Saturday, October 21, 2023

ಬೆಳ್ಳಿ ತೆರೆ ಮೇಲೆ ಭೈರಪ್ಪ ಅವರ ‘ಪರ್ವ’: ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್

 ಕನ್ನಡದ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಳ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ  ‘ಪರ್ವ’  ಕೃತಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ. 


ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಬರುತ್ತದೆ’ ಎಂದು ಹೇಳಿದ್ದಾರೆ.


ಪಲ್ಲವಿ ಜೋಷಿ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಕಾಶ್ ಇಲ್ಲದೇ ಇದು ಆಗುತ್ತಿರಲಿಲ್ಲ’ ಎಂದರು.


ಎಸ್.ಎಲ್. ಭೈರಪ್ಪ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲೀಷ್ ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನೋ ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಹಾರೈಕೆ ಇದೆ’ ಎಂದರು.  


ಪರ್ವ ಕಾದಂಬರಿಯ ವಿಷಯ ಏನ್ನು ಅನ್ನುವುದು ಓದಿದವರಿಗೆ ಗೊತ್ತೇ ಇದೆ. ಮಹಾಭಾರತವನ್ನ ಆಯಾ ಪಾತ್ರಗಳ ಮೂಲಕ ಮತ್ತೊಮ್ಮೆ ಹೇಳಿರೋದೇ ಈ ಪರ್ವ ಕಾದಂಬರಿಯ ವಿಶೇಷ. ಅಂತಹ ಈ ಒಂದು ಕಾದಂಬರಿಯನ್ನ ಕ್ಲಾಸಿಕ್ ಕೃತಿ ಅಂತಲೇ ಪರಿಗಣಿಸಲಾಗುತ್ತದೆ. ಇದೀಗ ಈ ಪರ್ವ ಕಾದಂಬರಿಗೆ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Friday, October 13, 2023

ಮಹಾಲಯ ಅಮಾವಾಸ್ಯೆವಿಶೇಷ: ದರ್ಭೆಗೆ ಉಂಟು ಎಕ್ಸ್-ರೇ ವಿಕಿರಣಗಳ ತಡೆಯುವ ಶಕ್ತಿ!

 ದರ್ಬೆ ಹುಲ್ಲು ಅಥವಾ ಕುಶ ಹುಲ್ಲನ್ನು ವೈಜ್ಞಾನಿಕವಾಗಿ Desmostachya bipinnata ಎಂದು ಕರೆಯಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲಿ  Halfa grass, Big cordgrass ಎನ್ನಲಾಗುತ್ತದೆ. ಇದು ಮಾನವ ಇತಿಹಾಸದಲ್ಲಿ ಅತ್ಯಂತ ಪ್ರಾಚೀನ ಕಾಲದಿಂದ ಬಳಕೆ ಮಾಡುತ್ತಿರುವ ಹುಲ್ಲಾಗಿದೆ. ಆಯುರ್ವೇದದಲ್ಲಿ, ದರ್ಭೆ ಹುಲ್ಲನ್ನು ಭೇದಿ ಮತ್ತು ಮೆನೊರ್ಹೇಜಿಯಾ ಚಿಕಿತ್ಸೆಗೆ ಔಷಧಿಯಾಗಿ,  ಮೂತ್ರವರ್ಧಕವಾಗಿ (ಮೂತ್ರದ ಮುಕ್ತ ಹರಿವನ್ನು ಉತ್ತೇಜಿಸಲು) ಬಳಸಲಾಗುತ್ತದೆ.


ವೇದ ಕಾಲದಿಂದಲೂ ದರ್ಭೆ ಹುಲ್ಲನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ ಮತ್ತು ಆರಂಭಿಕ ಬೌದ್ಧ ದಾಖಲೆಗಳ ಪ್ರಕಾರ ಬುದ್ಧನು ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದಾಗ ತನ್ನ ಧ್ಯಾನದ ಆಸನಕ್ಕೆ ಬಳಸಿದ ವಸ್ತು ಇದಾಗಿದೆ. ಈ ಹುಲ್ಲನ್ನು ಋಗ್ವೇದದಲ್ಲಿ ಪವಿತ್ರ ಸಮಾರಂಭಗಳಲ್ಲಿ ಬಳಸಲು ಮತ್ತು ಪುರೋಹಿತರು ಮತ್ತು ದೇವರುಗಳಿಗೆ ಆಸನವನ್ನು ಸಿದ್ಧಪಡಿಸಲು ಬಳಸುವುದಕ್ಕೆ ಸೂಚಿಸಲಾಗಿದೆ. ಧ್ಯಾನಕ್ಕೆ ಸೂಕ್ತವಾದ ಆಸನದ ಭಾಗವಾಗಿ ಭಗವದ್ಗೀತೆಯಲ್ಲಿ ದರ್ಭ ಅಥವಾ ಕುಶಾ ಹುಲ್ಲನ್ನು ಭಗವಾನ್ ಕೃಷ್ಣನು ನಿರ್ದಿಷ್ಟವಾಗಿ ಶಿಫಾರಸು ಮಾಡುತ್ತಾನೆ.  ಧ್ಯಾನದ ಸಮಯದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನು ನಮ್ಮ ದೇಹದ ಮೂಲಕ (ಹೆಚ್ಚಾಗಿ ಕಾಲುಗಳು ಮತ್ತು ಕಾಲ್ಬೆರಳುಗಳ ಮೂಲಕ) ನೆಲದತ್ತ ಹೋಗುವುದನ್ನು ಇದು ತಡೆಗಟ್ಟುತ್ತದೆ ಎಂದು ಭಾವಿಸಲಾಗಿದೆ.

ಇತ್ತೀಚಿನ ವೈದ್ಯಕೀಯ ಸಂಶೋಧನೆಯಲ್ಲಿ, ದರ್ಭೆ ಅಥವಾ ಕುಶ ಹುಲ್ಲು ಎಕ್ಸರೇ ಕಿರಣಗಳನ್ನು ಸಹ ತಡೆಯುತ್ತದೆ ಎಂದು ಕಂಡುಬಂದಿದೆ. ವೈದಿಕ ಮಂತ್ರಗಳನ್ನು ಪಠಿಸುವಾಗ, ಹೋಮ ಮತ್ತು ಎಲ್ಲಾ ಧಾರ್ಮಿಕ ಆಚರಣೆಗಳನ್ನು ಮಾಡುವಾಗ ದರ್ಭೆಯನ್ನು ಹಿಂದೂಗಳು ಚಾಪೆಯಾಗಿ, ಬಲಗೈ ಉಂಗುರದ ಬೆರಳಿಗೆ ಉಂಗುರವಾಗಿ ಬಳಸುತ್ತಾರೆ. ಸಾವಿಗೆ ಸಂಬಂಧಿಸಿದ ಸಮಾರಂಭಗಳಿಗೆ ಕೇವಲ ಒಂದೇ ಎಳೆ ದರ್ಭೆಯನ್ನು ಬಳಸಲಾಗುತ್ತದೆ; ಮಂಗಳಕರ ಮತ್ತು ದೈನಂದಿನ ದಿನಚರಿಗಾಗಿ ಎರಡು ಎಳೆಗಳ ಉಂಗುರವನ್ನು ಬಳಸಲಾಗುತ್ತದೆ; ಅಶುಭ ಎಂದರೆ ಮರಣಕ್ಕೆ ಸಂಬಂಧಿಸಿದ ಕಾರ್ಯಗಳಿಗೆ, (ಅಮಾವಾಸ್ಯೆ ತರ್ಪಣ, ಪಿತೃ ಪೂಜೆ ಇತ್ಯಾದಿ) ಮೂರು ಎಳೆಯ ದರ್ಭೆ ಉಂಗುರವನ್ನು (ಪವಿತ್ರ)ಬಳಸಲಾಗುತ್ತದೆ ಮತ್ತು ದೇವಾಲಯದಲ್ಲಿ ಪ್ರಾರ್ಥನೆಗಾಗಿ ನಾಲ್ಕು ಎಳೆಗಳುಳ್ಳ ದರ್ಭೆ ಉಂಗುರವನ್ನು ಬಳಸಲಾಗುತ್ತದೆ.


ದರ್ಭೆಯು ತನ್ನ ತುದಿಯ ಮೂಲಕ ಫೋನೆಟಿಕ್ ಕಂಪನಗಳನ್ನು ಉಂಟುಮಾಡುತ್ತದೆ. ಭಾರತದಲ್ಲಿನ ಪುರೋಹಿತರು ಈ ದಭೆಯ ಭಾಗವನ್ನು ನೀರಿನಲ್ಲಿ ಅದ್ದಿ ಅಶುದ್ದ ಜಾಗವನ್ನು ಮತ್ತು ದೇವಾಲಯವನ್ನು ಸ್ವಚ್ಚಗೊಳಿಸಲು ಎಲ್ಲೆಡೆ ಚಿಮುಕಿಸುತ್ತಾರೆ. 



ಅಗ್ನಿ-ಆಚರಣೆಯ (ಹೋಮ) ಸಮಯದಲ್ಲಿ, ಎಲ್ಲಾ ನಕಾರಾತ್ಮಕ ವಿಕಿರಣಗಳನ್ನು ತಡೆಯಲು ಸಹಾಯ ಮಾಡಲು ಬೆಂಕಿಯ ಎಲ್ಲಾ ನಾಲ್ಕು ಬದಿಗಳಲ್ಲಿ ದರ್ಭೆಯನ್ನು ಇರಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ, ನೀರು ಮತ್ತು ಆಹಾರವನ್ನು ಇರಿಸಿದ ಪಾತ್ರೆಗಳ ಮೇಲೆ ದರ್ಭೆಯನ್ನು ಇರಿಸಲಾಗುತ್ತದೆ, ಆದ್ದರಿಂದ ಗ್ರಹಣದಿಂದ ಕಿರಣಗಳ ನಕಾರಾತ್ಮಕ ಪರಿಣಾಮ ಇವುಗಳ ಮೇಲೆ ಉಂಟಾಗುವುದಿಲ್ಲ. 

ದರ್ಭೆಯನ್ನು ಎಲ್ಲೆಡೆ ಬೆಳೆಸಲಾಗುವುದಿಲ್ಲ ಆದರೆ ಇದು ಆಯ್ದ ಸ್ಥಳಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ ಮತ್ತು ಈಶಾನ್ಯ ಮತ್ತು ಪಶ್ಚಿಮ ಉಷ್ಣವಲಯ ಮತ್ತು ಉತ್ತರ ಆಫ್ರಿಕಾದಲ್ಲಿ (ಅಲ್ಜೀರಿಯಾ, ಚಾಡ್, ಈಜಿಪ್ಟ್, ಎರಿಟ್ರಿಯಾ, ಇಥಿಯೋಪಿಯಾ, ಲಿಬಿಯಾ, ಮಾರಿಟಾನಿಯಾ, ಸೊಮಾಲಿಯಾ, ಸುಡಾನ್ ಮತ್ತು ಟುನೀಶಿಯಾದಲ್ಲಿ) ಬೆಳೆಯುತ್ತದೆ. ಮಧ್ಯಪ್ರಾಚ್ಯ, ಮತ್ತು ಸಮಶೀತೋಷ್ಣ ಮತ್ತು ಉಷ್ಣವಲಯದ ಏಷ್ಯಾದ ದೇಶಗಳು (ಅಫ್ಘಾನಿಸ್ತಾನ, ಚೀನಾ, ಭಾರತ, ಇರಾನ್, ಇರಾಕ್, ಇಸ್ರೇಲ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಸೌದಿ ಅರೇಬಿಯಾ, ಥೈಲ್ಯಾಂಡ್).ಗಳಲ್ಲಿ ಸಹ ಇದು ಲಭ್ಯವಿದೆ. 

ಧಾರ್ಮಿಕ ಉದ್ದೇಶಗಳಿಗಾಗಿ, ಇದನ್ನು ಪ್ರತಿದಿನ ಕೀಳುವಂತಿಲ್ಲ ಬದಲಾಗಿ ಕೃಷ್ಣ ಪಕ್ಷ ಪಾಡ್ಯಮಿಯಂದು (ಹುಣ್ಣಿಮೆಯ ಮರುದಿನ) ಮಾತ್ರ ಇದನ್ನು ಕೀಳಬಹುದಾಗಿದೆ. 

Tuesday, October 10, 2023

ಪತ್ರಕರ್ತ ಶರಣು ಹುಲ್ಲೂರರ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ ಕೃತಿ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್

ಸಿನಿಮಾ ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ ಚಿತ್ರರಂಗದ ಕುರಿತಾದ ಮತ್ತೊಂದು ಕೃತಿ ಲೋಕಾರ್ಪಣೆಯಾಗಿದೆ. ‘ಕನ್ನಡದ 100 ಸ್ಮರಣೀಯ ಸಿನಿಮಾಗಳು- ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಹೆಸರಿನ ಕೃತಿಯನ್ನು ವರ್ಣಿರಂಜಿತ ಸಮಾರಂಭದಲ್ಲಿ ಖ್ಯಾತ ನಟ ರಮೇಶ್ ಅರವಿಂದ್ ಮತ್ತು ಹಿರಿಯ ಪತ್ರಕರ್ತ ಜೋಗಿ ಬಿಡುಗಡೆ ಮಾಡಿದರು. 


ಈ ಕೃತಿಯಲ್ಲಿ ಒಟ್ಟು ನೂರು ಸಿನಿಮಾಗಳ ವಿಶ್ಲೇಷಣೆ ಇದೆ. ಈ ಸಿನಿಮಾವನ್ನು ಯಾಕಾಗಿ ನೋಡಬೇಕು? ಸಿನಿಮಾದ ವಿಶೇಷತೆ ಏನು? ಅದರ ಹಿನ್ನೆಲೆ, ಕಲಾವಿದರ, ತಂತ್ರಜ್ಞರ ಶ್ರಮ, ಸಿನಿಮಾದ ಕುತೂಹಲದ ಅಂಶಗಳು, ಅಪರೂಪದ ಸಂಗತಿಗಳನ್ನು ಒಳಗೊಂಡಿದೆ. ಮೂಕಿ ಸಿನಿಮಾ ಕಾಲದಿಂದ ಕಳೆದ ವರ್ಷದವರೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ 100 ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈವರೆಗೂ ನೋಡಿರದೇ ಇರುವಂತಹ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ. 


ಕೃತಿಯ ಕುರಿತು ಮಾತನಾಡಿದ ರಮೇಶ್ ಅವರಿಂದ್, ‘ಶರಣು ಹುಲ್ಲೂರು ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅವರು ಸಿನಿಮಾಗಳನ್ನು ಗ್ರಹಿಸುವ ರೀತಿ, ಅವುಗಳ ವಿಶ್ಲೇಷಣೆ ಮತ್ತು ಸಿನಿಮಾ ನೋಡಿಸುವ ಆಸಕ್ತಿಯೇ ಇಂಥದ್ದೊಂದು ಪುಸ್ತಕ ಬರುವುದಕ್ಕೆ ಸಾಧ್ಯ. ನೋಡಲು ಮರೆಯದಿರಿ ಮರೆತು ನಿರಾಶಾರಾಗದಿರಿ ಕೃತಿಯಲ್ಲಿ ಅಪರೂಪದ ಸಿನಿಮಾಗಳ ಕುರಿತಾಗಿ ಬರೆದಿದ್ದಾರೆ. ಹಾಗಾಗಿ ಈ ಪುಸ್ತಕವನ್ನು ಓದಲು ಮರೆಯದಿರಿ ಮರೆತು ನಿರಾಶಾರಾಗದಿರಿ’ ಎಂದರು.


‘ಆ ಕಾಲ ಮತ್ತು ಈ ಕಾಲದ ಮೆಚ್ಚಿನ ನೂರು ಸಿನಿಮಾಗಳನ್ನು ಗೆಳೆಯ, ಸಹೋದ್ಯೋಗಿ ಶರಣು ಹುಲ್ಲೂರು ಈ ಪುಸ್ತಕದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ನನ್ನ ಮೆಚ್ಚಿನ ಸಿನಿಮಾಗಳು ಇಲ್ಲಿರುವುದನ್ನು ನೋಡಿ ರೋಮಾಂಚನಗೊಂಡಿದ್ದೇನೆ. ನಾನು ಮೆಚ್ಚಿದ ಕೆಲವು ಸಿನಿಮಾಗಳು ಇಲ್ಲಿಲ್ಲವಲ್ಲ ಅಂತ ಆಶ್ಚರ್ಯಪಟ್ಟಿದ್ದೇನೆ. ಈ ಸಿನಿಮಾ ನನಗೆ ನೆನಪೇ ಇರಲಿಲ್ಲವಲ್ಲ ಅಂತ ಬೆರಗಾಗಿದ್ದೇನೆ. ಶರಣು ಹುಲ್ಲೂರು ಅಸಾಧ್ಯ ಜೀವಂತಿಕೆಯ, ಹೊಸತನಗಳ ಹುಡುಕಾಟದ, ಬರೆಯುವ ಹುರುಪು ಉಳಿಸಿಕೊಂಡ ಲವಲವಿಕೆಯ ಗೆಳೆಯ. ಈ ಪುಸ್ತಕ ಅವರ ಸಿನಿಮಾ ಪ್ರೀತಿಗೆ ಮತ್ತೊಂದು ಸಾಕ್ಷಿ. ಇದು ಚಿಗುರಿಸಿದ ನೆನೆಪುಗಳಲ್ಲಿ ನಾನು ನನ್ನ ತಾರುಣ್ಯಕ್ಕೆ ಮರಳಿದ್ದೇನೆ’ ಎಂದು ಹಿನ್ನುಡಿಯಲ್ಲಿ ಜೋಗಿ ಬರೆದಿದ್ದಾರೆ. 


ಬೆಂಗಳೂರಿನ ಸಾವಣ್ಣ ಪ್ರಕಾಶನದಿಂದ ಈ ಪುಸ್ತಕ ಬಿಡುಗಡೆ ಆಗಿದ್ದು, ಈ ಹಿಂದೆ ಇದೇ ಪ್ರಕಾಶನ ಸಂಸ್ಥೆಯಿಂದ ಶರಣು ಹುಲ್ಲೂರ ಅವರ  ‘ಅಂಬರೀಶ್’ ಬಯೋಗ್ರಫಿ ಮತ್ತು ‘ನೀನೇ ರಾಜಕುಮಾರ’ ಪುನೀತ್ ರಾಜಕುಮಾರ್ ಬಯೋಗ್ರಫಿ ಕೂಡ ಹೊರ ಬಂದಿದೆ. ಸಾವಣ್ಣ ಪ್ರಕಾಶನದಿಂದ ಹೊರ ಬರುತ್ತಿರುವ ಶರಣು ಅವರ ಮೂರನೇ ಸಿನಿಮಾ ಕೃತಿ ಇದಾಗಿದೆ. 


ಇದೇ ಸಂದರ್ಭದಲ್ಲಿ ಗಂಗಾವತಿ ಪ್ರಾಣೇಶ್, ಜಮೀಲ್ ಸಾವಣ್ಣ, ರಂಗಸ್ವಾಮಿ ಮೂಕನಹಳ್ಳಿ, ವಿರೂಪಾಕ್ಷ ದೇವರಮನೆ, ಶ್ವೇತಾ ಬಿ.ಸಿ, ವಸಂತ್ ಗಿಳಿಯಾರ್, ಜಗದೀಶ್ ಶರ್ಮಾ ಸಂಪ ಅವರ ಕೃತಿಗಳು ಬಿಡುಗಡೆಯಾದವು.