ಕೇದಾರನಾಥ ಸೇರಿದಂತೆ ಹಲವಾರು ಪವಿತ್ರ ಕ್ಷೇತ್ರಗಳನ್ನ ಹೊಂದಿರುವ ಉತ್ತರಾಖಂಡ್ ನಲ್ಲಿ ಇತ್ತೀಚೆಗೆ ಪ್ರವಾಹ ತಲೆದೋರಿ ಕನ್ನಡಿಗರೂ ಸೇರಿದಂತೆ ೧೦೦೦೦ಕ್ಕೂ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ, ಲಕ್ಷಾಂತರ ಜನ ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಅಭಿವೃದ್ದಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಮಾನವ ಎಸಗಿದ ದೌರ್ಜನ್ಯಕ್ಕೆ ಉತ್ತರ ಭಾರತದ ಜನ ಸರಿಯಾಗಿಯೇ ಬೆಲೆ ತೆರಬೇಕಾಗಿ ಬಂದಿರುವುದು ಮಾತ್ರ ಘೋರ ವಿಪರ್ಯಾಸ.
ಈ ಎಲ್ಲದರ ಹಿನ್ನಲೆಯಲ್ಲಿ ಭಾರತದಲ್ಲಿ ಈ ಹಿಂದೆ ನಡೆದ ೧೦ ಪ್ರಮುಖ ಪ್ರಕೃತಿ ವಿಕೋಪಗಳ, ಅದರಿಂದಾದ ಅನಾಹುತಗಳತ್ತ ಕಣ್ಣಾಡಿಸೋಣ.....
೧. ೧೯೭೯ರಲ್ಲಿ ಗುಜರಾತ್ ನ ಮಾಚು-ಮಾಚು ಅಣೆಕಟ್ಟೆ ಒಡೆದುದುದರ ಪರಿಣಾಮ ರಾಜ್ಕೋಟ್ ಜಿಲ್ಲೆಯ ಸುಮಾರು ೧೫೦೦೦ ಮಂದಿ ಸಾವಿಗೀಡಾದ್ದರು. ಈ ದುರಂತವು ಗಿನ್ನಿಸ್ ಪುಸ್ತಕದಲ್ಲಿಯೂ ದಾಖಲಾಗಿದ್ದು ಜಗತ್ತಿನ ಅತ್ಯಂತ ಕೆಟ್ಟ ಅಣೆಕಟ್ಟೆ ದುರಂತವೆನ್ನಲಾಗಿದೆ.
೨. ೧೯೮೭ರಲ್ಲಿ ಬಿಹಾರದಲ್ಲಿ ಕೋಸಿ ನದಿ ಉಕ್ಕಿ ಹರಿದ ಪರಿಣಾಮವಾಗಿ ೧೪೦೦ ಜನರು ಪ್ರವಾಹಕ್ಕೆ ಬಲಿಯಾಗಿ ೫೦೦೦ಕ್ಕೂ ಮಿಕ್ಕಿ ಜಾನುವಾರುಗಳು ಸಾವಿಗೀಡಾಗಿದ್ದವು, ಸಾವಿರಾರು ಕೋಟಿ ನಷ್ಟವಾಗಿತ್ತು.
೩. ೨೦೦೪ರಲ್ಲಿ ಬಿಹಾರದ ಕೋಸಿ, ಗಂಡಕಿ, ಗಂಗೆ ಸೇರಿದಂತೆ ಪ್ರಮುಖ ನದಿಗಳು ತುಂಬಿ ಹರಿದ ಪರಿಣಾಮ ಪ್ರವಾಹ ಉಂಟಾಗಿದ್ದು ೮೮೩ ಜನರು ಸಾವಿಗೀಡಾಗಿ ಸಾವಿರಾರು ಜಾನುವಾರುಗಳು ಮರಣಹೊಂದಿದ್ದವು.
೪. ೨೦೦೫ರ ಜುಲೈ ೨೬ ರಂದು ಮಹಾರಾಷ್ತ್ರದ ಮುಂಬೈ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡು ೫೦೦೦ಕ್ಕೂ ಹೆಚ್ಚಿನ ಜನರನ್ನು ಬಲಿ ತೆಗೆದುಕೊಂಡಿತ್ತು. ಇದೇ ಕಾರಣದಿಂದ ಇಂದಿಗೂ ಜುಲೈ ೨೬ ನ್ನು ಮಹಾರಾಷ್ತ್ರದಲ್ಲಿ ”ಕಪ್ಪು ದಿನ”ವಾಗಿ ಆಚರಿಸಲಾಗುತ್ತದೆ.
೫. ೨೦೦೫ರ ಜೂನ್ ೩೦ರಿಂದ ಜುಲೈ ೧೧ರ ವರೆಗೆ ಗುಜರಾತ್ ನಲ್ಲಿ ದೇಶ ಕಂಡು ಕೇಳಿರದ ಅತ್ಯಂತ ದೀರ್ಘಕಾಲದ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಇದರಿಂದಾಗಿ ೧೨೩ ಜನರು ಸತ್ತು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು. ಈ ಸಂದರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರ ಆದಾಯ ತೆರಿಗೆ ವಿವರ ಸಲ್ಲಿಸಬೇಕಾದ ದಿನಾಂಕವನ್ನೇ ಮುಂದೂಡಿತ್ತು.
೬. ೨೦೦೭ರಲ್ಲಿ ದಕ್ಷಿಣ ಭಾರತದಲ್ಲಿ ಸಂಭವಿಸಿದ ಸರಣಿ ಪ್ರವಾಹದಿಂದಾಗಿ ಸುಮಾರು ೨೦೦೦ ಮಂದಿ ಸಾವಿಗೀಡಾಗಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು. ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು, ಪಂಡಿಚೇರಿಗಳಲ್ಲಿ ಈ ಪ್ರವಾಹದಿಂದ ವ್ಯಾಪಕ ಹಾನಿಯಾಗಿತ್ತು.
೭. ೨೦೦೦೮ರಲ್ಲಿ ಭಾರತ-ನೇಪಾಳ ಗಡಿಯಲ್ಲಿ ಕೋಸಿ ನದಿ ಉಕ್ಕಿ ಹರಿದ ಪರಿಣಾಮವಾಗಿ ಉತ್ತರ ಬಿಹಾರದಲ್ಲಿ ೪೩೪ ಜನ ಸಾವಿಗೀಡಾಗಿ, ಸುಮಾರು ೨೦ ಲಕ್ಷ ಮಂದಿ ನಿರಾಶ್ರಿತರಾಗಿದ್ದರು.
೮. ೨೦೦೯ರಲ್ಲಿ ಕರ್ನಾಟಕ, ಆಂಧ್ರ, ಒಡಿಶ್ಯಾ ಸೇರಿದಂತೆ ಬಹುತೇಕ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ ಪರಿಣಾಮ ೨೨೯ ಮಂದಿ ಸತ್ತು ಕೋಟ್ಯಾಂತರ ಮೌಲ್ಯದ ಆಸ್ತಿ-ಪಾಸ್ತಿ ಹಾನಿ ಸಂಭವಿಸಿತ್ತು.
೯. ೨೦೧೦ರಲ್ಲಿ ಜಮ್ಮು ಮತ್ತು ಕಾಶ್ಮೀರದ ಲೇಹ್ ಹಾಗೂ ಲಡಾಖ್ ಗಳಲ್ಲಿ ತೀವ್ರ ತೆರದ ಪ್ರವಾಹ ಪರಿಸ್ಥಿತಿ ತಲೆದೋರಿದ ಪರಿಣಾಮ ಅಪಾರ ಪ್ರಮಾಣದ ಆಸ್ತಿ ನಾಶವಾಗಿತ್ತು.
೧೦. ೨೦೧೨ರಲ್ಲಿ ಈಶಾನ್ಯ ರಾಜ್ಯ ಅಸ್ಸೋಮ್ ನಲ್ಲಿ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಉಕ್ಕಿ ಹರಿದ ಪರಿಣಾಮ ಭೀಕರ ಪ್ರವಾಹ ಪರಿಸ್ತಿತಿ ತಲೆದೋರಿತ್ತು. ಇದರಿಂದಾಗಿ ಅಲ್ಲಿನ ಕಾಜಿರಂಗ ರಾಷ್ತ್ರೀಯ ಉದ್ತಾನದಲ್ಲಿದ್ದ ಅನೇಕ ಪ್ರಾಣಿಗಳು ಅಸುನೀಗಿದ್ದವು.
No comments:
Post a Comment