‘ಸಿಂಹ’ ‘ಗುಹೆ’ಯನ್ನು ತೊರೆದು ಅನಂತದತ್ತ ಮುಖಮಾಡಿ ನಡೆದಿದೆ.
ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್. ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ ರಂಗಕರ್ಮಿ, ಚಿತ್ರ ಕಲಾವಿದರೂ, ನಿರ್ದೇಶಕರೂ ಆಗಿ ಜನಮಾನಸದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿಂಹ ಇದೇ ಫೆಬ್ರ್ವರಿ 28 ರಂದು ತಮ್ಮ 72 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರೈಸಿದ್ದಾರೆ. ಅದೂ ಕೂಡ ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನವೇ ಎನ್ನುವುದು ವಿಧಿ ವಿಪರ್ಯಾಸ.
‘ಸಿಂಹ’ ‘ಗುಹೆ’ಯನ್ನು ತೊರೆದು ಅನಂತದತ್ತ ಮುಖಮಾಡಿ ನಡೆದಿದೆ.
ಹೌದು ಸ್ನೇಹಿತರೆ,
ಕನ್ನಡ ನಾಟಕಲೋಕದ ಅದ್ಬುತ ಪ್ರತಿಭೆ, ನಟ, ನಿರ್ದೇಶಕ, ಅಂಕಣಾಕಾರರಾಗಿಯೂ ಖ್ಯಾತಿ ಗಳಿಸಿದ್ದ ಸಿ.ಆರ್.
ಸಿಂಹ ನಮ್ಮನ್ನೆಲ್ಲಾ ಹೋಗಿದ್ದಾರೆ. ‘ನಟರಂಗ’ ದ ಮೂಲಕ ಖ್ಯಾತಿ ಗಳಿಸಿದ್ದ ರಂಗಕರ್ಮಿ, ಚಿತ್ರ ಕಲಾವಿದರೂ,
ನಿರ್ದೇಶಕರೂ ಆಗಿ ಜನಮಾನಸದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಸಿಂಹ ಇದೇ ಫೆಬ್ರ್ವರಿ 28 ರಂದು
ತಮ್ಮ 72 ನೇ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಪೂರೈಸಿದ್ದಾರೆ. ಅದೂ ಕೂಡ ತಮ್ಮ ಪುತ್ರಿಯ ಹುಟ್ಟುಹಬ್ಬದ
ದಿನವೇ ಎನ್ನುವುದು ವಿಧಿ ವಿಪರ್ಯಾಸ.
ಚಿಕ್ಕಂದಿನಿಂದಲೂ
ರಂಗಭೂಮಿಯೊಂದಿಗೆ ನಂಟನ್ನು ಹೊಂದಿದ್ದ ಸಿ.ಆರ್. ಸಿಂಹರವರು ತಾವೇ ರಚಿಸಿದ ‘ನಟಾರಂಗ’ ಎನ್ನುವ ನಾಟಕ
ತಂಡದ ಮೂಲಕ ‘ತುಘಲಕ್’, ‘ಸಂಕ್ರಾಂತಿ’, ಮೊದಲಾದ ನಾಟಕಗಳಾನ್ನು ರಂಗದ ಮೇಲೆ ತಂದು ಜನಪ್ರಿಯಗೊಳಿಸಿದ್ದರು.
ಅದರಲ್ಲಿಯೂ ‘ತುಘಲಕ್’ ನಾಟಕದ ತುಘಲಕ್ ಪಾತ್ರವನ್ನು ತಾವೇ ನಟಿಸಿದ್ದ ಆ ಪಾತ್ರವೇ ಅವರಿಗೆ ಸಾಕಷ್ಟು
ಜನಮನ್ನಣೆ ಗಳಿಸಿಕೊಟ್ಟಿತ್ತು. ಆ ಕಾಲದಲ್ಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ತುಘಲಕ್’ ಬರೋಬ್ಬರಿ
200 ಪ್ರದರ್ಶನಗಳನ್ನು ಕಂಡಿತ್ತು! ಗಿರೀಶ್ ಕಾರ್ನಾಡರ ಇನ್ನೊಂದು ಪ್ರಸಿದ್ದ ನಾಟಕ ’ತಲೆದಂಡ’ ದಲ್ಲಿನ
ಬಿಜ್ಜಳನ ಪಾತ್ರದಲ್ಲಿಯೂ ಮಿಂಚಿದ್ದ ಸಿಂಹರವರಿಗೆ ತಾವು ನಟಿಸಿದ ಪಾತ್ರದೊಳಗೆ ಪ್ರವೇಶಿಸಿ ಅದನ್ನು
ತನ್ನದಾಗಿಸಿಕೊಳ್ಳುವ ಕಎಲೆಯು ಸಿದ್ದಿಸಿತ್ತು. ಇವರ ನಿರ್ದೇಶನದಲ್ಲಿ ಮೂಡಿಬಂದ ಏಕವ್ಯಕ್ತಿ ನಾಟಕ
‘ಟಿಪಿಕಲ್ ಕೈಲಾಸಮ್’ ಕೈಲಾಸಂ ಬಗೆಗಿನ ಸಿಂಹರವರ ಅಭಿಮಾನಕ್ಕೊಂದು ಸಾಕ್ಷಿಯಾದರೆ ‘ ರಸಋಷಿ ಕುವೆಂಪು’
ಸಿಂಹರಿಗೆ ರಸಋಷಿಯ ಮೇಲಿದ್ದ ಪ್ರೀತಿಯನ್ನು ತೋರುವಂತಹುದು.
ತಮ್ಮ ಜೀವನವನ್ನೆಲ್ಲಾ
ನಾಟಕ, ರಂಗಭೂಮಿ, ಚಿತ್ರರಂಗಕ್ಕಾಗಿಯೆಂದೇ ಮೀಸಲಿಟ್ಟಿದ್ದ ಸಿಂಹ ತಾವು ಬಹಳ ಸ್ನೇಹಪರರೂ, ಸರಳಜೀವಿಯೂ
ಆಗಿದ್ದವರು. ಗೆಳೆತನಕ್ಕಾಗಿ ಯಾವತ್ತು ಹಂಬಲಿಸುತ್ತಿದ್ದ ಸಿಂಹ ತಮ್ಮ ಮನೆಗೆ ಯಾರು ಯಾವಾಗ ಬಂದರೂ
ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಸಂಜೆ ಸಮಯದಲ್ಲಿ ತಾವು ಗೆಳೆಯರೊಡನೆ ಕಾಂಗ್ರೆಸ್ ಕಡಲೆ ಬೀಜಗಳನ್ನು
ಮೆಲ್ಲುತ್ತಾ ತಾವು ಕಂಡ, ಕೇಳಿದ ಹಿರಿಯ ಸಾಹಿತಿಗಳ, ನಟರ ಜೀವದಲ್ಲಿನ ಸ್ವಾರಸ್ಯಕರ ಸನ್ನಿವೇಶಗಳನ್ನು
ವಿವರಿಸುತ್ತಿದ್ದರೆ ಎದುರಿದ್ದವರಲ್ಲಿ ತಾವೂ ಆ ಕಾಲಕ್ಕೆ ಸರಿದಂತೆ ಭಾಸವಾಗುತ್ತಿತ್ತು. ಒಮ್ಮೊಮ್ಮೆ
ತಾವು ಮಹತ್ತರವಾದ ಕನಸು, ಕಲ್ಪನೆಗಳೊಂದರ ಭಾಗವೇನೋ ಎನ್ನುವ ರೀತಿಯಲ್ಲಿ ಎದುರಿನಲ್ಲಿದ್ದವರ ಮುಂದೆ
ಅಗಾಧವಾದ ಕನಸೊಂದನ್ನು ಹಾಸಿ ಬಿಡುತ್ತಿದ್ದರು.ಸಿಂಹ ಇದ್ದ ಕಡೆ ನಗುವಿಗೆ ಎಂದೂ ಕೊರತೆ ಇರುತ್ತಿರಲಿಲ್ಲ.
ಅವರ ಮಾತುಗಳಲ್ಲಿ ಹಾಸ್ಯೋಕ್ತಿಗಳದ್ದೇ ಪಾರುಪತ್ಯವಿರುತ್ತಿತ್ತು. ಉತ್ತಮ ಮಾತುಗಾರರಾಗಿದ್ದ ಸಿಂಹ
ರವರ ಜತೆಗೆ ಮಾತನಾಡುವ ವ್ಯಕ್ತಿ ಅದು ಯಾರೇ ಆಗಿದ್ದರೂ ಅವರ ಮಾತಿನ ಮೋಡಿಗೆ ಮರುಳಾಗುತ್ತಿದ್ದರು,
ನಗೆಗಡಲಿನಲ್ಲಿ ತಾಲುತ್ತಿದ್ದರು.
ಸಿ.ಆರ್. ಸಿಂಹ
ಹೆಸರಿಗಷ್ಟೇ ‘ಸಿಂಹ’ ಆಗಿದ್ದವರು. ನೋಡಲು ದೊಡ್ಡ ಆಕಾರ, ದೊಡ್ಡ ದನಿ ಎಲ್ಲವೂ ಇದ್ದ ಸಿಂಹ ಮಾತಿನಲ್ಲಿಯೂ,
ಮನಸ್ಸಿನಲ್ಲಿಯೂ ಅತ್ಯಂತ ಮೃದು ಸ್ವಭಾವದವರು. ಇದೇ ಕಾರಣಕ್ಕೆ ಸಿಂಹ ರವರನ್ನು ಹತ್ತಿರದಿಂದ ಬಲ್ಲವರೆಲ್ಲಾ
ಹೆಳುತ್ತಿದ್ದದ್ದು “ಸಿಂಹ ದೈಹಿಕವಾಗಿ ಮಾತ್ರ ಸಿಂಹ, ಮನಸ್ಸು ಪುಣ್ಯಕೋಟಿಯದು” ಎಂದು.
ಚೆನ್ನಪಟ್ಟಣ
ರಾಮಸ್ವಾಮಿಶಾಸ್ತ್ರಿ ಸಿಂಹ ಹುಟ್ಟಿದ್ದು 1942 ಜೂನ್ 16 ರಂದು, ತಾತನವರು ಕಟ್ಟಿದ್ದ ಮನೆಯಲ್ಲಿ ಚೆನ್ನಪಟ್ಟಣದಲ್ಲಿದ್ದ ಅವರ ತಾತನವರರಾದ ಸಿ.ಕೆ. ವೆಂಕಟರಾಮಯ್ಯನವರೂ ಸಹ ಖ್ಯಾತನಾಮ ಸಾಹಿತಿಗಳಾಗಿದ್ದರು,
ಮೈಸೂರು ಒಡೆಯರಿಂದ ‘ರಾಜಸೇವಾಸಕ್ತ’ ಬಿರುದಿಗೆ ಭಾಜನರಾದವರು, ಅಷ್ಟೇ ಅಲ್ಲದೆ ಭಾರತ ಸರ್ಕಾರದ ಅತ್ಯುನ್ನತ ಗೌರವ ಪ್ರಶಸ್ತಿಗಳಲ್ಲೊಂದಾದ
‘ಪದ್ಮಶ್ರೀ’ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಇಷ್ಟಾಗಿ ಸಿ.ಆರ್. ಸಿಂಹರವರ ತಂದೆ ರಾಮಸ್ಸ್ವಾಮಿ
ಶಾಸ್ತ್ರಿಗಳು ಸಹ ಪ್ರಸಿದ್ದ ವಕೀಲರಾಗಿದ್ದವರು. ತಾತನವರು ಚನ್ನಪಟ್ಟಣ ಕೋಟೆಯೊಳಗೆ ಕಟ್ಟಿಸಿದ್ದ ಮನೆಯಲ್ಲಿಯೇ
ಸಿಂಹ ಹಾಗೂ ಅವರ ಸಹೋದರ ನಟ ಶ್ರೀನಾಥ್ ರವರ ಜನನವಾದದ್ದು. ಸಿಂಹರಿಗೆ ಆರೇಳು ವರ್ಷಗಳಿದ್ದಾಗ ಅವರ
ಕುಟುಂಬವು ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಅಲ್ಲಿಂದ ಮುಂದೆ ಸಿಂಹರವರ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲೇ
ಮುಂದುವರಿಯಿತು.
ಈ ಮೊದಲೇ ಹೇಳಿದಂತೆ
ಚಿಕ್ಕ ವಯಸ್ಸಿನಲ್ಲಿಯೇ
ರಂಗಭೂಮಿಯ ಕಡೆ ಒಲವನ್ನು ಹೊಂದಿದ್ದ ಸಿಂಹ ತಮ್ಮ ಹನ್ನೆರಡನೇ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ದರು. ನ್ಯಾಷನಲ್
ಕಾಲೇಜು ವಿದ್ಯಾರ್ಥಿಯಾಗಿಯೂ, ಹಳೆ ವಿದ್ಯಾರ್ಥಿಯಾಗಿಯೂ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಮುಂದೆ
ತಮ್ಮ ಮೂವತ್ತನೇ ವಯಸ್ಸಿಗೆ ತಮ್ಮದೇ ಸಮಾನ ವಯಸ್ಕರು, ಸಮಾನ ಮನಸ್ಕರನ್ನು ಕೂಡಿಕೊಂಡು ‘ನಟರಂಗ’ ಎನ್ನುವ
ಹೆಸರಿನಲ್ಲಿ ರಂಗಸಂಸ್ಥೆಯೊಂದನ್ನು ಸ್ಥಾಪಿಸಿದರು. ಆ ಮುಂದೆ ‘ಕಾಕನ ಕೋಟೆ’, ‘ಸಂಕ್ರಾಂತಿ’, ‘ತುಘಲಕ್’,
‘ತಲೆದಂಡ’, ‘ಸೂರ್ಯ ಶಿಕಾರಿ’ ಇದೇ ಮೊದಲಾದ ನಾಟಕಗಳನ್ನು ರಂಗದ ಮೇಲೆ ತಂದುದಲ್ಲದೆ, ನಟ, ನಿರ್ದೇಶಕರಾಗಿ
ಸಾಕಷ್ಟು ಹೆಸರು, ಕೀರ್ತಿಯನ್ನು ಸಂಪಾದಿಸಿದರು. 1983 ರಲ್ಲಿ ‘ವೇದಿಕೆ’ ಹೆಸರಿನ ಇನ್ನೊಂದು ತಂಡವನ್ನು
ರಚಿಸಿದ ಸಿ.ಆರ್. ಸಿಂಹ ಏಕವ್ಯಕ್ತಿ ಪ್ರದರ್ಶಾನವಾಗಿ ಕನ್ನಡದ ಇನ್ನೊಬ್ಬ ಖ್ಯಾತ ನಾಟಕ ಸಾಹಿತಿ ಟಿ.ಪಿ
ಕೈಲಾಸಂ ರವರ ಜೀವನವನ್ನು ಆಧರಿಸಿದ ‘ಟಿಪಿಕಲ್ ಕೈಲಾಸಂ’ ನಾಟಕವನ್ನು ರಚಿಸಿ ರಂಗ ಪ್ರಯೋಗವನ್ನು ನಡೆಸಿದ್ದಲ್ಲದೆ
ಆ ನಾಟಕವನ್ನು ಅಮೇರಿಕಾ, ಕೆನಡಾ ದಂತಹಾ ವಿದೇಶದ ನೆಲದಲ್ಲಿಯೂ ಜನಪ್ರಿಯಗೊಳಿಸಿದರು. ‘ಕರ್ಣ’, ‘ಭೈರವಿ’,
‘ಅಗ್ನಿ ಮತ್ತು ಮಳೆ’ ಇದೇ ಮೊದಲಾದ ಅನೇಕ ನೂತನ ಸ್ವರೂಪದ ನಾಟಕಗಳು ‘ಸಿಂಹ ವೇದಿಕೆ’ ಯಿಂದ ಮೂಡಿಬಂದಿತು.
ಹೀಗೆ ರಂಗಭೂಮಿಯನ್ನೇ
ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದ ಸಿ.ಆರ್. ಸಿಂಹ ತಾವು ಚಿತ್ರರಂಗಕ್ಕೂ ಸಾಕಷ್ಟು ಕೊಡುಗೆ
ನೀಡಿದ್ದಾರೆ. ಸುಮಾರು 150 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ, ಮುಖ್ಯ ಭೂಮಿಕೆಯಲ್ಲಿ
ಅಭಿನಯಿಸಿದ್ದ ಸಿಂಹ ಶ್ರೀ ಪಟ್ಟಾಭಿ ರಾಮರೆಡ್ಡಿ ನಿರ್ಮಾಣ, ನಿರ್ದೇಶನ ಮಾಡಿರುವ ರಾಷ್ಟ್ರ ಪ್ರಶಸ್ತಿ
ವಿಜೇತ ಚಲನಚಿತ್ರ ‘ಸಂಸ್ಕಾರ’(1970) ಚಿತ್ರದ ಮೂಲಕ ಚಿತ್ರರಂಗಕ್ಕೆ ಧುಮುಕಿದರು. ಸಾಹಿತಿ ಯು.ಆರ್.
ಅನ್ಂತಮೂರ್ತಿ ಕಥೆಯನ್ನು ಆಧರಿಸಿದ್ದ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗಿರಿಶ್ ಕಾಸರವಳ್ಳಿ ಚಿತ್ರಕಥೆಯನ್ನು
ಬರೆದಿದ್ದರು.
ರಂಗಭೂಮಿಯಂತೆಯೇ
ಸಿನಿಮಾ ರಂಗದಲ್ಲಿಯೂ ತಮ್ಮದೇ ಛಾಪು ಮೂಡಿಸುತ್ತಾ ಸಾಗಿದ ಸಿ.ಆರ್. ಸಿಂಹ ಹಾಸ್ಯ ನಟನಾಗಿಯು, ಖಳ ನಟನಾಗಿಯು,
ಚಿತ್ರದ ಪ್ರಮುಖ ಪೋಷಕ ನಟನಾಗಿಯೂ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಸಿಂಹ ಯಾವುದೇ ಪಾತ್ರವನ್ನ್ನಾದರೂ
ತನ್ಮಯತೆಯಿಂದ ಅಭಿನಯಿಸುತ್ತಿದ್ದರು ‘ಕಾಡು’, ‘ಬರ’, ‘ಸಂಕಲ್ಪ’, ‘ನೀ ಬರೆದ ಕಾದಂಬರಿ’, ‘ನೀ ತಂದ
ಕಾಣಿಕೆ’, ‘ಚಿತೆಗೂ ಚಿಂತೆ’, ‘ರಾಯರು ಬಂದರು ಮಾವನ ಮನೆಗೆ’, ‘ಅನುರೂಪ’, ‘ಇಂದಿನ ರಾಮಾಯಣ’, ‘ಪರಮೇಶಿ
ಪ್ರೇಮ ಪ್ರಸಂಗ’, ‘ಹೊಸನೀರು’ ಹೀಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಚಲನಚಿತ್ರ ನಿರ್ದೇಶನ
ಕ್ಷೇತ್ರಕ್ಕೂ ಕೈಹಾಕಿ ಜಯಿಸಿದ್ದ ಸಿ.ಆರ್. ಸಿಂಹ ಕುಮಾರ್ ಬಂಗಾರಪ್ಪ ನಟಿಸಿದ ‘ಅಶ್ವಮೇಧ’ ಚಿತ್ರಕ್ಕೆ
‘ಆಕ್ಷನ್ ಕಟ್’ ಹೇಳಿದ್ದರು. ಮುಂದೆ ‘ಶಿಕಾರಿ’, ‘ಕಾಕನ ಕೋಟೆ’, ‘ಅಂಗೈಯಲ್ಲಿ ಅಪ್ಸರೆ’, ‘ಸಿಂಹಾಸನ’
ಚಿತ್ರಗಳನ್ನು ನಿರ್ದೇಶಿಸಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಪ್ರಸಿದ್ದವಾಗಿದ್ದ ಶಂಕರ್ ನಾಗ್ ನಿರ್ದೇಶನದ
ಧಾರಾವಾಹಿ ‘ಮಾಲ್ಗುಡಿ ಡೇಸ್’ ನಲ್ಲಿಯ ಅಭಿನಯವೂ ಸಿಂಹ ರವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ಇತ್ತೀಚೆಗೆ ಸಿಂಹ ರವರ ಪುತ್ರ ಋತ್ವಿಕ್ ಸಿಂಹ ನಿರ್ದೇಶಿಸಿದ್ದ ‘ರಸಋಷಿ ಕುವೆಂಪು’ ಚಿತ್ರದಲ್ಲಿ ಕುವೆಂಪು
ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಸಿಂಹ ಆ ಪಾತ್ರದಲ್ಲಿ ತಾವು ಸ್ವತಃ ಕುವೆಂಪು ರವರ ಆತ್ಮವನ್ನೇ
ಆವಾಹಿಸಿಕೊಂಡವರಂತೆ ನಟಿಸಿದ್ದರು. ಹೀಗೆ ಕಲಾತ್ಮಕ ಹಾಗೂ ವಾಣಿಜ್ಯ ಹಿನ್ನೆಲೆಯ ಚಿತ್ರಗಳೆರಡರಲ್ಲಿಯೂ
ತಮ್ಮ ಪಾರಮ್ಯ ಮೆರೆದ ಸಿಂಹರವರ ಕೆಲವು ಡೈಲಾಗ್ ಡೆಲಿವರಿಗಳು ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಅಚ್ಚಳಿಯದೆ
ಉಳಿದಿವೆ.
ಇನ್ನು ರಂಗಭೂಮಿ,
ಚಲನಚಿತ್ರ ರಂಗದಲ್ಲಿ ಸತತವಾಗಿ ಕೆಲಸ ಮಾಡಿದ್ದ ಸಿ.ಆರ್. ಸಿಂಹ ತಾವು ಬರಹಗಾರರಾಗಿಯೂ ಪ್ರಸಿದ್ದಿ
ಪಡೆದಿದ್ದರು. ಈ ಹಿಂದೆ ವಿಶ್ವೇಶ್ವರ ಭಟ್ಟರು ಸಂಪಾದಕರಾಗಿದ್ದ ವೇಳೆಯಲ್ಲಿ ಕನ್ನಡದ ಪ್ರಸಿದ್ದ ದಿನಪತ್ರಿಕೆ
‘ವಿಜಯ ಕರ್ನಾಟಕ’ ದಲ್ಲಿ “ನಿಮ್ಮ ಸಿಮ್ಮ” ಎನ್ನುವ ಹೆಸರಿನ ಅಂಕಣ ಪ್ರಕಟವಾಗುತ್ತಿತ್ತು. ಆ ಅಂಕಣವನ್ನು
ಬರೆಯುತ್ತಿದ್ದುದು ಇದೇ ಸಿ.ಆರ್. ಸಿಂಹ. ತಮ್ಮ ರಂಗಭೂಮಿ. ಚಿತ್ರರಂಗದಲ್ಲಿನ ಅನುಭವಗಳು ಹಿರಿಯ ನಿರ್ದೇಶಕ,
ನಟರ ಜತೆಗಿನ ಒಡನಾಟಗಳು ಈ ಎಲ್ಲದರ ಬಗೆಗೆ ತಮ್ಮ ಅನುಭವಗಳನ್ನು ಈ ಅಂಕಣದ ಮೂಲಕ ಬರಹ ರೂಪಕ್ಕಿಳಿಸಿದ್ದರು.
ಇಂತಹಾ ರಂಗನಟನಿಗೆ
ಅವರ ಅಪೂರ್ವ ಪ್ರತಿಭಾ ಶಕ್ತಿಗೆ ಕಲಶವಿಟ್ಟಂತೆ ಅನೇಕ ಪ್ರಶಸ್ತಿ ಗೌರವಗಳು ಲಭಿಸಿದೆ. ಕರ್ನಾಟಕ ರಾಜ್ಯ
ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ನಾಟಕ ಅಕಾಡಮಿ ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳ ಸಂದಿರುವುದರೊಂದಿಗೆ
ಅಮೇರಿಕಾ, ಕೆನಡಾ, ಯುರೋಪ್ ಸೇರಿದಂತೆ ವಿದೇಶಗಳಲ್ಲಿಯೂ ಅವರ ಕಲಾಭಿಮಾನಿಗಳು ಅವರನ್ನು ಸನ್ಮಾನಿಸಿ
ಗೌರವ ಸೂಚಿಸಿದ್ದಾರೆ. ಇನ್ನು ಬೆಂಗಳುರು ಸೇರಿದಂತೆ ರಾಜ್ಯದ, ಹೊರ ರಾಜ್ಯದ ಅನೇಕ ಸಂಘ ಸಂಸ್ಥೆಗಳಿಂದ
ಸ್ವೀಕರಿಸಿದ ಗೌರವ, ಸನ್ಮಾನಗಳಿಗೆ ಲೆಕ್ಕವಿಲ್ಲ.
‘ಸಿಂಹ’ ರ ‘ಗುಹೆ’
ಸಿ.ಆರ್. ಸಿಂಹ
ರವರ ಬಗ್ಗೆ ಇಷ್ಟೆಲ್ಲಾ ಮಾತು ಹೇಳಿದ ಮೇಲೆ ಅವರು ವಾಸಿಸುತ್ತಿದ್ದ ‘ಗುಹೆ’ ಯ ಕುರಿತಾಗಿ ಹೇಳದೆ ಹೋದರೆ
ಅದು ನಿಜಕ್ಕೂ ಅಪಚಾರವಾದೀತು. ಈ ‘ಗುಹೆ’ ಇರುವುದು ಬೆಂಗಳೂರಿನ ಬನಶಂಕರಿ ರಿಂಗ್ ರೋಡಿನಲ್ಲಿನ ಇಟ್ಟೂಮಡು
ಬಡಾವಣೆಯ ಅಂಚಿನಲ್ಲಿ. ಇದನ್ನವರು ಯಾವ್ದೇ ರೀತಿಯಲ್ಲಿಯೂ ಕಾಂಕ್ರೀಟ್ ಬಳಸದೆ ಕಲ್ಲು, ಮಣ್ಣುಗಳಿಂದಲೇ
ನಿರ್ಮಿಸಿದ್ದರು. ಇದೊಂದು ವಿಚಿತ್ರ ಆಕಾರದ ಮನೆ(‘ಗುಹೆ’ ಎಂಬುದು ಸಿಂಹ ರವರು ಆ ತಮ್ಮ ಪ್ರೀತಿಯ ಮನೆಗಿಟ್ಟ
ಹೆಸರು) ಈದ್ರು 50X80X30 ಅಡಿಗಳ ವಿನ್ಯಾಸವನ್ನು ಹೊಂದಿದ್ದೆಂದು ಸಿಂಹರೇ ಹೇಳುತ್ತಿದ್ದರು. ಅಂದಹಾಗೆ
ಖ್ಯಾತ ವಿನ್ಯಾಸಕಾರರಾದ ಜಯಸಿಂಹ ರವರು ಈ ಮನೆಯ ವಿನ್ಯಾಸಕರಾಗಿದ್ದು ಸಿಂಹ ರವರ ಕನಸಿನ ಕೂಸಾಗಿತ್ತು.
ಇದರಲ್ಲಿನ ಅನೇಕ ವೈಶಿಷ್ಟ್ಯಗಳಿಂದಾಗಿ ಹತ್ತು ಹಲವು ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದ ಈ ‘ಗುಹೆ’
ಒಟ್ಟು ಸ್ಥಳಾವಕಾಶದ ಮೂರನೆ ಒಂದಂಶವನ್ನು ಆಕ್ರಮಿಸಿಕೊಂಡಿದೆ. ಉಳಿದ ಹೊರಾಂಗಣದಲ್ಲಿ ಒಂದು ಚಂದ್ರಾಂಗಣ(ಥಿಯೇಟರ್)
ಇದ್ದು ವಿವಿಧ ಹೂವು-ಹಣ್ಣುಗಳ ಗಿಡಗಳಿರುವ ಉದ್ಯಾನವನವೂ ಇದೇ ಆವರಣದಲ್ಲಿದೆ. ಮನೆಯೊಳಗೆ ಅಲ್ಲಲ್ಲಿ
ಸೂರ್ಯನ ಬೆಳಕು ನೇರವಾಗಿ ಪ್ರವೇಶಿಸುವಂತೆ ಮನೆಯನ್ನು ವಿನ್ಯಾಸಗೊಳಿಸಲಾಗಿತ್ತು. ಅಂತರಾಷ್ಟ್ರೀಯ ಖ್ಯಾತಿಯ
ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ನ ಅಭಿಮಾನಿಯಾಗಿದ್ದ ಸಿ.ಆರ್. ಸಿಂಹ ತಮ್ಮ ‘ಗುಹೆ’ ಯ ಮದ್ಯದಲ್ಲಿ
ಕಂಬದೋಪಾದಿಯಲ್ಲಿ ಚಾಪ್ಲಿನ್ ನ ಕಲ್ಲಿನ ಪ್ರತಿಮೆಯನ್ನು ನಿಲ್ಲಿಸಿದ್ದರು. ಇದರ ಕೆತ್ತನಾ ಕೆಲಸ ಖ್ಯಾತ
ಶಿಲ್ಪಿಗಳಾದ ಜಾನ್ ದೇವರಾಜ್ ರವರದ್ದಾಗಿದೆ.
ಈ ಚಾಪ್ಲಿನ್
ಪ್ರತಿಮೆಯಿದ್ದ ಸಿಂಹ ರವರ ಮನೆಗೊಮ್ಮೆ ಕನ್ನಡದ ವರನಟ ಡಾ. ರಾಜ್ ಭೇಟಿಯಿತ್ತಿದ್ದರು. ಮನೆಯ ವಿನ್ಯಾಸವನ್ನು
ಕಂಡು ಅತ್ಯಂತ ಆಶ್ಚರ್ಯ, ಸಂತೋಷಗಳನ್ನು ವ್ಯಕ್ತಪಡಿಸಿದ್ದ ರಾಜ್ ಕುಮಾರ್ ಮನೆಯಲ್ಲಿನ ಚಾಪ್ಲಿನ್ ಪ್ರತಿಮೆಯನ್ನು
ನೋಡಿ ಬಹಳವೇ ಆನಂದ ಪಟ್ಟಿದ್ದರು. ಹೀಗಿರಬೇಕಾದರೆ ಇದೇ ಸಮಯದಲ್ಲಿ ಅಲ್ಲೇ ಇದ್ದ ಸಿಂಹ ರಾಜ್ ರವರತ್ತ
ನೋಡಿ “ನಿಮ್ಮದೊಂದು ಆಟೋಗ್ರಾಫ್ ಬೇಕು” ಎಂದರು. ವಿಶೇಷವೆಂದರೆ ಆ ಸಮಯದಲ್ಲಿ ಸಿಂಹ ರವರ ಕೈಯಲ್ಲಿ
ಯಾವುದೇ ಪೆನ್ನಾಗಲೀ, ಕಾಗದವಾಗಲೀ ಇರಲಿಲ್ಲ. ರಾಜ್ ರವರಿಗೂ ಅಚ್ಚರಿಯಾಯಿತು, ‘ಏನಿದು ಇದ್ದಕ್ಕಿದ್ದ
ಹಾಗೆ ಆಟೋಗ್ರಾಫ್ ಕೇಖುತ್ತಿದ್ದಾರೆ, ಅದೂ ಪೆನ್ನು, ಕಾಗದಗಳಿಲ್ಲದೆ?’ ಎಂದುಕೊಳ್ಳುತ್ತಾ ಪ್ರಶ್ನಾರ್ಥಕವಾಗಿ
ಎಂಬಂತೆ ಸಿಂಹ ರವರತ್ತ ನೋಡಿದಾಗ ಚಾಪ್ಲಿನ್ ಕಂಬದತ್ತ ಕೈ ತೋರಿಸಿದ ಸಿಂಹ “ನಿಮ್ಮ ಹಸ್ತಾಕ್ಷರ ಇಲ್ಲಿ
ಬೇಕು” ಎಂದರು. ಮತ್ತೆ ಮರು ಮಾತಾಡದ ರಾಜ್ ತಕ್ಷಣವೇ ‘ರಾಜ್ ಕುಮಾರ್’ ಎಂಬುದಾಗಿ ಆ ಕಲ್ಲಿನ ಮೇಲೆ
ಅಚ್ಚ ಕನ್ನಡದಲ್ಲಿ ರುಜು ಮಾಡಿದರು. ಅದಾಗ ಸಿಂಹ ರವರ ಆನಂದಕ್ಕೆ ಪಾರವಿಲ್ಲವಾಯಿತು. ಮುಂದೆ ರಾಜ್
ರವರು ಅಂದು ಆ ಕಲ್ಲಿನ ಮೇಲೆ ಮಾಡಿದ ಸಹಿಯನ್ನು ಕಲ್ಲಿನಿಂದ ಕೆತ್ತಿಸಿ ಶಾಶ್ವತವಾಗಿಸಿಬಿಟ್ಟರು. ರಾಜ್
ರವರೂ ಸಹ ಇದರಿಂದ ಸಂಭ್ರಮಗೊಂಡು ಅಂದಿನ ಬಳಿಕ ಯಾರೇ ಅಭಿಮಾನಿಗಳು ತಮ್ಮ ಮನೆಗೆ ಬಂದರೂ ಸಿಂಹ ರವರ
ಗುಹೆ... ಅಲ್ಲಿನ ಚಾಪ್ಲಿನ್ ಪ್ರತಿಮೆ.... ಅದರ ಮೇಲಿನ ತನ್ನ ಸಹಿ... ಈ ಕುರಿತಂತೆ ಹೇಳಿಯೇ ಹೇಳುತ್ತಿದ್ದರು.
ಸ್ನೇಹಿತರೆ,ಸಿ.ಆರ್. ಸಿಂಹ
ರವರಂತಹಾ ಅದ್ಭುತ ಪ್ರತಿಭೆಗಳು ಇಲ್ಲದ ಕನ್ನಡ ರಂಗಭೂಮಿ, ಚಿತ್ರರಂಗ ನಿಜಕ್ಕೂ ಬಣಬಣವೆನಿಸುತ್ತಿದೆ.
ಹೊರಟು ಹೋದ ಸಿಂಹ ರವರಂತಹಾ ಇನ್ನಷ್ಟು ಸಿಂಹಗಳು ಕನ್ನಡ
ನಾಡಿಗೆ ದೊರಕಲಿ, ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಪರಂಪರೆಗೆ ಅದರಿಂದ ಇನ್ನಷ್ಟು ಉತ್ತಮ ಕಾಣಿಕೆ
ಸಿಗಲಿ ಎಂದು ಹಾರೈಸೋಣ.
ಅಗಲಿದ ಸಿಂಹ
ರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ
ನಮಸ್ಕಾರ.
No comments:
Post a Comment