Thursday, January 04, 2024

ನಮ್ಮಲ್ಲಿನ ಸ್ಥಳ ಪುರಾಣಗಳು(Myths) -119

 ಕೊಟ್ಟೂರು(Kotturu)



ಕೊಟ್ಟೂರು ಬಳ್ಳಾರಿ ಜಿಲ್ಲೆಯ ಕುಡ್ಲಿಗಿ ತಾಲೂಕಿನಲ್ಲಿದೆ. ನಿಜ ಹೇಳಬೇಕೆಂದರೆ ಈ ಸ್ಥಳದ ಹೆಸರೆ ಕೊಟ್ಟೂರೇಶ್ವರ ಸ್ವಾಮಿಯಿಂದ ಬಂದುದಾಗಿದೆ. ಕೊಟ್ಟೂರು ಒಂದು ತಾಲೂಕು ಪ್ರದೇಶವಾಗಿದ್ದು ಮಂಡಕ್ಕಿ ಮೆಣಸಿನಕಾಯಿಗೆ ಹೆಚ್ಚು ಜನಪ್ರೀಯವಾಗಿದೆ. ಬಳ್ಳಾರಿ ಹಾಗೂ ಕುಡ್ಲಿಗಿಯಿಂದ ಕೊಟ್ಟೂರಿಗೆ ತಲುಪಲು ಬಸ್ಸುಗಳು ದೊರೆಯುತ್ತವೆ. ಇನ್ನೂ ಕೊಟ್ಟೂರಿನಲ್ಲಿರುವ ಕೊಟ್ಟೂರೇಶ್ವರ ದೇವಾಲಯವು ನಾಲ್ಕು ಭಾಗಗಳಲ್ಲಿ ವಿಂಗಡನೆಗೊಂದಿದೆ. ಅವುಗಳೆಂದರೆ ಮುರ್ಕಲಮಠ, ತೋಟಲಮಠ, ದರ್ಬಾರ್ ಮಠ ಅಥವಾ ದೊಡ್ಡ ಮಠ ಹಾಗೂ ಗಚ್ಚಿನಮಠ. ಕೊಟ್ಟೂರಿನಲ್ಲಿ ಮೂರು ಕಲ್ಲುಮಠ, ಹಿರೇಮಠ ದರ್ಬಾರ್ ಮಠ, ತೊಟ್ಟಿಲು ಮಠ, ಗಚ್ಚಿನ ಮಠ ಹಾಗೂ ಮರಿ ಮಠ ಎಂಬ ಬಸವೇಶ್ವರರ ಐದು ಮಠಗಳಿವೆ. ಮೂರುಕಲ್ಲು ಮಠದಲ್ಲಿನ ಮೂರು ಶಿಲಾಗೋಪುರಗಳು ಚಾಲುಕ್ಯ ಮತ್ತು ಹೊಯ್ಸಳರ ಕಾಲದ ಜೈನ್ಯರ ಚೈತ್ಯಾಲಯಗಳ ಮಾದರಿಯಲ್ಲಿವೆ. ತೊಟ್ಟಿಲುಮಠದಲ್ಲಿ ಇರುವ ತೊಟ್ಟಿಲನ್ನು ತೂಗಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ.


 ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀಗುರು ಕೊಟ್ಟೂರೇಶ್ವರನಿಗೆ ಕೊಟ್ಟೂರು ಬಸವೇಶ್ವರ ಎಂತಲು ಕರೆಯುತ್ತಾರೆ. ಪ್ರತಿ ವಷ೯ ಫೆಬ್ರುವರಿ ಅಥವಾ ಮಾಚ್೯ ತಿಂಗಳಲ್ಲಿ ರಥೋತ್ಸವ ಜರುಗುವುದು ಡಿಸೆ೦ಬರ್ ತಿ೦ಗಳಲ್ಲಿ ಲಕ್ಷ ದೀಪೊತ್ಸವ ಜರುಗುವುದು. ಈ ಸ್ವಾಮಿಯ ಹಿರೇಮಠಕ್ಕೆ ಅನೇಕ ಭಕ್ತರಿದ್ದಾರೆ. ಈ ದೇವರ ಗುಡಿಯು ಮೂರು ಸ್ಥಳಗಳಲ್ಲಿ ಇದೆ. ಒಂದು ಹಿರೇಮಠ ಅಥವಾ ದೊಡ್ಡಮಠ, ತೊಟ್ಟಿಲು ಮಠ ಮತ್ತು ಗಚ್ಚಿನ ಮಠ.ಗಚ್ಚಿನಮಠದಲ್ಲಿ ಅಕ್ಬರ್ ಚಕ್ರವತಿ೯ ಕೊಟ್ಟಿದ್ದಾನೆ ಎಂಬ ಪ್ರತೀತಿಯಿರುವ ಒಂದು ಮಂಚವೂ ಕೂಡ ಇದೆ.ಗಚ್ಚಿನ ಮಠದಲ್ಲಿ ಶ್ರೀ ಸ್ವಾಮಿಯ ಜೀವಂತ ಸಮಾಧಿಯೂ ಇದೆ.


ಜೀವಿತಾವಧಿಯಲ್ಲಿ ಮರುಳನಂತೆ ಇದ್ದುಕೊಂಡೇ ಅಸಂಖ್ಯಾತ ಭಕ್ತರ ಮನಗೆದ್ದ ಗುರು ಬಸವೇಶ್ವರರು ಲಕ್ಷಾಂತರ ಭಕ್ತರ ಆರಾಧ್ಯ ದೈವ. ಕಾಯಕ ಯೋಗಿ, ಶರಣ, ಮಾನವತವಾದಿ. ಗುರು ಬಸವೇಶ್ವರ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಅರಸೀಕೆರೆ ಕೋಲಶಾಂತಯ್ಯ, ಹರಪನಹಳ್ಳಿ ಕೆಂಪಯ್ಯ, ಕೂಲಹಳ್ಳಿ ಮದ್ದಾನಸ್ವಾಮಿ ಅವರನ್ನು ಪಂಚಗಣಾಧೀಶ್ವರೆಂದು ಕರೆಯಲಾಗುತ್ತದೆ. ವೀರಶೈವ ಪರಂಪರೆಯ ನೂತನ ಗಣಗಳ ಪಟ್ಟಿಯಲ್ಲಿ ಕೊಟ್ಟೂರು ಗುರುಬಸವೇಶ್ವರರು ಪ್ರಮುಖರು. ಗುರುಬಸವೇಶ್ವರರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನವರು. ಅಲ್ಲಿಂದ ಅವರು ಕರ್ನಾಟಕದ ಎಡೆಯೂರಿಗೆ ಬಂದು ಅಲ್ಲಿ ಸಿದ್ಧಲಿಂಗ ಯತಿಗಳ ಶಿಷ್ಯತ್ವ ಸ್ವೀಕರಿಸಿ ನಂತರ ಚಾಮರಾಜನಗರದಲ್ಲಿ ಧರ್ಮಕಾರ್ಯದಲ್ಲಿ ತೊಡಗಿದರು. ನಂತರ ಹಂಪಿಗೆ ಬಂದು ಅಲ್ಲಿಂದ ಕೊಟ್ಟೂರಿಗೆ ಬಂದರು ಎಂಬ ಮಾತು ಭಕ್ತರ ವಲಯದಲ್ಲಿ ಪ್ರಚಲಿತವಿದೆ. ಅವರ ಕಾಲ ಕ್ರಿ.ಶ.1580ರ ಅಸುಪಾಸು. ಬಸವಲಿಂಗ ಕವಿ ಬರೆದ ಕೊಟ್ಟೂರು ಬಸವೇಶ್ವರ ಚರಿತ್ರೆ (1678) ಕೃತಿಯು ಕೊಟ್ಟೂರಿನ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ ಬಾಲಬಸವರು ಹಾಡುವ ಗೋಣಿ ಬಸವನ ಕಾವ್ಯಗಳು ಗುರುಬಸವೇಶ್ವರರ ಬಗ್ಗೆ ವಿಫುಲ ಮಾಹಿತಿ ನೀಡುತ್ತವೆ. ಒಂದು ಕಾಲದಲ್ಲಿ ಜೈನರ ಕೇಂದ್ರ ಸ್ಥಳವಾದ ಕೊಟ್ಟೂರು ಗುರುಬಸವೇಶ್ವರರಿಂದಾಗಿ ಶೈವ ಪಂಥದ ಕೇಂದ್ರವಾಯಿತು. ಗುರುಬಸವೇಶ್ವರರನ್ನು ಅವಧೂತರೆಂದೂ, ಇನ್ನು ಕೆಲವರು ಹುಚ್ಚಕೊಟ್ರಯ್ಯ ಎಂದೂ  ಸಂಬೋಧಿಸುತ್ತಿದ್ದರು


ವೀರಶೈವ ಧರ್ಮದಾಚರಣೆಯನ್ನು ಬಸವಣ್ಣನವರು 12 ನೇಯ ಶತಮಾನದಲ್ಲೆ ಆಚರಣೆಗೆ ತಂದಿದ್ದರು. ತದನಂತರ ಈ ಶರಣ ಪರಮ್ಪರೆಯನ್ನು ಉಳಿಸಿ ಬೆಳೆಸಿರುವವರಲ್ಲಿ ಪ್ರಮುಖರಾದವರು ಗುರು ಕೊಟ್ಟೂರೇಶ್ವರ ಸ್ವಾಮಿಗಳು. ಇವರು ನೆಲೆಸಿದ ಸ್ಥಳವೆ ಇಂದು ಕೊಟ್ಟೂರು ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ ಕೊಟ್ಟೂರಿಗೆ ಮೊದಲಿದ್ದ ಹೆಸರು ಶಿಖಾಪುರ. ಶ್ರೀ ಗುರು ಕೊಟ್ಟೂರೇಶ್ವರರು ಆಗಮಿಸಿದ ನಂತರ ಪವಾಡಗಳನ್ನು ಮಾಡುತ್ತಾ, ಇಲ್ಲದವರಿಗೆ ಪವಾಡ ಮಾಡಿ ಕೊಡುತ್ತಾ , ಕೊಡುವ ಊರು ಕೊಟ್ಟೂರು ಎಂದಾಯ್ತು ನೋಡ ಎನ್ನುತ್ತಾರೆ ಹಿರಿಯರು.


ಕೊಟ್ಟೂರಶ್ವರ ಸ್ವಾಮಿ ನೆಲೆ ನಿಲ್ಲುವ ಮುಂಚೆ ಈ ಕ್ಷೇತ್ರದಲ್ಲಿ ಶ್ರೀ ವೀರಭದ್ರಶ್ವೇರ ಸ್ವಾಮಿ ನೆಲೆಯ ಕ್ಷೇತ್ರವಾಗಿತ್ತು, ಒಮ್ಮೆ ಕೊಟ್ಟೂರೇಶ್ವರ ಸ್ವಾಮಿಯು ಊರುರು ಸುತ್ತುತ್ತಾ ಶಿಖಾಪುರಕ್ಕೆ ಬಂದಾಗ ರಾತ್ರಿ ಆಯಿತು ಆ ಸಮಯದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬಳಿ ಬಂದು ಕೊಟ್ಟುರೇಶ್ವರರು ತಮಗೆ ತಂಗಲು ಸ್ಥಳವನ್ನು ನೀಡುವಂತೆ ಕೋರಲು ಒಪ್ಪಿದ ವೀರಭದ್ರೇಶ್ವರರರು ತಮ್ಮ ಆಸ್ತಾನದಲ್ಲಿ ಮಲಗಲು ಸ್ಥಳವನ್ನು ನೀಡಿದರು ಬೆಳಗಾಗುವ ಹೊತ್ತಿಗೆ ಸಂಪೂರ್ಣಾವಾಗಿ ಇಡಿ ಆಸ್ತಾನವನ್ನು ಆವರಿಸಿದ ಕೊಟ್ಟೂರೇಶ್ವರರು ಶ್ರೀ ವೀರಭದ್ರನಿಗೆ ಸ್ಥಳವೇ ಇಲ್ಲದಂತೆ ಮಾಡಿದರು ಈ ಕುರಿತು ವೀರಭದ್ರನು ಕೊಟ್ಟೂರೇಶ್ವರರನ್ನಲ್ಲಿ ಕೇಳಲಾಗಿ ನೀವು ನಿಮ್ಮ ಸ್ಥಳವನ್ನು ನನಗೆ ನೀಡಿ ನೀವು ಕೊಡದಗುಡ್ಡಕ್ಕೆ ಹೋಗಿ ನೆಲೆಸಿರಿ ಎಂದು ಹೇಳಿದರು ಅದರಂತೆ ವೀರಭದ್ರ ದೇವರು ಇನ್ನು ಮುಂದೆ ಆ ನಿಮ್ಮ ಸ್ಥಳವನ್ನು ನೀವು ಯಾರಿಗೂ ಕೊಡಬಾರದು ಆ ಕ್ಷೇತ್ರವು "ಕೊಡದಗುಡ್ಡ" ಎಂದು ಪ್ರಖ್ಯಾತವಾಗಲಿ ಅಂತಯೇ ನೀವು ನನಗೆ ಕೊಟ್ಟ ಈ ಶಿಖಾಪುರ ಇನ್ನು ಮುಂದೆ "ಕೊಟ್ಟೂರು" ಎಂದು ಪ್ರಖ್ಯಾತವಾಗಲಿ ಎಂದು ಹರಸಿದರು.


ಗುರು ಕೊಟ್ಟೂರೇಶ್ವರರು ಕಾಷ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಯಾತ್ರೆ ಮಾಡಿ ಕೊಟ್ಟೂರಿನಲ್ಲಿ ನೆಲೆಸಿದರು. ಒಂದೊಮ್ಮೆ ದೆಹಲಿಯಲ್ಲಿ ಅಕ್ಬರನ ಆಡಳಿತವಿದ್ದಾಗ ಗುರುಗಳು ಅಕ್ಬರನ ರಜಪೂತ ಪತ್ನಿಯ ಕೊಣೆಯಲ್ಲಿ ಪ್ರಕಟರಾದರು ಹಾಗೂ ಆಕೆಗೆ ಇವರು ಸಂತನ ರೂಪದಲ್ಲಿ ದರ್ಶನ ನೀಡಿದರು. ಹೀಗೆ ತಕ್ಷಣ ತನ್ನ ಪತ್ನಿಯ ಕೋಣೆಯಲ್ಲಿ ಒಬ್ಬ ವ್ಯಕ್ತಿಯ ಪ್ರವೇಶವಾದುದನ್ನು ಭಟರಿಂದ ತಿಳಿದ ಅಕ್ಬರ ಸಿಟ್ಟಿನಿಂದ ಬಂದು ನೋಡಿದಾಗ ಒಬ್ಬ ಮಧ್ಯ ವಯಸ್ಕನಂತೆ ಗುರುಗಳು ಆತನಿಗೆ ಕಂಡರು. ಕೋಪ ತಡೆಯಲಾಗದೆ ತನ್ನ ಖಡ್ಗವನ್ನು ತೆಗೆದು ಅವನ ಮೇಲ ಬೀಸಿದಾಗ ಅದು ಹಾರವಾಗಿ ಗುರುಗಳನ್ನು ಶೃಂಗರಿಸಿತು. ಇದರಿಂದ ಅಕ್ಬರನಿಗೆ ಆ ಮಹಾನ್ ಚೇತನದ ಅರಿವುಂಟಾಗಿ ತನ್ನ ಆಭಾರವನ್ನು ಪ್ರಕಟಿಸುತ್ತ ಅವರಿಗೆ ಒಂದು ಮಂಚ ಹಾಗೂ ಖಡ್ಗವನ್ನು ಕಾಣಿಕೆಯಾಗಿ ನೀಡಿದನು. ಇಂದಿಗೂ ಆ ಮಂಚವನ್ನು ಕೊಟ್ಟೂರಿನ ಗಚ್ಚಿನ ಮಠದಲ್ಲಿ ಕಾಣಬಹುದು. ಇನ್ನು ಹರಪನಳ್ಳಿ ಪಾಳೇಗಾರರು ತಮ್ಮ ಕಷ್ಟ ಕಾಲದಲ್ಲಿ ಅವರ ದರ್ಶನಕ್ಕೆ ಬರುತ್ತಿದ್ದರಂತೆ



No comments:

Post a Comment