Wednesday, July 10, 2024

ನಮ್ಮಲ್ಲಿನ ಸ್ಥಳ ಪುರಾಣಗಳು(Myths) - 121

 ಕೊಲದೇವಿ (Koladevi)



ಕೋಲಾರ ಜಿಲ್ಲೆಯ ಮುಳುಬಾಗಲು ತಾಲೂಕಿನಲ್ಲಿ ಭಾರತದಲ್ಲೇ ಏಕೈಕ ಎನ್ನಬಹುದಾದ ಗರ್ಡನ ದೇವಾಲಯವಿದೆ. ಮುಳುಬಾಗಿಲಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕೊಲದೇವಿ ಎಂಬ ಗ್ರಾಮದಲ್ಲಿ ಈ ದೇವಾಲಯವಿದ್ದು ಜಿಲ್ಲಾ ಕೇಂದ್ರ ಕೋಲಾರ ಹಾಗೂ ಮುಳಬಾಗಲುವಿನಿಂದ ಇಲ್ಲಿಗೆ ತೆರಳಬಹುದಾಗಿದೆ. ರಾಮಾಯಣ ಮತ್ತು ಮಹಾಭಾರತದ ಹಿನ್ನೆಲೆ ಹೊಂದಿರುವ ಸ್ಥಳ ಇದಾಗಿದ್ದು, ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗಿದೆ. ಇಲ್ಲಿ ಸೇವೆ ಸಲ್ಲಿಸಿದರೆ 8 ರೀತಿಯ ಸರ್ಪ ದೋಷಗಳು ನಿವಾರಣೆ ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ವಾಮಾಚಾರ, ಮಾಟಗಳು ಇಲ್ಲಿ ನಿವಾರಣೆಯಾಗುತ್ತದೆ ಎಂದು ಭಕ್ತರು ನಂಬಿಕೆ ಇಟ್ಟಿದ್ದಾರೆ. ಪ್ರತಿ ಶನಿವಾರ, ಭಾನುವಾರ ದೇವಾಲಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.

***

ತ್ರಿಮೂರ್ತಿಗಳಲ್ಲಿ (ಬ್ರಹ್ಮ, ವಿಷ್ಣು, ಮತ್ತು ಮಹೇಶ್ವರ) ಒಬ್ಬ ದೇವರಾದ ವಿಷ್ಣುವಿನ ಸವಾರಿ ಅಥವಾ ವಾಹನವೆಂದರೆ ಗರುಡ. ವಿಷ್ಣು ವರ ಕೊಟ್ಟು ಭೂಲೋಕಕ್ಕೆ ಹೋಗು ಎಂದಾಗ ಗರುಡ ಇಲ್ಲಿ ಬಂದು ನೆಲೆಸಿದ್ದಾನೆ. ಇಂತಹಾ ಗರುಡದೇವರನ್ನು ಮಧ್ಯಮ ಪಾಂಡವ ಅರ್ಜುನ ಕೊಲದೇವಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದಾನೆ. ಇದರ ಹಿನ್ನೆಲೆ ಈ ರೀತಿಯಲ್ಲಿದೆ-

ದ್ವಾಪರ ಯುಗದ ಸಮಯದಲ್ಲಿ, ಅರ್ಜುನನು ಬೇಟೆಗಾಗಿ ಕಾಡಿಗೆ ಹೋಗುತ್ತಿದ್ದ ಸಮಯದಲ್ಲಿ, ಉತ್ಸುಕನಾದ ಅರ್ಜುನನು ತನ್ನ ಬಾಣಗಳ ಮೂಲಕ ಕಾಡಿನಲ್ಲಿ ಬೆಂಕಿಯನ್ನು ಹತ್ತಿಸಿದ್ದರ ಪರಿಣಾಮವಾಗಿ ಹಲವಾರು ಹಾವುಗಳು ಸಾಯುತ್ತವೆ. ಅರ್ಜುನನು ಈ ಸತ್ತ ಹಾವುಗಳಿಂದ ಶಾಪವನ್ನು ಪಡೆಯುತ್ತಾನೆ (ಅವನು ಸರ್ಪ ದೋಷವನ್ನು ಪಡೆಯುತ್ತಾನೆ). ಈ ಶಾಪದಿಂದ ಮುಕ್ತಿ ಪಡೆಯಲು, ಋಷಿ ಮುನಿಗಳು ಗರುಡ ದೇವರನ್ನು ಪ್ರಾರ್ಥಿಸಲು ಅರ್ಜುನನಿಗೆ ಸಲಹೆ ನೀಡುತ್ತಾರೆ. ಹಾಗಾಗಿ ಅರ್ಜುನನೇ ಕೊಲದೇವಿ ಗರುಡ ದೇವಾಲಯದಲ್ಲಿ ಗರುಡ ದೇವರನ್ನು ಪ್ರತಿಷ್ಠಾಪಿಸಿದನು.

***

ರಾವಣನು ಸೀತೆಯನ್ನು ಅಪಹರಿಸಿಕೊಂಡು ಪುಷ್ಪಕವಿಮಾನದಲ್ಲಿ ಕರೆದೊಯ್ಯುವ ಸಮಯದಲ್ಲಿ ಜಟಾಯು (ಗರುಡ) ಸೀತೆಯನ್ನು ರಕ್ಷಿಸುವ ಸಲುವಾಗಿ ಬಂದನೆನ್ನಲಾಗುತ್ತದೆ. ಆದರೆ ದುರಾದೃಷ್ಟವಶಾತ್ ಜಟಾಯು ರಾವಣನಿಂದ ಕೊಲ್ಲಲ್ಪಟ್ಟು ಕೆಳಗೆ ಬೀಳುತ್ತಾನೆ ಈ ಕೆಳಗೆ ಬಿದ್ದ ಸ್ಥಳವೇ ಈ 'ಕೋಲದೇವ್' ಎಂದು ಹೇಳಲಾಗುತ್ತದೆ ಕನ್ನಡದಲ್ಲಿ 'ಕೊಲ್ಲು' ಎಂದರೆ ಸಾಯಿಸುವುದು ಎಂದು ಅರ್ಥೈಸುತ್ತದೆ. ಅದೇ ಹೆಸರು ಈ ಸ್ಥಳಕ್ಕೆ ಬಂದಿದೆ ಎನ್ನಲಾಗುತ್ತದೆ. ವಿಷ್ಣು ದೇವರು ಜಟಾಯುವಿನ ಈ ಪ್ರಯತ್ನದಿಂದ ಸಂತುಷ್ಟರಾಗಿ ಆಶೀರ್ವದಿಸಿದುದರಿಂದ ಗರುಡ ದೇವರ ಸ್ಥಾನವನ್ನು ಪಡೆದುಕೊಂಡನು. ಇಂದು ಗರುಡ ದೇವರಾಗಿ ನಂಬಿಕೊಂಡು ಬರುವ ಭಕ್ತಾದಿಗಳ ಸಕಲ ಕಷ್ಟಗಳನ್ನು ದೂರ ಮಾಡುವ ದೈವವಾಗಿ ಪ್ರಖ್ಯಾತವಾಗಿದೆ.



No comments:

Post a Comment