Tuesday, June 04, 2013

ಕೊಡಗು: ಒಂದು ಪರಿಚಯ ಭಾಗ - ೧

             ಕೂರ್ಗ್ ಅಥವಾ ಕೊಡಗು ಕರ್ನಾಟಕದ ಅತ್ಯಂತ ಸುಂದರ ಜಿಲ್ಲೆಗಳಲ್ಲಿ ಒಂದಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ, ಆದರೆ ಇದೇ ಕೊಡಗಿನ ಬಗ್ಗೆ, ಅಲ್ಲಿನ ಇತಿಹಾಸ ಪರಂಪರೆ, ಸಂಸ್ಕೄತಿ, ಜೀವ್ ವೈವಿದ್ಯಗಳ ಬಗೆಗೆ ನಿಮಗೆಷ್ಟು ತಿಳಿದಿದೆ? ಹಾಗೊಂದು ವೇಳೆ ನಿಮಗೆ ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ಈ ಲೇಖನವನ್ನೊಮ್ಮೆ ಓದಿ ನೋಡಿ.
            ಕೊಡಗು ನೈರುತ್ಯ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ೪೧೦೨ ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು ೨೦೦೧ರ ಅಂದಾಜಿನಂತೆ ರಾಜ್ಯದ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಪ್ರದೇಶವಾಗಿದೆ. ಅಂದಹಾಗೆ ಇಲ್ಲಿನ ಕಾಫಿ ಮತ್ತು ವೀರ ಯೋಧರಿಂದಾಗಿಯೂ ಈ ಜಿಲ್ಲೆ ವಿಶ್ವ ಮಾನ್ಯತೆಯನ್ನು ಹೊಂದಿದೆ. ಮಡಿಕೇರಿ ನಗರ ಜಿಲ್ಲಾಕೇಂದ್ರವಾಗಿರುವ ಕೊಡಗಿನ ವಾಯುವ್ಯ-ಉತ್ತರ ದಿಕ್ಕಿಗೆ ಹಾಸನ. ಪೂರ್ವಕ್ಕೆ ಮೈಸೂರು, ನೈರುತ್ಯ-ದಕ್ಷಿಣಕ್ಕೆ ಕೇರಳ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿದೆ.
            ಕೊಡವರು ಸ್ಥಳೀಯವಾಗಿ ಕೊಡವ ಭಾಷೆಯನ್ನು ವ್ಯಾಪಕವಾಗಿ ಬಳಸುತ್ತಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡಾಮಿ, ಕೊಡವ ರಾಷ್ಟ್ರೀಯ ಸಮಿತಿಯಂತಹಾ ಸಂಘಟನೆಗಳು ಕೊಡವ ಜನಾಂಗ, ಭಾಷೆಯ ಅಭಿವೃದ್ದಿಗಾಗಿ ಸಾಕಷ್ಟು ಶ್ರಮವಹಿಸುತ್ತಿವೆ.

ಇತಿಹಾಸ
            ಕೊಡಗಿನ ಇತಿಹಾಸ ಅತ್ಯಂತ ರೋಚಕವಾದುದಾಗಿದ್ದು ಕರ್ನಾಟಕವನ್ನಾಳಿದ ಕದಂಬ, ಗಂಗ, ಚೋಳರು, ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರದ ಸಾಮ್ರಾಟರು ಕೊಡಗನ್ನು ಅಳಿದ್ದರೆನ್ನುವುದಕ್ಕೆ ಸಾಕಷ್ಟು ಪುರಾವೆಗಳು ಇವೆ. ಕ್ರಿಸ್ತ ಶಕ ೯-೧೦ನೇ ಶತಮಾನಗಳವರೆಗಿನ ಕೊಡಗಿನ ಇತಿಹಾಸವನ್ನು ಅಭ್ಯಸಿಸಲು ನಮಗಾವುದೇ ಪುರಾವೆಗಳು ದೊರಕಲಾರವು.  ೯ನೇ ಶತಮಾನದ ಶಾಸನವೊಂದರ ಪ್ರಕಾರ ತಲಕಾಡಿನ ಗಂಗ ರಾಜರ ಆಳ್ವಿಕೆ ಈ ಪ್ರದೇಶವು ಒಳಪಟ್ಟಿತ್ತು. ಇದಾದ ಬಳಿಕ ೧೧ನೇ ಶತಮಾನದಲ್ಲಿ ಚೋಳ ರಾಜರ ಆಳ್ವಿಕೆಯು ಕೊಡಗಿನಲ್ಲಿ ಆರಂಭವಾಯಿತು. ಇದಾಗಿ ೧೧ನೇ ಶತಮಾನದ ಕೊನೆ ಹಾಗೂ ೧೨ನೇ ಶತಮಾನದ ಆರಂಭದಲ್ಲಿ ಕೊಡಗು ಸೇರಿದಂತೆ ಕರ್ನಾಟಕದ ದಕ್ಷಿಣ ಪ್ರಾಂತದಿಂದ ಚೋಳರನ್ನು ಓಡಿಸಿದ ಹೊಯ್ಸಳ ದೊರೆಗಳು ತಾವು ಕೊಡಗಿನ ಮೇಲೆ ಪ್ರಭುತ್ವವನ್ನು ಮೆರೆದರು. ಮತ್ತೆ ೧೪ನೇ ಶತಮಾನದಲ್ಲಿ ಹೊಯ್ಸಳರ ಪತನದ ಬಳಿಕ ಕೊಡವರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಡಿಯಲ್ಲಿ ಬಂದರು.
            ವಿಜಯನಗರದ ಪತನಾನಂತರ ಸ್ಥಳೀಯ ನಾಯಕರು ಅದರಲ್ಲೂ ಪ್ರಧಾನವಾಗಿ ಹಾಲೇರಿ ವಂಶದ ಅರಸರು ಈ ಪ್ರದೇಶದ ಆಳ್ವಿಕೆ ನಡೆಸಿದರು. ಇವರ ಆಡಳಿತವು ಸುಮಾರು ೧೬ನೇ ಶತಮಾನದಿಂದ ಆರಂಭವಾಗಿ ೧೯ನೇ ಶತಮಾನದವರೆಗೂ ನಡೆಯಿತು. ಈ ಹಾಲೇರಿ ವಂಶದ ಅರಸರು ಪ್ರಮುಖವಾಗಿ ಮೈಸೂರಿನ ಒಡೆಯರ ಅಧೀನದಲ್ಲಿದ್ದುಕೊಂಡು ಆಡಳಿತ ನಡೆಸುತ್ತಿದ್ದರು. ೧೭೫೦-೧
            ೧೭೫೦-೧೭೯೯ರ ನಡುವೆ ಮೈಸೂರಿನಲ್ಲಿ ಪ್ರವರ್ಧಮಾನಕ್ಕೆ ಬಂದಂತಹಾ ಹೈದರ್ ಹಾಗೂ ಅವನ ಮಗನಾದ ಟಿಪ್ಪು ಸುಲ್ತಾನನ ಕಾಲದಲ್ಲಿ ಕೊಡಗಿನ ಮೇಲೆ ಧಾಳಿ ನಡೆಸಿದ ಟಿಪ್ಪು ಕೊಡಗನ್ನು ಕೆಲ ಸಮಯದವರೆಗೆ ತನ್ನ ವಶದಲ್ಲಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಟಿಪ್ಪುವಿನ ಮರಣದಬಳಿಕ ಈ ಪ್ರದೇಶದಲ್ಲಿ ಬ್ರಿಟೀಷರ ಪ್ರಭಾವವನ್ನು ನಾವು ಕಾಣಬಹುದು.
            ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ೧೯೫೦ರಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಯಿತು. ೧೯೫೬ರಲ್ಲಿ ಭಾಷಾವಾರು ಪ್ರದೇಶ ವಿಂಗಡಾನೆಯ ಆಧಾರದ ಮೇಲೆ ರಾಜ್ಯಗಳ ಮರು ರಚನೆಯಾದಾಗ ಕೊಡಗು ಕರ್ನಾಟಕದೊಳಗೆ ಸೇರಿ ಒಂದು ಜಿಲ್ಲೆಯಾಗಿ ರೂಪುತಾಳಿತು.

ಕೊಡವ ಸ್ಂಸ್ಕೃತಿ
            ಕೊಡಗಿನಲ್ಲಿ ಇರುವ ಜನಸಮುದಾಯದಲ್ಲಿ ಅಲ್ಲಿನ ಮೂಲ ನಿವಾಸಿಗಳಾದ ಕೊಡವ ಸಂಪ್ರದಾಯದವರೇ ಬಹುಸಂಖ್ಯಾತರು. ಇವರಲ್ಲಿ ಕೊಡವ ಹೆಗ್ಗಡೆ, ಕೊಡವ ಗೌಡ ಸಮುಡಾಯದವರು ಪ್ರಮುಖರಾಗಿದ್ದು ಇನ್ನುಳಿದಂತೆ ಅರ್ಜಿ, ಮೇಡಾ, ಮಲೆ ಕುಡಿಯ, ಕೆಂಬಟ್ಟಿ, ಮರಿಂಜಿ, ಕವಡಿ, ಕುರುಬ ಮೊದಲಾದ ಜನಾಂಗದವರನ್ನು ಹೆಸರಿಸಬಹುದು.
            ಕೊಡವರು ಪ್ರಮುಖವಾಗಿ ಮಹಾದೇವ, ಭದ್ರಕಾಳಿ, ಸುಬ್ರಹ್ಮಣ್ಯ, ಅಯ್ಯಪ್ಪ ದೆವರುಗಳನ್ನು ಆರಾಧಿಸುವುದರೊಂದಿಗೆ ಅಲ್ಲಿನ ಸ್ಥಳೀಯ ದೇವರುಗಳಾದ ಉಗ್ಗುತಪ್ಪ ಮೊದಲಾದ ದೈವಗಳನ್ನು ಸಹ ಪೂಜಿಸುತ್ತಾರೆ.  ಕೊಡವರಲ್ಲಿ ಬಹುಪಾಲು ಜನರು ಕೃಷಿಯಾಧಾರಿತ ಕಸುಬಿನಲ್ಲಿದ್ದು ಮುಖ್ಯವಾಗಿ ಕಾಫಿ, ಭತ್ತ,ಕಿತ್ತಳೆ ಮೊದಲಾದ ಹಣ್ಣುಗಳನ್ನು ಬೆಳೆಯುತ್ತಾರೆ. ಅಲ್ಲದೆ ಬುಟ್ಟಿ ಹೆಣಿಗೆ, ಚಾಪೆ ತಯಾರಿಕೆಯಂತಹ ಅನೇಕ ಬಗೆಯ ಕುಶಲ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಇತಿಹಾಸದುದ್ದಕ್ಕೂ ಕೊಡಗು ಅನೇಕ ಅರಸರ ಧಾಳಿಗಳಿಗೆ ಒಳಗಾದುದನ್ನು ನಾವು ನೊಡುತ್ತೇವೆ. ಹೀಗಾಗಿ ಇಲ್ಲಿನ ಜನರು ಅಂತಹಾ ಯುದ್ಧಗಳಲ್ಲಿ ಪಾಲ್ಗೊಂಡದ್ದರಿಂದಲಿಂದಲೂ ಇಂದಿಗೂ ಅಲ್ಲಿನ ಜನರು ಸಮರ ಕಲಾ ಪಾರಂಗತರಾಗಿದ್ದಾರೆ. ಇದರೊಂದಿಗೆ ಕೊಡವರು ಧರಿಸುವ ದಿರಿಸುಗಳೂ ಸಹ ಬಹು ವಿಶಿಷ್ಟವಾದುದಾಗಿರುತ್ತವೆ.
            ಕೊಡವರು ಬಹು ದೊಡ್ದ ಕ್ರೀಡಾಭಿಮಾನಿಗಳೂ ಆಗಿದ್ದು ಪ್ರತೀ ವರ್ಷ ಇಲ್ಲಿ ಹಾಕಿ ಪಂದ್ಯಾವಳಿ ಬಹು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತದೆ. ಈ ಕ್ರೀಡೋತ್ಸವದಲ್ಲಿ ಸುಮಾರು ೪೦೦ ಕೊಡವ ಕುಟುಂಬಗಳು ಪಾಲ್ಗೊಳ್ಳುತ್ತವೆ, ಇದು ಲಿಮ್ಕಾ ದಾಖಲೆ ಪುಸ್ತಕದಲ್ಲಿಯೂ ದಾಖಲಾಗಿರುವ ಸಂಗತಿ ಎನ್ನುವುದಿಲ್ಲಿ ಗಮನಿಸತಕ್ಕ ಅಂಶ. 



No comments:

Post a Comment