Wednesday, September 11, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths)- 6

ಭದ್ರಾಚಲ(Bhadrachalam)
    ನಮಸ್ಕಾರ ಸ್ನೇಹಿತರೆ,
    ಇಂದಿನ ಆಂಧ್ರ ಪ್ರದೇಶದ ಖಮ್ಮಮ್ ಜಿಲ್ಲೆಯ ಭದ್ರಾಚಲ ಕ್ಷೇತ್ರವು ಅತ್ಯಂತ ಪ್ರಾಚೀನವೂ ಪವಿತ್ರವೂ ಆದ ಪುಣ್ಯಕ್ಷೇತ್ರವೆನಿಸಿದೆ. ಶ್ರೀ ರಾಮತೆ ಹಾಗು ಲಕ್ಷ್ಮಣನೊಂದಿಗೆ ಪ್ರತ್ಯಕ್ಷವಾಗಿ ನೆಲೆಸಿರುವ ಭದ್ರಾಚಲ ಕ್ಷೇತ್ರ ಹಿಂದೂಗಳ ಪಾಲಿನ ಪವಿತ್ರ ಯಾತ್ರಾಸ್ಥಳಗಳಾಲ್ಲಿ ಒಂದು. ರಾಮಾಯಣದ ಕಾಲಘಟ್ಟದಲ್ಲಿ ದಂಡಕಾರಣ್ಯವಾಗಿದ್ದ ಈ ಪ್ರದೇಶದಲ್ಲಿ ರಾಮ, ಸಿತಾ ಹಾಗೂ ಲಕ್ಷ್ಮಣಾರು ತಮ್ಮ ವನವಾಸದ ಸಮಯದಲ್ಲಿ ಪರ್ಣಕುಟಿಯನ್ನು ಸ್ಥಾಪಿಸಿ ವಾಸವಾಗಿದ್ದರು. ಆದರೆ ಈ ಪ್ರದೇಶಕ್ಕೆ ಭದ್ರಾಚಲವೆಂಬ ಹೆಸರು ಬಂದುದು, ಪವಿತ್ರ ಕ್ಷೇತ್ರವಾಗಲು ಕಾರಣವಾದದ್ದು ಭಗವಾನ್ ಶ್ರೀ ರಾಮನ ಮಹಾಭಕ್ತರಾಗಿದ್ದ ಶ್ರೀ ಭದ್ರಮುನಿಗಳು.
ಶೀರಾಮನ ಪರಮ ಭಕ್ತ ಭದ್ರ ಮಹರ್ಷಿಯ ಕಥೆ :
    ಈ ಹೆಸರು ಬರಲು ಮೂಲ ಕಾರಣವಾದುದೇ ಈ ಭದ್ರ ಮಹರ್ಷಿಗಳು. ಶೀರಾಮನ ಪರಮ ಭಕ್ತರಾಗಿದ್ದ ಇವರು ರಾಮದೇವರ ಅನುಗ್ರಹಕ್ಕಾಗಿ ಹಲವು ವರುಷಗಳ ಕಾಲ ತಪಸ್ಸನ್ನಾಚರಿಸಿದ್ದರು. ರಾಮನು ತನ್ನಮಡದಿ ಸೀತಾದೇವಿಯನ್ನು ಅರಸುತ್ತಾ ದಂಡಕಾರಣ್ಯದಲ್ಲಿ ಬರುತ್ತಿರಲು ಭದ್ರ ಮಹರ್ಷಿಗಳಿಗೆ ದರ್ಶನವನ್ನು ನೀಡಿದನು. ಈ ದರ್ಶನ ಮಾತ್ರದಿಂದ ಸುಪ್ರೀತರಾದ ಭದ್ರ ಮಹರ್ಷಿಗಳು ರಾಮದೇವರಲ್ಲಿ ತನ್ನ ಕೋರಿಕೆಯನ್ನು ಇಂತು ಒಪ್ಪಿಸಿದರು-“ನೀನು ಸದಾಕಾಲವೂ ಗೋದಾವರಿ ತಟದಲ್ಲಿರುವ ಈ ದಂಡಕಾರಣ್ಯದಲ್ಲಿ ನನ್ನ ಶಿರದ ಮೇಲೆ ನೆಲೆಸಿದ್ದು ಬರುವ ಭಕ್ತಕೋಟಿಯನ್ನು ಉದ್ದರಿಸಬೇಕು” ಈ ಕೋರಿಕೆಯನ್ನು ಮನ್ನಿಸಿದ ಶೀರಾಮನು -“ನಾನೀಗ ತನ್ನ ಮಡದಿ ಸೀತಾದೇವಿಗಾಗಿ ಹುಡುಕುತ್ತಿದ್ದೇನೆ, ಲಂಕೆಯ ರಾವಣನು ಅವದ ಬಳಿಕ ನಾನು ಹಿಂತಿರುಗುವ ಸಮಯದಲ್ಲಿ ನಿನ್ನ ಅಭೀಷ್ಠೆಯನ್ನು ಪೂರೈಸುತ್ತೇನೆ” ಎಂದನು. ಅದಕ್ಕೆ ಒಪ್ಪಿಗೆ ಸೂಚಿಸಿದ ಭದ್ರ ಮಹರ್ಷಿಗಳು ರಾಮನ ಬರುವಿಕೆಗಾಗಿ ಕಾದು ಕುಳಿತರು. ಆದರೆ ಕಾರಣಾಂತರಗಳಿಂದ ರಾಮಾವತಾರದಲ್ಲಿ ಶೀ ದೇವರಿಗೆ ಭದ್ರ ಮಹರ್ಷಿಗಳ ಕೋರಿಕೆಯನ್ನು ಈಡೇರಿಸಲಾಗದೇ ಹೋಯಿತು.
    ಭದ್ರ ಮಹರ್ಷಿಗಳು ಮಾತ್ರ ರಾಮನು ಸ್ವತಾನು ಬರದಿರುವದಕ್ಕೆ ಉಗ್ರವಾದ ಪಶ್ಚಾತ್ತಾಪದ ತಪಸ್ಸನ್ನು ಕೈಗೊಂಡಿದ್ದರು. ಇದನು ಅರಿತ ವೈಕುಂಠದಲ್ಲಿನ ಮಹಾವಿಷ್ಣುವು ತಾನು ವೈಕುಂಠರಾಮನ ರೂಪದಲ್ಲಿ ಮಡದಿ ಸೀತೆ ಹಾಗೂ ಸಹೋದರ ಲಕ್ಷ್ಮಣನ ಜತೆಯಾಗಿ ಭದ್ರ ಮಹರ್ಷಿಗಳಿಗೆ ದರ್ಶನ ನೀಡಿದ್ದಲ್ಲದೆ ಅವರ ಕೋರಿಕೆಯಂತೆ ಅವರ ಶಿರಭಾಗದ ಮೇಲೆ ನೆಲೆಸಿದನು. ಇದರಿಂದಾಗಿ ಈ ಪ್ರದೇಶಕ್ಕೆ “ಭದ್ರಾಚಲ” ಎಂದು ಹೆಸರಾಯಿತು.
ಧಮ್ಮಕ್ಕ ಹಾಗೂ ಭಕ್ತ ರಾಮದಾಸರ ಕಥೆ:
    ಭದ್ರ ಮಹರ್ಷಿಗಳ ಕೋರಿಕೆಯಂತೆ ಅವರ ಶಿರಭಾಗದಲ್ಲಿ ಶೀರಾಮದೇವರು ನೆಲೆಸಿ ಹಲವು ಶತಮಾನಗಳು ಉರುಳಿದ ನಂತರ ಆ ವಿಗ್ರಹಗಳು ಗೋದಾವರಿ ನದಿಯಲ್ಲಿ ಮುಳುಗಡೆಯಾಗಿಹೋಗಿದ್ದವು. ಹೀಗಿರಲು ಹದಿನೇಳನೇ ಶತಮಾನದಲ್ಲಿ ಬದುಕಿದ್ದ ಪೋಕಲ ಧಮ್ಮಕ್ಕ ಎಂಬ ಶೀರಾಮನ ಉತ್ಕಟ ಭಕ್ತೆಯಿಂದ ಆ ವಿಗ್ರಹಗಳು ಪುನಃ ಗೋಚರಿಸಿದವಲ್ಲದೆ ನಿತ್ಯಪೂಜಾದಿಗಳು ಆರಂಭಗೊಂಡವು. ಈ ಮೊದಲೇ ಹೇಳಿದಂತೆ ಧಮಕ್ಕ ರಾಮದೇವರ ಪರಮ ಭಕ್ತೆಯಾಗಿದ್ದವರು. ಭದ್ರಾಚಲದಿಂದ ಮೈಲು ದೂರದಲ್ಲಿ ವಾಸವಿದ್ದ ಈಕೆಯ ಕನಸಿನಲ್ಲಿ ಕಾಣಿಸಿಕೊಂಡ ಶೀರಾಮನು-“ಹಿಂದೆ ಋಷಿಮುನಿಗಳಿಂದ ಪೂಜಿಸಲ್ಪಟ್ಟಿದ್ದ ನನ್ನ ಮತ್ತು ಸೀತಾದೇವಿಯರ ವಿಗ್ರಹಗಳು ಇದೀಗ ಕಾಲವಶದಿಂದ ಗೋದಾವರಿಯಲ್ಲಿ ಮುಳುಗಿ ಹೋಗಿದ್ದು ನೀನದನ್ನು ಪತ್ತೆ ಮಾಡಿ ನಿತ್ಯಪೂಜೆಗೆ ಏರ್ಪಾಡು ಮಾಡು” ಎಂಬ ಆದೇಏಶವನ್ನಿತ್ತರು. ಶೀ ದೇವರ ಆದೇಶದಂತೆ ಮರುದಿನವಿಡೀ ಆ ವಿಗ್ರಹಕ್ಕಾಗಿ ಹುಡುಕಿದ ಧಮ್ಮಕ್ಕರವರಿಗೆ ನದಿಯ ತಳದಲ್ಲಿದ್ದ ಲಕ್ಷ್ಮಣ, ಸೀತಾದೇವಿಯರ ಸಹಿತವಾದ ವೈಕುಂಠರಾಮದೇವರ ವಿಗ್ರಹಗಳು ದೊರಕಿದವು. ಅದನ್ನು ಶೀ ದೇವರ ಅಣತಿಯಂತೆ ಬೆಟ್ಟದ ಮೇಲೊಂದು ಸಣ್ಣ ಹುಲ್ಲಿನ ಗುಡಿಯನ್ನು ನಿರ್ಮಿಸಿ ಅಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಿ ದಿನನಿತ್ಯ ಪೂಜಿಸುತ್ತಾ ಬಂದರು.
    ಆದರೆ ಧಮ್ಮಕ್ಕರಿಗೆ ಶೀ ದೇವರಿಗೆ ದೊಡ್ಡ ದೇವಾಲಯವನ್ನು ನಿರ್ಮಿಸಬೇಕೆಬ್ನ್ನುವ ಆಸೆಯು ಬಲವಾಗುತ್ತಿತ್ತು. ಹೀಗಿರಲು ಒಂದು ದಿನ ಪುನಃ ಧಮ್ಮಕ್ಕರವರ ಕನಸಿನಲ್ಲಿ ಕಾಣಿಸಿಕೊಂಡ ರಾಮದೇವರು “ದೇವಾಲಯದ ನಿರ್ಮಾಣಕ್ಕಾಗಿಯೇ ನನ್ನ ಇನ್ನೊಬ್ಬ ಮಹಾನ್ ಭಕ್ತನು ನಿನ್ನಲ್ಲಿಗೆ ಬರಲಿದ್ದಾನೆ. ಅವನ ಬರುವಿಕೆಯನ್ನು ಕಾಯುತ್ತಿರು” ಎಂದು ಆದೇಶಿಸಿದರು. ಅದರಂತೆ ಧಮ್ಮಕ್ಕ ಆ ಭಕ್ತಶಿರೋಮಣಿಯ ಹಾದಿಯನ್ನು ಕಾಯತೊಡಗಿದರು. ಹೀಗೆ ಕಾಯುತ್ತಾ ಹಲವಾರು ವರುಷಗಳ ಬಳಿಕ ‘ಭಕ್ತ ರಾಮದಾಸ’ ಎಂದೇ ಪ್ರಸಿದ್ದನಾದ ಕಾಂಚರ್ಲ ಗೋಪಣ್ಣನೆನ್ನುವವ ಧಮ್ಮಕ್ಕನ ಜಿವಿತಾವಧಿಯ ಆಸೆಯನ್ನು ಪೂರ್ಣಗೊಳಿಸಿದನು.
    ಕಾಂಚರ್ಲ ಗೋಪಣ್ಣ ಅಥವಾ ಭಕ್ತ ರಾಮದಾಸನು ಶೀ ರಾಮನ ಸಮರ್ಥ ಭಕ್ತನಾಗಿದ್ದು ೧೬೨೦ ರಲ್ಲಿ ಆಂಧ್ರದ ಜುಮ್ಮಮೇಟ್ ತಾಲ್ಲೂಕಿನ ನೆಲ್ಕೊಂಡವೆಂಬಲ್ಲಿ ಜನಿಸಿದನು. ಲಿಂಗಣ್ಣ ಮೂರ್ತಿ ಹಾಗೂ ಕಾಮಾಂಬರವರ ಪುತ್ರನಾಗಿದ್ದ ಗೋಪಣ್ಣ ಗೋಲ್ಕೊಂಡದ ನವಾಬರಲ್ಲಿ ತಹಶೀಲ್ದಾರಿಕೆಯನ್ನು ಮಾಡಿಕೊಂಡಿದ್ದನು. ನಲ್ಕೋಂಡ ಪಗರಣದ ತಹಶೀಲ್ದಾರಿಕೆಯೊಂದಿಗೆ ಮನೆಯಲ್ಲಿ ನಿತ್ಯವೂ ರಾಮನಾಮದ ಭಜನೆ, ಬಡವರು, ದೀನರಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಾಬರುತ್ತಿದ್ದ ಗೋಪಣ್ನನಿಗೆ ನವಾಬರು ಪಗರಣದ ಕಂದಾಯ ವಸ್/ಉಲಿಯ ಕೆಲಸವನೂ ಸಹ ವಹಿಸಿದ್ದರು. ಹೀಗಿರಲು ಒಂದು ದಿನ ಪಗರಣದಲ್ಲಿನ ಭದ್ರಾಚಲದಲ್ಲಿ ಶೀರಾಮನ ಪ್ರಾಚೀನ ಮೂರ್ತಿಯೊಂದು ಸಿಕ್ಕಿರುವುದಾಗಿಯೂ ಸಹಸ್ರಾರು ಜನರು ಅದನ್ನು ವೀಕ್ಷಿಸಲು ಹೋಗುತ್ತಿರುವುದಾಗಿಯೂ ಗೋಪಣ್ಣನಿಗೆ ತಿಳಿಯಿತು. ಗೋಪಣ್ಣನೂ ತಾನು ಅಲ್ಲಿಗೆ ಹೋಗಿ ಶೀ ದೇವರ ದರ್ಶನವನ್ನು ಪಡೆತ್ಯಲು ನಿರ್ಧರಿಸಿ ಭದ್ರಾಚಲದ ಮಾರ್ಗವನ್ನು ಹಿಡಿದನು. ಅಲ್ಲಿಗೆ ಹೋಗಿ ಆ ಮೂರ್ತಿಗಳ ದರ್ಶನ ಮಾಡುತ್ತಲೇ ಗೋಪಣ್ಣನ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮೊದಲೇ ಶೀ ರಾಮನ ಭಕ್ತನಾಗಿದ್ದ ಗೋಪಣ್ಣ ಶೀ ದೇವರಿಗೆ ದೇವಾಲಯವನ್ನು ನಿರ್ಮಿಸಲು ಮುಂದಾದನು, ಆ ಮುಖೇನ ‘ಭಕ್ತ ರಾಮದಾಸ’ ಎನಿಸಿದನು.
    ದೇವಾಲಯದ ನಿರ್ಮಾಣಕ್ಕಾಗಿ ಪರಗಣವಾಸಿಗಳಿಂದ ಉದಾರ ಧನ ಸಹಾಯವನ್ನು ರಾಮದಾಸನು ಕೋರಿದನು ಸಾಕಷ್ಟು ಧನ ಸಂಗ್ರಹವಾದರೂ ಸಹ ದೇವಾಲಯ ನಿರ್ಮಿಸಲು ಅದು ಸಾಲದೇ ಹೋಯಿತು. ಮಿಕ್ಕುಳಿದ ಧನವನ್ನು ಆ ವರ್ಷದ ಫಸಲು ಬಂದ ಬಳಿಕ ನೀಡುವುದಾಗಿ ಅಲ್ಲಿನ ಜನರು ನುಡಿಯಲು ಮುಂದೆ ದಾರಿ ತೋಚದೆ ಪಗರಣದ ಖಜಾನೆಯಲ್ಲಿ ಸಂಗ್ರಹವಾಗಿದ್ದ ಸರ್ಕಾರದ ಕಂದಾಯದ ಹಣ ಅರು ಲಕ್ಷ ಹಣವನ್ನು ನವಾಬರ ಅನುಮತಿಯಿಲ್ಲದೆ ದೇವಾಲಯದ ನಿರ್ಮಾಣಕ್ಕೆ ಬಳಸಿಕೊಂಡು ದೇವಾಲಯವನ್ನು ಪೂರ್ಣಗೊಳಿಸಿದನು.            
    ಹೀಗಿರಲು ದೇವಾಲಯವು ಇನ್ನೇನು ಪೂರ್ಣಗೊಳ್ಳುವ ಹಂತ ತಲುಪಿದಾಗ ಇನ್ನೊಂದು ಸಮಸ್ಯೆಯು ಉದ್ಭವಿಸಿತು. ದೇವಾಲಯದ ಶಿಖರಕ್ಕೆ ಜೋಡಿಸಲು ತಕ್ಕುದಾದ ಸುದರ್ಶನ ಚಕ್ರವು ಸಿಗದೇ ಹೋಯಿತು. ಅದೇ ಚಿಂತೆಯಲ್ಲಿ ಮುಳುಗಿದ್ದ ರಾಮದಾಸನ ಕನಸಿನಲ್ಲಿ ಕಾಣಿಸಿಕೊಂಡ ಶೀ ರಾಮನು “ಪರಮ ಪವಿತ್ರವಾದ ಸುದರ್ಶನವು ಗೋದಾವರಿ ನದಿಯ ತಳದಲ್ಲಿ ಇರುವುದು” ಎಂಬುದಾಗಿ ತಿಳಿಸಲು ರಾಮದಾಸನು ಮರುದಿನವೇ ಗೋದಾವರಿಯಲ್ಲಿದ್ದ ಆ ಪರಮ ಪವಿತ್ರ ಸುದರ್ಶನ ಚಕ್ರವನ್ನು ಪತ್ತೆ ಮಾಡಿ ಗೋಪುರದ ಮೇಲದನ್ನು ಪ್ರತಿಷ್ಠಿಸಿ ದೇವಾಲಯ ನಿರ್ಮಾಣವನ್ನು ಸಂಪೂರ್ಣಗೊಳಿಸಿದನು.
    ಹೀಗೆ ದೇವಾಲಯದ ನಿರ್ಮಾಣವಾಗಲು ರಾಮದಾಸನಿಗೆ ಮಾತ್ರ ಕಡುಕಷ್ಟದ ದಿನಗಳು ಆರಂಭವಾದವು. ನಿಜಾಮ್ ಸರ್ಕಾರದ ಖಜಾನೆ ಸೇರಬೇಕಿದ್ದ ಆರು ಲಕ್ಷ ವರಹದಿಂದ ದೇವಾಲಯವನ್ನು ನಿರ್ಮಿಸಲಾಗಿದೆ ಎಂದರಿತ ನವಾಬನು ರಾಮದಾಸನನ್ನು ಸೇವೆಯಿಂದ ವಜಾಮಾಡಿದ್ದಲ್ಲದೆ ಸುದೀರ್ಘ ಹನ್ನೆರಡು ವರ್ಷ ಗೋಲ್ಕೊಂಡದ ಸೆರೆಮನೆಯಲ್ಲಿಟ್ಟು ಅನೇಹ ಚಿತ್ರಹಿಂಸೆಗಳನ್ನು ನೀಡಿದನು. ಇಂತಹಾ ಕಷ್ಟದ ದಿನಗಳಲ್ಲಿ ಶೀ ರಾಮನನ್ನೇ ಧ್ಯಾನಿಸುತ್ತಿದ್ದ ರಾಮದಾಸನು ‘ದಾಶರಾದಿ ಶತಕ’ ಹಾಗೂ ಅನೇಕ ಕೀರ್ತನೆಗಳಿಂದ ಶೀ ರಾಮದೇವರನ್ನು ಸ್ತುತಿಸುತ್ತಾ ಕಾಲಕಳೆಯುತ್ತಾನೆ.
    ಹೀಗಿರಲು ಒಂದು ದಿನ ತನ್ನ ಭಕ್ತ ರಾಮದಾಸನ ಬಿಡುಗಡೆಗಾಗಿ ಸ್ವತಃ ಶೀ ರಾಮ ಹಾಗೂ ಲಕ್ಷ್ಮಣರು ಧಾವಿಸುತ್ತಾರೆ. ‘ತಾವು ಭಕ್ತ ರಾಮದಾಸನ ಸೇವಕರಾದ ರಾಮೋಜಿ ಹಾಗೂ ಲಕ್ಷ್ಮೋಜಿ’ ಎಂದು ಹೇಳಿಕೊಳ್ಳುವ ಈರ್ವರು ನವಾವ್ಬನ ಆಸ್ಥಾನಕ್ಕೆ ಬಂದು ನವಾಬನಲ್ಲಿ ರಾಮದಾಸನ ದರ್ಶನಕ್ಕೆ ಅನುಮತಿಗಾಗಿ ಬೇಡುತ್ತಾರೆ. ರಾಮದಾಸನನ್ನು ದರ್ಶಿಸಲು ತಡರಾತ್ರಿ ಅವರಿಗೆ ಅನುಮತಿಸಲಾಗುತ್ತದೆ. ಆ ವೇಳೆಯಲ್ಲಿ ದಿವ್ಯ ಪುರುಷರಾದ ರಾಮೋಜಿ ರಾಮದಾಸ ಮಲಹಿರುವ ದಿಂಬಿನ ಕೆಳಗೆ ಅವನು ಸರ್ಕಾರಕ್ಕೆ ಪಾವತಿ ಮಾಡಬೇಕಾದ ಆರು ಲಕ್ಷ ಮೊಹರಿನ ಗಂಟನ್ನು ಇಟ್ಟು ಹೋಗುತ್ತಾನೆ.
    ಇದಾದ ಮರುದಿನವೇ ರಾಮದಾಸನ ದಿಂಬಿನಡಿಯಲ್ಲಿದ್ದ ಆರು ಲಕ್ಷ ಮೊಹರಿನ ಸಮಾಚಾರ ನವಾಬನಿಗೆ ತಲುಪುತ್ತದೆ. ನವಾಬನು ತಕ್ಷಣವೇ ರಾಮದಾಸನನ್ನು ಬಿಡುಗಡೆಗೊಳಿಸುತ್ತಾನೆ. “ನಿನನ್ ಸೇವಕರಾದ ರಾಮೋಜಿ ಹಾಗು ಲಕ್ಷ್ಮೋಜಿಯವರುಗಳು ನಿನ್ನೆ ತಡರಾತ್ರಿ ಇಲ್ಲಿಗೆ ಬಂದಿದ್ದರು. ಅವರು ನೀನು ಕೊಡಬೇಕಿದ್ದ ಆರು ಲಕ್ಷ ಹಣವನ್ನು ಸರ್ಕಾರಕ್ಕೆ ನೀಡಿದ್ದಾರೆ” ಎಂದು ನವಾಬನೆನ್ನಲು ರಾಮದಾಸನಿಗೆ ತಕ್ಷಣವೇ ತನ್ನ ರಕ್ಷಣೆಗಾಗಿ ಬಂದುದು ಸಾಕ್ಷಾತ್ ಶೀ ರಾಮ ಹಾಗೂ ಲಕ್ಷ್ಮಣರೆನ್ನುವುದು ತಿಳಿಯುತ್ತದೆ. ಇದನ್ನು ನವಾಬರಿಗೆ ತಿಳಿಸಿದಾಗ ನವಾಬನು ಕ್ಷಣಕಾಲ ಆನಂದ ಆಶ್ಚರ್ಯಗಳಿಂದ ವಿಸ್ಮಿತನಾಗುತ್ತಾನೆ. ಮತ್ತು ಭಕ್ತ ರಾಮದಾಸನ ಪರಮ ಪವಿತ್ರ ಭಕ್ತಿಗೆ ಮೆಚ್ಚಿದ ನವಾಬನು “ಭಗವಂತನು ಕೊಟ್ಟ ಈ ಆರು ಲಕ್ಷ ಹಣವು ನಮಗೆ ಬೇಡ ನೀವೇ ಇರಿಸಿಕೊಳ್ಲಿ” ಎಂದು ಹೇಳಿದಾಗ ರಾಮದಾಸನು ಅದನ್ನು ನಯ್ವಾಗಿ ನಿರಾಕರಿಸಿ ಭಗವಂತನ ಗುರುತಿಗಾಗಿ ಕೇವಲ ಎರಡು ಮೊಹರುಗಳನ್ನು ತೆಗೆದುಕೊಳ್ಳುತ್ತಾನೆ. (ಈ ಎರಡು ಮೊಹರುಗಳನ್ನು ಶೀ ಕ್ಷೇತ್ರದಲ್ಲಿ ನಾವಿಂದಿಗೂ ಕಾಣುತ್ತೇವೆ. ದೇವಾಲಯದ ಖಜಾನೆಯಲ್ಲಿ ಇಂದಿಗೂ ಆ ಪವಿತ್ರ ಮೊಹರುಗಳನ್ನು ಸಂರಕ್ಷಿಸಿಡಲಾಗಿದೆ.)ಹೀಗೆ ಶೀ ರಾಮನ ಮಹಾಶಕ್ತಿಯನ್ನರಿತ ಗೋಲ್ಕೊಂಡದ ನವಾಬನು ಭದ್ರಾಚಲ ಕ್ಷೇತ್ರಕ್ಕೆ  ಸಾಕಷ್ಟು ದಾನ ದತ್ತಿಗಳನ್ನು ನೀಡುತ್ತಾನೆಯಲ್ಲದೆ ಶೀ ರಾಮ ನವಮಿಯೂ ಸೇರಿದಂತೆ ವರ್ಷಾವಧಿ ನಾನಾ ಉತ್ಸವಾದಿಗಳನ್ನು ನಡೆಸಲು ಅನುಮತಿಸುತ್ತಾನೆ.
    ಹೀಗೆ ಧಮ್ಮಕ್ಕನ ಮನದಲ್ಲಿನ ಆಸೆಯು ಭಕ್ತ ರಾಮದಾಸನ ಮೂಲಕ ನೆರವೇರುತ್ತದೆ, ಧಮ್ಮಕ್ಕ ಇದನ್ನೆಲ್ಲಾ ಕಣ್ಣಾರೆ ಕಂಡು ಮನಸ್ಸಂತೃಪಿಯೊಂದಿಗೆ ವಿಷ್ಣು ಭಗವಾನ್ ನಲ್ಲಿ ಐಕ್ಯಳಾಗುತ್ತಾಳೆ. ಮುಂದೆ ಭಕ್ತ ರಾಮದಾಸನು ಹಲವು ವರ್ಷಗಳ ಕಾಲ ಶೀ ರಾಮನ ಸೇವೆಯನ್ನು ಮಾಡಿ ರಾಮನಲ್ಲಿಯೇ ಐಕ್ಯಹೊಂದುತ್ತಾನೆ. 

No comments:

Post a Comment