- ರಾಘವೇಂದ್ರ ಅಡಿಗ ಎಚ್ಚೆನ್.
ಸುದರ್ಶನ ದೇಸಾಯಿರವರು ಕನ್ನಡದ ಪತ್ತೆದಾರಿ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಹೆಸರನ್ನು ಸಂಪಾದಿಸಿದವರು. ಸುದರ್ಶನ ದೇಸಾಯಿ ಅವರು. ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯಲ್ಲಿನ ರೋಚಕವಾದ,ಕುತೂಹಲಕಾರಿ ಕಥಾ ವಸ್ತುಗಳು ಓದುಗರನ್ನು ಬಹಳವಾಗಿಯೇ ಆಕರ್ಷಿಸಿದ್ದವು. ಕನ್ನಡದ ಪತ್ತೇದಾರಿ ಲೇಖಕರನ್ನು ಒಟ್ಟುಗೂಡಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಪ್ರಥಮ ಪತ್ತೇದಾರಿ ಸಾಹಿತ್ಯ ಸಮ್ಮೇಳನವನ್ನು ಇವರು ನೆರವೇರಿಸಿದ್ದರು. ಇವರ ಹಳದಿ ಚೇಳು,ಕೆಂಪು ಜೇಡ,ಅಗ್ನಿ ಪರ್ವತ, ಕೆರಳಿದ ಸರ್ಪ, ವಿಚಿತ್ರ ಅಪರಾಧಿ ಮುಂತಾದ ಕೃತಿಗಳು ಸಾಕಷ್ಟು ಜನಪ್ರಿಯತೆ ಗಳಿಸಿದವು. ಇವುಗಳಲ್ಲಿ 'ಹಳದಿ ಚೇಳು' ಕಾದಂಬರಿಯಂತೂ ಅಪಾರ ಜನಪ್ರಿಯತೆ ಗಳಿಸಿತ್ತು. ಹೀಗಾಗಿ ಅವರು ತಮ್ಮ ನಿವಾಸಕ್ಕೆ ಅವರು 'ಹಳದಿ ಚೇಳು' ಎಂದೇ ಹೆಸರಿಟ್ಟಿದ್ದರು.
1979ರಲ್ಲಿ ಬರೆದ ಮನೋವೈಜ್ಞಾನಿಕ ಕಾದಂಬರಿ ‘ತಿರುವು’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡನಂತರ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರವರು ಇದೇ ಕಾದಂಬರಿಯನ್ನು ಆಧರಿಸಿ ‘ಮಾನಸ ಸರೋವರ’ ಎಂಬ ಹೆಸರಿನಿಂದ ಚಿತ್ರವನ್ನು ನಿರ್ದೇಶಿಸಿದರು. ಇವರ ಮೊದಲ ಸಾಮಾಜಿಕ ಕಾದಂಬರಿ ‘ಹಾಲಿನ ಕಡಲು ಜೀನಿನ ಒಡಲು’. ನಂತರ ‘ನೀರ ಮೇಲಿನ ಹೆಜ್ಜೆ’, ‘ಸಂಜೆ ಮಲ್ಲಿಗೆ’, ‘ಅಮರದೀಪ, ‘ಸೇವಕ’, ‘ಎಂಟೆದೆ ಬಂಟ’(ಚಲನಚಿತ್ರವಾಗಿದೆ) , ‘ಅಗ್ನಿ ಪರ್ವತ’ ಮುಂತಾದ 20ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ದೇಸಾಯರ ಜನಪ್ರಿಯ ಕಾದಂಬರಿಗಳಲ್ಲಿ ‘ಶರವೇಗದ ಸರದಾರ’ವೂ ಒಂದು. ಕುಮಾರ ಬಂಗಾರಪ್ಪ ಅವರ ನಾಯಕತ್ವದಲ್ಲಿ ಅದು ಚಲನಚಿತ್ರವಾಯಿತು ( ನಟ ಸಿ. ಆರ್. ಸಿಂಹ ಅದರ ನಿರ್ದೇಶಕ.) ಅವರ ನೂರನೇ ಕೃತಿ ‘ಸಾಂವಿ'. ಪತ್ತೇದಾರಿ ಸಾಹಿತ್ಯ ಕುರಿತು ("ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯ" ) ನೂರು ವರ್ಷದ ಇತಿಹಾಸ ಬರೆದಿದ್ದಾರೆ. ಇದೊಂದು ಸಂಶೋಧನಾತ್ಮಕ ಆಕರ ಗ್ರಂಥವಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಇವರಿಗೆ "'ಆದರ್ಶ ಶಿಕ್ಷಕ' ಎಂದು ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಅಲ್ಲದೆ ರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ಬಂದಿತ್ತು. ಎರಡು ಬಾರಿ ಪತ್ತೇದಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದಇವರ ಮನೆ 'ಹಳದಿ ಚೇಳು' ವಿನ ಸುತ್ತಮುತ್ತಲಿನ ಪ್ರದೇಶಕ್ಕೆ ಧಾರವಾಡ ನಗರಪಾಲಿಕೆಯು "ಸುದರ್ಶನ ದೇಸಾಯಿ ಕಾಲನಿ" ಎಂದು ನಾಮಕರಣ ಮಾಡಿದೆ.
ಇಂತಹಾ ಲೇಖಕರ ಹಳದಿ ಚೇಳು ಕೃತಿ ಇಂದಿಗೂ ಬಹು ವಿಶಿಷ್ಟವಾಗಿ ಓದಿಸಿಕೊಳ್ಳುವ ಪುಸ್ತಕವೆಂದರೆ ತಪ್ಪಲ್ಲ. ಈ ಮೊದಲೇ ಹೇಳಿದಂತೆ ಲೇಖಕರಿಗೆ ಬಹಳ ಪ್ರಸಿದ್ಧಿ ತಂದು ಕೊಟ್ಟ ಪತ್ತೇದಾರಿ ಕೃತಿಯಿದು. ಇದನ್ನು ಜೇಮ್ಸ್ ಬಾಂಡ್ ಶೈಲಿಯ ಚಲನಚಿತ್ರವಾಗಿ ಸಹ ನಿರ್ಮಾಣ ಮಾಡುವಷ್ಟು ಸಾಹಸ, ಪ್ರಣಯ, ರೋಚಕತೆ, ದೇಶಭಕ್ತಿ, ಭಾವುಕತೆ ಹಾಗೂ ರೋಮಾಂಚಕ ಅಂಶಗಳನ್ನು ಒಳಗೊಂಡಿದೆ. ಅತ್ಯಂತ ರೋಚಕತೆ ಜೊತೆಗೆ ರಕ್ತಪಾತದಿಂದ ಕೂಡಿದ ಕಥಾವಸ್ತುವಿದು. ಓದುಗರು ಊಹೆ ಮಾಡಲೂ ಸಾಧ್ಯವಿರದ ತಿರುವುಗಳಿವೆ. ಒಂದಷ್ಟು ಕಾಮಭರಿತ ಸನ್ನಿವೇಶಗಳನ್ನು ತುರುಕಲಾಗಿದೆ ಎನ್ನಿಸಿತು. ಹೇಮಂತನ ಪ್ರಳಯ ರುದ್ರನಂತಹ ವರ್ತನೆ, ಶತ್ರುಗಳನ್ನು ಶಿಕ್ಷಿಸಲು ಅವನು ಬಳಸುವ ವಿವಿಧ ಕ್ರೂರ ವಿಧಾನಗಳು, ಗುಪ್ತಚರ ಏಜೆಂಟರು ಬಳಸುವ ಹಲವು ಬಗೆಯ ಸಲಕರಣೆಗಳು, ಮೃತ್ಯು ಕಣ್ಣೆದುರು ತಾಂಡವವಾಡುತ್ತಿದ್ದರೂ ಅಂಜದ ಆ ನಡೆ, ಅಲ್ಲದೇ ಪ್ರತೀ ಬಾರಿಯೂ ಸಾವನ್ನು ಗೆದ್ದು ಬಂದು ಶತ್ರುಗಳಿಂದಲೇ ಪ್ರಶಂಸೆಗೆ ಒಳಗಾಗುವ ಆ ಅಸೀಮ ಧೈರ್ಯ ಹಾಗೂ ದೇಶಭಕ್ತಿಯ ಕಿಚ್ಚು... ಎಲ್ಲವೂ ಓದುಗರನ್ನು ಬಿಟ್ಟೂ ಬಿಡದೇ ಓದಿಸಿಕೊಂಡು ಹೋಗುತ್ತದೆ.
ಇನ್ನು ಇವರದೇ ಕಾದಂಬರಿ ಆಧರಿಸಿ ಅನೇಕ ಚಲನಚಿತ್ರಗಳೂ ಬಂದಿವೆ. ಅವುಗಳಲ್ಲಿ ಕೆಲವು ಮೇಲೆ ಹೆಸರಿಸಲಾಗಿದೆ. ಮತ್ತು ಈ ಕೆಳಗೆ ಅವುಗಳ ಸಂಪೂರ್ಣ ಪಟ್ಟಿ ಇದೆ-
ಶ್ರೀನಾಥ್, ಪದ್ಮಾವಾಸಂತಿ, ರಾಮಕೃಷ್ಣ ಅಭಿನಯದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಮಾನಸ ಸರೋವರ"
ಕುಮಾರ್ ಗೋವಿಂದ್, ಸಂಗೀತಾ ಅಭಿನಯದ ಗುರುಪ್ರಸಾದ್ ನಿರ್ದೇಶನದ ಮೃತ್ಯು ಬಂಧನ
ಕುಮಾರ್ ಬಂಗಾರಪ್ಪ, ಯಮುನಾ ಅಭಿನಯದ ಎಚ್.ಎನ್. ಶಂಕರ್ ನಿರ್ದೇಶನದ ಕೆರಳಿದ ಸರ್ಪಅಂಬರೀಶ್, ರಜನಿ, ವಜ್ರಮುನಿ ಅಭಿನಯದ ಡಿ. ರಾಜೇಂದ್ರ ಬಾಬು ನಿರ್ದೇಶನದ ಎಂಟೆದೆ ಬಂಟ
No comments:
Post a Comment