Friday, December 23, 2016

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 79

ಗುರುವಾಯೂರು (Guruvayur)

ಕೇರಳ ರಾಜ್ಯದಲ್ಲಿರುವ ಜನಪ್ರೀಯ ಹಾಗೂ ದೇಶದಲ್ಲೆ ಸಾಕಷ್ಟು ಹೆಸರುವಾಸಿಯಾಗಿರುವ ಶ್ರೀ ಗುರುವಾಯೂರು ದೇವಾಲಯ. ಕೃಷ್ಣನು ಗುರುವಾಯೂರಪ್ಪನಾಗಿ ನೆಲೆಸಿರುವ ಪುಣ್ಯ ಕ್ಷೇತ್ರ.  ಗುರುವಾಯೂರು  ತ್ರಿಶ್ಶೂರ್ ನಗರ ಕೇಂದ್ರದಿಂದ 28 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ತ್ರಿಶ್ಶೂರ್ ನಿಂದ ಬಸ್ಸುಗಳು ಹಾಗೂ ರೈಲು ದೊರೆಯುತ್ತದೆ. ಗುರುವಾಯೂರು ತನ್ನದೆ ಆದ ರೈಲು ನಿಲ್ದಾಣವನ್ನೂ ಸಹ ಹೊಂದಿದೆ. ಅಲ್ಲದೆ ಕೊಚ್ಚಿ ಮಹಾನಗರವು ತ್ರಿಶ್ಶೂರ್ ಗೆ ಬಲು ಹತ್ತಿರದಲ್ಲಿರುವುದರಿಂದ ಗುರುವಾಯೂರನ್ನು ಭಾರತದ ಎಲ್ಲ ಪ್ರಮುಖ ನಗರ ಕೆಂದ್ರಗಳಿಂದ ಸುಲಭವಾಗಿ ತಲುಪಬಹುದು.ಇದು ವಿಷ್ಣುವಿನ ದೇವಾಲಯವಾಗಿದ್ದರೂ ಸಹ ಬಾಲ ಕೃಷ್ಣನ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ಇದನ್ನು ಭೂಲೋಕ ವೈಕುಂಠ ಎಂತಲೂ ಸಹ ಕರೆಯಲಾಗುತ್ತದೆ.

Sri Guruvayurappan  (Lord Sri Krishna in Guruvayur)


ಗುರುವಾಯೂರಪ್ಪನ ವಿಗ್ರಹವು ಚುಂಬಕಾಕರ್ಷಣೆಯಿರುವ ಕಪ್ಪು ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ನಸುಕಿನ ಮೂರು ಘಂಟೆ ಸಮಯದಲ್ಲೆ ದೇವಾಲಯ ಆರಂಭಗೊಳ್ಳುತ್ತದೆ. ಎಳ್ಳೆಣ್ಣೆಯಿಂದ ಮೊದಲಿಗೆ ಅಭಿಷೇಕ ಮಾಡಿ ನಂತರ ಗಿಡಮೂಲಿಕೆಗಳಿಂದ ತಯಾರಿಸಲಾದ ಕಂದು ಬಣ್ಣದ ಲೇಪನವೊಂದನ್ನು ವಿಗ್ರಹಕ್ಕೆ ಹಚ್ಚಲಾಗುತ್ತದೆ. ಇದನ್ನು ವಕ ಎನ್ನುತ್ತಾರೆ.ಈ ಒಂದು ಅಲಂಕಾರಿಕ ದೃಶ್ಯವನ್ನು ನೊಡಲೆಂದೆ ಭಕ್ತಾದಿಗಳು ಸಾಲು ಸಾಲಾಗಿ ನಸುಕಿನ ವೇಳೆಯಲ್ಲೆ ನಿಂತು ಕಾಯುತ್ತಿರುತ್ತಾರೆ. ನಂತರ ವಿಗ್ರಹವನ್ನು ಗುರುವಾಯೂರು ದೇವಾಲಯದ ಕೊಳದ ನೀರಿನಿಂದ ಶುದ್ಧಿಕರಿಸಲಾಗುತ್ತದೆ ಹಾಗೂ ಆ ನೀರನ್ನೆ ತೀರ್ಥವಾಗಿ ಭಕ್ತರು ಪಡೆಯುತ್ತಾರೆ.ಚುಂಬಕ ಶಕ್ತಿಯ ಕಲ್ಲಿನ ಮೇಲೆ ಹರಿದಾಡಿ ನಂತರ ಗಿಡ ಮೂಲಿಕೆಗಳ ಲೇಪನದ ಅಂಶಗಳನ್ನು ಹೊಂದಿರುವುದರಿಂದ ಆ ತೀರ್ಥ ಸಾಕಷ್ಟು ಒಷಧೀಯ ಗುಣಗಳನ್ನು ಹೊಂದಿರುತ್ತದೆ ಎನ್ನಲಾಗುತ್ತದೆ ಹಾಗೂ ಎಲ್ಲ ದೈಹಿಕ ಹೀನತೆಗಳನ್ನು ಹೋಗಲಾಡೈಸಬಲ್ಲುದು ಎಂದು ಬಕ್ತರು ನಂಬುತ್ತಾರೆ.

***

ಕುರು ವಂಶದ ರಾಜನಾದ ಹಾಗೂ ಅಭಿಮನ್ಯುವಿನ ಮಗನಾದ ಪರೀಕ್ಷಿತ ರಾಜನು ತಕ್ಷಕ ಎಂಬ ವಿಷ ಸರ್ಪದ ಕಡಿತಕ್ಕೆ ಒಳಗಾಗಿ ಪ್ರಾಣ ಬಿಟ್ಟನು. ಅವನ ಮಗನಾದ ಜನಮೇಜಯನಿಗೆ ಇದರಿಂದ ಕೋಪ ಉಂಟಾಗಿ ತಕ್ಷಕ ಸರ್ಪದ ಮೇಲೆ ಪ್ರತಿಕಾರ ತಿರಿಸಿಕೊಳ್ಳಲು ಸರ್ಪಸಾತ್ರ ಎಂಬ ಯಾಗ ಪ್ರಾರಂಭಿಸಿದ.ಈ ಯಾಗದಲ್ಲಿ ಎಲ್ಲ ದಿಕ್ಕುಗಳಿಂದಲೂ ಸರ್ಪಗಳು ತಾವಾಗಿಯೆ ಬಂದು ಅಗ್ನಿಯಲ್ಲಿ ಬಿದ್ದು ಸಾಯಹತ್ತಿದವು. ತಕ್ಷಕ ಸರ್ಪನು ಬಂದನಾದರೂ ಸಾಯಲಿಲ್ಲ. ಕಾರಣ ಆತ ಅಮೃತ ಸೇವಿಸಿದ್ದ. ಆದರೆ ಮಿಕ್ಕ ಸರ್ಪಗಳು ಪ್ರಾಣತೆತ್ತಿದ್ದರ ಪರಿಣಾಮವಾಗಿ ಜನಮೇಜಯನಿಗೆ ಕುಷ್ಠ ರೋಗ ಬಂದು ನರಳಾಡತೊಡಗಿದ.ಎಲ್ಲ ರೀತಿಯ ಉತ್ತಮ ಚಿಕಿತ್ಸೆಗಳನ್ನು ಪಡೆದನಾದರೂ ಗುಣಮುಖನಾಗಲಿಲ್ಲ. ಹೀಗಿರುವಾಗ ಒಮ್ಮೆ ಅವನ ಕನಸಿನಲ್ಲಿ ದತ್ತಾತ್ರೇಯರು ಸ್ವಾಮಿಗಳು ಬಂದು ಗುರುವಾಯುರಪ್ಪನನ್ನು ಕುರಿತು ಪೂಜಿಸುವಂತೆಯೂ ಅದರ ಮಹತ್ವವನ್ನು ವಿವರಿಸಿದರು.  ಇದನ್ನು ತಿಳಿದ ನಂತರ ಜಯಮೇಜಯನು ಶ್ರೀ ಕ್ಷೇತ್ರಕ್ಕೆ ಬಂದು ಕೃಷ್ಣನನ್ನು ಪೂಜಿಸಿದ್ದಲ್ಲದೆ ತನಗೊದಗಿದ್ದ ಮಾರಕ ರೋಗದಿಂದ ಮುಕ್ತನಾದನು. 

ದತ್ತಾತ್ರೇಯರು ಜಯಮೇಜಯನಿಗೆ ತಿಳಿಸಿದ ಗುರುವಾಯೂರು ಸ್ಥಳ ಮಹಿಮೆಯು ಈ ರೀತಿಯಲ್ಲಿದೆ- 

ಬಹಳ ಹಿಂದೆ ಬ್ರಹ್ಮನು ಪದ್ಮ ಕಲ್ಪದಲ್ಲಿ ಸೃಷ್ಟಿ ಹಾಗೂ ಜೀವಿಗಳ ರಚ್ನೆಯ ಕಾರ್ಯದಲ್ಲಿ ತೊಡಗಿದ್ದಾಗ ವಿಷ್ಣು ಪ್ರತ್ಯಕ್ಷನಾದನು. ಇದರಿಂದ ಸಂತಸಗೊಂಡ ಬ್ರಹ್ಮ ಸೃಷ್ಟಿ ಪರಿಪಾಲಕನಾದ ವಿಷ್ಣುನನ್ನು ಕುರಿತು ತನ್ನನ್ನು ಹಾಗೂ ತನ್ನ ಜೀವಿಗಳನ್ನು ಸಂರಕ್ಷಿಸುತ್ತಿರಬೇಕೆಂದು ಕೇಳಿದನು. ಅದಕ್ಕೆ ವಿಷ್ಣು ತನ್ನ ಪ್ರತಿಮೆಯೊಂದನ್ನು ಮಾಡಿ ಅವನಿಗೆ ನೀಡಿದ.

ವರಾಹ ಕಲ್ಪದಲ್ಲಿ ಬ್ರಹ್ಮನು ರಾಜನಾದ ಸುತಪಾಸ ಹಾಗೂ ಪ್ರಸ್ನಿ ದಂಪತಿಗಳಿಗೆ ಆ ವಿಷ್ಣುವಿನ ವಿಗ್ರಹ ನೀಡಿ ಪೂಜಿಸಲು ಹೇಳಿದ. ಹೀಗೆ ಅವರು ಅದನ್ನು ಭಕ್ತಿಯಿಂದ ಪೂಜಿಸ ಹತ್ತಿದಾಗ ವಿಷ್ಣು ಅವರಿಗೆ ದರ್ಶನ ನೀಡಿ ಮುಂದಿನ ನಾಲ್ಕು ಜನ್ಮಗಳಲ್ಲಿ ಅವರಿಗೆ ಪುತ್ರನಾಗಿಯೆ ತಾನು ಜನ್ಮ ಪಡೆಯುವುದಾಗಿ ಅಶ್ವಾಸನೆ ನೀಡಿದ.ಹೀಗೆ ಸತ್ಯಯುಗದಲ್ಲಿ ವಿಷ್ಣು ಪ್ರಸ್ನಿಗರ್ಭನಾಗಿಯೂ, ತ್ರೇತಾ ಯುಗದಲ್ಲಿ ವಾಮನನಾಗಿಯೂ, ರಾಮನಾಗಿಯೂ ಜನ್ಮ ತಳೆದ. ನಂತರ ಕೊನೆಯದಾದಿ ದ್ವಾಪರ ಯುಗದಲ್ಲಿ ಕೃಷ್ಣನಾಗಿಯೂ ಜನ್ಮ ತಳೆದ. ಕೃಷ್ಣನಾಗಿದ್ದಾಗಲೂ ವಿಷ್ಣು ಮಾಡಿದ ಅವನದೆ ಆದ ಪ್ರತಿಮೆಯನ್ನು ಕೃಷ್ಣ ಪೂಜಿಸುತ್ತಿದ್ದ.

Lord Sri Krishna temple in Guruvayur
ಕೃಷ್ಣನು ಇಹ ಲೋಕ ತ್ಯಜಿಸುವ ಸಮಯ ಬಂದಾಗ ಉದ್ಧವನನ್ನು ಕರೆದು ದ್ವಾರಕೆಯು ಮುಳುಗುವುದಾಗಿಯೂ ತದನಂತರ ವಿಷ್ಣುವಿನ ವಿಗ್ರಹವನ್ನು ಬೃಹಸ್ಪತಿಯಾದ ಗುರು ಮತ್ತು ವಾಯು ದೇವರಿಗೆ ಕೊಡಬೇಕೆಂದು ಹೇಳಿದನು. ತರುವಾಯ ಅದೆ ರೀತಿಯಾಗಿ ಉದ್ಧವನು ಆ ವಿಗ್ರಹವನ್ನು ಗುರು ಮತ್ತು ವಾಯುವಿನ ಸುಪರ್ದಿಯಲ್ಲಿ ನೀಡಿ ತಪಸ್ಸಿಗೆಂದು ತೆರಳಿದ.ಗುರು ಮತ್ತು ವಾಯು ದಕ್ಷಿಣದೆಡೆ ತಮ್ಮ ಪ್ರಯಾಣ ಆರಂಭಿಸಿ ಇಂದಿನ ಗುರುವಾಯೂರಿನತ್ತ ಬಂದು ಇಲ್ಲಿನ ಪ್ರಕೃತಿ ಸೊಬಗಿನಿಂದ ಮೂಕವಿಸ್ಮಿತರಾದರು. ನಂತರ ಈ ಒಂದು ಸ್ಥಳದಲ್ಲಿಯೆ ಶಿವನು ವಿಷ್ಣುವಿನನ್ನು ಪೂಜಿಸಿದುದರ ಕುರಿತು ತಿಳಿದರು ಹಾಗೂ ಆ ವಿಗ್ರಹವನ್ನು ಇಲ್ಲಿಯೆ ಪ್ರತಿಷ್ಠಾಪಿಸಲು ತಿರ್ಮಾನಿಸಿದರು.ಹಾಗಾಗಿ ವಿಶ್ವಕರ್ಮನನ್ನು ಕರೆಸಿ ಇಲ್ಲಿ ಒಂದು ದೇವಾಲಯ ನಿರ್ಮಾಣ ಮಾಡಲು ಸೂಚಿಸಿದರು. ಅದರಂತೆ ವಿಶ್ವಕರ್ಮನು ಕೆಲವೆ ನಿಮಿಷಗಳಲ್ಲಿ ಇಲ್ಲೊಂದು ಸುಂದರವಾದ ದೇವಾಲಯ ನಿರ್ಮಾಣ ಮಾಡಿದ. ಹೀಗೆ ಗುರು ಮತ್ತು ವಾಯುವಿನಿಂದ ಪ್ರತಿಷ್ಠಾಪಿಸಲಾದ ಇದು ಗುರುವಾಯೂರು ದೇವಾಲಯವಾಗಿ ಪ್ರಸಿದ್ಧವಾಯಿತು.

ಗುರುವಾಯೂರು ಪಟ್ಟಣವು ದೇವಾಲಯದಿಂದಾಗಿಯೆ ಜೀವಕಳೆ ಹೊಂದಿರುವ ಪಟ್ಟಣವಾಗಿ ಕಂಗೊಳಿಸುತ್ತದೆ. ಅಪ್ಪನ್ ಎಂದರೆ ತಂದೆ ಅಥವಾ ದೇವ ಎಂಬ ಭಾವಾರ್ಥ ಬರುವುದರಿಂದ ಈ ಊರಿಗೆ ಒಡೆಯನಾಗಿ, ಅಪ್ಪನಾಗಿ, ದೇವರಾಗಿ ಗುರುವಾಯೂರಪ್ಪನ್ ನೆಲೆಸಿದ್ದಾನೆ.

No comments:

Post a Comment