ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅತ್ಯಂತ ರಮಣೀಯವಾದ ಸ್ಥಳ. ಇಲ್ಲಿನ ಮಹಲಿಂಗೇಶ್ವರ ದೇವಾಲಯ, ವಿವೇಕಾನಂದ ಕಾಲೇಜು, ಎಲ್ಲವೂ ಜನಪ್ರಿಯ. ಜತೆಗೆ ಇದೇ ತಾಲೂಕಿನ ಕಲ್ಲಡ್ಕ ಟೀ ಸಹ ಬಹಳ ಪ್ರಸಿದ್ದಿ ಹೊಂದಿದೆ. ಅಡಿಕೆ, ಕಾಳುಮೆಣಸು ಇನ್ನಿತರೇ ತೋಟಗಾರಿಕೆ ಬೆಳೆ ಬೆಳೆಯುವ ಈ ಪ್ರದೇಶಕ್ಕೆ ತೆರಳಲು ಬೆಂಗಳೂರಿನಿಂದ ನೇರ ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ ಮಡಿಕೇರಿ, ಸುಳ್ಯ ಮಾರ್ಗವಾಗಿಯೂ, ಹಾಸನ, ಸಕಲೇಶಪುರದ ಮಾರ್ಗವಾಗಿಯೂ ಪುತ್ತೂರನ್ನು ತಲುಪಬಹುದಾಗಿದೆ.
***
ಹಿಂದೊಮ್ಮೆ ಕಾಶಿಯಿಂದ ದಕ್ಷಿಣ ಪಥಕ್ಕೆ ಬಂದಿದ್ದ ತೇಜೋವಂತರಾದ ವಿಪ್ರರೊಬ್ಬರು, ಉಪ್ಪಿನಂಗಡಿಗೆ ಬಂದರಂತೆ. ಅಲ್ಲಿ ಗೋವಿಂದಭಟ್ಟರೆಂಬ ವಿಪ್ರರ ಸ್ನೇಹ ಬೆಳೆಯಿತಂತೆ. ನಿತ್ಯವೂ ಮಧ್ಯಾಹ್ನ ಭೋಜನಕ್ಕೆ ಮುನ್ನ ತಮ್ಮ ಸಂಪುಟದಲ್ಲಿದ್ದ ಶಿವಲಿಂಗವನ್ನು ಪೂಜಿಸುತ್ತಿದ್ದ ಅವರು, ಒಂದು ದಿನ ಆ ಲಿಂಗವನ್ನು ಗೋವಿಂದಭಟ್ಟರಿಗೆ ನೀಡಿ, ಈ ಲಿಂಗವನ್ನು ಕೈಯಲ್ಲಿ ಹಿಡಿದೇ ಪೂಜಿಸಬೇಕು. ಭೂಸ್ಪರ್ಶ ಮಾಡಬಾರದು ಎಂದು ಹೇಳಿ, ಸ್ನಾನಕ್ಕೆ ಹೋದವರು ಎಷ್ಟು ಹೊತ್ತಾದರೂ ಬರಲಿಲ್ಲ. ಕಾದು ಕಾದು ಸಾಕಾದ ಭಟ್ಟರು, ಮುಂದಿನ ಊರಿಗೆ ಪ್ರಯಾಣ ಬೆಳೆಸಿ, ಲಿಂಗದೊಂದಿಗೆ ರಾತ್ರಿ ಪುತ್ತೂರಿಗೆ ಬಂದರಂತೆ. ಬೆಳಗಾದ ಮೇಲೆ ಲಿಂಗಪೂಜಿಸಲು ಅದಕ್ಕೆ ಅಗತ್ಯವಾದ ಪರಿಕರ ತರಲು, ರಾಜ ಬಂಗರಾಯನ ಆಸ್ಥಾನಕ್ಕೆ ಹೋದರು. ಆ ಹೊತ್ತಿನಲ್ಲಿ ರಾಜನ ಸೋದರಿ, ಪ್ರಸವದ ನೋವಿನಿಂದ ಬಳಲುತ್ತಿದ್ದಳು. ರಾಜ ಭಟ್ಟರ ಮೊರೆಗೆ ಸ್ಪಂದಿಸಲಿಲ್ಲ. ಆದರೆ, ಮಂತ್ರಿ ರಾಜನ.ನೋವನ್ನು ಭಟ್ಟರಿಗೆ ತಿಳಿಸಿದಾಗ, ಭಟ್ಟರು, ತಮ್ಮ ಬಳಿ ಇದ್ದು ಲಿಂಗಕ್ಕೆ ಪೂಜಿಸಿ, ಎಲ್ಲವೂ ನಿನ್ನೆಚ್ಚೆ ಎಂದರಂತೆ, ತತ್ ಕ್ಷಣವೇ ಆಕೆಗೆ ಸುಖ ಪ್ರಸವವಾಗಿ ಪುತ್ರವತಿಯಾದಳು. ರಾಜ ಆಗ ಅವರಿಗೆ ಪೂಜೆಗೆ ಬೇಕಾದ ಎಲ್ಲ ಅಗತ್ಯ ವಸ್ತು ನೀಡಿದನಂತೆ.
ಗೋವಿಂದ ಭಟ್ಟರು, ಆಗ ಭಂಡಾರಿ ಹಿತ್ತಿಲು ಎಂದು ಕರೆಸಿಕೊಳ್ಳುತ್ತಿದ್ದ ಈಗ ದೇವಾಲಯವಿರುವ ಜಾಗದಲ್ಲಿ ಮರೆತು ತಾವು ತಂದಿದ್ದ ಶಿವಲಿಂಗವನ್ನಿಟ್ಟು ಪೂಜಿಸಿದರಂತೆ. ಲಿಂಗ ಭೂಸ್ಪರ್ಶವಾಗಿತ್ತು. ಬೆಳಗ್ಗೆ ಲಿಂಗ ತೆಗೆಯಲು ಪ್ರಯತ್ನಿಸಿದಾಗ ಆಗಲಿಲ್ಲ. ಕೊನೆಗೆ ರಾಜನ ನೆರವು ಪಡೆದು ಲಿಂಗಕ್ಕೆ ಹಗ್ಗ ಕಟ್ಟಿ, ಪಟ್ಟದಾನೆಯಿಂದ ಎಳೆಸಿದರಂತೆ. ಲಿಂಗ ಬೆಳೆದು ಬೃಹದಾಕಾರವಾಯಿತು. ಮಹಾಲಿಂಗವಾಯ್ತು. ಲಿಂಗ ಎಳೆದ ಆನೆಯ ಅಂಗಾಂಗ ಛಿದ್ರ, ಛಿದ್ರವಾಗಿ ದೂರ ದೂರ ಎಸೆಯಲ್ಪಟ್ಟಿತು. ಹೀಗೆ ಆನೆಯ ದವಡೆ ಅಂದರೆ ಕೊಂಬು ಕೊಂಬೆಟ್ಟು, ಕಾಲು ತಾರ್ಜಾಲು, ಕರಿ ಬಿದ್ದಿಲ್ಲ ಕರಿಯಾಲ, ತಲೆ ಬಿದ್ದಲ್ಲಿ ತಾಳೆಪಾಡಿ, ಕೈ ಬಿದ್ದಲ್ಲಿ ಕೇಪಳ, ಬಾಲ ಬಿದ್ದಲ್ಲಿ ಬೀದಿಮಜಲು ಎಂದು ಹೆಸರಾಯಿತು. ಈ ಪವಾಡ ಕಂಡ ರಾಜ ಮಹಾಲಿಂಗೇಶ್ವರನಿಗೆ ಗುಡಿ ಕಟ್ಟಿಸಿದನಂತೆ. ಹೀಗೆ ಶಿವಲಿಂಗ ಹೂತ ಊರು ಹೂತೂರಾಯಿತು. ನಂತರ ಇದು ಪುತ್ತೂರಾಯಿತು.
No comments:
Post a Comment