Monday, December 09, 2024

ಅಣ್ಣಾವ್ರ ಅಪಹರಣ ಪ್ರಹಸನಕ್ಕೆ ಸಾಕ್ಷಿಯಾಗಿದ್ದ ಎಸ್.ಎಂ. ಕೃಷ್ಣ!

ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನರಾಗಿದ್ದಾರೆ. ಸಿನಿಮಾ ರಂಗದೊಂದಿಗೆ ನೇರವಾಗಿ ತೊಡಗಿಸಿಕೊಂಡಿಲ್ಲದಿದ್ದರೂ ಅವರಿಗೆ ಪರೋಕ್ಷವಾಗಿ ಚಿತ್ರರಂಗದೊಂದಿಗೆ ಸಂಪರ್ಕವಿತ್ತು. ಅದರಲ್ಲಿಯೂ ಇವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡಾ. ರಾಜ್ ಕುಮಾರ್ ಅಪಹರಣ ಹಾಗೂ ಬಿಡುಗಡೆ ಘಟನೆ ಬಹಳ ಸುದ್ದಿಯಾಗಿತ್ತು. 


ವರನಟ ಡಾ. ರಾಜ್​ಕುಮಾರ್ ಅವರು ಅಪಹರಣ ಆಗಿದ್ದು ಕೃಷ್ಣ ಅವರ ಅಧಿಕಾರ ಅವಧಿಯಲ್ಲೇ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರು ವರ್ಷವೇ ವೀರಪ್ಪನ್ ಕಡೆಯಿಂದ ಅಣ್ಣಾವ್ರು ಕಿಡ್ನ್ಯಾಪ್ ಆಗಿತ್ತು.  ಜುಲೈ 30, 2000ನೇ ಇಸವಿ. ಅಂದು ಭೀಮನ ಅಮಾವಾಸ್ಯೆ. ತಮ್ಮ 71ನೇ ವಯಸ್ಸಿನಲ್ಲಿ ಇಂಥದ್ದೊಂದು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಬಹುದು ಎಂಬ ಸಣ್ಣ ಸುಳಿವು ಕೂಡ ಆ ಮಹಾನ್ ನಟನಿಗೆ ಇರಲಿಲ್ಲ. ಗಾಜನೂರಿನ ತಾಳವಾಡಿ ಬಳಿಯ ತೋಟದ ಮನೆಯಿಂದ ರಾಜಕುಮಾರ್ ಮತ್ತು ಇತರ ಮೂವರನ್ನು ವೀರಪ್ಪನ್ ಅಪಹರಿಸಿದ್ದ. ವೀರಪ್ಪನ್ 108 ದಿನಗಳ ಕಾಲ ಅಣ್ಣಾವ್ರನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ. ಆ ದಿನಗಳ ಬಗ್ಗೆ ಈಗಲೂ ಚರ್ಚೆಗಳು ಆಗುತ್ತವೆ. ರಾಜ್​ಕುಮಾರ್ ಅವರಿಗೂ ಕರ್ನಾಟಕ ಸರ್ಕಾರಕ್ಕೂ ಒಂದು ಒಪ್ಪಂದ ಆಗಿತ್ತು. ಆದರೆ, ಇದನ್ನು ಅಣ್ಣಾವ್ರು ಮೀರಿದಾಗ ತೊಂದರೆ ಎದುರಾಗಿತ್ತು. ಅಲ್ಲದೆ ಡಾ. ರಾಜ್​ಕುಮಾರ್ ಅವರು ಅಪಹರಣ ಆಗಿದ್ದ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್​ಎಂ ಕೃಷ್ಣ ವರನಟ ಕಾಡಿನಲ್ಲಿದ್ದಷ್ಟೂ ದಿನ ಸರಿಯಾಗಿ ನಿದ್ದೆ ಮಾಡಿರಲಿಲ್ಲ.  ಜನಪ್ರಿಯ ನಟ, ಓರ್ವ ಪ್ರಸಿದ್ದ ವ್ಯಕ್ತಿಯನ್ನು ಕಾಡುಗಳ್ಳನೊಬ್ಬ ಅಷ್ಟು ಸುಲಭವಾಗಿ ಅಪಹರಿಸಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ವಿಚಾರ ರಾಜ್ಯ ಸರ್ಕಾರಕ್ಕೆ ತೀವ್ರಮುಜುಗರ ತಂದಿತ್ತು. ಅವರು ಮರಳದಿದ್ದರೆ ಮುಂದೇನು ಎನ್ನುವ ಭಯ ಎಸ್​ಎಂ ಕೃಷ್ಣ ಅವರನ್ನು ಬಹುವಾಗಿ ಕಾಡಿತ್ತು. 108 ದಿನ ಅವರು ಸರಿಯಾಗಿ ನಿದ್ದೆ ಮಾಡದೆ ಒದ್ದಾಡಿದ್ದರು. ರಾಜ್​ಕುಮಾರ್ ಮರಳಿದ ಬಳಿಕ ಕೃಷ್ಣ ಅವರಿಗೆ ನಿರಾಳವಾಗಿತ್ತು.  


ತೋಟದ ಮನೆಯಿಂದ ರಾಜಕುಮಾರ್ ಮತ್ತು ಇತರರನ್ನು ಅಪಹರಿಸಿದ ವೀರಪ್ಪನ್, ಕ್ಯಾಸೆಟ್ ವೊಂದನ್ನು ಪಾರ್ವತಮ್ಮ ಅವರಿಗೆ ನೀಡಿದ್ದ. ಅದನ್ನು ಆಗಿನ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಬಳಿ ತಂದುಕೊಟ್ಟಿದ್ದರು ಆಕೆ. ಆಗ ಗೃಹ ಸಚಿವರಾಗಿದ್ದವರು ಮಲ್ಲಿಕಾರ್ಜುನ ಖರ್ಗೆ. ಇಡೀ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಯಿತು. ತಮ್ಮದೇ ಮನೆಯ ಹಿರಿಯ ಸದಸ್ಯರೊಬ್ಬರನ್ನು ಕಾಡು ಮೃಗವೊಂದು ಅಪಹರಿಸಿದೆ ಎಂಬ ಸಿಟ್ಟು ವ್ಯಕ್ತವಾಗುತ್ತಿತ್ತು. ವೀರಪ್ಪನ್ ಇದ್ದ ಕಾಡಿಗೇ ನುಗ್ಗಿ, ರಾಜಕುಮಾರ್ ರನ್ನು ವಾಪಸ್ ಕರೆದುಕೊಂಡು ಬರ್ತೀವಿ ಎಂದು ಅಭಿಮಾನಿಗಳು ಅಬ್ಬರಿಸಿದರು. ಅವರಿಗೆ ಸಣ್ಣ ಮಟ್ಟದ ಸಮಸ್ಯೆಯಾದರೂ ರಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ. ಅಷ್ಟೇ ಅಲ್ಲ, ಕರ್ನಾಟಕ-ತಮಿಳುನಾಡು ಮಧ್ಯೆ ತಣಿಸಲಾಗದ ದ್ವೇಷದ ದಳ್ಳುರಿ ಹೊತ್ತಿಕೊಳ್ಳುತ್ತದೆ ಎಂಬ ಆತಂಕ ಎದುರಾಯಿತು. "ಅವರನ್ನು ಬಿಡಿಸಿಕೊಂಡು ಬರಲು ಸ್ವತಃ ನಾನೇ ವೀರಪ್ಪನ್ ಜತೆಗೆ ಮಾತನಾಡಲು ಸಿದ್ಧ" ಎಂದರು ರಜನೀಕಾಂತ್. ಇನ್ನು ಆಗ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಎಂ.ಕರುಣಾನಿಧಿ ಅವರನ್ನು ರಾಜ್ ಕುಟುಂಬದವರ ಜತೆಗೆ ತೆರಳಿ ಎಸ್ಸೆಂ ಕೃಷ್ಣ ಭೇಟಿಯಾದರು. ಈ ಪ್ರಕರಣದ ಸುಖಾಂತ್ಯಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು. ಆ ನೂರೆಂಟು ದಿನಗಳ ಕಾಲವೂ ಚಿತ್ರರಂಗದ ಚಟುವಟಿಕೆ ಸ್ತಬ್ಧವಾಯಿತು. ಸರಕಾರದ ಮೇಲೆ ನಿರಂತರವಾಗಿ ಒತ್ತಡ ಬೀಳುತ್ತಲೇ ಇತ್ತು. ಜತೆಗೆ ದಿನಕ್ಕೊಂದು ವದಂತಿಗೆ ರೆಕ್ಕೆ-ಪುಕ್ಕ. ಕ್ಯಾಸೆಟ್ ಬಿಡುಗಡೆ ಮಾಡುತ್ತಾ ತನ್ನ ಬೇಡಿಕೆಯನ್ನು ಇಡುತ್ತಿದ್ದ ವೀರಪ್ಪನ್. ಆತನ ಜತೆಗೆ ಸಂಧಾನ ನಡೆಸುವುದಕ್ಕೆ ಪತ್ರಕರ್ತ ನಕ್ಕೀರನ್ ಗೋಪಾಲನ್ ನ ಕಳುಹಿಸಲಾಯಿತು. ಆದರೆ ಆ ಬಾರಿ ವೀರಪ್ಪನ್ ಬಹಳ ಷರತ್ತುಗಳನ್ನು ಹಾಕುತ್ತಲೇ ಇದ್ದ. 71ನೇ ವಯಸ್ಸಿನಲ್ಲಿ ರಾಜಕುಮಾರ್ ರ ದೇಹಾರೋಗ್ಯವೇ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಅವರನ್ನು ಅಲ್ಲಿ ನೋಡಿದರಂತೆ, ಇಲ್ಲಿ ನೋಡಿದರಂತೆ ಎಂಬ ಸುದ್ದಿಗಂತೂ ಕೊರತೆ ಇರಲಿಲ್ಲ. ಈ ಎಲ್ಲದರ ಮಧ್ಯೆ ಬೆಚ್ಚಿಬೀಳಿಸುವ ಮತ್ತೊಂದು ಘಟನೆ ನಡೆಯಿತು. ಅಪಹರಣವಾಗಿದ್ದ ನಾಲ್ವರ ಪೈಕಿ ಒಬ್ಬರಾಗಿದ್ದ ನಾಗಪ್ಪ ಮಾರಡಗಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. ಇದರಿಂದ ವೀರಪ್ಪನ್ ಗೆ ಮತ್ತೂ ಸಿಟ್ಟು ಬರಬಹುದು. ಪಟ್ಟು ಬಿಡದಂತೆ ಆಗಬಹುದು ಎಂಬ ಆತಂಕ ಶುರು ಆಯಿತು.


ಚಿತ್ರರಂಗದ ಕಾರ್ಮಿಕರಿಂದ ಮೊದಲುಗೊಂಡು ದೊಡ್ಡ ನಟರ ತನಕ ಪ್ರತಿಭಟನೆ, ಆಕ್ರೋಶ, ಪೂಜೆ-ಪುನಸ್ಕಾರ ಎಲ್ಲದರಲ್ಲೂ ಪಾಲ್ಗೊಂಡರು. ನಕ್ಕೀರನ್ ಗೋಪಾಲ್ ಸಂಧಾನದ ಸಲುವಾಗಿ ಹೋಗಿಬರುತ್ತಿದ್ದದ್ದೇ ಆಯಿತು ಹೊರತು ಯಾವುದೂ ಫಲಪ್ರದ ಆಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಯಿತು. ಇನ್ನು ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ನಾಗಪ್ಪ ಮಾರಡಗಿ ಬಗ್ಗೆ ಕೆಲವರು ಸಿಟ್ಟಾದರು. ಶ್ರೀಲಂಕಾದ ಎಲ್ ಟಿಟಿಇ ಜತೆಗೆ ವೀರಪ್ಪನ್ ಸಂಪರ್ಕ ಸಾಧಿಸಿದ್ದಾನೆ. ಇನ್ನೇನು ಆತನ ಜಾಲ ವಿಸ್ತರಣೆ ಆಗಿ, ದೇಶ ಬಿಟ್ಟು ಹೋಗುವುದಕ್ಕೆ ಎಲ್ಲ ಸಿದ್ಧತೆ ಆಗಿಹೋಗಿದೆ ಎಂಬ ಚರ್ಚೆ ಶುರು ಆಯಿತು. ಆ ಸಂದರ್ಭದಲ್ಲೇ ರಾಜಕುಮಾರ್ ಬಿಡುಗಡೆ ಆದರಂತೆ ಎಂಬ ವದಂತಿ ಹಲವು ಅಲ ಹರಿದಾಡಿತು. ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿ ಹಾಳಾಗಿದೆ ಎಂಬ ಸುದ್ದಿಯೂ ದೊಡ್ಡ ಸದ್ದು ಮಾಡಿತು.ಅಂತಿಮವಾಗಿ ವೀರಪ್ಪನ್ ಜತೆಗೆ ಸಂಧಾನ ನಡೆಸುವುದಕ್ಕೆ ನೆಡುಮಾರನ್, ಡಾ.ಭಾನು ಮತ್ತಿತರರು ತೆರಳಿದರು. ಈ ಬಾರಿ ತೆರಳಿದ ಗುಂಪಿನ ಬಗ್ಗೆ ವೀರಪ್ಪನ್ ಗೆ ವಿಶೇಷವಾದ ಗೌರವ ಇತ್ತು ಎಂಬುದು ಆತ ಅವರ ಜತೆ ನಡೆದುಕೊಂಡ ರೀತಿಯಿಂದಲೇ ತಿಳಿಯುತ್ತಿತ್ತು. ನೂರೆಂಟು ದಿನಗಳನ್ನು ಕಾಡಿನಲ್ಲಿ ಕಳೆದ ಮಹಾನ್ ನಟನನ್ನು ವೀರಪ್ಪನ್ ಶಾಲು ಹೊದಿಸಿ ಕಳುಹಿಸಿಕೊಟ್ಟ. ತನ್ನ ಬಿಡುಗಡೆಗೆ ಶ್ರಮಿಸಿದ ಡಾ.ಭಾನುರನ್ನು ರಾಜಕುಮಾರ್ ಅವರು, ಶಕ್ತಿದೇವತೆ ಎಂದು ಕರೆದರು. ಬಿಡುಗಡೆ ಆಗಿ ಬಂದ ನಂತರ ರಾಜಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಪಹರಣದ ಆಘಾತ ಅವರನ್ನು ಜರ್ಝರಿತನ್ನಾಗಿ ಮಾಡಿತ್ತು. ಆ ಸಂದರ್ಭದಲ್ಲಿ ಅವರು ಆಡಿದ ಕೆಲ ಮಾತುಗಳು ವಿವಾದಕ್ಕೆ ಕಾರಣ ಆದವು. ವಯೋಸಹಜವಾಗಿ ಭಾವನಾತ್ಮಕ ಮಾತುಗಳನ್ನು ಆಡಿದ್ದರು. ಅಲ್ಲಿಂದ ಆಚೆಗೆ ಮಾಧ್ಯಮಗಳಿಂದ ಒಂದು ಅಂತರ ಶುರು ಆಯಿತು. ವೀರಪ್ಪನ್ ಬದುಕಿರುವ ತನಕ ರಾಜಕುಮಾರ್ ಮತ್ತೆ ಗಾಜನೂರಿಗೆ ಹೋಗಲಿಲ್ಲ. ಅಭಿಮಾನಿಗಳ ಜತೆಗೂ ಸಲೀಸಾಗಿ ಬೆರೆಯಲು ಸಾಧ್ಯವಾಗುತ್ತಿರಲಿಲ್ಲಎನ್ನುವುದು ಖೇದದ ಸಂಗತಿ.

ಹೀಗೆ ಒಟ್ಟಾರೆ ಆ ದಿನಗಳಲ್ಲಿ ಎಸ್.ಎಂ. ಕೃಷ್ಣ ಅವರ ಸರ್ಕಾರ ಹಾಗೂ ವೈಯುಕ್ತಿಕವಾಗಿ ಕ್ರ್‍ಷ್ಣ ಅವರು ಅನುಭವಿಸಿದ ಮುಜುಗರದ ಸನ್ನಿವೇಶಗಳು ಇಂದೂ ನೆನಪಿನಲ್ಲಿಳಿಯುವ ಒಂದು ದ್ರಂತ ಎನ್ನಬಹುದು. 

No comments:

Post a Comment