Sunday, December 22, 2024

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಭಾಷಣ

 ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ತನ್ನ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸುತ್ತಿರುವುದು ಅತ್ಯಂತ ಸಂತೋಷದ ಸಂಭ್ರಮದ ಸಂಗತಿಯಾಗಿದೆ. ರಾಜಕೀಯವಾಗಿ ಸದಾ ಜಾಗೃತವಾಗಿರುವ, ಸಾಮಾಜಿಕವಾಗಿ ಸೌಹಾರ್ದತೆಯನ್ನು ಒಳಗೊಂಡಿರುವ, ಆರ್ಥಿಕವಾಗಿ ಸಮೃದ್ಧವಾದ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಮತ್ತು ಸಾಹಿತ್ಯಕವಾಗಿಯೂ ಹೆಸರು ಮಾಡಿರುವ ಜಿಲ್ಲೆ ಮಂಡ್ಯ. ಇದು ಸಕ್ಕರೆ ನಾಡು, ಇದು ಹಸಿರಿನ ಬೀಡು. ಕರ್ನಾಟಕ ರಾಜ್ಯದ ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಗಮನಾರ್ಹ ಕಾಣಿಕೆ ನೀಡಿರುವ ಮಂಡ್ಯವು ಅಪ್ಪಟ ಕನ್ನಡ ಜಿಲ್ಲೆ. ಇಲ್ಲಿ ಅನ್ಯ ಭಾಷಿಕರ ಪ್ರಮಾಣ ಕಡಿಮೆ. ಮಂಡ್ಯ ಜಿಲ್ಲೆಯು ರೈತಾಪಿಗಳ ನಾಡು. ಕಬ್ಬು ಮತ್ತು ಬತ್ತ ಬೆಳೆಯುತ್ತಿರುವ ನೇಗಿಲಯೋಗಿಗಳ ಬೀಡು.


ಇಂತಹ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನನಗೆ ನೀಡಿರುವುದು ನನ್ನ ಜೀವನದ ಮಹತ್ವದ ಗೌರವ ಎಂದು ನಾನು ಭಾವಿಸಿದ್ದೇನೆ. ನಾನು ಇದಕ್ಕೆ ಎಷ್ಟರಮಟ್ಟಿಗೆ ಅರ್ಹ ಎನ್ನುವುದು ಬೇರೆ. ಈ ಸಮ್ಮೇಳನಕ್ಕೆ ನೆರವು ನೀಡಿರುವ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳಾದ ಶ್ರೀ ಶಿವರಾಜ್ ತಂಗಡಗಿ, ಅವರಿಗೆ ಮತ್ತು ಈ ಸಮ್ಮೇಳನವನ್ನು ಸಂಘಟಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮತ್ತು ಪರಿಷತ್ತಿನ ಕಾರ್ಯಕಾರಿ ಮಂಡಳಿ ಕೈಗೊಂಡಿರುವ ನಿರ್ಧಾರಕ್ಕೆ ನಾನು ನನ್ನ ಕೃತಜ್ಞತೆಗಳನ್ನು ಅರ್ಪಿಸಬಯಸುತ್ತೇನೆ. ಈ ಸಮ್ಮೇಳನದ ಬಗ್ಗೆ ನನಗೆ ಒಂದು ವಿಶೇಷ ಅಭಿಮಾನದ ಸಂಗತಿಯೆಂದರೆ, ೧೯೯೪ ರಲ್ಲಿ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಚದುರಂಗ ಎಂದೇ ಹೆಸರಾಗಿದ್ದ ಶ್ರೀ ಸುಬ್ರಹ್ಮಣ್ಯರಾಜೇ ಅರಸ್ ಅವರ ಸರ್ವಾಧ್ಯಕ್ಷತೆಯಲ್ಲಿ ೬೩ನೆಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸುವ ಅವಕಾಶ ನನಗೆ ದೊರಕಿದ್ದುದು. ಅದಾದ ೩೦ ವರ್ಷಗಳ ನಂತರ ನನ್ನ ಸರ್ವಾಧ್ಯಕ್ಷತೆಯಲ್ಲೇ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಒಂದು ಯೋಗಾಯೋಗ ಎಂದೇ ನಾನು ಭಾವಿಸಿದ್ದೇನೆ. ಮಂಡ್ಯದ ಇತಿಹಾಸದಲ್ಲಿ ಇದು ಮೂರನೆಯ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ.

ನನ್ನ ಜೀವನದುದ್ದಕ್ಕೂ ಒದಗಿ ಬಂದಿರುವ ಬಹುತೇಕ ಸಂದರ್ಭ ಅಥವಾ ಅವಕಾಶಗಳೂ ಅನಿರೀಕ್ಷಿತವಾದವುಗಳೇ ಆಗಿವೆ. ಅಂತಹ ಸಂದರ್ಭಗಳಲ್ಲೆಲ್ಲ ನಾನು ಹಿಂಜರಿಯದೆ ಒಪ್ಪಿಕೊಂಡು ನನ್ನ ಭಾಗದ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ ಸಮಾಧಾನ ನನಗಿದ್ದರೂ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯಂತಹ ಉನ್ನತ ಸ್ಥಾನಕ್ಕೆ ತಕ್ಕ ಅರ್ಹತೆ ನನಗಿದೆ ಎಂದು ನಾನು ಭಾವಿಸಿಲ್ಲ.

ನನ್ನ ಆಯ್ಕೆಯ ಬಗೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ ಅವರು ಬಂದು ನನಗೆ ತಿಳಿಸಿದಾಗ, ಆತ್ಮಜ್ಞಾನಿ ಅಲ್ಲಮಪ್ರಭು 'ಕಾಣಬಾರದ ಲಿಂಗವು ಕರಸ್ಥಲದಲ್ಲಿ ಬಂದು ನಿಂದರೆ, ಇದ ಕಂಡು ಬೆರಗಾದೆ' ಎಂದಿರುವಂತೆ ನಾನೂ ಬೆರಗಾದೆ. ನನ್ನ ವೃದ್ಧಾಪ್ಯದಿಂದಾಗಿ ಕ್ರಿಯಾಶಕ್ತಿಯೇ ಇಲ್ಲದ ಸ್ಥಿತಿಯಲ್ಲಿರುವ ನನ್ನ ಆಯ್ಕೆಯ ಬಗೆಗೆ ಮರುಚಿಂತನೆ ಮಾಡಬೇಕೆಂದು ನಾನು ಡಾ. ಮಹೇಶ್ ಜೋಶಿ ಅವರಲ್ಲಿ ವಿನಂತಿಮಾಡಿಕೊಂಡೆ. ಆದರೆ, ಅವರು 'ನೀವು ಪರಿಷತ್ತಿನ ಅಧ್ಯಕ್ಷರಾಗಿದ್ದವರು, ಪರಿಷತ್ತಿನ ಕಾರ್ಯಸಮಿತಿಯ ಸರ್ವಾನುಮತದ ನಿರ್ಣಯವನ್ನು ನಿರಾಕರಿಸಬೇಡಿ' ಎಂದಾಗ, ನನಗೆ ಏನನ್ನೂ ಹೇಳಲು ಹೊಳೆಯದೆ ಸುಮ್ಮನೆ ಒಪ್ಪಕೊಳ್ಳಬೇಕಾಯಿತು.


ಸಾಮಾನ್ಯವಾಗಿ ಇಂತಹ ಸಮ್ಮೇಳನಗಳಲ್ಲಿ ಸರ್ವಾಧ್ಯಕ್ಷ ಭಾಷಣ ಮುಖ್ಯ ಎಂದು ಪರಿಗಣಿಸಲಾಗಿದೆ. ವೃದ್ಧಾಪ್ಯದಿಂದಾಗಿ ಆ 'ಮುಖ್ಯ'ಕ್ಕೆ ನಾನು ಎಷ್ಟು ನ್ಯಾಯ ಒದಗಿಸುವೆನೋ ತಿಳಿಯದು. ನನ್ನ ಈ ಅಧ್ಯಕ್ಷ ಭಾಷಣದ ಸತ್ವ-ಸಾಂಗತ್ಯಗಳಲ್ಲಿ ಹೆಚ್ಚು ಕಡಿಮೆಗಳಾಗಬಹುದು. ಅದಕ್ಕಾಗಿ ಇಲ್ಲಿ ಸಮಾವೇಶಗೊಂಡಿರುವ ಬಲ್ಲಿದರೆಲ್ಲರ ಕ್ಷಮೆ ಕೋರುವೆ.

ನಮ್ಮ ಭಾಷೆ

ನಮ್ಮ ಕನ್ನಡ ಭಾಷೆಯು ಸಮೃದ್ಧವಾಗಿ ಮತ್ತು ಶ್ರೀಮಂತವಾಗಿ ಬೆಳೆಯುತ್ತಿದೆ. ಇಂದು ಕನ್ನಡವು ಕಾವ್ಯ, ಕವನ, ನಾಟಕ, ಕಾದಂಬರಿ, ವ್ಯಾಕರಣ, ಛಂದಸ್ಸು ಮುಂತಾದ ಪರಂಪರೆಯ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ. ವಿಜ್ಞಾನ, ಸಮಾಜಶಾಸ್ತ್ರ, ಕಾನೂನು, ವೈದ್ಯಕೀಯ, ಕೃಷಿ, ಮಹಿಳಾ ಅಧ್ಯಯನ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿಯೂ ಕನ್ನಡ ಬೆಳೆಯುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಬಳಕೆಯಾಗುತ್ತಿಲ್ಲ. ಇತರ ಭೌತಿಕ ವಸ್ತುಗಳು ಬಳಸಿದಂತೆಲ್ಲ ಸವೆಯುತ್ತಾ ಹೋಗುತ್ತವೆ. ಭಾಷೆ ಹಾಗಲ್ಲ. ಅದನ್ನು ಬಳಸಿದಷ್ಟೂ ಹುಲುಸಾಗಿ ಬೆಳೆಯುತ್ತದೆ. ಭಾಷೆ ನಮ್ಮ ಬದುಕಿನ ಉಸಿರು. ಅದು ನಮ್ಮ ವರ್ತಮಾನವೂ ಹೌದು. ಭವಿಷ್ಯವೂ ಹೌದು. ಎಂತಲೇ ನಮಗೆ ಭಾಷೆಯೊಡನೆ ಒಂದು ಭಾವನಾತ್ಮಕ ಸಂಬಂಧವಿದೆ.

ಶಿಕ್ಷಣ ಮಾಧ್ಯಮ

ಭರತಖಂಡದಲ್ಲಿ ಶತಮಾನಗಳ ಇತಿಹಾಸದುದ್ದಕ್ಕೂ ಪ್ರಾದೇಶಿಕ ಸೊಗಡು, ರಾಜಾಸ್ಥಾನಗಳ ಮೆರುಗು, ನೆಲಮೂಲದ ಬನಿ ಮುಂತಾದ ವೈಶಿಷ್ಟ್ಯಗಳ ಸಹಸ್ರಾರು ಭಾಷೆಗಳು ಮೆರೆದಿವೆ. ಬ್ರಿಟಿಷರು ಭಾರತವನ್ನು ಆಕ್ರಮಿಸಿ ಆಡಳಿತ ನಡೆಸಲು ಆರಂಭಿಸಿದ ಮೇಲೆ ಭಾಷೆ ಮತ್ತು ಶಿಕ್ಷಣ ಕುರಿತು ಅವರ ಚಿಂತನೆಗಳು ಸಹಜವಾಗಿ ಪ್ರಾಧಾನ್ಯತೆ ಪಡೆದವು. ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆ ಇರಬೇಕೆನ್ನುವ ಮತ್ತು ಇಂಗ್ಲಿಷ್ ಭಾಷೆಯಲ್ಲೇ ಶಿಕ್ಷಣ ನಡೆಯಬೇಕೆನ್ನುವ ಅವರ ನಿರ್ಧಾರ ಹಲವು ರೂಪಗಳಲ್ಲಿ ಜಾರಿಗೆ ಬಂದಿತೆನ್ನುವುದು ನಮಗೆಲ್ಲರಿಗೂ ಗೊತ್ತು. ಮೆಕಾಲೆ ಶಿಕ್ಷಣ ಪದ್ಧತಿಯ ಅನುಷ್ಠಾನವು ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಮಾರ್ಪಡಿಸುವಷ್ಟು ಪರಿಣಾಮ ಬೀರಿತು. ಕ್ರಿ.ಶ. ೧೮೦೦ ರಷ್ಟು ಹಿಂದಿನ ಕಾಲದಲ್ಲೇ ಕನ್ನಡ ಪ್ರದೇಶವಾದ ಕಡಲತೀರದ ಹೊನ್ನಾವರದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಆರಂಭವಾಗಿ, ನಂತರ ಕ್ರಮೇಣ ವಿವಿಧ ಪ್ರದೇಶಗಳಲ್ಲಿ ಸಂಪೂರ್ಣ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾದವು ಎಂದು ವಿದ್ವಾಂಸರು ಗುರುತಿಸಿದ್ದಾರೆ. ಬ್ರಿಟಿಷರೂ ಸೇರಿ ಎಲ್ಲ ವಸಾಹತುಶಾಹಿ ಸಾಮ್ರಾಜ್ಯಗಳೂ ತಾವು ಆಕ್ರಮಿಸಿ ಆಳುವ ದೇಶಪ್ರದೇಶಗಳ ನೆಲಮೂಲ ಸಂಸ್ಕೃತಿಯನ್ನು ಅಂದರೆ ಅಲ್ಲಿನ ಭಾಷೆಯ ಸಹಿತ ಎಲ್ಲವನ್ನೂ ಮಾರ್ಪಡಿಸಿರುವುದು ಇತಿಹಾಸದ ಕಟು ಸತ್ಯವಷ್ಟೆ. ಹಾಗೆ ನಮ್ಮ ಕನ್ನಡನಾಡಿನಲ್ಲೂ ನಡೆದಿದೆ.

ಸ್ವಾತಂತ್ರ್ಯ ಬಂದನಂತರ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳೇ ನಿರ್ವಹಿಸಲು ಆರಂಭಿಸಿದರೂ, ಬ್ರಿಟಿಷರು ಬಿಟ್ಟುಹೋದ ಕ್ರೈಸ್ತ ಸಮುದಾಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದುವರೆದವು. ಬಹಳ ಮುಖ್ಯವಾಗಿ ದಶಕಗಳು ಕಳೆದಂತೆ ಹಲವಾರು ಜಾತಿಧರ್ಮಗಳ ನೆಲೆಯ ಮಠಮಾನ್ಯಗಳು, ನಿರ್ದಿಷ್ಟ ಜಾತಿಯ ಏಳಿಗೆಗೆ ಬದ್ಧವಾದ ಸಂಸ್ಥೆಗಳು, ಪ್ರತೀ ರಾಜ್ಯದಲ್ಲೂ ನೂರಾರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ಅವುಗಳಿಗೆ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿದವು. ಕನ್ನಡನಾಡಿನಲ್ಲಿ ಶಿಕ್ಷಣಕ್ಕೆ ಮೂಲವ್ಯವಸ್ಥೆಯೇನೋ ವಿಸ್ತಾರಗೊಂಡಿತು. ಆದರೆ, ಕನ್ನಡನಾಡಿನಲ್ಲಿ ಹುಟ್ಟುವ ಮಕ್ಕಳು ಪಡೆಯುವ ಶಿಕ್ಷಣದ ಭಾಷೆ ಮತ್ತು ಮಾಧ್ಯಮ ಯಾವುದಾಗಿರಬೇಕು ಎನ್ನುವ ಚರ್ಚೆ, ಅಲ್ಲಿಂದಾಚೆಗೆ ಪಡೆದಿರುವ ಆಯಾಮಗಳನ್ನು ಲೆಕ್ಕವಿಡುವುದೇ ಕಷ್ಟ. ತಾನ್ನುಡಿಯ ಮೇಲಿನ ಪ್ರೀತಿ, ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮ ಆಗಬೇಕು ಎಂಬ ಚಳುವಳಿಗಳು ಬೆಳೆದುಬಂದ ರೀತಿ, ಬಹುತೇಕ ವಿಷಯಗಳಲ್ಲಿ ಸರ್ಕಾರದ ದ್ವಂದ್ವ ನೀತಿ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ನ್ಯಾಯಾಲಯಗಳು ಶಿಕ್ಷಣದ ಭಾಷೆ ಕುರಿತು ನೀಡಿರುವ ತೀರ್ಪುಗಳಿಗೆ ಸರ್ಕಾರಗಳು ನೀಡಲೇಬೇಕಾದ ಸಮ್ಮತಿ - ಇನ್ನೂ ಮುಂತಾದ ಸಂಗತಿಗಳ ಹಿನ್ನೆಲೆಯಲ್ಲಿ ಪ್ರಾಥಮಿಕ ಪೂರ್ವ (ಪ್ರೀಪ್ರೈಮರಿ) ಶಿಕ್ಷಣದಿಂದ ಉನ್ನತ ಮಟ್ಟದ ಶಿಕ್ಷಣದವರೆಗೆ, ಗ್ರಾಮಾಂತರ ಪ್ರದೇಶದಿಂದ ಪ್ರಗತಿ ಹೊಂದಿದ ನಗರ ಪ್ರದೇಶದವರೆಗೆ ಶಿಕ್ಷಣದ ಭಾಷೆ ಯಾವುದು ಎನ್ನುವುದು ಇನ್ನೂ ನಿರ್ಧಾರವಾಗದ ಸಂಕೀರ್ಣ ಸ್ವರೂಪದಲ್ಲೇ ಇದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಗಳು ಬದಲಾದಂತೆ ಸರ್ಕಾರಿ-ಸಾರ್ವಜನಿಕ ಶಾಲಾಶಿಕ್ಷಣದಲ್ಲಿ ಪ್ರಥಮ, ದ್ವಿತೀಯ, ತೃತೀಯ ಭಾಷೆ ಎಂದು ಕನ್ನಡದ ಸ್ಥಾನಮಾನ ಬದಲಾಗುವುದು, ಖಾಸಗಿ ಶಾಲೆಗಳು ಅದರಲ್ಲೂ ಕೇಂದ್ರೀಯ ಪಠ್ಯಕ್ರಮ ಮತ್ತು ಪರೀಕ್ಷಾಕ್ರಮವನ್ನು ಅನುಸರಿಸುವ ಶಾಲೆಗಳು ವಿಭಿನ್ನ ನೀತಿಗೆ ಪಟ್ಟುಹಿಡಿಯುವುದು, ಸರ್ಕಾರವೇ ಪಬ್ಲಿಕ್ ಶಾಲೆಗಳನ್ನು ತೆರೆದಿರುವುದು ಹೀಗೆ ನಮ್ಮಲ್ಲಿ ಹಲವು ಸಂಗತಿಗಳು ಅನೇಕರಿಗೆ ಗೊಂದಲ ಹುಟ್ಟಿಸಿವೆ.

ಇವೆಲ್ಲದರ ಹಿನ್ನೆಲೆಯಲ್ಲಿ, ನಮ್ಮ ನೆಲದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಬೇಕು ಎಂಬುದನ್ನು ಕರ್ತವ್ಯವಾಗಿ ಪರಿಗಣಿಸಬೇಕಿರುವ ಸರ್ಕಾರ ತುರ್ತಾಗಿ ಕೆಲವು ಬಾಹ್ಯ ಮತ್ತು ಆಂತರಿಕ ಸಂಗತಿಗಳನ್ನು ಗಮನಿಸಬೇಕಾಗಿದೆ : ಗ್ರಾಮೀಣ ಪ್ರದೇಶದಲ್ಲಿ ನೂರಾರು, ಸಾವಿರಾರು ಸರ್ಕಾರಿ ಶಾಲೆಗಳು ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿವೆ. ಮೊದಲು ಅವುಗಳನ್ನು ಸರಿಪಡಿಸಿ, ಮಕ್ಕಳಿಗೆ ಮತ್ತು ಪೋಷಕರಿಗೆ ಅವು ಆಕರ್ಷಕವಾಗುವಂತೆ ಉನ್ನತೀಕರಿಸಬೇಕು. ಮಕ್ಕಳು ಮತ್ತು ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಎದ್ದುಕಾಣುವಂತೆ ನಡೆಯುತ್ತಿದೆ. ಇದು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸದಂತೆ ಹಿರಿಯರನ್ನು ಪ್ರೇರೇಪಿಸುತ್ತಿದೆ. ಆದ್ದರಿಂದ ಸರ್ಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಎಂಬ ಗುಚ್ಛವ್ಯವಸ್ಥೆಯನ್ನು ಪ್ರತೀ ಗ್ರಾಮದಲ್ಲಿ ಅಲ್ಲದಿದ್ದರೂ ಪ್ರತೀ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ತೆರೆಯಬೇಕು ಎನ್ನುವ ಸಲಹೆಯನ್ನು ಅನೇಕ ಚಿಂತಕರು ನೀಡಿದ್ದಾರೆ. ಇದನ್ನು ಸರ್ಕಾರ ಪರಿಶೀಲಿಸುವುದು ಅಗತ್ಯ. ಇವುಗಳಲ್ಲಿ ಕನ್ನಡವೇ ಶಿಕ್ಷಣದ ಭಾಷೆಯಾಗಿ, ಇಂಗ್ಲಿಷ್ ಭಾಷೆ ಪಠ್ಯಕ್ರಮದಲ್ಲಿ ಒಂದು ಭಾಷೆ/ವಿಷಯವಾಗಿ ಮಾತ್ರ ಇರುವಂತೆ ಮಾಡಬಹುದು.

ಆದರೆ, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಯಲ್ಲಿ, ಅದರಲ್ಲೂ ಖಾಸಗಿ ಶಾಲೆಯಲ್ಲಿ ಓದಿಸಿದರೆ ಮಾತ್ರ ಅವರಿಗೆ ಸರಿಯಾದ ಶಿಕ್ಷಣ ಸಿಗುತ್ತದೆ ಮತ್ತು ಮುಂದೆ ಉದ್ಯೋಗಾವಕಾಶಕ್ಕೆ ಅನುಕೂಲವಾಗುತ್ತದೆ ಎಂಬ ಭ್ರಮೆಯಲ್ಲಿರುವ ತಂದೆತಾಯಿಗಳ ಬುದ್ಧಿ, ಆಲೋಚನೆಗಳಿಗೆ ಕನ್ನಡದ ಬಗೆಗೆ ಮನವರಿಕೆ ಮಾಡಿಕೊಡುವುದು ಬಹಳ ದೊಡ್ಡ ಸವಾಲಾಗಿದೆ. ಹೋಬಳಿ, ತಾಲ್ಲೂಕುಗಳ ಮಟ್ಟದಲ್ಲಿ ಕೂಡ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳನ್ನು ನಡೆಸುವ ಸಂಸ್ಥೆಗಳು ತಮ್ಮ ಶಾಲೆಗೆ ಮಕ್ಕಳನ್ನು ಕರೆತರಲು ಹಳ್ಳಿ-ಹಳ್ಳಿಗಳಿಗೂ ತಮ್ಮ ವಾಹನಗಳನ್ನು ಕಳಿಸುತ್ತಾರೆ. ಇಂಥ ಸಮಸ್ಯೆ-ಸವಾಲುಗಳ ನಡುವೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಖಾಸಗಿ ಉದ್ಯಮಿಗಳು, ಶ್ರೀಮಂತ ವ್ಯಾಪಾರಿಗಳು, ವಿದೇಶಗಳಲ್ಲಿರುವ ಕನ್ನಡಿಗರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ನೆರವು ನೀಡಿ ಕೈಜೋಡಿಸಬೇಕು. ಗ್ರಾಮಾಂತರ ಪ್ರದೇಶದ ಶಾಲೆಗಳನ್ನು ಉನ್ನತೀಕರಿಸಲು ಅವರ ಸಹಕಾರ ಅತ್ಯಗತ್ಯ. ಸರ್ಕಾರ ಇಂಥ ಸಹಕಾರದ ಹುಡುಕಾಟಕ್ಕೆ ಹಿರಿಯರ ಸಮಿತಿಯನ್ನು ರಚಿಸುವುದು ಸೂಕ್ತ ಎಂದು ಅನ್ನಿಸುತ್ತದೆ. ಕನ್ನಡ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ಬೆಳೆಸುವುದಿರಲಿ, ಸದ್ಯ ಸಂವಹನ ಭಾಷೆಯಾಗಿ ಉಳಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಹೆತ್ತವರನ್ನು ಪ್ರೇರೇಪಿಸಲು ಶಾಲೆಗಿರುವ ಬಲ-ಬೆಂಬಲಗಳೂ ಮುಖ್ಯವಾಗುತ್ತವೆ. ಶಿಕ್ಷಣ ವ್ಯವಸ್ಥೆಗೆ ಅಂತರಂಗದಷ್ಟೇ ಬಹಿರಂಗವೂ ಮುಖ್ಯವೆನ್ನಿಸುವ ಕಾಲ ಇದಲ್ಲವೇ? ಕಂಪೆನಿಗಳು, ಉದ್ಯಮಗಳು ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಲು, ಮಕ್ಕಳ ಶಾಲೆಗಿಂತ ಉತ್ತಮ ಅಂಗಳ ಬೇರೊಂದಿಲ್ಲ ಎಂದು ನಾನು ಭಾವಿಸುತ್ತೇನೆ.

ತಂತ್ರಜ್ಞಾನದ ನೆರವಿನ ಮೇಲೆ ಭಾಷೆಯ ಬೆಳವಣಿಗೆ

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಸಹಸ್ರಾರು ವರ್ಷಗಳ ಪಯಣದಲ್ಲಿ ಕನ್ನಡ ಭಾಷೆ ಮುಕ್ಕಾಗದೆ ಜೀವಂತವಾಗಿ ಉಳಿದಿರುವುದಕ್ಕೆ ಕಾರಣ ಅದು ಕಾಲದ ಬೆಳವಣಿಗೆಗಳ ಜೊತೆ ಹೆಜ್ಜೆ ಹಾಕಿ ಮಹಾಮಾರ್ಗದಲ್ಲಿ ಪಯಣಿಸಿರುವುದು. ಕನ್ನಡ ಅತ್ಯಂತ ಶ್ರೀಮಂತವಾಗಿ ಬೆಳೆದ ಭಾಷೆ. ಪ್ರಾಚೀನ ಕನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ಆಧುನಿಕ ಕನ್ನಡ ಹೀಗೆ ನಮ್ಮ ಭಾಷೆಯಾದ ಕನ್ನಡ, ಆಯಾ ಕಾಲದ ಎಲ್ಲ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳು ನೀಡಿದ ಕೊಡುಗೆಯನ್ನು ಮೈಗೂಡಿಸಿಕೊಂಡು ನಳನಳಿಸಿದೆ. ಈಗ ಜಾಗತಿಕ ಸಂವಹನದ ಚಹರೆಯನ್ನು ಬದಲಾಯಿಸುತ್ತಿರುವ ತಂತ್ರಜ್ಞಾನದ ನೆರವು ಪಡೆದು ಕನ್ನಡ ಭಾಷೆ ಇನ್ನಷ್ಟು ಶ್ರೀಮಂತವಾಗಿ ಆ ಮೂಲಕ ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರ ಆಗಬೇಕಿದೆ.

ತಂತ್ರಜ್ಞಾನದ ಕನ್ನಡಕವಿಲ್ಲದೆ ಇಂದು ಜಗತ್ತನ್ನು ನೋಡುವುದೇ ಕಷ್ಟವಾಗಿದೆ. ಹಿಂದಿನ ಕಾಲದಲ್ಲಿ ಕಾಲಜ್ಞಾನ, ಬ್ರಹ್ಮಜ್ಞಾನ ಮುಂತಾದ ಅರಿವಿನ ಮೂಲಗಳನ್ನು ಕೈವಶ ಮಾಡಿಕೊಳ್ಳಲು ಶ್ರಮಪಡಬೇಕಾಗಿತ್ತು. ಈಗ ಇದಕ್ಕೆ ತಂತ್ರಜ್ಞಾನ ಎಂಬ ಪದವನ್ನೂ ಸೇರಿಸಬೇಕು ಎನ್ನುವ ಮಾತು ಕೇವಲ ತಮಾಷೆಯಲ್ಲ. ಏಕೆಂದರೆ ಕಾಲಜ್ಞಾನವನ್ನೂ ಬ್ರಹ್ಮಜ್ಞಾನವನ್ನೂ ಪಡೆಯಬೇಕೆಂಬ ಆಸೆಯುಳ್ಳವರು ಕೂಡ ಇಂದು ತಂತ್ರಜ್ಞಾನವನ್ನೇ ಅವಲಂಬಿಸಬೇಕು! ಹಿಂದಿನ ಕಾಲದ ಹಿರಿಯರ ಮಾತು ಬಿಡಿ, ಇಂದಿನ ಕಾಲದಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತಂತ್ರಜ್ಞಾನವೇ ಮುಖ್ಯ ಪೋಷಕಾಂಶ ಒದಗಿಸುವಂತಾಗಿದೆ. ಕನ್ನಡ ಭಾಷೆ ಇನ್ನಷ್ಟು ಸಂಪನ್ನವಾಗಬೇಕಾದರೆ, ಸಂಪೂರ್ಣ ಅನ್ನಿಸಬೇಕಾದರೆ ಮತ್ತು ಮುಖ್ಯವಾಗಿ ಸಮಕಾಲೀನ ಅನ್ನಿಸಬೇಕಾದರೆ ಅದಕ್ಕೆ ತಂತ್ರಜ್ಞಾನದ ಬೆನ್ನೆಲುಬನ್ನು ಜೋಡಿಸಲೇಬೇಕು. ಕನ್ನಡ ಭಾಷೆಯ ಬೆಳವಣಿಗೆಗೆ ತಂತ್ರಜ್ಞಾನದ ಪೋಷಣೆ ಅತ್ಯಗತ್ಯ ಎನ್ನುವ ಅನಿವಾರ್ಯತೆಯನ್ನು ನಾವು ಒಪ್ಪಿಕೊಳ್ಳಲೇಬೇಕು. ಇದಕ್ಕೆ ಬೇಕಾದ ಸಿದ್ಧತೆ ಮತ್ತು ಅನುಕೂಲತೆಗಳನ್ನು ಸಮರೋಪಾದಿಯಲ್ಲಿ ಕಲ್ಪಿಸದಿದ್ದರೆ ನಾವು ಹಿಂದುಳಿದುಬಿಡುತ್ತೇವೆ.

ಕನ್ನಡ ಭಾಷೆಯನ್ನು, ಕನ್ನಡ ಲಿಪಿಯನ್ನು ತಂತ್ರಜ್ಞಾನಕ್ಕೆ ಜೋಡಿಸುವ ವಿಚಾರದಲ್ಲೇ ಇರುವ ಗೊಂದಲಗಳನ್ನು ಮೊದಲು ಪರಿಹರಿಸುವುದು ಅಗತ್ಯ. ಜ್ಞಾನ, ತಂತ್ರಜ್ಞಾನ ಜಾಗತಿಕವಾಗಿ ಅಗಾಧವಾಗಿ ಬೆಳೆದಿದೆ. ಆದರೆ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಕನ್ನಡ ಭಾಷೆಯಲ್ಲೇ ಪಡೆದುಕೊಳ್ಳಲು ಸರಿಯಾದ ವ್ಯವಸ್ಥೆ ನಮ್ಮಲ್ಲಿ ಇರಬೇಕಾಗುತ್ತದೆ. ದತ್ತಾಂಶಗಳನ್ನು ಕನ್ನಡದಲ್ಲೇ ರೂಪಿಸುವ ಹಲವಾರು ಪ್ರಯತ್ನಗಳು ನಡೆದಿವೆ ಎನ್ನುವುದು ನಿಜ. ಅವುಗಳನ್ನು ಅಭಿನಂದಿಸೋಣ. ಆದರೆ ಅವು ಇಲ್ಲಿರುವ ಅಗಾಧ ಅಗತ್ಯವನ್ನು ಪೂರೈಸುವ ಪ್ರಮಾಣದಲ್ಲಿ ಇವೆಯೇ? ಈ ಕುರಿತು ಸರ್ಕಾರ ಮತ್ತು ತಂತ್ರಜ್ಞಾನ ಪರಿಣತರು ಗಂಭೀರ ಚಿಂತನೆ ನಡೆಸಬೇಕಿದೆ. ರಾಜಕಾರಣದ ಜೊತೆಗೆ ಜ್ಞಾನಕಾರಣ, ಜನಕಾರಣಗಳ ಬಗ್ಗೆ ನಮ್ಮ ಸರ್ಕಾರಗಳು ಗಮನ ಹರಿಸಲೇಬೇಕು. ಇವುಗಳಲ್ಲಿ ಬಹಳ ಮುಖ್ಯವಾದುದು ಜನಭಾಷೆಯಲ್ಲಿ ಜ್ಞಾನದ ಪ್ರಸಾರ. ಇದಕ್ಕೆ ಅಗತ್ಯವಾದ ತಾಂತ್ರಿಕ ಸಿದ್ಧತೆ ಮತ್ತು ವ್ಯವಸ್ಥೆಯನ್ನು ಮಾಡುವುದು ಈ ಕಾಲಕ್ಕೆ ಸರ್ಕಾರದ ದೊಡ್ಡ ಜವಾಬ್ದಾರಿ. ಅದಕ್ಕೆ ನೆರವು ನೀಡಬಲ್ಲ ಕನ್ನಡಿಗ ತಾಂತ್ರಿಕ ಸಂಪನ್ನರ ಸಂಪರ್ಕ ಮಾಡಿ ಕನ್ನಡವನ್ನು 'ಅರಿವಿನ „ಭಾಷೆ'ಯಾಗಿ, 'ಅನ್ನದ ಭಾಷೆ'ಯಾಗಿ, ಬೆಳೆಸುವುದು ಅಗತ್ಯ.

ಗೂಗಲ್, ಯಾಂತ್ರಿಕ ಬುದ್ಧಿಮತ್ತೆಗೂ ಬರಲಿ ಶುದ್ಧ ಕನ್ನಡ ಪ್ರೇಮ

ಜಗತ್ತಿನಲ್ಲಿ ಗೂಗಲ್ ಎನ್ನುವ ಜಗದ್ಗುರು ೧೯೯೮ ರ ಸುಮಾರಿಗೆ ಅವತರಿಸಿದ ಬಳಿಕ, ಅದರಂಥ ಇನ್ನೂ ಕೆಲವು ಕಿರಿಯ ಗುರುಗಳು ಹುಟ್ಟಿದ ಬಳಿಕ, ಮನುಷ್ಯರು ಲೋಕವನ್ನು ಅರಿಯುವ ಮಾರ್ಗ, ಲೋಕದ ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯುವ ಮಾರ್ಗ ಬಹಳ ಸುಲಭವಾಯಿತು. ಜ್ಞಾನವನ್ನು ರೂಢಿಯ ಗುರುವಿನ ಮೂಲಕವೇ ಅಥವಾ ಗ್ರಂಥಗಳ ಮೂಲಕವೇ ಪಡೆಯಬೇಕೆನ್ನುವ ನಂಬಿಕೆ ಹೆಚ್ಚುಕಡಿಮೆ ಅಳಿದುಹೋಯಿತು. ಆದರೆ ಈ ಆಧುನಿಕ ಗುರುಗಳು ಜ್ಞಾನದ ಪ್ರಸಾರ ಮಾಡುವುದು, ಪಾಠಗಳನ್ನು ಹೇಳಿಕೊಡುವುದು ಇಂಗ್ಲಿಷ್ ಭಾಷೆಯಲ್ಲೇ ಕನ್ನಡ ಭಾಷೆಯ ಮೂಲಕವೂ ಲೋಕವನ್ನು ಅರಿಯಲು ಸಾಧ್ಯ, ಜ್ಞಾನವನ್ನು ಪಡೆಯಲು ಸಾಧ್ಯ ಎನ್ನುವುದನ್ನು ನಾವೀಗ ತೋರಿಸಿ ತಿಳಿಸದಿದ್ದರೆ, ಮುಂದಿನ ಪೀಳಿಗೆಯ ಮಕ್ಕಳು 'ಜ್ಞಾನ ಎಂದರೆ ಇಂಗ್ಲಿಷ್' ಎಂದು ನಂಬುವ ಅಪಾಯವಿದೆ. ಜ್ಞಾನ ಪಡೆಯುವ ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸಿದರೆ, ಕನ್ನಡ ಜ್ಞಾನದ ಭಾಷೆಯೂ ಆಗುತ್ತದೆ. ನಮಗೆ ಗೊತ್ತಿರುವಂತೆ, ತಮ್ಮ ತಲೆಗೆ ತಜ್ಞರು ತುಂಬಿರುವ ದತ್ತಾಂಶ ಏನಿದೆಯೋ ಅದನ್ನೇ ಈ 'ಯಾಂತ್ರಿಕ ಗುರುಗಳು' ಕೇಳಿದವರಿಗೆ ಮಾಹಿತಿಯಾಗಿ ನೀಡುತ್ತಾರೆ. ಕನ್ನಡದಲ್ಲಿ ದತ್ತಾಂಶ (ಅಂದರೆ ಡೇಟಾ) ತುಂಬದಿದ್ದರೆ ಅಥವಾ ಸರಿಯಾಗಿ ತುಂಬದಿದ್ದರೆ, ಅಂತರಜಾಲದಲ್ಲಿ ಸಿಗುವ ಮಾಹಿತಿ ಸರಿಯಾಗಿ ಇರುವುದಾದರೂ ಹೇಗೆ? ಕರ್ನಾಟಕದ ರಾಜಧಾನಿ ಬೆಂಗಳೂರನ್ನು 'ಐಟಿ ಸಿಟಿ- ಇನ್‌ಫರ್‌ಮೇಷನ್ ಟೆಕ್ನಾಲಜಿ ಸಿಟಿ' - ಮಾಹಿತಿ ತಂತ್ರಜ್ಞಾನ ನಗರ ಎಂದು ಕರೆಯಲಾಗುತ್ತದೆ. ಇದು ಕನ್ನಡ ಭಾಷೆಯ ಮಟ್ಟಿಗೂ ಅನ್ವರ್ಥವಾಗಬೇಕಾದರೆ, ಇದುವರೆಗಿನ ಕನ್ನಡದಲ್ಲೇ ದತ್ತಾಂಶ ತುಂಬುವ ಅಷ್ಟಿಷ್ಟು ಪ್ರಯತ್ನಗಳ ಮುಂದುವರಿಕೆಯಾಗಿ ಮತ್ತೊಂದು ಸದೃಢ ಪ್ರಯತ್ನ ನಡೆಯಲೇಬೇಕು. ಇದಕ್ಕೆ ಸರ್ಕಾರ ನೇತೃತ್ವ ವಹಿಸುವುದು, ಅಗತ್ಯ ವ್ಯವಸ್ಥೆ ರೂಪಿಸುವುದು, ಅದು ನಿರ್ವಹಿಸಬೇಕಾದ ಸಾಮಾಜಿಕ ಕರ್ತವ್ಯ.

ಆದರೆ, ಸರ್ಕಾರವನ್ನು ನಡೆಸುವ ಜನಪ್ರತಿನಿಧಿಗಳಲ್ಲಿ, ಆಡಳಿತದ ಕೀಲಿಕೈಗಳನ್ನು ಹೊಂದಿರುವ ಉನ್ನತ ಅಧಿಕಾರಿಗಳಲ್ಲಿ ಕನ್ನಡ ಭಾಷಾಪ್ರೇಮದ ಕೊರತೆ ಇರುವಂತೆ ಕಾಣುತ್ತದೆ. ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕದಿದ್ದರೆ, ಆಸಕ್ತಿ ವಹಿಸಿ ಅದರ ಅಗತ್ಯಗಳನ್ನು ಪೂರೈಸದಿದ್ದರೆ ಕನ್ನಡ ಭಾಷೆ ಬೆಳೆಯುವುದಿಲ್ಲ. ಆಡಳಿತ ನಡೆಸುವ ಅಧಿಕಾರಿಗಳಲ್ಲಿ ಬಹುಪಾಲು ಮಂದಿ ಇನ್ನೂ 'ಅಂತರಜಾಲವೆಂದರೆ ಆಂಗ್ಲಭಾಷೆ' ಎಂಬ ನಂಬಿಕೆಯಲ್ಲೇ ಕೆಲಸ ಮಾಡುತ್ತಾರೆ. ಅವರು ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸಿ ಸಶಕ್ತಗೊಳಿಸುವ ಕಾರ್ಯದಲ್ಲಿ ಆಸಕ್ತರಾಗುವುದು ಅವರ ಆಡಳಿತಕರ್ತವ್ಯವೂ ಆಗಿದೆ. ಇವೆಲ್ಲಕ್ಕೆ ಮೊದಲ ಅಗತ್ಯ ಎಂದರೆ ಕನ್ನಡ ಮತ್ತು ತಂತ್ರಾಂಶದ ಪ್ರೀತಿಯ ಅನುಬಂಧವನ್ನು ಸರ್ಕಾರವೇ ಅಧಿಕೃತಗೊಳಿಸುವುದು. ಕನ್ನಡದ ಹಲವಾರು ಸಾಹಿತಿಗಳು ಇದರ ಅಗತ್ಯವನ್ನು ಮನವರಿಕೆ ಮಾಡಿಕೊಡಲು ಈಗಾಗಲೇ ಪ್ರಯತ್ನಿಸಿದ್ದಾರೆ. ಸರ್ಕಾರದ ಹಿಂದಿನ ಆಡಳಿತ ಸಲಹೆಗಾರರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಮತ್ತು ಪ್ರಸಕ್ತ ಅಧ್ಯಕ್ಷರು ಎಲ್ಲರೂ ಅಧಿಕೃತ ಕನ್ನಡ ತಂತ್ರಾಂಶ ಮತ್ತು ಇ-ಕನ್ನಡ ಯೋಜನೆಯ ಮಹತ್ವವನ್ನು ಕುರಿತು ಹೇಳಿದ್ದಾರೆ. 'ಕನ್ನಡ ಕಸ್ತೂರಿ' ಹೊಸತಂತ್ರಾಂಶ ಅಧಿಕೃತವಾಗಿ ಬಿಡುಗಡೆಯಾದರೆ, ಗೂಗಲ್, ಯಾಂತ್ರಿಕ ಬುದ್ಧಿಮತ್ತೆಯಲ್ಲೂ ಕನ್ನಡದ ಕಂಪು ಪಸರಿಸಬಹುದು. ಆ ತಂತ್ರಾಂಶದ ಮೂಲಕ ದತ್ತಾಂಶವೂ ಸರಿಗನ್ನಡದಲ್ಲೇ ಸರಿಯಾಗಿ ತಲುಪಬಹುದು.

ಅಂತರ-ರಾಜ್ಯ ಭಾಷಾ ವಿನಿಮಯ

ದ್ರಾವಿಡ ಭಾಷಾ ಕುಟುಂಬದಲ್ಲಿ ಕನ್ನಡವು ಒಂದು ಪ್ರಾಚೀನ ಮತ್ತು ಸಾಹಿತ್ಯದ ದೃಷ್ಟಿಯಿಂದ ಮಹತ್ವದ ಭಾಷೆಯಾಗಿದೆ. ಕನ್ನಡ ಸಾಹಿತ್ಯವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸ ಭಾರತ, ಕವಿರಾಜಮಾರ್ಗ, ವಡ್ಡಾರಾಧನೆ, ಕಥೆ-ಕಾದಂಬರಿಗಳು ಮುಂತಾದ ಕನ್ನಡದ ಅಭಿಜಾತ ಕೃತಿಗಳು ಇಂಗ್ಲೀಷಿಗೆ ಅನುವಾದವಾಗಿ ಜಾಗತಿಕ ಸಾಹಿತ್ಯದ ಭಾಗವಾಗುತ್ತಿವೆ. ವಚನಗಳು ಇಂಗ್ಲೀಷಲ್ಲದೆ ದೇಶದ ಮತ್ತು ಜಗತ್ತಿನ ಇತರ ಪ್ರಮುಖ ಭಾಷೆಗಳಿಗೆ ಅನುವಾದಗಳಾಗುತ್ತಿವೆ. ಸಾಹಿತ್ಯವೇನೋ ಸಮೃದ್ಧವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಭಾರತದ ಬೇರೆ ಬೇರೆ ಭಾಷೆಗಳ ಜೊತೆಯಲ್ಲಿ ವಿನಿಮಯ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು. ಸೋದರ ಭಾಷೆಗಳಾದ ತಮಿಳು, ತೆಲುಗು, ಮಲೆಯಾಳಂ, ಮರಾಠಿ, ತುಳು, ಕೊಂಕಣಿ, ಕೊಡವ ಮುಂತಾದ ಭಾಷೆ ಮತ್ತು ಭಾಷೆಗಳನ್ನಾಡುನ ಜನರ ಜೊತೆಯಲ್ಲಿ ಹೆಚ್ಚು ಹೆಚ್ಚು ಕೊಡುಕೊಳೆ ಸಂಬಂಧವನ್ನು ಬೆಳೆಸಬೇಕು. ಭಾಷೆಯು ತನ್ನಷ್ಟಕ್ಕೆ ತಾನೆ ಬೆಳೆಯುವುದಿಲ್ಲ. ಯಾವುದನ್ನು ಭಾಷಾ ವಿನಿಮಯ ಎನ್ನುತ್ತೇವೆಯೋ ಅದರ ಅಗತ್ಯ ಇಂದು ಹೆಚ್ಚಾಗಿದೆ. ಕನ್ನಡ ಸಾಹಿತ್ಯ, ಕರ್ನಾಟಕ ಸಂಸ್ಕೃತಿ, ಇಲ್ಲಿನ ಕಲೆಗಳು, ನಾಟಕ, ಸಂಗೀತ, ಬಯಲಾಟ, ಯಕ್ಷಗಾನ ಮುಂತಾದವುಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಪರಿಚಯಿಸಿಕೊಡುವ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕು. ಉತ್ತರ ಭಾರತದ ಜನರು ಉದ್ಯೋಗವನ್ನು ಅರಸಿಕೊಂಡು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕರ್ನಾಟಕಕ್ಕೆ, ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ.

ಭಾಷಾ ವಿನಿಮಯದ ಮೂಲಕ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಗಟ್ಟಿಗೊಳಿಸಬಹುದಾಗಿದೆ. ನಮ್ಮ ದೇಶವು ಹೇಗೆ ಸಾಂವಿಧಾನಿಕವಾಗಿ ಒಕ್ಕೂಟ ವ್ಯವಸ್ಥೆಯೋ, ಅದೇ ರೀತಿಯಲ್ಲಿ ಇದು ಬಹುಭಾಷಾ ದೇಶವಾಗಿದೆ. ಬಹುತ್ವವು ಭಾರತದ ಜೀವದ್ರವ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ವರ್ಷದಲ್ಲಿ ಎರಡು. ಮೂರು ಅಂತರ್-ರಾಜ್ಯ ಸಾಹಿತ್ಯ ಸಮಾವೇಶಗಳನ್ನು ದೇಶದ ಬೇರೆ ಭಾಗಗಳಲ್ಲಿ ನಡೆಸಬೇಕು. ರಾಜ್ಯ- ರಾಜ್ಯಗಳ ನಡುವೆ ಇದು ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಕ ಮತ್ತು ಆರ್ಥಿಕ ಸಂಬಂಧವನ್ನು ಬೆಳೆಸುತ್ತದೆ.

ರಾಜ್ಯಗಳ ಮೇಲೆ ಹಿಂದಿ ಹೇರಿಕೆ

ಭಾರತ ದೇಶದ ಭಾಷೆ, ಸಂಸ್ಕೃತಿ, ಆಚರಣೆ ಎಲ್ಲವೂ ಪ್ರಾದೇಶಿಕವಾಗಿ ಮತ್ತು ಸಾಮಾಜಿಕವಾಗಿ ಬಹುರೂಪಿಯಾಗಿವೆ ಎನ್ನುವುದು ಎಲ್ಲರಿಗೂ ಗೊತ್ತು. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಭಾರತದ ಪ್ರಜೆಗಳಾಗಿರುವ ಅದೃಷ್ಟವಿದ್ದರೂ ವೈಯಕ್ತಿಕವಾಗಿ ಅವರವರ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇದೆ. ಇದು ಭಾಷೆಯ ವಿಚಾರಕ್ಕೂ ನಿಜ. ಆದರೆ 'ಭಾರತದ ಜನರೆಲ್ಲರೂ ಸಂವಹನ ನಡೆಸಲು ಹಿಂದಿ ಭಾಷೆಯನ್ನು ಕಲಿತು ಬಳಸಬೇಕು, ಅದೇ ನಮ್ಮ ರಾಷ್ಟ್ರ ಭಾಷೆ' ಎಂಬುದನ್ನು ಲಿಖಿತವಾಗಿ ಮತ್ತು ಅಲಿಖಿತವಾಗಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೇರುವ ಹುನ್ನಾರವನ್ನು ಹಿಂದಿನ ಮತ್ತು ಇಂದಿನ ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿವೆ. ಕೇಂದ್ರ ಸರ್ಕಾರಕ್ಕೆ ಒಳಪಟ್ಟ ಇಲಾಖೆಗಳು, ನಿಗಮ-ಮಂಡಲಿಗಳು, ಸಂಸ್ಥೆಗಳು, ಬ್ಯಾಂಕುಗಳಲ್ಲಿ ಕನ್ನಡದ ಸೊಲ್ಲು ಸಾಧ್ಯವಾದಷ್ಟೂ ಇರದಂತೆ ನೋಡಿಕೊಳ್ಳಲಾಗುತ್ತದೆ. ನಿಜವಾಗಿ ಹೇಳುವುದಾದರೆ, ಒಕ್ಕೂಟ ಸರ್ಕಾರವೇ ಸರಿಯಾದ ಸ್ವರೂಪವಾಗಿದ್ದು, ರಾಜ್ಯ ಸರ್ಕಾರಗಳಿಗೆ ಭಾಷೆಯೂ ಸೇರಿ ಅನೇಕ ವಿಷಯಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಇತರ ರಾಜ್ಯಗಳಿಗೂ ಇರುವಂತೆ, ನಮಗೂ ಇರುವ ಸಂವಿಧಾನದ ೩೪೫ನೇ ವಿಧಿಯ ಪ್ರಕಾರ ಕನ್ನಡವೇ ನಮ್ಮ ರಾಜ್ಯದ ಅಧಿಕೃತ ಭಾಷೆ ಆಗಿದೆ. ಎಲ್ಲ ರಾಜ್ಯಗಳಿಗೂ ಒಂದೇ ಭಾಷೆಯನ್ನು ಹೇರುವುದು ಸಮರ್ಥನೀಯವಲ್ಲ.

ಬ್ಯಾಂಕು, ಅಂಚೆಕಚೇರಿಗಳಲ್ಲಿ ಸರಳ ವ್ಯವಹಾರಗಳಿಗೂ ಹಿಂದಿ ಭಾಷೆ ಬಳಸಬೇಕು ಎನ್ನುವುದು ಬಹುಪಾಲು ಜನರಿಗೆ ಎಟುಕುವ ಸಂಗತಿಯಲ್ಲ. ಅನೇಕ ಬ್ಯಾಂಕ್‌ಗಳ ಚಲನ್‌ಗಳಲ್ಲಿ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ವಿವರಗಳನ್ನು ತುಂಬುವ ಅವಕಾಶವಿರುವುದು ಗ್ರಾಹಕರಿಗೆ ಸದ್ದಿಲ್ಲದೆ ನೀಡುವ ಕಿರುಕುಳವಷ್ಟೆ, ಇನ್ನು ಬೇರೆ ಕ್ಲಿಷ್ಟ ವ್ಯವಹಾರಗಳ ಸಂವಹನವನ್ನು ಹಿಂದಿಯಲ್ಲಿ ನಿರ್ವಹಿಸುವ ಕಷ್ಟವನ್ನು ಯಾರಾದರೂ ಊಹಿಸಬಹುದು. ಸಂವಿಧಾನದ ೩೫೧ನೇ ವಿಧಿಯ ಅನ್ವಯ ಹಿಂದಿ ಭಾಷೆಗೆ ಆದ್ಯತೆ ನೀಡುವ ಅವಕಾಶವಿದ್ದರೂ ಅದು ಹೇರಿಕೆ ಮತ್ತು ದಬ್ಬಾಳಿಕೆ ರೂಪದಲ್ಲಿ ಜಾರಿಗೆ ಬರಬಾರದು. ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವುದು ನಿರ್ವಿವಾದ. ಇದನ್ನು ನಮ್ಮ ರಾಜ್ಯ ಸರ್ಕಾರ ಸರ್ವರೀತಿಯಲ್ಲೂ ಕೇಂದ್ರ ಸರ್ಕಾರಕ್ಕೆ ಮನಗಾಣಿಸಬೇಕು. ಇದಕ್ಕೆ ಕನ್ನಡಿಗರು ಪ್ರತಿರೋಧ ತೋರಿಸಿದರೆ ಅದು ತಪ್ಪೇನಲ್ಲ; ತಮಿಳುನಾಡು ಮುಂತಾದ ಮಾದರಿಗಳು ನಮ್ಮ ಜೊತೆಗೆ ಇದ್ದೇ ಇವೆ. ಕೇಂದ್ರದ ಪ್ರಭಾವಿ ಸಚಿವರುಗಳು ಈ ವಿಚಾರವನ್ನು ಆಗಾಗ ಪ್ರಸ್ತಾಪ ಮಾಡುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಕನ್ನಡ ವಿಶ್ವವಿದ್ಯಾನಿಲಯಕ್ಕೆ ವಿಶೇಷ ಗಮನ

ಇತ್ತೀಚಿನ ದಿನಗಳ ಪತ್ರಿಕಾ ವರದಿಗಳಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ಸಂಕಷ್ಟಗಳು ಹೆಚ್ಚು ನೆಮ್ಮದಿ ಕೆಡಿಸಿವೆ. ಅನುದಾನದ ಕೊರತೆಯಿಂದ ಅದರ ಸ್ಥಿತಿ ಹೀನಾಯ ನೆಲೆಗೆ ಬಂದು ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ವೇತನ ಕೊಡಲೂ ಆಗುತ್ತಿಲ್ಲ, ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟಲೂ ಆಗುತ್ತಿಲ್ಲ ಎಂಬುದು ನಿಜಕ್ಕೂ ಕಂಗೆಡಿಸುವಂಥದು. ಯಾವುದೇ ಸರ್ಕಾರಕ್ಕೆ ಇದು ಶೋಭೆ ತರುವುದಿಲ್ಲ.

ಏಕೆಂದರೆ ೩೩ ವರ್ಷಗಳ ಹಿಂದೆ ಆರಂಭವಾದ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಘನೋದ್ದೇಶಗಳಿವೆ. ಅದಕ್ಕೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು, ಕನ್ನಡ ನಾಡಿನ ಇತಿಹಾಸವನ್ನು ರಕ್ಷಿಸಿ ಮುಂದಿನ ಪೀಳಿಗೆಗಳಿಗೆ ದಾಟಿಸುವ ಪ್ರಮುಖ ಜವಾಬ್ದಾರಿಯಿದೆ. ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕೊಟ್ಟು ಅವರಿಂದ ಶುಲ್ಕ ಸಂಗ್ರಹಿಸಿ ಅನುಕೂಲ ಮಾಡಿಕೊಳ್ಳುವ ಇತರ ವಿಶ್ವವಿದ್ಯಾನಿಲಯಗಳಿಗಿಂತ ನಮ್ಮ ಕನ್ನಡ ವಿಶ್ವವಿದ್ಯಾನಿಲಯದ ಸ್ವರೂಪ ಭಿನ್ನವಾಗಿದೆ.

ಇದನ್ನು ಸರ್ಕಾರ ಒಂದು ಲಾಭದಾಯಕ ಶಿಕ್ಷಣ ಸಂಸ್ಥೆಯಂತೆ ನೋಡಬಾರದು. ಕನ್ನಡ ವಿಶ್ವವಿದ್ಯಾನಿಲಯದ ಉದ್ದೇಶಗಳನ್ನು ಕಾಪಾಡುವ, ಪೋಷಿಸುವ ಮತ್ತು ಅಲ್ಲಿ ನಿರಾತಂಕವಾಗಿ ಸಂಶೋಧನೆ ನಡೆಯುವಂತೆ ನೋಡಿಕೊಳ್ಳುವ ನೈತಿಕ ಜವಾಬ್ದಾರಿ ಕರ್ನಾಟಕ ಸರ್ಕಾರಕ್ಕಿರಬೇಕು. ಇದೇ ಮಾತುಗಳು ಜಾನಪದಕ್ಕೆ ಮೀಸಲಾದ ಮತ್ತು ವಿಶ್ವದಲ್ಲೇ ಮೊದಲೆನಿಸಿರುವ ನಮ್ಮ ಜಾನಪದ ವಿಶ್ವವಿದ್ಯಾಲಯಕ್ಕೂ ಅನ್ವಯಿಸುತ್ತವೆ. ಗ್ರಾಮೀಣರು ಮತ್ತು ಗುಡ್ಡಗಾಡಿನ ಜನರ ಬದುಕಿಗೆ ನೇರವಾಗಿ ಸಂಬಂಧವಿರುವ ಜಾನಪದ ವಿಶ್ವವಿದ್ಯಾಲಯದ ಸ್ಥಿತಿಯೂ ಚಿಂತಾಜನಕವಾಗಿದೆ. ಆದ್ದರಿಂದ ಹೆಚ್ಚಿನ ಶಾಶ್ವತ ಅನುದಾನ ಮತ್ತು ಅದು ಸಕಾಲಕ್ಕೆ ಒದಗುವುದು ಎರಡೂ ಬಹಳ ಮುಖ್ಯ. ಈ ಕುರಿತು ನಮ್ಮ ಶಾಸಕರೆಲ್ಲರೂ ದನಿ ಎತ್ತಬೇಕು ಎಂದು ಸಕಲ ಕನ್ನಡಿಗರೆಲ್ಲರ ಪರವಾಗಿ ಈ ವೇದಿಕೆಯಿಂದ ಮನವಿ ಮಾಡುತ್ತೇನೆ. ಈ ಎರಡು ವಿಶ್ವವಿದ್ಯಾಲಯಗಳಂತೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾನಿಲಯ ಇವೆಲ್ಲವೂ ಕನ್ನಡನಾಡಿನ ಅಮೂಲ್ಯ ಸಂಸ್ಕೃತಿ ಕೇಂದ್ರಗಳು ಎಂದು ಪರಿಭಾವಿಸಬೇಕು.

ಕನ್ನಡ ಕಲಿಕಾ ಕೇಂದ್ರಗಳು

ಬೆಂಗಳೂರು ನಗರ ತನ್ನ ಹವಾಮಾನ, ಸಹಿಷ್ಣುತೆ ಮತ್ತು ಸೌಂದರ್ಯದಿಂದ ಜಾಗತಿಕ ಉದ್ಯಮಗಳನ್ನು ಸೆಳೆದು, ಅವುಗಳು ಸಂತೋಷದಿಂದ ಬಂದು ಇಲ್ಲಿ ನೆಲೆಯೂರಿ ಬೆಂಗಳೂರು 'ಐಟಿ ಬಿಟಿ ಸಿಟಿ' ಎಂದು ಪ್ರಖ್ಯಾತವಾಗಿದೆ. ಯಾವ ರಾಜ್ಯದ, ಯಾವ ಭಾಷೆಯ ಜನರಾದರೂ ಭಾರತದಲ್ಲಿ ಎಲ್ಲಿ ಬೇಕಾದರೂ ನೆಲೆಸಬಹುದಾದ ಅವಕಾಶ ಇದೆಯಾದರೂ ಕಾಲೂರುವ, ನೆಲೆಯೂರುವ ನೆಲದ ಬಗ್ಗೆ, ಅಲ್ಲಿನ ಭಾಷೆಯ ಬಗ್ಗೆ ವಲಸಿಗರು ಗೌರವ ಹೊಂದಿರಬೇಕು. ಬೆಂಗಳೂರು ಮತ್ತು ಇತರ ನಮ್ಮ ನಗರಗಳಿಗೆ ಕೆಲಸಕ್ಕಾಗಿ ಬಂದಿರುವ ಹೊರ ರಾಜ್ಯಗಳ ಜನರು ಮೊದಲು ಕನ್ನಡ ಭಾಷೆಯನ್ನು ಕಲಿತು ಅದರಲ್ಲೇ ಸಂವಹನ ಮಾಡುವುದು ಅವರಿಗೆ ಒಳ್ಳೆಯದು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈಗ ಕನ್ನಡ ಕಲಿಸುವ ಕಾಯಕವನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಿದೆ. ಉದ್ಯಮ ವಲಯಗಳು ಮತ್ತು ಇನ್ನಿತರ ಕಡೆಗಳಲ್ಲಿ ಸರಳ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಬೇರೆ ಭಾಷೆಯ ಜನರು ಇದರ ಸದುಪಯೋಗ ಪಡೆಯಬೇಕು. ಹೊರರಾಜ್ಯಗಳಿಂದ ತಾವು ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿರುವುದರಿಂದ ಈ ನಗರದ ಉದ್ದಾರ ಆಗುತ್ತಿದೆ, ಇಲ್ಲಿನ ವ್ಯಾಪಾರ ಹೆಚ್ಚುತ್ತಿದೆ, ಇಲ್ಲಿನ ನಿವೇಶನಗಳು, ಬಡಾವಣೆಗಳಿಗೆ ಬೆಲೆ ಏರುತ್ತಿದೆ ಮುಂತಾದ ದುರಹಂಕಾರದ ಪ್ರದರ್ಶನ ಹೊರನಾಡಿಗರಿಂದ ಅಲ್ಲಲ್ಲಿ ವ್ಯಕ್ತವಾಗಿದೆ. ಇದನ್ನು ಸರ್ಕಾರ ಮತ್ತು ಕನ್ನಡಿಗರು ನಿಯಂತ್ರಿಸಬೇಕು.

ಕನ್ನಡನಾಡಿನಲ್ಲಿ ತಮಗೆ ಸಾಂವಿಧಾನಿಕವಾಗಿ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ಪಡೆದು, ಪ್ರಭಾವ ಬಳಸಿ ಎಲ್ಲ ರಿಯಾಯಿತಿಗಳನ್ನು ಪಡೆದು ಇಲ್ಲಿ ಔದ್ಯಮಿಕವಾಗಿ ನೆಲೆಯೂರಿ ಲಾಭದಾಯಕವಾಗಿ ಬೆಳೆಯುವ ಉದ್ಯಮಗಳು ಕನ್ನಡಿಗರಾದ ವಿದ್ಯಾವಂತ ಅಭ್ಯರ್ಥಿಗಳಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗ ನೀಡುವುದು ಅವುಗಳ ಋಣಸಂದಾಯದ ಮಾರ್ಗವೆಂದು ಭಾವಿಸಬೇಕು. ಇದು ಅವುಗಳ ನೈತಿಕ ಜವಾಬ್ದಾರಿ ಕೂಡ. ಆದರೆ ಇದನ್ನು ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುವ ಉದ್ಯಮಗಳನ್ನು ಕರ್ನಾಟಕ ಸರ್ಕಾರ ತನ್ನ ಷರತ್ತುಗಳು ನಿಯಮಗಳಿಂದ ಪ್ರತಿಬಂಧಿಸಿದರೆ ತಪ್ಪೇನಿಲ್ಲ. ಕನ್ನಡದ ನೆಲ ಜಲ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುವ ಮೊದಲು ಸರ್ಕಾರ ಇದಕ್ಕೆ ಮುಚ್ಚಳಿಕೆಯನ್ನು ಬರೆಸಿಕೊಂಡರೂ ತಪ್ಪಿಲ್ಲ. ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆದಿದೆಯಾದರೂ ನಿರ್ದಿಷ್ಟ ಕ್ರಮ ಅತ್ಯಗತ್ಯ ಎಂದು ಕನ್ನಡಿಗರು ಹಕ್ಕೊತ್ತಾಯ ಮಂಡಿಸಬೇಕು.

ಬಹುತ್ವ ಬಹುಮುಖ್ಯ

ನಮ್ಮದು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆ-ಫೆಡರಲ್ ವ್ಯವಸ್ಥೆ. ಕಳೆದ ೭೪ ವರ್ಷಗಳಿಂದ ಅನೇಕ ಇತಿಮಿತಿಗಳ ನಡುವೆ ಮುಕ್ಕಾಗದಂತೆ ಅದನ್ನು ಕಾಯ್ದುಕೊಂಡು ಬಂದಿದ್ದೇವೆ. ಕವಿರಾಜಮಾರ್ಗಕಾರ ಹೇಳಿದಂತೆ "ಕನ್ನಡದೊಳ್ ಭಾವಿಸಿದ ಜನಪದ" ವಸುಧೆಯಲ್ಲಿ ವಿಲೀನವಾಗಿದೆ ನಿಜ. ಆದರೆ ಅದು ತನ್ನ ಭಾಷೆ, ಸಾಹಿತ್ಯ, ಜೀವನ ಪದ್ಧತಿ, ಆಹಾರ ಸಂಸ್ಕೃತಿ, ಆಧ್ಯಾತ್ಮ, ಆರ್ಥಿಕತೆ, ಉದ್ಯೋಗ, ಕಾಯಕ ಮುಂತಾದವುಗಳ ನೆಲೆಯಿಂದ ತನ್ನ 'ಅಸ್ಮಿತೆ'ಯನ್ನು, 'ವಿಶಿಷ್ಟತೆ'ಯನ್ನು, 'ಅನನ್ಯತೆ'ಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿದೆ. ಭಾರತದ ಐಕ್ಯತೆ ಮತ್ತು ಸಮಗ್ರತೆ ನಿಂತಿರುವುದೇ ಬಹುಭಾಷೆ-ಬಹುಸಂಸ್ಕೃತಿಯಿಂದ ಎಂಬುದನ್ನು ನಾವು ಮರೆಯಬಾರದು. "ಬಹುತ್ವ'ವು ನಮ್ಮ ದೇಶದ ಏಕತೆಯ ಮೂಲ ದ್ರವ್ಯವಾಗಿದೆ. ಅತ್ಯಂತ ಆತಂಕದ ಸಂಗತಿಯೆಂದರೆ ಇಂದು ನಮ್ಮ ಸಾಮಾಜಿಕ ಬಹುತ್ವಕ್ಕೆ, ಬಹುಸಂಸ್ಕೃತಿಗೆ, ಭಾಷಾ ಸ್ವಾಯತ್ತತೆಗೆ, ಧಾರ್ಮಿಕ ಸೌಹಾರ್ದತೆಗೆ, ಆರ್ಥಿಕ ಸಮೃದ್ಧತೆಗೆ ಒದಗಿರುವ ಅಪಾಯ. ಬಹುಭಾಷಾ ಸಂಸ್ಕೃತಿ ನೀತಿಯನ್ನು ಸಂವಿಧಾನಾತ್ಮಕವಾಗಿ ಕೇಂದ್ರ ಸರ್ಕಾರವು ಪಾಲಿಸಬೇಕು. ಇದು ಇಂದು ನಡೆಯುತ್ತಿಲ್ಲ. ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಬ್ಯಾಂಕು ವ್ಯವಹಾರಗಳಲ್ಲಿ, ಅಂಚೆ ಕಚೇರಿಗಳಲ್ಲಿ. ರಾಜ್ಯಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರುವ ಪ್ರೋತ್ಸಾಹಿಸುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕನ್ನಡವು ಕರ್ನಾಟಕದಲ್ಲಿ ಸಾರ್ವಭೌಮ ಎಂದರೆ, ಅದು - ಭಾಷಾಂಧತೆಯಲ್ಲ. ಅದು ಒಂದು ಆದರ್ಶ ಜನತಂತ್ರದ ಬಹುಮುಖ್ಯ ಗುಣ.

ಆರ್ಥಿಕ ಸಂಬಂಧ

ಯಾವುದನ್ನು 'ಒಕ್ಕೂಟ-ಹಣಕಾಸು (ಫಿಸ್ಕಲ್ ಫೆಡರಲಿಸಮ್) ವ್ಯವಸ್ಥೆ' ಎಂದು ಕರೆಯುತ್ತೇವೆಯೋ ಅದನ್ನು ಇಂದು ಒಕ್ಕೂಟ ಸರ್ಕಾರವು ಸಂವಿಧಾನಾತ್ಮಕವಾಗಿ ನಿರ್ವಹಿಸುವುದರಲ್ಲಿ ವಿಫಲವಾಗಿದೆ. ಒಕ್ಕೂಟ ಸರ್ಕಾರವು ಹಣಕಾಸು ಆಯೋಗಗಳ ಶಿಫಾರಸ್ಸುಗಳಿಗೆ ಅನುಗುಣವಾಗಿ ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲನ್ನು ವರ್ಗಾಯಿಸುತ್ತಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಈ ತೆರಿಗೆ ಪಾಲಿನ ಬಗೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯಮಾಡುತ್ತಿದೆ ಎಂದು ಹೇಳುವುದರಲ್ಲಿ ಸತ್ಯಾಂಶವಿದೆ. ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಟರ್ ಆಂಡ್ ರೂರಲ್ ಡೆವಲಪ್‌ಮೆಂಟ್) ವಾರ್ಷಿಕವಾಗಿ ಕರ್ನಾಟಕಕ್ಕೆ ನೀಡುತ್ತಿದ್ದ ಮರುಹಣಕಾಸು ಸಾಲವನ್ನು ೨೦೨೪-೨೫ರಲ್ಲಿ ಶೇ. ೫೮ರಷ್ಟು ಕಡಿತಮಾಡಿದೆ. ಈ ಮಾತುಗಳನ್ನು ರಾಜಕೀಯ ಬಣ್ಣದ ಮೂಲಕ ನೋಡವುದು ಸಲ್ಲ. ಇದು ಕರ್ನಾಟಕಸ್ಥರ ಬದುಕು ಮತ್ತು ಭವಿಷ್ಯದ ಪ್ರಶ್ನೆ. ರಾಜ್ಯಗಳು ಆರ್ಥಿಕವಾಗಿ ಬೆಳೆದರೆ ಮಾತ್ರ ಭಾರತ ಬೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ-ರಾಜ್ಯಗಳ ನಡುವಣ ಸಂಬಂಧದ ಬಗ್ಗೆ, ಮುಖ್ಯವಾಗಿ ಹಣಕಾಸು ಸಂಬಂಧವನ್ನು ಕುರಿತಂತೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು ಮತ್ತು ಈ ಬಗ್ಗೆ ಕೇಂದ್ರ ಸರ್ಕಾರವು ಸಂವಿಧಾನ ಮತ್ತು ಹಣಕಾಸು ತಜ್ಞರ ಒಂದು ವಿಶೇಷ ಆಯೋಗವನ್ನು ರಚಿಸಬೇಕು ಎಂದು ನಾನು ಈ ವೇದಿಕೆಯ ಮೂಲಕ ಒತ್ತಾಯಿಸುತ್ತೇನೆ. ರಾಜ್ಯಗಳ ಹಣಕಾಸು ಸ್ವಾಯತ್ತತೆಯನ್ನು ಸಂರಕ್ಷಿಸುವ ಕಾರ್ಯವನ್ನು ಒಕ್ಕೂಟ ಸರ್ಕಾರ ಮಾಡಬೇಕು.

ಈಗಾಗಲೆ ದೃಢಪಟ್ಟಿರುವಂತೆ ನಮ್ಮದು ಸಮೃದ್ಧ ಆರ್ಥಿಕತೆ, ಆರ್ಥಿಕ ಮಾನದಂಡದಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ನಾಡು ಕರ್ನಾಟಕ. ಇದೆಲ್ಲವೂ ನಾವು ಹೆಮ್ಮೆಪಡಬೇಕಾದ ಸಾಧನೆಗಳು. ಇಲ್ಲಿರುವ ಪ್ರಶ್ನೆಯೆಂದರೆ, ರಾಜ್ಯದಲ್ಲಿ ಜನರ ಜೀವನ ಸಮೃದ್ಧವಾಗಿದೆಯೇ ಎನ್ನುವುದು. ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೆನ್ ಹೇಳುತ್ತಿರುವಂತೆ ಅಭಿವೃದ್ಧಿ ಎನ್ನುವುದು ಜನರ ಬದುಕಿನ ಸಮೃದ್ಧತೆಗೆ ಸಂಬಂಧಿಸಿದ ಸಂಗತಿಯಾಗಿದೆ. ಅದು ಕೇವಲ ಆರ್ಥಿಕ ಸಮೃದ್ಧತೆ ಮಾತ್ರವಲ್ಲ. ಇದಕ್ಕೆ ನಾವು ಉತ್ತರವನ್ನು ಧನಾತ್ಮಕವಾಗಿ ನೀಡುವುದು ಸಾಧ್ಯವಿಲ್ಲ. ಆರ್ಥಿಕ ಸಮೃದ್ಧತೆಯನ್ನು ಎಲ್ಲ ಜನರಿಗೆ ದೊರೆಯುವಂತೆ ಮಾಡುವಲ್ಲಿ ನಾವು ಯಶಸ್ವಿಯಾಗಿಲ್ಲ. ಹಸಿವು, ಬಡತನ, ನಿರುದ್ಯೋಗ, ಅಪೌಷ್ಟಿಕತೆ, ಅಸಮಾನತೆ, ಆಹಾರ ಅಭದ್ರತೆ – ಮುಂತಾದ ಸಮಸ್ಯೆಗಳು ನಮ್ಮ ಜನರನ್ನು, ಮುಖ್ಯವಾಗಿ ಕೃಷಿಕರನ್ನು, ಕಾರ್ಮಿಕ ವರ್ಗವನ್ನು, ದಿನಗೂಲಿಗಳನ್ನು, ಬೀದಿಬದಿ ಮಾರಾಟಗಾರರನ್ನು, ಮಹಿಳೆಯರನ್ನು ಕಾಡುತ್ತಿವೆ. ಕರ್ನಾಟಕದ ಸರ್ಕಾರವು ೨೦೨೩ರಲ್ಲಿ ಘೋಷಿಸಿರುವ “ಭರವಸೆ ಕಾರ್ಯಕ್ರಮಗಳು" ದುಡಿಯುವ ವರ್ಗಕ್ಕೆ ಅಷ್ಟೋ ಇಷ್ಟು ಬದುಕನ್ನು ನೀಡಿವೆ. 'ಭರವಸೆ ಕಾರ್ಯಕ್ರಮ' ಅಪ್ರತ್ಯಕ್ಷವಾಗಿ ದುಡಿಮೆಗೆ ಗೌರವ ನೀಡುವ ಕ್ರಮವಾಗಿದೆ. ಇದು ಆರ್ಥಿಕ ಸಮೃದ್ಧತೆಯನ್ನು ಜನರಿಗೆ ಹಂಚುವ ಒಂದು ಕಾರ್ಯಯೋಜನೆಯಾಗಿದೆ. ಅಭಿವೃದ್ಧಿಯಲ್ಲಿ ಉತ್ಪಾದನೆ ಎಷ್ಟು ಮುಖ್ಯವೋ ಹಂಚಿಕೆಯೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯ. ಆರ್ಥಿಕ ಸಮೃದ್ಧತೆಯು ಜನರ ಬದುಕಿನ ಸಮೃದ್ಧತೆಯಾಗಿ ಪರಿವರ್ತನೆಯಾಗದಿದ್ದರೆ ಅಂತಹ ಆರ್ಥಿಕ ಸಮೃದ್ಧತೆಗೆ ಯಾವ ಅರ್ಥವೂ ಇರುವುದಿಲ್ಲ. ಭರವಸೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಕುಂದು-ಕೊರತೆಗಳನ್ನು ಸರಿಪಡಿಸಿಕೊಂಡು ಅವುಗಳ ಯಶಸ್ಸಿಗೆ ನಾವೆಲ್ಲರೂ ಪ್ರಯತ್ನಿಸಬೇಕು ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ. ಏಕೆಂದರೆ, ನಾನೂ ಕೂಡ ಇಂತಹ ಬಡತನದ - ಹಸಿವಿನ ನೆಲೆಯಿಂದಲೇ ಬಂದವನು. ಬಡತನ ಎಂದರೇನು ಎಂಬುದು ನನಗೆ ಗೊತ್ತಿದೆ.

ಧರ್ಮದ ದುರುಪಯೋಗ

ಭಾರತ ಬಹುಧರ್ಮಗಳ ನೆಲೆ. ತುಂಬ ವಿಷಾದದ ಸಂಗತಿಯೆಂದರೆ ಯಾವುದು ಜನರನ್ನು, ಸಮಾಜವನ್ನು, ಜನಸಮೂಹವನ್ನು ಕಾಯಬೇಕಾಗಿತ್ತೋ, ಒಂದುಗೂಡಿಸಬೇಕಿತ್ತೋ ಆ ಧರ್ಮಗಳು ಇಂದು ಅಸಹನೆಯನ್ನು, ಅಸಮಾನತೆಯನ್ನು ಬಿತ್ತುವ ಸಾಧನಗಳಾಗಿ ಬಿಟ್ಟಿವೆ. ಧರ್ಮದ, ಧಾರ್ಮಿಕ ಸಂಸ್ಥೆಗಳ ದುರುಪಯೋಗವಾಗುತ್ತಿದೆ. ೧೨ನೆಯ ಶತಮಾನದಲ್ಲಿ ಸಿದ್ಧರಾಮ 'ಶರಣರು ಒಬ್ಬರ ಮನವ ನೋಯಿಸದವನೆ, ಒಬ್ಬರ ಮನವ ಘಾತವ ಮಾಡದವನೆ ಪರಮ ಪಾವನ' ಎನ್ನುತ್ತಾರೆ. ಇಂದು ಈ ನೈತಿಕತೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಹಬ್ಬ-ಹರದಿನಗಳು, ಉತ್ಸವ- ಆರಾಧನೆಗಳು, ಧಾರ್ಮಿಕ ಮುಖಂಡರ ಜಯಂತಿಗಳು ಜನರನ್ನು ಒಟ್ಟಿಗೆ ತರುವ ಕೆಲಸಕ್ಕೆ ಬದಲಾಗಿ ಸಮಾಜವನ್ನು ಒಡೆಯುವ ಆಯುಧಗಳಾಗುತ್ತಿವೆ. ದಯೆಯ ಬದಲಾಗಿ ಹಿಂಸೆಯನ್ನು ವಿಜೃಂಭಿಸಲಾಗುತ್ತಿದೆ. ದುಡಿಮೆಗೆ, ದುಡಿಮೆಗಾರರಿಗೆ, ಕಷ್ಟಸಹಿಷ್ಣುಗಳಿಗೆ ದೊರೆಯಬೇಕಾದಷ್ಟು ಮನ್ನಣೆ, ಪ್ರೋತ್ಸಾಹ, ನೆರವು ದೊರೆಯುತ್ತಿಲ್ಲ. ಗುಡಿಗಳು, ಮಸೀದಿಗಳು, ಗುರುದ್ವಾರಗಳು, ಚೈತ್ಯಾಲಯಗಳು, ಬಸದಿಗಳು ಮತೀಯ ಸಂಘರ್ಷದ ಕೇಂದ್ರಗಳಾಗುತ್ತಿರುವುದು ಖೇದನೀಯ. ನಾವು ಕಟ್ಟುವವರಾಗಬೇಕೇ ವಿನಾ ಕೆಡವುವರಾಗ ಬಾರದು ಕೆಡವುವುದು ಸುಲಭ. ಕಟ್ಟುವುದು ಕಷ್ಟ. ಹಿಂದಿನ ತಪ್ಪುಗಳು ಮರುಕಳಿಸಬಾರದು; ನಾವು ಮುಂದೆ ಹೋಗಬೇಕೇ ವಿನಾ ಹಿಂದೆ ಹೋಗಬಾರದು.

ಪರಿಸರ ಸಂರಕ್ಷಣೆ

ಪರ್ಯಾಯವಿಲ್ಲದ ನೈಸರ್ಗಿಕ ಸಂಪನ್ಮೂಲಗಳಾದ ನೀರು, ಭೂಮಿ, ಅರಣ್ಯಗಳು, ವನ್ಯಜೀವಿಗಳು, ಜಲಚರಪ್ರಾಣಿಗಳು, ಸೇವಿಸುವ ಗಾಳಿ ಇಂದು ಆಪತ್ತಿಗೆ ಒಳಗಾಗಿವೆ. 'ಪರಿಸರದಿಂದ ನಾವು ಎಂಬುದನ್ನು ಮರೆತು 'ನಮಗಾಗಿ ಪರಿಸರ' ಎಂದು ತಿಳಿದು ಅಭಿವೃದ್ಧಿಯ ಹೆಸರಿನಲ್ಲಿ ಜೀವಜಾಲವನ್ನು ನಾಶಮಾಡುತ್ತಿದ್ದೇವೆ. ಕರ್ನಾಟಕ ರಾಜ್ಯವು ಸಮೃದ್ಧವಾದ ಅರಣ್ಯಸಂಪತ್ತನ್ನು ಹೊಂದಿದೆ. ಅರಣ್ಯಗಳು ಬೆಟ್ಟ-ಗುಡ್ಡ-ಪರ್ವತಗಳು ನಮ್ಮ ಅನೇಕ ಪ್ರಮುಖ ನದಿಗಳ ಮೂಲಗಳಾಗಿವೆ. ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರು ವಿಷವಾದರೆ ಮನುಷ್ಯ ಬದುಕುವುದು ಹೇಗೆ? ಪರಿಸರ ಎಂಬುದು ಪ್ರಸ್ತುತ ತಲೆಮಾರಿಗೆ ಎಷ್ಟು ಮುಖ್ಯವೋ ಮುಂದಿನ ತಲೆಮಾರಿಗೂ ಅಷ್ಟೇ ಮುಖ್ಯ. ಯಾವುದನ್ನು 'ಅಂತರ-ತಲೆಮಾರು ಆಜನ್ಮ ಹಕ್ಕು' ಎನ್ನುತ್ತೇವೆಯೋ ಅದನ್ನು ಸುಸ್ಥಿತಿಯಲ್ಲಿಡುವುದು ಅಗತ್ಯವಾದ ಗುರಿಯಾಗಬೇಕು. ವನ್ಯಧಾಮ, ಪಕ್ಷಿಧಾಮ, ಸಂರಕ್ಷಿತ ಅರಣ್ಯಗಳು ನಮ್ಮಲ್ಲಿವೆ. ಅರಣ್ಯಗಳ ಒತ್ತುವರಿಯಿಂದಾಗಿ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯನಾಶದಿಂದಾಗಿ ವನ್ಯಜೀವಿಗಳಿಗೆ ಆವಾಸಸ್ಥಾನವೇ ಇಲ್ಲದಂತಾಗಿದೆ. ಇದರ ಪರಿಣಾಮವೇ 'ಮಾನವ-ವನ್ಯಜೀವಿ ಸಂಘರ್ಷ'. ಆರ್ಥಿಕ ಬೆಳವಣಿಗೆಗೆ ಒಂದು ಶಿಸ್ತಿನ ಅಗತ್ಯವಿದೆ. ಸುಸ್ಥಿರ ಅಭಿವೃದ್ಧಿ ಎನ್ನುತ್ತೇವೆ. ವಿಶ್ವಸಂಸ್ಥೆಯು ಸುಸ್ಥಿರ ಗುರಿಗಳ ಬಗ್ಗೆ ಮಾತನಾಡುತ್ತದೆ. ಆದರೆ ಸುಸ್ಥಿರತೆ ಮತ್ತು ಅಭಿವೃದ್ಧಿ ಎರಡೂ ಪರಸ್ಪರ ವಿರುದ್ಧ ನುಡಿಗಳಾಗಿಬಿಟ್ಟಿವೆ. ಇವುಗಳ ನಡುವೆ ಸಮತೋಲನವನ್ನು ಸಾಧಿಸಿಕೊಳ್ಳವ ನೀತಿಯನ್ನು ನಾವು ರೂಪಿಸಬೇಕಾಗಿದೆ. ಪರಿಸರ ಉಳಿದರೆ ಮಾನವ ಉಳಿಯುವುದು ಸಾಧ್ಯ. ಇಲ್ಲದಿದ್ದರೆ ಮಾನವನ ಅವನತಿ ಕಟ್ಟಿಟ್ಟ ಬುತ್ತಿ. ಭಾರತದ ಜೀವಜಾಲವಾಗಿರುವ ಪಶ್ಚಿಮ ಘಟ್ಟವು ಇಂದು ಅಪಾಯವನ್ನು ಎದುರಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯು ನಡೆಯಬಾರದು. ಇದರ ದೀರ್ಘಾವಧಿ ಅಪಾಯಗಳನ್ನು ನಾವು ಮನಗಂಡಿಲ್ಲ. ಪಶ್ಚಿಮ ಘಟ್ಟ ಪ್ರದೇಶವು ನಮ್ಮ ಅನೇಕ ಮುಖ್ಯ ನದಿಗಳ ಮೂಲವಾಗಿದೆ. ಇದರ ರಕ್ಷಣೆಗೆ ನಾವು ಆದ್ಯತೆ ನೀಡಬೇಕು.

ಮಹಿಳಾ ಸ್ವಾಯತ್ತತೆ

ಮಹಿಳಾ ಸಮಾನತೆ - ಲಿಂಗ ಸಮಾನತೆ ಎನ್ನುವುದು ಒಂದು ಔಪಚಾರಿಕವಾದ ಕ್ಲೀಷೆಯಾದ ಸಂಗತಿಯಾಗಿ ಬಿಟ್ಟಿದೆ. ನಮ್ಮದು ಮೂಲತಃ ಪುರುಷ ಪ್ರಧಾನ - ಗಂಡಾಳಿಕೆಯ ಸಮಾಜವಾಗಿದೆ. ಇದಕ್ಕೆ ಪುರಾವೆಗಳ ಕೊರತೆಯೇನಿಲ್ಲ. ಅಭಿವೃದ್ಧಿಯ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ಪುರುಷರು – ಮಹಿಳೆಯರ ನಡುವೆ ತೀವ್ರ ಅಸಮಾನತೆಯಿರುವುದನ್ನು ಕಾಣಬಹುದು. ನಮ್ಮ ಸಮ್ಮೇಳನಗಳಲ್ಲಿ, ಸಮಾವೇಶಗಳಲ್ಲಿ 'ಅವರಿಗೂ ಒಂದು ಸ್ಥಾನ' ಎನ್ನುವಂತೆ ಮಹಿಳೆಯರ ವಿಷಯವನ್ನು ಚರ್ಚೆಗೆ ಇಟ್ಟುಕೊಳ್ಳಲಾಗುತ್ತದೆ. ಆದರೆ ಅವರ ಹಕ್ಕುಗಳನ್ನು ಸಾಂವಿಧಾನಿಕವಾದ ನೆಲೆಯಲ್ಲಿ ನಾವು ನೀಡುವುದಕ್ಕೆ ಸಿದ್ಧವಿಲ್ಲ. ಇದಕ್ಕೆ ಅಪ್ಪಟ ನಿದರ್ಶನವೆಂದರೆ, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ. ನಮಗೆ ಸ್ವಾತಂತ್ರ್ಯ ಬಂದ ೭೭ ವರ್ಷಗಳಾದರೂ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ನೀತಿಯನ್ನು ಅನುಷ್ಠಾನಗೊಳಿಸುವುದು ಸಾಧ್ಯವಾಗಿಲ್ಲ. ಇದರ ಬಗ್ಗೆ ಆಶ್ವಾಸನೆಗಳಿಗೇನೂ ಬರವಿಲ್ಲ. ಲೋಕಸಭೆಯಲ್ಲಿನ ನಿರ್ಣಯಗಳಿಗೂ ಬರವಿಲ್ಲ. ಆದರೆ ವಸ್ತುಸ್ಥಿತಿಯೇನು? ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ೨೦೨೪ರಲ್ಲಿ ಶೇ. ೧೩.೬೫ ರಷ್ಟಿದ್ದರೆ, ಕರ್ನಾಟಕ ವಿಧಾನ ಸಭೆಯಲ್ಲಿ ಮಹಿಳೆಯರ ಪ್ರಮಾಣ ಶೇ.೫ ರಷ್ಟು ಮಾತ್ರ ಇದೆ.

ಹೇಳದಿರುವುದೇ ಲೇಸು. ಇಂದು ಹೆಣ್ಣು ಮಕ್ಕಳು ಹುಟ್ಟುವುದೇ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಏನನ್ನೂ ಹೇಳದಿರುವುದೇ ಲೇಸು. ಇಂದು ಹೆಣ್ಣು ಮಕ್ಕಳು ಹುಟ್ಟುವುದೇ ದುರ್ಲಭವಾಗಿದೆ; ಹುಟ್ಟಿದ ಮೇಲೆ ಬದುಕುಳಿಯುವುದು, ಉಳಿದರೆ ಬೆಳೆಯುವುದು ಸಾಧ್ಯವಾಗುತ್ತಿಲ್ಲ; ಬೆಳೆದರೆ ಬದುಕನ್ನು ಸಮೃದ್ಧಗೊಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಲಿಂಗಸಮಾನತೆಯ ಬಗ್ಗೆ, ಮಹಿಳಾ ಸ್ವಾಯತ್ತತೆ ಬಗ್ಗೆ ಮಹಿಳೆಯರೇ ಮಾತನಾಡಿದ್ದು ೧೨ನೆಯ ಶತಮಾನದ ವಚನ ಚಳುವಳಿಯಲ್ಲಿ. ಅಂದು ಈ ನೆಲದಲ್ಲಿ ಬಿತ್ತನೆಯಾದ ಲಿಂಗ ಸಮಾನತೆಯ ಮೌಲ್ಯವನ್ನು ಇಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ನಾವು ಮನಗಾಣಬೇಕು.

ಕರ್ನಾಟಕದ ಸಾಂಸ್ಕೃತಿಕ ನಾಯಕ

'ಅಪ್ಪನು ನಮ್ಮ ಮಾದಾರ ಚೆನ್ನಯ್ಯ' ಎಂದ, 'ಇವ ನಮ್ಮವ ಇವ ನಮ್ಮವ' ಎಂದ ಸಮಾನತೆಯ ಹರಿಕಾರ, ಬಸವಣ್ಣನವರನ್ನು 'ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ದಿಟ್ಟತನದಿಂದ ಘೋಷಿಸಿದ ಕರ್ನಾಟಕ ಸರ್ಕಾರವನ್ನು, ವಿಶೇಷವಾಗಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರನ್ನು ತುಂಬು ಹೃದಯದಿಂದ, ಸಮಸ್ತ ಕರ್ನಾಟಕಸ್ಥರ ಪರವಾಗಿ ನಾನು ಅಭಿನಂದಿಸುತ್ತೇನೆ. ಇದರಲ್ಲಿ ರಾಜಕೀಯವನ್ನು ಕಾಣುವುದು ಸರಿಯಲ್ಲ. ಬಸವಣ್ಣನವರು ಯಾವುದೋ ಒಂದು ಸಮಾಜದ, ಯಾವುದೋ ಒಂದು ಪ್ರದೇಶದ ಪ್ರತಿನಿಧಿಯಲ್ಲ. "ಸಾಂಸ್ಕೃತಿಕ ನಾಯಕ' ಎನ್ನುವುದು ಬಸವಣ್ಣ ಪ್ರತಿಪಾದಿಸಿದ, ಮಾನವೀಯತೆ ಮತ್ತು ಸಮಾನತೆಯ ಘೋಷಣೆಯಾಗಿದೆ; 'ಎಲ್ಲರನ್ನು ಒಳಗೊಳ್ಳುವುದು', 'ಸಮಾಜದ ಅಂಚಿನಲ್ಲಿದ್ದವರನ್ನು ಮುಖ್ಯವಾಹಿನಿಗೆ ಕರೆದುಕೊಳ್ಳುವುದು; 'ಕಾಯಕ ದುಡಿಮೆ'ಯೇ ದೇವರೆಂದು ತಿಳಿಯುವುದು, ಶಿವಶರಣರ- ಶಿವಶರಣೆಯರ ಆದರ್ಶಗಳಿಗೆ ನೀಡುವ ಮನ್ನಣೆಯಾಗಿದೆ. ಎಲ್ಲಿಯವರೆಗೆ ನಾವು, ಕರ್ನಾಟಕಸ್ಥರು ತಾರತಮ್ಯರಹಿತವಾದ, ಸಮಾನತೆಯಿಂದ ಕೂಡಿದ, ಮಾದಾರ ಚೆನ್ನಯ್ಯನ ಸಂಕುಲಕ್ಕೆ ಸಮಾನ ಸ್ಥಾನಮಾನ ನೀಡುವುದಿಲ್ಲವೋ ಅಲ್ಲಿಯವರೆಗೆ 'ಸಾಂಸ್ಕೃತಿಕ ನಾಯಕ' ಎನ್ನುವುದು ಬರೀ ಘೋಷಣೆಯಾಗುತ್ತದೆ. ಈ ಸಮ್ಮೇಳನದ ಮೂಲಕ ನಾವು ನಮ್ಮ ಸಂವಿಧಾನವು ನೀಡಿರುವ "ಸ್ವಾತಂತ್ರ್ಯ, ಸಮಾನತೆ, ಸೌಹಾರ್ದತೆ, ಸಹೋದರತ್ವ” ಮೌಲ್ಯಗಳನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಾಗ ಮಾತ್ರ 'ಸಾಂಸ್ಕೃತಿಕ ನಾಯಕ' ಎಂಬುದಕ್ಕೆ ಅರ್ಥ-ಮಹತ್ವ-ಗುರುತ್ವ ಬರುತ್ತದೆ ಎಂದು ಹೇಳಬೇಕಾಗಿಲ್ಲ. ಬಸವ ಪ್ರಣಾಳಿಕೆಯ ಮೌಲ್ಯಗಳಿಗೂ ಮತ್ತು ನಮ್ಮ ಸಂವಿಧಾನವು ಒಳಗೊಳ್ಳುವ ಮೌಲ್ಯಗಳಿಗೂ ಸಾಮ್ಯತೆಯಿದೆ. ಇದನ್ನು ನಾವು ಮರೆಯಬಾರದು. ಯಾವುದನ್ನು ರವೀಂದ್ರನಾಥ್ ಟಾಗೂರರು 'ದುಡಿಮೆಯೇ ದೇವರು' ಎಂದು ೨೦ನೆಯ ಶತಮಾನದಲ್ಲಿ ಹೇಳಿದ್ದರೋ ಅದನ್ನು ವಚನಕಾರರು ೧೨ ನೆಯ ಶತಮಾನದಲ್ಲಿಯೇ ಹೇಳಿದ್ದರು ಮತ್ತು ಅದನ್ನು ಪಾಲಿಸಿದರು. ಅಭಿವೃದ್ಧಿಯ ಮೂಲದ್ರವ್ಯವೇ ದುಡಿಮೆ-ಕಾಯಕ.

ಕನ್ನಡಿಗರ ಉದ್ಯೋಗ ಮತ್ತು ಬದುಕು

ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ತೀವ್ರಗತಿಯಲ್ಲಿ ನಿಯಂತ್ರಿಸಿರುವ ರಾಜ್ಯ ಕರ್ನಾಟಕ ರಾಜ್ಯದಲ್ಲಿ ಜನಸಂಖ್ಯೆಯು ಸಮಸ್ಯೆಯಾಗಿ ಉಳಿದಿಲ್ಲ. ಯಾವುದನ್ನು ಫಲವತ್ತತೆಯ ದರ ಎನ್ನುತ್ತೇವೆಯೋ ಅದು ಕನಿಷ್ಟಮಟ್ಟಕ್ಕಿಳಿದಿದೆ. ಆದರೆ ಅನೇಕ ಕಾರಣಗಳಿಂದ ನಮ್ಮ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಹೆಚ್ಚು ದೊರೆಯುತ್ತಿಲ್ಲ. ನಿರುದ್ಯೋಗವು ನಮ್ಮ ಯುವಜನತೆಯ ಬದುಕನ್ನು ದುರ್ಭರಗೊಳಿಸುತ್ತಿದೆ. ಇಂದು ನಮ್ಮ ಜನಸಂಖ್ಯೆಯಲ್ಲಿ ಯುವಜನತೆಯ ಪ್ರಮಾಣ ಅಧಿಕವಾಗಿದೆ. ಈ ಬಗ್ಗೆ ೧೯೮೬ರ ಶ್ರೀಮತಿ ಸರೋಜಿನಿ ಮಹಿಷಿ ಸಮಿತಿ ವರದಿಯಲ್ಲಿ ಕನ್ನಡಿಗರಿಗೆ ಉದ್ಯೋಗವನ್ನು ಮೀಸಲಿಡುವ ಶಿಫಾರಸ್ಸುಗಳನ್ನು ಮಾಡಿತ್ತು. ಗ್ರೂಪ್ 'ಸಿ' ಮತ್ತು 'ಡಿ' ವರ್ಗಗಳಲ್ಲಿ ಕನ್ನಡಿಗರಿಗೆ ಶೇ. ೮೦ ರಷ್ಟು ಉದ್ಯೋಗವನ್ನು ಮೀಸಲಿಡಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿತ್ತು. ಸಾರ್ವಜನಿಕ ವಲಯವಲ್ಲದೆ ಖಾಸಗಿ ವಲಯದಲ್ಲಿಯೂ ಕನ್ನಡಿಗರಿಗೆ ಉದ್ಯೋಗವನ್ನು ಮೀಸಲಿಡುವ ಬಗ್ಗೆ ಅದು ಶಿಫಾರಸ್ಸು ಮಾಡಿತ್ತು. ಆದರೆ ಆ ವರದಿ ಇನ್ನೂ ಅನುಷ್ಠಾನಗೊಂಡಿಲ್ಲ.

ಇಂದು ನಮ್ಮ ರಾಜಧಾನಿ ಬೆಂಗಳೂರು ಉತ್ತರ ಭಾರತದಿಂದ ವಲಸೆ ಬರುವ ಕಾರ್ಮಿಕರಿಂದ ತುಂಬಿ ಹೋಗಿದೆ. ಇದಲ್ಲದೆ ಕೇಂದ್ರ ಸರ್ಕಾರದ ಹಿಂದಿ ಭಾಷೆಯನ್ನು ಹೇರುವ ನೀತಿಯಿಂದಾಗಿ ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಹಿಂದಿ ಭಾಷಿಕರು ತುಂಬಿ ಹೋಗಿದ್ದಾರೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿಗೆ ಪ್ರಾಶಸ್ತ್ರವನ್ನು ನೀಡುತ್ತಾ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದೆ.

ಇದರಿಂದ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಇಲ್ಲವಾಗುತ್ತಿವೆ.

ಆದ್ದರಿಂದ ಸರ್ಕಾರವು ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವುದು ಸಂವಿಧಾನ ಅಥವಾ ಒಕ್ಕೂಟ ತತ್ವಕ್ಕೆ ವಿರೋಧಿ ಕ್ರಮವೇನಲ್ಲ. ಖಾಸಗಿ ವಲಯದ ಉದ್ದಿಮೆಗಳು ಕರ್ನಾಟಕದ ಭೂಮಿ, ನೀರು, ಗಾಳಿ, ವಿದ್ಯುತ್ ಬಳಸಿಕೊಂಡು ಸಮೃದ್ಧವಾಗಿ ಬೆಳೆಯುತ್ತಿವೆ ಅಪಾರ ಲಾಭ ಗಳಿಸುತ್ತಿವೆ. ಅವುಗಳ ಹಿತದ ದೃಷ್ಟಿಯಿಂದಲೂ ಖಾಸಗಿ ವಲಯದಲ್ಲಿ ಅನಿವಾರ್ಯವೆನಿಸಿದ ವಿಶೇಷ ಉನ್ನತ ಹುದ್ದೆಗಳನ್ನು ಹೊರತುಪಡಿಸಿ ಉಳಿದಂತೆ ಕನ್ನಡಿಗರಿಗೆ ಉದ್ಯೋಗವನ್ನು ಮೀಸಲಿಡುವ ಬಗ್ಗೆ ಸರ್ಕಾರ ಹಿಂಜರಿಯಕೂಡದು ಎಂದು ನಾನು ಕನ್ನಡಿಗರ ಪರವಾಗಿ ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ನಮ್ಮ ಯುವಜನತೆಯು ಬಂಡೇಳುವ ಸಾಧ್ಯತೆಯಿದೆ. ಕನ್ನಡದ ಯುವಜನ ನಮ್ಮ ರಾಜ್ಯದಲ್ಲಲ್ಲದೆ ಬೇರೆಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವುದು ಸಾಧ್ಯ?

ಗಡಿನಾಡು

ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಗಳಿಸಿದ ನಂತರ, ಬ್ರಿಟಿಷರು ಬಿಟ್ಟುಹೋದ ದೇಶದಲ್ಲಿ ಜರುಗಿದ ಪ್ರಮುಖ, ಅಸಾಮಾನ್ಯ ಬೆಳವಣಿಗೆ ಎಂದರೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಭಾರತ ಸಂವಿಧಾನದ ಅಂಗೀಕಾರ ಮತ್ತು ಅದರ ಆಧಾರದ ಮೇಲೆ ಬಹುರೂಪಿ, ಬಹುಭಾಷಾ ಭಾರತವನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ಒಕ್ಕೂಟ ದೇಶವಾಗಿ ಪ್ರಜೆಗಳಿಂದ ಸ್ವೀಕಾರ ಬ್ರಿಟಿಷರ ಆಡಳಿತದಲ್ಲಿ ವಿಪರೀತವಾಗಿ ಹರಿದು ಹಂಚಿ ಹೋಗಿದ್ದ ಭಾರತದಲ್ಲಿ ಭೌಗೋಳಿಕ, ಭಾಷಿಕ, ಸಾಂಸ್ಕೃತಿಕ ಅಸ್ಮಿತೆಗಳಿಗೆ ತಕ್ಕಂತೆ ವಿಭಿನ್ನ ರಾಜ್ಯಗಳನ್ನು ರೂಪಿಸುವುದು ಮುಂದಿನ ಅಗತ್ಯವಾಗಿತ್ತು. ಅದಕ್ಕಾಗಿ ನಡೆದ ಹೋರಾಟಗಳಲ್ಲಿ ಪ್ರಮುಖವಾದದ್ದು ಏಕೀಕರಣ ಹೋರಾಟ. ಭಾಷಾವಾರು ಪ್ರಾಂತ್ಯಗಳ ರಚನೆಯ ಪರಿಕಲ್ಪನೆಯಂತೆ, ೧೯೫೬ರ ನವೆಂಬರ್ ೧ ರಂದು ಶ್ರೀ ಸಿದ್ದವನಹಳ್ಳಿ ನಿಜಲಿಂಗಪ್ಪನವರ ನಾಯಕತ್ವದಲ್ಲಿ ಏಕೀಕೃತ "ವಿಶಾಲ ಮೈಸೂರು" ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಮುಂದೆ ಜನರ ಅಪೇಕ್ಷೆಯಂತೆ ನವೆಂಬರ್ ೧, ೧೯೭೩ ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸು ಅವರು "ಕರ್ನಾಟಕ" ಎಂದು ನಾಮಕರಣ ಮಾಡಿದರು.

ಕರ್ನಾಟಕದ ಏಕೀಕರಣವಾಗಿ ಅರವತ್ತೆಂಟು ವರ್ಷಗಳ ನಂತರವೂ ನೆರೆಹೊರೆಯ ರಾಜ್ಯಗಳ ಜೊತೆ ಗಡಿವಿವಾದ ಮುಂದುವರೆದಿದೆ; ಮತ್ತು ಆ ಭೌಗೋಳಿಕ ರೂಪದ ಭಾಷಿಕ- ಸಾಂಸ್ಕೃತಿಕ ನೋವು ಮುಂದುವರೆಯಲಿದೆ. ಇಂದೂ ಮುಂದೂ ಕನ್ನಡನಾಡಿನ ಪ್ರಜೆಗಳಾಗಿ ಇರಬೇಕಾದ ಕನ್ನಡ ಮಕ್ಕಳು ಗಡಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಂತಾಗಬಾರದು.

ಈ ಹಿನ್ನೆಲೆಯಲ್ಲಿ, ಗಡಿನಾಡು ಪ್ರದೇಶಗಳಲ್ಲಿರುವ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡದ ವಾತಾವರಣದಲ್ಲಿಯೇ ಬೆಳೆಸುವ ಬಗ್ಗೆ, ಅವರಲ್ಲಿ ಕನ್ನಡತನ, ಕನ್ನಡ ಪ್ರಜ್ಞೆಗಳನ್ನು ಮೂಡಿಸುವ ಬಗ್ಗೆ ತಾತ್ವಿಕ ನಿರ್ಧಾರವನ್ನು ಕೈಗೊಳ್ಳಬೇಕು. ಕನ್ನಡದ ಕುಟುಂಬಗಳ ಮಕ್ಕಳ ಶಿಕ್ಷಣದ ಭಾಷೆ ಎಲ್ಲಿ ಯಾವುದಾದರೂ ಆಗಿರಲಿ ಬೆಳವಣಿಗೆಯ ಭಾಷೆ ಕನ್ನಡವೇ ಆಗಿರಬೇಕು. ನೆರೆರಾಜ್ಯಗಳ ಗಡಿ ಪ್ರದೇಶಗಳಲ್ಲಿ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಗದಿಯಾಗಿ ನಡೆಸುತ್ತ ಅವರೆಲ್ಲರಿಗೆ ಭಾವನಾತ್ಮಕ ಒತ್ತಾಸೆ ನೀಡುವುದು, ನಾವು ಎಲ್ಲಿದ್ದರೂ ಒಂದೇ ಎಂಬ ಭಾವನೆ ಮೂಡಿಸುವುದು ಕರ್ನಾಟಕ ಸರ್ಕಾರದ ಕರ್ತವ್ಯ.

ಪುಸ್ತಕ ಸಂಸ್ಕೃತಿ

ಗ್ರಂಥಾಲಯಗಳು ಜ್ಞಾನದ ಭಂಡಾರಗಳು. ಪುಸ್ತಕ ಸಂಸ್ಕೃತಿಯ ಬೆಳವಣಿಗೆಗೆ ಸರ್ಕಾರ ಪ್ರೋತ್ಸಾಹಿಸಬೇಕು. ಗ್ರಂಥಾಲಯ ತೆರಿಗೆ ಮೂಲಕ ಸರ್ಕಾರಕ್ಕೆ ಅಪಾರ ಹಣ ಬರುತ್ತದೆ. ಆದರೆ ಅದನ್ನು ಗ್ರಂಥಾಲಯದ ಬೆಳವಣಿಗೆಗೆ ಪೂರ್ಣವಾಗಿ ಬಳಸುತ್ತಿಲ್ಲ. ಇದರಿಂದ ಪುಸ್ತಕ ಪ್ರಕಟಣೆ, ಪುಸ್ತಕ ವ್ಯಾಪಾರ ಸಂಕಷ್ಟಕ್ಕೆ ಒಳಗಾಗಿದೆ. 'ಸಗಟು' ಖರೀದಿ ವ್ಯವಸ್ಥೆ ಕ್ರಮವಾಗಿ ನಡೆಯುತ್ತಿಲ್ಲ. ವಾರ್ಷಿಕ ಖರೀದಿಯಲ್ಲಿ ಎರಡು-ಮೂರು ವರ್ಷ ವಿಳಂಬವಾಗುತ್ತಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯಗಳು ಕಟ್ಟಡದ ಕೊರತೆ, ಅನುದಿನದ ವಾರ್ತಾ ಪತ್ರಿಕೆಗಳ ಮತ್ತು ವಾರ್ಷಿಕವಾಗಿ ಪುಸ್ತಕಗಳ ಸಂಗ್ರಹ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರ ಬಗ್ಗೆ ಸರ್ಕಾರ ಸೂಕ್ತ ಗಮನ ನೀಡಬೇಕು.

ಕರ್ನಾಟಕ ಸರ್ಕಾರದ ವಾರ್ಷಿಕ ಬಜೆಟ್ ಗಾತ್ರ ಮೂರು ಲಕ್ಷ ಕೋಟಿ ಮೀರುತ್ತಿದೆ. ಇದರಲ್ಲಿ ಕನಿಷ್ಟ ಶೇ. ೦.೫ ರಷ್ಟನ್ನಾದರೂ ಪುಸ್ತಕಗಳ ಖರೀದಿ ಮತ್ತು ಗ್ರಂಥಾಲಯಗಳ ಅಭಿವೃದ್ಧಿಗೆ ಮೀಸಲಿಡಬೇಕು. ಅಭಿವೃದ್ಧಿ ಎನ್ನುವುದು ಕೇವಲ ಎಕ್ಸ್‌ಪ್ರೆಸ್ ಹೆದ್ದಾರಿಗಳು, ಗಗನಚುಂಬಿ ಕಟ್ಟಡಗಳು, ನೀರಾವರಿ ಅಣೆಕಟ್ಟೆಗಳು, ವಿದ್ಯುತ್ ಸ್ಥಾವರಗಳು ಮಾತ್ರವಲ್ಲ. ಅಭಿವೃದ್ಧಿಗೆ ಇವೆಲ್ಲವೂ ಅವಶ್ಯಕ. ಆದರೆ ಇವುಗಳ ಜೊತೆಯಲ್ಲಿ ಪುಸ್ತಕ ಸಂಸ್ಕೃತಿ ಮೂಲಕ ಜನಸಮುದಾಯದ ಜ್ಞಾನದ ದಾಹವನ್ನು ಹಿಂಗಿಸುವುದೂ ಅಷ್ಟೇ ಮಹತ್ವದ ಅಗತ್ಯವಾಗಿದೆ. ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಆರೋಗ್ಯ, ಸಾಮಾಜಿಕ ಸಾಮರಸ್ಯ, ಗ್ರಾಮೀಣ ಕುಶಲ ಕಸುಬುಗಳು ಮುಂತಾದವುಗಳ ಬೆಳವಣಿಗೆಯಲ್ಲಿ, ಅವುಗಳ ಆಧುನೀಕರಣದಲ್ಲಿ, ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಪುಸ್ತಕಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಸರ್ಕಾರವು ಪುಸ್ತಕ ನೀತಿಯನ್ನು ರೂಪಿಸಬೇಕು. ಪುಸ್ತಕಗಳ ಸಗಟು ಖರೀದಿಯನ್ನು ವಾರ್ಷಿಕವಾಗಿ ತಪ್ಪದೆ ನಡೆಸಬೇಕು. ನಮ್ಮ ಜನರು ಇಂದಿಗೂ ಕಂದಾಚಾರದಲ್ಲಿ, ಮೂಢನಂಬಿಕೆಗಳಲ್ಲಿ, ಅರ್ಥರಹಿತ ಆಚರಣೆಗಳಲ್ಲಿ, ದಾನ-ದಕ್ಷಿಣೆ ಆರಾಧನೆಗಳಲ್ಲಿ ಮುಳುಗಿ ಹೋಗಿದ್ದಾರೆ. ಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವುದಕ್ಕೆ ಪುಸ್ತಕ ಸಂಸ್ಕೃತಿಯ ಪಾತ್ರ ನಿರ್ಣಾಯಕವಾದುದಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಂಥಾಲಯ ಮತ್ತು ವಾಚನಾಲಯಗಳ ಸೌಲಭ್ಯ ವಿಸ್ತರಣೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಯುವಜನರ ರಾಜಕೀಯ-ಸಾಮಾಜಿಕ ಪ್ರಜ್ಞಾವಿಕಾಸಕ್ಕೆ ನೆರವಾಗುತ್ತದೆ.

ಪ್ರವಾಸೋದ್ಯಮದ ಬೆಳವಣಿಗೆ

ಇಂದು ವಿಶ್ವದಾದ್ಯಂತ ಪ್ರವಾಸೋದ್ಯಮವು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಅನೇಕ ದೇಶಗಳಲ್ಲಿ ಪ್ರವಾಸೋದ್ಯಮವು ಅಲ್ಲಿನ ಸರ್ಕಾರಗಳ ವರಮಾನದ ಮೂಲವಾಗಿದೆ. ಕರ್ನಾಟಕವು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ರಾಜ್ಯವಾಗಿದೆ. ಇಲ್ಲಿನ ಅನೇಕ ಚಾರಿತ್ರಿಕ ಸ್ಮಾರಕಗಳನ್ನು "ವಿಶ್ವ ಪರಂಪರೆ' ತಾಣಗಳೆಂದು ವಿಶ್ವಸಂಸ್ಥೆಯು ಘೋಷಿಸಿದೆ. ಕರ್ನಾಟಕವು ಸಮೃದ್ಧವಾದ ಪ್ರಾಕೃತಿಕ ಕೇಂದ್ರಗಳನ್ನು ಹೊಂದಿದೆ. ಇಲ್ಲಿನ ಜಲಪಾತಗಳು, ಕರಾವಳಿ ಪ್ರದೇಶ, ಐತಿಹಾಸಿಕ ಸ್ಮಾರಕಗಳು, ಅರಣ್ಯ, ಬೆಟ್ಟ-ಗುಡ್ಡಗಳು, ನದಿಗಳು, ವನ್ಯಜೀವಿಧಾಮಗಳು, ಗುಡಿಗಳು, ಚಾರಿತ್ರಿಕ ಸ್ಮಾರಕಗಳು ಮುಂತಾದವುಗಳನ್ನು ಜಾಗತಿಕವಾಗಿ ಆಕರ್ಷಣೀಯವಾಗಿ ಬೆಳೆಸಬಹುದಾಗಿದೆ. ವಿದೇಶಿ ಪ್ರವಾಸಿಗರ ಜೊತೆಗೆ ಆಂತರಿಕವಾಗಿ ನಮ್ಮ ದೇಶದ ಜನರಿಗೆ ವೀಕ್ಷಿಸಲು ಅನುಕೂಲವಾಗುವಂತೆ ಪ್ರವಾಸಿ ಕೇಂದ್ರಗಳನ್ನು ಬೆಳೆಸಬೇಕು. ಹಾಗೆಯೇ ನಮ್ಮ ಶಾಲಾ-ಕಾಲೇಜು ಮಕ್ಕಳಿಗೆ ನಮ್ಮ ಇತಿಹಾಸ, ಪ್ರಕೃತಿ, ಕರಾವಳಿ, ವನ್ಯಜೀವಿಧಾಮ ಮುಂತಾದವುಗಳ ಪರಿಚಯವಾಗುವಂತೆ ನಿಯತಕಾಲಿಕವಾಗಿ ಪ್ರವಾಸಗಳನ್ನು ಏರ್ಪಡಿಸುವಂತೆ ಒಂದು ಕ್ರಮಬದ್ಧ ಯೋಜನೆಯನ್ನು ರೂಪಿಸಬೇಕು.

ಕನ್ನಡ ಶಾಸ್ತ್ರೀಯ ಭಾಷೆ

ಬಹುದಿನಗಳ ಹೋರಾಟದ ಫಲವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಮನ್ನಣೆ ೨೦೦೮ರಲ್ಲಿ ದೊರೆಯಿತು. ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ೨೦೧೧ರಲ್ಲಿ ತಾತ್ಕಾಲಿಕವಾಗಿ ಮೈಸೂರಿನಲ್ಲಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥಾನದಲ್ಲಿ ತೆರೆಯಲಾಯಿತು. ಈಗ ಅದು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ತಮಿಳು ಶಾಸ್ತ್ರೀಯ ಭಾಷಾ ಕೇಂದ್ರವು ಅಲ್ಲಿನ ಭಾಷೆ ಮತ್ತು ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಏನೆಲ್ಲ ಕೆಲಸ ಮಾಡಿದೆಯೋ ಆ ರೀತಿಯಲ್ಲಿ ನಮ್ಮ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅದನ್ನು ಒಂದು ಸ್ವಾಯತ್ತ ಕೇಂದ್ರವನ್ನಾಗಿ ಮಾಡಿ ಶಾಸ್ತ್ರೀಯ ಭಾಷೆಗಳಿಗೆ ಒಕ್ಕೂಟ ಸರ್ಕಾರವು ನೀಡುವ ಎಲ್ಲ ಸವಲತ್ತು, ಅನುದಾನ, ನೆರವುಗಳನ್ನು ಕೇಂದ್ರವು ಒದಗಿಸುವಲ್ಲಿ ಅಥವಾ ಅಂತಹ ನೆರವನ್ನು ಪಡೆದುಕೊಳ್ಳುವಲ್ಲಿ ನಾವು ಯಶಸ್ವಿಯಾಗಿಲ್ಲ. ಅದೊಂದು ಉನ್ನತ ಕನ್ನಡ ಅಧ್ಯಯನ ಕೇಂದ್ರವಾಗಿ ಬೆಳೆಯುತ್ತಿಲ್ಲ. ಶಾಸ್ತ್ರೀಯ ಭಾಷೆಗಳಿಗೆ ಒಕ್ಕೂಟ ಸರ್ಕಾರ ನೀಡುತ್ತಿರುವ ಪ್ರಶಸ್ತಿಗಳನ್ನು ಸ್ಥಾಪಿಸುವ ಮತ್ತು ಅದನ್ನು ಕನ್ನಡದ ವಿದ್ವಾಂಸರಿಗೆ ನೀಡುವ ಕ್ರಮ ಸರಿಯಾಗಿ ನಡೆಯುತ್ತಿಲ್ಲ. ಉದಾ: ತಮಿಳು ಸಂಶೋಧನೆಗೆ ದೊಡ್ಡ ಮೊತ್ತದ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರವು ಚೆನ್ನೈನಲ್ಲಿ ೧೭ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದೆ. ಅದು ಅನೇಕ ವಿಶ್ವ ಶಾಸ್ತ್ರೀಯ ತಮಿಳು ಭಾಷಾ ಸಮ್ಮೇಳನಗಳನ್ನು, ಕಾರ್ಯಾಗಾರಗಳನ್ನು ಸಂಘಟಿಸುತ್ತಿದೆ. ಇದೇ ರೀತಿಯಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರವನ್ನು ಬೆಳೆಸುವಲ್ಲಿ ಸರ್ಕಾರ ಮತ್ತು ಕನ್ನಡ ವಿದ್ವಾಂಸರು ಗಮನ ನೀಡಬೇಕು.

ಕೊನೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಈ ವೇದಿಕೆಯಿಂದ ಕನ್ನಡಿಗರ ಪರವಾಗಿ ರಾಜ್ಯ ಸರ್ಕಾರದಲ್ಲಿ ಪ್ರಮುಖ ಹಕ್ಕೊತ್ತಾಯಗಳನ್ನು ಇಲ್ಲಿ ನೀಡುತ್ತಿದ್ದೇನೆ.

ಹಕ್ಕೊತ್ತಾಯಗಳು

  1. ಪ್ರಾಥಮಿಕ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು.
  2.  ಅಗತ್ಯವೆನಿಸಿರುವ ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು ಮತ್ತು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು, ಎಲ್ಲ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ರಾಜ್ಯದ ಆಯವ್ಯಯದಲ್ಲಿ ಕನಿಷ್ಟ ಶೇ.೧೫ರಷ್ಟು ಭಾಗ ಶಿಕ್ಷಣಕ್ಕೆ ಮೀಸಲಿರಬೇಕು.
  3.  ಕಳೆದ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನ ಮಹಿಷಿ ವರದಿಯನ್ನು ಕೂಡಲೇ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು. ಅನುಷ್ಠಾನದ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಬೇಕು. ಸಾರ್ವಜನಿಕವಿರಲಿ, ಖಾಸಗಿಯಿರಲಿ ಉದ್ಯೋಗಾವಕಾಶಗಳಲ್ಲಿ ವಿಶೇಷ ಅರ್ಹತೆಯ ಉನ್ನತ ಹುದ್ದೆಗಳ ಹೊರತಾಗಿ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಪೂರ್ಣವಾಗಿ ಕನ್ನಡಿಗರಿಗೇ ಮೀಸಲಿಡಬೇಕು. ಕಾಲ-ಕಾಲಕ್ಕೆ ಉದ್ಯೋಗ ಮಾಹಿತಿ ದೊರೆಯುವಂತಾಗಬೇಕು.
  4. ನಾಡಿನ ವಿಶೇಷ ವ್ಯವಸ್ಥೆಗಳಾದ ಕನ್ನಡ ವಿಶ್ವವಿದ್ಯಾಲಯ ಮತ್ತು ಜಾನಪದ ವಿಶ್ವವಿದ್ಯಾಲಯಗಳು ಅನುಭವಿಸುತ್ತಿರುವ ಹಣಕಾಸು ಮತ್ತು ಭೋದನಾ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಕೂಡಲೇ ಕ್ರಮಕೈಗೊಳ್ಳಬೇಕು.
  5.  ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸ್ವತಂತ್ರ ಸ್ವಾಯತ್ತ ಕೇಂದ್ರವನ್ನಾಗಿ ಬೆಳೆಸಲು ಮತ್ತು ಕೇಂದ್ರದ ನೆರವನ್ನು ಪಡೆಯಲು ಅಗತ್ಯ ವ್ಯವಸ್ಥೆಮಾಡಬೇಕು.
  6.  ಅಪಾರ ಸಂಭಾವ್ಯ ಸಾಮರ್ಥ್ಯವಿರುವ ಪ್ರವಾಸೋದ್ಯಮವನ್ನು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ದೃಷ್ಟಿಯಿಂದಷ್ಟೇ ಅಲ್ಲದೆ ಆದಾಯ ಮತ್ತು ಉದ್ಯೋಗಾವಕಾಶ ದೃಷ್ಟಿಯಿಂದಲೂ ಅದನ್ನು ವಿಸ್ತರಣೆಯ ವಲಯವನ್ನಾಗಿ ಅಭಿವೃದ್ಧಿಗೊಳಿಸಬೇಕು.
  7.  ಕೈಗಾರಿಕೋದ್ಯಮಗಳ ಸ್ಥಾಪನೆ ಎಲ್ಲ ಜಿಲ್ಲೆಗಳಿಗೂ ಹಂಚಿಕೆಯಾಗಬೇಕು. ಯಾವುದೇ ಉದ್ಯಮವಿರಲಿ, ಅಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶದ ಕಟ್ಟುನಿಟ್ಟಿನ ಷರತ್ತು ವಿಧಿಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.
  8.  ಸರ್ಕಾರದ ಸಚಿವಾಲಯ ಕಛೇರಿಗಳ ಹೊರತಾಗಿ, ಉಳಿದ ಇಲಾಖೆಗಳ ನಿರ್ದೇಶನಾಲಯ ಕಛೇರಿಗಳನ್ನು ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾಯಿಸಿ ಬೆಂಗಳೂರಿನ ಒತ್ತಡವನ್ನು ತಪ್ಪಿಸಬೇಕು.
  9. . ಶಿಕ್ಷಣ ಮಾಧ್ಯಮ ಅಂತಾರಾಜ್ಯ ಗಡಿ, ಜಲ ಮತ್ತು ವಲಸೆ ಸಮಸ್ಯೆಗಳನ್ನು ಪರಿಹರಿಸಲು ಒಂದು ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.
  10.  ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವ ದಿಸೆಯಲ್ಲಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕಾಲಬದ್ಧ ಕ್ರಮಕೈಗೊಳ್ಳಬೇಕು.
  11.  ಬಸವಣ್ಣನವರನ್ನು ರಾಜ್ಯದ 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿರುವ ಮತ್ತು ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸುತ್ತಿರುವ ರಾಜ್ಯ ಸರ್ಕಾರ, ಹನ್ನೆರಡನೆಯ ಶತಮಾನದ ಶರಣರ ಕ್ಷೇತ್ರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ಕಾಗಿ ಒಂದು ಸ್ವಾಯತ್ತ ಪ್ರಾಧಿಕಾರ ರಚಿಸಬೇಕು. ಈಗಾಗಲೇ ಆಶ್ವಾಸನೆ ನೀಡಿರುವಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ವಚನ ವಿಶ್ವವಿದ್ಯಾಲಯವನ್ನು ಆರಂಭಿಸಬೇಕು.
  12. . ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಕಛೇರಿಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರುವುದು ಕಡ್ಡಾಯವಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
  13. . ಪರಿಸರದ, ವಿಶೇಷವಾಗಿ, ಪಶ್ಚಿಮಘಟ್ಟಗಳ ರಕ್ಷಣೆಗೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು.
  14. . ಜ್ಞಾನಪ್ರಸಾರದ ಕೇಂದ್ರದಂತಿರುವ ಗ್ರಂಥಾಲಯ ಪೋಷಣೆಯ ಬಗೆಗೆ ಪೂರ್ಣ ಗಮನಕೊಡಬೇಕು. ಗ್ರಂಥಗಳ ಸಗಟು ಕೊಳ್ಳಿಕೆ ಪ್ರತಿವರ್ಷ ತಪ್ಪದೇ ನಡೆಯಬೇಕು. ಗ್ರಂಥಾಲಯ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಗ್ರಂಥಾಲಯಗಳ ಅಭಿವೃದ್ಧಿಗೇ ಬಳಸಬೇಕು.
  15. . ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ ಒಂದು ಒಳ್ಳೆಯ ಯೋಜನೆಯಾಗಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಬೇಕು.
  16. . ಆಡಳಿತದಲ್ಲಿ ಕನ್ನಡ ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಕನ್ನಡ ಲಿಪಿಯನ್ನು ಆಧುನಿಕ ತಂತ್ರ ವಿಧಾನಗಳಿಗೆ ಹೊಂದಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಯಾಂತ್ರಿಕ ಬುದ್ಧಿಮತ್ತೆ ತಂತ್ರದ ಬಳಕೆ ಹೆಚ್ಚಾಗಬೇಕು.
  17. ಸಾಹಿತ್ಯ-ಸಂಸ್ಕೃತಿ ಸಂಬಂಧದ ಸಂಘ-ಸಂಸ್ಥೆಗಳಿಗೆ ಉದಾರ ಧನ ಸಹಾಯ ದೊರಕಿಸಬೇಕು.
  18.  ಯಾವುದೇ ಕಾರಣಕ್ಕೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು.
  19. . ಕನ್ನಡದ ಕೃತಿಗಳನ್ನು ಅನ್ಯಭಾಷೆಗೆ ಅನುವಾದಿಸಿ ಪ್ರಕಟಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಇದಕ್ಕಾಗಿ ಭಾಷಾ ಪ್ರಾಧಿಕಾರಕ್ಕೆ ಅಗತ್ಯ ನೆರವು ಒದಗಿಸಬೇಕು.
  20.  ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಅದು ನಡೆಸುವ ಇಂತಹ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿಳಂಬ ಮಾಡದೆ ಅದನ್ನು ಅನುಷ್ಠಾನಗೊಳಿಸಬೇಕು.
  21.  ಕನ್ನಡ ಸಾಹಿತ್ಯ ಪರಿಷತ್ತು ಶಾಲಾ ಶಿಕ್ಷಕರಿಗೆ ಸಾಹಿತ್ಯ-ಸಂಸ್ಕೃತಿಗಳ ಬಗೆಗೆ ನಿಯತಕಾಲಿಕ ಶಿಬಿರಗಳನ್ನು ನಡೆಸಿ, ಅವರಲ್ಲಿ ಸಾಹಿತ್ಯದ ಅಧ್ಯಯನಾಸಕ್ತಿ ಬೆಳೆಸಬೇಕು.

ಕನ್ನಡ ಬಂಧುಗಳೆ, ಇದುವರೆಗೆ ನಾನೂ ಸೇರಿ ೮೭ ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಕೇಳಿದ್ದೀರಿ. ಸಾಮಾನ್ಯವಾಗಿ ಇರುವ ಅಭಿಪ್ರಾಯವೆಂದರೆ, ಸಮ್ಮೇಳನಾಧ್ಯಕ್ಷರ 3ಭಾಷಣಗಳನ್ನು ಎಲ್ಲರೂ ಕೇಳುತ್ತಾರೆ, ನಂತರ ಮರೆಯುತ್ತಾರೆ ಎನ್ನುವುದು. ಸರ್ಕಾರವಂತೂ ಇದಕ್ಕೆ ಕಿವಿಯೇ ಕೊಡುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಈ ಧೋರಣೆ ಬದಲಾಗಬೇಕು. ನನ್ನ ಭಾಷಣದಲ್ಲಿ ಇರುವ ಆಶಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕಾರ್ಯಗತಗೊಳಿಸಲು ತೊಡಗಬೇಕು. ಹಾಗೆ ತೊಡಗುವಂತೆ ಮಾಡಲು ನಾವು ನೀವು ಎಲ್ಲರೂ ಸರ್ಕಾರದ ಮೇಲೆ ಅಗತ್ಯವಾದ ಒತ್ತಡವನ್ನು ತಂದು ಕಾರ್ಯೋನ್ಮುಖವಾಗುವಂತೆ ಮಾಡಬೇಕು. ಕನ್ನಡ ನಾಡಿನ ಜನ ಈ ಬಗ್ಗೆ ಸದಾ ಜಾಗೃತರಾಗಿ ಇರುತ್ತಾರೆ ಎಂಬ ಭರವಸೆ ನನಗಿದೆ.

ಇಷ್ಟು ಹೇಳಿ, ಇಂದಿನಿಂದ ಮೂರು ದಿನ ನಡೆಯುವ ಸಮ್ಮೇಳನದ ಎಲ್ಲ ಗೋಷ್ಠಿಗಳ ಚಿಂತನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾವೆಲ್ಲ ಶ್ರದ್ಧಾಸಕ್ತಿಗಳಿಂದ ಪಾಲುಗೊಳ್ಳುವಂತಾಗಿ ಈ ಸಮ್ಮೇಳನದ ವ್ಯವಸ್ಥೆಗಾಗಿ ಸ್ವಾಗತ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಡ್ಯದ ಬಂಧುಗಳು ವಹಿಸಿರುವ ಶ್ರಮ ಸಾರ್ಥಕವಾಗಲೆಂದು ಹಾರೈಸುತ್ತೇನೆ.

Tuesday, December 17, 2024

ಶಿಕ್ಷಣ ಕ್ಷೇತ್ರ ಪ್ರವೇಶಿಸಲು ಸಜ್ಜಾದ ಅಶ್ವಿನಿ ಪುನೀತ್ ರಾಜ್ ಕುಮಾರ್!

 ಜೂ. ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಪ್ರಾರಂಭಕ್ಕೆ ನೆರವಾದ ಪವರ್ ಸ್ಟಾರ್ ಪತ್ನಿ!

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಅನ್ನು ಪ್ರಾರಂಭಿಸಲು ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಶ್ರುತಿ ಕಿರಣ್ ಮತ್ತು ಡಾ ಬಿಂದು ರಾಣಾ ಅವರೊಂದಿಗೆ ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೈಜೋಡಿಸಿದ್ದಾರೆ.

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್, ಕ್ರಾಂತಿಕಾರಿ ಪ್ರಾಥಮಿಕ ಶಿಕ್ಷಣ ಯೋಜನೆ, ಮಕ್ಕಳ ಕಲಿಕೆ ಮತ್ತು ಬೆಳವಣಿಗೆಗೆ ಹೊಸ ದಾರಿ ನಿರ್ಮಿಸಲು ಸಜ್ಜಾಗಿದೆ. ಖ್ಯಾತ ಶಿಕ್ಷಣತಜ್ಞೆ ಸುನೀತಾ ಗೌಡ ನೇತೃತ್ವದಲ್ಲಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ದೂರದೃಷ್ಟಿಯ ಪ್ರೋತ್ಸಾಹ ಮತ್ತು ಡಾ. ಬಿಂದು ರಾಣಾ ಅವರ ಅತ್ಯಾಧುನಿಕ ಪಠ್ಯಕ್ರಮದೊಂದಿಗೆ, ಜೂನಿಯರ್ ಟೋಸ್ ಮಕ್ಕಳಲ್ಲಿ ಅವರ ಆರಂಭಿಕ ವರ್ಷಗಳಲ್ಲಿ ನಾಯಕತ್ವ, ಸೃಜನಶೀಲತೆ ಮತ್ತು ಉದ್ಯಮಶೀಲತೆಯ ಚಿಂತನೆಯನ್ನು ಪೋಷಿಸಲು ವಿನ್ಯಾಸಗೊಳಿಸಲಾಗಿದೆ.

ನಾಯಕತ್ವ ತರಬೇತಿದಾರರು ಮತ್ತು ಪ್ರೇರಕ ಭಾಷಣಕಾರ್ತಿ, ಸ್ಪೂರ್ತಿ ವಿಶ್ವಾಸ್ ಅವರು ತಮ್ಮ ಅನುಭವವನ್ನು ತಂದೊಡ್ಡಿ ತಲೆಮಾರಿನ ಆತ್ಮವಿಶ್ವಾಸಿ ಯುವ ನಾಯಕರಿಗೆ ಸ್ಪೂರ್ತಿ ನೀಡಲು ಕೈಜೋಡಿಸಿದ್ದಾರೆ. ಈ ಯೋಜನೆ ಇಂಡಿಯನ್ ವುಮನ್ ಅಚೀವರ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಶಿಕ್ಷಣತಜ್ಞೆ ಐಶ್ವರ್ಯ ಡಿ.ಕೆ.ಎಸ್ ಹೆಗ್ಡೆ ಅವರ ಸಾನ್ನಿಧ್ಯದಲ್ಲಿ ಉದ್ಘಾಟನೆಯಾಯಿತು.

ಉದ್ಘಾಟನಾ ಸಮಾರಂಭದಲ್ಲಿ, ಅಶ್ವಿನಿ ಮಾತನಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ, “ನಾನು ಮತ್ತು ಪುನೀತ್ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುವ ಈ ಕನಸನ್ನು ಹೊಂದಿದ್ದೇವೆ. ಈ ಯೋಜನೆ ನನ್ನ ಕನಸನ್ನು ಈಡೇರಿಸುತ್ತದೆ - ಪ್ರತಿ ಮಗುವಿನ ಸಾಮರ್ಥ್ಯವನ್ನು ಪೋಷಿಸುವ ಶಾಲೆಗಳನ್ನು ರಚಿಸುವುದು, ಶೈಕ್ಷಣಿಕ ಉತ್ಕೃಷ್ಟತೆಯನ್ನು ಮಾತ್ರವಲ್ಲದೆ ಪಾತ್ರ ಮತ್ತು ನಾಯಕತ್ವವನ್ನೂ ನಿರ್ಮಿಸುವುದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತದೆ." ಎಂದಿದ್ದಾರೆ.
ಎಲ್ಲರಿಗೂ ಶುಭ ಹಾರೈಸುತ್ತಾ ಡಾ. ಸುಧಾಕರ್ ಅವರು ಹೇಳಿದರು, “ಜೀವನದ ಆಧಾರಶಿಲೆಯಾದ ಶಿಕ್ಷಣ, ವಿಶೇಷವಾಗಿ ರೂಪುಗೊಳ್ಳುವ ವರ್ಷಗಳಲ್ಲಿ, ವ್ಯಕ್ತಿಯ ಭವಿಷ್ಯದ ಸ್ಥಾಪನೆಯ ಪ್ರಮುಖ ಕೀಲಿ. ಪ್ರೀಸ್ಕೂಲ್‌ಗಳಲ್ಲಿ ಕಳೆದ ಹಲವು ವರ್ಷಗಳಿಂದ ಪಠ್ಯಕ್ರಮದಲ್ಲಿ ಗಣನೀಯ ಬದಲಾವಣೆಗಳು ನಡೆದಿವೆ, ಮತ್ತು ಈ ಮಹಿಳಾ ತಂಡವು ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಸಂತೋಷವನ್ನುಂಟು ಮಾಡುತ್ತದೆ.” ಎಂದರು.


ಬೆಂಗಳೂರು ನಗರದಲ್ಲಿ ಐದು ಕೇಂದ್ರಗಳಿಂದ ಆರಂಭ
ಮೊದಲ ಐದು ಫೌಂಡೇಶನ್ ಕಲಿಕಾ ಕೇಂದ್ರಗಳು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಆಧುನಿಕ ಸೌಲಭ್ಯಗಳು, ಅನುಭವಿ ಶಿಕ್ಷಕರು ಮತ್ತು ನವೀನ ಪಠ್ಯಕ್ರಮದ ಮೂಲಕ ಶಿಕ್ಷಣಕ್ಕೆ ಕ್ರಾಂತಿಕಾರಿ ವಿಧಾನವನ್ನು ನೀಡುತ್ತವೆ. ಈ ಕೇಂದ್ರಗಳು ಕೇವಲ ಶಾಲೆಗಳಷ್ಟೇ ಅಲ್ಲ; ಅವು ಮಕ್ಕಳಿಗೆ ಸೃಜನಶೀಲವಾಗಿ ಚಿಂತಿಸಲು, ಆತ್ಮವಿಶ್ವಾಸದಿಂದ ನಡೆದುಕೊಳ್ಳಲು ಮತ್ತು ಧೈರ್ಯದಿಂದ ನಾಯಕತ್ವ ತೋರಲು ಪ್ರೇರಣೆ ನೀಡುವ ಪರಿವರ್ತನಾತ್ಮಕ ಸ್ಥಳಗಳಾಗಿ ರೂಪುಗೊಂಡಿವೆ.
ಈ ಯೋಜನೆಯ ಕುರಿತು ಮಾತನಾಡಿದ ಸುನಿತಾ ಗೌಡ, “ಭವಿಷ್ಯಕ್ಕೆ ಸಿದ್ಧವಾಗಿರುವ ಪೀಳಿಗೆಯನ್ನು ರಚಿಸುವ ನಿಟ್ಟಿನಲ್ಲಿ ಇದೊಂದು ಹೆಜ್ಜೆಯಾಗಿದೆ. ಈ ಕೇಂದ್ರಗಳು ಮಕ್ಕಳನ್ನು ಧೈರ್ಯದಿಂದ ಕನಸು ಕಾಣಲು, ಸೃಜನಾತ್ಮಕವಾಗಿ ಯೋಚಿಸಲು ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಸಲು ಸಬಲೀಕರಣಗೊಳಿಸುತ್ತವೆ." ಎಂದರು.

ಡಾ. ಬಿಂದು ರಾಣಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, "ನಮ್ಮ ಪಠ್ಯಕ್ರಮವು ಮಕ್ಕಳಿಗೆ ವೈಜ್ಞಾನಿಕ ತತ್ವಗಳು, ಸೃಜನಶೀಲತೆ ಮತ್ತು ನಾಯಕತ್ವವನ್ನು ಸಂಯೋಜಿಸುವ ಅಡಿಪಾಯವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಅವರು ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳಿಗೆ ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ." ಎಂದರು.
ಶ್ರೀಮತಿ ಸ್ಪೂರ್ತಿ ವಿಶ್ವಾಸ್, “ಶಿಕ್ಷಣವು ನಾಯಕರನ್ನು ರಚಿಸಲು ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ಈ ಕೇಂದ್ರಗಳ ಮೂಲಕ ನಾವು ಭವಿಷ್ಯದ ಕನಸು ಕಾಣದೆ ಅದನ್ನು ಮುನ್ನಡೆಸುವ ಪೀಳಿಗೆಯನ್ನು ರೂಪಿಸುತ್ತಿದ್ದೇವೆ." ಎಂದು ಹೇಳಿದ್ದಾರೆ.

ರಾಷ್ಟ್ರವ್ಯಾಪಿ ವಿಸ್ತರಣೆಯ ದೃಷ್ಟಿ
ಪ್ರಯಾಣವು ಬೆಂಗಳೂರಿನಿಂದ ಆರಂಭವಾಗುತ್ತಿದ್ದರೂ, ಈ ತಂಡವು ಈ ಉಪಕ್ರಮವನ್ನು ಭಾರತದೆಲ್ಲೆಡೆ ನಗರಗಳಿಗೆ ವಿಸ್ತರಿಸುವ ಉತ್ಸಾಹವನ್ನು ಹೊಂದಿದೆ, ಇದರಿಂದ ಎಲ್ಲೆಡೆ ಮಕ್ಕಳಿಗೆ ಈ ನವೋದ್ಯಮ ಶಿಕ್ಷಣ ಮಾದರಿಯ ಪ್ರವೇಶವನ್ನು ಖಚಿತಪಡಿಸುತ್ತದೆ.
ಉಪಕ್ರಮದ ಕುರಿತು
ಫೌಂಡೇಶನ್ ಲರ್ನಿಂಗ್ ಸೆಂಟರ್‌ಗಳು ಶಿಕ್ಷಣವನ್ನು ಪುನರ್‌ನಿರ್ವಹಿಸುವ ಸಹಕಾರ್ಯಪ್ರಯತ್ನವನ್ನು ಪ್ರತಿನಿಧಿಸುತ್ತವೆ, ಅಕಾಡೆಮಿಕ್ ಶ್ರೇಷ್ಠತೆಯನ್ನು ನಾಯಕತ್ವ ಮತ್ತು ಉದ್ಯಮಿತ್ವ ಕೌಶಲ್ಯದ ಮೇಲಿನ ಗಮನದೊಂದಿಗೆ ಸಮನ್ವಯಗೊಳಿಸುತ್ತವೆ. ಈ ಕೇಂದ್ರಗಳು ಭವಿಷ್ಯವನ್ನು ರೂಪಿಸಲು ಅಗತ್ಯವಾದ ಆತ್ಮವಿಶ್ವಾಸಿ ಮತ್ತು ನಾವೀನ್ಯ ಚಿಂತಕರ ತಲೆಮಾರಿಗೆ ಪ್ರೇರಣೆ ನೀಡುವ ಗುರಿಯನ್ನು ಹೊಂದಿವೆ.

Sunday, December 15, 2024

*ಡಾ||ಹೆಚ್ ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ನೇತೃತ್ವದ 'AKGTV' ಗೆ ವರ್ಷದ ಸಂಭ್ರಮ* .

*ಸುಂದರ ಸಮಾರಂಭದಲ್ಲಿ ಅನೇಕ ಗಣ್ಯರ ಉಪಸ್ಥಿತಿ* .


ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಡಾ||ಹೆಚ್ ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ) ಅವರು ನಾಡಪ್ರಭು ಕೆಂಪೇಗೌಡರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ‌ ನೀಡುವ ಸಲುವಾಗಿ 'AKGTV' ಯೂಟ್ಯೂಬ್ ವಾಹಿನಿಯನ್ನು ಕಳೆದವರ್ಷ ಆರಂಭಿಸಿದ್ದರು. ಇದೇ ಸಂದರ್ಭದಲ್ಲಿ  "ನಾಡಸಿಂಹ ಕೆಂಪೇಗೌಡ" ಎಂಬ ಅದ್ದೂರಿಗೀತೆಯನ್ನು ಸಹ ಬಿಡುಗಡೆ ಮಾಡಿದ್ದರು. ಈಗ 'AKGTV' ಗೆ ಮೊದಲನೇ ವಾರ್ಷಿಕೋತ್ಸವ. ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ವಾಹಿನಿ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಪೂಜ್ಯ ಶ್ರೀ ನಂಜಾವಧೂತ ಸ್ವಾಮಿಗಳು, ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಆನಂದ ಗುರೂಜಿ, ನಿರ್ಮಾಪಕರಾದ ಉಮಾಪತಿ, ಸಂಜಯ್ ಗೌಡ, ದೀಪಕ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ಹೆಚ್ ಎಂ ಕೃಷ್ಣಮೂರ್ತಿ ಅವರು, ನಾಡಪ್ರಭು ಕೆಂಪೇಗೌಡರು ಮಾಡಿರುವ ಉಪಕಾರ ಅಪಾರ. ಅವರು ಮಾಡಿದ ಕಾರ್ಯಗಳ ಬಗ್ಗೆ, ಅವರು ಭೇಟಿ ನೀಡಿದ ಸ್ಥಳಗಳ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿಸಲು AKGTV  ಆರಂಭಿಸಲಾಯಿತು.‌ ವಾಹಿನಿ ಆರಂಭವಾಗಿ ಇಂದಿಗೆ ಒಂದು ವರ್ಷವಾಗಿದೆ‌‌. ಈವರೆಗೂ ಶಿವಗಂಗೆ, ಹುಲಿಯೂರು ದುರ್ಗ ಮುಂತಾದ ಪುಣ್ಯಕ್ಷೇತ್ರಗಳಲ್ಲಿರುವ ಕೋಟೆ, ಕಲ್ಯಾಣಿ ಮುಂತಾದ ಸ್ಥಳಗಳನ್ನು ಹಲವು ಕಂತುಗಳ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದೆ ಕೂಡ ಅನೇಕ ಸ್ಥಳಗಳ ಕುರಿತು ಮಾಹಿತಿ ನೀಡಲಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ತಿಳಿಸಿದ ಹೆಚ್ ಎಂ ಕೃಷ್ಣಮೂರ್ತಿ ಅವರು,  ನಾನು ಎಂಟು ವರ್ಷಗಳ ಹಿಂದೆ ನಟಿಸಿದ್ದ ಜೇಡ್ರಳ್ಳಿ ಚಿತ್ರವು ಕೆಲವೇ ದಿನಗಳಲ್ಲಿ ಸಿನಿಬಜಾರ್ ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಗಣ್ಯರ ಸಮ್ಮುಖದಲ್ಲಿ *ಚಂದನವನದ ಚಿಲುಮೆಗಳು ಪುಸ್ತಕ ಬಿಡುಗಡೆ*

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಹೊರ ತಂದಿರುವ ಚಂದನವನದ ಚಿಲುಮೆಗಳು/Landmarks of Sandalwood ಪುಸ್ತಕ ಇಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಆಯಿತು. ಕನ್ನಡದಲ್ಲಿ ಡಾ.ಶರಣು ಹುಲ್ಲೂರು, ಇಂಗ್ಲಿಷ್ ನಲ್ಲಿ ಎಸ್. ಶ್ಯಾಮ್ ಪ್ರಸಾದ್ ಬರೆದಿರುವ ಈ ದ್ವಿಭಾಷಾ ಪುಸ್ತಕವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎಸ್.ನಾಗಾಭರಣ, ನಟ ಶ್ರೀಮುರುಳಿ ಮತ್ತು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ  ಆಯೇಷಾ ಖಾನಂ ಬಿಡುಗಡೆ ಮಾಡಿದರು.


ಕನ್ನಡ ಚಲನಚಿತ್ರ ರಂಗ 90 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಈ ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಹೊರತಂದಿದ್ದು, ಕನ್ನಡ ಚಿತ್ರರಂಗಕ್ಕೆ ತಿರುವು ನೀಡಿದಂತಹ 90 ಚಿತ್ರಗಳ  ವಿಶೇಷ ದಾಖಲೆ ಮತ್ತು ಅಪರೂಪದ ಫೋಟೋಗಳನ್ನು ಈ ಪುಸ್ತಕ ಒಳಗೊಂಡಿದೆ. ಕನ್ನಡ ಸಿನಿಮಾ ರಂಗದ ಕುರಿತು ದ್ವಿಭಾಷೆಯಲ್ಲಿ ಬಂದ ಕನ್ನಡದ ಮೊದಲ ಕಾಫಿ ಟೇಬಲ್ ಪುಸ್ತಕ ಇದಾಗಿದೆ.


ಪತ್ರಕರ್ತರು ಹಾಗೂ ಲೇಖಕರೂ ಆಗಿರುವ ಡಾ. ಶರಣು ಹುಲ್ಲೂರು ಮತ್ತು ಎಸ್. ಶ್ಯಾಮ್ ಪ್ರಸಾದ್ ಜೊತೆಯಾಗಿ ಆರೇಳು ತಿಂಗಳ ಕಾಲ ಈ ಪುಸ್ತಕ ಹೊರತರಲು ಶ್ರಮಿಸಿದ್ದನ್ನು ಹಂಸಲೇಖ ಮುಕ್ತ ಕಂಠದಿಂದ ಹೊಗಳಿದರು. ಇಂತಹ ದಾಖಲೆಗಳು ಹೆಚ್ಚಾಗಲಿ ಅಂತ ಹಾರೈಸಿದರು.

ಪುಸ್ತಕ ರೂಪದಲ್ಲಿ ಸಿನಿಮಾ ಕುರಿತಾದ ವಿಷಯಗಳು ಕನ್ನಡದಲ್ಲಿ ವಿರಳ, ದಾಖಲೀಕರವೂ ಇಲ್ಲ. ಅದು ಕನ್ನಡದಲ್ಲಿ ಆಗಲಿ ಅಂತ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿದರು. 


ಸಿನಿಮಾ ಪಠ್ಯಗಳ ಜರೂರತ್ತು ಇಂದಿನ ದಿನವಿದೆ. ಅದು ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಮೂಲಕ ಆಗಿರುವುದು ಅಭಿನಂದನೆ ಸಲ್ಲಿಸಲೇಬೇಕಾದ ಕೆಲಸ. ಪುಸ್ತಕ ಎಲ್ಲರ ಮನೆಯಲ್ಲೂ ಇರಲಿ ಅಂದರು ಟಿ.ಎಸ್. ನಾಗಾಭರಣ.


ಚಲನಚಿತ್ರ ಪತ್ರಕರ್ತರ ಮತ್ತು ಸಿನಿಮಾ ರಂಗದ ನಂಟಿನ ಕುರಿತಾಗಿ ಶ್ರೀಮುರುಳಿ ಮಾತನಾಡಿ, ಗಾನಯೋಗಿ ಪಂಚಾಕ್ಷರಿ ಗವಾಯಿ ಸಿನಿಮಾದ ಗೀತೆ ಹಾಡಿ ರಂಜಿಸಿದರು. 


ಡಾ.ರಾಜಕುಮಾರ ಕಿಡ್ನ್ಯಾಪ್ ಸೇರಿದಂತೆ ತಮ್ಮ ಬಾಲ್ಯದ ಸಿನಿಮಾ ಕುರಿತಾಗಿ ಆಯೇಷಾ ಖಾನಂ ಮಾತನಾಡಿದರು.

ಕನ್ನಡದ ಸಿನಿಮಾ ರಂಗದ ಅನೇಕ ನಟ ನಟಿಯರು, ತಂತ್ರಜ್ಞರು, ಪತ್ರಕರ್ತರು ಮತ್ತು ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Thursday, December 12, 2024

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 123

 ಕಡಿಯಾಳಿ(Kadiyali)

ಉಡುಪಿ ನಗರದ ಪೂರ್ವ ದಿಕ್ಕಿನಲ್ಲಿರುವ ಕಡಿಯಾಳಿ ಗ್ರಾಮದಲ್ಲಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ದೇವಸ್ಥಾನವಿದೆ. ಉಡುಪಿಯ ಬಸ್ ನಿಲ್ದಾಣದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಈ ದೇಗುಲವಿದೆ.



***

ತೌಳವ ರಾಜಮನೆತನದ ರಾಜನಾಗಿದ್ದ ರಾಮಭೋಜನು ತನಗೆ ಸಂತಾನವಾಗಬೇಕೆಂದು ಪುತ್ರಕಾಮೇಷ್ಥಿಯಾಗ ಮಾಡಿಸಿದ. ಯಾಗಭೂಮಿಯನ್ನು ನೇಗಿಲಿನಿಂದ ಉಳುವಾಗ ಒಂದು ಸರ್ಪವು ನೇಗಿಲಿಗೆ ಸಿಕ್ಕಿ ಸತ್ತುಹೋದುದರಿಂದ ಇದರ ಹತ್ಯೆಯ ಪ್ರಾಯಶ್ಚಿತಕ್ಕಾಗಿ ನಾರಾಯಣನ ದೇವಾಲಯವನ್ನು ಪ್ರತಿಷ್ಥಾಪನೆ ಮಾಡಿದರು. ಅದು ಅನಂತೇಶ್ವರ ದೇವಾಲಯ, ಅಲ್ಲದೆ ಈ ದೇವಾಲಯದ ಸುತ್ತಮುತ್ತ ನಾಲ್ಕು ದುರ್ಗೆಯ ದೇವಾಲಯಗಳಿವೆ. ಅದರಲ್ಲಿ ಒಂದು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನವಾಗಿದೆ ಎಂಬುವುದು ಪ್ರತೀತಿ. ಉಳಿದ ಮೂರು ದೇವಾಲಯಗಳೆಂದರೆ ಉಡುಪಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬೈಲೂರು ಮಹಿಷಮರ್ದಿನಿ ದೇವಾಲಯ, ಕನ್ನರ್ಪಾಡಿಯ ಜಯದುರ್ಗೆ ಮತ್ತು ಪುತ್ತೂರು ದುರ್ಗಾಪರಮೇಶ್ವರಿ ದೇವಾಲಯಗಳಾಗಿದೆ.

ನಮ್ಮಲ್ಲಿನ ಸ್ಥಳ ಪುರಾಣಗಳು (Myths) - 122

 ನೀಲಾವರ (Neelavara)

ನೀಲಾವರವು ಕರ್ನಾಟಕದ ಉಡುಪಿ ಜಿಲ್ಲೆಯ ಒಂದು ಹಳ್ಳಿ. ಬ್ರಹ್ಮಾವರದಿಂದ ೭ ಕಿಲೋಮೀಟರ್ ದೂರದಲ್ಲಿ ನೀಲಾವರವಿದೆ ಮತ್ತು ಕುಂಜಾಲುವಿನಿಂದ ೩ ಕಿಲೋಮೀಟರ್ ದೂರದಲ್ಲಿದೆ.


ಹೆಬ್ರಯಿಂದ ಬ್ರಹ್ಮಾವರಕ್ಕೆ ಬರುವ ರಸ್ತೆಯಲ್ಲಿ ನೀಲಾವರ ಸಿಗುತ್ತದೆ. ನೀಲವರ ಸರಿಸುಮಾರು ಉತ್ತರದಲ್ಲಿಅ ಸೀತಾ ನದಿ ಮತ್ತು ದಕ್ಷಿಣಕ್ಕೆ ಕುಂಜಾಲು ಗ್ರಾಮದ ನಡುವೆ ಇದೆ. ಮೂಲತಃ ಇದು ನೀರಾವರವಾಗಿತ್ತು, (ಅಂದರೆ ನೀರಿನಿಂದ ಆವೃತವಾಗಿರುವುದು ಎಂದು ಅರ್ಥ ನೀಡುತ್ತದೆ) ಆದರೆ ನಂತರದ ದಿನಗಳಲ್ಲಿ ಇದು ನೀಲಾವರವಾಗಿ ಮಾರ್ಪಟ್ಟಿತು.

ಮಹಿಷಾಮಾರ್ದಿನಿ, ಗಣಪತಿ, ಸುಬ್ರಹ್ಮಣ್ಯ, ಕಲ್ಲುಕುಟ್ಟಿಗ ಮತ್ತು ವೀರಭದ್ರ ನೀಲಾವರದ ಕೆಲವು ಪವಿತ್ರ ದೇವಾಲಯಗಳು. ನೀಲಾವರದಲ್ಲಿ ಉಡುಪಿಯ ಪೇಜಾವರ ಮಠದವರು ಗೋಶಾಲೆಯನ್ನು ನಿರ್ಮಿಸಿದ್ದಾರೆ.

***


ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ, ಸುಬ್ರಮಣ್ಯಸ್ವಾಮಿಯನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕ ಸಹ್ಯಾದ್ರಿಪರ್ವತದ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ಮಹರ್ಷಿಗಳು ಸಹ್ಯಾದ್ರಿಪರ್ವತದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಭರಭರ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಶೀಮಿತವಾಗಿರುವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗಿದಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ನೀಲರತಿ ನಾಗ ಸರ್ಪವು ಸೇರಿದ ಜಾಗವೇ ನೀಲಾವರ ಕಾನನವೆಂಬ ಹೆಸರಾಯಿತು.



ಕಾಲಾನಂತರದಲ್ಲಿ ಆ ನಾಗ ಕನ್ಯೆಯರು ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೆಮಾದ್ರಿಯ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯನ್ನ ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು ದಾರೆಯೆರೆಯುತ್ತಾನೆ.

ಹೀಗೆ ಮುಂದೆ ಪಂಚಕನ್ಯೆಯರು ಪಂಚ ಸ್ಥಳದಲ್ಲಿ ನೆಲೆಸಿದರು. ಈ ನಾಗಕನ್ಯೆಯರು ನೆಲೆಸಿದ ಸ್ಥಳಗಳು ಪಂಚ ನಾಗಸ್ಥಳಗಳಾಗಿ ಶಕ್ತಿ ಸ್ಥಳವಾಗಿ ಮಾರ್ಪಟ್ಟವು. ಕೊನೆಯವಳಾದ ನೀಲರತಿಯು ನೆಲೆಸಿನಿಂದ ನೀಲಾವರದ ಪಂಚಮಿಕಾನು ಎಂಬ ಸ್ಥಳದಲ್ಲಿ ಬೃಹತ್ ಗಾತ್ರದ ಹುತ್ತಗಳು ಬೆಳೆದು ನಿಂತಿದೆ. ಅದೇ ರೀತಿಯಲ್ಲಿ ಅಲ್ಲಿ ಸರ್ವಮಂಗಳೆಯಾದ ದುರ್ಗಾದೇವಿಯು ನೆಲೆಸಿ ನಾಗಕನ್ನಿಕೆಯರ ಶಕ್ತಿಯನ್ನು ಇಮ್ಮಡಿಗೊಳಿಸುತ್ತಾಳೆ.


Monday, December 09, 2024

ಅಣ್ಣಾವ್ರ ಅಪಹರಣ ಪ್ರಹಸನಕ್ಕೆ ಸಾಕ್ಷಿಯಾಗಿದ್ದ ಎಸ್.ಎಂ. ಕೃಷ್ಣ!

ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನರಾಗಿದ್ದಾರೆ. ಸಿನಿಮಾ ರಂಗದೊಂದಿಗೆ ನೇರವಾಗಿ ತೊಡಗಿಸಿಕೊಂಡಿಲ್ಲದಿದ್ದರೂ ಅವರಿಗೆ ಪರೋಕ್ಷವಾಗಿ ಚಿತ್ರರಂಗದೊಂದಿಗೆ ಸಂಪರ್ಕವಿತ್ತು. ಅದರಲ್ಲಿಯೂ ಇವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡಾ. ರಾಜ್ ಕುಮಾರ್ ಅಪಹರಣ ಹಾಗೂ ಬಿಡುಗಡೆ ಘಟನೆ ಬಹಳ ಸುದ್ದಿಯಾಗಿತ್ತು. 


ವರನಟ ಡಾ. ರಾಜ್​ಕುಮಾರ್ ಅವರು ಅಪಹರಣ ಆಗಿದ್ದು ಕೃಷ್ಣ ಅವರ ಅಧಿಕಾರ ಅವಧಿಯಲ್ಲೇ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರು ವರ್ಷವೇ ವೀರಪ್ಪನ್ ಕಡೆಯಿಂದ ಅಣ್ಣಾವ್ರು ಕಿಡ್ನ್ಯಾಪ್ ಆಗಿತ್ತು.  ಜುಲೈ 30, 2000ನೇ ಇಸವಿ. ಅಂದು ಭೀಮನ ಅಮಾವಾಸ್ಯೆ. ತಮ್ಮ 71ನೇ ವಯಸ್ಸಿನಲ್ಲಿ ಇಂಥದ್ದೊಂದು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಬಹುದು ಎಂಬ ಸಣ್ಣ ಸುಳಿವು ಕೂಡ ಆ ಮಹಾನ್ ನಟನಿಗೆ ಇರಲಿಲ್ಲ. ಗಾಜನೂರಿನ ತಾಳವಾಡಿ ಬಳಿಯ ತೋಟದ ಮನೆಯಿಂದ ರಾಜಕುಮಾರ್ ಮತ್ತು ಇತರ ಮೂವರನ್ನು ವೀರಪ್ಪನ್ ಅಪಹರಿಸಿದ್ದ. ವೀರಪ್ಪನ್ 108 ದಿನಗಳ ಕಾಲ ಅಣ್ಣಾವ್ರನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ. ಆ ದಿನಗಳ ಬಗ್ಗೆ ಈಗಲೂ ಚರ್ಚೆಗಳು ಆಗುತ್ತವೆ. ರಾಜ್​ಕುಮಾರ್ ಅವರಿಗೂ ಕರ್ನಾಟಕ ಸರ್ಕಾರಕ್ಕೂ ಒಂದು ಒಪ್ಪಂದ ಆಗಿತ್ತು. ಆದರೆ, ಇದನ್ನು ಅಣ್ಣಾವ್ರು ಮೀರಿದಾಗ ತೊಂದರೆ ಎದುರಾಗಿತ್ತು. ಅಲ್ಲದೆ ಡಾ. ರಾಜ್​ಕುಮಾರ್ ಅವರು ಅಪಹರಣ ಆಗಿದ್ದ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್​ಎಂ ಕೃಷ್ಣ ವರನಟ ಕಾಡಿನಲ್ಲಿದ್ದಷ್ಟೂ ದಿನ ಸರಿಯಾಗಿ ನಿದ್ದೆ ಮಾಡಿರಲಿಲ್ಲ.  ಜನಪ್ರಿಯ ನಟ, ಓರ್ವ ಪ್ರಸಿದ್ದ ವ್ಯಕ್ತಿಯನ್ನು ಕಾಡುಗಳ್ಳನೊಬ್ಬ ಅಷ್ಟು ಸುಲಭವಾಗಿ ಅಪಹರಿಸಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ವಿಚಾರ ರಾಜ್ಯ ಸರ್ಕಾರಕ್ಕೆ ತೀವ್ರಮುಜುಗರ ತಂದಿತ್ತು. ಅವರು ಮರಳದಿದ್ದರೆ ಮುಂದೇನು ಎನ್ನುವ ಭಯ ಎಸ್​ಎಂ ಕೃಷ್ಣ ಅವರನ್ನು ಬಹುವಾಗಿ ಕಾಡಿತ್ತು. 108 ದಿನ ಅವರು ಸರಿಯಾಗಿ ನಿದ್ದೆ ಮಾಡದೆ ಒದ್ದಾಡಿದ್ದರು. ರಾಜ್​ಕುಮಾರ್ ಮರಳಿದ ಬಳಿಕ ಕೃಷ್ಣ ಅವರಿಗೆ ನಿರಾಳವಾಗಿತ್ತು.  


ತೋಟದ ಮನೆಯಿಂದ ರಾಜಕುಮಾರ್ ಮತ್ತು ಇತರರನ್ನು ಅಪಹರಿಸಿದ ವೀರಪ್ಪನ್, ಕ್ಯಾಸೆಟ್ ವೊಂದನ್ನು ಪಾರ್ವತಮ್ಮ ಅವರಿಗೆ ನೀಡಿದ್ದ. ಅದನ್ನು ಆಗಿನ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಬಳಿ ತಂದುಕೊಟ್ಟಿದ್ದರು ಆಕೆ. ಆಗ ಗೃಹ ಸಚಿವರಾಗಿದ್ದವರು ಮಲ್ಲಿಕಾರ್ಜುನ ಖರ್ಗೆ. ಇಡೀ ರಾಜ್ಯದಲ್ಲಿ ಹಿಂಸಾಚಾರ ಆರಂಭವಾಯಿತು. ತಮ್ಮದೇ ಮನೆಯ ಹಿರಿಯ ಸದಸ್ಯರೊಬ್ಬರನ್ನು ಕಾಡು ಮೃಗವೊಂದು ಅಪಹರಿಸಿದೆ ಎಂಬ ಸಿಟ್ಟು ವ್ಯಕ್ತವಾಗುತ್ತಿತ್ತು. ವೀರಪ್ಪನ್ ಇದ್ದ ಕಾಡಿಗೇ ನುಗ್ಗಿ, ರಾಜಕುಮಾರ್ ರನ್ನು ವಾಪಸ್ ಕರೆದುಕೊಂಡು ಬರ್ತೀವಿ ಎಂದು ಅಭಿಮಾನಿಗಳು ಅಬ್ಬರಿಸಿದರು. ಅವರಿಗೆ ಸಣ್ಣ ಮಟ್ಟದ ಸಮಸ್ಯೆಯಾದರೂ ರಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ. ಅಷ್ಟೇ ಅಲ್ಲ, ಕರ್ನಾಟಕ-ತಮಿಳುನಾಡು ಮಧ್ಯೆ ತಣಿಸಲಾಗದ ದ್ವೇಷದ ದಳ್ಳುರಿ ಹೊತ್ತಿಕೊಳ್ಳುತ್ತದೆ ಎಂಬ ಆತಂಕ ಎದುರಾಯಿತು. "ಅವರನ್ನು ಬಿಡಿಸಿಕೊಂಡು ಬರಲು ಸ್ವತಃ ನಾನೇ ವೀರಪ್ಪನ್ ಜತೆಗೆ ಮಾತನಾಡಲು ಸಿದ್ಧ" ಎಂದರು ರಜನೀಕಾಂತ್. ಇನ್ನು ಆಗ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಎಂ.ಕರುಣಾನಿಧಿ ಅವರನ್ನು ರಾಜ್ ಕುಟುಂಬದವರ ಜತೆಗೆ ತೆರಳಿ ಎಸ್ಸೆಂ ಕೃಷ್ಣ ಭೇಟಿಯಾದರು. ಈ ಪ್ರಕರಣದ ಸುಖಾಂತ್ಯಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು. ಆ ನೂರೆಂಟು ದಿನಗಳ ಕಾಲವೂ ಚಿತ್ರರಂಗದ ಚಟುವಟಿಕೆ ಸ್ತಬ್ಧವಾಯಿತು. ಸರಕಾರದ ಮೇಲೆ ನಿರಂತರವಾಗಿ ಒತ್ತಡ ಬೀಳುತ್ತಲೇ ಇತ್ತು. ಜತೆಗೆ ದಿನಕ್ಕೊಂದು ವದಂತಿಗೆ ರೆಕ್ಕೆ-ಪುಕ್ಕ. ಕ್ಯಾಸೆಟ್ ಬಿಡುಗಡೆ ಮಾಡುತ್ತಾ ತನ್ನ ಬೇಡಿಕೆಯನ್ನು ಇಡುತ್ತಿದ್ದ ವೀರಪ್ಪನ್. ಆತನ ಜತೆಗೆ ಸಂಧಾನ ನಡೆಸುವುದಕ್ಕೆ ಪತ್ರಕರ್ತ ನಕ್ಕೀರನ್ ಗೋಪಾಲನ್ ನ ಕಳುಹಿಸಲಾಯಿತು. ಆದರೆ ಆ ಬಾರಿ ವೀರಪ್ಪನ್ ಬಹಳ ಷರತ್ತುಗಳನ್ನು ಹಾಕುತ್ತಲೇ ಇದ್ದ. 71ನೇ ವಯಸ್ಸಿನಲ್ಲಿ ರಾಜಕುಮಾರ್ ರ ದೇಹಾರೋಗ್ಯವೇ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಅವರನ್ನು ಅಲ್ಲಿ ನೋಡಿದರಂತೆ, ಇಲ್ಲಿ ನೋಡಿದರಂತೆ ಎಂಬ ಸುದ್ದಿಗಂತೂ ಕೊರತೆ ಇರಲಿಲ್ಲ. ಈ ಎಲ್ಲದರ ಮಧ್ಯೆ ಬೆಚ್ಚಿಬೀಳಿಸುವ ಮತ್ತೊಂದು ಘಟನೆ ನಡೆಯಿತು. ಅಪಹರಣವಾಗಿದ್ದ ನಾಲ್ವರ ಪೈಕಿ ಒಬ್ಬರಾಗಿದ್ದ ನಾಗಪ್ಪ ಮಾರಡಗಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. ಇದರಿಂದ ವೀರಪ್ಪನ್ ಗೆ ಮತ್ತೂ ಸಿಟ್ಟು ಬರಬಹುದು. ಪಟ್ಟು ಬಿಡದಂತೆ ಆಗಬಹುದು ಎಂಬ ಆತಂಕ ಶುರು ಆಯಿತು.


ಚಿತ್ರರಂಗದ ಕಾರ್ಮಿಕರಿಂದ ಮೊದಲುಗೊಂಡು ದೊಡ್ಡ ನಟರ ತನಕ ಪ್ರತಿಭಟನೆ, ಆಕ್ರೋಶ, ಪೂಜೆ-ಪುನಸ್ಕಾರ ಎಲ್ಲದರಲ್ಲೂ ಪಾಲ್ಗೊಂಡರು. ನಕ್ಕೀರನ್ ಗೋಪಾಲ್ ಸಂಧಾನದ ಸಲುವಾಗಿ ಹೋಗಿಬರುತ್ತಿದ್ದದ್ದೇ ಆಯಿತು ಹೊರತು ಯಾವುದೂ ಫಲಪ್ರದ ಆಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಯಿತು. ಇನ್ನು ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ನಾಗಪ್ಪ ಮಾರಡಗಿ ಬಗ್ಗೆ ಕೆಲವರು ಸಿಟ್ಟಾದರು. ಶ್ರೀಲಂಕಾದ ಎಲ್ ಟಿಟಿಇ ಜತೆಗೆ ವೀರಪ್ಪನ್ ಸಂಪರ್ಕ ಸಾಧಿಸಿದ್ದಾನೆ. ಇನ್ನೇನು ಆತನ ಜಾಲ ವಿಸ್ತರಣೆ ಆಗಿ, ದೇಶ ಬಿಟ್ಟು ಹೋಗುವುದಕ್ಕೆ ಎಲ್ಲ ಸಿದ್ಧತೆ ಆಗಿಹೋಗಿದೆ ಎಂಬ ಚರ್ಚೆ ಶುರು ಆಯಿತು. ಆ ಸಂದರ್ಭದಲ್ಲೇ ರಾಜಕುಮಾರ್ ಬಿಡುಗಡೆ ಆದರಂತೆ ಎಂಬ ವದಂತಿ ಹಲವು ಅಲ ಹರಿದಾಡಿತು. ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿ ಹಾಳಾಗಿದೆ ಎಂಬ ಸುದ್ದಿಯೂ ದೊಡ್ಡ ಸದ್ದು ಮಾಡಿತು.ಅಂತಿಮವಾಗಿ ವೀರಪ್ಪನ್ ಜತೆಗೆ ಸಂಧಾನ ನಡೆಸುವುದಕ್ಕೆ ನೆಡುಮಾರನ್, ಡಾ.ಭಾನು ಮತ್ತಿತರರು ತೆರಳಿದರು. ಈ ಬಾರಿ ತೆರಳಿದ ಗುಂಪಿನ ಬಗ್ಗೆ ವೀರಪ್ಪನ್ ಗೆ ವಿಶೇಷವಾದ ಗೌರವ ಇತ್ತು ಎಂಬುದು ಆತ ಅವರ ಜತೆ ನಡೆದುಕೊಂಡ ರೀತಿಯಿಂದಲೇ ತಿಳಿಯುತ್ತಿತ್ತು. ನೂರೆಂಟು ದಿನಗಳನ್ನು ಕಾಡಿನಲ್ಲಿ ಕಳೆದ ಮಹಾನ್ ನಟನನ್ನು ವೀರಪ್ಪನ್ ಶಾಲು ಹೊದಿಸಿ ಕಳುಹಿಸಿಕೊಟ್ಟ. ತನ್ನ ಬಿಡುಗಡೆಗೆ ಶ್ರಮಿಸಿದ ಡಾ.ಭಾನುರನ್ನು ರಾಜಕುಮಾರ್ ಅವರು, ಶಕ್ತಿದೇವತೆ ಎಂದು ಕರೆದರು. ಬಿಡುಗಡೆ ಆಗಿ ಬಂದ ನಂತರ ರಾಜಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಪಹರಣದ ಆಘಾತ ಅವರನ್ನು ಜರ್ಝರಿತನ್ನಾಗಿ ಮಾಡಿತ್ತು. ಆ ಸಂದರ್ಭದಲ್ಲಿ ಅವರು ಆಡಿದ ಕೆಲ ಮಾತುಗಳು ವಿವಾದಕ್ಕೆ ಕಾರಣ ಆದವು. ವಯೋಸಹಜವಾಗಿ ಭಾವನಾತ್ಮಕ ಮಾತುಗಳನ್ನು ಆಡಿದ್ದರು. ಅಲ್ಲಿಂದ ಆಚೆಗೆ ಮಾಧ್ಯಮಗಳಿಂದ ಒಂದು ಅಂತರ ಶುರು ಆಯಿತು. ವೀರಪ್ಪನ್ ಬದುಕಿರುವ ತನಕ ರಾಜಕುಮಾರ್ ಮತ್ತೆ ಗಾಜನೂರಿಗೆ ಹೋಗಲಿಲ್ಲ. ಅಭಿಮಾನಿಗಳ ಜತೆಗೂ ಸಲೀಸಾಗಿ ಬೆರೆಯಲು ಸಾಧ್ಯವಾಗುತ್ತಿರಲಿಲ್ಲಎನ್ನುವುದು ಖೇದದ ಸಂಗತಿ.

ಹೀಗೆ ಒಟ್ಟಾರೆ ಆ ದಿನಗಳಲ್ಲಿ ಎಸ್.ಎಂ. ಕೃಷ್ಣ ಅವರ ಸರ್ಕಾರ ಹಾಗೂ ವೈಯುಕ್ತಿಕವಾಗಿ ಕ್ರ್‍ಷ್ಣ ಅವರು ಅನುಭವಿಸಿದ ಮುಜುಗರದ ಸನ್ನಿವೇಶಗಳು ಇಂದೂ ನೆನಪಿನಲ್ಲಿಳಿಯುವ ಒಂದು ದ್ರಂತ ಎನ್ನಬಹುದು. 

Friday, December 06, 2024

Movie Review: ಪರಂಪರೆಯ ಸಂರಕ್ಷಣೆ ಆಧುನಿಕ-ದಿನಗಳ ಸವಾಲುಗಳನ್ನು ಹೇಳುವ ‘ಗುಂಮ್ಟಿ

 ಚಿತ್ರ: ‘ಗುಂಮ್ಟಿ

ನಿರ್ದೇಶನ: ಸಂದೇಶ್ ಶೆಟ್ಟಿ ಆಜ್ರಿ

ನಿರ್ಮಾಣ:  ‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರ್, ವಿಕಾಸ್ ಎಸ್. ಶೆಟ್ಟಿ

ತಾರಾಂಗಣ: ಸಂದೇಶ್ ಶೆಟ್ಟಿ ಆಜ್ರಿ, ವೈಷ್ಣವಿ ನಾಡಿಗ್, ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು

ರೇಟಿಂಹ್: 3/5


ಈಗಾಗಲೇ ತನ್ನ ಶೀರ್ಷಿಕೆ, ಕಥಾಹಂದರದ ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ಈ ವಾರ (ಡಿ. 06, ಶುಕ್ರವಾರ) ರಾಜ್ಯಾದ್ಯಂತ ತೆರೆಕಂಡಿದೆ. ‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ‘ಗುಂಮ್ಟಿ’ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ. ‘ಗುಂಮ್ಟಿ’ ಸಿನೆಮಾದ ಹಾಡಿಗೆ ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.  ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನೆಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನೆಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ‘ಗುಂಮ್ಟಿ’ ಸಿನೆಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದು, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.  ‘ಗುಂಮ್ಟಿ’ ಸಿನೆಮಾದಲ್ಲಿ ವೈಷ್ಣವಿ ನಾಡಿಗ್ ನಾಯಕಿಯಾಗಿ ಮಲ್ಲಿ ಎಂಬ ಹೆಸರಿನ ಕುಡುಬಿ ಸಮುದಾಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


ಪ್ರಸ್ತುತ ಪೀಳಿಗೆಯ ಕಣ್ಣಿನ ಮೂಲಕ ನೋಡಿದಾಗ, 'ಗುಮ್ಟಿ' ಚಿತ್ರವು ಕುಡುಬಿ ಬುಡಕಟ್ಟು ಜನಾಂಗದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿ ತೋರಿಸುತ್ತದೆ. ಇದು ಸಾಂಪ್ರದಾಯಿಕ ವಾದ್ಯವಾದ 'ಗುಮ್ಟಿ' ಯ ಸುತ್ತ ಕೇಂದ್ರೀಕೃತವಾಗಿದೆ. ಈ ಕಥೆಯು ಪೂರ್ವಜರ ಆಚರಣೆಗಳು ಮತ್ತು ಇಂದಿನ ಪ್ರಸ್ತುತತೆಯನ್ನು ಪರೀಕ್ಷೆಗೆ ಒಳಪಡಿಸುವ ಕಾಶಿ ಹಿರೆಮನೆ ಪಾತ್ರದ ಸುತ್ತ ಕೇಂದ್ರೀಕರಿಸ್ಲಪಟ್ಟಿದೆ.


ಸಂದೇಶದ ಶೆಟ್ಟಿ ಆಜ್ರಿ ನಿರ್ದೇಶನದ ಸ್ಥಳೀಯ ಜಾನಪದ ಕಲೆಯನ್ನು ಆಚರಿಸುವ ಬಾಲ್ಯದ ಕನಸನ್ನು ಆಧರಿಸಿದ ಈ ಚಿತ್ರವು ಸಾಂಸ್ಕೃತಿಕ ಸಂರಕ್ಷಣೆಯನ್ನು ಆಧುನಿಕ-ದಿನಗಳ ಸವಾಲುಗಳೊಂದಿಗೆ ಹೆಣೆದುಕೊಂಡಿದೆ. ಚಿತ್ರದ ಶೀರ್ಷಿಕೆಗೆ ಕುಡುಬಿ ಪರಂಪರೆಯ ಕೇಂದ್ರವಾದ ಸಾಂಪ್ರದಾಯಿಕ ತಾಳವಾದ್ಯವಾದ ಗುಮ್ತಿಯ ಹೆಸರನ್ನು ಇಡಲಾಗಿದೆ, ಇದು ಹೆಚ್ಚುತ್ತಿರುವ ಆಧುನಿಕ ಒತ್ತಡಗಳ ನಡುವೆ ಮರೆಯಾಗುತ್ತಿರುವ ಸಮುದಾಯದ ಆಚರಣೆಗಳನ್ನು ವಿವರಿಸುತ್ತದೆ.

ಕಾಶಿ ತನ್ನ ಸಮುದಾಯವನ್ನು ಒಟ್ಟುಗೂಡಿಸಲು ವೀಡಿಯೊ ರಿಕ್ವೆಸ್ಟ್ ಅಂತಹಾ ಆಧುನಿಕ ಸಾಧನಗಳನ್ನು ಬಳಸಿದಾಗ, ಸಾಂಸ್ಕೃತಿಕ ಹೆಮ್ಮೆ ಮತ್ತು ತಾಂತ್ರಿಕ ಸಂಪರ್ಕದ ನಡುವೆ ಬಲವಾದ ಸಾಧ್ಯತೆಯನ್ನು ಸೃಷ್ಟಿಸಿದಾಗ ಕಥೆಯು ಆಳವಾಗುತ್ತಾ ಸಾಗುತ್ತದೆ  ಆದಾಗ್ಯೂ, ಕಥಾಹಂದರವು ಆಗಾಗ್ಗೆ ದುರ್ಬಲ ನಿರೂಪಣೆಯಿಂದ ಬೇಸರ ತರಿಸುತ್ತದೆ.


ನಿರ್ದೇಶನ ಮತ್ತು ನಾಯಕ ನಟರಾಗಿರುವ ಸಂದೇಶ್ ಶೆಟ್ಟಿ ಅಜ್ರಿ, ಕಾಶಿಯ  ಪಾತ್ರದಲ್ಲಿ ವಿಶ್ವಾಸ ಮೂಡಿಸಿದ್ದಾರೆ.ಆದರೆ ಕೆಲವೊಮ್ಮೆ ಚಿತ್ರದ ಭಾವನಾತ್ಮಕ ಅನುರಣನವನ್ನು ಹೆಚ್ಚಿಸಿದ್ದಾರೆ. ವೈಷ್ಣವಿ ನಾಡಿಗ್ ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ, ಆದರೆ ರಂಜನ್ ಛತ್ರಪತಿ ಮತ್ತು ಯಶ್ ಆಚಾರ್ಯ ಸೇರಿದಂತೆ ಪೋಷಕ ಪಾತ್ರವರ್ಗವು ತಮ್ಮ ಸೀಮಿತ ಪಾತ್ರದ ಹೊರತಾಗಿಯೂ ಮಹತ್ವದ ಪ್ರದರ್ಶನ ನೀಡಿದ್ದಾರೆ.


ನ್ಯೂನತೆಗಳ ಹೊರತಾಗಿಯೂ, ಗುಮ್ಟಿ ಸಾಂಸ್ಕೃತಿಕ ದಾಖಲೆಯಾಗಿ ನಿಲ್ಲುತ್ತದೆ, ಇದು ಪರಂಪರೆಯ ಸಂರಕ್ಷಣೆಯ ಕುರಿತು ಚರ್ಚೆ ಹುಟ್ಟುಹಾಕುತ್ತದೆ. ಇದು ಆಧುನಿಕ ಜಗತ್ತಿನಲ್ಲಿ ಸಾಂಪ್ರದಾಯಿಕ ಕಥೆಗಳ ನಿರಂತರ ಪ್ರಸ್ತುತತೆಯ ಅಪೂರ್ಣ ಆಗಿಯೂ ಹೃದ್ಯ ಸ್ಮರಣೆಯಾಗಿದೆ.

Thursday, December 05, 2024

ಡಿ.ಉಮಾಪತಿಯವರಿಗೆ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ

ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿರುವ "ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ" ಪ್ರಶಸ್ತಿಗೆ ಹೆಸರಾಂತ ಹಿರಿಯ ಪತ್ರಕರ್ತರಾದ ಡಿ.ಉಮಾಪತಿಯವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಕುರಿತು ವರದಿ, ವಿಶೇಷ ಲೇಖನಗಳ ಪ್ರಕಟಣೆಯನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಮುಖ್ಯಮಂತ್ರಿಯವರು 2024 ರ ಆಯವ್ಯಯದಲ್ಲಿ  ಹಿರಿಯ ಪತ್ರಕರ್ತ "ವಡ್ಡರ್ಸೆ ರಘುರಾಮಶೆಟ್ಟಿ" ಅವರ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಿಸಿದ್ದರು. ನ್ಯಾ.ಅಶೋಕ ಹಿಂಚಿಗೇರಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಶಸ್ತಿ  ಆಯ್ಕೆ ಸಮಿತಿಯು ಒಮ್ಮತದಿಂದ ಹಿರಿಯ ಪತ್ರಕರ್ತ ಡಿ.ಉಮಾಪತಿಯವರನ್ನು "ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಪ್ರಶಸ್ತಿಯು 2 ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಡಿ.ಉಮಾಪತಿ ಅವರ ಪರಿಚಯ:

ಮಾರ್ಚ್ 18, 1959 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ.ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಎರಡನೆ ರ್ಯಾಂಕ್ ಪಡೆದವರು.

ನ್ಯೂ ಇಂಡಿಯನ್ ಎಕ್ಸಪ್ರೆಸ್  ಸಮೂಹ ಸಂಸ್ಥೆಯ ಕನ್ನಡಪ್ರಭ, ಈ ಟಿವಿಯ ದೆಹಲಿ ಕರೆಸ್ಪಾಂಡೆಂಟ್ ಅಗಿ 27 ವರ್ಷಗಳ ಪರಿಣಾಮಕಾರಿ ವರದಿಗಳಿಂದ ಹೆಸರುಗಳಿಸಿದವರು.

ಪಾರ್ಲಿಮೆಂಟ್ ವರದಿ, ಚುನಾವಣಾ ವಿಶ್ಲೇಷಣೆಗಳು, ಸುಪ್ರೀಂ ಕೋರ್ಟು ಗಳಲ್ಲಿನ ನದಿ ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು, ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಇವರದ್ದಾಗಿದೆ.


ದೆಹಲಿಯಲ್ಲಿ ನೆಲೆಸಿರುವ ಡಿ. ಉಮಾಪತಿ ಅವರು ಆಂದೋಲನ, ರೈತ ಚಳವಳಿ, ವಿಜಯಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ. ಪ್ರಸ್ತುತ ‘ನ್ಯಾಯಪಥ(ಗೌರಿ ಮಿಡಿಯಾ)’ ಮತ್ತು ‘ಈದಿನ’ ವೆಬ್ ಜರ್ನಲ್ ಸಂದರ್ಶಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ತಾಯಿಯೇ ದೇವರು, ವರನಟಿ ಲೀಲಾವತಿ ದೇಗುಲ’ ಲೋಕಾರ್ಪಣೆ

 ವಿನೋದ್ ರಾಜ್ ಅವರು ತಾಯಿ ನೆನಪಲ್ಲಿ ಸ್ಮಾರಕ ಒಂದನ್ನು ನಿರ್ಮಾಣ ಮಾಡಿದ್ದಾರೆ. ಇದರ ಉದ್ಘಾಟನೆ ಇಂದು (ಡಿ.5) ಸೋಲದೇವನಹಳ್ಳಿಯಲ್ಲಿ ನಡೆದಿದೆ. “‘ತಾಯಿಯೇ ದೇವರು, ವರನಟಿ ಡಾ|ಎಂ. ಲೀಲಾವತಿ ದೇಗುಲ” ಎಂದು ಇದಕ್ಕೆ ಅವರು ಹೆಸರು ಇಟ್ಟಿದ್ದಾರೆ. ಅಮ್ಮ-ಮಗ ಅಂದ್ರೆ ಲೀಲಾವತಿ-ವಿನೋದ್​ ರಾಜ್ ಎನ್ನುವಷ್ಟು ಇಬ್ಬರೂ ಸದಾ ಜೊತೆಯಲ್ಲಿರುತ್ತಿದ್ರು. ಅಮ್ಮನನ್ನು ಕಳೆದುಕೊಂಡ ವಿನೋದ್​ ರಾಜ್​ ಒಬ್ಬಂಟಿಯಾಗಿದ್ದಾರೆ. ಅಮ್ಮನ ನೆನಪಿಗಾಗಿ ತಾಯಿಯ ಸ್ಮಾರಕ ಕಟ್ಟಿದ್ದಾರೆ. ಕನ್ನಡದ ಖ್ಯಾತ ನಟಿ ಲೀಲಾವತಿ ಇಹಲೋಕ ತ್ಯಜಿಸಿ ಡಿಸೆಂಬರ್​ 8ಕ್ಕೆ ಒಂದು ವರ್ಷವಾಗುತ್ತಿದ್ದು. ಇದರ ಹಿನ್ನಲೆಯಲ್ಲಿ ಅವರ ಭವ್ಯ ಸ್ಮಾರಕ ನಿರ್ಮಾಣ ಆಗಿದೆ. ಅವರ ಅಂತ್ಯಕ್ರಿಯೆಯಾದ ಸ್ಥಳದಲ್ಲಿ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದು. ಸುಮಾರು 1 ಕೋಟಿ ವೆಚ್ಚದಲ್ಲಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲಾಗಿದೆ.

ಸಂಪೂರ್ಣವಾಗಿ ಅಮೃತ ಶಿಲೆ ಕಲ್ಲಿನಿಂದ ಸ್ಮಾರಕವನ್ನು ನಿರ್ಮಾಣ ಮಾಡಿದ್ದು. ಸಮಾಧಿ ಸುತ್ತಲು ಬೃಹತ್​ ಕಲ್ಲಿನ ಕಂಬಗಳಿಂದ ಮಂಟಪ ನಿರ್ಮಾಣ ಮಾಡಿಸಿದ್ದಾರೆ. ಇಂದು ಸಚಿವ ಕೆ.ಎಚ್ ಮುನಿಯಪ್ಪ ​ ಅವರು ಸ್ಮಾರಕವನ್ನು ಉದ್ಘಾಟನೆ ಮಾಡಿದ್ದು ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ವಿನೋದ್ ರಾಜ್ ಮತ್ತು ಅವರ ಕುಟುಂಬ ವರ್ಗದವರು, ಚಿತ್ರರಂಗದ ಹಿರಿಯ ನಟ – ನಟಿಯರು ಕಲಾವಿದರು, ಸ್ಥಳೀಯ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಇಂದಿನಿಂದಲೇ ಅಭಿಮಾನಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ದೊರೆತಿದೆ. ನಟಿ ಲೀಲಾವತಿ ಸ್ಮಾರಕ ನೋಡಲು ಬರುವವರಿಗೆ ವಿನೋದ್ ರಾಜ್ ಊಟದ ವ್ಯವಸ್ಥೆ ಕೂಡ ಮಾಡಿದ್ದಾರಂತೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಸ್ಮಾರಕ ತೆರೆದಿರಲಿದೆ. ಅಷ್ಟೇ ಅಲ್ಲದೇ ಪ್ರಕೃತಿಯ ಮಡಿಲಲ್ಲಿ. ಅಮ್ಮನ ಸ್ಮಾರಕದ ಬಳಿಯೇ ಒಂದೆರಡು ದಿನ ಕಳೆಯಬೇಕು ಅಂತ ಇಚ್ಛಿಸುವವರಿಗೂ ಸ್ಮಾರಕದ ಬಳಿಕ ವಸತಿ ಗೃಹ ಕೂಡ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.


ಇದಕ್ಕೂ ಮುನ್ನ ಇಂದು (ಡಿ.5) ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿದೆ. ಈ ವರ್ಷದ ಆರಂಭದಲ್ಲಿ ಲೀಲಾವತಿ ಸ್ಮಾರಕಕ್ಕೆ ವಿನೋದ್ ರಾಜ್ ಗುದ್ದಲಿ ಪೂಜೆ ನೆರವೇರಿಸಿದ್ದರು. ಇದೀಗ ಸ್ಮಾರಕ ಲೋಕಾರ್ಪಣೆ ಆಗಿದೆ.


ಬಹುಭಾಷಾ ನಟಿಯಾಗಿ ಮಿಂಚಿದ ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ.



ಲೀಲಾವತಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದರು. ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000ದ ಸಾಲಿನಲ್ಲಿ ಲೀಲಾವತಿಗೆ ನೀಡಲಾಗಿದೆ. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಲಾಯ್ತು. ಲೀಲಾವತಿ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗ್ಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ, ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು. ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.


Wednesday, December 04, 2024

ಭೂಮಿಯ ಮೇಲೆ ಮೊಟ್ಟ ಮೊದಲ ಡಿಎನ್ಎ ಸೃಷ್ಟಿಸಿದ್ದ ಶಿವಲಿಂಗ: ನಾಸಾ ಪತ್ತೆ

2011ರ ಆಗಸ್ಟಿನಲ್ಲಿ ಅಮೆರಿಕದ ಅಲಾಸ್ಕಾದಲ್ಲಿ ಸಂಭವಿಸಿದ ಉಲ್ಕಾಪಾತವನ್ನು ನಾಸಾ ವಿಶ್ಲೇಷಿಸಿದೆ. ಮೊದಲು ಭೂಮಿಗೆ ಇಳಿದ ಶಿವಲಿಂಗವು ಮೆಟಿಯೊಟೈಟ್ ಆಗಿರಬೇಕು.

ಡಿಎನ್ಎ ಮತ್ತು ಶಿವಲಿಂಗದ ನಡುವೆ ಅನೇಕ ಸಾಮ್ಯತೆಗಳಿವೆ. ಶಿವನಿಗೆ ಉಗ್ರ ಎಂದೂ ಕರೆಯಲಾಗುವ ಮತ್ತೊಂದು ಹೆಸರು ಇದೆ, ಇದರರ್ಥ ಆಮ್ಲ. ಡಿಎನ್ಎ  ಇದು ಆಮ್ಲ ಕೂಡ ಆಗಿದೆ. ವೇದಾಂತವು ಹಿರಣ್ಯಗರ್ಭವನ್ನು ಸೂತ್ರಾತ್ಮ ಎಂದು ಕರೆಯುತ್ತದೆ. ಸೂತ್ರ ಎಂದರೆ ಸೂತ್ರ ರೂಪದಲ್ಲಿನ ಆತ್ಮ ಎಂದರ್ಥ. ಥ್ರೆಡ್ ಅಥವಾ ಫಿಲಾಮೆಂಟ್.


ಡಿಎನ್ಎ ಅಣುವು ನಿಜವಾಗಿಯೂ ದಾರ ಅಥವಾ ತಂತುಗಳಂತಿದೆ ಎಂದು ಆಧುನಿಕ ವಿಜ್ಞಾನವು ಒಪ್ಪಿಕೊಳ್ಳುತ್ತದೆ.

"ಒಂದೇ ಮಾನವನ ಸೂಕ್ಷ್ಮಾಣು-ಕೋಶದಲ್ಲಿ ಡಿ. ಎನ್. ಎ. ಯ ಈ ತಂತು ಸುಮಾರು ಒಂದು ಮೀಟರ್ ಉದ್ದವಿರುತ್ತದೆ" ಎಂದು ವ್ಯಾಟ್ಸನ್ ತನ್ನ ಪುಸ್ತಕ 'ದಿ ಡಬಲ್ ಹೆಲಿಕ್ಸ್' ನಲ್ಲಿ ಹೇಳುತ್ತಾರೆ.

ಯೋಗ-ವಿಜ್ಞಾನವು ಇದನ್ನು ಮಹಾನ್, ಶ್ರೇಷ್ಠ ಎಂದು ಕರೆಯುತ್ತದೆ. ಇದು ನಿಜವಾಗಿಯೂ ಅದ್ಭುತವಾಗಿದೆ ಏಕೆಂದರೆ ಇದು ಎಲ್ಲಾ ಜೀವಿಗಳಲ್ಲಿ ಕಂಡುಬರುತ್ತದೆ.

ಇದರ ಆಣ್ವಿಕ ತೂಕ ಒಂದು ಮಿಲಿಯನ್, ಆದ್ದರಿಂದ ವಿಜ್ಞಾನಿಗಳು ಇದನ್ನು 'ಶ್ರೇಷ್ಠ' ಎಂದು ಕರೆಯುತ್ತಾರೆ. ಅದಕ್ಕೆ ಜನ್ಮವೇ ಇಲ್ಲ. ಅದು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಡಿಎನ್ಎ ಸಹ ನಕಲು ಮಾಡಲ್ಪಡುತ್ತದೆ, ಅಂದರೆ ಅದು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಜೆ. ಡಿ. ವ್ಯಾಟ್ಸನ್ ಇದನ್ನು 'ಸ್ವಯಂ ಪ್ರತಿಕೃತಿ' ಎಂದು ವಿವರಿಸುತ್ತಾರೆ.

ಸಾಂಖ್ಯ ಇದನ್ನು ವಿಚಿತ್ರರೂಪ ಅಂದರೆ ಇದು ಎಂದು ಕರೆಯುತ್ತಾರೆ. ಅದ್ಭುತ ಆಕಾರ. ಡಿಎನ್ಎ ಸಹ ಅದ್ಭುತವಾಗಿ ಸುರುಳಿಯಾಕಾರದ ಮೆಟ್ಟಿಲು ಅಥವಾ ಹೆಲಿಕ್ಷ್ ನ ಆಕಾರದಲ್ಲಿದೆ.್ ಸಾಂಖ್ಯ್ ಇದನ್ನು ವಿಶ್ವಾತ್ಮ ಎಂದು ಕರೆಯುತ್ತದೆ, ಅಂದರೆ ಬ್ರಹ್ಮಾಂಡದ ಆತ್ಮ ಎಂದರ್ಥ.

ಆಧುನಿಕ ವಿಜ್ಞಾನವು ಡಿ. ಎನ್. ಎ. ಯು ಆತ್ಮ ಅಥವಾ ಜೀವಂತ ಪ್ರಪಂಚದ ಅತ್ಯಗತ್ಯ ವಸ್ತು ಎಂದು ಒಪ್ಪಿಕೊಳ್ಳುತ್ತದೆ.

ಇದನ್ನು ಏಕಕ್ಷರ ಎಂದು ಕರೆಯಲಾಗುತ್ತದೆ, ಅಮರ, ಯಾವುದೇ ನಷ್ಟ, ಅಂತ್ಯವಿಲ್ಲ. ಡಿ. ಎನ್. ಎ. ಗೆ ಅಂತ್ಯವಿಲ್ಲ, ನಷ್ಟವಿಲ್ಲ-ಅದು ತನ್ನನ್ನು ತಾನು ನಕಲು ಮಾಡಿಕೊಳ್ಳಲ್ಪಡುತ್ತದೆ ಅಥವಾ ಪುನರಾವರ್ತಿಸುತ್ತದೆ, ತನ್ನನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಹೀಗಾಗಿ ಈ ಎಲ್ಲಾ ಏಳು ಅಂಕಗಳು ಸಮಾನವಾಗಿವೆ.

ಅಹಂತರು ಹಿರಣ್ಯಗರ್ಭದಿಂದ ವಿಕಸನಗೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ಅಲಂಕಾರ ಎಂದರೆ ಅಕ್ಷರಶಃ ಒಂದು ಆಕಾರ, ಅದು ತನ್ನನ್ನು ತಾನು 'ನಾನು' ಎಂದು ಕರೆಯಬಹುದು. (ಅಹಂ). ಡಿಎನ್ಎಯಿಂದ ಜೀನ್, ಕ್ರೋಮೋಸೋಮ್ ಮತ್ತು ನ್ಯೂಕ್ಲಿಯಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ, ಇವೆಲ್ಲವೂ ತಮ್ಮನ್ನು ನಾನು ಅಥವಾ  'ನಾನು' ಎಂದು ಕರೆಯಲ್ಪಡಬಹುದು.

ಈ ನ್ಯೂಕ್ಲಿಯಸ್ಸಿನಿಂದ, ಒಂದು ಕೋಶವು ರೂಪುಗೊಳ್ಳುತ್ತದೆ, ಆದ್ದರಿಂದ ಪರಮಾಣು ವಸ್ತುವನ್ನು ಪ್ರಜಾಬೀಜ ಎಂದು ಕರೆಯಲಾಗುತ್ತದೆ.



ಈ ಮೊದಲ ಜೀವಕೋಶದಿಂದ ಅನೇಕ ಜೀವಕೋಶಗಳು ಗುಣಕದಂತೆ ಮೂಲಕ ಬೆಳೆಯುತ್ತವೆ. ಈ ಲಕ್ಷಾಂತರ ಜೀವಕೋಶಗಳು ಪ್ರಜೆಗಳಾಗಿವೆ ಮತ್ತು ಇವೆಲ್ಲವೂ ಎಲ್ಲಿಂದ ಹುಟ್ಟುತ್ತವೆಯೋ ಅದು ಪ್ರಜಾಪತಿಯಾಗಿದೆ.

ಈ ಎಲ್ಲಾ ಜೀವಕೋಶಗಳು ಸೂಕ್ಷ್ಮದರ್ಶಕವಾಗಿವೆ, ಆದ್ದರಿಂದ ಅವುಗಳನ್ನು ಸುಕ್ಷಮ-ಭೂತ-ಸೃಷ್ಟಿ ಎಂದು ಕರೆಯಲಾಗುತ್ತದೆ. (ಸೂಕ್ಷ್ಮದರ್ಶಕ ಅಥವಾ ಏಕಕೋಶೀಯ ಜೀವಂತ ಜಗತ್ತು). ಇಲ್ಲಿ, ನಾವು ವೈರಸ್, ಬ್ಯಾಕ್ಟೀರಿಯಾ ಮತ್ತು ಎಲ್ಲಾ ಏಕಕೋಶೀಯ ಜೀವಿಗಳನ್ನು ಸೇರಿಸಿಕೊಳ್ಳಬಹುದು.

ಒಂದು ಕೋಶವು ಸ್ವತಃ 'ಪಿಂಡಿ' ಯಂತೆ ಕಾಣಿಸಿಕೊಳ್ಳುತ್ತದೆ. ಜೀವಕೋಶವು ಸಲುಕೆ ಆಗಿದ್ದರೆ, ಅದರ ಕೇಂದ್ರಕವು ಬಾಣವಾಗಿದೆ.

ಸೂಕ್ಷ್ಮ ಪ್ರಪಂಚದ ನಂತರ, ದೃಶ್ಯ ಜಗತ್ತು(ಸ್ಥೂಲ ಸೃಷ್ಟಿ) ಅಸ್ತಿತ್ವಕ್ಕೆ ಬಂದಿತು ಎಂದು ಹೇಳಲಾಗುತ್ತದೆ.

ಈ ದೃಶ್ಯ ಲೋಕವು ಐದು ಇಂದ್ರಿಯಗಳನ್ನು ಮತ್ತು ಮನಸ್ಸನ್ನು ಹೊಂದಿದೆ.

ಇದು ಆಧುನಿಕ ವಿಜ್ಞಾನಕ್ಕೆ ನಿಜವಾಗಿದೆ, ಇದು ದೂರದ ಭೂತಕಾಲದಲ್ಲಿ, ಏಕಕೋಶೀಯ ಜೀವಿಗಳು ಮಾತ್ರ ಅಸ್ತಿತ್ವದಲ್ಲಿದ್ದವು ಎಂಬುದನ್ನು ಒಪ್ಪಿಕೊಳ್ಳುತ್ತದೆ. ಅಂತಿಮವಾಗಿ, ಹಲವಾರು ಜೀವಕೋಶಗಳು ಶ್ರಮ ವಿಭಜನೆಯೊಂದಿಗೆ ಸಮಾಜವನ್ನು ರೂಪಿಸಲು ಒಗ್ಗೂಡಿದವು-ಹೀಗೆ ಒಂದೇ ಬಹುಕೋಶೀಯ ಜೀವಿಗಳ ಅನೇಕ ವ್ಯವಸ್ಥೆಗಳು ಮತ್ತು ಇಂದ್ರಿಯ ಅಂಗಗಳನ್ನು ಅಭಿವೃದ್ಧಿಪಡಿಸಿದವು. ಈ ರೀತಿಯಾಗಿ ಬಹುಕೋಶೀಯ ಜೀವಿಗಳ ಜಗತ್ತು ಅಸ್ತಿತ್ವಕ್ಕೆ ಬಂದಿತು.

ಶಿವಲಿಂಗ ಮತ್ತು ಡಿಎನ್ಎ ವಿವರ

ಬಾಣ ಎಂಬ ಕೇಂದ್ರ ಸ್ತಂಭವಿದೆ, ಅದರ ಸುತ್ತಲೂ ಸಲುಕೆ ಇದೆ.

ಬಾಣದ ಸುತ್ತಲೂ ಸರ್ಪಾಕಾರದಲ್ಲಿ ನಾಗರಹಾವು ಅಥವಾ ಹಾವು ಇರುತ್ತದೆ. ಹಣೆಯ ಮೇಲೆ ತ್ರಿಪುಂಡ ಗಂಧ ಎಂಬ ವಿಶೇಷ ಗುರುತು ಇದೆ.

ಈ ವಿಶೇಷ ಗುರುತು ನಿಜವಾಗಿಯೂ ವಿಶೇಷವಾದದ್ದು. ಇದು ಅಕ್ಷದ ಸುತ್ತ ಸುತ್ತುತ್ತಿರುವ ಹಾವಿನ ಚಿತ್ರವೆಂದು ತೋರುತ್ತದೆ.

ಇದು ವಸಂತಕಾಲದಂತೆ ಕಾಣುತ್ತದೆ. ಬುಗ್ಗೆಯನ್ನು ಹೋಲುವ ಈ ಆಕಾರವು ಬಹಳ ಮುಖ್ಯವಾಗಿದೆ.

ಡಬಲ್ ಹೆಲಿಕ್ಸ್ ಡಿಎನ್ಎಡಿಎನ್ಎ ಅಣುವು ಹೆಲಿಕ್ಸ್ ಎಂದು ನಮಗೆ ತಿಳಿದಿದೆ. ಆಧುನಿಕ ವಿಜ್ಞಾನಿಗಳು ಇದನ್ನು ಸುರುಳಿಯಾಕಾರದ ಮೆಟ್ಟಿಲುಗಳೊಂದಿಗೆ ಹೋಲಿಸುತ್ತಾರೆ ಮತ್ತು ಇದನ್ನು ಡಬಲ್ ಹೆಲಿಕ್ಸ್ ಎಂದು ಕರೆಯುತ್ತಾರೆ, ಆದರೆ ಪ್ರಾಚೀನ ಋಷಿಗಳು ಇದನ್ನು ಸರ್ಪಾಕಾರದ ನಾಗರಹಾವಿನೊಂದಿಗೆ ಹೋಲಿಸಿದ್ದಾರೆ. ನಾಗರಹಾವು ಬಾಣದ ಬೆಂಬಲವನ್ನು ಪಡೆಯುತ್ತದೆ. ಡಿಎನ್ಎ ನ್ಯೂಕ್ಲಿಯಸ್ಸಿನ ಬೆಂಬಲವನ್ನು ಪಡೆಯುತ್ತದೆ.

ಪ್ರಾಚೀನ ಹೋಲಿಕೆಯು ಪುನರಾವರ್ತನೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಡಿಎನ್ಎ ಫೈಬರ್ ನ ಪುನರಾವರ್ತನೆಯು ಹಾವುಗಳ ಸಂಯೋಗವನ್ನು ಅನುಕರಿಸುತ್ತದೆ.

ಹಾವು ಡಿಎನ್ಎಯಂತೆ ಜೀವಂತ ವಸ್ತುವಾಗಿದೆ; ಆದರೆ ಮೆಟ್ಟಿಲು ಜೀವವಿರುವ ಜೀವಿಯಾಗಿರುವುದಿಲ್ಲ.

ಆಧುನಿಕ ವಿಜ್ಞಾನಿಗಳು (ವ್ಯಾಟ್ಸನ್ ಮತ್ತು ಕ್ರಿಕ್) 1953 ರಲ್ಲಿ ಡಿಎನ್ಎ ಅಣುವನ್ನು ಚಿತ್ರಿಸಲು ಸುರುಳಿಯಾಕಾರದ ಮೆಟ್ಟಿಲುಗಳ ಮಾದರಿಯನ್ನು ಸಿದ್ಧಪಡಿಸಿದ್ದಾರೆ; ಆದರೆ ಪ್ರಾಚೀನ ಋಷಿಗಳು ಅದೇ ಡಿಎನ್ಎಯನ್ನು ಚಿತ್ರಿಸಲು  ಒಂದು ವಿಶೇಷ ಮಾದರಿಯನ್ನು ಸಿದ್ಧಪಡಿಸಿದ್ದಾರೆ ಮತ್ತು ಆ ಮಾದರಿಯು ಶಿವಲಿಂಗವಾಗಿದೆ.


ಆ ಮಾದರಿಯಲ್ಲಿ ಜೀವನದ ಪ್ರಜ್ಞೆಯನ್ನು ಹೊಂದಲು, ಅವರು ನಾಗರಹಾವಿನ ಸುರುಳಿಗಳ ಬಗ್ಗೆ ಯೋಚಿಸಿದರು ಮತ್ತು ಅದನ್ನು ಸಾಮಾನ್ಯ ಮನುಷ್ಯನಿಗೆ ತಲುಪಿಸಲು, ಅವರು ತ್ರಿಪುಂಡ ಗಂಧದ ಕಲ್ಪನೆಯನ್ನು ಮುಂದಿಟ್ಟರು, ಇದು ಹಣೆಯ ಮೇಲೆ ಚಿತ್ರಿಸಿದ ಪವಿತ್ರ ಗುರುತು, ನಮ್ಮ ಮೂರು ಬೆರಳುಗಳನ್ನು ಶ್ರೀಗಂಧದ ಮರದಿಂದ ತೆಗೆದ ಗಂಧದಲ್ಲಿ ಮುಳುಗಿಸಲಾಗಿದೆ.್ ನ್ಯೂಕ್ಲಿಯಿಕ್ ಆಮ್ಲಗಳು ಮೋನೋನ್ಯೂಕ್ಲಿಯೋಟೈಡ್ಸ್ ಎಂದು ಕರೆಯಲ್ಪಡುವ ನಾಲ್ಕು ಭಾಗಗಳಿಂದ ರೂಪುಗೊಳ್ಳುತ್ತವೆ. ಶಿವನ ನಾಲ್ಕು ತಲೆಗಳು ಒಂದೇ ಆಗಿದ್ದೂ ನಾಲ್ಕು ಭಾಗಗಳಾಗಿವೆ.

ಶಿವನಿಗೆ ಮೂರು ಕಣ್ಣುಗಳಿವೆ ಎಂದು ವರ್ಣಿಸಲಾಗಿದೆ. ಪ್ರತಿ ಮೊನೊನ್ಯೂಕ್ಲಿಯೋಟೈಡ್ ಮೂರು ಭಾಗಗಳನ್ನು ಹೊಂದಿರುತ್ತದೆ. ರಂಜಕ ಆಮ್ಲ, ಸಕ್ಕರೆ ಮತ್ತು ಕ್ಷಾರ.

ಶಿವನ ನಾಲ್ಕು ತಲೆಗಳು ನಾಲ್ಕು ದಿಕ್ಕುಗಳ ಕಡೆಗೆ ಮುಖ ಮಾಡಿವೆ. ತುಲನಾತ್ಮಕವಾಗಿ ಸರಳವಾದ ರಿಬೊನ್ಯೂಕ್ಲಿಕ್ ಆಮ್ಲ, ಆರ್. ಎನ್. ಎ. ಯಲ್ಲಿ, ಅದರ ನಾಲ್ಕು ಮೊನೊನ್ಯೂಕ್ಲಿಯೋಟೈಡ್ ಗಳು ನಾಲ್ಕು ದಿಕ್ಕುಗಳಲ್ಲಿರುತ್ತವೆ. ಈ ನ್ಯೂಕ್ಲಿಯೋಟೈಡ್ ಗಳೆಂದರೆ ಅಡೆನಿನ್, ಗ್ವಾನೈನ್, ಯುರಾಸಿಲ್ ಮತ್ತು ಸೈಟೋಸಿನ್.

ಕೆಲವು ನಿದರ್ಶನಗಳಲ್ಲಿ ಶಿವನಿಗೆ ನಾಲ್ಕು ತಲೆಗಳಿವೆ ಎಂದು ಮಹಾಭಾರತವು ವಿವರಿಸುತ್ತದೆ, ಇತರ ಸ್ಥಳಗಳಲ್ಲಿ ಶಿವನಿಗೆ ಐದು ತಲೆಗಳಿವೆ ಎಂದು ಹೇಳಲಾಗುತ್ತದೆ, ಇನ್ನೂ ಇತರ ಸ್ಥಳಗಳಲ್ಲಿ ಆತನಿಗೆ ಸಾವಿರಾರು ತಲೆಗಳಿವೆ ಎಂದು ಉಲ್ಲೇಖಿಸಲಾಗಿದೆ. ಇದು ಭವಿಷ್ಯದ ಸಂಶೋಧನೆಯ ಫಲಿತಾಂಶವಾಗಿರಬಹುದು.

ಆಧುನಿಕ ವಿಜ್ಞಾನವು ಅದೇ ಹಂತವನ್ನು ದಾಟಿದೆ. ಮೊದಲು ಅದು ಡಿಎನ್ಎಯ ಅಣುವಿನಲ್ಲಿ ಅಡೆನಿನ್ ಮತ್ತು ಗ್ವಾನೈನ್ ಎಂಬ ಎರಡು ಪ್ಯೂರಿನ್ಗಳು ಮತ್ತು ಸೈಟೋಸಿನ್ ಮತ್ತು ಯುರಾಸಿಲ್ ಎಂಬ ಎರಡು ಪಿರಿಮಿಡಿನ್ಗಳನ್ನು ಕಂಡುಹಿಡಿದಿದೆ.  ಆದ್ದರಿಂದ ಅವರು ಇದನ್ನು 'ಟೆಟ್ರಾಮೋನ್ಯೂಕ್ಲಿಯೋಟೈಡ್' ಎಂದು ಕರೆದರು. ನಂತರ ಕೆಲವು ಸಂಶೋಧಕರು ಯುರಾಸಿಲ್ ಬದಲಿಗೆ ಕೆಲವು ಡಿಎನ್ಎ ಅಣುಗಳಲ್ಲಿ ಥೈಮಿನ್ ಇದೆ ಎಂದು ಕಂಡುಕೊಂಡರು.  ಆದ್ದರಿಂದ ಟೆಟ್ರಾ-ಮೊನೊ-ನ್ಯೂಕ್ಲಿಯೋಟೈಡ್ (ಚತುರ್ಮುಖ) ಪರಿಕಲ್ಪನೆಯು ಕರಗಿತು ಮತ್ತು ಪೆಂಟಾ-ಮೊನೊ-ನ್ಯೂಕ್ಲಿಯೋಟೈಡ್ (ಪಂಚಮುಖ) ಪರಿಕಲ್ಪನೆಯು ಬಂದಿತು. ಸಂಶೋಧನೆಯು ಮುಂದುವರಿದಂತೆ, ವಿಜ್ಞಾನಿಗಳು ಸಹಸ್ರ-ಶಿರ್ಷ, ಸಾವಿರಾರು ತಲೆಗಳ ಪರಿಕಲ್ಪನೆಯನ್ನು ಸ್ಥಾಪಿಸುವ ಎರಡು ಸಾವಿರ ಮೊನೊನ್ಯೂಕ್ಲಿಯೋಟೈಡ್ಗಳನ್ನು ಕಂಡುಹಿಡಿದರು. ಇತ್ತೀಚಿನ ದಿನಗಳಲ್ಲಿ ಕೇವಲ ನಾಲ್ಕು ಮೊನೊನ್ಯೂಕ್ಲಿಯೋಟೈಡ್ಗಳು ಮಾತ್ರ ಡಿಎನ್ಎಯ ಅಡಿಪಾಯವಾಗಿರಬೇಕು,

ಒಂದೇ ಮಾನವನ ಸೂಕ್ಷ್ಮಾಣು ಜೀವಕೋಶದ ಡಿ. ಎನ್. ಎ. ಯು 10ಅನ್ನು 9 (ಹತ್ತುಅನ್ನು ಒಂಬತ್ತಕ್ಕೆ ಏರಿಸಲಾಗಿದೆ) ಮೂಲ ಜೋಡಿಗಳ ಶಕ್ತಿಗೆ ಏರಿಸುತ್ತದೆ.

ಆದ್ದರಿಂದ ಋಷಿಗಳು ಹೇಳಿರುವುದು  ಸರಿ ಎಂದು ತೋರುತ್ತದೆ. ಪ್ರಾಚೀನ ಋಷಿಮುನಿಗಳು ಮಾನವ ಅಂಗಗಳಾದ ತಲೆ, ಕಣ್ಣು ಇತ್ಯಾದಿಗಳೊಂದಿಗೆ ಮಾಡಿದ ಹೋಲಿಕೆಗಳ ಬಗ್ಗೆ ನಾವು ಆಶ್ಚರ್ಯಪಡಬೇಕಾಗಿಲ್ಲ ಏಕೆಂದರೆ ನೋಬಲ್ ಪ್ರಶಸ್ತಿ ವಿಜೇತ ವ್ಯಾಟ್ಸನ್ ಅವರು ತಮ್ಮ ಪುಸ್ತಕ 'ದಿ ಡಬಲ್ ಹೆಲಿಕ್ಸ್' ನಲ್ಲಿ ಸಕ್ಕರೆ-ಫಾಸ್ಫೇಟ್ ಸಂಪರ್ಕವನ್ನು ಬೆನ್ನೆಲುಬಿನೊಂದಿಗೆ ಹೋಲಿಸಿದ್ದಾರೆ. ಅಂತಹ ಹೋಲಿಕೆಯು ಅವೈಜ್ಞಾನಿಕವಲ್ಲ ಏಕೆಂದರೆ ಸಾಮಾನ್ಯ ಮನುಷ್ಯನು ವಿಷಯವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಋಗ್ವೇದದ ಡಿಕೋಡ್ ಮಾಡಲಾದ ಸ್ತೋತ್ರಗಳನ್ನು ಹೀಗೆ ವಿವರಿಸಬಹುದು, "ಎಲ್ಲಾ ಜೀವಿಗಳಿಗೆ ಆಕಾರವನ್ನು ನೀಡುವ ತ್ವಸ್ತವನ್ನು (ಋಗ್ವೇದದಲ್ಲಿ ಡಿಎನ್ಎಯನ್ನು ಉಲ್ಲೇಖಿಸಲಾಗಿರುವಂತೆ) ಓಂನ ರೂಪ (ವಿಶ್ವರೂಪ) ಎಂದು ಕರೆಯಲಾಗುತ್ತದೆ ಮತ್ತು ಇದು ಎಲ್ಲಾ ಜೀವಿಗಳಲ್ಲಿ ಡಿಎನ್ಎ ಇದೆ ಎಂದು ಸಾಬೀತುಪಡಿಸುತ್ತದೆ".

ಅದೇ ಸ್ತೋತ್ರವು ಮುಂದೆ ಹೋಗಿ ಡಿಎನ್ಎಯಲ್ಲಿ ಹುದುಗಿರುವ ಕೇಂದ್ರಕವಾದ 'ಬೃಹಸ್ಪತಿಯನ್ನು' ಗುರುತಿಸುತ್ತದೆ. ಅಂತೆಯೇ, ದ್ಯುತಿಸಂಶ್ಲೇಷಣೆ, ಯುಕಾರ್ಯೋಟಿಕ್ ಕೋಶದ ಬೆಳವಣಿಗೆ, ಜೈವಿಕ-ಭೌಗೋಳಿಕ ರಾಸಾಯನಿಕ ಚಕ್ರ, ಆಕ್ಸಿಡೀಕರಣ ಮತ್ತು ಕಡಿತ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಸಹ ಸಂಕೇತಗಳಿವೆ, ಇದನ್ನು ಅಥರ್ವವೇದದಲ್ಲಿ ವಿವರಿಸಲಾಗಿದೆ, ಇದು ವಿಶ್ವದ ಸಂಪನ್ಮೂಲಗಳ ಬಳಕೆಯ ಕೊನೆಯಲ್ಲಿ ಬರುತ್ತದೆ.

ವಾಲ್ಮೀಕಿ ರಾಮಾಯಣದಲ್ಲಿ ಭೂಮಿಯ ವಾಯುಮಂಡಲದ ಪದರಗಳ ವಿವರಣೆ.... ನಿರೀಕ್ಷಿಸಿ....