ಪೆರ್ಡೂರು ಅನಂತಪದ್ಮನಾಭ (Perdur)
ಉಡುಪಿ ಜಿಲ್ಲೆ ಹಲವಾರು ದೇವಾಲಯ, ಪ್ರವಾಸಿ ತಾಣಗಳ ಆಗರ. ಅದರಲ್ಲಿ ಪೆರ್ಡೂರು ಸಹ ಒಂದು ಪೆರ್ಡೂರು. ಉಡುಪಿ ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ದೂರದಲ್ಲಿದೆ ಆಗುಂಬೆಗೆ ಹೋಗುವ ರಾಜ್ಯ ರಸ್ತೆಯಲ್ಲಿ ಹಾಗೆಯೇ ಆಗುಂಬೆಯಿಂದ 32 ಕಿ.ಮೀ. ದೂರದಲ್ಲಿ ಉಡುಪಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ ಈ ಪುಣ್ಯಕ್ಷೇತ್ರ ಪೆರ್ಡೂರು. ಉಡುಪಿ ತಾಲೂಕಿನಲ್ಲಿ ಗಾತ್ರದಲ್ಲಿ ಅತೀ ದೊಡ್ಡ ಗ್ರಾಮವಾದ ಪೆರ್ಡೂರು ಬ್ರಹ್ಮಾವರ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೂ ಉಡುಪಿ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಸೇರಿದೆ.ಯಕ್ಷಗಾನದಲ್ಲಿ ಪೆರ್ಡೂರು ಮೇಳೆ ಹೆಸರುವಾಸಿಯಾಗಿದ್ದು ಪೆರ್ಡೂರು ಅನಂತ ಪದ್ಮನಾಭ ಸ್ವಾಮಿ ದೇವಾಲಯವೂ ಸಹ ಇಲ್ಲಿನ ವಿಶೇಷ ಆಕರ್ಷಣೆ. ಇಲ್ಲಿ ಪ್ರತಿ ವರ್ಷ ಮಾರ್ಚ್-ಏಪ್ರಿಲ್ ನಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಂದು(ಸೆಪ್ಟೆಂಬರ್ 9) ಶ್ರೀ ಅನಂತಪದ್ಮನಾಭ ವ್ರತವಿರುವುದರಿಂದ ಪೆರ್ಡೂರು ಕ್ಷೇತ್ರದ ಪುರಾಣೇತಿಹಾಸದ ಕುರಿತು ಇಲ್ಲೊಂದು ಬರಹ.
***
‘ಪೇರ್ ಉಂಡು ಊರು’ - ಪೇರುಂಡೂರು - ಪೆರುಡೂರು - ಪೆರ್ಡೂರು ಎನ್ನುವ ಹೆಸರಿಂದ ಕರೆಯಲ್ಪಡುವ ಉಡುಪಿ ಸಮೀಪದ ಪೆರ್ಡೂರು ಕುರಿತಂತೆ ಅದರ ಹೆಸರ ಕುರಿತಂತೆ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಅದೆಂದರೆ ತುಳುವಿನಲ್ಲಿ ‘ಪೇರ್’ ಎಂದರೆ ಎತ್ತರ, ‘ಪೆರಿದ್’ ಎಂದರೆ ದೊಡ್ಡದಾದ – ವಿಸ್ತಾರವಾದ – ಅಂದರೆ ವಿಸ್ತಾರವಾದ ಎತ್ತರದಲ್ಲಿರುವ ಊರು – ‘ಪೆರಿದ್ – ಊರು,’ ಪೆರಿದೂರು - ಪೆರ್ದೂರು - ಪೆರ್ಡೂರು ಎಂದು ಕರೆಯಲ್ಪಟ್ಟಿದೆ. ಇನ್ನೊಂದು ಐತಿಹ್ಯದಂತೆ ಸಾವಿರಾರು ವರ್ಷದ ಹಿಂದೊಮ್ಮೆಇಂದಿನ ಪೆರ್ಡೂರು ಇರುವ ಜಾಗದಲ್ಲಿ ಹಸುವೊಂದು ಹುತ್ತಕ್ಕೆ ಹಾಲು ಸುರಿಸುತ್ತಿತ್ತು. ಇದನ್ನು ಕಂಡ ದನಗಾಯಿಯೊಬ್ಬ `ಪೇರ್ ಉಂಡು, ಪೇರ್ ಉಂಡು' (ಹಾಲಿದೆ ಹಾಲಿದೆ) ಎಂದು ಕೂಗಿದ. ಅದೇ ಮುಂದೆ ಪೆರ್ಡೂರು ಎಂದಾಗಿದೆ.
ತುಳುನಾಡೆಂದುಕರೆಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಯ್ಸಳ, ವಿಜಯನಗರ ಸಾಮ್ರಾಟರ ಅಂಕಿತಕ್ಕೊಳಪಟ್ಟು ಕೆಲವಾರು ರಾಜರು ಬಾರಕೂರು, ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಆಳುತ್ತಿದ್ದರು. ಈ ಪೆರ್ಡೂರು ಸೀಮೆ ಬಾರಕೂರಿನ ರಾಜರ ಅಧೀನದಲ್ಲಿತ್ತು. ಪಶ್ಚಿಮ ಘಟ್ಟದ ಕೆಳಗಿನ ನಾಡಾದ ಇದು ಕಾಡಿನಿಂದಾವೃತವಾಗಿತ್ತು. ಕಾಡಿನ ನಡುವೆ ವಿಶೇಷ ಸಾನ್ನಿಧ್ಯವಿರುವ ನಿರ್ವೈರ ಸ್ಥಳದಲ್ಲಿ ಶ್ರೀಸ್ವಾಮಿಯ ಪ್ರತಿಷ್ಠಾಪನೆಯಾಗಿದೆ. ಉಡುಪಿಯಿಂದ ಈಶಾನ್ಯದಲ್ಲಿ ಒಂದು ಯೋಜನದೂರದಲ್ಲಿ ‘ಕೋಟಿಕುಂಜ’ವನ್ನು ಆಳುತ್ತಿದ್ದ ರಾಜ ಶಂಕರನು ತನ್ನ ಆಶ್ರಿತನಾದ ಮುನ್ನೂರು ಗ್ರಾಮದ ಕೃಷ್ಣಶರ್ಮನೆಂಬ ಬ್ರಾಹ್ಮಣೋತ್ತಮನು ಕಾಡಿನ ಮಧ್ಯದಲ್ಲಿ ಫಾಲ್ಗುಣ ಮಾಸ ಶುಕ್ಲಪಕ್ಷ ಪ್ರತಿಷ್ಠಾಪಿಸಿದ ಅನಂತಪದ್ಮನಾಭ ಸ್ವಾಮಿಗೆ ಸುಂದರವಾದ ಆಲಯ, ಪ್ರಾಕಾರ, ಕೆರೆ, ಕಟ್ಟಡಗಳನ್ನು ಕಟ್ಟಿಸಿದ್ದಲ್ಲದೆ ನಿತ್ಯಪೂಜೆಗಾಗಿ ಬಣ್ಣಂಪಳ್ಳಿ ಗ್ರಾಮದಲ್ಲಿ ಉಂಬಳಿಬಿಟ್ಟನೆಂದು ತಿಳಿದುಬರುತ್ತದೆ.
ಬಾರ್ಕೂರು ರಾಜರ ಆಳ್ವಿಕೆ ಕಾಲದಲ್ಲಿ ಕೃಷ್ಣ ಶರ್ಮನೆಂಬ ಬ್ರಾಹ್ಮಣನಿಗೆ ಕನಸಿನಲ್ಲಿ ದೇವರು ಪ್ರತ್ಯಕ್ಷನಾಗಿ ತನ್ನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಅನಂತ ಪದ್ಮನಾಭ ಎಂದು ಹೆಸರು ಇಡುವಂತೆ ಹೇಳಿದ ಕಾರಣ, ಇಲ್ಲಿ ಅನಂತ ಪದ್ಮನಾಭ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು ಎನ್ನುವುದು ಪ್ರತೀತಿ. ಈ ದೇವಾಲಯಕ್ಕೆ ಅಂದಿನ ರಾಜರು ಸುಂದರ ದೇಗುಲ, ಧ್ವಜ, ಮರ, ಪಕ್ಕದಲ್ಲೇ ಪದ್ಮತೀರ್ಥವೆಂಬ ಕಲ್ಯಾಣಿಯನ್ನು ನಿರ್ಮಿಸಿದರು. ಇಲ್ಲಿರುವ ತೀರ್ಥದಲ್ಲಿ ಸ್ನಾನ ಮಾಡಿದರೆ ಚರ್ಮರೋಗ ಹಾಗೂ ಇನ್ನಿತರ ವ್ಯಾಧಿಗಳು ಗುಣವಾಗಿ ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುವ ನಂಬಿಕೆ ಉಂಟು.
No comments:
Post a Comment