“ರವಿ ಕಾಣದ್ದನ್ನು ಕವಿ ಕಾಣುತ್ತಾನೆ, ಕವಿ ಕಾಣದ್ದನ್ನು ಕಲಾವಿದ ನೋಡುತ್ತಾನೆ “ಎನ್ನುವುದು ಜನಪ್ರಿಯ ಮಾತು. ಕಲಾವಿದ ಎಂದರೆ ಕೇವಲ ನಟನೆ ಮಾಡುವವರಷ್ಟೇ ಆಗಿರಬೇಕಾಗಿಲ್ಲ. ಚಿತ್ರ ರಚನೆ, ಕರಕುಶಲ ಕಲಾವಿದರೂ ಆಗಿರಬಹುದು. ಅವರ ಕಣ್ಣಿಗೆ ಸಿಕ್ಕಿದ ವಸ್ತುವಿನಿಂದಲೇ ಅವರು ಅಪೂರ್ವವಾದ ಇನ್ನೊಂದೇ ವಸ್ತುವಿನ ಸೃಷ್ಟಿಯನ್ನು ಮಾಡಬಲ್ಲರು. ಉಪಯೋಗಕ್ಕೆ ಬಾರದ ಕಾಗದ, ಬಟ್ಟೆ, ಕಾರ್ಡ್ ಬೋರ್ಡ್, ಪ್ಲಾಸ್ಟಿಕ್ ಹಾಳೆ ಏನೇ ಇದ್ದರೂ ಇಂತಹಾ ಕಲಾವಿದರ ಕೈನಲ್ಲಿ ಸಿಕ್ಕರೆ ನಾವು ಊಹಿಸಲು ಅಸಾಧ್ಯವಾದ ರೂಪ ಹೊಂದಿ ಅಚ್ಚರಿ ಮೂಡಿಸುತ್ತದೆ. ನಮ್ಮ ನಡುವೆ ಇಂದಿಗೂ ಅಂತಹಾ ಕುಶಲ ಕಲಾವಿದರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂತಹವರಲ್ಲಿ ಓರ್ವರು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ವಾಸವಾಗಿರುವ ತೇಜೋವತಿ ಆಚಾರ್ಯ.
ಚಿಕ್ಕ ವಯಸ್ಸಿನಿಂದಲೇ ತಮಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಉಪಯೋಗಿಸಿ ಬೊಂಬೆ, ಹೂವು ಸೇರಿದಂತೆ ನಾನಾ ವಿಧದ ಅಲಂಕಾರಿಕ ಅವಸ್ತುಗಳನ್ನು ತಯಾರಿಸುವ ಹವ್ಯಾಸ ತೇಜೋವತಿಯವರದಾಗಿತ್ತು. ಮುಂದೆ ಮದುವೆಯಾದ ಬಳಿಕವೂ ಪತಿಯ ಪ್ರೋತ್ಸಾಹದೊಡನೆ ತಮ್ಮ ಸೃಜನಶೀಲ ಕಲಾ ಸೇವೆಯನ್ನು ಮುಂದುವರಿಸಿದ್ದರು.
ಜ್ಙಾನಬೋಡಿನಿ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿದ್ದ ತೇಜೋವತಿಯವರು ಹಲವು ವಸ್ತುಗಳಿಂದ ಅಪರೂಪದ ಕಲಾಕೃತಿಗಳನ್ನು ರಚಿಸುವಲ್ಲಿ ಸಿದ್ದಹಸ್ತರಾಗಿದ್ದಾರೆ. ಮಣ್ಣು, ಬೆತ್ತ, ಬಟ್ಟೆಗಳಿಂದ ನಾನಾ ವಿಧದ ಕಲಾಕೃತಿಗಳನ್ನು ರಚಿಸಬಲ್ಲ ಇವರು ದಾರದಿಂದ ಗಣೇಶ, ಹೂವು, ಬಳ್ಳಿಗಳಂತಹಾ ಕೃತಿಗಳನ್ನು ರಚಿಸಬಲ್ಲರು. ಹೊಲಿಗೆ, ಎಂಬ್ರಾಯ್ಡರಿ, ಪೇಂಟಿಂಗ್ಸ್, ಬೆಂಡಿನಿಂದ ಬೊಂಬೆಗಳ ರಚನೆ, ಹ್ಯಾಂಡ್ ಎಂಬ್ರಾಯ್ಡರಿ, ಚಾರ್ ಕೋಲ್ ಪೇಂಟಿಂಗ್, ಎಂಬೋಸಿಂಗ್, ಎನ್ ಗ್ರೇವಿಂಗ್, ಕಟ್ ಫಾಲಿಂಗ್ ಫ್ಯಾಬ್ರಿಕ್ ಪೇಂಟಿಂಗ್ ಗಳಲ್ಲಿಯೂ ಇವರು ಪರಿಣಿತರು. ನಾನಾ ವಿಧದ ಅನುಪಯುಕ್ತ ವಸ್ತುಗಳನ್ನು ಬಳಸಿ ಗ್ರೀಟಿಂಗ್ ಕಾರ್ಡ್, ಬೊಂಬೆಗಳು, ನಿಜವಾದ ಹೂವುಗಳಂತೆ ಕಾಣಬಲ್ಲ ಹೂವನ್ನು ಇವರು ಸೃಷ್ಟಿಸಬಲ್ಲರು. ಮೈದಾ ಹಿಟ್ಟು ಬಳಸಿ ಬಟ್ಟೆ, ಕಾಗದಗಳಿಂದ, ಕ್ರೋಶಾ ನಿಟ್ಟಿಂಗ್ ಗಳಿಂದ ಕಲಾಕೃತಿಗಳನ್ನು ರೂಪಿಸಬಲ್ಲ ಇವರ ಪ್ರತಿಭೆ ಅಪರೂಪವೇ ಸರಿ.
ಬೆಂಗಳೂರು ನಗರದ ಕಬ್ಬನ್ ಪಾರ್ಕ್ ಬಾಲ ಭವನದಲ್ಲಿ ನಡೆಯುವ ಬೇಸಿಗೆ ಶಿಬಿರಗಳಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುವ ತೇಜೋವತಿ ಚಿಕ್ಕ ಮಕ್ಕಳಿಗಾಗಿ ಪೇಂಟಿಂಗ್ಫ್, ಪೇಪರ್ ಕಟ್ಟಿಂಗ್, ನಾನಾ ವಿಧದ ಹೂವಿನ ರಚನೆಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ಈ ಮೂಲಕವಾಗಿ ಅವರು ಮಕ್ಕಳಲ್ಲಿಯೂ ಈ ಕಲಾವಂತಿಕೆ ಅರಳುವಂತೆ ಮಾಡುತ್ತಿದ್ದಾರೆ. ಕಸದಿಂದ ರಸ ಎನ್ನುವಂತೆ ವಿವಿಧ ಬಟ್ಟೆಯ ತುಂಡುಗಳನ್ನು ಬಳಸಿ ತಯಾರಿಸುವ ಸುಂದರವಾದ ಟೇಬಲ್ ಕ್ಲಾತ್, ವಿವಿಧ ಅಬ್ಗೆಯ ವ್ಯಾನಿಟಿ ಬ್ಯಾಗ್ ಗಳನ್ನು ತಯಾರಿಸುವ ಇವರ ಕಲಾ ನೈಪುಣ್ಯತೆಗೆ ತಲೆದೂಗಲೇಬೇಕು.
ದೆಹಲಿಯ ಕೇಂದ್ರೀಯ ಸಂಸ್ಕೃತಿ ಸಂಶೋಡನಾ ತರಬೇತಿ ಸಂಸ್ಟೆಯ ವತಿಯಿಂದ ವರ್ಷಕ್ಕೊಮ್ಮೆ ಆಯೋಜಿಸಲ್ಪಡುವ "ಕಸದಿಂದ ರಸ(Wealth from Waste)" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ತೇಜೋವತಿ ಪಾಲ್ಗೊಂಡು ಉಪನ್ಯಾಸ ನೀಡುತ್ತಾರೆ. ರಾಜ್ಯದ ನಾನಾ ಭಾಗಗಳಲ್ಲಿ ನಡೆದ ಕರಕುಶಲ ವಸ್ತು ಪ್ರದರ್ಶನಗಳಲ್ಲಿ ತಮ್ಮ ಅಪರೂಪದ ರಚನೆಗಳನ್ನು ಪ್ರದರ್ಶಿಸಿ ಅಪಾರ ಮೆಚ್ಚುಗೆ ಗಳಿಸಿದ್ದಾರೆ.
ಕೆಮ್ಲಿನ್ ವಿಶ್ವ ವಿದ್ಯಾನಿಲಯದಿಂದ
ಬಂಬೂ ಆರ್ಟ್ಸ್ ಗೆ ಸಂಬಂಧಿಸಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ತೇಜೋವತಿ ಇತ್ತೀಚೆಗೆ ಮೂಲೆಗುಂಪಾಗುತ್ತಿರುವ "ಬಾಟಿಕ್" ಎನ್ನುವ ಅಪೂರ್ವ ಕಲೆಯ ಕುರಿತಂತೆ ಪರಿಣತಿ ಸಾಧಿಸಿರುವ ಈಕೆ ಯುವ ಪೀಳಿಗೆಗೆ ಸಹ ಈ ಕಲೆಯನ್ನು ಕುರಿತಂತೆ ತರಬೇತಿ ನೀಡುತ್ತಾ ಬರುತ್ತಿದ್ದಾರೆ.
ಇನ್ನು ಕೆಲವರಿಗೆ ಇಂತಹಾ ಕುಶಲ ಕಲೆಗಳಲ್ಲಿ ಆಸಕ್ತಿ ಇದ್ದರೂ ಕಲಿಯಲು ಸಾಧ್ಯವಾಗುವುದಿಲ್ಲ ಅಂತಹಾ ಮಹಿಳೆಯರು, ಹೆಣ್ಣು ಮಕ್ಕಳಿಗೆ ತೇಜೋವತಿ ಆವರು ಕಡಿಮೆ ವೆಚ್ಚದಲ್ಲಿ ಅವರಿಷ್ಟದ ಕಲಾಕೃತಿ ರಚಿಸುವುದನ್ನು ಕಲಿಸುತ್ತಿದ್ದಾರೆ.
ಇಂದಿನ ಆಧುನಿಕ ಯುಗದಲ್ಲಿ ಅಂತರ್ಜಾಲ ಸರ್ವಸ್ವವನ್ನೂ ಆಕ್ರಮಿಸಿದೆ. ತೇಜೋವತಿಯವರು ತಮ್ಮ ಕುಶಲ ಕಲಾಕೃತಿಗಳನ್ನು ಕಲಾಭಿಮಾನಿಗಳಿಗೆ ತಲುಪಿಸಲೂ ಸಹ ಇದೇ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಫೇಸ್ ಬುಕ್ ತಾಣದಲ್ಲಿ "ಕಾವೇರಿ ಕರಕುಶಲ" ಎನ್ನುವ ಹೆಸರಿನಲ್ಲಿ
ತಾವು ರಚಿಸಿದ ವಿವಿಧ ವಸ್ತುಗಳನ್ನು (ಸರ, ಓಲೆ, ಬ್ಯಾಗ್, ಗ್ರೀಟಿಂಗ್ಸ್ ಇತ್ಯಾದಿ..) ಪ್ರದರ್ಶನಕ್ಕಿಡುವ ಇವರು ಆನ್ ಲೈನ್ ಮೂಲಕ ಅದನ್ನು ಮಾರಾಟ ಮಾಡುವಲ್ಲಿಯೂ ಸಫಲರಾಗಿದ್ದಾರೆ.
ತೇಜೋವತಿಯವರು ಕೆಂಗೇರಿ ಉಪನಗರ ಲೇಡಿಸ್ ಕ್ಲಬ್ ನ 2015 ನೇ
ಸಾಲಿನ ವಾರ್ಷಿಅ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ. ಪತಿ ಮತ್ತು ಇಬ್ಬರು ಪುತ್ರಿಯರೊಡನೆ ನೆಮ್ಮದಿಯ ಜೀವನ ನಡೆಸುತ್ತಿರುವ ತೇಜೋವತಿಯವರ ಮಕ್ಕಳೂ ಸಹ ತಮ್ಮ ತಾಯಿಯ ಪ್ರತಿಭೆಯನ್ನು ಪ್ರೊತ್ಸಾಹಿಸಿ ಬೆಂಬಲ ನೀಡುತ್ತಾ ಬಂದಿದ್ದಾರೆ.
ಹೀಗೆ ತಾವು ನೆಚ್ಚಿಕೊಂಡ ಪ್ರವೃತ್ತಿಯನ್ನೇ ಸ್ವಂತ ಪ್ರತಿಭೆಯಿಂದ ವೃತ್ತಿಯಾಗಿಸಿಕೊಂಡ ತೇಜೋವತಿ ಅವರಂತಹಾ ಮಹಿಳೆಯರು ವಿರಳ. ಇಂತಹಾ ಅಪರೂಪದ ಮಹಿಳೆ ನಮ್ಮ ನಡುವಿರುವುದು ನಮಗೆಲ್ಲ ಹೆಮ್ಮೆ.
***
ತೇಜೋವತಿ ಅವರು ಪರಿಣತಿ ಸಾಧಿಸಿರುವ ಕೆಲವು ಕುಶಲ ಕಲಾ ಪ್ರಕಾರಗಳು ಹೀಗಿವೆ-
- ಪೇಂಟಿಂಗ್ (ಪೋಸ್ಟರ್ ಮತ್ತು ಫ್ಯಾಬ್ರಿಕ್)
- · ಎಂಬ್ರಾಯ್ಡರಿ
- · ಕ್ವಿಲ್ಲಿಂಗ್ ಆರ್ಟ್
- · ಪೇಪರ್ ಫೋಲ್ಡಿಂಗ್
- · ಗಿಫ್ಟ್ ಪ್ಯಾಕಿಂಗ್
- · ಗ್ಲಾಸ್ ಪೇಂಟಿಂಗ್
- · ಚಾರ್ಕೋಲ್ ಪೇಂಟಿಂಗ್
- · ಫ್ಲವರ್ ಮೇಕಿಂಗ್
- · ಸೆರೋಮಿಕ್ ವರ್ಕ್
- · ಐಸ್ ಕ್ರೀಂ ಸ್ಟಿಕ್ ಆರ್ಟ್
- · ಬ್ಯಾಗ್ ಮತ್ತು ಪರ್ಸ್ ತಯಾರಿಕೆ
- · ಟ್ಯಾಗಲ್ ತಯಾರಿಕೆ ಇತ್ಯಾದಿ, ಇತ್ಯಾದಿ....