Sunday, January 19, 2025

ಬಕುಲದ ಕವಿ ಸು.ರಂ. ಎಕ್ಕುಂಡಿ

 ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು  20-01-1923ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ . 1944 ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. 35 ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.  ಬಾಲ್ಯದಲ್ಲಿ ಬಹಳ ಬಡತನ ಇದ್ದ ಕಾರಣ ಇವರಿಗೆ ವಿದ್ಯೆ ಕಲಿಯಲು ಬಹಳ ಕಷ್ಟವಾಗಿತ್ತು. ತಮ್ಮ ಐದನೇ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡ ಎಕ್ಕುಂಡಿಯವರು ಸವಣೂರಿನ ಶ್ರೀ ಸತ್ಯಭೋಧ ಸೇವಾಸಂಘ ನಡೆಸುತ್ತಿದ್ದ ವಾಚನಾಲಯದ ಸದಸ್ಯರ ಪುಸ್ತಕಗಳನ್ನು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಹೊತ್ತುಕೊಂಡರು. ಇದರಿಂದ ದೊರೆತ ಅಲ್ಪ ಆದಾಯದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. 


ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು.  ಇವರು ಪ್ರಧಾನವಾಗಿ ಕವಿಯಾಗಿ ಹೆಸರು ಪಡೆದವರು. ಇವರ ಕಾವ್ಯದಲ್ಲಿ ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ನಿಸರ್ಗ ಸೌಂದರ್ಯ ಮೈವೆತ್ತಿ ನಿಂತಿದೆ. ಅಲ್ಲಿಯ ಸಮುದ್ರ, ಮುಸಲಧಾರೆ ಮಳೆ, ಹಕ್ಕಿಪಕ್ಷಿಗಳ ಕಲರವ, ಹಾಲಕ್ಕಿ ಒಕ್ಕಲಿಗರ ಶ್ರಮಜೀವನ, ತೆಂಗಿನಮರಗಳ ಸೊಬಗು ಇವರ ಕವಿತೆಗಳಲ್ಲಿ ಜೀವಂತಿಕೆ ಪಡೆದಿವೆ. 

ವಾದ ವಿವಾದಗಳಿಂದ ಸದಾ ದೂರವೇ ಇರುತ್ತಿದ್ದ ಎಕ್ಕುಂಡಿ ಮಾನವೀಯ ಅಂತಃಕರಣವನ್ನೇ ತಮ್ಮ ಕಾವ್ಯದಲ್ಲೂ ಉಸಿರಾಡಿದವರು. ಹೊಗಳಿಕೆ ತೆಗಳಿಕೆಗಳಿಗೆ ನಿರ್ಲಿಪ್ತ ಭಾವ ಅವರದು. ಇವರ ಕಾವ್ಯಗಳಲ್ಲಿ ಕಥನ ಕವನಗಳ, ಬರಹಗಳಲ್ಲಿ ಮಾಧ್ವ ನಿಲುವು, ಮಾರ್ಕ್ಸ್‌ವಾದಿ ಧೋರಣೆ ಇವೆರಡೂ ಕಂಡುಬರುತ್ತವೆ ಎಂಬ ಮಾತಿದೆ. ಬದುಕಿನ ಆಚರಣೆಗೆ ನಂಬಿದ ಸಿದ್ಧಾಂತಗಳಲ್ಲಿ, ಮನುಕುಲದ ಏಳ್ಗೆಗಾಗಿ ಕ್ರೌರ್ಯವನ್ನು ನಿರಾಕರಿಸುವ ಮಾನವೀಯ ಮೌಲ್ಯಗಳನ್ನು ಸ್ಥಾಪಿಸುವಲ್ಲಿ ಅವರು ಅನುಸರಿಸಿದ ರೀತಿ ಅದು. ಪುತಿನ ಅವರು ಬಣ್ಣಿಸಿದಂತೆ ಎಕ್ಕುಂಡಿ ಯವರು "ಸಹಜ ಕವಿ". ಅವರ ಕಾವ್ಯದ ಕೇಂದ್ರಬಿಂದು ಮನುಷ್ಯನೇ. ಇವರ ಕಾವ್ಯದಲ್ಲಿ ಜನಸಾಮಾನ್ಯರು ಅತಿ ಸಹಜವಾಗಿ ಮೂಡಿ ಬಂದರು. ಎಕ್ಕುಂಡಿ ಯವರ " ಮಿಥಿಲೆ" ಕವಿತೆ ಎಲ್ಲರ ಮೈಮನಸ್ಸನ್ನು ಆವರಿಸಿಕೊಳ್ಳುವಂತದ್ದು.

ಎಕ್ಕುಂಡಿ ಅವರ ಕಾವ್ಯದ ಕೇಂದ್ರ ಮನುಷ್ಯನೇ ಆಗಿರುವುದಕ್ಕೂ, ಅವರ ಪ್ರಧಾನ ಕಾವ್ಯಪ್ರಕಾರ ಕಥನಕವನವೇ ಆಗಿರುವುದಕ್ಕೂ ಕಾರಣಗಳು ಸ್ಪಷ್ಟವಾಗಿಯೇ ಇವೆ.  ‘ಬೆಳ್ಳಕ್ಕಿಗಳು’ ಸಂಕಲನದ ಕೆಲವು ರಚನೆಗಳು ಕೊಂಚ ಭಿನ್ನವಾದರೂ ಒಟ್ಟಾರೆ ಎಕ್ಕುಂಡಿ ಕಾವ್ಯಪ್ರಪಂಚ ಕಥನಕವನಗಳಿಂದಲೇ ಸಮೃದ್ಧವಾಗಿವೆ.  ‘ಕೊರಗು’ ಎಂಬ  ಕವನದಲ್ಲಿ ಏನಿಲ್ಲ ಎಂದು ಹೇಳುವಾಗ, ‘ಬುತ್ತಿ’ ಕವನದಲ್ಲಿ ಏನಾಗಬೇಕು ಎಂದು ಒತ್ತಿ ಹೇಳುವಾಗ, ‘ಬೆಳ್ಳಕ್ಕಿಗಳು’ ಕವನದಲ್ಲಿ ಭರವಸೆಯ ಹಾಡನ್ನು ಹಾಡುವಾಗ, ‘ಶರಣು’ ಕವನದಲ್ಲಿ ತನ್ಮಯತೆಯಿಂದ ಪ್ರಾರ್ಥಿಸುವಾಗ ಕೂಡ ಮನುಷ್ಯಾವಸ್ಥೆಯ ನೆಲೆಗಳಿಂದ ಎಕ್ಕುಂಡಿ ಕವನಗಳು ಬಿಡುಗಡೆ ಹೊಂದಿವೆ ಅನ್ನಿಸುವುದಿಲ್ಲ.  ಪ್ರಕೃತಿಯನ್ನು ಕುರಿತು ಹಾಡುವಾಗಲೂ ಕವಿ, ಮನುಷ್ಯ ಸಮಾಜವು ಪ್ರಕೃತಿಯಿಂದ ಪಡೆಯಬಹುದಾದ ಜೀವನೋತ್ಸಾಹದ ಕಡೆಗೆ ಒಂದು ಕಣ್ಣಿಟ್ಟಿರುವುದು ಕಾಣುತ್ತದೆ’  (-ಟಿ. ಪಿ. ಅಶೋಕ) 

ಎಕ್ಕುಂಡಿಯವರೇ ಬಣ್ಣಿಸುವ ಹಾಗೆ – ಅವರ ಕಾವ್ಯ –  ‘ಶಬರಿ, ಸುಧಾಮ, ಗಜೇಂದ್ರ, ಕುಬ್ಜೆ ಮತ್ತು ಪುರಂದರದಾಸರ ಭಕ್ತಿ ಮತ್ತು ಪ್ರೇಮಗಳನ್ನು ಕುರಿತು ಬಣ್ಣಿಸುತ್ತದೆ.   ಏಸು, ಪ್ರವಾದಿ ಹಾಗೂ ದೇವರ ದಾಸೀಮಯ್ಯರಂಥ ಆತ್ಮದ ಒಕ್ಕಲಿಗರನ್ನು ಬಣ್ಣಿಸುತ್ತದೆ’.

ಕಥಾಸಂಕಲನ- ನೆರಳು. ಕಾದಂಬರಿ-ಪ್ರತಿಬಿಂಬಗಳು. ಪರಿಚಯ- ಶ್ರೀ ಪು.ತಿ.ನರಸಿಂಹಾಚಾರ್ಯರು. ಅನುವಾದ- ಎರಡು ರಶಿಯನ್ ಕಾದಂಬರಿಗಳು


ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಂದ ಪ್ರಶಸ್ತಿ ಪುರಸ್ಕಾರಗಳು- ಲೆನಿನ್ನರ ನೆನಪಿಗೆ ಎನ್ನುವ ಕೃತಿಗೆ 1970ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ. "ಮತ್ಸ್ಯಗಂಧಿ" ಕವನ ಸಂಕಲನಕ್ಕೆ 1975 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ. ಬೆಳ್ಳಕ್ಕಿಗಳು ಹಸ್ತಪ್ರತಿಗೆ 1982 ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ. ಬಕುಲದ ಹೂವುಗಳು" ಎಂಬ ಕೃತಿಗೆ 1992ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಮಸಣದ ಹೂವು" ಚಿತ್ರಕ್ಕಾಗಿ ಇವರ ಸಾಹಿತ್ಯ ಗೀತೆ ಬಳಸಿಕೊಳ್ಳಲಾಗಿತ್ತು. ಸಾಹಿತ್ಯಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ ಸು.ರಂ. ಎಕ್ಕುಡಿಯವರು 20-08-1995ರಂದು ನಿಧನರಾದರು. 


ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕವನ ಸಂಕಲನವಾದ ”ಬಕುಲದ ಹೂಗಳು’  ಎಂಬ ಕೃತಿಗೆ 1992  ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.  ಜನರ ನೋವು ನಲಿವುಗಳನ್ನೇ ಕಾವ್ಯವಾಗಿಸಿಕೊಂಡ ಸರಳ ಕವಿ ಸು. ರಂ ಎಕ್ಕುಂಡಿಯವರು. ಇವರ ಕವಿತೆಗಳ ಮೂಲ ಜನಸಾಮಾನ್ಯರೇ ಆದ್ದರಿಂದ ಬಡವರ, ದುಡಿವವರ ಪರ ಬರೆದ ಕವಿ ಎಕ್ಕುಂಡಿಯವರು.

ಪ್ರಸ್ತುತ ಬಕುಲದ ಹೂಗಳು ಕವನ ಸಂಕಲದಲ್ಲಿ 35  ಕವಿತೆಗಳಿವೆ. ನಿರ್ದಿಷ್ಟ ನಾಮರೂಪಧಾರಿಯಾದ ವ್ಯಕ್ತಿಗಳು ಒಂದು ನಿಶ್ಚಿತ ಜೀವನ ಸಂದರ್ಭಕ್ಕೆ ಸ್ಪಂದಿಸುವ ವರ್ಣನಾತ್ಮಕ ಕಥನ ಈ ಸಂಗ್ರಹದುದ್ದಕ್ಕೂ ಕಂಡು ಬರುತ್ತದೆ. 

ಪುರಾಣೀಕರಣವು ಎಕ್ಕುಂಡಿಯವರ ಕಾವ್ಯದ ಮುಖ್ಯ ಲಕ್ಷಣವಾಗಿದೆ. ಕೊಳದ ಗೌರಿ, ಇಬ್ಬರು ರೈತರು, ಬಕುಲದ ಹೂಗಳು, ಈ ಸಂಗ್ರಹದ ಮುಖ್ಯ ಕವಿತೆಗಳಾಗಿವೆ. 

No comments:

Post a Comment