Sunday, March 23, 2014

‘ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು?’

ಇದ್ದಕ್ಕಿದ್ದಂತೆಯೇನಾನು ಸಾಯುವೆನುಎಂಬ ಭಯವು ನನ್ನನ್ನಾವರಿಸಿಕೊಂಡಿತು…..    ಭಾವನೆಯು ತೋರಿದ ಕೂದಲೇ ಈಗ ನಾನೇನು ಮಾಡಬೇಕೆಂದು ನನ್ನಲ್ಲಿ ನಾನೇ ಯೋಚಿಸತೊಡಗಿದೆನು.  ಮರಣ ಭಯವು ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿತು. ನಾನು ಮಾತುಗಳಿಂದ ಹೇಳಿದೆ, ‘ಇದೋ ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು? ಸಾಯುವವನು ಯಾರು?  ದೇಹವು ಸಾಯುತ್ತದೆ.’

 “ಕಡೆಯದಾಗಿ ನಾನು ಮಧುರೆಯನ್ನು ಬಿಟ್ಟು ಹೊರಡುವ ಆರು ವಾರಗಳ ಮುಂಚಿತವಾಗಿಯೇ ನನ್ನ ಜೀವಿತದಲ್ಲಿ ಒಂದು ದೊಡ್ಡ ಮಾರ್ಪಾಡಾಯಿತು. ಅದು ಆಕಸ್ಮಿಕವಾಗಿ ಉಂಟಾದದ್ದು. ಒಂದು ದಿನ ಮಹಡಿಯ ಮೇಲೆ ನಾನೊಬ್ಬನೇ ಕುಳಿತಿದ್ದೆನು. ಎಂದಿನಂತೆ ಆರೋಗ್ಯವಾಗಿಯೇ ಇದ್ದೆನು. ಆದರೆ ಇದ್ದಕ್ಕಿಂದ್ದಂತೆಯೇನಾನು ಸಾಯುವೆನುಎಂಬ ಭಯವು ನನ್ನನ್ನಾವರಿಸಿಕೊಂಡಿತು. ಭಾವನೆಯು ತೋರಿದ ಕೂದಲೇ ಈಗ ನಾನೇನು ಮಾಡಬೇಕೆಂದು ನನ್ನಲ್ಲಿ ನಾನೇ ಯೋಚಿಸತೊಡಗಿದೆನು. ವೈದ್ಯರನ್ನಾಗಲೀ, ಹಿರಿಯರನ್ನಾಗಲೀ, ಗೆಳೆಯರನ್ನಾಗಲೀಈ ವಿಷಯವನ್ನು ಕುರಿತು ವಿಚಾರಿಸಲು ಇಷ್ಟಪಡಲಿಲ್ಲ. ಆಗ ನನಗುಂಟಾದ ಪ್ರಶ್ನೆಯನ್ನು ನಾನೇ ಬಗೆಹರಿಸಿಕೊಳ್ಳಬೇಕೆಂದು ನಿರ್ಧರಿಸಿದೆನು. ಮರಣ ಭಯವು ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿತು. ನಾನು ಮಾತುಗಳಿಂದ ಹೇಳಿದೆ, ‘ಇದೋ ಮರಣವು ಪ್ರಾಪ್ತವಾಗಿದೆ, ಇದರ ಅರ್ಥವೇನು?ಸಾಯುವವನು ಯಾರು? ದೇಹವು ಸಾಯುತ್ತದೆ.’ ಎಂದು ಮನಸ್ಸಿನಲ್ಲಿಯೇ ಅಂದುಕೊಡೆನು. ಕೂಡಾಲೇ ಇಂತಹಾ ಸ್ಥಿತಿಯನ್ನು ಅಭಿನಯಿಸಿ ನೋಡಿದೆನು. ಕೈಕಾಲುಗಳನ್ನು ಉದ್ದಕ್ಕೆ ಚಾಚಿ ಅವು ಬಿಗಿದುಕೊಳ್ಳುವಂತೆ ಮಾಡಿದೆನು. ಅನಂತರ ಮುಂದಾಗುವುದನ್ನು ಕಾಣಲು ನಿಜವಾದ ಶವದಂತೆಯೇ ಆದೆನು. ಅಂದರೆ ಉಸಿರನ್ನು ಬಿಗಿಹಿಡಿದು ಶಬ್ದವು ಹೊರಬೀಳದಂತೆ ತುಟಿಗಳನ್ನು ಬಲವಾಗಿ ಅಮುಕಿ ಹಿಡಿದುಕೊಂಡೆನು. ಈಗ ದೇಹವು ಸತ್ತಿದೆ. ಇದನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಬೂದಿ ಮಾಡುವರು. ದೇಹದ ನಾಶದಿಂದ ನಾನು ನಾಶವಾದೆನೆ? ನಾನು ದೇಹವೆ? ಇದು ಮಾತನಾಡದ ಜಡವಸ್ತು. ಆದರೆ ನನ್ನ ವ್ಯಕ್ತಿತ್ವವು ಪೂರ್ಣ ಶಕ್ತಿಯೊಂದಿಗೆ ಸ್ಪಷ್ಟವಾಗಿ ತಿಳಿಯುತ್ತಿರುವುದಲ್ಲದೆ ದೇಹಕ್ಕಿಂತಲೂ ಭಿನ್ನವಾಗಿ ಒಳಗಡೆಯಲ್ಲಿನಾನು, ನಾನುಎಂಬ ಸ್ಮರಣೆಯನ್ನುಂಟುಮಾಡುತ್ತಿರುವುದು. ಆದುದರಿಂದ ದೇಹವನ್ನತಿಕ್ರಮಿಸಿದ ಒಂದು ಚೇತನವೇ ನಾನು. ಭೌತಿಕ ದೇಹವು ಸಾಯುವುದು. ಆದರೆ ಅದನ್ನತಿಕ್ರಮಿಸಿರುವ (ದೇಹವಿಲ್ಲದಿರುವಾಗಲೂ ಇರುವ) ಆತ್ಮವನ್ನು ಮರಣವು ಮುಟ್ತಲಾರದು. ಆದುದರಿಂದ ಮರಣ ರಹಿತನಾದ ಆತ್ಮನೇ ನಾನು, ಎಂಬುದಾಗಿ ನನ್ನಲ್ಲಿಯೇ ಅಂದುಕೊಂಡೆನು. ಇದೆಲ್ಲಾ ಬುದ್ದಿಯ ಕಲ್ಪನೆಗಳಲ್ಲ. ಯಾವ ಬಗೆಯ ವಿವಾದಕ್ಕೂ ಅವಕಾಶವಿಲ್ಲದೆ ಪ್ರತ್ಯಕ್ಷವಾಗಿ ನಾನು ಕಂಡ ಶಾಶ್ವತವಾದ ಸತ್ಯ ಸ್ವರೂಪವು, ನನ್ನ ಕಣ್ಣ ಮುಂದೆ ಮಿಂಚಿನಂತೆ ಸ್ಪಷ್ಟವಾಗಿ ತೋರಿತು. ನಾನು ಎಂಬುದು ಸತ್ಯಕ್ಕಿಂತಲೂ ಸತ್ಯವಾಗಿತ್ತು. ಸ್ಥಿತಿಯಲ್ಲಿ ಅದೊಂದೇ ಸತ್ಯವು. ದೇಹ ಸಂಬಂಧವಾದ ಕಾರ್ಯಗಳೂ, ಬುದ್ದಿ ಸಂಬಂಧವಾದ ವೃತ್ತಿಗಳೂ ಅದನ್ನೆ ಆಶ್ರಯಿಸಿಕೊಂಡಿರುತ್ತವೆ. ನಾನು ಅಥವಾ ಆತ್ಮನು ಒಂದು ವಶೀಕರಣ ಶಕ್ತಿಯೊಂದಿಗೆ ನನ್ನ ಪೂರ್ಣ ತಿಳುವಳಿಕೆಗೂ ಕೇಂದ್ರವಾಗಿತ್ತು. ಅನುಭವವಾದ ಕೂಡಲೇ ನನಗುಂಟಾಗಿದ್ದ ಮರಣ ಭಯವು ಮಾಯವಾಯಿತು. ಕ್ಷಣದಿಂದ ಇಂದಿನವರೆಗೂ ಆತ್ಮಭಾವವು ನನ್ನಲ್ಲಿ ಅನುಸ್ಯೂತವಾಗಿದೆ.”

*****

ಗೆಳೆಯರಿಗೆಲ್ಲಾ ನನ್ನ ನಮಸ್ಕಾರಗಳು.


ಕಳೆದ ವಾರವಷ್ಟೇ ನಾನು ತಿರುವಣ್ಣಾಮಲೈಗೆ ಭೇಟಿ ನೀಡಿದ್ದಾಗ ಅಲ್ಲಿನ ಶ್ರೀ ಅರುಣಾಚಲೇಶ್ವರ ತೇಜೋಲಿಂಗದ ದರ್ಶನ ಪಡೆದ ತರುವಾಯ  ಅಲ್ಲಿನ ರಮಣಾಶ್ರಮಕ್ಕೂ ಹೋಗಿದ್ದೆನು. ಅಲ್ಲಿನ ಪ್ರಶಾಂತ ಪರಿಸರ, ಪರಮ ಯೋಗಿವರ್ಯರು ನಡೆದಾಡಿದ ಪುಣ್ಯಭೂಮಿಯಲ್ಲಿ ನನ್ನ ಚೇತನವೂ ಸಮ್ಮಿಳಿತಗೊಂಡು ಒಂದು ಬಗೆಯ ಅನಿರ್ವಚನೀಯ ಆನಂದವನ್ನು ಹೊಂದಿತು. ಸಂದರ್ಭದಲ್ಲಿ ತಿರುವಣ್ಣಾಮಲೈ ನಲ್ಲಿನ ರಮಣಾಶ್ರಮದವರು ಪ್ರಕಟಿಸಿರುವ, ಎಸ್. ರಾಮಚಂದ್ರ ರಾವ್ ಬರೆದಿರುವಭಗವಾನ್ ಶ್ರೀ ರಮಣ ಮಹರ್ಷಿಪುಸ್ತಿಕೆಯನ್ನು ಓದಲಾಗಿ ನನಗೆ ಬಹಳವೇ ಮೆಚ್ಚುಗೆಯಾದ ರಮಣ ಗುರು ತಮ್ಮ ಹದಿನಾರನೇ ವರ್ಷದಲ್ಲಿ ಅನುಭವಿಸಿದ ಮರಣದ ಕುರಿತಾದ ಸತ್ಯಾನುಭವವು ಅವರದೇ ಮಾತುಗಳಲ್ಲಿರುವ ಮೇಲಿನ ಭಾಗವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.

ತಿರುವಣ್ಣಾಮಲೈ ಎಂಬ ತೇಜೋಲಿಂಗ ಕ್ಷೇತ್ರದಲ್ಲಿ ನೆಲೆಸಿ ತಮ್ಮ ಮಾರ್ಗದರ್ಶನವನ್ನರಸಿ ಬಂದವರಿಗೆ ಕಿಂಚಿತ್ತೂ ಕೋಪಿಸಿಕೊಳ್ಳದೆ ದಾರಿತೋರಿದ ಮಹಾ ಗುರು ಭಗವಾನ್ ಶ್ರೀ ರಮಣ ಮಹರ್ಷಿ ನಡೆಸಿದ ಸರಳ ಜೀವನ ತೋರಿದ ಆದರ್ಶ ಎಂದೆಂದೂ ಸದಾ ಅನುಕರಣೀಯವಾದುದು. ಮಹಾತ್ಮರ ಸದುಪದೇಶ, ಪವಿತ್ರವಾದ ನಡೆ ನುಡಿಗಳು ಇಂದಿನ ಯುವಜನರಿಗೆ ಮಾದರಿಯಾಗಿವೆ ಬೋಧಪ್ರದವಾಗಿವೆಯಲ್ಲವೆ?

ನಮಸ್ಕಾರ

No comments:

Post a Comment