Friday, November 15, 2013

ನಮ್ಮಲ್ಲಿನ ಸ್ಥಳ ಪುರಾಣಾಗಳು(Myths) -12

ಕೋಟೇಶ್ವರ(Koteshvar)
    ಕರ್ನಾಟಕ ಕರಾವಳಿಯಲ್ಲಿನ ಪ್ರಸಿದ್ದ ದೇವಾಲಯಗಳಲ್ಲಿ ಮಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಾಲಯವು ಪ್ರಮುಖವಾದುದು. (ಶ್ರೀ ಕ್ಷೇತ್ರ ಕೋಟೇಶ್ವರವು ಕರ್ನಾಟಕದ ಉಡುಪಿ ಜಿಲ್ಲೆಯ ತಾಲ್ಲೂಕು ಕೇಂದ್ರ ಕುಂದಾಪುರದಿಂದ ಸುಮಾರು ಐದು ಕಿಲೋಮೀಟರ್ ಅಂತರದಲ್ಲಿದೆ.)ಶ್ರೀ ಕ್ಷೇತ್ರವು ಹೆದ್ದಾರಿಯ ಪಕ್ಕದಲ್ಲಿಯೇ ಇದ್ದರೂ ಸಾಕಷ್ಟು ಪ್ರಶಾಂತ ವಾತಾವರಣವನ್ನು ಹೊಂದಿ ಭಕ್ತ ಜನರ ಮನಸ್ಸಿಗೆ ಶಾಂತಿಯನ್ನು ನೀಡಬಲ್ಲ ಪರಿಸರದಿಂದ ಕೂಡಿದೆ.  ಪರಶುರಾಮ ಕ್ಷೇತ್ರದಲ್ಲಿನ ಸಪ್ತ ಮೋಕ್ಷದಾಯಕ ಕ್ಶೇತ್ರಗಳಲ್ಲಿ ಒಂದೆನಿಸಿರುವ ಶ್ರೀ ಕ್ಷೇತ್ರ ಕೋಟೇಶ್ವರದಲ್ಲಿನ ಕೋಟಿಲಿಂಗೇಶನು ನಾನಾ ವಿಧದ ಕೋರಿಕೆಗಳೊಂದಿಗೆ ತನ್ನಲ್ಲಿಗೆ ಆಗಮಿಸುವ ಭಕ್ತಾದಿಗಳ ಕೋರಿಕೆಗಳಾನ್ನು ಅವರವರ ಇಚ್ಚಾನುಸಾರ ಅತಿ ಶೀಘ್ರದಲ್ಲಿ ಪೂರೈಸಬಲ್ಲವನಾಗಿದ್ದಾನೆ.
    ಕೋಟೇಶ್ವರ ಕ್ಷೇತ್ರವು ಅತ್ಯಂತ ಪ್ರಾಚೀನ ಶೈವಕ್ಷೇತ್ರವೆನಿಸಿದ್ದು ಯುಗ ಕಲ್ಪಗಳಿಂದಲೂ ಪರಮೇಶ್ವರನು ಇಲ್ಲಿ ನೆಲೆಸಿ ಭಕ್ತರಿಗೆ ಅಭಯವನ್ನು ನೀಡುತ್ತಾ ಬಂದಿರುವುದಕ್ಕೆ ನಮಗೆ ಸಾಕಷ್ಟು ಆಧಾರಗಳು ದೊರೆಯುತ್ತವೆ.
    ಪುರಾಣ ಕಾಲದಲ್ಲಿ ‘ಧ್ವಜಪುರ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕೋಟೇಶ್ವರ ಕ್ಷೇತ್ರವು ಐತಿಹಾಸಿಕ ದಾಖಲೆಗಳಲ್ಲಿ ‘ಕುಡಿಕೂರು’ ಎಂದು ಗುರುತಿಸಲ್ಪಟ್ಟಿರುತ್ತದೆ.
    ಯುಗಾಂತರಗಳ ಹಿಂದೊಮ್ಮೆ ಪುಷ್ಕರ ಕಲ್ಪದಲ್ಲಿ ಸೃಷ್ಟಿಕರ್ತನಾದ ಬ್ರಹ್ಮದೇವನು ‘ಜಗತ್ತಿನ ಸರ್ವ ಜೀವಿಗಳನ್ನು ಸೃಷ್ಟಿಸುವ ತಾನೇ ಸರ್ವಶ್ರೇಷ್ಠ’ ಎನ್ನುವುದಾಗಿ ಅಹಂಕಾರವನ್ನು ತಾಳಿದ್ದನು. ಅದಾಗ ಶಿವಗಣಗಳಲ್ಲಿ ಪ್ರಮುಖನಾದ ಷಣ್ಮುಖನೆನ್ನುವವನು ಬ್ರಹ್ಮದೇವರ ಬಳಿಸಾರಿ ಶಿವತತ್ವವನ್ನು ಉಪದೇಶಿಸಿದನು. ಅದಾಗ ಬ್ರಹ್ಮದೇವನು ಶಿವತತ್ವವನ್ನು ಮೆಚ್ಚಿಕೊಂಡು ತನ್ನ ಅಹಂಕಾರದ ವರ್ತನೆಗಾಗಿ ನಾಚಿದನಲ್ಲದೆ ತನ್ನ ವರ್ತನೆಯಿಂದಾದ ಪಾಪಕರ್ಮಕ್ಕೆ ಪ್ರಯಶ್ಚಿತ್ತವನ್ನು ಹೊಂದಲು ನಿರ್ಧರಿಸಿದನು. ಇದರ ಸಲುವಾಗಿ ಪರಮೇಶ್ವರನ ಅನುಗ್ರಹವನ್ನು ಹೊಂದಲು ಶಿವನ ಕುರಿತು ಘೋರ ತಪಸ್ಸಿನಲ್ಲಿ ತೊಡಗಿದನು. ಹೀಗೆ ಹಲವು ವರುಷಗಳ ಕಾಲದ ತಪಸ್ಸಿನ ನಂತರ ಪರಮೇಶ್ವರನು ಲಿಂಗರೂಪಿಯಾಗಿ ಕಾಣಿಸಿಕೊಂಡನು. ಹಾಗೆ ಲಿಂಗ ಸ್ವರೂಪಿಯಾದ ಪರಮೇಶ್ವರನಿಗೆ ಬ್ರಹ್ಮದೇವನು ತಾನು ಸಾಷ್ಟಾಂಗ ನಮಸ್ಕರಿಸಿ ಏಳುವ ಸಮಯದಲ್ಲಿ ತನ್ನೆದುರಿಗೆ ಕೋಟಿ ಲಿಂಗಗಳನ್ನು ಕಂಡು ಆಶ್ಚರ್ಯಚಕಿತನಾದನು. ಹೀಗೆ ಬ್ರಹ್ಮದೇವನಿಗೆ ಆಶೀರ್ವದಿಸಿದ ಪರಮೇಶ್ವರನು ಆ ಶಿವಲಿಂಗದಲ್ಲಿ ಐಕ್ಯನಾದನು.
    ದೇವಾಲಯದ ಗರ್ಭಗೃಹದಲ್ಲಿ ಸಣ್ಣದಾದ ಬಾವಿಯೊಂದು ಇದ್ದು ಆ ಬಾವಿಯೊಳಗೆ ಕೈಯ್ಯಾಡಿಸಿದ್ದಾದಲ್ಲಿ ಶಿವಲಿಂಗದ ತುದಿಗಳಂತಹಾ ರಚನೆಗಳನ್ನು ಸ್ಪರ್ಶಿಸಿದ ಅನುಭವವಾಗುತ್ತದೆ. ಆ ರಚನೆಗಳನ್ನು ಕೋಟಿಲಿಂಗಗಳೆಂದು ಗುರುತಿಸಲಾಗಿದೆ. ಇಂದು ಈ ಬಾವಿಯ ಮೇಲೆ ಪಾಣಿಪೀಠವನ್ನು ಸ್ಥಾಪಿಸಿ ಅದರ ಮೇಲೆ ಪರಮೇಶ್ವರನ ಕಂಚಿನ ಪ್ರತಿಮೆಯನ್ನಿಟ್ಟು ಪೂಜೆ ಮಾಡಿಕೊಂಡು ಬರಲಾಗುತ್ತಿದೆ.
    ದೇವಾಲಯದ ಉತ್ತರ ದಿಕ್ಕಿನಲ್ಲಿ ಸಾಕಷ್ಟು ದೊಡ್ಡದಾದ ಪುಷ್ಕರಿಣಿಯು ಇದ್ದು ಇದಕ್ಕೆ ಕೋಟಿ ತೀರ್ಥವೆಂದು ಕರೆಯಲಾಗುತ್ತದೆ. ಇದರಲ್ಲಿನ ಜಲವು ಬಹಳ ಪವಿತ್ರವಾದುದೆಂದು ಭಾವಿಸಲಾಗುತ್ತದೆ.

No comments:

Post a Comment