Wednesday, September 19, 2018

ಕುರಿಗಾಹಿಯೊಬ್ಬ ನಿರ್ಮಿಸಿದ 14 ಕೆರೆಗಳು ಬರಡು ಗ್ರಾಮವನ್ನು ಹಸಿರಿನ ನಂದನವನ ಮಾಡಿತು!

ಹನ್ನೆರಡು-ಹದಿಮೂರನೇ ಶತಮಾನದಲ್ಲಿ ಬದುಕಿದ್ದ ಕಾಯಕಯೋಗಿ ಸೊನ್ನಲಿಗೆ ಸಿದ್ದರಾಮನ ಕಥೆಯನ್ನು ನಾವೆಲ್ಲಾ ಕೇಳಿದ್ದೇವೆ. ಆತ ಸೊನ್ನಲಿಗೆಯಲ್ಲಿ ಕೆರೆಯನ್ನು ಕಟ್ಟಿಸಿ ಕಾಯಕ ನಿಷ್ಠೆಗೆ ಹೆಸರಾದ ಶರಣ, ಮಹಾಸಂತ. ಐದೇ ರೀತಿಯಲ್ಲಿ ಈ ಶತಮಾನದಲ್ಲಿ ನಮ್ಮ ನಡುವೆಯೂ ಓರ್ವ ಕಾಯಕಯೋಗಿ ಇದ್ದಾರೆ. ಅವರಿಗೀಗ 82 ವರ್ಷ, ಕುರಿಗಾಹಿ, ಅನಕ್ಷರಸ್ಥ ಆದರೆ ವಿದ್ಯಾವಂತರಲ್ಲಿಯೂ ಕಾಣಿಸದ ಪರಿಸರ ಪ್ರಜ್ಞೆಯನ್ನು ನಾವು ಅವರಲ್ಲಿ ಕಾಣಬಹುದು. ತಮ್ಮ ಗ್ರಾಮದಲ್ಲಿ ಅವರಿದುವರೆಗೆ ನಿರ್ಮಾಣ ಮಾಡಿರುವ 14 ಕೆರೆಗಳಿಂದಾಗಿ ಬರಡಾಗಿದ್ದ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ!

ಅವರೇ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ಕಾಮೇಗೌಡ. 
ದಾಸರದೊಡ್ಡಿಯ ನೀಲಿ ವೆಂಕಟಗೌಡ ಹಾಗೂ ರಾಜಮ್ಮ ದಂಪತಿಗಳ ಹತ್ತನೇ ಪುತ್ರರಾದ ಕಾಮೇಗೌಡ ಶಾಲೆಯ ಮೆಟ್ಟಿಲು ಹತ್ತಿದವರಲ್ಲ.ಚಿಕ್ಕ ಮನೆ, ಒಂದುದಿನದ ಬಿತ್ತನೆಗಾಗುವಷ್ಟು ಭೂಮಿ, ಒಂದಷ್ಟು ಕುರಿಗಳು ಇದಷ್ಟೇ ಅವರ ಆಸ್ತಿ.

ಸುಮಾರು 40 ವರ್ಷದ ಹಿಂದೆ ತಮ್ಮ ಮನೆ ಸಮೀಪವಿದ್ದ ಕುಂದೂರು ಬೆಟ್ಟ ಬಹುತೇಕ ಬಂಜರಾಗಿ ಅಲ್ಲಲ್ಲಿ ಒಣ ಪೊದೆಗಳನ್ನು ಬಿಟ್ಟರೆ ಬೇರೇನೂ ಇಲ್ಲದ ಜಾಗವೊಂದು ಇವರ ಗಮನ ಸೆಳೆದಿತ್ತು. ಬೆಟ್ಟ್ದ ಮೇಲೆ ಕುರಿ ಮೇಯಿಸಹೋದಾಗಲೂ ಅಲ್ಲಿ ಕುರಿಗಳು ನೀರಿನ ಸೆಲೆ ಇಲ್ಲದ ಕಾರಣ ಕಷ್ಟಪಡುವುದನ್ನು ಅರಿತರು. ಬೆಟ್ಟದಲ್ಲಿ ವಾಸಿಸುತ್ತಿದ್ದ ಹಕ್ಕಿಗಳಿಗಾಗಲಿ, ಇತರೆ  ಜೀವಿಗಳಿಗಾಗಲಿ ಸರಿಯಾದ ನೀರಿನ ಒರತೆ ಇರಲಿಲ್ಲ. ಮಳೆಗಾಲದಲ್ಲಿ ಸಾಕಷ್ಟು ನೀರು ಹರಿದರೂ ಬೆಟ್ಟದ ಇಳಿಜಾರಿನ ಪ್ರದೇಶಗಳಲಿ ಅದೆಲ್ಲ ಹರಿದು ಹೋಗಿ ಬಿಡುತ್ತಿತ್ತು. ಬೆಟ್ಟ್ದ ಮೇಲೆ ಹೆಚ್ಚು ನೀರು ನಿಲ್ಲುತ್ತಿರಲಿಲ್ಲ, ಅಲ್ಲಿನ ನೆಲ ಹೆಚ್ಚು ನೀರನ್ನು ಇಂಗಿಸಿಕೊಳ್ಳುತ್ತಿರಲಿಲ್ಲ.

ಇದನ್ನು ಗಮನಿಸಿದ ಕಾಮೇಗೌಡರಿಗೆ ತಾವೇ ಏಕೆ ಈ ಬೆಟ್ಟದಲ್ಲಿ ಕೆರೆಗಳನ್ನು ನಿರ್ಮಿಸಬಾರದೆನ್ನುವ ಆಲೋಚನೆ ಹೊಳೆದಿದೆ. ಸುಮಾರು 35 ವರ್ಷಗಳ ಹಿಂದೆ (ಸರಿಯಾದ ದಿನಾಂಕ ನೆನಪಿಲ್ಲ) ತಮ ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ತೊಡಗಿದ ಕಾಮೇಗೌಡರು ಇದುವರೆಗೆ ಸುಮಾರು 14-15 ಕೆರೆಗಳನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ ಅವರು ಯಾವ ಸರ್ಕಾರಿ ಯೋಜನೆಯ ನೆರವು ಬಯಸಲಿಲ್ಲ. ಅಲ್ಲದೆ ಇದಕ್ಕಾಗಿ 10-15 ಲಕ್ಷಕ್ಕಿಂತ ಕಡಿಮೆ ವೆಚ್ಚ ಮಾಡಿದ್ದಾರೆ.ಇದೀಗ 14 ಕೆರೆಗಳನ್ನು ನಿರ್ವಹಿಸುತ್ತಿರುಅವ್ ಕಾಮೇಗೌಡರು ಕೆಲ ಕೆರೆಗಳಿಗೆ ತಮ್ಮ ಮೊಮ್ಮಕ್ಕಳ ಹೆಸರನ್ನು ಇರಿಸಿದ್ದಾರೆ. ಕಾಮೇಗೌಡರ ಈ ಕಾಯಕನಿಷ್ಠೆ ಯಾವ ಪ್ರಮಾಣದ್ದೆಂದರೆ ತಮಗೆ ಸಂದ ಅನೇಕ ಬಹುಮಾನ ರೂಪದ ಹಣವನ್ನು ಸಹ ಅವರು ಈ ಕೆರೆಗಳ ನಿರ್ಮಾಣ, ನಿರ್ವಹಣೆಗಾಗಿಯೇ ಬಳಸಿದ್ದಾರೆ, ಬಳಸುತ್ತಿದ್ದಾರೆ.


ಎಕ್ಸ್ ಪ್ರೆಸ್ ತಂಡವು ಇವರ ಮನೆಗೆ ಭೇಟಿ ಕೊಟ್ಟಾಗ ಕಂಡುಬಂದ ದೃಶ್ಯ ಅತ್ಯಂತ ಅದ್ಭುತವಾಗಿತ್ತು, ಎರಡೆಕರೆ ಭೂಮಿಯಲ್ಲಿ ಅರ್ಧ ನಿರ್ಮಾಣವಾಗಿರುವ ಮನೆ, ಬೆಟ್ಟ್ದ ಮೇಲೆ ಹಾಸಿದಂತಿರುವ ಕೆರೆಗಳು ಅದರ ಮೂಲಕ  ವರ್ಷಪೂರ್ತಿ ಹರಿಯುವ ನಿರಿನ ಒರತೆಯನ್ನು ಕಂಡು ಉಂಟಾದ ಆನಂದ ಶಬ್ದಾತೀತವಾಗಿತ್ತು.

ಕೆಲವು ವಾರಗಳ ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾಮೇಗೌಡರಿಗೆ ಮನೆಯಿಂದ ಹೊರಗೆ ಬಿಸಿಲಿಗೆ ಹೋಗದಂತೆ ವೈದ್ಯರು ಎಚ್ಚರಿಸಿದ್ದಾರೆ. ಆದರೆ ಅವರು ಮಾತ್ರ ಇದಕ್ಕೆ ಸೊಪ್ಪು ಹಾಕುವವರಲ್ಲ "ಕುಡುಕನಿಗೆ ಯಾರಾದರೂ ಕುಡಿಯಬೇಡ ಎಂದರೆ ಅವನದನ್ನು ಬಿಟ್ಟಾನೆಯೆ? ನಾನೂ ಹಾಗೆಯೇ, ನನಗೆ ಹೊರಗೆ ಹೋಗಬೇಡವೆನ್ನಲು ಅವರಾರು? ಇಷ್ಟಕ್ಕೂ ನಾನು ಕಣ್ಣುಗಳನ್ನು ಮುಚ್ಚಿಕೊಂಡೇ ಇಲ್ಲೆಲ್ಲಾ ತಿರುಗಬಲ್ಲೆ, ನನಗೆ ಈ ಊರು, ಬೆಟ್ಟ್ದ ಇಂಚಿಂಚೂ ಪರಿಚಯವಿದೆ" ಅವರು ಹೇಳಿದರು.

’ಹುಚ್ಚ’ನೆಂಬ ಹಣೆಪಟ್ಟಿ 
ಕೆರೆ ನಿರ್ಮಾಣ ಮಾಡಿ ಬಂಜರು ಭೂಮಿಯಲ್ಲಿ ನೀರಿನ ಒರತೆ ಚಿಮ್ಮಿಸಿದ ಕಾಮೇಗೌಡರನ್ನು ಆ ಊರಿನ ಜನ, ಅವರ ಸಂಬಂಧಿಗಳೆಲ್ಲ  "ಹುಚ್ಚ" ಎಂದು ಕರೆದರು.ಕಳೆದ 40 ವರ್ಷಗಳಿಂದ, ಸುಮಾರು 5 ರಿಂದ 9 ಗಂಟೆಯವರೆಗೆ, ಅವರು ಕೆರೆಗಳನ್ನು ಅಗೆಯುವ ಕಾಯಕದಲ್ಲಿ ನಿರತರಾಗುತ್ತಾರೆ. ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ಕುರಿಗಳನ್ನು ಮೇಯಿಸುತ್ತಾ ಕಾಲ ಕಳೆಯುತ್ತಾರೆ. "ಕೆಲವೊಮ್ಮೆ ನಾನು ರಾತ್ರಿ ಸಮಯದಲ್ಲಿ ಸಹ ಬೆಟ್ಟದ ಮೇಲೇರಿ ಕೆರೆಗಳನ್ನು ನಿರ್ಮಿಸಲು ನೆಲ ಅಗೆಯುತ್ತಿದ್ದದ್ದು ಇದೆ. ದೀಪದ ಬೆಳಕಿನಲ್ಲಿ ಇಲ್ಲವೇ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ನಾನು ಈ ಕಾಯಕ ಮಾಡುತ್ತಿದ್ದೆ" ಎಕ್ಸ್ ಪ್ರೆಸ್ ಪ್ರತಿನಿಧಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಜನರೆಲ್ಲಾ ಅವರನ್ನು ’ಹುಚ್ಚ’ ಎಂದರೂ ಕಾಮೇಗೌಡ ಮಾತ್ರ ತಾವು ಹಿಡಿದ ಮಾರ್ಗ ಬಿಡಲಿಲ್ಲ. ಕುಂದೂರು ಬೆಟ್ಟದ ಮೇಲೆ ಕೆರೆ ನಿರ್ಮಾಣ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡರು. ಅವರ ಈ ವಿಚಿತ್ರ ಜೀವನ ಶೈಲಿ ಅವರನ್ನು ಅವರ ಸಂಬಂಧಿಅಗ್ಳು, ಸ್ನೇಹಿತರಿಂದ ದೂರ ಮಾಡಿತು."ನಾನು ಕೆರೆ ನಿರ್ಮಾಣಕ್ಕೆ ಕೈ ಹಾಕಿ ನನ್ನ ದುಡಿಮೆ, ಉಳಿತಾಯವನ್ನೂ ಅದಕ್ಕೆ ವಿನಿಯೋಜಿಸತೊಡಗಿದಾಗ ನನ್ನ ಸಂಬಂಧಿಗಳು ನನ್ನಿಂದ ದೂರಾದರು. ಆದರೆ ಬೆಟ್ಟ ಹಾಗೂ ಸುತ್ತಲಿನ ಮರಗಳು, ಮೃಗ ಪಕ್ಷಿಗಳು ನನ್ನ ಸಂಬಂಧಿಗಳಾದವು. ಕೆಲವರು ನನ್ನ ಕಾಯಕ ನೋಡಿ ಹಾಸ್ಯ ಮಾಡಿದರು, ಇನ್ನು ಕೆಲವರು ಸರ್ಕಾರಿ ಜಾಗವನ್ನು ತನ್ನ ಕೆಲಸಕ್ಕೆ ಬಳಸಿದ್ದನ್ನು ವಿರೋಧಿಸಿದರು. ಆದರೆ ನಾನು ಮಾತ್ರ ಕೆರೆ ನಿರ್ಮಾಣವನ್ನು ನಿಲ್ಲಿಸಲಿಲ್ಲ. ಈಗ ನಾನು ಯಾರಿಗೇ ಬೇಕಾದರೆ ಸವಾಲು ಹಾಕುವೆ! ನಾನು ನಿರ್ಮಿಸಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಸಹ ನೀರು ಬತ್ತುವುದಿಲ್ಲ, ಕಾಮೇಗೌಡರು ವಿವರಿಸಿದ್ದಾರೆ.

ನಲವತ್ತು ವರ್ಷಗಳ ಹಿಂದೆ ಅವರು ಮೊದಲ ಕೆರೆ ನಿರ್ಮಾಣ ಮಾಡಲು ಆರು ತಿಂಗಳ ಕಾಲ ತೆಗೆದುಕೊಂಡಿದ್ದರು. ದಾಸರದೊಡ್ಡಿಯಲ್ಲಿ ಅವರ ನಿರ್ಮಾಣದ ಮೊದಲ ಕೆರೆಯನ್ನು ನಾವಿಂದು ಕಾಣಬಹುದು. ಅಲ್ಲಿಂದೀಚೆಗೆ ತಮ್ಮ ಅತ್ಯಲ್ಪ ಉಳಿತಾಯದ ಹಣವನ್ನು ವಿನಿಯೋಜಿಸಿ ಕೆರೆ ನಿರ್ಮಾಣ, ಅಗೆಯುವ ಕಾಯಕಕ್ಕಾಗಿ ಕೆಲವು ಸಹಾಯಕರನ್ನು ನೇಮಿಸಿಕೊಂಡರು.ಇವರು ನಿರ್ಮಿಸಿದ 14 ಕೆರೆಗಳೂ ಸಹ ಪರಸ್ಪರ ಸಂಬಂಧ ಹೊಂದಿವೆ."ಮೇಲ್ಭಾಗದ ಕ್ರೆ ತುಂಬಿದ ಬಳಿಕ ಕೆಳಗಿನ ಕೆರೆಗೆ ನೀರು ಹರಿಯುತ್ತದೆ" ಕಾಮೇಗೌಡರು ತಾವು ಕೆರೆ ನಿರ್ಮಾಣಕ್ಕೆ ಕೈ ಹಾಕುವ ಮುನ್ನ ಅಲ್ಲಿನ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ.

ಕಾಮೇಗೌಡರು ತಾವು ನಿರ್ಮಿಸಿದ ಪ್ರತಿಯೊಂದು ಕೆರೆಗೆಳ ಬಳಿ ಹೋಗಲು ಕಿರಿದಾದ ದಾರಿಯನ್ನೂ ಮಾಡಿದ್ದಾರೆ.ನಡು ನಡುವೆ ಕಲ್ಲುಗಳನ್ನು ಇಟ್ಟು ಮಾಡಿರುವ ಈ ಮಾರ್ಗ ಅವರ ಪ್ರಕೃತಿ ಪ್ರೇಮವನ್ನು ಸೂಚಿಸುತ್ತದೆ. ಕಾಮೇಗೌಡರು ಪ್ರತಿದಿನವೂ ಈ 14  ಕೆರೆಗಳಿಗಳಿಗೆ ತಪ್ಪದೆ ಭೇಟಿ ನೀಡುತ್ತಾರೆ. "ನೀವು ಒಂದು ದಿನ ಊಟ ಮಾಡಿ ಮತ್ತೆಲ್ಲಾ ದಿನ ಉಪವಾಸವಿರಲು ಸಾಧ್ಯವಿಲ್ಲವಷ್ಟೆ? ಇದೂ ಹಾಗೆಯೇ ನಾನು ಒಂದು ದಿನ ಕೆರೆ ನಿರ್ಮಾಣ ಮಾಡುವುದಿಲ್ಲ, ವರ್ಷದ ಎಲ್ಲಾ ಸಮಯವನ್ನೂ ಇದಕ್ಕೆ ಮೀಸಲಿರಿಸುತ್ತೇನೆ"

ಕಾಮೇಗೌಡರ ಈ ಕಾಯಕದಿಂದಾಗಿ ಇಂದು ಬೆಟ್ಟ್ದ ಮೇಲೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ತೇವಾಂಶ ಉಳಿದುಕೊಂಡಿದ್ದು ಹಸಿರು ನಳನಳಿಸುತ್ತಿದೆ.ಅವರು ಬೆಟ್ಟ್ದ ಮೇಲೆ ಇನ್ನಷ್ಟು ಹಸಿರು ಹುಲ್ಲನ್ನು ಸಹ ಬೆಳೆಸಿದ್ದು ಪಕ್ಷಿಗಳು, ಕುರಿಗಳಿಗೆ ಉತ್ತಮ ಮೇವು ದೊರೆಯುವುದಕ್ಕೆ ಇದು ಸಹಾಯವಾಗಲಿದೆ. "ನಾನು ಇಷ್ಟೆಲ್ಲಾ ಕೆರೆ ಕುಂಟೆಗಳನ್ನು ನಿರ್ಮಾಣ ಮಾಡಿದ್ದೇನೆ. ಆದರೆ ಅದಕ್ಕಾಗಿ ಎಂದಿಗೂ ಸಾಲ ತೆಗೆದುಕೊಂಡಿಲ್ಲ. ಇದುವರೆಗೆ ನಾನು 10 ರಿಂದ 15 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದೇನೆ, ಬಸವಶ್ರೀ ಪುರಸ್ಕಾರ ಸೇರಿ ಅನೇಕ ಬಹುಮಾನಗಳಿಂದ ಬಂದ ಹಣವನ್ನು ನಾನು ಈ ಕೆರೆ ನಿರ್ಮಾಣಕ್ಕೆ ಉಪಯೋಗಿಸಿದ್ದೇನೆ.

"ನಾನು ಎರಡು ಎಕರೆ ಭೂಮಿ ಹೊಂದಿದ್ದೇನೆ, ನಾನೇನಾದರೂ ಈ ಕೆರೆಗಳ ನಿರ್ಮಾಣಕ್ಕಾಗಿ ನನ್ನ ಉಳಿತಾಯವನ್ನು ವಿನಿಯೋಜಿಸದೆ ಹೋಗಿದ್ದಲ್ಲಿ ಇನ್ನಷ್ಟು ಎಕರೆ ಭೂಮಿ ಖರೀದಿಸಿಅಬಹುದಿತ್ತು, ಇನ್ನಷ್ಟು ದೊಡ್ಡ ಮನೆ ಕಟ್ಟಬಹುದಾಗಿತ್ತು.ಆದರೆ ಇಂದು ನಾನು ಮಾಡಿದ ಕೆಲಸದಿಂದ ಸುತಲಿನ ಅನೇಕ ಹಳ್ಳಿಗಳ ನೀರಿನ ಬವಣೆ ನೀಗಿದೆ. ನಾನು ನಿರ್ಮಾಣ ಮಾಡಿದ 14 ಕೆರೆಗಳಲ್ಲಿ ಒಂಭತ್ತು ನನ್ನ ಗ್ರಾಮದಲ್ಲಿದ್ದರೆ ಇನ್ನು ಐದು ಪನತಳ್ಳಿ ಎನ್ನುವ ಪಕ್ಕದ ಗ್ರಾಮಕ್ಕೆ ಸೇರಿದೆ

"ನಾನು ನನ್ನ ಹಣವನ್ನು ಮಕ್ಕಳು, ಮೊಮ್ಮಕ್ಕಳಿಗೆ ನೀಡಿದ್ದರೆ ಅವರದನ್ನು ಖರ್ಚು ಮಾಡಿ ದಿವಾಳಿಯಾಗುತ್ತಿದ್ದರು. ಆದರೆ ಈ ಕೆರೆಗಳಿಗೆ ಹಾಕಿದ ಹಣದಿಂದ ಕೆರೆಗಳಲ್ಲಿ ವರ್ಷಪೂರ್ತಿ ನೀರಿದ್ದು ಅವರು ಶ್ರೀಮಂತ ಪರಿಸರಕ್ಕೆ ಕಾಅಣವಾಗಿದೆ. ನನಗೆ ಕೆಲವರು ಕೆಲವೊಮ್ಮೆ ಸ್ವಂತ ಖರ್ಚಿಗೆಂದು ಹಣ ನಿಡುತ್ತಾರೆ, ನಾನದನ್ನು ಬೇಡವೆನ್ನಲಾರೆ, ಹೇಗೆ ಕುಡುಕನಿಗೆ ಮದ್ಯಕ್ಕಾಗಿ ಹಣ ಖರ್ಚು ಮಾಡುವುದು ಇಷ್ಟವೋ ಹಾಗೆ ನಾನು ನನಗೆ ಸಿಕ್ಕ ಹಣವನ್ನೆಲ್ಲಾ ಈ ಕೆರೆಗಳಿಗಾಗಿ ಬಳಸುತ್ತೇನೆ" ಅವರು ನುಡಿದರು.

ಕಾಮೇಗೌಡರ ಕಿರು ಪರಿಚಯ
ಹೆಸರು: ಕಾಮೇಗೌಡ
ವಯಸ್ಸು: 82
ಊರು: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ
ಪೋಷಕರು: ನೀಲಿ ವೆಂಕಟಗೌಡ ಹಾಗೂ ರಾಜಮ್ಮ
ನಿರ್ಮಿಸಿದ ಕೆರೆಗಳ ಸಂಖ್ಯೆ: 14
ಸಂದ ಪ್ರಶಸ್ತಿಗಳು: ಬಸವಶ್ರೀ ಪ್ರಶಸ್ತಿ (2017), ರಮಾಗೋವಿಂದ ಪ್ರಶಸ್ತಿ (2017) ಇನ್ನೂ ಮುಂತಾದವು

(ನನ್ನ ಈ ಲೇಖನವು 15 ಜುಲೈ 2018 10:19 AM ಗೆ "ಕನ್ನಡಪ್ರಭ ಡಾಟ್ ಕಾಂ"" ನಲ್ಲಿ ಪ್ರಕಟವಾಗಿತ್ತು)

Sunday, September 16, 2018

ವಿಶ್ವಧರ್ಮ ಸಮ್ಮೇಳನದಲ್ಲಿ ವೀರ ಸನ್ಯಾಸಿ ವಿವೇಕಾನಂದರ ವಿಜಯಪತಾಕೆ!

"ಮನುಷ್ಯನಿಗೆ ಶಾಂತಿ, ನೆಮ್ಮದಿಯನ್ನು ತರುವುದೇ ಧರ್ಮದ ಉದ್ದೇಶ" ಎಂದಿದ್ದ ವೀರ ಸನ್ಯಾಸಿ ವಿವೇಕಾನಂದ ಅಮೆರಿಕಾದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ 125 ವರ್ಷ ತುಂಬುತ್ತಿದೆ! ಹತ್ತೊಂಭತ್ತನೇ ಶತಮಾನದಲ್ಲಿ ಜಗತ್ತಿನ ಸನಾತನ ಧರ್ಮದ ಸತ್ಯವನ್ನು ಎತ್ತಿಹಿಡಿಯಲು ಭಾರತದಲ್ಲಿ ಅವತರಿಸಿದ ಮಹಾಪುರುಶರಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಹೆಸರು ಅತ್ಯಂತ ಮುಂಚೂಣಿಯಲ್ಲಿ ನಿಲ್ಲುವಂತದು.

ಅದರಲ್ಲಿಯೂ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಸಾವಿರಾರು ಕಿಮೀ ದೂರದ ಅಮೆರಿಕಾದ ಚಿಕಾಗೋದಲ್ಲಿ  ಮಾಡಿದ ಐತಿಹಾಸಿಕ  ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ಇದು ಕೇವಲ ವಿವೇಕಾನಂದರ ವಿಜಯ ಯಾತ್ರೆಯಲ್ಲ,  ಭಾರತದ, ಹಿಂದೂ ಧರ್ಮದ ಸಾಹಸ ಯಾತ್ರೆಯೇ ಆಗಿತ್ತು. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ  ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ವಿವೇಕಾನಂದರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನ, ಅವರಲ್ಲಿನ ಧರ್ಮಜಾಗೃತಿಯನ್ನು ಬಡಿದೆಬ್ಬಿಸುವಂತಹುದಾಗಿತ್ತು.



ವಿಶ್ವಧರ್ಮ ಸಮ್ಮೇಳನ ಹಿನ್ನೆಲೆ
1893ರ ಸೆಪ್ಟೆಂಬರ್ 11ರಿಂದ 27ರವರೆಗೆ ಚಿಕಾಗೋದ "ಕೊಲಂಬಿಯನ್ ಜಾಗತಿಕ ಮೇಳ"ದ ಅಂಗವಾಗಿ ನಡೆದ ವಿಶ್ವಧರ್ಮ ಸಮ್ಮೇಳನ ಪ್ರಪಂಚದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆಯಾಗಿದೆ.ಹಿಂದೂಧರ್ಮದ ಚ್ರಿತ್ರೆಯಲ್ಲಿ ಹೊಸ ಅಧ್ಯಾಯವೊಂದಕ್ಕೆ ಇದು ನಾಂದಿ ಹಾಡಿತ್ತು. ಪ್ರಪಂಚದ ಸಕಲ ಮತಧರ್ಮಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಗಳಾಗಿದ್ದರು. ಇದೊಂದು ಮಾನವತೆಯ ಆದರ್ಶಗಳ ಒಗ್ಗೂಡಿಸುವಿಕೆಯ ಸಮ್ಮೇಳನವಾಗಿತ್ತು.ಜಗತ್ತಿನ ಮಾನವರೆಲ್ಲರಿಗೆ ಸಂಬಂಧಿಸಿದ ಎಲ್ಲಾ ಮುಖ್ಯ ವಿಷಯದ ಮೇಲೆ ಸಮ್ಮೇಳನದಲ್ಲಿ ಚರ್ಚೆಯಾಗಬೇಕು ಎಂದುಓರ್ವ ವಕೀಲ  ಚಾರ್ಲ್ಸ್ ಬಾನಿ ಸಲಹೆ ನೀಡಿದ್ದು ಎಲ್ಲರಿಂದ ಸರ್ವಸಮ್ಮತಿ ದೊರಕಿಸಿಕೊಂಡಿತ್ತು. ಅಲ್ಲದೆ ಈ ಜಾಗತಿಕ ಮಹಾ ಸಮ್ಮೇಳನಕ್ಕೆ ಬಾನಿ  ಅವರನ್ನೇ ಮಹಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಾರಂಭದಲ್ಲಿ ಕೆಲ ಕ್ರೈಸ್ತ ಬಿಷಪ್ಪರು "ಸರ್ವಧರ್ಮ ಸಮ್ಮೇಳನ:ಕ್ಕೆ ವಿರೋಧ ವ್ಯಕ್ತಪಡಿಸಿದರೂ ಕಡೆಗೆ ಅದು ನಡೆಯಲೇಬೇಕು  ಎಂದೂ ತೀರ್ಮಾನವಾಗಿ ಚಿಕಾಗೋದ ಮಿಚಿಗನ್ ಅವೆನ್ಯೂದಲ್ಲಿ ಅದೇ ತಾನೆ ನೂತನವಾಗಿ ನಿರ್ಮಾಣವಾಗಿದ್ದ "ಆರ್ಟ್ ಇನ್ ಸ್ಟಿಟ್ಯೂಟ್" ಎನ್ನುವ ಭವ್ಯ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಯಿತು. ಸಮ್ಮೇಳನದಲ್ಲಿ ಎಲ್ಲಾ ರಂಗದ ಪ್ರಮುಖರು, ಜಾಗತಿಕ ಗಣ್ಯ ವ್ಯಕ್ತಿಗಳು, ಪಾಶ್ಚಾತ್ಯತತ್ವಶಾಸ್ತ್ರ ಪ್ರವಿಣರು, ಕ್ರೈಸ್ತ ಧರ್ಮದ ಉನ್ನತ  ಧರ್ಮಾಧಿಕಾರಿಗಳು - ಎಲ್ಲರೂ ಭಾಗವಹಿಸಿದ್ದರು. 

ಭಾರತದಿಂದ ವಿವೇಕಾನಂದರಷ್ಟೇ ಅಲ್ಲದೆ ಬ್ರಹ್ಮ ಸಮಾಜ ಪ್ರತಿನಿಧಿಯಾಗಿ ಪ್ರತಾಪ್ ಚಂದ್ರ ಮಜೂಮ್ದಾರ್ ಸಹ ಭಾಗವಹಿಸಿದ್ದರು. ಜೈನ, ಬೌದ್ಧ ಮತ ಪ್ರತಿನಿಧಿಗಳು ಸಹ ಆಗಮಿಸಿದ್ದರು. ಶ್ರೀಲ<ಕಾದಿಂದ ಬೌದ್ದ ಧರ್ಮ ಪ್ರತಿನಿಧಿ ಧರ್ಮಪಾಲ  ಸಹ ಹಾಜರಿದ್ದರು.
ಮೈಸೂರು ಒಡೆಯರ್ ಸಹಾಯ!
ವಿಶೇಷವೆಂದರೆ ವಿವೇಕಾನಂದರಿಗೆ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಬೇರೆ ಪ್ರತಿನಿಧಿಗಳಂತೆ ಮುಂಚಿತ  ಆಹ್ವಾನ ಬಂದಿರಲಿಲ್ಲ. ಕಡೆಯ ಎರಡು ದಿನಗಳಿರುವಾಗ ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಪ್ರತಿನಿಧಿತ್ವ  ದೊರಕಿಸಿಕೊಂಡಿದ್ದರು. ಇಷ್ಟಕ್ಕೆ ಮುನ್ನ ಅಮೆರಿಕಾಗೆ ತೆರಳಲು ಸಜ್ಜಾಗುತ್ತಿದ್ದ ವಿವೇಕಾನಂದರ ಬಳಿ ಅಗತ್ಯಕ್ಕೆ ತಕ್ಕಷ್ಟು ಹಣವಿರಲ್ಲಿಲ್ಲ,  ವಿಶ್ವ ಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಭಾರತದ ಜ್ಞಾನ ಸಂಪತ್ತನ್ನು ಪರಿಚಯಿಸಬೇಕೆನ್ನುವ ಹಂಬಲದಿಂದ ಹೊರಟಿದ್ದ ವಿವೇಕಾನಂದರಿಗೆ ಸಹಾಯ ಹಸ್ತ ಚಾಚಿದ್ದು ಮೈಸೂರಿನ 10ನೇ  ಚಾಮರಾಜೇಂದ್ರ ಒಡೆಯರ್!

ಇದು ನಿಜ! ಸ್ವಾಮಿ ವಿವೇಕಾನಂದರ ವಿದೇಶ ಪ್ರವಾಸದ ಸಂಪೂರ್ಣ ಪ್ರಾಯೋಜಕರು ಮೈಸೂರಿನ ಒಡೆಯರು. 1868ರಲ್ಲಿ  ಸಿಂಹಾಅನವೇರಿದ್ದ  10ನೇ  ಚಾಮರಾಜೇಂದ್ರ ಒಡೆಯರ್ ಬಳಿಗೆ ಆಗಮಿಸಿದ್ದ ವಿವೇಕಾನಂದರಿಗೆ ತಾವು ಅಮೆರಿಕಾಗೆ ತೆರಳಿ  ಧರ್ಮಸಭೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದಲ್ಲದೆ ಅದಕ್ಕೆ ತಗುಲುವ ಅಷ್ಟೂ ಖರ್ಚನ್ನು ತಾವೇ ನೀಡಿ ಉದಾರತೆ ಮೆರೆದಿದ್ದರು.
ಧರ್ಮ ಸಮ್ಮೇಳನದಲ್ಲಿ ವಿವೇಕಾನಂದ
1893ರ ಸೆಪ್ಟೆಂಬರ್ 11 ಸೋಮವಾರ ಬೆಳಿಗ್ಗೆ 10ಕ್ಕೆ ಸರಿಯಾಗಿ ಐತಿಹಾಸಿಕ ವಿಶ್ವಧರ್ಮ ಸಮ್ಮೇಳನ ಉದ್ಘಾಟನೆಯಾಗಿತ್ತು. ಸಾವಿರಾರು ಜನರಿಂದ ಕಿಕ್ಕಿರಿದಿದ್ದ ಸಭಾಸದನದ ವೇದಿಕೆಯ ನಟ್ಟ ನಡುವೆ ಅಮೆರಿಕಾದ ಕ್ಯಾಥೋಲಿಕ್ ಕ್ರೈಸ್ತರ ಅತ್ಯಂತ ಶ್ರೇಷ್ಠ  ಧರ್ಮಗುರುಗಳಾದ ಕಾರ್ಡಿನಲ್  ಗಿಬ್ಬನ್ಸ್ ಕುಳಿತಿದ್ದರು. ಅವರ ಎರಡೂ ಬದಿ ವೊವೊಧ ಧರ್ಮಗಳ ಪ್ರತಿನಿಧಿಗಳು ಆಸೀನರಾಗಿದ್ದರು.  ಅವರೆಲ್ಲರ ನಡುವೆ ಕಿತ್ತಲೆ ಬಣ್ಣದ  ನಿಲುವಂಗಿ, ಪೀತ ವರ್ಣದ ಪೇಟ ಧರಿಸಿ ರಾಜಗಾಂಭೀರ್ಯದಿಂದ ಕುಳಿತಿದ್ದ ಸ್ವಾಮಿ  ವಿವೇಕಾನಂದ ವಿಶಿಷ್ಟ ಉಡುಪು, ಗಂಭೀರ ವ್ಯಕ್ತಿತ್ವದಿಂದ ಸಭಿಕರ ಗಮನ ಸೆಳೆದಿದ್ದರು.

ಮೊದಲಿಗೆ ಸ್ವಾಗತ ಸಮಿತಿಯ ಅಧಿಕಾರಿಗಳು ಮಾತನಾಡಿದರು. ಬಳಿಕ ಒಬ್ಬೊಬ್ಬ ಪ್ರತಿನಿಧಿಗಳು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ  ಸಾಗಿದ್ದರು. ಆದರೆ ವಿವೇಕಾನಂದರು ತಾವು ಎಲ್ಲವನ್ನೂ ಗಮನಿಸುತ್ತಾ ಮೌನವಾಗಿದ್ದರು. ಒಂದೆರಡು ಬಾರಿ ಅವರಿಗೆ ಭಾಷಣಕ್ಕಾಗಿ ಕರೆ ಬಂದರೂ "ಮತ್ತೆ ಮಾಡುತ್ತೇನೆ" ಂದು ಮುಂದೆ ಹಾಕಿದ್ದರು. ಕಡೆಗೊಮೆ ಸಭಾಧ್ಯಕ್ಷರಾದ ಚಾರ್ಲ್ಸ್ ಬಾನಿ  ಅವರೇ ಸ್ವಾಮಿ ವಿವೇಕಾನಂದರಿಗೆ ಭಾಷಣ ಮಾಡಬೇಕು ಎಂದು ಕೇಳಿದರು. ಅದಕ್ಕೆ ವಿವೇಕಾನಂದರ ಪಕ್ಕದಲ್ಲೇ ಕುಳಿತಿದ್ದ ಫ್ರೆಂಚ್ ಪಾದ್ರಿಗಳಾದ ಬಾನೆಟ್ ಮಾರಿ ಸಹ ಪ್ರೋತ್ಸಾಹ ನೀಡಿದರು.
ಘರ್ಜಿಸಿದ ಸಿಂಹ!
ಸ್ವಾಮಿ ವಿವೇಕಾನಂದರು ಯಾವ ಪೂರ್ವ ತಯಾರಿಗಳಾಗಲಿ, ಭಾಷಣವನ್ನು ಸಿದ್ದಪಡಿಸಿಕೊಂಡಾಗಲಿ ಸಭೆಯ ಎದುರು ನಿಲ್ಲಲಿಲ್ಲ, ಅವರು  ಸಭೆ ಎದುರು ನಿಂತು ಕ್ಷಣ ಮಾತ್ರ ಸಮಸ್ತ ಸಭೆಯನ್ನೊಮ್ಮೆ ಅವಲೋಕಿಸಿದರು. ಸರಸ್ವತೀ ದೇವಿಗೆ ವಂದನೆ ಸಲ್ಲಿಸಿದರುನಂತರ ಸಣ್ಣ ಭಾಷಣ ಪ್ರಾರಂಭಿಸಿದರು. "ಅಮೇರಿಕೆಯ ಸೋದರಿಯರೇ ಮತ್ತು ಸೋದರರೇ" ಎಂದು ಹೇಳಿದ್ದೇ ತಡ ಕಿವಿ  ಕಿವುಡಾಗುವಂತೆ ಕರತಾಡನ ನಡೆಯಿತು. ಪ್ರತಿಯೊಬ್ಬರೂ ಎದ್ದು ನಿಂತು ಜಯಘೋಷ ಮಾಡಿದರು, ತಮ್ಮ ತಮ್ಮ ಕರವಸ್ತ್ರ, ಹ್ಯಾಟುಗಳನ್ನು ಬೀಸಿ ಹರ್ಷ ವ್ಯಕ್ತಪಡಿಸಿದರು! ಇದನ್ನು ಕಂಡ ಸ್ವಾಮಿ ವಿವೇಕಾನಂದ ದಂಗಾಗಿ ಹೋದರು. 

ಕರತಾಡನ, ಜಯಘೋಷಗಳು ಮುಗಿದ ಮೇಲೆ ಭಾಷಣ ಮುಂದುವರಿಸಿದ ಅವರು "ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ  ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
"ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು....ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು..... ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ  ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ-  ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”
ಜಗತ್ತಿನ ಕಣ್ಮಣಿ
ಚಿಕಾಗೋ ವಿಶ್ವಧರ್ಮ ಸಮ್ಮೇಳನ ಉದ್ಘಾಟನಾ ದಿನದ ಸ್ವಾಮಿ ವಿವೇಕಾನಂದರ ಭಾಷಣ ಮರುದಿನ ಎಲ್ಲ ಪತ್ರಿಕೆಗಳಲ್ಲಿ ಅಗ್ರ  ಸುದ್ದ್ದಿಯಾಗಿತ್ತು. ಹೀಗೆ ಭಾರತದಲ್ಲಿ ಸಾಮಾನ್ಯ ಸನ್ಯಾಸಿ, ಬೈರಾಗಿಯಾಗಿದ್ದ ಓರ್ವ ವ್ಯಕ್ತಿ ರಾತ್ರಿ ಬೆಳಗಾಗುವಷ್ಟರಲ್ಲಿ ಜಗತ್ತಿನ  ಕಣ್ಮಣಿಯಾಗಿ ಬದಲಾಗಿದ್ದರು. ಸ್ವಾಮೀಜಿ ಮಾಡಿದ್ದ ಪುಟ್ಟ ಭಾಷಣ ಮನೆರಿಕನ್ನರ ಮೇಲೆ ಮಾಡಿದ್ದ ಪರಿಣಾಮ ಹಾಗಿತ್ತು.  ಅದರಲ್ಲಿಯೂ ಅವರು ಪ್ರಾರಂಭದಲ್ಲಿ ಉದ್ಘರಿಸಿದ ಸಾಲುಗಳು "ಅಮೆರಿಕಾದ ಸೋದರಿಯರೆ, ಸೋದರರೇ" ಎಂಬ ಯಾವ 
ನಾಟಕೀಯತೆ ಇಲ್ಲದ ಮೂರು ಸರಳ ಶಬ್ದಗಳಿಗೆ ಇಡೀ ಅಮೆರಿಕಾವೇ ತಲೆದೂಗಿತ್ತು.

 ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಒಟ್ಟು ಆರು ಭಾಷಣಗಳನ್ನು ಮಾಡಿದ್ದರು, "ಹಿಂದೂಧರ್ಮ" ಎನ್ನುವ ವಿಚಾರದ ಕುರಿತಂತೆ  ಮಾಡಿದ್ದ ಭಾಷಣ ಸಹ ಅಮೋಘವಾದುದಾಗಿತ್ತು.  ಸಮ್ಮೇಳನದ ಕಡೆಯ ದಿನ ಸಮಾರೋಪ ಸಮಾರಂಭದಂದು ಸಹ ವಿವೇಕಾನಂದರು ತಮ್ಮ ಚುಟುಕಾದ ಭಾಷಣದ ಮೂಲಕ  ಸಮತ್ವದ ಸಾರವನ್ನು ತಿಳಿಸಿದ್ದರು.

"ಯಾರು ಯವ ಧರ್ಮವನ್ನು ಮತಾಂತರಗೊಳ್ಳುವದು ಅಗತ್ಯವಿಲ್ಲ, ಆದರೆ ಉಳಿದವರ ಉನ್ನತ  ಭಾವನೆಗಳನ್ನು ಮೈಗೂಡಿಸಿಕೊಂಡು ವಿಯುಕ್ತಿಕತೆಯನ್ನು ಕಳೆದುಕೊಳ್ಳದೆ ತಾನೇ ತಾನಾಗಿ ಬೆಳೆಯಬೇಕು..... ಪಾವಿತ್ರತೆ, ಪರಿಶುದ್ದರತೆ ಹಾಗೂ ಅನುಕಂಪೆಯು ಜಗತ್ತಿನ ಯಾವೊಂದು ಧರ್ಮಕ್ಕೆ ಸೀಮಿತವಾಗಿಲ್ಲ, ಎಲ್ಲ ಧರ್ಮದಲ್ಲಿ ಅತ್ಯಂತ  ಶೀಲವಂತರಾದ ಸ್ತ್ರೀ ಪುರುಷರು ಆಗಿಹೋಗಿದ್ದಾರೆ. ಇಷ್ಟಾಗಿಯೂ ನಮ್ಮ ಧರ್ಮವೇ ಉಳಿಯುತ್ತದೆ ಎನ್ನುವವ್ವರ ವಾದ ಕೇಳಿದಾಗ  ನನಗೆ ಕನಿಕರ ಮೂಡುತ್ತದೆ" ಎಂದಿದ್ದರು.

ಹೀಗೆ ಸರ್ವಧರ್ಮ ಸಮ್ಮೇಳನದ ಮೂಲಕ ಭಾರತದ ಓರ್ವ ಪರಿವ್ರಾಜಕ ಸನ್ಯಾಸಿ ವಿಶ್ವಮಾನ್ಯತೆ ಗಳಿಸಿಕೊಂಡಿದ್ದರು. ಅಮೆರಿಕಾ ಪ್ರವಾಸ ವಿವೇಕಾನಂದರ ಜೀವನದಲ್ಲಿ ಮಹತ್ವದ ತಿರುವು ದೊರಕಿಸಿಕೊಟ್ಟಿತು. ಇ<ತಹಾ ಚಿಕಾಗೋ ಧರ್ಮಸಮ್ಮೇಳ ನಡೆದು  ಇದೀಗ 125 ವರ್ಷಗಳಾಗಿದ್ದು ನಮ್ಮ ನಡುವೆ ಇಂದಿಗೂ ಕುದಿಯುತ್ತಿರುವ ಧರ್ಮ ವೈಷಮ್ಯ, ಮಾರಣಾಂತಿಅಕ ಭತಯೋತ್ಪಾದನೆ  ಕೃತ್ಯಗಳನ್ನು ಕಂಡಾಗ ಮತ್ತೆ ಮತ್ತೆ ವಿವೇಕಾನಂದರ ಸಂದೇಶ ನೆನಪಿಸಿಕೊಳ್ಳಬೇಕು ಎನಿಸುತ್ತದೆ.
ಆಧಾರ: ಸ್ವಾಮಿ ಪುರುಷೋತ್ತಮಾನಂದ ವಿರಚಿತ "ವಿಶ್ವವಿಜೇತ ವಿವೇಕಾನಂದ"

(ಈ ನನ್ನ ಲೇಖನವು 11 ಸೆಪ್ಟೆಂಬರ್ 2018 12:00 AM ಗೆ 'ಕನ್ನಡಪ್ರಭ ಡಾಟ್ ಕಾಂ' ಜಾಲತಾಣದಲ್ಲಿ ಪ್ರಕಟವಾಗಿತ್ತು)

Saturday, September 15, 2018

ಪೂರ್ಣಚಂದ್ರ ತೇಜಸ್ವಿ 80ನೇ ಜನ್ಮದಿನ: ಪರಿಸರದ ಕಥೆ ಹೇಳಿದ ಮಹಾಸಾಹಿತಿಯ ನೆನೆಯುತ್ತಾ...

"ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ" ಇದು ಕನ್ನಡದ ಪ್ರಖ್ಯಾತ ಸಾಹಿತಿ ಕೆ.ಪಿ. ಪೂಪೂರ್ಣಚಂದ್ರ ತೇಜಸ್ವಿಯವರ ಮಾತು. ಕಳೆದ ಕೆಲ ದಿನಗಳ ಹಿಂದಷ್ಟೇ ಕೊಡಗು, ಕೇರಳದಲ್ಲಿ ಸಂಭವಿಸಿದ ಪ್ರವಾಹದ ವೇಳೆ ಈ ಮಾತುಗಳ ಅರ್ಥ ನಮಗಾಗಿದೆ.

ತಮ್ಮ ಸಾಹಿತ್ಯದ ಮೂಲಕ ಪರಿಸರ ಹಾಗೂ ಮಾನವ ಸಂಬಂಧಗಳ ನಡುವಿನ ಎಳೆಗಳನ್ನು ತೋರಿಸಿಕೊಟ್ಟಿದ್ದ ತೇಜಸ್ವಿ ಇಂದು ನಮ್ಮೊಂದಿಗಿದ್ದಿದ್ದರೆ ಎಂಭತ್ತು ಭರ್ತಿಯಾಗುತ್ತಿತು. ಈ ಸಮಯದಲ್ಲಿ ಅವರ ವ್ಯಕ್ತಿತ್ವದ ಒಂದು ಚಿಕ್ಕ  ಪರಿಚಯ ಮಾಡಿಕೊಡುವ ಜತೆಗೆ ಇಂದು ಅವರ ಜನ್ಮದಿನದ ಪ್ರಯುಕ್ತ ನಡೆಯುವ ವಿವಿಧ ಕಾರ್ಯಕ್ರಮದ ಕಿರು ಮಾಹಿತಿ ನೀಡುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.



ಇಂದಿನ ಮಾನವನ ದುರಾಸೆ, ರಾಜಕೀಯ ಲಾಭಕೋರತನದ ಕುರಿತು ಅವರು ಅಂದು ಆಡಿದ್ದ ಮಾತುಗಳು ಇಂದೂ ಪ್ರಸ್ತುತವಾಗಿದೆ. ಸಾಹಿತ್ಯ, ಕೃಷಿ, ಪರಿಸರ ಕಾಳಜಿ, ವಿಜ್ಞಾನ, ಮಾನವ ಶಾಸ್ತ್ರ ಮುಂತಾದುವುಗಳ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿದ್ದ ತೇಜಸ್ವಿ ಬದುಕಿದ್ದು ಸಹ ದಟ್ಟ ಹಸಿರಿನ ಕಾಡುಗಳ ನಡುವೆಯೇ. 

ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ 08-09-1932೮ರಂದು ಜನಿಸಿದ ಪೂರ್ಣಚಂದ್ರ ತೇಜಸ್ವಿ ಅವರ ತಂದೆ ಖ್ಯಾತ ಸಾಹಿತಿ, ರಾಷ್ಟ್ರಕವಿ ಕುವೆಂಪು, ತಾಯಿ ಹೇಮಾವತಿ.ಮೈಸೂರಿನಲ್ಲಿ  ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿ ವ್ಯಾಸಂಗ ಮಾಡಿದ್ದ ಇವರು ತಂದೆ ವಿಖ್ಯಾತ ಪ್ರಾದ್ಯಾಪಕ, ಸಾಹಿತಿಗಳಾಗಿದ್ದರೂ ತಾವು ಸರ್ಕಾರಿ ಹುದ್ದೆಯನ್ನಾಗಲಿ, ಶಿಕ್ಷಕ ವೃತ್ತಿಯನ್ನಾಗಲಿ ಬಯಸದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಾಫಿ ಎಸ್ಟೇಟ್ ಮಾಲೀಕರಾಗಿ ಸ್ವತಂತ್ರ ಜೀವನ ಸಾಗಿಸಿದ್ದರು. ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿ ಇದ್ದ ಇವರಿಗೆ ಮಲೆನಾಡಿನ ಜೀವನ ಅತ್ಯಂತ ಸುಖವಾಗಿ ಒಗ್ಗಿತ್ತು. ಇವರು ಹಲವು  ರೈತ ಚಳವಳಿಗಳಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇವರ ಪತ್ನಿ ರಾಜೇಶ್ವರಿ (ಇವರೀಗ ಮೂಡಿಗೆರೆಯ ತೇಜಸ್ವಿ ಅವರ ನಿವಾಸ "ನಿರುತ್ತರ" ದಲ್ಲಿದ್ದಾರೆ.) ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ. ಇವರಿಬ್ಬರೂ ಸಾಫ್ಟ್ ವೇರ್ ಪರಿಣಿತರಾಗಿದ್ದಾರೆ

ಕನ್ನಡ ಸಾಹಿತ್ಯದಲ್ಲಿ ಆಗಿ ಹೋದ ನವೋದಯ, ನವ್ಯ, ನವ್ಯೋತ್ತರ ಯಾವ ಪಂಥಕ್ಕೆ ಸೇರದೆ ಅದೆಲ್ಲಾ ಕಾಲಘಟ್ಟದಲ್ಲಿ ತಮ್ಮ ಬದುಕಲ್ಲಿ ಅನುಭವಕ್ಕೆ ಬಂದ ಘಟನೆಗಳನ್ನೇ ಆಧರಿಸಿ ಕೃತಿಗಳನ್ನು ರಚಿಸುತ್ತಾ ಸಾಗನ್ನಡ ದ ಪೂರ್ಣಚಂದ್ರ ತೇಜಸ್ವಿ ನಿಸರ್ಗ ಹಾಗೂ ಬದುಕಿನ ಎಲ್ಲ ಮಗ್ಗುಲುಗಳನ್ನು ಅನ್ವೇಷಿಸುತ್ತಾ ಸಾಗಿದರು. ಸಮಾಜವಾದಿ ಚಿಂತಕ, ಚಿಕಿತ್ಸಕ ಬುದ್ಧಿಯಿಂದ ನೋಡುವ ಇವರ ಗುಣ ಕೆಲವೊಮ್ಮೆ ಕೆಲವರಿಗೆ "ಅತಿ" ಎನಿಸಿದ್ದೂ ಇತ್ತು. ಆದರ ಆಧುನಿಕ ಕಾಲಘಟ್ಟಕ್ಕೆ ಹೊಂದುವ ಇವರ ಚಿಂತನೆಗಳನ್ನು ಮಾತ್ರ ಯಾರೂ ನಿರಾಕರಿಸುವುದು ಸಾಧ್ಯವಾಗಿಅಲಿಲ್ಲ.

ಅಬಚೂರಿನ ಪೋಸ್ಟಾಫೀಸು, ಕಿರಿಗೂರಿನ ಗಯ್ಯಾಳಿಗಳು. ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಅಣ್ಣನ ನೆನಪು, ಮಿಸ್ಸಿಂಗ್ ಲಿಂಕ್ಸ್, ಮಿಲೇನಿಯಂ ಸರಣಿ ಕೃತಿಗಳು, ಸಹಜಕೃಷಿ, ಪರಿಸರದ ಕಥೆಗಳು, ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು. ಫ್ಲೈಯಿಂಗ್ ಸಾಸರ್ಸ್‌ (ಭಾಗ ೧-೨), ಕನ್ನಡ ನಾಡಿನ ಹಕ್ಕಿಗಳು, ಮಾಯಾಲೋಕ ೧ ಹೀಗೆ ಅನೇಕ ಕೃಉತಿಗಳನ್ನು ಕನ್ನಡಕ್ಕೆ ನೀಡಿರುವ ಇವರ ಸಾಹಿತ್ಯದಲ್ಲಿ ಪರಿಸರ ಪ್ರೇಮವಿದೆ, ವಿಜ್ಞಾನದ ವಿಸ್ಮಯವೂ ಇದೆ.

ಇವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ - ಇವುಗಳು ಚಲನಚಿತ್ರವಾಗಿ ರಾಷ್ಟ್ರ ಮನ್ನಣೆ ಗಳಿಸಿವೆ. ಚಿದಂಬರ ರಹಸ್ಯ ಕಾದಂಬರಿಗೆ ರಾಜ್ಯ, ಕಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಸಂದಿದೆ.ಿಷ್ಟೇ ಅಲ್ಲದೆ ಪ<ಪ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರ  ಸೇರಿ ಅನೇಕ ಪುರಸ್ಕಾರಗಳಿಗೆ ತೇಜಸ್ವಿ ಭಾಜನರಾಗಿದ್ದರು.

ಪ್ರಖ್ಯಾತ ಸಾಹಿತಿ, ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬಾಳಿದ್ದ ಪೂರ್ಣಚಂದ್ರ ತೇಜಸ್ವಿ 2007ರ ಏಪ್ರಿಲ್ 5ರಂದು ನಿಧನರಾದರು

ತೇಜಸ್ವಿ ಜನ್ಮದಿನದ ಕಾರ್ಯಕ್ರಮಗಳು
ಇಂದು (ಸೆಪ್ಟೆಂಬರ್ 08) ಅವರ 80ನೇ ಜನ್ಮದಿನವಾಗಿದ್ದು ಈ ಸಂದರ್ಭ ಬೆಂಗಳೂರು, ಮೈಸೂರು ಸೇರಿ ರಾಜ್ಯಾದ್ಯಂತ ನಾನಾ ಕಾರ್ಯಕ್ರಮಗಳು ಆಯೋಜನೆಯಾಗಿದೆ. ಇದರ ಕಿರು ಮಾಹಿತಿ ಮುಂದೆ ನೀಡಲಾಗಿದೆ-

  • ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ 08-09-2018 ರ ಶನಿವಾರ ವಿಶ್ವಪಥ ಕಲಾಸಂಗಮ ಹವ್ಯಾಸಿ  ರಂಗತಂಡವು ತೇಜಸ್ವಿಯವರ ಪ್ರಸಿದ್ಧ ಕೃತಿ "ಪರಿಸರದ ಕತೆ" ಕೃತಿಯನ್ನಾಧರಿಸಿದ "ಎಂಗ್ಟನ ಪುಂಗಿ" ನಾಟಕ ಪ್ರದರ್ಶಿಸಲಿದ್ದು ಬೆಂಗಳೂರು ಬಸವೇಶ್ವರನಗರದಲ್ಲಿರುವ ಕೆ.ಇ.ಎ.ಪ್ರಭಾತ್ ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ನಾಟಕ ಇದೆ.
  • ಭಾನುವಾರ 09-092018ರಂದು ಬೆಳಿಗ್ಗೆ 7:30 ಗಂಟೆಗೆ ಸಾಹಿತ್ಯ ವನ, ವಿ.ಸಿ. ಮನೆ ಹತ್ತಿರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ "ಅರಿವಿನ ಕೃಷಿ" (ತೇಜಸ್ವಿ ಓದು - ಅವರ ಪುಸ್ತಕಗಳನ್ನು ಓದುವ ಮೂಲಕ ತೇಜಸ್ವಿಯವರನ್ನು ಸ್ಮರಿಸುವ ಕಾರ್ಯಕ್ರಮ) ಇದೆ
    • ಶನಿವಾರ, ಸೆಪ್ಟೆಂಬರ್ 08, 2018, ಮಧ್ಯಾಹ್ನ 3.30ಕ್ಕೆ  ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಂಗಳೂರಲ್ಲಿ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
    • ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತೇಜಸ್ವಿ-80 ಎರಡು ದಿನಗಳ ಸಾಹಿತ್ಯ ಕಾರ್ಯಕ್ರಮ ಸೆ.8, 9ರಂದು ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ನಡೆಯಲಿದೆ. 
    • ತೇಜಸ್ವಿ ಅವರ ಹುಟ್ಟಿದ ದಿನದ ಪ್ರಯುಕ್ರ ಕರ್ವಾಲೋ ಕಾದಂಬರಿ ಬಗ್ಗೆ, "ಮೂರರ ಮುಂದೆ ಏಳು ಸೊನ್ನೆ" ಎನ್ನುವ ವಿಷಯದ  ಕುರಿತು ಚಾರಣ ಹಾಗೂ ಚರ್ಚೆ ಕಾರ್ಯಕ್ರಮವನ್ನು ಹಾವೇರಿಯ ರಾಣಿಬೆನ್ನೂರಿನಲ್ಲಿ ಆಯೋಜಿಸಲಾಗಿದೆ.08 ಸೆಪ್ಟೆಂಬರ್ 2018ರ ಮಧ್ಯಾಹ್ನ 3 ಗಂಟೆಯಿಂದ ಭಾನುವಾರ 09 ಸೆಪ್ಟೆಂಬರ್ 2018ರ ಬೆಳಗ್ಗೆ 9 ಗಂಟೆಯವರೆಗೆ ಈ ಚಾರಣ ಚರ್ಚೆ ನಡೆಯಲಿದೆ.  ಇದು ಉಚಿತವಾಗಿದ್ದು ಮುಂಚಿತವಾಗಿ ರಿಜಿಸ್ಟರ್ ಮಾಡಿಸಿಕೊಂಡವರಿಗೆ ಪ್ರವೇಶವಿದೆ.
    • ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಅಂಗವಾಗಿ ಕೊಟ್ಟಿಗೆಹಾರದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಪ್ಟೆಂಬರ್ 08, 2018ಬೆಳಿಗ್ಗೆ 10ಕ್ಕೆ ಕೊಟ್ಟಿಗೆಹಾರದ ಏಕಲವ್ಯ ವಸತಿಶಾಲೆಯ  ಮಕ್ಕಳಿಂದ ಸ್ವಚ್ಛತಾ ಅಭಿಯಾನ ನಡೆಯಲಿದೆ.

    (ಪೂರ್ಣಚಂದ್ರ ತೇಜಸ್ವಿ ಕುರಿತ ಈ ನನ್ನ ಲೇಖನ 'ಕನ್ನಡಪ್ರಭ ಡಾಟ್ ಕಾಂ' ನಲ್ಲಿ 08 ಸೆಪ್ಟೆಂಬರ್ 2018 12:00 AM ಗಂಟೆಗೆ ಪ್ರಕಟವಾಗಿತ್ತು.)