"ಮನುಷ್ಯನಿಗೆ ಶಾಂತಿ, ನೆಮ್ಮದಿಯನ್ನು ತರುವುದೇ ಧರ್ಮದ ಉದ್ದೇಶ" ಎಂದಿದ್ದ ವೀರ ಸನ್ಯಾಸಿ ವಿವೇಕಾನಂದ ಅಮೆರಿಕಾದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ 125 ವರ್ಷ ತುಂಬುತ್ತಿದೆ! ಹತ್ತೊಂಭತ್ತನೇ ಶತಮಾನದಲ್ಲಿ ಜಗತ್ತಿನ ಸನಾತನ ಧರ್ಮದ ಸತ್ಯವನ್ನು ಎತ್ತಿಹಿಡಿಯಲು ಭಾರತದಲ್ಲಿ ಅವತರಿಸಿದ ಮಹಾಪುರುಶರಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಹೆಸರು ಅತ್ಯಂತ ಮುಂಚೂಣಿಯಲ್ಲಿ ನಿಲ್ಲುವಂತದು.
ಅದರಲ್ಲಿಯೂ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಸಾವಿರಾರು ಕಿಮೀ ದೂರದ ಅಮೆರಿಕಾದ ಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿನ ಮರೆಯಲಾಗದ ಕ್ಷಣ. ಇದು ಕೇವಲ ವಿವೇಕಾನಂದರ ವಿಜಯ ಯಾತ್ರೆಯಲ್ಲ, ಭಾರತದ, ಹಿಂದೂ ಧರ್ಮದ ಸಾಹಸ ಯಾತ್ರೆಯೇ ಆಗಿತ್ತು. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ವಿವೇಕಾನಂದರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನ, ಅವರಲ್ಲಿನ ಧರ್ಮಜಾಗೃತಿಯನ್ನು ಬಡಿದೆಬ್ಬಿಸುವಂತಹುದಾಗಿತ್ತು.
ವಿಶ್ವಧರ್ಮ ಸಮ್ಮೇಳನ ಹಿನ್ನೆಲೆ
1893ರ ಸೆಪ್ಟೆಂಬರ್ 11ರಿಂದ 27ರವರೆಗೆ ಚಿಕಾಗೋದ "ಕೊಲಂಬಿಯನ್ ಜಾಗತಿಕ ಮೇಳ"ದ ಅಂಗವಾಗಿ ನಡೆದ ವಿಶ್ವಧರ್ಮ ಸಮ್ಮೇಳನ ಪ್ರಪಂಚದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆಯಾಗಿದೆ.ಹಿಂದೂಧರ್ಮದ ಚ್ರಿತ್ರೆಯಲ್ಲಿ ಹೊಸ ಅಧ್ಯಾಯವೊಂದಕ್ಕೆ ಇದು ನಾಂದಿ ಹಾಡಿತ್ತು. ಪ್ರಪಂಚದ ಸಕಲ ಮತಧರ್ಮಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಗಳಾಗಿದ್ದರು. ಇದೊಂದು ಮಾನವತೆಯ ಆದರ್ಶಗಳ ಒಗ್ಗೂಡಿಸುವಿಕೆಯ ಸಮ್ಮೇಳನವಾಗಿತ್ತು.ಜಗತ್ತಿನ ಮಾನವರೆಲ್ಲರಿಗೆ ಸಂಬಂಧಿಸಿದ ಎಲ್ಲಾ ಮುಖ್ಯ ವಿಷಯದ ಮೇಲೆ ಸಮ್ಮೇಳನದಲ್ಲಿ ಚರ್ಚೆಯಾಗಬೇಕು ಎಂದುಓರ್ವ ವಕೀಲ ಚಾರ್ಲ್ಸ್ ಬಾನಿ ಸಲಹೆ ನೀಡಿದ್ದು ಎಲ್ಲರಿಂದ ಸರ್ವಸಮ್ಮತಿ ದೊರಕಿಸಿಕೊಂಡಿತ್ತು. ಅಲ್ಲದೆ ಈ ಜಾಗತಿಕ ಮಹಾ ಸಮ್ಮೇಳನಕ್ಕೆ ಬಾನಿ ಅವರನ್ನೇ ಮಹಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಾರಂಭದಲ್ಲಿ ಕೆಲ ಕ್ರೈಸ್ತ ಬಿಷಪ್ಪರು "ಸರ್ವಧರ್ಮ ಸಮ್ಮೇಳನ:ಕ್ಕೆ ವಿರೋಧ ವ್ಯಕ್ತಪಡಿಸಿದರೂ ಕಡೆಗೆ ಅದು ನಡೆಯಲೇಬೇಕು ಎಂದೂ ತೀರ್ಮಾನವಾಗಿ ಚಿಕಾಗೋದ ಮಿಚಿಗನ್ ಅವೆನ್ಯೂದಲ್ಲಿ ಅದೇ ತಾನೆ ನೂತನವಾಗಿ ನಿರ್ಮಾಣವಾಗಿದ್ದ "ಆರ್ಟ್ ಇನ್ ಸ್ಟಿಟ್ಯೂಟ್" ಎನ್ನುವ ಭವ್ಯ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಯಿತು. ಸಮ್ಮೇಳನದಲ್ಲಿ ಎಲ್ಲಾ ರಂಗದ ಪ್ರಮುಖರು, ಜಾಗತಿಕ ಗಣ್ಯ ವ್ಯಕ್ತಿಗಳು, ಪಾಶ್ಚಾತ್ಯತತ್ವಶಾಸ್ತ್ರ ಪ್ರವಿಣರು, ಕ್ರೈಸ್ತ ಧರ್ಮದ ಉನ್ನತ ಧರ್ಮಾಧಿಕಾರಿಗಳು - ಎಲ್ಲರೂ ಭಾಗವಹಿಸಿದ್ದರು.
ಭಾರತದಿಂದ ವಿವೇಕಾನಂದರಷ್ಟೇ ಅಲ್ಲದೆ ಬ್ರಹ್ಮ ಸಮಾಜ ಪ್ರತಿನಿಧಿಯಾಗಿ ಪ್ರತಾಪ್ ಚಂದ್ರ ಮಜೂಮ್ದಾರ್ ಸಹ ಭಾಗವಹಿಸಿದ್ದರು. ಜೈನ, ಬೌದ್ಧ ಮತ ಪ್ರತಿನಿಧಿಗಳು ಸಹ ಆಗಮಿಸಿದ್ದರು. ಶ್ರೀಲ<ಕಾದಿಂದ ಬೌದ್ದ ಧರ್ಮ ಪ್ರತಿನಿಧಿ ಧರ್ಮಪಾಲ ಸಹ ಹಾಜರಿದ್ದರು.
ಮೈಸೂರು ಒಡೆಯರ್ ಸಹಾಯ!
ವಿಶೇಷವೆಂದರೆ ವಿವೇಕಾನಂದರಿಗೆ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಬೇರೆ ಪ್ರತಿನಿಧಿಗಳಂತೆ ಮುಂಚಿತ ಆಹ್ವಾನ ಬಂದಿರಲಿಲ್ಲ. ಕಡೆಯ ಎರಡು ದಿನಗಳಿರುವಾಗ ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಪ್ರತಿನಿಧಿತ್ವ ದೊರಕಿಸಿಕೊಂಡಿದ್ದರು. ಇಷ್ಟಕ್ಕೆ ಮುನ್ನ ಅಮೆರಿಕಾಗೆ ತೆರಳಲು ಸಜ್ಜಾಗುತ್ತಿದ್ದ ವಿವೇಕಾನಂದರ ಬಳಿ ಅಗತ್ಯಕ್ಕೆ ತಕ್ಕಷ್ಟು ಹಣವಿರಲ್ಲಿಲ್ಲ, ವಿಶ್ವ ಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಭಾರತದ ಜ್ಞಾನ ಸಂಪತ್ತನ್ನು ಪರಿಚಯಿಸಬೇಕೆನ್ನುವ ಹಂಬಲದಿಂದ ಹೊರಟಿದ್ದ ವಿವೇಕಾನಂದರಿಗೆ ಸಹಾಯ ಹಸ್ತ ಚಾಚಿದ್ದು ಮೈಸೂರಿನ 10ನೇ ಚಾಮರಾಜೇಂದ್ರ ಒಡೆಯರ್!
ಇದು ನಿಜ! ಸ್ವಾಮಿ ವಿವೇಕಾನಂದರ ವಿದೇಶ ಪ್ರವಾಸದ ಸಂಪೂರ್ಣ ಪ್ರಾಯೋಜಕರು ಮೈಸೂರಿನ ಒಡೆಯರು. 1868ರಲ್ಲಿ ಸಿಂಹಾಅನವೇರಿದ್ದ 10ನೇ ಚಾಮರಾಜೇಂದ್ರ ಒಡೆಯರ್ ಬಳಿಗೆ ಆಗಮಿಸಿದ್ದ ವಿವೇಕಾನಂದರಿಗೆ ತಾವು ಅಮೆರಿಕಾಗೆ ತೆರಳಿ ಧರ್ಮಸಭೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದಲ್ಲದೆ ಅದಕ್ಕೆ ತಗುಲುವ ಅಷ್ಟೂ ಖರ್ಚನ್ನು ತಾವೇ ನೀಡಿ ಉದಾರತೆ ಮೆರೆದಿದ್ದರು.
ಧರ್ಮ ಸಮ್ಮೇಳನದಲ್ಲಿ ವಿವೇಕಾನಂದ
1893ರ ಸೆಪ್ಟೆಂಬರ್ 11 ಸೋಮವಾರ ಬೆಳಿಗ್ಗೆ 10ಕ್ಕೆ ಸರಿಯಾಗಿ ಐತಿಹಾಸಿಕ ವಿಶ್ವಧರ್ಮ ಸಮ್ಮೇಳನ ಉದ್ಘಾಟನೆಯಾಗಿತ್ತು. ಸಾವಿರಾರು ಜನರಿಂದ ಕಿಕ್ಕಿರಿದಿದ್ದ ಸಭಾಸದನದ ವೇದಿಕೆಯ ನಟ್ಟ ನಡುವೆ ಅಮೆರಿಕಾದ ಕ್ಯಾಥೋಲಿಕ್ ಕ್ರೈಸ್ತರ ಅತ್ಯಂತ ಶ್ರೇಷ್ಠ ಧರ್ಮಗುರುಗಳಾದ ಕಾರ್ಡಿನಲ್ ಗಿಬ್ಬನ್ಸ್ ಕುಳಿತಿದ್ದರು. ಅವರ ಎರಡೂ ಬದಿ ವೊವೊಧ ಧರ್ಮಗಳ ಪ್ರತಿನಿಧಿಗಳು ಆಸೀನರಾಗಿದ್ದರು. ಅವರೆಲ್ಲರ ನಡುವೆ ಕಿತ್ತಲೆ ಬಣ್ಣದ ನಿಲುವಂಗಿ, ಪೀತ ವರ್ಣದ ಪೇಟ ಧರಿಸಿ ರಾಜಗಾಂಭೀರ್ಯದಿಂದ ಕುಳಿತಿದ್ದ ಸ್ವಾಮಿ ವಿವೇಕಾನಂದ ವಿಶಿಷ್ಟ ಉಡುಪು, ಗಂಭೀರ ವ್ಯಕ್ತಿತ್ವದಿಂದ ಸಭಿಕರ ಗಮನ ಸೆಳೆದಿದ್ದರು.
ಮೊದಲಿಗೆ ಸ್ವಾಗತ ಸಮಿತಿಯ ಅಧಿಕಾರಿಗಳು ಮಾತನಾಡಿದರು. ಬಳಿಕ ಒಬ್ಬೊಬ್ಬ ಪ್ರತಿನಿಧಿಗಳು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಾಗಿದ್ದರು. ಆದರೆ ವಿವೇಕಾನಂದರು ತಾವು ಎಲ್ಲವನ್ನೂ ಗಮನಿಸುತ್ತಾ ಮೌನವಾಗಿದ್ದರು. ಒಂದೆರಡು ಬಾರಿ ಅವರಿಗೆ ಭಾಷಣಕ್ಕಾಗಿ ಕರೆ ಬಂದರೂ "ಮತ್ತೆ ಮಾಡುತ್ತೇನೆ" ಂದು ಮುಂದೆ ಹಾಕಿದ್ದರು. ಕಡೆಗೊಮೆ ಸಭಾಧ್ಯಕ್ಷರಾದ ಚಾರ್ಲ್ಸ್ ಬಾನಿ ಅವರೇ ಸ್ವಾಮಿ ವಿವೇಕಾನಂದರಿಗೆ ಭಾಷಣ ಮಾಡಬೇಕು ಎಂದು ಕೇಳಿದರು. ಅದಕ್ಕೆ ವಿವೇಕಾನಂದರ ಪಕ್ಕದಲ್ಲೇ ಕುಳಿತಿದ್ದ ಫ್ರೆಂಚ್ ಪಾದ್ರಿಗಳಾದ ಬಾನೆಟ್ ಮಾರಿ ಸಹ ಪ್ರೋತ್ಸಾಹ ನೀಡಿದರು.
ಘರ್ಜಿಸಿದ ಸಿಂಹ!
ಸ್ವಾಮಿ ವಿವೇಕಾನಂದರು ಯಾವ ಪೂರ್ವ ತಯಾರಿಗಳಾಗಲಿ, ಭಾಷಣವನ್ನು ಸಿದ್ದಪಡಿಸಿಕೊಂಡಾಗಲಿ ಸಭೆಯ ಎದುರು ನಿಲ್ಲಲಿಲ್ಲ, ಅವರು ಸಭೆ ಎದುರು ನಿಂತು ಕ್ಷಣ ಮಾತ್ರ ಸಮಸ್ತ ಸಭೆಯನ್ನೊಮ್ಮೆ ಅವಲೋಕಿಸಿದರು. ಸರಸ್ವತೀ ದೇವಿಗೆ ವಂದನೆ ಸಲ್ಲಿಸಿದರುನಂತರ ಸಣ್ಣ ಭಾಷಣ ಪ್ರಾರಂಭಿಸಿದರು. "ಅಮೇರಿಕೆಯ ಸೋದರಿಯರೇ ಮತ್ತು ಸೋದರರೇ" ಎಂದು ಹೇಳಿದ್ದೇ ತಡ ಕಿವಿ ಕಿವುಡಾಗುವಂತೆ ಕರತಾಡನ ನಡೆಯಿತು. ಪ್ರತಿಯೊಬ್ಬರೂ ಎದ್ದು ನಿಂತು ಜಯಘೋಷ ಮಾಡಿದರು, ತಮ್ಮ ತಮ್ಮ ಕರವಸ್ತ್ರ, ಹ್ಯಾಟುಗಳನ್ನು ಬೀಸಿ ಹರ್ಷ ವ್ಯಕ್ತಪಡಿಸಿದರು! ಇದನ್ನು ಕಂಡ ಸ್ವಾಮಿ ವಿವೇಕಾನಂದ ದಂಗಾಗಿ ಹೋದರು.
ಕರತಾಡನ, ಜಯಘೋಷಗಳು ಮುಗಿದ ಮೇಲೆ ಭಾಷಣ ಮುಂದುವರಿಸಿದ ಅವರು "ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
"ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು....ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು..... ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”
ಜಗತ್ತಿನ ಕಣ್ಮಣಿ
ಚಿಕಾಗೋ ವಿಶ್ವಧರ್ಮ ಸಮ್ಮೇಳನ ಉದ್ಘಾಟನಾ ದಿನದ ಸ್ವಾಮಿ ವಿವೇಕಾನಂದರ ಭಾಷಣ ಮರುದಿನ ಎಲ್ಲ ಪತ್ರಿಕೆಗಳಲ್ಲಿ ಅಗ್ರ ಸುದ್ದ್ದಿಯಾಗಿತ್ತು. ಹೀಗೆ ಭಾರತದಲ್ಲಿ ಸಾಮಾನ್ಯ ಸನ್ಯಾಸಿ, ಬೈರಾಗಿಯಾಗಿದ್ದ ಓರ್ವ ವ್ಯಕ್ತಿ ರಾತ್ರಿ ಬೆಳಗಾಗುವಷ್ಟರಲ್ಲಿ ಜಗತ್ತಿನ ಕಣ್ಮಣಿಯಾಗಿ ಬದಲಾಗಿದ್ದರು. ಸ್ವಾಮೀಜಿ ಮಾಡಿದ್ದ ಪುಟ್ಟ ಭಾಷಣ ಮನೆರಿಕನ್ನರ ಮೇಲೆ ಮಾಡಿದ್ದ ಪರಿಣಾಮ ಹಾಗಿತ್ತು. ಅದರಲ್ಲಿಯೂ ಅವರು ಪ್ರಾರಂಭದಲ್ಲಿ ಉದ್ಘರಿಸಿದ ಸಾಲುಗಳು "ಅಮೆರಿಕಾದ ಸೋದರಿಯರೆ, ಸೋದರರೇ" ಎಂಬ ಯಾವ
ನಾಟಕೀಯತೆ ಇಲ್ಲದ ಮೂರು ಸರಳ ಶಬ್ದಗಳಿಗೆ ಇಡೀ ಅಮೆರಿಕಾವೇ ತಲೆದೂಗಿತ್ತು.
ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಒಟ್ಟು ಆರು ಭಾಷಣಗಳನ್ನು ಮಾಡಿದ್ದರು, "ಹಿಂದೂಧರ್ಮ" ಎನ್ನುವ ವಿಚಾರದ ಕುರಿತಂತೆ ಮಾಡಿದ್ದ ಭಾಷಣ ಸಹ ಅಮೋಘವಾದುದಾಗಿತ್ತು. ಸಮ್ಮೇಳನದ ಕಡೆಯ ದಿನ ಸಮಾರೋಪ ಸಮಾರಂಭದಂದು ಸಹ ವಿವೇಕಾನಂದರು ತಮ್ಮ ಚುಟುಕಾದ ಭಾಷಣದ ಮೂಲಕ ಸಮತ್ವದ ಸಾರವನ್ನು ತಿಳಿಸಿದ್ದರು.
"ಯಾರು ಯವ ಧರ್ಮವನ್ನು ಮತಾಂತರಗೊಳ್ಳುವದು ಅಗತ್ಯವಿಲ್ಲ, ಆದರೆ ಉಳಿದವರ ಉನ್ನತ ಭಾವನೆಗಳನ್ನು ಮೈಗೂಡಿಸಿಕೊಂಡು ವಿಯುಕ್ತಿಕತೆಯನ್ನು ಕಳೆದುಕೊಳ್ಳದೆ ತಾನೇ ತಾನಾಗಿ ಬೆಳೆಯಬೇಕು..... ಪಾವಿತ್ರತೆ, ಪರಿಶುದ್ದರತೆ ಹಾಗೂ ಅನುಕಂಪೆಯು ಜಗತ್ತಿನ ಯಾವೊಂದು ಧರ್ಮಕ್ಕೆ ಸೀಮಿತವಾಗಿಲ್ಲ, ಎಲ್ಲ ಧರ್ಮದಲ್ಲಿ ಅತ್ಯಂತ ಶೀಲವಂತರಾದ ಸ್ತ್ರೀ ಪುರುಷರು ಆಗಿಹೋಗಿದ್ದಾರೆ. ಇಷ್ಟಾಗಿಯೂ ನಮ್ಮ ಧರ್ಮವೇ ಉಳಿಯುತ್ತದೆ ಎನ್ನುವವ್ವರ ವಾದ ಕೇಳಿದಾಗ ನನಗೆ ಕನಿಕರ ಮೂಡುತ್ತದೆ" ಎಂದಿದ್ದರು.
ಹೀಗೆ ಸರ್ವಧರ್ಮ ಸಮ್ಮೇಳನದ ಮೂಲಕ ಭಾರತದ ಓರ್ವ ಪರಿವ್ರಾಜಕ ಸನ್ಯಾಸಿ ವಿಶ್ವಮಾನ್ಯತೆ ಗಳಿಸಿಕೊಂಡಿದ್ದರು. ಅಮೆರಿಕಾ ಪ್ರವಾಸ ವಿವೇಕಾನಂದರ ಜೀವನದಲ್ಲಿ ಮಹತ್ವದ ತಿರುವು ದೊರಕಿಸಿಕೊಟ್ಟಿತು. ಇ<ತಹಾ ಚಿಕಾಗೋ ಧರ್ಮಸಮ್ಮೇಳ ನಡೆದು ಇದೀಗ 125 ವರ್ಷಗಳಾಗಿದ್ದು ನಮ್ಮ ನಡುವೆ ಇಂದಿಗೂ ಕುದಿಯುತ್ತಿರುವ ಧರ್ಮ ವೈಷಮ್ಯ, ಮಾರಣಾಂತಿಅಕ ಭತಯೋತ್ಪಾದನೆ ಕೃತ್ಯಗಳನ್ನು ಕಂಡಾಗ ಮತ್ತೆ ಮತ್ತೆ ವಿವೇಕಾನಂದರ ಸಂದೇಶ ನೆನಪಿಸಿಕೊಳ್ಳಬೇಕು ಎನಿಸುತ್ತದೆ.
ಆಧಾರ: ಸ್ವಾಮಿ ಪುರುಷೋತ್ತಮಾನಂದ ವಿರಚಿತ "ವಿಶ್ವವಿಜೇತ ವಿವೇಕಾನಂದ"
(ಈ ನನ್ನ ಲೇಖನವು 11 ಸೆಪ್ಟೆಂಬರ್ 2018 12:00 AM ಗೆ 'ಕನ್ನಡಪ್ರಭ ಡಾಟ್ ಕಾಂ' ಜಾಲತಾಣದಲ್ಲಿ ಪ್ರಕಟವಾಗಿತ್ತು)
ಆಧಾರ: ಸ್ವಾಮಿ ಪುರುಷೋತ್ತಮಾನಂದ ವಿರಚಿತ "ವಿಶ್ವವಿಜೇತ ವಿವೇಕಾನಂದ"
No comments:
Post a Comment