ತಲಕಾಡು(Thalakad)
ಹಿಂದೆ ಬಹುಕಾಲ
ಕರ್ನಾಟಕದ ಹೆಮ್ಮೆಯ ರಾಜವಂಶ ಗಂಗರ ರಾಜಧಾನಿಯಾಗಿ ಮೆರೆದಿದ್ದ ತಲಕಾಡು ಇಂದು ಮೈಸೂರು ಜಿಲ್ಲೆಯಯಲ್ಲಿನ
ಒಂದು ಚಿಕ್ಕ ಗ್ರಾಮ ಮಾತ್ರವೇ ಆದರೂ ಈ ಗ್ರಾಮ ಭಾರತದಲ್ಲಿ ಪುರಾತನವೂ, ಪುರಾಣೋಕ್ತವೂ, ಪವಿತ್ರವೂ ಆದ ಕ್ಷೇತ್ರವೆನಿಸಿದೆ. ಸ್ಕಾಂದ ಪುರಾಣವು ತಲಕಾಡಿನ ಬಗ್ಗೆ ತನ್ನದೇ ಕಥೆಯನ್ನು ಹೇಳುತ್ತದೆ ತಲಕಾಡು ಕ್ಷೇತ್ರದಲ್ಲಿ ಪಂಚಲಿಂಗ ಸ್ವರೂಪಿಯಾಗಿ ಈಶ್ವರನು ನೆಲಸಿದ್ದು. ಶ್ರೀ. ವೈದ್ಯನಾಥೇಶ್ವರ, ಶ್ರೀ. ಮರಳೇಶ್ವರ, ಶ್ರೀ. ಪಾತಾಳೇಶ್ವರ, ಶ್ರೀ ಅರ್ಕೇಶ್ವರ ಸ್ವಾಮಿ ಮತ್ತು ಶ್ರೀ. ಮಲ್ಲಿಕಾರ್ಜುನಸ್ವಾಮಿ ಎಂಬ ಹೆಸರುಗಳಲ್ಲಿ ಪೂಜೆಗೊಳ್ಳುವನು. ತಲಕಾಡು ದಕ್ಷಿಣಕಾಶಿ ಎಂದು ಹೆಸರುವಾಸಿಯಾಗಿದೆ.
ಇಲ್ಲಿನ ಪಂಚಲಿಂಗ
ದರ್ಶನವು ಬಹಳ ಪ್ರಸಿದ್ದವಾಗಿದ್ದು ಯಾವ ವರ್ಷ ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳ್ ಬರುತ್ತವೆಯೋ
ಆ ವರ್ಷಗಳಲ್ಲಿ ಇಲ್ಲಿ ವಿಶೇಷ ದರ್ಶನ ಜಾತ್ರಾದಿಗಳು ನಡೆಯುತ್ತವೆ.
ಭಾಗ- 1
ಹಿಂದೆ ವಸಿಷ್ಠ ಕುಲದ ಸೋಮದತ್ತನೆಂಬ ಬ್ರಾಹ್ಮಣನಿದ್ದನು. ಅವನು ಸಂಸಾರದಲ್ಲಿ ಜಿಗುಪ್ಸೆಹೊಂದಿ ವಾರಣಾಸಿಗೆ ಹೋಗಿ ವಿಶ್ವೇಶ್ವರನನ್ನು ಕುರಿತು ತಪಸ್ಸನ್ನಾಚರಿಸಿದನು. ಕಾಶಿ ವಿಶ್ವೇಶ್ವರನು ಅವನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದನು. ತಮಗೆ ಮತ್ತು ತನ್ನ ಶಿಷ್ಯರಿಗೆ ಸಶರೀರ ಮುಕ್ತಿಯನ್ನು ಕರುಣಿಸಬೇಕೆಂದು ಸೋಮದತ್ತನು ಬೇಡಿಕೊಂಡನು. ಆದರೆ ಆ ಸ್ವಾಮಿಯು ಸೋಮದತ್ತನಿಗೆ ಅಲ್ಲಿ ಮುಕ್ತಿ ದೊರೆಯಲಾರದೆಂದೂ, ಆತನು ತನ್ನ ಶಿಷ್ಯರೊಡನೆ ದಕ್ಷಿಣಕ್ಕೆ ಪ್ರಯಾಣ ಮಾಡಿ ದಕ್ಷಿಣ ಗಂಗೆ ಎಂದು ಹೆಸರಾಗಿರುವ ಪವಿತ್ರ ಕಾವೇರಿಯ ತೀರದಲ್ಲಿನ ಗಜಾರಣ್ಯ ಕ್ಷೇತ್ರಕ್ಕೆ ಹೋಗಬೇಕೆಂದು ತಿಳಿಸುತ್ತ ಆ ಕ್ಷೇತ್ರ ಕಾವೇರಿ ಮತ್ತು ಕಪಿಲ ಸಂಗಮದಿಂದ ಕೆಲವೇ ಹರಿದಾರಿಗಳಲ್ಲಿ ಮುಂದೆ ಆ ಕ್ಷೇತ್ರದಲ್ಲಿ ನಾನು ವೈಧ್ಯೇಶ್ವರನೆಂದು ಕಾಣಿಸಿಕೊಳ್ಳುತ್ತೇನೆ. ಅಲ್ಲಿನ ಋಚೀಕ ಋಷಿಯ ಆಶ್ರಮದಲ್ಲಿದ್ದುಕೊಂಡು ನೀನು ತಪಸ್ಸನ್ನಾಚರಿಸು, ಕಾಶಿಗಿಂತಲೂ ಮಿಗಿಲಾದ ಮಹಿಮೆಯಿಂದ ಕೂಡಿದ ಆ ಸ್ಥಳದಲ್ಲಿ ನಿನಗೆ ಸಾಯುಜ್ಯ ಸುಲಭವಾಗಿ ಪ್ರಾಪ್ತವಾಗುತ್ತದೆ ಎಂದು ತಿಳಿಸಿದನು. ಸೋಮದತ್ತನು ವಿಶ್ವೇಶ್ವರನ ನುಡಿಯಂತೆ ತನ್ನ ಶಿಷ್ಯ ಪರಿವಾರದೊಡನೆ ದಕ್ಷಿಣ ದಿಕ್ಕಿಗೆ ಪ್ರಯಾಣವನ್ನು ಕೈಗೊಂಡನು. ಅವರು ವಿಂಧ್ಯ ಪರ್ವತದ ದಟ್ಟವಾದ ಕಾಡುಗಳನ್ನು ದಾಟುತ್ತಿದ್ದರು. ಆಗ ಇದ್ದಕಿದ್ದ ಹಾಗೆಯೇ ದೊಡ್ಡ ಆನೆಗಳ ಹಿಂಡೊಂದು ಅವರ ಮೇಲೆ ಎರಗಿ ಬಂತು. ಗಾಬರಿಗೊಂಡ ಸೋಮದತ್ತ ಮತ್ತು ಅವನ ಶಿಷ್ಯರು ಆನೆ ಆನೆ ಎಂದು ಕೂಗುತ್ತಲೇ ಆ ಮದ್ದಾನೆಗಳಿಗೆ ಬಲಿಯಾಗಿ ಪ್ರಾಣ ನೀಗಿದರು.
ಅವರು ಸಾಯವ ಸಂದರ್ಭದಲ್ಲಿ ಅನೆಯ ಸ್ವರೂಪವನ್ನೆ ಕಲ್ಪಿಸಿಕೊಂಡು ಹೆದರಿದ್ದರಿಂದ ಮುಂದೆ ಅವರಿಗೆ ಆನೆಯ ಜನ್ಮವೇ ಪ್ರಾಪ್ತವಾಯಿತು. ವಿಶ್ವೇಶ್ವರನು ತಿಳಿಸಿದ್ದ ಪವಿತ್ರ ಗಜಾರಣ್ಯ ಕ್ಷೇತ್ರದಲ್ಲಿ ಕಾವೇರಿಯ ತೀರದಲ್ಲಿ ಅವರು ಆನಯಾಗಿಯೇ ಹುಟ್ಟಿದರು. ಗಜಾರಣ್ಯ ಕ್ಷೇತ್ರದಲ್ಲಿ ಒಂದು ಸೊಂಪಾಗಿ ಬೆಳೆದ ಬೂರುಗದ ಮರ, ಆ ಮರದ ಬುಡದಲ್ಲಿ ದಟ್ಟವಾಗಿ ಕವಿದ ಪೊದೆಗಳು, ಆನೆಗಳು ಅಲ್ಲಿನ ಗೋಕರ್ಣ ಸರೋವರದಲ್ಲಿ ಮಿಂದು, ಸೊಂಡಿಲಲ್ಲಿ ನೀರನ್ನು ತುಂಬಿಕೊಂಡು ಕಮಲವನ್ನು ಕಚ್ಚಿ ಆ ಮರದ ಬುಡದ ಪೊದೆಯ ಕಡೆ ಬರುತ್ತಿದ್ದವು. ಬಂದು ಸೊಂಡಿಲ ನೀರನ್ನು ಚುಮುಕಿಸಿ ಆ ಪೊದೆಯ ಮೇಲೆ ಹೂವಿಟ್ಟು ನಮಿಸಿ ಹೋಗುತ್ತಿದ್ದವು. ಆ ದೃಶ್ಯವನ್ನು 'ತಲ' 'ಕಾಡ' ಎಂಬ ಇಬ್ಬರು ಬೇಡರು ನಿತ್ಯವೂ ನೋಡುತ್ತಿದ್ದರು. ಆಶ್ಚರ್ಯಗೊಂಡ ಅವರು ಅದೇನು ಎಂಬುದನ್ನು ಪರೀಕ್ಷಿಸಬೇಕೆಂದು ಎರಡು ಕೊಡಲಿಗಳನ್ನು ತೆಗೆದುಕೊಂಡು ಬಂದರು. ಪೊದೆಗಳನ್ನು ಕಡಿದರು. ಕಡಿಯುವಾಗ ಅವರ ಕೊಡಲಿ ಯಾವುದೋ ವಸ್ತುವಿಗೆ ತಾಕಿದಂತಾಯಿತು. ರಕ್ತ ಚಿಮ್ಮಿತು. ಅದೇನೆಂದು ನೋಡುವಲ್ಲಿ ಅದೊಂದು ಶಿವಲಿಂಗ. ಅದರ ನೆತ್ತಿಯಿಂದ ರಕ್ತ ಹರಿಯುತ್ತಿದೆ. ಇದನ್ನು ನೋಡಿದ ಅವರು ಹೆದರಿ ನಡುಗತೊಡಗಿದರು. ಆಗ ಅಶರೀರವಾಣಿಯೊಂದಾಯಿತು. “ಎಲೈ ಕಿರಾತಕರೆ, ನಿಮಗೆ ಒಳ್ಳೆಯದನ್ನು ಮಾಡುವುದಕ್ಕಾಗಿಯೇ ನಾನಿಲ್ಲಿ ಕಾಣಿಸಿಕೊಂಡಿದ್ದೇನೆ. ಈ ಬೂರುಗದ ಮರದ ಎಲೆಯನ್ನು ಹಣ್ಣನ್ನೂ ಅರೆದು ಗಾಯವಾದ ಜಾಗಕ್ಕೆ ಬಳಿಯಿರಿ, ಸುರಿಯುವ ರಕ್ತ ನಿಲ್ಲುತ್ತದೆ. ಅಷ್ಟೇ ಅಲ್ಲ, ರಕ್ತ ಹಾಲಾಗುತ್ತದೆ, ಆ ಹಾಲನ್ನು ನೀವು ಸೇವಿಸಿದರೆ ನಿಮಗೆ ಗಣಪದವಿ ದೊರೆಯುತ್ತದೆ” ದೇವವಾಣಿಗೆ ಬೇಡರು ತಲೆಬಾಗಿದರು. ಕೂಡಲೇ ಬೂರುಗದ ಮರದ ಎಲೆಯನ್ನು ಹಣ್ಣನ್ನು ತೇದು ಗಾಯಕ್ಕೆ ಹಚ್ಚಿದರು. ರಕ್ತ ಹರಿಯುವುದಕ್ಕೆ ಬದಲಾಗಿ ಹಾಲು ಹರಿಯಿತು. ಅದನ್ನು ಸೇವಿಸಿದ ಬೇಡರಿಗೆ ಗಣಪದವಿ ದೊರೆಯಿತು. ಆ ತಲ ಕಾಡ ಎನ್ನುವ ಬೇಡರಿಗೆ ಅಲ್ಲಿ ಮೊದಲ ಬಾರಿಗೆ ಮೋಕ್ಷ ಪ್ರಾಪ್ತವಾದ್ದರಿಂದ ಆ ಸ್ಥಳಕ್ಕೆ "ತಲಕಾಡು" ಎನ್ನುವ ಹೆಸರನ್ನು ಹೊತ್ತಿತ್ತು. ಅದೇ ಈಗಿನ ತಲಕಾಡು.
ಆನೆಯ ರೂಪಿನ ಸೋಮದತ್ತನೂ ಹಾಲನ್ನು ಸೇವಿಸಿ ಶರೀರವನ್ನು ಪಡೆದು ಸಶರೀರಿಯಾಗಿ ಮೋಕ್ಷವನ್ನು ಪಡೆದನು. ತನ್ನ ಗಾಯಕ್ಕೆ ತಾನೇ ವೈದ್ಯವನ್ನು ಸೂಚಿಸಿದವನಲ್ಲವೆ? ಆದುದರಿಂದಲೇ ವೈದ್ಯನಾಥ ಅಥವಾ ವೈಧ್ಯೇಶ್ವರನೆಂದು ಹೆಸರಾಯಿತು. ಮೊದಲಿಗೆ ಸಿದ್ಧಾರಣ್ಯ ಕ್ಷೇತ್ರವಾಗಿದ್ದ ಈ ನೆಲೆ ಅನೆಗಳು ಮೋಕ್ಷವನ್ನು ಪಡೆದ ಮೇಲೆ ಗಜಾರಣ್ಯಕ್ಷೇತ್ರವಾಯಿತು.
ಭಾಗ- 2
"ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲೀ, ಮೈಸೂರು ರಾಜರಿಗೆ ಮಕ್ಕಳಾಗದೆ ಹೋಗಲಿ" ಈ ಶಾಪವನ್ನು ಸುಮಾರು ನಾನೂರು ವರ್ಷಗಳ ಹಿಂದೆ ಆಗ ಮೈಸೂರು ಸೀಮೆಯ ರಾಜಧಾನಿ ಶ್ರೀರಂಗಪಟ್ಟಣ ವಿಜಯನಗರದ ಅರಸರಿಗೆ ಸೇರಿದ್ದು, ಶ್ರೀರಂಗ ರಾಯ ಎಂಬ ಪ್ರತಿನಿಧಿ ನೇಮಿತನಾಗಿದ್ದ. ಆತನ ಮಡದಿಯೇ ಅಲಮೇಲಮ್ಮನವರು ಇವರೇ ಮೈಸೂರು ದೊರೆಗಳಿಗೆ ಶಾಪವನ್ನು ಕೊಟ್ಟವರು.
ಶ್ರೀರಂಗರಾಯರಿಗೆ ಬೆನ್ನುಫಣಿ ರೋಗ ಉಂಟಾಯಿತು. ಅವರು ತಲಕಾಡಿಗೆ ಹೋಗಿ ಅಲ್ಲಿ ವೈದ್ಯೇಶ್ವರ ಸ್ವಾಮಿಯನ್ನು ಅರ್ಚಿಸಲು ತಿರ್ಮಾನಿಸಿದ ಆಗಲೂ ಶ್ರೀರಂಗರಾಯರಿಗೆ ರೋಗ ನಿವಾರಣೆ ಆಗಲಿಲ್ಲ ನಂತರ ತಲಕಾಡಿನಲ್ಲಿಯೆ ಮರಣಹೊಂದಿದರು. ಅವರ ಮಡದಿ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿ ನದಿಯ ಆಚೆಗಿರುವ ಮಾಲಂಗಿ ಎನ್ನುವ ಗ್ರಾಮದಲ್ಲಿ ಹೋಗಿ ನೆಲಸಿದಳು. ಶ್ರೀರಂಗಪಟ್ಟಣ ಮೈಸೂರು ಮನೆತನಕ್ಕೆ ಸೇರಿದ ರಾಜ ಒಡೆಯರ ಕೈವಶವಾಯಿತು.
ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಮಂಗಳವಾರ, ಶ್ರುಕ್ರವಾರ, ಶ್ರೀರಂಗನಾಯಕಮ್ಮನವರಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಆ ಸಂಧರ್ಭದಲ್ಲಿ ಅಲಮೇಲಮ್ಮ ತಮ್ಮಲ್ಲಿದ್ದ ಮುತ್ತಿನ ಮೂಗುತಿ ಮತ್ತು ಇತರ ಅಮೂಲ್ಯವಾದ ಆಭರಣಗಳನ್ನು ದೇವರಿಗೆ ಅಲಂಕರಿಸಿ ಮತ್ತೆ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಳು. ಆಕೆ ಮಾಲಂಗಿಗೆ ಹೋಗಿ ನೆಲೆಸಿದ ಮೇಲೆ ದೇವಾಲಯದ ಅಧಿಕಾರಿ ಆಭರಣಗಳ ವಿಚಾರವನ್ನು ರಾಜ ಒಡೆಯರಿಗೆ ತಿಳಿಸಿದ. ಎಂದಿನಂತೆ ಆಭರಣಗಳನ್ನು ಕಳುಹಿಸಬೇಕೆಂದು ರಾಜ ಒಡೆಯರು ನಿರೂಪ ಕಳುಹಿಸಿದರು
ಆದರೆ ಅಲಮೇಲಮ್ಮ ಒಪ್ಪಲಿಲ್ಲ. ಕೊನೆಗೆ ರಾಜ ಒಡೆಯರು ಕೊಡದೆ ಹೋದಲ್ಲಿ ಬಲವಂತವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿಬಿಟ್ಟರು. ಅಲಮೇಲಮ್ಮನಗೆ ತುಂಬ ಸಂಕಟವಾಯಿತು. ಶ್ರೀರಂಗಪಟ್ಟಣಕ್ಕೆ ಮೂಗುತಿಯೊಂದನ್ನು ಕಳುಹಿಸಿ ಉಳಿದ ಒಡವೆಗಳನ್ನು ತನ್ನ ಮಡಿಲಲ್ಲಿ ಕಟ್ಟಿಕೊಂಡು ಅವಳು ಮಾಲಂಗಿಯಲ್ಲಿ ಕಾವೇರಿನದಿಗೆ ಬಿದ್ದಳು. ಬೀಳುವಾಗ ಮೇಲಿನಂತೆ ಶಾಪ ಹಾಕಿದಳು.
ರಾಜ ಒಡೆಯರಿಗೆ ಈ ವಿಚಾರವನ್ನು ಕೇಳಿ ತುಂಬಾ ವ್ಯಥೆಯಾಯಿತು. ದೇವರಕಾರ್ಯಕ್ಕಾಗಿ ಒಡವೆಗಳಿಗೆ ಹೇಳಿ ಕಳುಹಿಸಿದರೆ ಹೀಗೆ ದುಡುಕುವುದೇ, ಅಲಮೇಲಮ್ಮನವರು ಮಾಡಿದ ಅ ಕೃತ್ಯಕ್ಕೆ ಬಹಳ ನೊಂದು ಚಿಂತಾಕ್ರಾಂತರಾಗಿರಲು, ಆ ರಾತ್ರಿ ಅಲಮೇಲಮ್ಮನವರು ರಾಜ ಒಡೆಯರ ಸ್ವಪ್ನದಲ್ಲಿ ಪ್ರತಿಬಿಂಬ ರೂಪದಲ್ಲಿ ಕಾಣಿಸಿಕೊಂಡರು. ಕೂಡಲೇ ದೊರೆಗಳು ಪತ್ನಿ ಮುಂತಾದವರೊಡನೆ ಪ್ರತಿ ಬಂಧದ ಭಾದೆಯ ಪರಿಹಾರಕ್ಕಾಗಿ, ಅಲಮೇಲಮ್ಮನವರ ರೂಪದ ಚಿನ್ನದ ಪ್ರತಿಮೆಯನ್ನು ಮಾಡಿಸಿ ನಿತ್ಯ ಪೂಜಾಕಟ್ಟಳೆಯನ್ನು ಮಾಡಿಸಿದ್ದಲ್ಲದೆ, ಪ್ರತಿವರ್ಷ ನವರಾತ್ರಿಯ ಮಹಾನವಮಿ ದಿವಸ ಅಲಮೇಲಮ್ಮನವರ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸುತ್ತಾರೆ ಎಂಬ ಇತಿಹಾಸದ ಕಥೆ ಇದೆ.
No comments:
Post a Comment