ಅವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರತೀಯ ಹಿನ್ನೆಲೆ ಗಾಯಕಿ, ಬೇರೆ ಬೇರೆ ಭಾಷೆಗಳಲ್ಲಿ ಸುಮಾರು ೧೦,೦೦೦ ಕ್ಕೂ ಹೆಚ್ಚು ಹಾಡುಗಳನ್ನುಹಾಡಿ ಜನಮಾನಸದಲ್ಲಿ ನೆಲೆಸಿದಾಕೆ. ಅವರು ಒಂದು ಸಾವಿರಕ್ಕೂ ಹೆಚ್ಚು ಭಾರತೀಯ ಚಲನಚಿತ್ರಗಳಿಗೆ ಪ್ಲೇಬ್ಯಾಕ್ ಸಿಂಗರ್ ಆಗಿದ್ದವರು. ಸಾವಿರಾರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂ ಅವರ ಹೆಸರಿನಲ್ಲಿದೆ. ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿಗಳಲ್ಲಿ ಭಾಗವಹಿಸಿ ಸಂಗೀತ ಸುಧೆ ಹರಿಸಿದವರು. 19 ಭಾಷೆಗಳಲ್ಲಿ ಹಾಡಿರುವ ಮೇರು ಗಾಯನ ಪ್ರತಿಭೆ. ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಒಡಿಶಾ , ಆಂಧ್ರ ಪ್ರದೇಶ , ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿಂದ ರಾಜ್ಯ ಸರ್ಕಾರದ ಪ್ರಶಸ್ತಿ, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಯಾರ್ಕ್ ನಗರದಲ್ಲಿ ನಡೆದ NAFA 2017 ಸಮಾರಂಭದಲ್ಲಿ ಅವರು ಅತ್ಯುತ್ತಮ ಮಹಿಳಾ ಗಾಯಕಿ ಎನ್ನುವ ಗೌರವ ಗಳಿಸಿಕೊಂಡವರು..
ಅವರೇ ನಮ್ಮ ನಿಮ್ಮೆಲ್ಲರ ಮೆಚ್ಚಿನ ಗಾನ
ಕೋಗಿಲೆ ವಾಣಿ ಜಯರಾಮ್. ಅವರಿಂದು ಇಹಲೋಕ ತ್ಯಜಿಸಿದ್ದಾರೆ. ಹಾಡುಹಕ್ಕಿಯು ಮೌನಕ್ಕೆ ಶರಣಾಗಿದೆ.
ಬೋಲೆ
ರೆ ಪಪಿ ಹರಾ.. ಪಪಿ.. ಹರಾ..
ಕಿತ್ ಗನ್ ಬರ್ಸೆ .. ನಿತ್ ಮನ್
ಪ್ಯಾಸ......!
1971 ರಲ್ಲಿ ಬಿಡುಗಡೆಯಾದ ", ಗುಡ್ಡಿ" ಚಿತ್ರದ ಈ ಗೀತೆ ವಾಣಿ ಜಯರಾಮ್ ಅವರ ಜೀವನದಲ್ಲಿ ಅತ್ಯಂತ ಪ್ರಮುಖವಾಗಿದೆ. ಅಷ್ಟೇ ಅಲ್ಲದೆ ಅಂದಿನ ಕಾಲಕ್ಕೆ ವರ್ಷಗಳ ಕಾಲ ಅಮೋಘ ಪ್ರಖ್ಯಾತಿ ಪಡೆದು ಆ ಕಾಲದ ಖ್ಯಾತ ಗಾಯಕಿಯರ ನಿದ್ದೆ ಕೆಡಿಸಿತ್ತಂತೆ.
ವಾಣಿಜಯರಾಂ 1945ರ ನವೆಂಬರ್ 30ರಂದು ವೆಲ್ಲೂರಿನ ಇಡಂಗು ಗ್ರಾಮದಲ್ಲಿ ಜನಿಸಿದರು. ಇಅವರ ತಾಯಿಯು ಸಹ ಖ್ಯಾ ಸಂಗೀತ ವಿದ್ವಾಂಸರ ಶಿಷ್ಯೆಯಾಗಿದ್ದು ಮನೆಯಲ್ಲಿ ಸಂಗೀತಮಯ ವಾತಾವರಣವಿದ್ದ ಕಾರಣ ಬಾಲ್ಯದಲ್ಲೇ ವಾಣಿ ಅವರಿಗೆ ಸಂಗೀತದ ಮೇಲೆ ಒಲವು ಮೂಡಿತ್ತು. ಐದನೆಯ ವಯಸ್ಸಿನಲ್ಲೇ ಕಡಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಗೀತಾಭ್ಯಾಸ ಪ್ರಾರಂಭ ಏಳನೇ ವಯಸ್ಸಿಗೆ ದೇಶಿಕರ್ ಕೃತಿಗಳನ್ನು ಹಾಡುವಷ್ಟರ ಮಟ್ಟಿಗೆ ಅಭ್ಯಾಸ ಬೆಳೆಸಿಕೊಂಡಿದ್ದ ವಾಣಿ ಹತ್ತು ವರ್ಷದವರಿದ್ದಾಗಲೇ ತಿರುವನಂತಪುರದಲ್ಲಿ ಸತತ ಮೂರು ಗಂಟೆಗಳ ಕಾಲ ಸಂಗೀತ ಕಚೇರಿ ನಡೆಸಿಕೊಟ್ಟಿದ್ದರು. ಆರ್. ಬಾಲಸುಬ್ರಮಣ್ಯಂ ಮತ್ತು ಆರ್. ಎಸ್. ಮಣಿ ಅವರಲ್ಲಿ ಸಂಗೀತಾಭ್ಯಾಸ ಮಾಡಿದ್ದ ವಾಣಿಯವರು ಮುಂದೆ ಸಂಗೀತದ ಜೊತೆಗೇ ವಿದ್ಯಾಭ್ಯಾಸದಲ್ಲಿಯೂ ಮುಂಚೂಣಿಯಲ್ಲಿ ಇದ್ದರು. ವಾಣಿಯವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಚೇಂಬರ್ ಆಫ್ ಕಾಮರ್ಸ್ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಯರಾಂ ಅವರೊಡನೆ ವಿವಾಹವಾದ ನಂತರ ಪತಿಯ ಪ್ರೋತ್ಸಾಹದೊಂದಿಗೆ ಪಟಿಯಾಲ ಘರಾಣಾದ ಅಬ್ದುಲ್ ರೆಹಮಾನ್ ಬಳಿ ಹಿಂದೂಸ್ಥಾನಿ ಸಂಗೀತ ಕಲಿತರು. ಆರಂಭದಲ್ಲಿ ಎಸ್.ಬಿ.ಐ. ಉದ್ಯೋಗಿ ಆಗಿದ್ದ ಇವರು, ಹೆಚ್ಚು ಹೆಚ್ಚು ಅವಕಾಶಗಳು ಬಂದಂತೆ , ಉದ್ಯೋಗ ತೊರೆದು ಸಂಗೀತದಲ್ಲೇ ತಮ್ಮನ್ನು ತೊಡಗಿಸಿ ಕೊಂಡರು.. ಮರಾಠಿ ಚಿತ್ರ ನಿರ್ದೇಶಕ ವಸಂತ ದೇಸಾಯಿಯವರ ಮರಾಠಿ ಆಲ್ಬಂನ 'ಋಣಾನುಬಂಧಾಚ್ಯ' ಗೀತೆಗೆ ಕುಮಾರಗಂಧರ್ವರೊಂದಿಗೆ ಸಹಗಾಯಕಿಯಾಗಿ ಹಾಡಿದ್ದ ವಾಣಿ ಜಯರಾಂ ಅವರ ಗಾಯನ ಅವರನ್ನು ಹಿಂದಿ ಚಿತ್ರರಂಗಕ್ಕೆ ಕರೆತಂದಿತು. ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಗುಡ್ಡಿ’ ಚಿತ್ರದ “ಬೋಲ್ ರೆ ಪಪ್ಪಿ ಹರಾ” ಹಿಂದಿ ಚಿತ್ರರಂಗ ಮಾತ್ರವಲ್ಲ ಭಾರತದಾದ್ಯಂತ ವಾಣಿ ಜಯರಾಮ್ ಅವರ ಹೆಸರನ್ನು ಪ್ರಖ್ಯಾತವಾಗಿಸಿತು.
1973ರಿಂದ ಕನ್ನಡದಲ್ಲಿ ಹಾಡಲು ತೊಡಗಿದ ವಾಣಿ ಜಯರಾಮ್ 1973ರಲ್ಲಿ
ತೆರೆಕಂಡ 'ಕೆಸರಿನ ಕಮಲ' ಚಿತ್ರಕ್ಕಾಗಿ ಎರಡು ಹಾಡುಗಳನ್ನು ಹಾಡಿದ್ದರು. ಅವರು ಕನ್ನಡದಲ್ಲೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು
ಸುಮಧುರ ಹಾಡುಗಳನ್ನು ಹಾಡಿದ್ದಾರೆ. ಭಾರತ ಭೂಷಿರ ಮಂದಿರ ಸುಂದರಿ, ದಾರಿ ಕಾಣದಾಗಿದೆ ರಾಘವೇಂದ್ರನೆ, ಪ್ರಿಯತಮಾ ಓ
ಪ್ರಿಯತಮ.... , ಹೋದೆಯಾ ದೂರ ಓ.. ಜೊತೆಗಾರ ಸೇರಲು ಬಂದಾಗ.
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ, ಸವಿನೆನಪುಗಳು ಬೇಕು ,ಸವಿಯಲಿ ಬದುಕು, ಎಂದೆಂದೂ ನಿನ್ನನ್ನು ಮರೆತು ಬದುಕಿರಲಾರೆ, ಒಲುಮೆ ಸಿರಿಯ ಕಂಡು ,ಬಯಕೆ ಸಿಹಿಯ ಉಂಡು, ಏನೇನೋ ಆಸೆ ನೀ ತಂದ ಭಾಷೆ ಎಂದು ನಿನ್ನ ತನು ಮನ ಕೂಗುತ್ತಿದೆ ಬಾ ಎಂದು ನನ್ನಾ,
ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೇ
ನೋಡೆನ್ನುತಾ, 'ಸುತ್ತ ಮುತ್ತ ಯಾರೂ ಇಲ್ಲ..'-, ಇವ ಯಾವ ಸೀಮೆ ಗಂಡು ಕಾಣಮ್ಮೋ..', 'ಮುತ್ತೇ ಪ್ರಥಮ.. ಅದುವೇ ಜಗದ ನಿಯಮ..'-, 'ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ..''ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ..'- ಇಂತಹಾ ಅದೆಷ್ಟೋ ಮಧುರ ಗೀತೆಗಳು ಕೇಳುವ ಕಿವಿಗಳಿಗೆ ಇಂಪು ನೀಡಿದೆ. ಇದೆಲ್ಲದರ
ಹಿನ್ನೆಲೆ ಧ್ವನಿ ವಾಣಿ ಜಯರಾಮ್ ಎನ್ನುವುದು ಗಮನಾರ್ಹ.
ಇಷ್ತಾಗಿ 1995ರಲ್ಲಿ ತೆರೆಕಂಡ 'ಬೆಳಂದಿಗಳ ಬಾಲೆ' ಸಿನಿಮಾದವರೆಗೂ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. 'ಬೆಳಂದಿಗಳ ಬಾಲೆ' ಸಿನಿಮಾದಲ್ಲಿಯೂ ಎರಡು ಗೀತೆಗಳನ್ನು ಅವರು ಹಾಡಿದ್ದರು. ಆನಂತರ ಐದು ವರ್ಷ ಸುದೀರ್ಘ ಬ್ರೇಕ್ ತೆಗೆದುಕೊಂಡರು. ನಂತರ 2000ರಲ್ಲಿ ತೆರೆಕಂಡ 'ನೀಲಾ' ಚಿತ್ರಕ್ಕಾಗಿ ಐದು ಗೀತೆಗಳನ್ನು ಹಾಡಿದರು. ವಿಶೇಷವೆಂದರೆ, ಈ ಸಿನಿಮಾಕ್ಕೂ ವಿಜಯ್ ಭಾಸ್ಕರ್ ಅವರೇ ಸಂಗೀತ ನೀಡಿದ್ದರು. ವಾಣಿ ಜಯರಾಂ ಅವರು ಹಾಡಿದ ಮೊದಲ ಕನ್ನಡ ಸಿನಿಮಾ ಹಾಗೂ ಕೊನೆಯ ಸಿನಿಮಾ ಎರಡಕ್ಕೂ ವಿಜಯ್ ಭಾಸ್ಕರ್ ಅವರೇ ಸಂಗೀತ ನಿರ್ದೇಶಕರಾಗಿದ್ದರು. ವಾಣಿ ಅವರು ಹಾಡಿದ ಹೆಚ್ಚಿನ ಸಿನಿಮಾಗಳಿಗೆ ವಿಜಯ ಭಾಸ್ಕರ್ ಸಂಗೀತವೇ ಇರುತ್ತಿತ್ತೆನ್ನುವುದು ಗಮನಾರ್ಹ.
ಗಝಲ್, ಭಜನ್, ಭಕ್ತಿಗೀತೆಗಳ ಗಾಯನ ಸಹ ಅವರ ಸುಮಧುರ ಕಂಠದಿಂದ ಬಂದಿದೆ. "ಮಲ್ಲಿಗೈ ಎನ್ ಮನ್ನನ್ ಮಯಂಗುಂ" ಎಂಬ ಇವರು ಹಾಡಿದ್ದ ಹಾಡೊಂದು ಆ ಚಿತ್ರದ ಯಶಸ್ಸಿಗೆ ಬಹು ಮುಖ್ಯ ಕಾರಣವಾಗಿತ್ತು ಇನ್ನು ಸಂಗೀತದ ಜೊತೆಗೆ ಸಾಹಿತ್ಯದಲ್ಲಿ ಸಹ ಹೆಸರಾಗಿದ್ದ ವಾಣಿ ಅವರ ಕವನ ಸಂಕಲನಗಳು ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಪ್ರಕಟವಾಗಿದೆ. 'ಪಂಡಿತ್ ಬಿರ್ಜು ಮಹಾರಾಜ್'ರೊಂದಿಗೆ ಸೇರಿ ಗೀತ ಗೋವಿಂದವನ್ನು ಕಥಕ್‌ಗೆ ಅಳವಡಿಸಿದ್ದ ವಾಣಿ ಅವರ ಸಾಧನೆ ಅಪೂರ್ವವಾದದ್ದು.
ಇಂದು ಸಪ್ತ ಸ್ವರಗಳಲ್ಲಿ ಲೀನವಾದ ಮಹಾನ್
ಚೇತನಕ್ಕೆ ನಾವು ಗೌರವ ನಮನ ಸಲ್ಲಿಸೋಣ.
ಮಾತ್ರವಲ್ಲ ಅಮರ ಮಧುರ ಗೀತೆಗಳ ಮೂಲಕ ಸಂಗೀತಾಸಕ್ತರ ಮನಸ್ಸುಗಳಲ್ಲಿ ವಾಣಿ ಅವರು ರಸ್ಥಾಯಿಯಾಗಿ
ನೆಲೆಸಿರುತ್ತಾರೆ ಎನ್ನುವುದನ್ನು ಸಾರೋಣ.
No comments:
Post a Comment