Saturday, September 11, 2021

ನಮ್ಮಲ್ಲಿನ ಸ್ಥಳಪುರಾಣಗಳು 103


ಗುರುನಾನಕ್ ಝೀರಾ ಸಾಹಿಬ್, ಬೀದರ್

 ಸಿಖ್ಖರ ಗುರುಗಳಾದ ಗುರುನಾನಕ್ ದೇವರು ಕಾಲಿನಿಂದ ಕಲ್ಲನ್ನು ಒದ್ದು ನೀರು ತೆಗೆದ ಸ್ಥಳ ಕರ್ನಾಟಕದಲ್ಲಿರುವುದು ನಿಮಗೆ ಗೊತ್ತೇ?. ಅರೆ, ಏನಿದು? ಎಲ್ಲಿನ ಸಿಖ್ಖರ ಪಂಜಾಬ್, ಎಲ್ಲಿನ ಕರ್ನಾಟಕ?. ಹಾಗಿದ್ದರೂ ಕರ್ನಾಟಕಕ್ಕೂ ಸಿಖ್ಖರ ಗುರುಗಳಾದ ಗುರುನಾನಕ್ ದೇವರಿಗೂ ಸಂಬಂಧವೊಂದಿದೆ. ಬನ್ನಿ ಅದರ ಕುರಿತು ಸ್ವಲ್ಪ ತಿಳಿಯೋಣ?. 

ಸಿಖ್ಖರ ಗುರುದ್ವಾರಗಳು ಭಾರತ ಉಪಖಂಡದಾದ್ಯಂತ ಹರಡಿಕೊಂಡಿರುವುದು ನಮಗೆಲ್ಲಾ ತಿಳಿದವಿಚಾರವಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸುವಲ್ಲಿ ಈಗಲೂ, ಆಗಲೂ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇರುವ ಸಿಖ್ಖರು ಇಂದು ಭಾರತ, ಪಾಕಿಸ್ತಾನಗಳ ಎಲ್ಲ ಕಡೆಗಳಲ್ಲಿಯೂ ಕಾಣಸಿಗುತ್ತಾರೆ. ಸಿಖ್ಖರ ಅಷ್ಟೊಂದು ಗುರುದ್ವಾರಗಳ ಪೈಕಿ ಸಿಖ್ಖರು ಅತಿ ಪವಿತ್ರವೆಂದು ಭಾವಿಸಿ ಭೇಟಿ ಕೊಡುವ ಪ್ರಮುಖ ಗುರುದ್ವಾರಗಳಲ್ಲಿ ಭಾರತದ ಪಂಜಾಬ್ ರಾಜ್ಯದ ಅಮೃತಸರದ ಸ್ವರ್ಣ ಮಂದಿರ, ಸಿಖ್ಖರ ಪರಮೋಚ್ಚ ಗುರುಗಳಾದ ಸಂತ ಗುರುನಾನಕರು ತಮ್ಮ ಜೀವನದ ಕಡೆಗಾಲವನ್ನು ಕಳೆದು ಸಮಾಧಿ ಹೊಂದಿದ ಸ್ಥಳವಾದ ಪಾಕಿಸ್ತಾನ ಪಂಜಾಬ್ ಪ್ರಾಂತದ ಕರ್ತಾರ್ ಪುರದ ಗುರುದ್ವಾರಗಳು ಮುಖ್ಯವಾದವು. ಇವುಗಳ ನಡುವಲ್ಲಿ ನಮ್ಮ ದಕ್ಷಿಣ ಭಾರತದಲ್ಲಿ, ಅದೂ ಕರ್ನಾಟಕದ ಮುಕುಟ ಮಣಿಯಾದ ಬೀದರ್ ನಲ್ಲಿ ಇಂತಹುದೇ ಸಿಖ್ಖರ ಪವಿತ್ರ ಸ್ಥಳವೊಂದಿದೆ ಎನ್ನುವುದು ನಿಮ್ಮನ್ನು ಆಶ್ಚರ್ಯಕ್ಕೀಡು ಮಾಡುತ್ತದೆ. ಹೌದು, ಬೀದರ್ ನಲ್ಲಿರುವ ಗುರುನಾನಕ್ ಜೀರಾ ಸಾಹಿಬ್ ಗುರುದ್ವಾರವೇ ಆ ಪವಿತ್ರ ಸ್ಥಳ. ಇಲ್ಲಿ ಸಿಖ್ಖರು ಈ ಗುರುದ್ವಾರವನ್ನು ಅವರ ಪಂಗಡದ ಏಳ್ಗೆಗೆಂತಲೋ, ಅವರ ಮತ ಪ್ರಚಾರಕ್ಕೆಂತಲೋ ನಿರ್ಮಾಣ ಮಾಡಿಕೊಂಡಿದುದಲ್ಲ. ಬದಲಾಗಿ ಇದರ ಹಿಂದೆ ಬಲವಾದ ಇತಿಹಾಸವೇ ಇದೆ. 

ಸಂತ ಗುರುನಾನಕರು ತಮ್ಮ ಜೀವಮಾನದಲ್ಲಿ ಎರಡನೇ ಪ್ರಚಾರ ಯಾತ್ರೆ ಕೈಗೊಂಡ ಸಂಧರ್ಭದಲ್ಲಿ, ಅಂದರೆ ಕ್ರಿಶ. ೧೫೧೦ ರಿಂದ ೧೫೧೪ರವರೆಗೆ  ಭಾರತದ ನಾನಾ ಕ್ಷೇತ್ರಗಳನ್ನು, ಸಾಧು-ಸಂತರನ್ನು, ಪಂಡಿತರನ್ನೂ ಭೇಟಿ ಮಾಡುತ್ತಾ ಯಾತ್ರೆ ಮಾಡುತ್ತಿದ್ದರು. ಹೀಗೆಯೇ ಯಾತ್ರೆ ಮಾಡುತ್ತಾ ದಕ್ಷಿಣ ಭಾರತದೆಡೆಗೆ ಬಂದ ಸಂಧರ್ಭದಲ್ಲಿ ಮೊದ ಮೊದಲು ಇಂದಿನ ತೆಲಂಗಾಣದ ಹೈದರಾಬಾದ್ ಮತ್ತು ಗೋಲ್ಕೊಂಡ ರಾಜ್ಯಗಳಿಗೆ ಭೇಟಿಯಿತ್ತ ಗುರುನಾನಕರು ಅಲ್ಲಿನ ಮುಸ್ಲಿಂ ಸಂತರು ಕೆಲವರಿಂದ ಬೀದರ್ ನಲ್ಲಿ ಫಿರ್ ಜಲಾಲುದ್ದೀನ್ ಮತ್ತು ಯಾಕುಬ್ ಅಲಿ ಎಂಬುವವರು ನಾನಾ ಸತ್ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಗಳಾಗಿ ಬದುಕುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಕೂಡಲೇ ಬೀದರ್ ಕಡೆಗೆ ಪ್ರಯಾಣ ಬೆಳೆಸುವ ಗುರುನಾನಕರು  ಬೀದರ್ ನ ಹೊರವಲಯದಲ್ಲಿ ತಮ್ಮ ಹಿಂಬಾಲಕರೊಂದಿಗೆ ಇಳಿದುಕೊಳ್ಳುತ್ತಾರೆ. ಅನೇಕ ಮುಸ್ಲಿಂ ಸಂತರ ಕುಟೀರಗಳಿದ್ದ ಸ್ಥಳದಲ್ಲಿ ಇಳಿದುಕೊಂಡ ಗುರುನಾನಕರು ಅಲ್ಲಿದ್ದವರಿಗೆ ಉಪದೇಶ ನೀಡುತ್ತಾರೆ. ಗುರುನಾನಕರ ಯೋಚನೆ, ಉಪದೇಶಗಳನ್ನು ಎರಡು ಮಾತಿಲ್ಲದೆ ಪ್ರೀತಿಯಿಂದ ಒಪ್ಪಿಕೊಳ್ಳುವ ಹಲವಾರು ಸಂತರು ಗುರುನಾನಕರ ಅನುಯಾಯಿಗಳಾಗುತ್ತಾರೆ. ದಿನಗಳೆಯುವುದರೊಳಗಾಗಿ ಗುರುನಾನಕರು ಉತ್ತರ ದೇಶದಿಂದ ಬಂದಿರುವ ವಿಚಾರ ಬೀದರ್ ನಾದ್ಯಂತ ಹರಡುತ್ತದೆ. ಅವರನ್ನು ಕಾಣಲು, ಉಪದೇಶಗಳನ್ನು ಕೇಳಲು ತಂಡೋಪತಂಡವಾಗಿ ಜನಗಳು ಬರಲು ಆರಂಭಿಸುತ್ತಾರೆ. ಅನೇಕ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳಿ ತಿಳಿದುಕೊಂಡು ಅದಕ್ಕೊಂದು ಪರಿಹಾರ ಸೂಚಿಸುತ್ತಿದ್ದ ಗುರುನಾನಕರು ಅಲ್ಲಿ ಕಂಡದ್ದು ಬರಗಾಲದ ಭೀಕರತೆ. ಗುರುನಾನಕರು ಅಲ್ಲಿಗೆ ಭೇಟಿ ಕೊಟ್ಟ ಸಮಯದಲ್ಲಿ ಭೀಕರ ಬರ ಆವರಿಸಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ ಜನರು ಬಾವಿ ತೋಡಿದರೆ ಅಲ್ಲಿಯೂ ನೀರು ಸಿಗದೇ ಗುಳೇ ಹೋಗುವುದಕ್ಕೆ ತೊಡಗಿರುತ್ತಾರೆ. ಅನೇಕ ಜನರಿಂದ ಇದೇ ವಿಷಯ ಕೇಳಿದ್ದ

 ಗುರುನಾನಕರು ಜನರ ಬವಣೆಗೆ ಮರುಗಿ ಅದಕ್ಕೆ ತಾವೇ ಉಪಾಯವೊಂದನ್ನು ಹೂಡಲು ಸಿದ್ಧರಾಗುತ್ತಾರೆ. ಗುರುನಾನಕರು ಕಣ್ಮುಚ್ಚಿ ಕೆಲಕಾಲ ಧ್ಯಾನಿಸಿ 'ಸತ್ ಕರ್ತಾರ್'(ಕನ್ನಡದಲ್ಲಿ 'ಉತ್ತಮ ಕಾರ್ಯಗಳನ್ನು ಮಾಡುವಂತಹ' ಎಂಬರ್ಥ) ಎಂದು ಉಚ್ಚರಿಸುತ್ತಾ ತಮ್ಮ ಮರದ ಪಾದರಕ್ಷೆಗಳನ್ನು ಧರಿಸಿ ಅಲ್ಲಿದ್ದ ಕಲ್ಲೊಂದನ್ನು ಒದೆಯುತ್ತಾರೆ. ಆಶ್ಚರ್ಯ ಹಾಗು ಪವಾಡ ಸದೃಶ ರೀತಿಯಲ್ಲಿ ಗುರುನಾನಕರು ಒದ್ದ ಜಾಗದಲ್ಲಿ ನೀರಿನ ಬುಗ್ಗೆಯೊಂದು ಹೊರಚಿಮುತ್ತದೆ. ಶುದ್ಧ ಕುಡಿಯುವ ನೀರಿನ ಬುಗ್ಗೆ ಅದಾಗಿದ್ದು ಅಲ್ಲಿನ ಜನರ ದಣಿವನ್ನು ನೀಗಿಸುತ್ತದೆ. ಜಲ ಬುಗ್ಗೆಗೆ ಸೂಫಿ ಸಂತರು 'ಝೀರಾ' ಎಂದು ಕರೆಯುತ್ತಿದ್ದರು. ಗುರುನಾನಕರಿಂದ ಉದ್ಭವಿಸಿದ ಜಲ ಬುಗ್ಗೆಯಾದ ಕಾರಣದಿಂದ ಇದನ್ನು 'ಗುರುನಾನಕ್ ಝೀರಾ' ಎಂದೂ, ಇಲ್ಲಿರುವ ಗುರುದ್ವಾರವನ್ನು 'ಗುರುನಾನಕ್ ಝೀರಾ ಸಾಹಿಬ್' ಎಂದೂ ಕರೆಯಲಾಗುತ್ತದೆ. ಇಲ್ಲಿ ಅಂದಿನಿಂದಲೂ ಈ ರೀತಿಯ ಸ್ಥಳಪುರಾಣವಿತ್ತೇ ವಿನಃ ಗುರುದ್ವಾರವಿರಲಿಲ್ಲ. ಸಂತ ಗುರುನಾನಕರ ಅಪಾರ ಅಭಿಮಾನಿಗಳೂ, ಅನುಯಾಯಿಗಳು ಈ ಪ್ರದೇಶಕ್ಕೆ ಗುರುನಾನಕರು ಭೇಟಿ ಕೊಟ್ಟಿದುದನ್ನು ಅಮರವಾಗಿರಿಸಲು ನಿರ್ಧಾರ ಕೈಗೊಂಡು ನಮಗೆ ಸ್ವಾತಂತ್ರ್ಯ ದಕ್ಕಿದ ಮರು ವರ್ಷವೇ ಅಂದರೆ ೧೯೪೮ರಲ್ಲಿ ಇಲ್ಲೊಂದು ಗುರುದ್ವಾರವನ್ನು ನಿರ್ಮಾಣ ಮಾಡಿ ದಾಸೋಹ(ಪಂಜಾಬಿ: ಲಂಗರ್) ಸೇವೆಯನ್ನೂ ನಡೆಸಿಕೊಂಡು ಬರುತ್ತಿದ್ದಾರೆ. 


No comments:

Post a Comment