Wednesday, July 26, 2017

ಮ್ಮಲ್ಲಿನ ಸ್ಥಳ ಪುರಾಣಗಳು (Myths) - 85

ನಾಗಲಮಡಿಕೆ (Nagalamadike)

ನಾಗಲಮಡಿಕೆ, ತುಮಕೂರು ಜಿಲ್ಲೆ ಪಾವಗಡಕ್ಕೆ ಕೇವಲ 15 ಕಿಲೋ ಮೀಟರ್ ದೂರದಲ್ಲಿರುವ ಸುಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರ. ಕರ್ನಾಟಕದಲ್ಲಿರುವ ಪ್ರಮುಖ ಮೂರು ಸುಬ್ರಹ್ಮಣ್ಯ ಕ್ಷೇತ್ರಗಳ ಪೈಕಿ ನಾಗಲಮಡಿಕೆಯ ಈ ದೇವಾಲಯವೂ ಒಂದು.ನಮ್ಮ ಹಿರಿಯರು ದಕ್ಷಿಣಕನ್ನಡದ ಕುಕ್ಕೆ ಸುಬ್ರಹ್ಮಣ್ಯವನ್ನು ಆದಿ ಸುಬ್ರಹ್ಮಣ್ಯ ಎಂದೂ, ದೊಡ್ಡಬಳ್ಳಾಪುರ ಬಳಿ ಇರುವ ಘಾಟಿ ಸುಬ್ರಹ್ಮಣ್ಯಕ್ಕೆ ಮಧ್ಯ ಸುಬ್ರಹ್ಮಣ್ಯ ಎಂದೂ ನಾಗಲಮಡಿಕೆ ಸುಬ್ರಹ್ಮಣ್ಯಕ್ಕೆ ಅಂತ್ಯ ಸುಬ್ರಹ್ಮಣ್ಯ ಎಂದೂ ಕರೆದಿದ್ದಾರೆ.




ಉತ್ತರ ಪಿನಾಕಿನಿ ನದಿಯ ದಂಡೆಯಲ್ಲಿ ಸುಬ್ರಹ್ಮಣ್ಯ ದೇವಾಲಯವಿದೆ. ಗರ್ಭಗೃಹದಲ್ಲಿ ಅತ್ಯಂತ ಸುಂದರವಾದ ಮೂರು ಸುತ್ತು ಸುತ್ತಿ ನಿಂತ ಮೂರು ಅಡಿ ಎತ್ತರದ ಏಳು ಹೆಡೆ ನಾಗಪ್ಪನ ಮೂರ್ತಿಯಿದೆ. ಪ್ರತಿವರ್ಷ ಪುಷ್ಯ ಶುದ್ಧ ಷಷ್ಠಿಯಂದು ಅಂದರೆ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ನಾಗಲಮಡಿಕೆಯ ಸುಬ್ರಹ್ಮಣ್ಣೇಶ್ವರ ಸ್ವಾಮಿ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ.ತೀಟೆ ನಾಗಪ್ಪ ದೇವಾಲಯ: ನಾಗಲ ಮಡಿಕೆಯಲ್ಲಿ ಎತ್ತರದ ಕಲ್ಲುಬಂಡೆಯ ಮೇಲೆ ಏಳು ಹೆಡೆಯ ನಾಗರನಂತೆಯೇ ಇರುವ ಬಂಡೆಯೊಂದಿದೆ. ಇದನ್ನು ಉದ್ಭವ ನಾಗ ಎಂದೂ ತೀಟೆ ನಾಗಪ್ಪ ಎಂದೂ ಕರೆಯುತ್ತಾರೆ. ತೀಟೆ ಎಂದರೆ ಗಂದೆ, ಚರ್ಮವ್ಯಾಧಿ ಎಂದರ್ಥ. ಚರ್ಮರೋಗಿಗಳು ಪೂಜೆ ಸಲ್ಲಿಸಿದರೆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿಗೆ ಕಿವಿ ಸೋರುತ್ತಿದ್ದರೆ, ಮೈಮೇಲೆ ಗಂದೆ, ಬೊಕ್ಕೆಗಳಾದರೆ ಇಲ್ಲಿ ಎಂಜಲು ಎಲೆ ತೆಗೆಯುವ ಹರಕೆ ಹೊರುತ್ತಾರೆ.

ನಾಗಲಮಡಿಕೆ, ಪಾವಗಡ, ತುಮಕೂರು, ಸುಬ್ರಹ್ಮಣ್ಯಪ್ರತಿ ನಿತ್ಯ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ಮಕ್ಕಳಾಗದವರು ಇಲ್ಲಿ ಬಂದು ಹರಕೆ ಹೊರುತ್ತಾರೆ. ದೋಷ ನಿವಾರಣೆಗಾಗಿ ನಾಗರಕಲ್ಲು ಪ್ರತಿಷ್ಠಾಪನೆ, ಸರ್ಪ ಸಂಸ್ಕಾರ ಇತ್ಯಾದಿ ದೋಷ ಪರಿಹಾರ ಪೂಜೆ ಮಾಡಿಸುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ವಿವಾಹ ಮಹೋತ್ಸವಗಳು ನಡೆಯುತ್ತವೆ.

***

ಹಿಂದೆ ಅಗ್ರಹಾರವಾಗಿದ್ದ ನಾಗಲಮಡಿಕೆಯಲ್ಲಿ ಅನ್ನಂಭಟ್ಟರೆಂಬ ಋತ್ವಿಕರು ವಾಸಿಸುತ್ತಿದ್ದರು. ಅವರ ಮನೆದೇವರು ಕುಕ್ಕೆ ಸುಬ್ರಹ್ಮಣ್ಯ ಹೀಗಾಗಿ ಪ್ರತಿವರ್ಷ ಅವರು ಕುಕ್ಕೆ ರಥೋತ್ಸವಕ್ಕೆ ಹೋಗುತ್ತಿದ್ದರು. ಹಲವು ವರ್ಷಗಳ ಬಳಿಕ ವಯೋವೃದ್ಧರಾದ ಅನ್ನಂಭಟ್ಟರು ಕುಕ್ಕೆಗೆ ಹೊರಟರಾದರೂ, ರಥ ಎಳೆಯುವ ವೇಳೆಗೆ ಕುಕ್ಕೆ ತಲುಪಲು ಸಾಧ್ಯವಾಗದೆ ನೊಂದರು, ಸುಬ್ರಹ್ಮಣ್ಯನಿಗೆ ನನ್ನ ಸೇವೆ ಬೇಡವಾಗಿತ್ತೆ ಎಂದು ಮರುಗಿದರು. ಭಕ್ತನ ಮೊರೆ ಕೇಳಿದ ಸುಬ್ರಹ್ಮಣ್ಯ ಇತ್ತ ಕುಕ್ಕೆಯಲ್ಲಿ ಎಷ್ಟೇ ರಥ ಎಳೆದರು ರಥ ಚಲಿಸದಂತೆ ಮಾಡಿದ. ವಟುರೂಪದಲ್ಲಿ ಕಾಣಿಸಿಕೊಂಡು, ಭಕ್ತಶ್ರೇಷ್ಠರೊಬ್ಬರು ಬರುತ್ತಿದ್ದಾರೆ. ಅವರು ಬಂದು ಹಗ್ಗ ಹಿಡಿಯುವ ತನಕ ರಥ ಚಲಿಸದು ಎಂದನಂತೆ.

ಅನ್ನಂಭಟ್ಟರು ಬಂದು ಹಗ್ಗ ಹಿಡಿಯುತ್ತಿದ್ದಂತೆ ರಥ ಚಲಿಸಿತು. ಆಗ ಅದೇ ವಟುರೂಪಿ ಸುಬ್ರಹ್ಮಣ್ಯ, ನಿಮಗೆ ವಯಸ್ಸಾಗಿದೆ ಇನ್ನು ಮುಂದೆ ನೀವು ಇಲ್ಲಿಗೆ ಬರುವುದು ಬೇಡ, ನೀವಿರುವಲ್ಲಿಗೆ ನಾನು ಬರುತ್ತೇನೆ ಅಲ್ಲೇ ರಥೋತ್ಸವ ಮಾಡಿ ಎಂದು ಅಪ್ಪಣೆ ಕೊಡಿಸಿದನಂತೆ. ಜೊತೆಗೆ ಕುಕ್ಕೆ ದೇವಾಲಯದಲ್ಲಿದ್ದ ನಾಗಾಭರಣವನ್ನು ಸಹ ಕೊಡಿಸಿದನಂತೆ. ಊರಿಗೆ ಬಂದ ಅನ್ನಂಭಟ್ಟರು ಉತ್ತರ ಪಿನಾಕಿನಿ ತೀರದಲ್ಲಿ ಉಳುಮೆ ಮಾಡಿಸುತ್ತಿದ್ದಾಗ ನೇಗಿಲು ಅಲ್ಲೇ ನಿಂತಿತಂತೆ. ಅಗೆದು ನೋಡಿದಾಗ ಅಲ್ಲಿ ನಾಗರ ಕಲ್ಲು ಸಿಕ್ಕಿತು. ಅನ್ನಂಭಟ್ಟರು ಆ ಕಲ್ಲನ್ನೇ ಸುಬ್ರಹ್ಮಣ್ಯ ಎಂದು ಪ್ರತಿಷ್ಠಾಪಿಸಿದರು. ತೆಲುಗಿನಲ್ಲಿ ಮಡಕ ಎಂದರೆ ನೇಗಿಲು, ನೇಗಿಲಿಗೆ ನಾಗರ ಕಲ್ಲು ಸಿಕ್ಕ ಕಾರಣ ಈ ಊರಿಗೆ ನಾಗಲಮಡಿಕೆ ಎಂಬ ಹೆಸರು ಬಂದಿದೆ.

ನಾಗಲಮಡಿಕೆ, ಪಾವಗಡ, ತುಮಕೂರು, ಸುಬ್ರಹ್ಮಣ್ಯಅನ್ನಂಭಟ್ಟರು ಮಂಟಪ ನಿರ್ಮಿಸಿ ಪ್ರತಿಷ್ಠಾಪಿಸಿದ್ದ ಈ ದೇವಾಲಯಕ್ಕೆ ವರ್ತಕರಾದ ರೊದ್ದಂ ಬಾಲಸುಬ್ಬಯ್ಯ ಅವರು ದೇವಪ್ರೇರಣೆಯಿಂದ ಇಲ್ಲಿ ದೇವಸ್ಥಾನ ಕಟ್ಟಿಸಿದರೆಂದು ತಿಳಿದುಬರುತ್ತದೆ.  ಇಂದಿಗೂ ನಾಗಲಮಡಿಕೆಯಲ್ಲಿ ರಥೋತ್ಸವ ಕಾಲದಲ್ಲಿ  ಅನ್ನಂಭಟ್ಟರು ಕುಕ್ಕೆಯಿಂದ ತಂದ ನಾಗಾಭರಣ ಬಳಸಲಾಗುತ್ತದೆ. ರೊದ್ದಂ ಬಾಲಸುಬ್ಬಯ್ಯ ಅವರ ವಂಶಸ್ಥರು ಇಂದಿಗೂ ಅನ್ನಸಂತರ್ಪಣೆ ಮಾಡಿಸುತ್ತಾರೆ

No comments:

Post a Comment