Tuesday, March 18, 2014

ಪ್ರಜಾಪ್ರಭುತ್ವದ ಪರೀಕ್ಷೆ

ನಾವೀಗ ಇನ್ನೊಂದು ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ಇದೇ ಏಪ್ರಿಲ್-ಮೇ ತಿಂಗಳುಗಳಲ್ಲಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಸರಿಗೆ ಪಾತ್ರವಾದ ಭಾರತದಲ್ಲಿ ಹದಿನಾರನೇ ಲೋಕಸಭೆಗಾಗಿ ಚುನಾವಣೆಗಳು ನಡೆಯಲಿವೆ. ಪ್ರತೀ ವರ್ಷ ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷಾ ಸಮಯವಾಗಿರುತ್ತದೆ, ಹಾಗೆಯೇ ಈ ವರ್ಷ ವಿದ್ಯಾರ್ಥಿಗಳ ಜತೆಗೆ ಭಾರತ ಪ್ರಜಾಪ್ರಭುತ್ವಕ್ಕೂ ಪರೀಕ್ಷೆ ನಡೆಯುತ್ತಿದೆ ಈ ಪರೀಕ್ಷೆಯಲ್ಲಿ ಯಾರನ್ನು ಉತ್ತೀರ್ಣರಾಗಬೇಕು, ಯಾರು ಅನುತ್ತೀರ್ಣಗೊಳ್ಳಬೇಕೆನ್ನುವುದನ್ನು ದೇಶದ 8.14 ಕೋಟಿ ಪ್ರಜೆಗಳು ನಿರ್ಧರಿಸಬೇಕಿದೆ.



ನಮಸ್ಕಾರ ಗೆಳೆಯರೆ,
ನಾವೀಗ ಇನ್ನೊಂದು ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ಇದೇ ಏಪ್ರಿಲ್-ಮೇ ತಿಂಗಳುಗಳಲ್ಲಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಸರಿಗೆ ಪಾತ್ರವಾದ ಭಾರತದಲ್ಲಿ ಹದಿನಾರನೇ ಲೋಕಸಭೆಗಾಗಿ ಚುನಾವಣೆಗಳು ನಡೆಯಲಿವೆ. ಪ್ರತೀ ವರ್ಷ ಮಾರ್ಚ್ ತಿಂಗಳು ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷಾ ಸಮಯವಾಗಿರುತ್ತದೆ, ಹಾಗೆಯೇ ಈ ವರ್ಷ ವಿದ್ಯಾರ್ಥಿಗಳ ಜತೆಗೆ ಭಾರತ ಪ್ರಜಾಪ್ರಭುತ್ವಕ್ಕೂ ಪರೀಕ್ಷೆ ನಡೆಯುತ್ತಿದೆ ಎನ್ನಬಹುದು. ಈ ಪರೀಕ್ಷೆಯಲ್ಲಿ ಯಾರನ್ನು ಉತ್ತೀರ್ಣರಾಗಬೇಕು, ಯಾರು ಅನುತ್ತೀರ್ಣಗೊಳ್ಳಬೇಕೆನ್ನುವುದನ್ನು ದೇಶದ 8.14 ಕೋಟಿ ಪ್ರಜೆಗಳು ನಿರ್ಧರಿಸಬೇಕಿದೆ. ನಮ್ಮಲ್ಲಿ ಒಬ್ಬ ಹತ್ತನೇ ತರಗತಿ ವಿದ್ಯಾರ್ಥಿ ತಾನು ಪಬ್ಲಿಕ್ ಪರೀಕ್ಷೆಗೆ ಕುಳಿತುಕೊಳ್ಳುವ ಮುನ್ನ ತಾನೆಷ್ಟು ತಯಾರಿ ನಡೆಸುತ್ತಾನಲ್ಲ, ಇನ್ನು ಸಾರ್ವಜನಿಕ ಸೇವೆಗಳಿಗಾಗಿ ನಡೆಯುವ ಐ.ಎ.ಎಸ್., ಕೆ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುವವರಂತೂ ವರ್ಷಪೂರ್ತಿ ಎಷ್ಟು ಶಿಸ್ತಿನಿಂದ ಅಭ್ಯಾಸ ಮಾಡಿರುತ್ತಾರೆ? ಆದರೆ ಸ್ನೇಹಿತರೆ, ನಮ್ಮನ್ನಾಳುವ ನಾಯಕರನ್ನು (ಆತ ಪ್ರಜೆಗಳ ಸೇವಕ..) ಆಯ್ಕೆ ಮಾಡುವ ಮುನ್ನ ನಾವು, ಪ್ರಜೆಗಳು ಎಷ್ಟು ತಯಾರಿ ತೆಗೆದುಕೊಳ್ಳುತ್ತೇವೆ? ಎಷ್ಟು ಮುತುವರ್ಜಿ ವಹಿಸಿ ಅಭ್ಯರ್ಥಿಗಳನ್ನು ಆರಿಸಿ ಕಳಿಸುತ್ತೇವೆ? ಚುನಾವಣೆಗಳೆಲ್ಲಾ ಮುಗಿದು ಯಾರೋ ಅಭ್ಯರ್ಥಿಗಳನ್ನು ಆರಿಸಿ ಕಳಿಸಿ ಅವನೇನೋ ಭ್ರಷ್ಠಾಚಾರ, ಹಗರಣಗಳಲ್ಲಿ ಸಿಕ್ಕಿಬಿದ್ದಾಗ ಬೈಯ್ಯುವ, ಅವರ ವಿರುದ್ದ ಸುಮ್ಮನೆ ಬಾಯಿ ಮಾತಿನಲ್ಲಿ ಆವೇಶದಿಂದ ಅರಚುವದರಿಂದ ಏನೂ ಪ್ರಯೋಜನವಿಲ್ಲವಷ್ಟೆ? ಅದಕ್ಕಾಗಿಯೇ ಚುನಾವಣಾ ಸಮಯವಾದ ಈಗಲೇ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿಕೊಂಡು ಯೋಗ್ಯಹಾಗೂ ಪ್ರಾಮಾಣಿಕರಾದವರನ್ನೇ ಆರಿಸಿ ಸ್ವಸ್ಥ ಆರೋಗ್ಯಪೂರ್ಣ ಪ್ರಜಾತಂತ್ರಕ್ಕೆ ನಾಂದಿ ಹಾಡೋಣ.
ಸಾಮಾನ್ಯವಾಗಿ ಲೋಕಸಭಾ ಚುನಾವಣೆಗಳನ್ನು ಮಹಾಚುನಾವಣೆ ಎಂದು ಕರೆಯಲಾಗುತ್ತದೆ. ಐದು ವರ್ಷಗಳಿಗೊಮ್ಮೆ ಎದುರಾಗುವ ಈ ಪ್ರಕ್ರಿಯೆ ಪ್ರಜಾತಂತ್ರದ ಅಳಿವು ಉಳಿವಿನ ಮಾನದಂಡ, ಹೀಗಾಗಿಯೇ ಪ್ರತಿಯೊಬ್ಬ ಪ್ರಜೆಯೂ ತಾವು ಯಾರನ್ನು ಯಾವ ಕಾರಣಕ್ಕಾಗಿ ಬೆಂಬಲಿಸುತ್ತಿದ್ದೇವೆ ಎನ್ನುವುದನ್ನು ಸರಿಯಾಗಿ ಅರಿತುಕೊಂಡು ಮತ ಚಲಾಯಿಸಬೇಕಾಗುತ್ತದೆ.ಹಾಗಿಲ್ಲದೆ ಹೋದಾಗ ಮುಂದೊದಗುವ ಎಲ್ಲಾ ಬಗೆಯ ಅನಾಹುತಗಳಿಗೂ ಅವನೇ ಬಾಧ್ಯಸ್ಥನಾಗುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮಿಂದ ಚುನಾಯಿತವಾದ ಪಕ್ಷಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಮತ್ತು ಸರ್ಕಾರಗಳ ಸಾಧನೆಗಳನ್ನು ಪರಾಮರ್ಶಿಸಿ ತಮ್ಮ ಸಂವಿಧಾನಿಕ ಹಕ್ಕಿನ ಮೂಲಕ ತೀರ್ಪು ನೀಡುವ ಸಾರ್ವತ್ರಿಕ ಮತದಾನ ಪ್ರಜಾತಾಂತ್ರಿಕ ವ್ಯವಸ್ಥೆಯ ಪ್ರಮುಖ ಅಂಗ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಅಭ್ಯರ್ಥಿಗಳನ್ನು ಆರಿಸುವ ಸಮಯದಲ್ಲಿ ಯಾವುದೇ ಆಸೆ ಆಮಿಷಗಳಿಗೆ ಸಿಲುಕದೆ, ಯಾವುದೇ ಬಗೆಯ ಒತ್ತಡಕ್ಕೆ ಒಳಗಾಗದೆ ಮತ ಹಾಕುವುದು ಬಹು ಮುಖ್ಯ ಕರ್ತವ್ಯವಾಗುತ್ತದೆ.
ಇನ್ನು ಕಳೆದೆಲ್ಲಾ ಚುನಾವಣೆಗಳಿಗಿಂತಲೂ ಈ ಬಾರಿಯ ಚುನಾವಣೆಯು ಸಾಮಾನ್ಯ ಜನರ ಪಾಲಿಗೆ ಅತ್ಯಂತ ಮಹತ್ವದ್ದು ಎನ್ನಬೇಕು ರಾಜಕೀಯ ಪಕ್ಷಗಳ ನೈತಿಕತೆಯ ಬಗ್ಗೆಯೇ ಸಂಶಯ ಮೂಡುವಂತೆ, ಸಂಸತ್ತು ಎಂದರೆ ಗೂಂಡಾ ವರ್ತನೆ ತೋರುವವರ ಅಖಾಡವೆಂಬಂತೆಲ್ಲಾ (ಇತ್ತೀಚಿನ ತೆಲಂಗಾಣ ಬಿಲ್ ಪಾಸಾಗುವಾಗಿನ ಪೆಪ್ಪರ್ ಸ್ಪ್ರೇ ಪ್ರಕರಣವನ್ನು ನೆನೆಸಿಕೊಳ್ಳಿ) ನಡೆದುಕೊಂಡ ಆ ಮೂಲಕ ಸಂಸತ್ತಿನ ಘನತೆಗೆ ಕುಂದು ಬರುವಂತೆ ವರ್ತಿಸುವವರನ್ನೇ ಆರಿಸುವುದರಲ್ಲಿ ಅರ್ಥವಿಲ್ಲ. ದೇಶದಲ್ಲಿನ ಸಮಸ್ಯೆಗಳಿಗೆಲ್ಲಾ ಪರಿಹಾರ ಮಾರ್ಗಗಳೇ ಇಲ್ಲ, ಅವೆಲ್ಲವೂ ಸ್ವಾಭಾವಿಕ ಮತ್ತು ಅನಂತ, ಹೀಗಾಗಿ ಕೊಂಚ ಸಹಿಸಿಕೊಳ್ಳಿ ಎನ್ನುವಂತಹವರಿಂದ ಯಾರಾದರೂ ಏನನ್ನು ಸಹ ನಿರೀಕ್ಷಿಅಲು ಬರುವುದಿಲ್ಲ. ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳು ಅದರ ಮುಂದುವರಿದ ಭಾಗವಾಗಿ ರೈತರ ಆತ್ಮಹತ್ಯೆ, ಸಾರ್ವತ್ರಿಕ ಶಿಕ್ಷಣ ನೀತಿ ಜಾರಿಯಲ್ಲಿನ ವಿಳಂಬ ಹಾಗೂ ಅದರಲ್ಲಿನ ಕೆಲ ಆಸನಾತ್ಮಕ ಕುಂದು ಕೊರತೆಗಳು, ಭ್ಯಓತ್ಪಾದನೆ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹಾಗೂ ಈ ಎಲ್ಲದರೊಂದಿಗೆ ಭಾರತದ ದುರ್ಬಲ ವಿದೇಶಾಂಗ ನೀತಿ, ಅದರಿಂದ ಜಾಗತಿಕವಾಗಿ ದೇಶ ಅನುಭವಿಸುತ್ತಿರುವ ಸಂಕಟ ಹೀಗೆ ಇಲ್ಲಿ ಸಮಸ್ಯೆಗಳ ಮಹಾಪೂರವೇ ಇದೆ. ಈ ಎಲ್ಲಾ ಸಮಸ್ಯೆಗ್ಳೂ ಪ್ರತಿಯೊಬ್ಬ ಭಾರತೀಯರನ್ನೂ ಕಾಡುತ್ತಿವೆ. ಇದರೊಡನೆಯೇ ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಏರುತ್ತಿರುವಂತೆಯೇ ದಾರಿದ್ರ್ಯತೆಯ ಪ್ರಮಾಣವೂ ಏರುತ್ತಿದೆ. ಸ್ವಿಸ್ ಬ್ಯಾಂಕಿನಲ್ಲಿ ಹೂಡಲಾಗಿರುವ 70 ಲಕ್ಷ ಕೋಟಿ ರೂ ಕಪ್ಪುಹಣ ಯಾವುದೇ ಪ್ರಜ್ಞಾವಂತನನ್ನೂ ತಲೆತಗ್ಗಿಸುವಂತೆ ಮಾಡುತ್ತದೆ.
ಇಷ್ಟೆಲ್ಲದರ ನಡುವೆ ಮಹಾ ಚುನಾವಣೆ ಘೋಷಣೆಯಾಗಿದೆ, ರಾಜಕೀಯ ಪಕ್ಷಗಳ ನಾಯಕರುಗಳು ಪ್ರಜೆಗಳ ಮೂಗಿಗೆ ತುಪ್ಪ ಸವರುವಂತಹಾ ಪ್ರಣಾಳಿಕೆಗಳೆಂಬ ಸಾಧನವನ್ನಿಟ್ಟಿಕೊಡು ಮನೆ ಮನೆಗೆ ಧಾವಿಸುತ್ತಿದ್ದಾರೆ. “ನಾವು ಅಧಿಕಾರಕ್ಕೆ ಬಂದದ್ದಾದರೆ 1 ರೂ. ಗೆ 1 ಕೆಜಿ ಅಕ್ಕಿ ನೀಡುತ್ತೇವೆ(ಅಕ್ಕಿ ಬೇಯಿಸಲು ಬೇಕಾದ ಸೀಮೆ ಎಣ್ಣೆಯಾಗಲೀ, ಅಡುಗೆ ಅನಿಲವಾಗಲೀ ಅಷ್ಟೊಂದು ಸುಲಭ ಬೆಲೆಯಲ್ಲಿ ಸಿಗುವುದಿಲ್ಲ!), ಮನೆ ಮನೆಗೆ ಬಣ್ಣದ ಟಿವಿ ದೊರಕಿಸುತ್ತೇವೆ(ದೇಶದ ಕೆಲ ಕುಗ್ರಾಮಗಳಿಗೆ ಇನ್ನೂ ಸರಿಯಾದ ವಿದ್ಯುತ್ ಸಂಪರ್ಕವೇ ದೊರಕಿಲ್ಲ!)’’ ಎಂದು ಮೊದಲಾಗಿ ಸಾಮಾನ್ಯ ನಾಗರಿಕರಿಗೆ ತಾವು ಅಂಗೈನಲ್ಲಿ ಆಕಾಶವನ್ನು ತೋರಿಸುವ ಇಂತಹಾ ಪ್ರತಿನಿಧಿಗಳಿಗೆ ಈ ಸಮಯದಲ್ಲಿ ಪ್ರಜ್ಞಾವಂತ ನಾಗರಿಕನಾದವನು ತಾನು ಜನಪ್ರತಿನಿಧಿಗಳಿಂದ ಭಿಕ್ಷೆ ಬೇಡುತ್ತಿಲ್ಲ ಎನ್ನುವುದನ್ನು ಅವರಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕಿದೆ.
ಪ್ರಜಾ ಪ್ರತಿನಿಧಿಯಾದವರು, ಅವರು ಯಾವ ರಾಜಕೀಯ ಪಕ್ಷದವರಾಗಲೀ ಜನರಿಗೆ ಇಂತಹಾ ಕ್ಷುಲ್ಲಕ ಆಮಿಷಗಳನ್ನು ಒಡ್ಡುವುದರ ಬದಲಿಗೆ ದೇಶದ ಯಾವುದೇ ಗಂಭೀರ ಸಮಸ್ಯೆಗಳ ಪರಿಹಾರದ ಕುರಿತ ಭರವಸೆಯನ್ನು ನೀಡಬೇಕಿದೆ. ರಾಜಕೀಯದಲ್ಲಿರುವವರು ತಮ್ಮ ತಮ್ಮ ನಡುವೆ ಪರಸ್ಪರ ದೋಷರೋಪಣೆಯಲ್ಲಿ ತೊಡಗದೆ ಜನರ ನಡುವಿನ ಜ್ವಲಂತ ಸಮಸ್ಯೆಗಳ ಕುರಿತು ಗಮನ ಹರಿಸಿ ಅದರ ಪರಿಹಾರ ಮಾರ್ಗೋಪಾಯಗಳನ್ನು ಕಂಡು ಹುಡುಕಬೇಕಿದೆ. ಅಂತೆಯೇ ಭಾರತದ ಮಹಾಪ್ರಜೆಗಳು ತಾವು ಮುಂದೆ ಯಾವ ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಎನ್ನುವುದನ್ನು ಚಿಂತಿಸುವುದಕ್ಕಿಂತ ಮುಂಬರುವ ಸರ್ಕಾರದ ನೀತಿಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎನ್ನುವುದರ ಕುರಿತು ಆಲೋಚಿಸಿ ಮತ ಹಾಕಬೇಕು.
ಚುನಾವಣೆ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆಯ ಬತ್ತಳಿಕೆಯಲ್ಲಿರುವ ಒಂದು ಮಹಾನ್ ಅಸ್ತ್ರ. ಹಣದ ಪ್ರಭಾವದಿಂದ ಸದಾ ಕಾಲವೂ ಜನತೆಯ ಬಳಿಯಿರುವ ಆ ಅಸ್ತ್ರವನ್ನು ನಿಷ್ಫಲಗೊಳಿಸಲು ಬರುವುದಿಲ್ಲ. ದುಡಿಯುವ ಜನಸಮುದಾಯದ, ಶೋಷಿತ ವರ್ಗಗಳ ಸಹನೆಯ ಮಿತಿ ಮೀರಿದಾಗ ಆಕ್ರೋಶ ಹೊರಹೊಮ್ಮಲೇ ಬೇಕು. ಆ ಸತ್ಯವನ್ನು ನಮ್ಮನ್ನು ಪ್ರತಿನಿಧಿಸುವ ನಾಯಕರುಗಳು ಇನ್ನಾದರೂ ಕಂಡುಕೊಳ್ಲಬೇಕಿದೆ. ಹಾಗಾದಲ್ಲಿ ಮಾತ್ರವೇ ಪ್ರಜಾತಂತ್ರ ವ್ಯವಸ್ಥೆಯು ಗಟ್ಟಿಯಾಗುತ್ತದೆ ಮತ್ತು ಸಂಸತ್ತಿನ ಘನತೆ ಗೌರವಗಳು ಮರುಕಳಿಸುತ್ತವೆ. ಮುಂದಿನ ಚುನಾವಣೆಯಲ್ಲಿ ಮತ ಹಾಕುವ ಪ್ರತಿಯೊಬ್ಬರೂ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕಿದೆ, ಆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದೆ. ಪ್ರಸಕ್ತ ಚುನಾವಣೆಯು ಈ ಒಂದು ಬದಲಾವಣೆಗೆ ನಾಂದಿಯಾಗುವುದೆನ್ನುವ ಆಶಯದೊಡನೆ
ಸ್ನೇಹಿತರೇ ಬನ್ನಿ ಮತದಾನವೆಂಬ ಪ್ರಜಾಪ್ರಭುತ್ವದ ದಿವ್ಯ ಪರೀಕ್ಷೆಯನ್ನು ಬರೆಯೋಣ, ದೇಶದ ಅಬಿವೃದ್ದಿಯಲ್ಲಿ ಪಾಲುದಾರರಾಗೋಣ.....
ನಮಸ್ಕಾರ.
(ದಿನಾಂಕ  15-03-2014 ರ “ಕನ್ನಡ ಪ್ರಭ” ದಲ್ಲಿ ಪ್ರಕಟವಾದ ನನ್ನ ಲೇಖನ.)

No comments:

Post a Comment