ಹೆಣ್ಣೊಬ್ಬಳಿಗೆ ಬಾಹ್ಯ ಸೌಂದರ್ಯಕ್ಕಿಂತ ಆತರಿಕ ಸೌಂದರ್ಯವೇ ಮುಖ್ಯವೆಂಬುದು ಅತ್ಯಂತ ಖಚಿತವಾಗಿದ್ದರೂ ಹೆಣ್ನಾಗಿ ಅದರಲ್ಲಿಯೂ ಬಾಲ್ಯದಲ್ಲಿ ತಾನು ಎಲ್ಲರ ಕಣ್ಣಿಗೆ "ಚೆನ್ನಾಗಿ" ಅಂದವಾಗಿ ಕಾಣಬೇಕೆಂದು ಬಯಸುವುದು ಪ್ರತಿ ಹೆಣ್ಣಿನ ಮನದಾಸೆ. ಆದರೆ ವಿಧಿಯ ದುರಂತವೆಂಬಂತೆ ಘಟನೆಯೊಂದರಲ್ಲಿ ಎಲ್ಲರಿಂದ "ಗೊಂಬೆ" ಎಂದೆನ್ನಿಸಿಕೊಂಡಿದ್ದ ಬಾಲಕಿಯೊಬ್ಬಳು ಮೈಪೂರ್ತಿ ಸುಟ್ಟು ಕರಕಲಾದಾಗ ಅನುಭವಿಸಿದ ದೈಹಿಕ, ಮಾನಸಿಕ ಯಾತನೆಯನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಶ್ರೀಮತಿ ವಿನುತಾ ವಿಶ್ವನಾಥ್ ಇಂತಹಾ ದುರ್ಬರ ಸನ್ನಿವೇಶವನ್ನೂ ಮೆಟ್ಟಿ ನಿಂದು ಧೈರ್ಯದಿಂದ ಜೀವನದಲ್ಲಿ ಮುಂದುವರಿಯಬಹುದೆನ್ನಲು ಉತ್ತಮ ಉದಾಹರಣೆಯಾಗಿ ನಮ್ಮೊಡನಿದ್ದಾರೆ. ಕೆಲ ತಿಂಗಳ ಹಿಂದೆ ಪ್ರಕಟವಾದ ಅವರ ಆತ್ಮಕಥನ "ಹುಣ್ಸ್ ಮಕ್ಕಿ ಹುಳ" ಈ ನಿಟ್ಟಿನಲ್ಲಿ ಕನ್ನಡದಲ್ಲಿ ಬಂದ ಹೆಣ್ಣುಮಗಳೊಬ್ಬಳ ಅತ್ಯಂತ ಮಹತ್ವದ ಜೀವನ ಕಥಾನಕವಾಗಿದೆ.
ನಾನು ಓದಿದ್ದ ಇತ್ತೀಚಿನ ಪುಸ್ತಕಗಳ ಪೈಕಿ ನನ್ನ ಗಮನ ಸೆಳೆದ ಹಾಗೂ ಮನದಲ್ಲಿ ಗಟ್ಟಿಯಾಗಿ ನೆಲೆಯಾದ ಪುಸ್ತಕ "ಹುಣ್ಸ್ ಮಕ್ಕಿ ಹುಳ". ಮಹಿಳೆಯೊಬ್ಬಳು ತನ್ನ ಮನಸಿನಾಳವನ್ನು ಅತ್ಯಂತ ನಿರ್ಭೀತವಾಗಿ ಹೊರಹಾಕಿರುವ ಕೆಲವೇ ಕೆಲವು ಕೃತಿಗಳಲ್ಲಿ ಈ ಕೃತಿ ಒಂದಾಗಿದೆ. ಅದರಲ್ಲಿಯೂ ಕನ್ನಡದಲ್ಲಿ ಇಂತಹಾ ಕೃತಿಗಳ ಸಂಖ್ಯೆ ಅತ್ಯಂತ ಕಡಿಮೆ ಎನ್ನಬೇಕು.ಇದಕ್ಕೆ ಮುನ್ನ ಡಾ. ವಿಜಯಾ ಅವರ "ಕುದಿ ಎಸರು" ಹಾಗೂ ಪದ್ಮ ಪ್ರಶಸ್ತಿ ವಿಜೇತರಾಗಿದ್ದ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರ"ನಡುವೆ ಸುಳಿವ ಹೆಣ್ನು" ಕೃತಿಗಳನ್ನು ನಾವು ಈ ಸಾಲಿನಲ್ಲಿ ಗುರುತಿಸಲು ಬಹುದು.
ಜೀವನ ಸಾಕು ಎನ್ನಿಸಿದಾಗ ತೆಗೆದು ಓದುವುದಾದರೆ ಓದಿದ್ವರ ಮನದಲ್ಲಿ ಮತ್ತೆ ಬದುಕಬೇಕೆಂಬ ಹಂಬಲ ಹುಟ್ಟಿಸುವ ಶಕ್ತಿ ವಿನುತಾ ಅವರ ಪುಸ್ತಕಕ್ಕಿದೆ. ಲೇಖಕಿ, ರಂಗಭೂಮಿ ಕಲಾವಿದೆ ವಿನುತಾ ವಿಶ್ವನಾಥ್ ತಮ್ಮ ಜೀವನದಲ್ಲಿ ಎದುರಿಸಿದ ಎಲ್ಲಾ ಸವಾಲುಗಳನ್ನು ಎಳೆ ಎಳೆಯಾಗಿ ಇಲ್ಲಿ ತೆರೆದಿಟ್ಟಿದ್ದಾರೆ. ಜೀವನ ನಿಂತ ನೀರಲ್ಲ ಹರಿಯುವ ನದಿ, ನಾವು ಮನುಷ್ಯರು ಏನೇ ಕಷ್ಟ ಸೋಲುಗಳ ಬಂದ್ದರು ಎದುರಿಸಿ ಮುನ್ನುಗ್ಗುತ್ತಿರಬೇಕು, ಎಲ್ಲವ ಎದುರಿಸಿ ನಿಲ್ಲಬೇಕು, ಮತ್ತೊಬ್ಬರಿಗೆ ಸ್ಪೂರ್ತಿಯಾಗಿ ಮಾದರಿಯಾಗಿ ನಿಲ್ಲಬೇಕು ಎನ್ನುವುದನ್ನು ಲೇಖಕಿ ವಿನುತಾ ಪುಸ್ತಕದಲ್ಲಿ ಸ್ಪಷ್ತವಾಗಿ ಹೇಳಿದ್ದಾರೆ.
ಕುಂದಾಪುರದ ಹುಣ್ಸ್ ಮಕ್ಕಿಯವರಾದ ವಿನುತಾ ಅತ್ಯಂತ ಪ್ರಾಮಾಣಿಕವಾಗಿ ಬದುಕು ಕಟ್ಟಿಕೊಂಡವರು. ಹಾಗಾಗಿಯೇ ಅವರಿಗೆ ಇಷ್ಟು ಸ್ಪಷ್ಟವಾಗಿ ತಮ್ಮ ಜೀವನದ ಕಥೆಯನ್ನು ಬರೆಯಲು ಸಾಧ್ಯವಾಗಿದೆ.
ಅವರ ತಂದೆ ಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಒಂದು ದಿನ ಹೋಟೆಲ್ ಬೆಂಚಿನ ಮೇಲೆ ಇಟ್ಟಿದ್ದ ಸೀಮೆ ಎಣ್ಣೆಚಿಮಣಿ ದೀಪ ವಿನುತಾ ಅವರ ಮೈಮೇಲೆ ಬಿದ್ದು ಆಕೆಯ ಶೇ. 60ರಷ್ಟು ದೇಹ ಸುಟ್ಟು ಹೋಗಿತ್ತು. ಆಗಿನ್ನೂ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ವಿನುತಾ ಮುಖ ಕಪ್ಪಾಗಿದ್ದು ದೇಹ ಸುಕ್ಕುಜ್ಗಟ್ಟಿತು. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಿನುತಾ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೊಮ ಮುಗಿಸಿ ಕೆಲಸಕ್ಕೆ ಸೇರಲು ಬಯೈದಾಗ ಮಾತ್ರ ಅವರ ಮುಖದ ಸುಟ್ಟ ಕಲೆ ಅವರಿಗೆ ಕೆಲಸ ಸಿಕ್ಕದ ಹಾಗೆಮಾಡಿತ್ತು! ಪ್ರೀತಿಸಿದ್ದ ಹುಡುಗ ದೂರವಾಗಿದ್ದ... “ನಿಮ್ಮಂಥವರು ಸಾರ್ವಜನಿಕ ಸ್ಥಳಗಳಿಗೆ ಬರುವಾಗ ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳು ಹೆದರಿಕೊಳ್ಳುತ್ತಾರೆ’ ಎಂಬಂತಹಾ ಕಟು ವಾಕ್ಯಗಳನ್ನು ಕೇಳಬೇಕಾಯಿತು!
ಆಗ ಅವರ ನೆರವಿಗೆ ಬಂದದ್ದು ರಂಗಭೂಮಿ. ಗೆಳೆಯ ಚೇತನ್ ಸಹಾಯದಿಂದ ರಂಗಭೂಮಿಗೆ ಬಂದ ವಿನುತಾ ಬೆಂಗಳೂರಿನಲ್ಲಿಂದು ಸಂವಾದ ಬೆಂಗಳೂರು ರಂಗತಂಡದ ಕಲಾವಿದೆಯಾಗಿದ್ದಾರೆ.
ಇನ್ನು ಪುಸ್ತಕದ ಪ್ರಾರಂಭದಲ್ಲಿ ಬಾಲ್ಯದ ನೆನಪುಗಳು ಡಾಳಾಗಿದ್ದು ಆ ಅಧ್ಯಾಯಗಳ ಭಾಷೆ ಸಹ ಅಷ್ಟೇ ಸರಳವಾಗಿದೆ. ಅದೇ ಪುಸ್ತಕರ ಅಂತ್ಯಕ್ಕೆ ಹತ್ತಿರವಾದಂತೆಲ್ಲಾ ಪ್ರಬುದ್ದ ಜೀವನ ಕಥೆ ಬರುತ್ತಲೂ ಭಾಷೆ ಸಹ ಅಷ್ಟೇ ಪ್ರೌಢವಾಗಿರುವುದು ಕಾಣುತ್ತೇವೆ. ಇದು ಲೇಖಕಿಯ ಮೊದಲ ಪುಸ್ತಕದಲ್ಲೇ ಕಂಡು ಬಂದ ವಿಶೇಷತೆ ಎನ್ನುವುದು ಅವರು ಮುಂದೊಂದು ದಿನ ಅದ್ಭುತ ಕಥೆಗಾರ್ತಿ, ಲೇಖಕಿಯಾಗಬಹುದೆನ್ನಲು ಸಾಕ್ಷಿ ಹೇಳುತ್ತವೆ.
ವಿನುತಾ ಅವರೇ ಹೇಳಿದಂತೆ ಹೆಣ್ಣು ಮಕ್ಕಳಲ್ಲಿ ಇರುವ ಕೀಳರಿಮೆ ಅವರಲ್ಲಿದ್ದ ನೈಜ ಪ್ರತಿಭೆಯನ್ನು ಮುಚ್ಚಿ ಹಾಕುತ್ತಿದೆ. ಅಂತಹವರ ಕೀಳರಿಮೆಯನ್ನು ತೊರೆದು ಧೈರ್ಯದಿಂದ ಬದುಕನ್ನು ಮುನ್ನಡೆಸಬೇಕೆಂಬ ಕಾರಣಕ್ಕೆ ಈ ಪುಸ್ತಕ ಬರೆದಿದ್ದೇನೆ.. ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಡಿ. ಸುಮನ್ ಕಿತ್ತೂರು ಹೇಳಿದಂತೆ "ಸಣ್ಣ ಸಣ್ಣ ವಿಚಾರಗಳಲ್ಲಿ ಎಷ್ಟೋ ದೊಡ್ಡ ದೊಡ್ಡ ತಾತ್ವಿಕ ಪಯಣ ತೆರೆದುಕೊಳ್ಳುತ್ತದೆ ಎಂಬುದನ್ನು ಈ ಆತ್ಮಕಥೆ ನಿರೂಪಿಸುತ್ತದೆ. ತಮ್ಮದಲ್ಲದ ತಪ್ಪಿಗೆ, ಸಮಾಜದೊಂದಿಗೆ, ಅದರ ತಿರಸ್ಕಾರದೊಂದಿಗೆ ಗುದ್ದಾಡಲೂ ಸಹ ಆಗದ, ಆತ್ಮಸ್ಥೈರ್ಯ ಕಳೆದುಕೊಂಡು ಮೂಲೆಗುಂಪಾಗುವ ಎಷ್ಟೊ ಜೀವಗಳಿಗೆ ಈ ಆತ್ಮಕಥೆ ಸ್ಫೂರ್ತಿಯಾಗಲಿದೆ." ಎಂಬ ಮಾತುಗಳು ಸತ್ಯ.
ಹಾಗೆ ನೋಡಿದರೆ ವಿನುತಾ ಅವರ ಜೀವನಾನುಭವ ಒಂದು ಒಳ್ಳೆಯ ಕಾದಂಬರಿಗೆ ವಸ್ತುವಾಗಬಹುದಾಗಿತ್ತು. ಬಾಲ್ಯದ ದುರಂತ, ಕಾಲೇಲು ಜೀವನ, ಮೊದಲ ಪ್ರೀತಿಯ ವಿರಹ, ಪಿಜಿಯಲ್ಲಿನ ಜೀವನ, ರಂಗಭೂಮಿಯ ಸೆಳವು ಎಲ್ಲವೂ ಒಂದು ಉತ್ತಮ ಕಥೆ, ಕಾದಂಬರಿಯಾಗಲು ಯೋಗ್ಯವಾಗಿದೆ. ಆದರೆ ವಿನುತಾ ಕಾದಂಬರಿಯನ್ನು ಬರೆಯದೇ ಆತ್ಮಕಥೆ ಬರೆದುಕೊಂಡು ತಮ್ಮ ಜೀವನದ ಕಥೆಯ ಮೂಲಕವೇ ನಾಡಿನ ಯುವ ಜನತೆ ಅದರಲ್ಲಿಯೂ ಮಹಿಳೆಯರಿ ಸ್ಪೂರ್ತಿ ತುಂಬಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಲೇಖಕಿ ವಿನುತಾ ನಿಜಕ್ಕೂ "ಗಟ್ಟಿಗಿತ್ತಿ" ಮನಸಿನ ಮಾತನ್ನು ಬರವಣಿಗೆಗೆ ಇಳಿಸಿ ಪ್ರತಿಯೊಬ್ಬರಿಂದ ಸೈ ಎನ್ನಿಸಿಕೊಳ್ಲಲು ಎಲ್ಲರಿಗೂ ಸಾಧ್ಯವಿಲ್ಲ ಆದರೆ ವಿನುತಾ ಅದರಲ್ಲಿ ಯಶಸ್ವಿಯಾಗಿದ್ದಾರೆ. ವಿನುತಾ ಅವರ ಮುಂದಿನ ಬರಹಗಳು ಆದಷ್ಟು ಬೇಗ ಪ್ರಕಕಟವಾಗಲಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನನ್ನ ಹಾರೈಕೆ...