Monday, May 09, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 71

ಪೊಳಲಿ (Polali)

ದಕ್ಷಿಣ ಕನ್ನಡ ಜಿಲ್ಲೆಯು ಕಡಲತಟದ ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿರುವ ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನವು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದು. ಇದು ಮಂಗಳೂರಿನಿಂದ ಸುಮಾರು 20 ಕಿ.ಮೀ. ದೂರದಲ್ಲಿದ್ದು ಪೊಳಲಿಯು ಇತರ ದೇವಾಲಯಗಳಿಗಿಂತ ಭಿನ್ನವಾದ ಸ್ಥಳ ಪುರಾಣವನ್ನು ಹೊಂದಿದ್ದು ಇದು ಫಲ್ಗುಣಿನದಿಯ ದಡದಲ್ಲಿದೆ. ಕ್ರಿ.ಶ. 1446ರಲ್ಲಿ ಫಲ್ಗುಣಿನದಿಯಲ್ಲಿ ಬಂದ ನೆರೆಯಿಂದಾಗಿ ಪೊಳಲಿ ದೇವಸ್ಥಾನದ ಪವಿತ್ರ ಸ್ಥಳವನ್ನು ಹೊರತು ಪಡಿಸಿ ಉಳಿದೆಲ್ಲಾ ಭೂಪ್ರದೇಶಗಳೂ ಪೂರ್ತಿ ನಾಮಾವಶೇಷವಾಗಿತ್ತಂತೆ. ಕ್ರಿ.ಶ. 6ನೇ ಶತಮಾನದಲ್ಲಿ ಚೀನೀ ಯಾತ್ರಿಕ ಫಯಾನ್ ಭಾರತದಾದ್ಯಂತ ಸಂಚರಿಸುತ್ತಾ ಪೊಳಲಿಯ ದೇವಸ್ಥಾನದ ಮೂರ್ತಿಯನ್ನು ನೋಡಿ ಇದರ ಬಗ್ಗೆ ಇಷ್ಟೊಂದು ಪ್ರಭೆಯುಳ್ಳ ಅಥವಾ ಅದ್ಭುತವಾದ ಮೂರ್ತಿಯನ್ನು ನಾನೆಲ್ಲೂ ಕಂಡಿಲ್ಲ ಎಂದು ತನ್ನ ಪ್ರವಾಸಕಥನದಲ್ಲಿ ಉಲ್ಲೇಖಿಸಿದ್ದಾನೆ.


ಪುಳಿನ’ ಅಥವಾ ‘ಪೊಳಲ್’ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀದೇವಿಯ ಕ್ಷೇತ್ರಕ್ಕೆ ಪುಳಿನಾಪುರ ಪೊಳಲಿ ಎಂಬ ಹೆಸರು ಬಂದಿದೆ. ಇಲ್ಲಿನ ಪ್ರಧಾನ ದೇವತೆ ಶ್ರೀರಾಜರಾಜೇಶ್ವರೀದೇವಿ.

***

ಸುರಥ ಮಹಾರಾಜನು ವೈರಿಗಳ ಆಕ್ರಮನದಿಂದ ನಡೆದ ಯುದ್ದದಲ್ಲಿ ಸೋತು ಎಲ್ಲವನ್ನು ಕಳೆದುಕೊಂಡು ವೈರಾಗ್ಯದಿಂದ ಬರುತ್ತಿರಲು ಸುಮೇದಿ ಎಂಬ ವೈಶ್ಯನು ಸಿಕ್ಕಿದ್ದನು. ಇವರಿಬ್ಬರು ಒಟ್ಟಾಗಿ ಕಾಡದಾರಿಯಲ್ಲಿ ಹೋಗುತ್ತಿರಲು ಸುಮೇಧ ಮುನಿಯ ಆಶ್ರಮವನ್ನು ಕಂಡು ಮುನಿವರ್ಯರಲ್ಲಿ ತನ್ನ ಕಷ್ಟವೆಲ್ಲವನ್ನು, ಹೇಳಲಾಗಿ, ಋಷಿಮುನಿಯು ಅರಸನಿಗೆ ಶ್ರೀ ರಾಜರಾಜೇಶ್ವರೀಯ ಮಂತ್ರೋಪದೇಶವನ್ನು ಕೊಟ್ಟು ಧ್ಯಾನದಿಂದಿರಲು ಹೇಳಲಾಗಿ, ರಾಜನು ಶ್ರೀದೇವಿಯ ಧ್ಯಾನದಲ್ಲಿರಲು ಒಂದು ದಿನ ಕನಸಿನಲ್ಲಿ ಆಸ್ಥಾನರೂಢಳಾಗಿ ಪರಿವಾರ ಸಹಿತ ಕುಳಿತಿದ್ದ ಶ್ರೀ ದೇವಿಯನ್ನು ಕಂಡ ಅರಸ ವಿಷಯವನ್ನು ಮುನಿಗೆ ತಿಳಿಸಲಾಗಿ, ಸುಮೇಧ ಮುನಿಯು ಅರಸನಿಗೆ ತಾನು ಕಂಡಂತೇ ಮೂರ್ತಿಯನ್ನು ಸೃಷ್ಟಿಸಿ, ಪ್ರತಿಷ್ಟಾಪಿಸಿ ಪೂಜಿಸು ಎಂದು ಹೇಳಿದಂತೆ ಅದರಂತೆಯೇ ರಾಜನು  ಮಣ್ಣಿನಿಂದ ಪರಿವಾರ ಸಹಿತ ಶ್ರೀದೇವಿಯ ಮೂರ್ತಿಯನ್ನು, ಸೃಷ್ಟಿಸಿ, ಪೂಜಿಸುತ್ತಿರಲು ತಾನು ಕಳಕೊಂಡ ಸಮಸ್ತ ರಾಜ್ಯಗಳನ್ನು ಮರಳಿ ಪಡೆದನು.

No comments:

Post a Comment