Thursday, September 05, 2013

ನಮ್ಮಲ್ಲಿನ ಸ್ಥಳ ಪುರಾಣಗಳು(Myths) -5

ಗೋಕರ್ಣ(Gokarna)
    ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ನನ್ನ ನಮಸ್ಕಾರಗಳು. ಇನ್ನೇನು ನಾಲ್ಕೈದು ದಿನಗಳಿರುವ ಚೌತಿ ಹಬ್ಬಕ್ಕೆ ನೀವೆಲ್ಲರೂ ಕಾಯುತ್ತಿದ್ದೀರಿ, ಹೌದು ತಾನೆ? ನಾನಂತೂ ಕಾಯುತ್ತಿದ್ದೇನೆ, ಅದಕ್ಕೂ ಮುಂಚಿತವಾಗಿ ಗಣಪತಿಯು ಪ್ರತಿಷ್ಠಾಪಿಸಿದ ಶಿವನ ಆತ್ಮಲಿಂಗದ ಕಥೆಯನ್ನು ತಿಳಿಯೋಣವೆ?
    ಇಂದಿನ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಹಿಂದೂಗಳ ಪ್ರಸಿದ್ದ ಆರಾಧನಾ ಕ್ಷೇತ್ರ ಗೋಕರ್ಣ. ಇಲ್ಲಿ ಪರಮೇಶ್ವರನು ಸ್ವಯಂ ಆತ್ಮಲಿಂಗ ಸ್ವರೂಪಿಯಾಗಿ ನೆಲೆಸಿದ್ದು, ಅವನನ್ನು ಇಲ್ಲಿ ನೆಲೆಗೊಳಿಸಿದ್ದು ಸಹ ಶಿವಸುತನಾದ ವಿಘ್ನ ನಿವಾರಕ ಗಣೇಶನೆನ್ನುವುದು ಬಹು ವಿಶೇಷ.
    ಯುಗ ಯುಗಾಂತರಗಳ ಹಿಂದೊಮ್ಮೆ ಲಂಕಾಧಿಪತಿಯಾಗಿದ್ದ ರಾವಣನು ಮಹಾ ಶಿವಭಕ್ತೆಯಾಗಿದ್ದ ತನ್ನ ತಾಯಿಯ ಪೂಜೆಯ ಸಲುವಾಗಿ ಕೈಲಾಸದಿಂದ ಶಿವನನ್ನು ಬೇಡಿ ಒಂದು ವಿಶೇಷ ಲಿಂಗವನ್ನು ತಂದು ಕೊಟ್ಟಿದ್ದನು. ಅದನ್ನು ಬಹಳ ನಿಷ್ಠೆ, ಭಕ್ತಿಯಿಂದ ಆತನ ತಾಯಿಯು ನಿತ್ಯವೂ ಪೂಜಿಸುತ್ತಿರಲು ದೇವರಾಜನಾದ ಇಂದ್ರನಿಗೆ ಇದನ್ನು ಸಹಿಸಲಾಗಲಿಲ್ಲ. ರಾಕ್ಷಸ ರಾಜ ರಾವಣನ ಅರಮನೆಯಲ್ಲಿ ಶಿವಪೂಜೆ ಅಷ್ಟು ವೈಭವಯುತ್ವಾಗಿ ನಡೆಯುವುದನ್ನು ಇಂದ್ರನು ಕಂಡು ಭಯಗೊಂಡು ಇದನ್ನು ಹೇಗಾದರೂ ಸರಿ ನಿಲ್ಲಿಸಬೇಕೆಂದು ಯೋಜಿಸಿದ. ಮತ್ತು ಶಿವಲಿಂಗವನ್ನು ಸಮುದ್ರಕ್ಕೆ ಎಸೆದು ಆಸ್ಥಾನದಲ್ಲಿ ಶಿವಪೂಜೆ ನಡೆಯದಂತೆ ಮಾಡಿದ. ಇದನ್ನು ಕಂಡು ಕುಪಿತಗೊಂಡ ರಾವಣನ ತಾಯಿಯು ತನ್ನ ಮಗನಲ್ಲಿ ವಿಚಾರವನ್ನು ತಿಳಿಸಿ ತನಗೊಂದು ಶಿವಲಿಂಗವನ್ನು ತಂದುಕೊಡುವಂತೆ ಬೇಡಿದಳು. ಅವಳ ಬೇಡಿಕೆಯನ್ನು ಮನ್ನಿಸಿದ ರಾವಣ ಮತ್ತೆ ಶಿವಲಿಂಗ ತರುವುದಕ್ಕಾಗಿ ಕೈಲಾಸದತ್ತ ಹೊರಟ.
    ಕೈಲಾಸದಲ್ಲಿ ಹಲವಾರು ವರ್ಷಗಳ ಕಾಲ ಶಿವನನ್ನು ಕುರಿತು ಮಹಾ ತಪಸ್ಸನ್ನಾಚರಿಸಿದ ರಾವಣನ ಭಕ್ತಿ ಶಿವನನ್ನು ಸಂಪ್ರೀತಗೊಳಿಸಿತು. ಅದೊಂದು ಶುಭ ಮಹೂರ್ತದಲ್ಲಿ ಶಿವನು ತನ್ನ ಪತ್ನಿ ಉಮಾದೇವಿಯ ಸಮೇತನಾಗಿ ರಾವಣನಿಗೆ ದರ್ಶನ ನೀಡಿದನು. ಭಕ್ತ ರಾವಣ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ, ನಿನಗೇನು ವರ ಬೇಕು ಕೇಳು ಎನ್ನುವುದಾಗಿ ಶಿವನು ಅಪ್ಪಣೆಯನ್ನಿಡಲು ರಾವಣನು ತನ್ನ ತಾಯಿಯ ನಿತ್ಯಪೂಜೆಗಾಗಿ ನಿನ್ನಲ್ಲಿರುವ ಆತ್ಮಲಿಂಗವು ಬೇಕಾಗಿದೆ ಎಂದು ಕೋರಿಕೆಯನ್ನಿಡುವನು. ಅದನ್ನು ಪರಮೇಶ್ವರನು ಸಂತೋಷದಿಂದ ಮನ್ನಿಸಿ ಸೂರ್ಯನಿಗಿಂತಲೂ ಸಾವಿರ ಪಟ್ಟು ಹೆಚ್ಚು ಪ್ರಕಾಶದಿಂದ ಪ್ರಜ್ವಲಿಸುತ್ತಿರುವ ಆತ್ಮಲಿಂಗವನ್ನು ರಾವಣನಿಗೆ ನೀಡುವನು. ಅದಾಗ ರಾವಣನ ಕಣ್ಣಿಗೆ ಮಾಯೆಯು ಆವರಿಸಿದಂತಾಗಿ ರಾವಣನು ಪರಮೇಶ್ವರನೇ ನನ್ನ ಇನ್ನೊಂದು ಕೋರಿಕೆಯನ್ನು ನಡೆಸಲಾರೆಯಾ? ಎಂದು ಕೇಳುವನು. ಪರಮೇಶ್ವರನು ಏನದು ನಿನ್ನ ಕೋರಿಕೆ? ಎನ್ನಲು ರಾವಣನು ನಿನ್ನ ಪಕ್ಕದಲ್ಲಿರುವ ಸುಂದರ ತರುಣಿಯು ನನಗೆ ಬೇಕು, ನಾನವಳನ್ನು ಲಗ್ನವಾಗಬೇಕೆಂದಿರುವೆ ಎನ್ನುವನು. ಪರಮೇಶ್ವರನು ಒಂದು ಕ್ಷಣ ಕುಪಿತಗೊಂಡರೂ ತೋರಿಸಿಕೊಳ್ಲದೆ ಓಹೋ, ಸಂತೋಷದಿಂದ ಕರೆದುಕೊಂಡು ಹೋಗು ಎನ್ನುತ್ತಾನೆ, ಜತೆಗೆ ಇನ್ನೊಂದು ಎಚ್ಚರಿಕೆಯನ್ನೂ ನೀಡುತ್ತಾನೆ, ಅದೆಂದರೆ- ಆತ್ಮಲಿಂಗವನ್ನು ನಿನ್ನ ಪ್ರಯಾಣ ಅಂತ್ಯವಾಗುವವರೆಗೂ ಎಲ್ಲಿಯೂ ನೆಲವನ್ನು ಸ್ಪರ್ಷಿಸದಂತೆ ನೋಡಿಕೊ, ಒಂದು ವೇಳೆ ಅದೆಲ್ಲಾದರೂ ಭೂಸ್ಪರ್ಷವಾದರೆ ಮತ್ತದನ್ನು ಅಲ್ಲಿಂದ ಮೇಲೆತ್ತುವುದು ಸಾಧ್ಯವಿಲ್ಲ ಒಂದು ಎಚ್ಚರಿಕೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ರಾವಣನು ತಾನು ಮೂಲೋಕವನ್ನೂ ಗೆದ್ದ ಸಂಭ್ರಮದಿಂದ ಆತ್ಮಲಿಂಗ ಹಾಗೂ ಉಮಾದೇವಿಯರೊಂದಿಗೆ ಲಂಕೆಯ ಮಾರ್ಗ ಹಿಡಿಯುತ್ತಾನೆ.
    ಇತ್ತ ಪರಮೇಶ್ವರ ರಾವಣಾನಿಗೆ ತನ್ನ ಆತ್ಮಲಿಂಗ ಹಾಗೂ ಉಮಾದೇವಿಯನ್ನು ನೀಡಿದ ಸುದ್ದಿ ತಿಳಿದು ಶಿವಪುತ್ರನಾದ ಗಣೇಶ ಮತ್ತು ಇಂದ್ರಾದಿ ದೇವತೆಗಳು ಚಕಿತಗೊಳ್ಳುತ್ತಾರೆ. ಅವರೆಲ್ಲರೂ ತಕ್ಷಣವೇ ಕೈಲಾಸಕ್ಕೆ ಧಾವಿಸಿ ಪರಮೇಶ್ವರನನ್ನು ಕಂಡು ರಾವಣಾನಿಗೆ ಆತ್ಮಲಿಂಗವನ್ನು ನೀಡಿದುದರ ಕಾರಣಾ ಮತ್ತು ಅದರಿಂದಾಗಬಹುದಾದ ಅನಾಹುತಗಳ ಬಗ್ಗೆ ನಿವೇದಿಸುತ್ತಾರೆ. ಎಲ್ಲರ ಮಾತನ್ನೂ ತಾಳ್ಮೆಯಿಂದಾಲಿಸಿದ ಪರಮೇಶ್ವರನು ಅಂತ್ಯದಲ್ಲಿ ಹೀಗೆನ್ನುತ್ತಾನೆ- ನೋಡಿ ನಾನು ನೀಡಿದ ವರವನ್ನು ಹಿಂಪಡೆಯಲು ಬರುವುದಿಲ್ಲ, ಆದರೆ ನೀವ್ಯಾರೂ ಇದರಿಂದ ಗಾಬರಿಯಾಗಬೇಕಿಲ್ಲ. ಎಲ್ಲವನ್ನೂ ಸರಿಯಾಗಿಸುವವ ಶ್ರೀ ಹರಿಯಿದ್ದಾನೆ. ನೀವೆಲ್ಲರೂ ಅವನ ಬಳಿ ಹೋಗಿರಿ. ಇದನ್ನು ಕೇಳಿದ ಸರ್ವ ದೇವಾನು ದೇವತೆಗಳು ಮಹಾವಿಷ್ಣುವಿನಲ್ಲಿಗೆ ತೆರಳಿ ಅವನ ಬಳಿ ನಡೆದ ಘಟನೆಗಳನ್ನು ವಿವರಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಬೇಡುತ್ತಾರೆ. ದೇವತೆಗಳ ಮಾತುಗಳನ್ನು ಆಲಿಸಿದ ಹರಿಯು ತಕ್ಷಣವೆ ಕಾರ್ಯತತ್ಪರನಾಗಿ ಬ್ರಹ್ಮಣನ ವೇಷವನ್ನು ತಾಳಿ ರಾವಣನಿಗೆ ಎದುರಾಗುತ್ತಾನೆ. ರಾವಣನನ್ನು ಕಂಡ ಬ್ರಹ್ಮಣಾ ರೂಪಿ ಶ್ರೀ ವಿಷ್ಣುವು ಎಲೈ ರಾವಣಾ ನೀನು ಅದು ಹೇಗೆ ಇಷ್ಟೊಂದು ಸುಂದರವಾದ ಯುವತಿಯನ್ನು ಹೊತ್ತು ಬರುತ್ತಿರುವೆ? ಎಂದು ಕೇಳುತ್ತಾ ಅವನನ್ನು ಮಾತಿಗೆಳೆಯುತ್ತಾನೆ. ಆಗ ರಾವಣ ಹೌದು, ಕೈಲಾಸಾಧಿಪತಿಯಾದ ಪರಮೇಶ್ವರನೇ ನನಗಿವಳನ್ನು ನೀಡಿದನು, ಅಲ್ಲಿಂದಿವಳನ್ನು ನನ್ನ ರಾಜಧಾನಿಯಾದ ಲಂಕೆಗೆ ಕರೆದೊಯ್ಯುತ್ತಿದ್ದೇನೆ ಎನ್ನುತ್ತಾ ಅವಳ ಸುಂದರ ವದನವನ್ನು ನೋಡಲೆಂಬಂತೆ ಕ್ಷಣಕಾಲ ಅವಳನ್ನು ಹೆಗಲಿನಿಂದ ಕೆಳಗಿಳಿಸುತ್ತಾನೆ. ಒಂದು ಕ್ಷಣಕ್ಕೆ ಕಾಯುತ್ತಿದ್ದ ಶ್ರೀ ವಿಷ್ಣುವು ತನ್ನ ಮಾಯೆಯಿಂದ ಉಮೆಯ ಸುಂದರವಾದ ರೂಪು ರಾವಣನ ಕಣ್ಣಿಗೆ ಕುರೂಪಿ ಮುದುಕಿಯಂತೆ ಕಾಣುವಂತೆ ಮಾಯಾಜಾಲವನ್ನು ಹೆಣೆಯುತ್ತಾನೆ. ತಾನು ಹೊತ್ತು ತಂದ ಯುವತಿ ಕುರೂಪಿಯಾದ ಮುದುಕಿಯಾದುದನ್ನು ಕಂಡ ರಾವಣ ತಾನು ಕುಪಿತಗೊಳ್ಳುತ್ತಾನೆ, ಮತ್ತು ಪುನಃ ಕೈಲಾಸಕ್ಕೆ ಹಿಂತಿರುಗಿ ಶಿವನಲ್ಲಿ ನೀನು ನೀಡಿದ ಉಮೆಯು ಹೇಗೆ ಕುರೂಪಿಯೂ, ಮುದುಕಿಯೂ ಆದಳು? ಎಂದು ಪ್ರಶ್ನಿಸುತ್ತಾನೆ. ಇಷ್ಟಿರಬೇಕಾದರೆ ಮಹಾವಿಷ್ಣುವು ಉಮೆಯಂತೆಯೇ ಸುಂದರಿಯಾದ ಮಾಯಾಸುರನ ಮಗಳಾದಂತಹಾ ಮಂಡೋದರಿಯನ್ನು ರಾವಣನ ಮುಂದೆ ನಿಲ್ಲಿಸಿ ನಿನ್ನ ಉಮೆ ಇವಳೆ ಎನ್ನುವುದಾಗಿ ನಂಬಿಸುತ್ತಾನೆ. ಅದನ್ನು ನಂಬಿದಂತಹಾ ರಾವಣ ಮಂಡೋದರಿಯನ್ನು ವಿವಾಹವಾಗಿ ಆತ್ಮಲಿಂಗದೊಂದಿಗೆ ಪುನಃ ಲಂಕೆಯ ದಾರಿ ಹಿಡಿಯುತ್ತಾನೆ.
    ಅತ್ತ ಇಂದ್ರಾದಿ ದೇವತೆಗಳು ರಾವಣನಿಂದ ಆತ್ಮಲಿಂಗವನ್ನು ಹಿಂಪಡೆಯಲು ಗಣಪತಿಯ ಸಹಾಯವನ್ನು ಬೇಡುತ್ತಾರೆ. ಅವರ ಬೇಡಿಕೆಯಂತೆ ಗಣಪತಿಯು ಬ್ರಹ್ಮಣ ಬಾಲಕನ ವೇಷದಲ್ಲಿ ಗೋವುಗಳನ್ನು ಮೇಯಿಸುವವನಂತೆ ನಟಿಸುತಾ ರಾವಣನಿಗೆ ಎದುರಾಗುತ್ತಾನೆ. ಅದಕ್ಕೆ ಸರಿಯಾಗಿ ಸಂದ್ಯಾಕಾಲವು ಸಮೀಪಿಸಿರುತ್ತದೆ. ರಾವಣನು ಸಂದ್ಯಾವಂದನೆ ಮಾಡಬೇಕಿದ್ದು ಆತ್ಮಲಿಂಗವನ್ನು ನೆಲದ ಮೇಲಿಡುವಂತಿಲ್ಲವಾದುದರಿಂದ ಸುತ್ತಲೂ ಯಾರಾದರೂ ಇದ್ದಾರೆಯೆ ಎಂಬುದಾಗಿ ಹುಡುಕುತ್ತಿರುತ್ತಾನೆ. ಅದಾಗ ಸರಿಯಾಗಿ ಪುಟ್ಟ ಬಾಲಕ ಸ್ವರೂಪಿ ಗಣಪತಿ ಅವನ ಕಣ್ಣಿಗೆ ಬೀಳುತ್ತಾನೆ. ಅವನ ಬಳಿ ಬಂದ ರಾವಣ ಎಲೈ ಬಾಲಕ ನಾನು ಸಂದ್ಯಾವಂದನೆ ಮಾಡಬೇಕಿದೆ, ನನ್ನ ಸಂದ್ಯಾವಂದನೆಯಾಗುವವರೆಗೆ ಆತ್ಮಲಿಂಗವನ್ನು ಹಿಡಿದುಕೊಂಡಿರುವೆಯೆ? ಎಂದು ಕೇಳಲು ಬಾಲಕನು ಅದಕ್ಕೊಪ್ಪಿ ಸ್ವೀಕರಿಸುತ್ತಾ ಇದೇನಿದು ಇಷ್ಟೊಂದು ಭಾರವಿದೆ, ನನಗೆ ಹೆಚ್ಚು ಸಮಯ ಹಿಡಿದುಕೊಳ್ಳಲಾಗುವುದಿಲ್ಲ, ನೀನು ಬೇಗ ಬರುವೆ ತಾನೆ? ಎನ್ನುವುದಾಗಿ ಪ್ರಶ್ನಿಸಲು ರಾವಣ, ಓಹೋ ಬೇಗನೆ ಬರುವೆನು ಎಂದಾಗ ಮತ್ತೆ ಬಾಲಕನು ಒಂದು ಷರತ್ತು ವಿಧಿಸುತ್ತಾನೆ ನಾನು ಮೂರು ಬಾರಿ ರಾವಣಾ... ರಾವಣಾ... ರಾವಣಾ... ಎಂದು ಕರೆಯುತ್ತೇನೆ ಅಷ್ಟರಲ್ಲಿ ನೀನು ಬರದಿದ್ದರೆ ನಾನಿದನ್ನು ನೆಲದ ಮೇಳಿಟ್ಟುಬಿಡುವೆನು ಇದಕ್ಕೂ ಸಹ ಒಪ್ಪಿದ ರಾವಣ ಅವಸರವಾಗಿ ಸಂದ್ಯಾವಂದನೆಗೆ ತೆರಳುತ್ತಾನೆ.
    ರಾವಣನತ್ತ ಸಂದ್ಯಾವಂದನೆಗಾಗಿ ಕುಳಿತಿರುವಾಗಲೇ ಇತ್ತ ಬಾಲಕ ಸ್ವರೂಪಿಯಾದ ಗಣಪತಿಯು ಮೊದಲ ಸಲ ರಾವಣಾ.... ಎಂದು ಕರೆಯುತ್ತಾನೆ, ಮತ್ತೆ ಸಂದ್ಯಾವಂದನೆ ಮುಗಿಸಿ ಸೂರ್ಯನಿಗೆ ಅರ್ಘ್ಯವನ್ನು ಬಿಡುವಾಗ ಎರಡನೆ ಬಾರಿ ಕರೆಯುತ್ತಾನೆ, ಹಾಗೆ ಕರೆದರೂ ಬಾರದೆ ಹೋದ ರಾವಣನನ್ನು ಮತ್ತೆ ಕೊನೆಯ ಅರ್ಘ್ಯ ಸಮರ್ಪಿಸುತ್ತಿದ್ದಾಗಲೇ ಮೂರನೆ ಬಾರಿ ಕರೆದ ಗಣಪತಿ ಆತ್ಮಲಿಂಗವನ್ನು ನೆಲದ ಮೇಲಿಟ್ಟುಬಿಡುತ್ತಾನೆ. ಇದನ್ನು ಕಂಡ ರಾವಣ ಅವಸರದಲ್ಲಿ ಅರ್ಘ್ಯವನ್ನು ಪ್ರಧಾನ ಮಾಡಿ ಗಣಾಪತಿಯಲ್ಲಿಗೆ ಓಡಿ ಬರುತ್ತಾನೆ. ಆದರೆ ಅಷ್ಟರಲ್ಲಿ ಗಣಪತಿ ಅದನ್ನು ನೆಲದಲ್ಲಿಟ್ಟಾಗಿದುದರಿಂದ ಮತ್ತದನ್ನು ಮೇಲೆತ್ತಲು ಬರುವುದಿಲ್ಲ. ಇದರಿಂದ ಕೋಪಗೊಂಡ ರಾವಣನು ಗಣಪತಿಯ ಶಿರದ ಮೇಲೆ ಬಲವಾಗಿ ಗುದ್ದುತ್ತಾನೆ. ಮತ್ತೆ ಮತ್ತೆ ಪ್ರಯತ್ನಿಸಿದರೂ ರಾವಣನ ಕೈಗೆ ಆತ್ಮಲಿಂಗವು ಸಿಗುವುದಿಲ್ಲ. ಇದರಿಂದಾಗಿ ಕುಪಿತಗೊಂಡ ರಾವಣ ಅದನ್ನು ಮಹಾಬಲೇಶ್ವರನೆಂದು ಕರೆದು ಅಲ್ಲೇ ಪೂಜಿಸುತ್ತಾನೆ.
    ಮುಂದೆ ಅದೇ ಮಹಾಬಲೇಶ್ವರ ಕ್ಷೇತ್ರವೆಂದೂ, ಗೋಕರ್ಣವೆಂದೂ ಪ್ರಸಿದ್ದವಾಗುತ್ತದೆ. ಪರಮೇಶ್ವರನು ಸ್ವತಃ ಆತ್ಮಲಿಂಗ ಸ್ವರೂಪದಲ್ಲಿ ಮಹಾಬಲೇಶ್ವರನೆನಿಸಿ ನೆಲೆಯಾದರೆ ಶಕ್ತಿ ಸ್ವರೂಪಿಣಿ ಉಮಾ ದೇವಿಯು ತಾನು ಭದ್ರಕಾಳಿಯ ರೂಪದಲ್ಲಿ ನೆಲೆಯಾಗುತ್ತಾಳೆ. ಗಣೇಶನು ತನ್ನ ಬಾಲಕ ರೂಪದಲ್ಲೇ (ರಾವಣನು ತಲೆಗೆ ಗುದ್ದಿದ್ದರಿಂದ ಗಣಪತಿಯ ತಲೆಯಲ್ಲಿ ಬಿದ್ದ ಕುಳಿಯನ್ನು ಇಂಡೂ ಸಹ ನಾವು ನೋಡಬಹುದು)ನೆಲೆಸುತ್ತಾನೆ. ಅಂತೆಯೆ ಉಳಿದ ದೇವಾನು ದೇವತೆಗಳೆಲ್ಲರೂ ಬಂದು ಪರಮೇಶ್ವರ ನೆಲೆಸಿದ ಪ್ರದೇಶದಲ್ಲಿ ಅಲ್ಲಲ್ಲಿ ನೆಲೆಸುತ್ತಾರೆ. ಹೀಗಾಗಿ ಮುಂದೆ ಇದು ಪರಷುರಾಮ ಸೃಷ್ಟಿಯಲ್ಲಿನ ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಒಂದೆಂದೂ, ಭೂ ಕೈಲಾಸವೆಂದೂ ಪ್ರಸಿದ್ದಿ ಹೊಂದುವುದಲ್ಲದೆ ಇಂದಿಗೂ ಲಕ್ಷಾಂತರ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ.
    ಈಗ ಹೇಳಿ ಸ್ನೇಹಿತರೆ ಕಥೆಯು ಹೇಗಿತ್ತು, ನಿಮಗೆಲ್ಲಾ ಇಷ್ಟವಾಯಿತೆ?
    ನಿಮಗೆಲ್ಲಾ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು, ಗಣೇಶನು ನಮ್ಮನ್ನೆಲ್ಲಾ ಹರಸಿ ಒಳಿತನ್ನುಂಟುಮಾಡಲಿ, ವಿಘ್ನ ನಿವಾರಕನ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲೆ ಸದಾ ಇರಲಿ.
    ನಮಸ್ಕಾರ.

No comments:

Post a Comment