Saturday, March 05, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 68

ಅಮರನಾಥ್ (Amaranath)

ಅಮರನಾಥ್ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ. ಸುಮಾರು 5000 ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು ಲಿಂಗದ ಆಕಾರವನ್ನು ಹೊಂದಿದ್ದು ಇದನ್ನು ಇಲ್ಲಿ ಪೂಜಿಸಲಾಗುತ್ತದೆ. 3888 ಮೀಟರ್  (12,756 ಅಡಿಗಳು) ಎತ್ತರದಲ್ಲಿ ಇರುವ ಈ ದೇವಾಲಯವು ಶ್ರೀನಗರದಿಂದ ಸುಮಾರು 141 ಕಿ.ಮಿ. ದೂರದಲ್ಲಿದೆ.
ಅಮರನಾಥ್ ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದು ವಿಶೇಷ.  ಅಮರ್ನಾಥ್ ಗುಹೆಯ ಉದ್ದ, ಎತ್ತರ ಹಾಗು ಅಗಲವು ಕ್ರಮವಾಗಿ 60ಅಡಿ, 15ಅಡಿ ಮತ್ತು 30ಅಡಿ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶಿವ ದರ್ಶನ ಪಡೆದು ಪುನಿತರಾಗಲು ಆಗಮಿಸುತ್ತಾರೆ.



ಈ ಕ್ಷೇತ್ರವನ್ನು ಪಹಲ್ಗಾಮ್ ಪಟ್ಟಣದ ಮೂಲಕ ಚಾರಣ ಮಾಡುತ್ತ ತಲುಪಬಹುದಾಗಿದೆ. ಪಹಲ್ಗಾಮ್ ಜಮ್ಮುವಿನಿಂದ 315 ಕಿ.ಮೀ ದೂರದಲ್ಲಿದೆ. ಇನ್ನೂ ಶ್ರೀನಗರದಿಂದ ಪಹಲ್ಗಾಮ್ 96 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ. ಪಹಲ್ಗಾಮ್ ನಿಂದ ಯಾತ್ರೆ ಆರಂಭಗೊಳ್ಳುತ್ತದೆ. ಮೊದಲಿಗೆ ಪಹಲ್ಗಾಮ್ ನಿಂದ ಚಂದನ್ವಾರಿಗೆ ತೆರಳಬೇಕು. ಇದು 16 ಕಿ.ಮೀ ಗಳಷ್ಟು ದೂರವಿದೆ. ಮಿನಿ ಬಸ್ಸುಗಳು ದೊರೆಯುತ್ತವೆ. ಇಲ್ಲಿ ಸರ್ಕಾರೇತರ ಸಂಸ್ಥೆಗಳಿಂದ ಸೇವೆಯ ರೂಪದಲ್ಲಿ ಉಚಿತವಾಗಿ ಫಲಾಹಾರಗಳು ದೊರೆಯುತ್ತವೆ.  ವಾತಾವರಣದಲ್ಲಿ ವಿಪರೀತವಾಗಿ ಚಳಿ ಹಾಗೂ ಮುಂದೆ ಸಾಗುತ್ತ ಆಮ್ಲಜನಕದ ಕೊಂಚ ಅಭಾವವಿರುವುದರಿಂದಸಾಕಷ್ಟು ಜಾಗರೂಕತೆ ವಹಿಸಬೇಕು.ಅಗತ್ಯ ವಸ್ತುಗಳನ್ನು ತೆಗೆದುಕೊಂಡು ತೆರಳಿದರೆ ಅವಶ್ಯಕ.
ಇನ್ನು ಒಂದೇ ದಿನದಲ್ಲಿ ಯಾತ್ರೆ ಪೂರ್ಣ ಮಾಡಬಯಸವವರಿಗಾಗಿ ಇಲ್ಲಿ ಹೆಲಿಕಾಪ್ಟರ್ ಸೇವೆ ಕಲ್ಪಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಗುಹೆಯ ಸಮೀಪ ತೆರಳಿ ಅಲ್ಲಿಂದ ಸುಮಾರು 4ರಿಂದ 6   ನಕಿ.ಮೀ ನಡೆದು ಅಮರನಾಥನ ದರ್ಶನ ಪಡೆಯಬಹುದು.

***

ದೇವಿ ಪಾರ್ವತಿಗೆ ಜೀವನ ಮತ್ತು ಅಮರತ್ವದ ರಹಸ್ಯ ಭೋದಿಸಿದ್ದ ಪವಿತ್ರ ಸ್ಥಳವೇ ಅಮರನಾಥ ಗುಹೆ.  ಶಿವನ ಕೊರಳಿನಲ್ಲಿದ್ದ ರುಂಡ ಮಾಲೆಯನ್ನು ಕಂಡ ಪಾರ್ವತಿ ಒಮ್ಮೆ ಆ ಬಗ್ಗೆ ಪ್ರಶ್ನಿಸುತ್ತಾಳೆ. ಅದು ಹೇಗೆ ಬಂತು ಮತ್ತು ಅದರ ಐತಿಹ್ಯವೇನು ಎಂದು. ಇದಕ್ಕೆ ಉತ್ತರಿಸುವ ಶಿವ ತಾನು   ಹುಟ್ಟಿದಾಗನಿಂದಲೇ ತನ್ನ ಕೊರಳಲ್ಲಿ ಈ ರುಂಡ ಮಾಲೆ ಇದೆ. ನೀನು ಹುಟ್ಟಿದಾಗ ಇದಕ್ಕೆ ಮತ್ತೊಂದು ಮಣಿ ಸೇರಿಸಿದೆ ಎಂದು ಹೇಳುತ್ತಾನೆ. ಆಗ ದೇವಿ ಪಾರ್ವತಿ ಹುಟ್ಟು ಸಾವಿನ ಕುರಿತು   ಪ್ರಶ್ನಿಸುತ್ತಾಳೆ. ಎಲ್ಲರೂ ಸಾಯುತ್ತಾರೆ. ಆದರೆ ನೀವು ಮಾತ್ರ ಅಮರರಾಗಿದ್ದೀರಿ. ಅದು ಹೇಗೆ ಎಂದು ಪ್ರಶ್ನಿಸುತ್ತಾಳೆ. ಆರಂಭದಲ್ಲಿ ಶಿವ ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುತ್ತಾನೆ. ಆದರೆ ಪಟ್ಟು   ಬಿಡದ ದೇವಿ ಪಾರ್ವತಿ ಪದೇ ಪದೇ ಈ ಬಗ್ಗೆ ಪ್ರಶ್ನಿಸುತ್ತಿರುತ್ತಾಳೆ. ಅಂತಿಮವಾಗಿ ಶಿವ ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಲು ಸಿದ್ಧನಾಗುತ್ತಾನೆ. ಇದೇ ಅಮರಕಥಾ ಎಂದು   ಹೇಳಲಾಗುತ್ತದೆ.

ಪಾರ್ವತಿಗೆ ಅಮರತ್ವದ ರಹಸ್ಯ ಹೇಳಲು ಸಿದ್ಧನಾದ ಶಿವ ಇದಕ್ಕಾಗಿ ಸೂಕ್ತ ಸ್ಥಳದ ಶೋಧ ನಡೆಸುತ್ತಾನೆ. ತನ್ನ ವಾಹನ ನಂದಿಯೊಂದಿಗೆ ಪಾರ್ವತಿ ಮತ್ತು ಗಣೇಶನೊಂದಿಗೆ ಪ್ರಯಾಣ   ಆರಂಭಿಸುವ ಶಿವ ಅಮರನಾಥ ಗುಹೆಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಬಳಿಕ ನಂದಿಯನ್ನು ಬೈಲ್ ಗಾಮ್ (ಇಂದಿನ ಪೆಹಲ್ಗಾಮ್) ಬಳಿ ಬಿಟ್ಟು, ಚಂದ್ರನನ್ನು ಚಂದನ್ ವಾರಿಯಲ್ಲಿ ಬಿಡುತ್ತಾನೆ.

ಬಳಿಕ ತನ್ನ ಪುತ್ರ ಗಣೇಶನನ್ನು ಮಹಾಗುಣ ಪರ್ವತ (ಮಹಾಗಣೇಶ ಪರ್ವತ)ದಲ್ಲಿ ಬಿಟ್ಟು, ತನ್ನ ಕೊರಳಲ್ಲಿರುವ ಹಾವುಗಳನ್ನು ಶೇಷನಾಗ ಸಾಗರದಲ್ಲಿ ಬಿಡುತ್ತಾನೆ. ಬಳಿಕ ಪಂಚಭೂತ (ಭೂಮಿ,   ನೀರು, ಗಾಳಿ, ಬೆಂಕಿ ಮತ್ತು ಆಕಾಶ)ಗಳನ್ನು ಪಂಜ್ ತಾರಿಣಿಯಲ್ಲಿ ಬಿಡುತ್ತಾನೆ. ಇವು ಶಿವನ ತ್ಯಾಗದ ಪ್ರತೀಕ ಎಂದು ಹೇಳಲಾಗುತ್ತದೆ. ಬಳಿಕ ತಾಂಡವ ನೃತ್ಯದಲ್ಲಿ ಪಾಲ್ಗೊಳ್ಳುವ ದಂಪತಿಗಳು   ಅಮರನಾಥ ಗುಹೆಯನ್ನು ಸೇರುತ್ತಾರೆ. ಆಗ ಶಿವ ತನ್ನ ರುದ್ರ ಎಂಬ ಕಾಲಾಗ್ನಿಯನ್ನು ಕರೆದು ತಾನು ಹೇಳುವ ರಹಸ್ಯವನ್ನು ಯಾವ ಜೀವಸಂಕುವೂ ಕೇಳಬಾರದು. ಹೀಗಾಗಿ ಗುಹೆಯ ಸುತ್ತಮುತ್ತ   ಇರುವ ಎಲ್ಲ ಜೀವ ಸಂಕುಲಗಳನ್ನು ನಾಶ ಮಾಡು ಎಂದು ಆದೇಶಿಸುತ್ತಾನೆ.

ಶಿವನ ಆಣತಿಯಂತೆ ರುದ್ರ ಎಂಬ ಕಾಲಾಗ್ನಿ ಗುಹೆಯ ಸುತ್ತಮುತ್ತ ಇರುವ ಎಲ್ಲ ಜೀವ ಸಂಕುಲವನ್ನು   ನಾಶಪಡಿಸುತ್ತದೆ. ಇದಾದ ಬಳಿಕ ಶಿವ ಪಾರ್ವತಿಗೆ ಜೀವನ ಮತ್ತು ಅಮರತ್ವವನ್ನು ಭೋಧಿಸುತ್ತಾನೆ. ಆದರೆ ಈ ನಡುವೆ ಕಾಲಾಗ್ನಿಯ ಜ್ವಾಲೆಗೆ ಸಿಲುಕದೆ ಗುಹೆಯಲ್ಲಿ ಒಂದು ಪಾರಿವಾಳದ   ಮೊಟ್ಟೆ ಇರುತ್ತದೆ. ಭೋದನೆ ಬಳಿಕ ಇದನ್ನು ಶಿವ ಗಮನಿಸುತ್ತಾನೆಯಾದರೂ, ಅದನ್ನು ನಾಶಪಡಿಸುವುದಿಲ್ಲ. ಬದಲಿಗೆ ಅವುಗಳನ್ನು ರಕ್ಷಿಸುತ್ತಾನೆ

ಇಂದಿಗೂ ಅಮರನಾಥ ಯಾತ್ರೆ ಕೈಗೊಳ್ಳುವ ಯಾತ್ರಿಕರು ಪವಿತ್ರ ಗುಹೆಯಲ್ಲಿ ಈ ಎರಡು ಪಾರಿವಾಳಗಳನ್ನು ನೋಡಬಹುದು. ಗುಹೆಯ ಸುತ್ತಮುತ್ತ ಇರುವ ಹತ್ತಾರು ಕಿ.ಮೀ ವ್ಯಾಪ್ತಿಯಲ್ಲಿ   ಯಾವುದೇ ಈ ಪಾರಿವಾಳಗಳಿಗೆ ಆಹಾರ ನೀಡಬಲ್ಲ ಯಾವುದೇ ಮೂಲಗಳಿಲ್ಲ ಎನ್ನುವುದು ವಿಶೇಷ. 


No comments:

Post a Comment