಕುಂದನೆದುರು ಶ್ರೀಕೃಷ್ಣನು ಪ್ರತ್ಯಕ್ಷನಾಗಲು ಮುಚಕುಂದ ಆತನಿಗೆ ಮುಳ್ಳುಸೌತೆಯನ್ನು ಸಮರ್ಪಿಸಿದನು. 

ಅಂದಿನಿಂದ ಇಂದಿಗೂ ಇಲ್ಲಿ ಶ್ರೀದೇವರಿಗೆ ಮುಳ್ಳುಸೌತೆ ಸಮರ್ಪಣೆ ವಿಶೇಷವೆನಿಸಿದೆ. ಕೃಷ್ಣನನ್ನು ಕರೆದು ಪ್ರಾರ್ಥಿಸಿದ ಕಾರಣದಿಂದ ಈ ಪ್ರದೇಶ, ಕೆರೆಗೆ ’ಮುಚಕುಂದ ಕೆರೆ’ ಎಂದು ಹೆಸರಾಗಿದೆ. ಅದೇ ಮುಂದೆ ಜನರ ಬಾಯಲ್ಲಿ ’ಮುಜುಂಗೆರೆ’ ಎಂದು ಆಗಿದ್ದಾಗಿ ಹೇಳಲಾಗುತ್ತದೆ. ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯಿಂದ ಈ ಕೆರೆಗೆ ಗುಪ್ತ ಸಂಪರ್ಕವಿದೆ, ಕಾವೇರಿಯು ಇಲ್ಲಿಗೆ ಗುಪ್ತಗಾಮಿನಿಯಾಗಿ ಬರುತ್ತಾಳೆನ್ನ್ಫ಼ುವುದು ಭಕ್ತರ ನಂಬಿಕೆ.