Tuesday, February 14, 2023

ಪ್ರೇಮಿಗಳ ದಿನದಂದು “ಪ್ರೇಮಪತ್ರದ ಆಫೀಸು” ಪುಸ್ತಕ ಬಿಡುಗಡೆ ಮಾಡಿದ ’ಸಿಂಹಪ್ರಿಯಾ’

 ವರ್ಷಗಳ ಕಾಲ ಪ್ರೇಮಿಗಳಾಗಿದ್ದು ಇತ್ತೀಚಿಗಷ್ಟೆ ದಂಪತಿಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ವ್ಯಾಂಲಂಟೈನ್ ಡೇನ ಈ ಬಾರಿ ವಿಶೇಷವಾಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಒಂದು ಪ್ರೇಮಕತೆಗಳ ಪುಸ್ತಕವನ್ನು ಲೋಕಾರ್ಪಣೆ ಮಾಡುವುದರ ಮೂಲಕ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಾವಲಿ ಪಬ್ಲಿಕೇಶನ್ ನ ಮೊದಲ ಪುಸ್ತಕವಾದ ಶಿವಕುಮಾರ ಮಾವಲಿಯವರ "ಪ್ರೇಮಪತ್ರದ ಆಫೀಸು ಮತ್ತು ಅವಳು" ಎಂಬ ವಿಶಿಷ್ಟ ಶೀರ್ಷಿಕೆಯ ಕಥಾ ಸಂಕಲನವನ್ನು ಅವರಿಬ್ಬರೂ ಬಿಡುಗಡೆ ಮಾಡಿದ್ದಾರೆ. ಲೇಖಕ ಶಿವಕುಮಾರ ಮಾವಲಿ , ಪ್ರಕಾಶಕಿ ಪ್ರೇಮ ಶಿವಕುಮಾರ ಜೊತೆಗೂಡಿ ಇಬ್ಬರೂ ಪ್ರೇಮ ಪುಸ್ತಕವೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ವಾಲಂಟೈನ್ ದಿನಗಳ ನೆನಪು ಮಾಡಿಕೊಂಡರು. 



ಪ್ರೇಮಪತ್ರದ ಆಫೀಸು ಎಂಬ ಶೀರ್ಷಿಕೆಯೇ ಆಸಕ್ತಿ ಹುಟ್ಟಿಸುವಂತಿದೆ, ನಾವೂ ಪ್ರೇಮಪತ್ರಗಳನ್ನ ಬರೆದುಕೊಳ್ತಿದ್ವಿ ಎಂದು ನೆನಪು ಮಾಡಿಕೊಂಡು, ಪುಸ್ತಕದಲ್ಲಿದ್ದ ಎರಡು ಪತ್ರಗಳ ಸಾಲುಗಳನ್ನು ಪರಸ್ಪರರು ಪತ್ರದ ರೀತಿಯಲ್ಲಿ ಓದಿಕೊಂಡರು. 


ಹರಿಪ್ರಿಯ, ''ಸಾವಿರ ಜನರ ಮಧ್ಯೆ ಇದ್ದರೂ ನಾನು ಏಕಾಂಗಿಯೇ, ನಿನ್ನ ನೆನಪಿನ ಭಾವವಿರದಿದ್ದರೆ'' ಎಂದು ಹೇಳಿದರೆ, ವಸಿಷ್ಠ ಸಿಂಹ , " ತನಗಾಗಿ ಏನನ್ನೂ ಮಾಡಿಕೊಳ್ಳದ ನೀರಿನಂತೆ ನಾನು ನಿನ್ನನ್ನು ಪ್ರೀತಿಸುತ್ತೇನೆ " ಎಂದು ಹರಿಪ್ರಿಯಾರ ಮುಖದಲ್ಲಿ ನಗು ಮೂಡಿಸಿದರು. ಮಾವಲಿ ಪಬ್ಲಿಕೇಶನ್ ಇಂದ ಪ್ರಕಟವಾಗುತ್ತಿರುವ ಈ ಕಥಾ ಸಂಕಲನವನ್ನು ಹೆಚ್ಚು ಜನ ಓದಲಿ ಮತ್ತು ಇಂಥ ಅನೇಕ ಪುಸ್ತಕಗಳು ಅವರಿಂದ ಮೂಡಿ ಬರಲಿ ಎಂದು ಆಶಿಸಿದರು. 


'ಇಷ್ಟು ವರ್ಷಗಳಿಗಿಂತ ಈ ಬಾರಿ ನಮ್ಮ ವ್ಯಾಲಂಟೈನ್ ಡೇ ವಿಶೇಷವಾಗಿ ಆಯಿತು, ಪ್ರೇಮಪುಸ್ತಕವೊಂದು ನಮ್ಮಿಂದ ಬಿಡುಗಡೆ ಆಗುವಂತಾಯಿತು' ಎಂದು ಹರಿಪ್ರಿಯ ಹೇಳಿದರು... 


'ದೇವರು ಅರೆಸ್ಟ್ ಆದ' ಮತ್ತು 'ಟೈಪಿಸ್ಟ್ ತಿರಸ್ಕರಿಸಿದ ಕತೆ' ಎಂಬ ಕತಾ ಸಂಕಲನಗಳ ಮೂಲಕ ಹೊಸ ರೀತಿಯ ಕತೆಗಳನ್ನು ಪರಿಚಯಿಸಿದ ಶಿವಕುಮಾರ ಮಾವಲಿಯವರ 'ಸುಪಾರಿ ಕೊಲೆ' ನಾಟಕ ಒಂದು ಪತ್ತೇದಾರಿ ಮಾದರಿಯ ನಾಟಕವಾಗಿದ್ದರೆ, ಇತ್ತೀಚಿಗೆ ಪ್ರದರ್ಶನಗೊಂಡ ಅವರ 'ಒಂದು ಕಾನೂನಾತ್ಮಕ ಕೊಲೆ' ನಾಟಕವು, ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಬಳಸಿಕೊಂಡು ಸಶಕ್ತವಾಗಿ ರಾಜಕೀಯ ವಿಡಂಬನೆ ಮಾಡುವ ನಾಟಕವಾಗಿದೆ. ಹಾಗೆಯೇ ರಾಜೀವ್ ಗಾಂಧಿ ಹತ್ಯೆಯ ಸಮಯದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರ ಬದುಕಲ್ಲಿ ನಡದ ಘಟನೆಯಾಧಾರಿತ ಕಾದಂಬರಿ 'LTTE Murthy Calling' ಇತ್ತೀಚಿಗಷ್ಟೆ ತಮಿಳಿಗೆ ಅನುವಾದಗೊಂಡಿದೆ. 


ಈಗ ಅವರ ಹೊಸ ಕತಾ ಸಂಕಲನ "ಪ್ರೇಮಪತ್ರದ ಆಫೀಸು ಮತ್ತು ಅವಳು" ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗುತ್ತಿರುವ ಮೊದಲ ಪುಸ್ತಕವಾಗಿದೆ. ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದೆ.

Saturday, February 04, 2023

ಸಪ್ತ ಸ್ವರಗಳಲ್ಲಿ ಲೀನವಾದ ಗಾನ ಕೋಗಿಲೆ ವಾಣಿ ಜಯರಾಮ್

 

ಅವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರತೀಯ ಹಿನ್ನೆಲೆ ಗಾಯಕಿ,  ಬೇರೆ ಬೇರೆ ಭಾಷೆಗಳಲ್ಲಿ ಸುಮಾರು ೧೦,೦೦೦ ಕ್ಕೂ ಹೆಚ್ಚು ಹಾಡುಗಳನ್ನು‌ಹಾಡಿ ಜನಮಾನಸದಲ್ಲಿ ನೆಲೆಸಿದಾಕೆ.  ಅವರು ಒಂದು ಸಾವಿರಕ್ಕೂ ಹೆಚ್ಚು ಭಾರತೀಯ ಚಲನಚಿತ್ರಗಳಿಗೆ ಪ್ಲೇಬ್ಯಾಕ್ ಸಿಂಗರ್ ಆಗಿದ್ದವರು.  ಸಾವಿರಾರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂ ಅವರ ಹೆಸರಿನಲ್ಲಿದೆ.  ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿಗಳಲ್ಲಿ ಭಾಗವಹಿಸಿ ಸಂಗೀತ ಸುಧೆ ಹರಿಸಿದವರು. 19 ಭಾಷೆಗಳಲ್ಲಿ ಹಾಡಿರುವ ಮೇರು ಗಾಯನ ಪ್ರತಿಭೆ.  ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಒಡಿಶಾ , ಆಂಧ್ರ ಪ್ರದೇಶ , ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ರಾಜ್ಯ ಸರ್ಕಾರದ ಪ್ರಶಸ್ತಿ, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಯಾರ್ಕ್ ನಗರದಲ್ಲಿ ನಡೆದ NAFA 2017 ಸಮಾರಂಭದಲ್ಲಿ ಅವರು ಅತ್ಯುತ್ತಮ ಮಹಿಳಾ ಗಾಯಕಿ ಎನ್ನುವ ಗೌರವ ಗಳಿಸಿಕೊಂಡವರು..

ಅವರೇ ನಮ್ಮ ನಿಮ್ಮೆಲ್ಲರ ಮೆಚ್ಚಿನ ಗಾನ ಕೋಗಿಲೆ ವಾಣಿ ಜಯರಾಮ್. ಅವರಿಂದು ಇಹಲೋಕ ತ್ಯಜಿಸಿದ್ದಾರೆ. ಹಾಡುಹಕ್ಕಿಯು ಮೌನಕ್ಕೆ ಶರಣಾಗಿದೆ.

ಬೋಲೆ  ರೆ  ಪಪಿ   ಹರಾ.. ಪಪಿ.. ಹರಾ..

ಕಿತ್ ಗನ್ ಬರ್ಸೆ .. ನಿತ್ ಮನ್ ಪ್ಯಾಸ......!

1971 ರಲ್ಲಿ ಬಿಡುಗಡೆಯಾದ ", ಗುಡ್ಡಿ" ಚಿತ್ರದ ಈ  ಗೀತೆ ವಾಣಿ ಜಯರಾಮ್ ಅವರ ಜೀವನದಲ್ಲಿ ಅತ್ಯಂತ ಪ್ರಮುಖವಾಗಿದೆ. ಅಷ್ಟೇ ಅಲ್ಲದೆ ಅಂದಿನ ಕಾಲಕ್ಕೆ ವರ್ಷಗಳ ಕಾಲ ಅಮೋಘ ಪ್ರಖ್ಯಾತಿ ಪಡೆದು ಆ ಕಾಲದ ಖ್ಯಾತ ಗಾಯಕಿಯರ ನಿದ್ದೆ ಕೆಡಿಸಿತ್ತಂತೆ.

ವಾಣಿಜಯರಾಂ 1945ರ ನವೆಂಬರ್ 30ರಂದು  ವೆಲ್ಲೂರಿನ ಇಡಂಗು ಗ್ರಾಮದಲ್ಲಿ ಜನಿಸಿದರು.  ಇಅವರ ತಾಯಿಯು ಸಹ ಖ್ಯಾ ಸಂಗೀತ ವಿದ್ವಾಂಸರ ಶಿಷ್ಯೆಯಾಗಿದ್ದು ಮನೆಯಲ್ಲಿ ಸಂಗೀತಮಯ ವಾತಾವರಣವಿದ್ದ ಕಾರಣ ಬಾಲ್ಯದಲ್ಲೇ ವಾಣಿ ಅವರಿಗೆ ಸಂಗೀತದ ಮೇಲೆ ಒಲವು ಮೂಡಿತ್ತು. ಐದನೆಯ ವಯಸ್ಸಿನಲ್ಲೇ ಕಡಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಗೀತಾಭ್ಯಾಸ ಪ್ರಾರಂಭ ಏಳನೇ ವಯಸ್ಸಿಗೆ  ದೇಶಿಕರ್ ಕೃತಿಗಳನ್ನು ಹಾಡುವಷ್ಟರ ಮಟ್ಟಿಗೆ ಅಭ್ಯಾಸ ಬೆಳೆಸಿಕೊಂಡಿದ್ದ ವಾಣಿ ಹತ್ತು ವರ್ಷದವರಿದ್ದಾಗಲೇ ತಿರುವನಂತಪುರದಲ್ಲಿ ಸತತ ಮೂರು ಗಂಟೆಗಳ ಕಾಲ ಸಂಗೀತ ಕಚೇರಿ ನಡೆಸಿಕೊಟ್ಟಿದ್ದರು.  ಆರ್. ಬಾಲಸುಬ್ರಮಣ್ಯಂ ಮತ್ತು ಆರ್. ಎಸ್. ಮಣಿ  ಅವರಲ್ಲಿ ಸಂಗೀತಾಭ್ಯಾಸ ಮಾಡಿದ್ದ ವಾಣಿಯವರು ಮುಂದೆ ಸಂಗೀತದ ಜೊತೆಗೇ ವಿದ್ಯಾಭ್ಯಾಸದಲ್ಲಿಯೂ ಮುಂಚೂಣಿಯಲ್ಲಿ ಇದ್ದರು. ವಾಣಿಯವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಚೇಂಬರ್ ಆಫ್ ಕಾಮರ್ಸ್ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಯರಾಂ ಅವರೊಡನೆ  ವಿವಾಹವಾದ ನಂತರ ಪತಿಯ ಪ್ರೋತ್ಸಾಹದೊಂದಿಗೆ ಪಟಿಯಾಲ ಘರಾಣಾದ ಅಬ್ದುಲ್ ರೆಹಮಾನ್ ಬಳಿ ಹಿಂದೂಸ್ಥಾನಿ ಸಂಗೀತ ಕಲಿತರು.  ಆರಂಭದಲ್ಲಿ ಎಸ್.ಬಿ.ಐ. ಉದ್ಯೋಗಿ ಆಗಿದ್ದ ಇವರು, ಹೆಚ್ಚು ಹೆಚ್ಚು ಅವಕಾಶಗಳು ಬಂದಂತೆ , ಉದ್ಯೋಗ ತೊರೆದು ಸಂಗೀತದಲ್ಲೇ ತಮ್ಮನ್ನು ತೊಡಗಿಸಿ ಕೊಂಡರು.. ಮರಾಠಿ ಚಿತ್ರ ನಿರ್ದೇಶಕ ವಸಂತ ದೇಸಾಯಿಯವರ ಮರಾಠಿ ಆಲ್ಬಂನ 'ಋಣಾನುಬಂಧಾಚ್ಯ' ಗೀತೆಗೆ ಕುಮಾರಗಂಧರ್ವರೊಂದಿಗೆ ಸಹಗಾಯಕಿಯಾಗಿ ಹಾಡಿದ್ದ ವಾಣಿ ಜಯರಾಂ ಅವರ ಗಾಯನ ಅವರನ್ನು ಹಿಂದಿ ಚಿತ್ರರಂಗಕ್ಕೆ ಕರೆತಂದಿತು.  ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಗುಡ್ಡಿ’ ಚಿತ್ರದ “ಬೋಲ್ ರೆ ಪಪ್ಪಿ ಹರಾ”  ಹಿಂದಿ ಚಿತ್ರರಂಗ ಮಾತ್ರವಲ್ಲ ಭಾರತದಾದ್ಯಂತ ವಾಣಿ ಜಯರಾಮ್ ಅವರ ಹೆಸರನ್ನು ಪ್ರಖ್ಯಾತವಾಗಿಸಿತು. 


1973ರಿಂದ  ಕನ್ನಡದಲ್ಲಿ ಹಾಡಲು ತೊಡಗಿದ ವಾಣಿ ಜಯರಾಮ್ 1973ರಲ್ಲಿ ತೆರೆಕಂಡ 'ಕೆಸರಿನ ಕಮಲ' ಚಿತ್ರಕ್ಕಾಗಿ ಎರಡು ಹಾಡುಗಳನ್ನು ಹಾಡಿದ್ದರು.  ಅವರು ಕನ್ನಡದಲ್ಲೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸುಮಧುರ ಹಾಡುಗಳನ್ನು ಹಾಡಿದ್ದಾರೆ. ಭಾರತ ಭೂಷಿರ ಮಂದಿರ ಸುಂದರಿ, ದಾರಿ ಕಾಣದಾಗಿದೆ ರಾಘವೇಂದ್ರನೆ, ಪ್ರಿಯತಮಾ ಓ ಪ್ರಿಯತಮ.... , ಹೋದೆಯಾ ದೂರ ಓ.. ಜೊತೆಗಾರ ಸೇರಲು ಬಂದಾಗ. ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ, ಸವಿನೆನಪುಗಳು ಬೇಕು ,ಸವಿಯಲಿ ಬದುಕು, ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ, ಒಲುಮೆ ಸಿರಿಯ ಕಂಡು ,ಬಯಕೆ ಸಿಹಿಯ ಉಂಡು, ಏನೇನೋ ಆಸೆ ನೀ ತಂದ ಭಾಷೆ ಎಂದು ನಿನ್ನ ತನು ಮನ ಕೂಗುತ್ತಿದೆ ಬಾ ಎಂದು ನನ್ನಾ, ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೇ ನೋಡೆನ್ನುತಾ, 'ಸುತ್ತ ಮುತ್ತ ಯಾರೂ ಇಲ್ಲ..'-, ಇವ ಯಾವ ಸೀಮೆ ಗಂಡು ಕಾಣಮ್ಮೋ..', 'ಮುತ್ತೇ ಪ್ರಥಮ.. ಅದುವೇ ಜಗದ ನಿಯಮ..'-, 'ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ..''ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ..'- ಇಂತಹಾ ಅದೆಷ್ಟೋ ಮಧುರ ಗೀತೆಗಳು ಕೇಳುವ ಕಿವಿಗಳಿಗೆ ಇಂಪು ನೀಡಿದೆ. ಇದೆಲ್ಲದರ ಹಿನ್ನೆಲೆ ಧ್ವನಿ ವಾಣಿ ಜಯರಾಮ್ ಎನ್ನುವುದು ಗಮನಾರ್ಹ.

ಇಷ್ತಾಗಿ 1995ರಲ್ಲಿ ತೆರೆಕಂಡ 'ಬೆಳಂದಿಗಳ ಬಾಲೆ' ಸಿನಿಮಾದವರೆಗೂ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. 'ಬೆಳಂದಿಗಳ ಬಾಲೆ' ಸಿನಿಮಾದಲ್ಲಿಯೂ ಎರಡು ಗೀತೆಗಳನ್ನು ಅವರು ಹಾಡಿದ್ದರು. ಆನಂತರ ಐದು ವರ್ಷ ಸುದೀರ್ಘ ಬ್ರೇಕ್ ತೆಗೆದುಕೊಂಡರು. ನಂತರ 2000ರಲ್ಲಿ ತೆರೆಕಂಡ 'ನೀಲಾ' ಚಿತ್ರಕ್ಕಾಗಿ ಐದು ಗೀತೆಗಳನ್ನು ಹಾಡಿದರು. ವಿಶೇಷವೆಂದರೆ, ಈ ಸಿನಿಮಾಕ್ಕೂ ವಿಜಯ್ ಭಾಸ್ಕರ್ ಅವರೇ ಸಂಗೀತ ನೀಡಿದ್ದರು. ವಾಣಿ ಜಯರಾಂ ಅವರು ಹಾಡಿದ ಮೊದಲ ಕನ್ನಡ ಸಿನಿಮಾ ಹಾಗೂ ಕೊನೆಯ ಸಿನಿಮಾ ಎರಡಕ್ಕೂ ವಿಜಯ್ ಭಾಸ್ಕರ್ ಅವರೇ ಸಂಗೀತ ನಿರ್ದೇಶಕರಾಗಿದ್ದರು. ವಾಣಿ ಅವರು ಹಾಡಿದ ಹೆಚ್ಚಿನ ಸಿನಿಮಾಗಳಿಗೆ ವಿಜಯ ಭಾಸ್ಕರ್  ಸಂಗೀತವೇ ಇರುತ್ತಿತ್ತೆನ್ನುವುದು ಗಮನಾರ್ಹ.

ಗಝಲ್,  ಭಜನ್,  ಭಕ್ತಿಗೀತೆಗಳ ಗಾಯನ ಸಹ ಅವರ ಸುಮಧುರ ಕಂಠದಿಂದ ಬಂದಿದೆ.  "ಮಲ್ಲಿಗೈ ಎನ್ ಮನ್ನನ್ ಮಯಂಗುಂ" ಎಂಬ ಇವರು ಹಾಡಿದ್ದ ಹಾಡೊಂದು ಆ ಚಿತ್ರದ ಯಶಸ್ಸಿಗೆ ಬಹು ಮುಖ್ಯ ಕಾರಣವಾಗಿತ್ತು  ಇನ್ನು ಸಂಗೀತದ ಜೊತೆಗೆ ಸಾಹಿತ್ಯದಲ್ಲಿ ಸಹ ಹೆಸರಾಗಿದ್ದ ವಾಣಿ ಅವರ ಕವನ ಸಂಕಲನಗಳು ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಪ್ರಕಟವಾಗಿದೆ.  'ಪಂಡಿತ್ ಬಿರ್ಜು ಮಹಾರಾಜ್'ರೊಂದಿಗೆ ಸೇರಿ  ಗೀತ ಗೋವಿಂದವನ್ನು ಕಥಕ್‌ಗೆ ಅಳವಡಿಸಿದ್ದ ವಾಣಿ ಅವರ ಸಾಧನೆ ಅಪೂರ್ವವಾದದ್ದು.


ಇಂತಹಾ ಪ್ರತಿಭಾನ್ವಿತ ಗಾಯಕಿಯೂ ಸಹ ಚಿತ್ರೋದ್ಯಮದಲ್ಲಿ ತಾರತಮ್ಯವನ್ನು ಅನುಭವಿಸಿದ್ದರು ಎಂದರೆ ಅಚ್ಚರಿಯಾಗಬಹುದು. "ನನ್ನ ವೃತ್ತಿ ಕ್ಷೇತ್ರದಲ್ಲಿ ಪ್ರತಿಭೆ ಇರುವವರಿಗೂ 5 ವಂಚಿಸಿದರೆ ನನಗೆ ಮಾತ್ರ 500 ವಂಚಿಸುತ್ತಿದ್ದಾರೆ" ಎಂದು ಸಂದರ್ಶನವೊಂದರಲ್ಲಿ ಅವರು ತಮ್ಮ ಮನದಾಳವನ್ನು ತೆರೆದಿಟ್ಟಿದ್ದರು.

ಇನ್ನು ಅವರ ಪಾಲಿಗೆ ಸಂಗೀತ ಕೇವಲ ಹಾಡುವಿಕೆ ಮಾತ್ರವೇ ಆಗಿರಲಿಲ್ಲ. ಅವರೇ ಹೇಳಿಕೊಂಡಿದ್ದ ಹಾಗೆ - “I need songs with substance. It was music rather than name, fame and glamour that always captivated me." (ನನಗೆ ಸತ್ವವಿರುವ ಹಾಡುಗಳು ಬೇಕು. ಹೆಸರು, ಖ್ಯಾತಿ ಮತ್ತು ಗ್ಲಾಮರ್‌ಗಿಂತ ಸಂಗೀತವೇ ನನ್ನನ್ನು ಯಾವಾಗಲೂ ಆಕರ್ಷಿಸುತ್ತದೆ.) ಇನ್ನು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಶೈಲಿಯ ಛಾಪು ಮೂಡಿಸಿದ ವಿಶಿಷ್ಟ ಹೆಮ್ಮೆಯ ಗಾಯಕಿ ಅಚ್ಚುಮೆಚ್ಚಿನ ಗಾಯಕಿಯಾಗಿ ಹೊರಹೊಮ್ಮಿ ಮೆಚ್ಚುಗೆಗೆ ಪಾತ್ರರಾಗಿ , ಜನಪ್ರಿಯತೆಯ ಉತ್ತುಂಗಕ್ಕರಿದ ಗಾಯಕಿರಲ್ಲಿ ವಾಣಿ ಜಯರಾಂ ಅವರು ಕೂಡ ಅಂದರೆ ತಪ್ಪಾಗಲಿಕ್ಕಿಲ್ಲ.

ಇಂದು ಸಪ್ತ ಸ್ವರಗಳಲ್ಲಿ ಲೀನವಾದ ಮಹಾನ್ ಚೇತನ‌ಕ್ಕೆ ನಾವು ಗೌರವ ನಮನ ಸಲ್ಲಿಸೋಣ.  ಮಾತ್ರವಲ್ಲ ಅಮರ ಮಧುರ ಗೀತೆಗಳ ಮೂಲಕ ಸಂಗೀತಾಸಕ್ತರ ಮನಸ್ಸುಗಳಲ್ಲಿ ವಾಣಿ ಅವರು ರಸ್ಥಾಯಿಯಾಗಿ ನೆಲೆಸಿರುತ್ತಾರೆ ಎನ್ನುವುದನ್ನು ಸಾರೋಣ.