Tuesday, November 12, 2013

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -11

ಸಮಯಪುರ(Samayapuram)
    ಸಮಯಪುರ,ತಮಿಳು ನಾಡಿನಲ್ಲಿರುವ ಸುಪ್ರಸಿದ್ದ ಶಕ್ತಿಕೇಂದ್ರಗಳಲ್ಲಿ ಒಂದು. ತಮಿಳುನಾಡಿನ ತಿರುಚನಾಪಲ್ಲಿಯಿಂದ ಹದಿನಾರು ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರದಲ್ಲಿ ಶ್ರೀ ದೇವಿಯು ಅರುಲ್ಮಿಗು ಮಾರಿಯಮ್ಮನಾಗಿ ನೆಲೆಸಿದ್ದಾಳೆ.
    ಸ್ಥಳೀಯರು ಶ್ರೀ ಮಾರಿಯಮ್ಮನನ್ನು ಕಾಳಿಯ ಅವತಾರವೆಂದೇ ಭಾವಿಸುತ್ತಾರೆ. ಅಲ್ಲದೆ ಮಹಾಮಾಯಿ ಇಲ್ಲವೆ ಸೀತಾಲ ಗೌರಿ ಎಂಬ ಹೆಸರಿನಿಂದಲೂ ಸಂಬೋಧಿಸುತ್ತಾರೆ. ಒಟ್ಟಾರೆ ಶ್ರೀ ದೇವಿಯ ಸನ್ನಿಧಿಗೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ಮುಂದೆ ಮಂಡಿಯೂರಿ ತಮ್ಮ ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಾರೆ.     


    ಸಮಯಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಅನುಸಾರ ಶ್ರೀ ದೇವಿಯು ವಿಜಯನಗರ ಸಾಮ್ರಾಜ್ಯವಿದ್ದ ಕಾಲದಲ್ಲಿ ನಾಡಿನ ಉತ್ತರ ಭಾಗದಲ್ಲಿ ನೆಲೆಸಿದ್ದವಳು ಸಾಮ್ರಾಜ್ಯವು ಪತನಗೊಂಡ ನಂತರ ದಕ್ಷಿಣದ ತಮಿಳುನಾಡಿಗೆ ಬಂದು ನೆಲೆಸಿದಳೆನ್ನಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ದಕ್ಷಿಣದಲ್ಲಿ ತಿರುಚನಾಪಲ್ಲಿಯು ವಿಜಯನಗರ ಕಾಲದಲ್ಲಿ ಸಾಮ್ರಾಟರ ದಕ್ಷಿಣ ಭಾಗದ ಪ್ರಮುಖ ಸಾಮಂತ ರಾಜ್ಯವಾಗಿತ್ತು.
     ಇನ್ನೊಂದು ಕಥೆಯಂತೆ ಶ್ರೀ ಮಾರಿಯಮ್ಮ ದೇವಿಯು ತಿರುಚನಾಪಲ್ಲಿಯ ಬಳಿಯ ಶ್ರೀರಂಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಳು. ಆದರೆ ಅಲ್ಲಿನ ಕೆಲ ಅರ್ಚಕರು ಈ ಶಕ್ತಿದೇವತೆಯು ಜನರಿಗೆ ಭಯವನ್ನು ಹುಟ್ಟಿಸುತ್ತಾಳೆ, ಕೆಡುಕುಂಟಾಗುವಂತೆ ಮಾಡುತ್ತಾಳೆಂದು ಭಾವಿಸಿ ಅಲ್ಲಿನ ಕೆಲ ಕಾರ್ಮಿಕರ ಮೂಲಕ ಮಾರಿಯಮ್ಮನ ಮೂರ್ತಿಯನ್ನು ಅಲ್ಲಿಂದ ತೆಗೆಸಿ ಹಾಕಿದರು. ಆಗ ಸ್ವತಃ ಶ್ರೀ ದೇವಿಯು ಆ ಕಾರ್ಮಿಕರಿಗೆ ದಕ್ಷಿಣ ಮುಖದ ದಾರಿಯನ್ನು ತೋರಿಸಿ ಅಲ್ಲಿಗೆ ಕರೆದೊಯ್ಯುವಂತೆ ಹೇಳಿಕೊಂಡಳು. ಅದರಂತೆ ಕಾರ್ಮಿಕರು ಆ ಮೂರ್ತಿಯ ಸಮೇತ ದಕ್ಷಿಣದತ್ತ ಹೊರಟು ಕಮ್ಮನೂರು ಎನ್ನುವ ಸ್ಥಳವನ್ನು ತಲುಪಿದಾಗ ಮೂರ್ತಿಯು ಆ ನೆಲದಲ್ಲಿ ಬೇರೂರಿ ನಿಂತಿತು. ಆಗ ಕಾರ್ಮಿಕರು ಆ ಮೂರ್ತಿಯನ್ನು ಅದೇ ಊರಿನ ದಾರಿಯ ಪಕ್ಕದಲ್ಲಿಯೇ ಬಿಟ್ಟು ಹೊರಟರು.  ಅದಾಗಿ ಕೆಲ ದಿನಗಳ ಬಳಿಕ ಕಮ್ಮನೂರಿನ ದಾರಿಯಲ್ಲಿ ಸಾಗುತ್ತಿದ್ದ ಕೆಲ ದಾರಿಹೋಕರ ಕಣ್ಣಿಗೆ ಆ ಸುಂದರ ಮೂರ್ತಿಯು ಕಾಣಿಸಿಕೊಂಡಿತು. ಆ ದಾರಿಹೋಕರು ಅದನ್ನು ತಮ್ಮ ಹಳ್ಳಿಯ ಮದ್ಯ ಭಾಗದಲ್ಲಿ ಪ್ರತಿಷ್ಠೆ ಮಾಡಿ ತಮ್ಮ ಸ್ಥಳೀಯ ಮಾರಿಯಮ್ಮನ ಸ್ವರೂಪವೆಂದು ಭಾವಿಸಿ ಪೂಜಿಸುತ್ತಾ ಬಂದರು.
    ಮುಂದೆ ಹಲವು ವರ್ಷಗಳಾದ ಬಳಿಕ ತ್ರೇತಾ ಯುಗದಲ್ಲಿ ಶ್ರೀ ರಾಮನ ತಂದೆಯಾದ ದಶರಥ ಮಹಾರಾಜನು ತಾನು ಈ ಪ್ರದೇಶಕ್ಕೆ ಬಂದು ದೇವಿಯನ್ನು ನಾನಾ ವಿಧದಲ್ಲಿ ಭಕ್ತಿಪೂರ್ವಕ ಅರ್ಚಿಸಿದ್ದನು.
    ಅಲ್ಲಿಂದೀಚೆಗೆ ದ್ವಾಪರ, ಕಲಿಯುಗಗಳಾದಿಯಾಗಿ ಇಂದಿನವರೆಗೂ ಲಕ್ಷಾಂತರ ಭಕ್ತರ ಸೇವೆಯನ್ನು ಪಡೆಯುತ್ತಾ ತಾನು ವರ ಬೇಡಿದ ವರಗಳನ್ನು ಪೂರೈಸುತ್ತ ಆಶೀರ್ವಾದಪೂರ್ವಕ ನೆಲೆಸಿದ್ದಾಳೆ. 

No comments:

Post a Comment