Tuesday, May 20, 2014

ಭವ್ಯ ಭಾರತಕ್ಕೆ ಎಲ್ಲರೂ ಜೊತೆಯಾಗಬೇಕು

ಭಾರತದ ನೂತನ ಪ್ರಧಾನಿಯಾಗ ಹೊರಟಿರುವ ನರೇಂದ್ರ ಮೋದಿಯವರ ಮೊದಲ ವಿಜಯ ಭಾಷಣವನ್ನು ಎರಡು ದಿನಗಳ ಹಿಂದೆ ‘ಕನ್ನಡ ಪ್ರಭ’ ದಲ್ಲಿ ಪ್ರಕಟಿಸಲಾಗಿತ್ತು. ಯಾರ್ಯಾರು ಪರ್ತಿಕೆಯಲ್ಲಿ ಅದನ್ನೋದಿದ್ದೀರೋ ಅವರಿಗೆಲ್ಲರಿಗೂ ಧನ್ಯವಾದಗಳು.

ಹಾಗೆಯೇ ಯಾರು ಆ ದಿನ ಓದುವುದಕ್ಕೆ ಸಾಧ್ಯವಾಗಿರಲಿಲ್ಲವೋ ಅವರಿಗೂ ಭವಿಷ್ಯದ ಭಾರತದ ಕುರಿತಾಗಿ ಮೋದಿಯವರ ನಿಲುವೇನೆನ್ನುವುದು ಅರಿವಾಗಲಿ ಎನ್ನುವ ಉದ್ದೇಶದಿಂದ ಇಲ್ಲಿ ಆ ಲೇಖನದ ಯಥಾವತ್ ಪ್ರಕಟಿಸುತ್ತಿದ್ದೇನೆ.

ನೀವೆಲ್ಲರೂ ಓದಿ, ಭಾರತದ ಭವ್ಯ ಭವಿಷ್ಯಕ್ಕೆ ಮೋದಿಯವರೊಡನೆ ಕೈಜೋಡಿಸುವಿರೆನ್ನುವ ಭರವಸೆಗಳೊಡನೆ.....

ನಮಸ್ಕಾರ.

***


ಭವ್ಯ ಭಾರತಕ್ಕೆ ಎಲ್ಲರೂ ಜೊತೆಯಾಗಬೇಕು


ಶುಕ್ರವಾರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿವೆ. ಉತ್ತರ ಪ್ರದೇಶದ ವಾರಾಣಸಿಯಿಂದಷ್ಟೇ ಅಲ್ಲದೆ ಗುಜರಾತ್‌ನ ವಡೋದರಾ ಕ್ಷೇತ್ರದಲ್ಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸ್ಪರ್ಧಿಸಿದ್ದರು. ವಡೋದರಾದಲ್ಲಿ 5.17 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ನಂತರ ಅವರು ಮಾಡಿದ ಮೊದಲ ವಿಜಯ ಭಾಷಣದ ಝಲಕು ಇಲ್ಲಿದೆ.

    ವಡೋದರಾದ ನನ್ನ ಪ್ರೀತಿಯ ಸಹೋದರರೇ. ದೇಶದ ಮಾಧ್ಯಮಗಳೆಲ್ಲವೂ ಬೆಳಗ್ಗೆಯಿಂದ ನನ್ನ ಮಾತಿಗಾಗಿ ಕಾದಿದ್ದವು. ಆದರೆ, ಒಂದು ಒಂದು ವೇಳೆ ಮಾತನಾಡುವುದೇ ಆದರೆ ಮೊದಲು ವಡೋದರಾದಲ್ಲೇ ಮಾತನಾಡುತ್ತೇನೆ ಎಂದು ನಾನು ನಿಶ್ಚಯಿಸಿದ್ದೆ.

    ಈ ಚುನಾವಣೆಯಲ್ಲಿ ಎರಡು ಮಹತ್ವಪೂರ್ಣ ಸಂಗತಿಗಳು ನನ್ನೊಂದಿಗೆ ಘಟಿಸಿದವು. ಮೊದಲನೆಯದಾಗಿ, ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ ನಂತರ, ಇಲ್ಲಿ ಕೇವಲ ಒಂದೇ ಒಂದು ಸಭೆ ನಡೆಸಲು ಮಾತ್ರ ನನಗೆ ಸಾಧ್ಯವಾಯಿತು. ಈ ನಗರಕ್ಕೆ ನಾನು ಕೇವಲ 50 ನಿಮಿಷಗಳನ್ನು ಕೊಟ್ಟೆ, ಆದರೆ ನೀವು ಲಕ್ಷಾಂತರ ಮತಗಳನ್ನು ಕೊಟ್ಟು ಗೆಲ್ಲಿಸಿದ್ದೀರಿ. ನಾನು ನಿಮಗೆ ಋಣಿಯಾಗಿದ್ದೇನೆ. ವಡೋದರಾದ ಪ್ರತಿಯೊಬ್ಬ ಮತದಾರನೂ ನರೇಂದ್ರ ಮೋದಿಯಾಗಿ ಕೆಲಸ ಮಾಡಿದ್ದಾನೆ. ವಡೋದರಾವನ್ನು ಅಭಿವೃದ್ಧಿಪಡಿಸಿ, ವಿಕಾಸದ ರೂಪದಲ್ಲಿ ಈ ಋಣವನ್ನು ನಾನುತೀರಿಸುತ್ತೇನೆ.

    ಎರಡನೆಯದಾಗಿ, ಬಹುಶಃ ಹಿಂದುಸ್ತಾನದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಅಭ್ಯರ್ಥಿಯೊಬ್ಬ ತನ್ನ ಮತದಾರರೊಂದಿಗೆ ಮಾತನಾಡುವ ಅವಕಾಶದಿಂದ ವಂಚಿತನಾದ ಎನಿಸುತ್ತದೆ. ಬನಾರಸ್ ಜನರ ಮುಂದೆ ನನ್ನ ಮನದಿಂಗಿತವನ್ನು ತೋಡಿಕೊಳ್ಳಲು ಸಾಧ್ಯವಾಗಲಿಲ್ಲ, ಆದರೂ ಅಲ್ಲಿನ ಮತದಾರರು ಮೋದಿಯ ಮೌನಕ್ಕೆ ಮೊಹರು ಒತ್ತಿ ಗೆಲ್ಲಿಸಿದರು.

    ಈ ಚುನಾವಣೆಯಲ್ಲಿ ಗುಜರಾತ್ ಅದ್ಭುತ ರೆಕಾರ್ಡ್ ಸ್ಥಾಪಿಸಿದೆ. 26ರಲ್ಲಿ 26 ಸ್ಥಾನಗಳನ್ನು ನಾವು ಗೆದ್ದಿದ್ದೇವೆ!! ಈ ಹಿಂದೆ ಈ ಸಾಧ್ಯತೆಯ ಬಗ್ಗೆ ಮಾತನಾಡಿದಾಗಲೆಲ್ಲ ಕೆಲವರು ತಮಾಷೆ ಮಾಡಿ ನಗುತ್ತಿದ್ದರು. ಅಪ್ಪಿತಪ್ಪಿ ನಮಗೇನಾದರೂ 26 ರಲ್ಲಿ 25 ಸ್ಥಾನಗಳು ಬಂದುಬಿಟ್ಟಿದ್ದವೆಂದರೆ, "ಬಿಜೆಪಿಯ ಮಾತೆಲ್ಲ ಬರೀ ಟೊಳ್ಳು. ಅದು ಕೇವಲ 25 ಸ್ಥಾನಗಳಲ್ಲಷ್ಟೇ ಗೆದ್ದಿದೆ" ಎಂದು ಇವರೆಲ್ಲ ನಮ್ಮನ್ನು ತೊಳೆದುಹಾಕಿಬಿಡುತ್ತಿದ್ದರೇನೋ?!

    ಸಹೋದರರೆ, ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದಕ್ಕೆ ಸ್ಪಷ್ಟ ಬಹುಮತ ದೊರೆತಿದೆ. ಇನ್ನೊಂದು ವಿಚಾರ- ಸ್ವಾತಂತ್ರ್ಯಾ ನಂತರ ಜನಸಿದವರ ನೇತೃತ್ವದಲ್ಲಿ ಈ ಬಾರಿ ದೇಶ ಮುನ್ನಡೆಯಲಿದೆ. ಸಯ್ಯಾಜಿ ರಾವ್ ಗಾಯಕ್‌ವಾಡ್‌ರ ಈ ನೆಲದಿಂದ ದೇಶವಾಸಿಗಳಿಗೆ ಹೇಳುತ್ತಿದ್ದೇನೆ ಕೇಳಿ: "ನಮಗೆಲ್ಲ ಸ್ವಾತಂತ್ರ್ಯಕ್ಕಾಗಿ ಸಾಯುವ ಸೌಭಾಗ್ಯ ಸಿಗಲಿಲ್ಲ, ಸೆರೆಮನೆಗೆ ಹೋಗುವ ಸೌಭಾಗ್ಯ ಸಿಗಲಿಲ್ಲ. ಆದರೇನಂತೆ, ದೇಶಕ್ಕಾಗಿ ಬದುಕುವ ಸೌಭಾಗ್ಯವಂತೂ ದೊರಿಕಿದೆ. ಶತಕೋಟಿ ಭಾರತೀಯರು ಒಂದು ವೇಳೆ ದೇಶಕ್ಕಾಗಿ ಬದುಕುವ ಸಂಕಲ್ಪ ಕೈಗೊಂಡು ನನ್ನೊಡನೆ ಒಂದು ಹೆಜ್ಜೆ ಮುಂದಿಟ್ಟರೆಂದರೆ, ಈ ದೇಶ ಶತಕೋಟಿ ಹೆಜ್ಜೆ ಮುಂದೆ ಸಾಗುತ್ತದೆ. ಜನಶಕ್ತಿಯ ಸಾಮರ್ಥ್ಯವೇ ಭಾರತದ ಭವಿಷ್ಯ ರೂಪಿಸಲಿದೆ."  

    ನಿಮಗೆ ನನ್ನ ಮೇಲೆ ನಂಬಿಕೆಯಿದೆ, ಅದರಂತೆಯೇ ನನಗೆ ನಿಮ್ಮ ಮೇಲೆ. ಇಂಥ ನಂಬಿಕೆಯೇ ಪ್ರತಿಯೊಬ್ಬ ಭಾರತೀಯನ ಕನಸನ್ನು ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರ ಆಧಾರದ ಮೇಲೆಯೇ ನಾವು ಮುಂದೆ ಸಾಗಬೇಕು.

    ಸರ್ಕಾರ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸೇರಿದ್ದು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಛ್‌ನಿಂದ ಕಾಮರೂಪದವರೆಗಿನ ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮವನು. ಹಾಗಾಗೇ ಎಲ್ಲರನ್ನೂ ಜೊತೆಗೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ, ಸರ್ಕಾರ ಯಾರೋ ಕೆಲವು ವಿಶೇಷ ವ್ಯಕ್ತಿಗಳ ಸ್ವತ್ತಲ್ಲ.  

    ಜನರ ಜೀವನದಲ್ಲಿ ಬದಲಾವಣೆ ತರುವುದೇ ಸರ್ಕಾರದ ಆದ್ಯತೆಯಾಗಿರುತ್ತದೆ. ಈ ಬದಲಾವಣೆ ಸಾಧ್ಯವಾಗಬೇಕೆಂದರೆ ನಾವು ಪರಿಶ್ರಮದ ಪರಾಕಾಷ್ಠೆಯನ್ನು ತಲುಪಬೇಕಿದೆ. ನನ್ನ ಕಠಿಣ ಪರಿಶ್ರಮದ ಮೇಲೆ ನಿಮಗೇನಾದರೂ ಅನುಮಾನವಿದೆಯೇ? "ನಾನು ಮಜ್ದೂರ್(ಶ್ರಮಿಕ) ನಂಬರ್ 1.  ಮುಂದಿನ 60 ತಿಂಗಳು ದೇಶಕ್ಕೆ ನನ್ನಂಥ ಇನ್ನೊಬ್ಬ ಶ್ರಮಿಕ ಸಿಗುವುದಿಲ್ಲ"

    ನಾಲ್ಕು ಬಾರಿ ನನ್ನನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿಸಿದ್ದೀರಿ. ಆದರೆ ಆ ಸಮಯದಲ್ಲಿ ನಾನು ಒಂದೇ ಒಂದು ದಿನವೂ ರಜೆ ತೆಗೆದುಕೊಂಡವನಲ್ಲ. ಏಕೆಂದರೆ, ನನ್ನ ಶರೀರದ ಪ್ರತಿಯೊಂದು ಕಣವನ್ನು ಮತ್ತು ಸಮಯದ ಪ್ರತಿಯೊಂದು ಕ್ಷಣವನ್ನು ನಿಮಗೆಲ್ಲ ಸಮರ್ಪಿಸಿದ್ದೇನೆ. ಎಲ್ಲರೊಂದಿಗೆ ಎಲ್ಲರ ವಿಕಾಸ ಎನ್ನುವುದನ್ನು ನಾವು ಗುಜರಾತ್‌ನಲ್ಲಿ ಸಾಧಿಸಿ ತೋರಿಸಿದ್ದೇವೆ. ಇದೇ ನಮ್ಮ ಕೆಲಸದ ಮೂಲಮಂತ್ರ. ಇವು ಪೊಳ್ಳು ನುಡಿಗಳಲ್ಲ, ನಮ್ಮ ರಾಜ್ಯದ ವರ್ಕ್ ಕಲ್ಚರ್‌ನ ಚೈತನ್ಯವೇ ಹೀಗಿದೆ.

    ಈಗಿನ ನಮ್ಮ ವಿಜಯ ಎಷ್ಟೇ ಭವ್ಯವಾಗಿರಲಿ, ಭಾರತೀಯ ಜನತಾ ಪಾರ್ಟಿಯ ವಿಜಯ ಪತಾಕೆ ಎಷ್ಟೇ ಎತ್ತರದಲ್ಲಿ ಬೇಕಿದ್ದರೂ ಹಾರುತ್ತಿರಲಿ. ಆದರೆ ಇದೆಲ್ಲದರ ಹೊರತಾಗಿಯೂ ದೇಶದ ಪ್ರತಿಯೊಂದು ಪಕ್ಷಗಳನ್ನು-ಅವರು ನಮ್ಮ ಎಷ್ಟೇ ಕಡು ವಿರೋಧಿಗಳಾಗಿರಲಿ- ಜೊತೊಗೊಯ್ಯಬೇಕು ಎಂಬ ಉದ್ದೇಶ ನಮಗಿದೆ. ಆ ಉದ್ದೇಶದ ಈಡೇರಿಕೆಗಾಗಿ ಪ್ರಯತ್ನ ಪಡುತ್ತೇವೆ. ಇಂಥ ಪ್ರಯತ್ನದಲ್ಲಿ ಎಂದಿಗೂ ಹಿಂದೆ ಬೀಳಬಾರದು ಎನ್ನುವುದನ್ನು ನಮ್ಮ ದೇಶದ ಸಂವಿಧಾನ ಮತ್ತು ಪರಂಪರೆ ನಮಗೆಲ್ಲ ಕಲಿಸಿದೆ.

    "ಮೋದೀಜಿ..ಒಂದು ವೇಳೆ ನಿಮಗೆ ಸ್ಪಷ್ಟ ಜನಾದೇಶ ಸಿಗದಿದ್ದರೆ ಏನು ಮಾಡುತ್ತೀರಾ?" ಎಂದು ಹಿಂದೆಯೂ  ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ನನ್ನನ್ನು ಅನೇಕ ಬಾರಿ ಪ್ರಶ್ನಿಸಿವೆ. ಆಗ ಕೂಡ ನಾನು ಇದೇ ಮಾತನ್ನು ಹೇಳಿದ್ದೇನೆ: "ಸರ್ಕಾರ ನಡೆಸುವುದಕ್ಕೆ ಸ್ಪಷ್ಟ ಜನಾದೇಶ ಬೇಕು. ಆದರೆ ದೇಶವನ್ನು ಮುನ್ನಡೆಸುವುದಕ್ಕೆ ನಾವು ಎಲ್ಲರನ್ನೂ ಜೊತೆಗೊಯ್ಯುತ್ತೇವೆ" ಎಂದು. -ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಫಲಿತಾಂಶವೂ ಹೊರಬಿದ್ದಿದೆ. ಅಲ್ಲೆಲ್ಲ ವಿಜಯಶಾಲಿಗಳಾದ ಪಕ್ಷಗಳಿಗೆ ನಾನು ಶುಭಕೋರುತ್ತೇನೆ. ಭವ್ಯ ಭಾರತದ ನಿರ್ಮಾಣದಲ್ಲಿ ಆ ಪಕ್ಷಗಳು ಮತ್ತು ಅವುಗಳ ನಾಯಕರು ಯಶಸ್ವಿಯಾಗಲಿ, ಅಂತೆಯೇ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಯಾವುದೇ ಪಕ್ಷದ ಅಭ್ಯರ್ಥಿಗಳಿರಲಿ, ಅವರ ಸಹಯೋಗ ನಮಗೆ ಸಿಗುತ್ತದೆ ಎಂದು ಆಶಿಸುತ್ತೇನೆ.

    ಸಹೋದರರೇ, ನನ್ನ ಮೇಲೆ ನೀವು ಎಷ್ಟು ಪ್ರೀತಿ ಹರಿಸಿದಿರೋ, ಅಷ್ಟೇ ಪ್ರೀತಿಯನ್ನು ವಿರೋಧಿಗಳೂ ಹರಿಸಿದ್ದಾರೆ! ಆದರೆ ನಿಮ್ಮ ಪ್ರೇಮದ ಶುದ್ಧತೆ, ಶಕ್ತಿ ಎಷ್ಟು ಎತ್ತರದಲ್ಲಿದೆಯೆಂದರೆ ಅದರಿಂದ, ವಿರೋಧಿಗಳ ವಿಶಿಷ್ಟ ಪ್ರೀತಿಯನ್ನೂ ಬದಲಾಯಿಸಲು ನಾನು ಸಫಲನಾಗಬಲ್ಲೆ. ಇದಕ್ಕೆ ನಿಮ್ಮ ಆಶೀರ್ವಾದ ಬೇಕಷ್ಟೆ. ಏಕೆಂದರೆ ರಾಜಕೀಯದಲ್ಲಿ ಶತ್ರುಗಳಿರುವುದಿಲ್ಲ. ಇಲ್ಲಿ ಬರೀ ಪ್ರತಿಸ್ಪರ್ಧಿಗಳಿರುತ್ತಾರೆ. ಈ ಪ್ರತಿಸ್ಪರ್ಧೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅವಶ್ಯಕವಿರುತ್ತದೆ. ಇಂಥ ಪ್ರತಿಸ್ಪರ್ಧೆಯೇ ನಮ್ಮ ಲೋಕತಂತ್ರದ ಸಂದೌರ್ಯ.

    ಈ ಚುನಾವಣೆಗಾಗಿ ಲಕ್ಷಾಂತರ ಜನರು ಶ್ರಮಿಸಿದ್ದಾರೆ. 40-45 ಡಿಗ್ರಿ ಉರಿಬಿಸಿಲಲ್ಲಿ ಮತಗಟ್ಟೆಗಳನ್ನು ನಿರ್ವಹಿಸದವರಿಗೆ, ನಮ್ಮ ಪರವಾಗಿ ಮನೆ ಮನೆಗೂ ತೆರಳಿ ಪ್ರಚಾರದ ತಪಸ್ಸನ್ನು ಕೈಗೊಂಡ ಲಕ್ಷಾಂತರ ಕಾರ್ಯಕರ್ತರಿಗೆ ನಾನು ವಂದಿಸುತ್ತೇನೆ.

    ಇನ್ನು ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುವಲ್ಲಿ ನನಗೆ ತುಸು ಆಸಕ್ತಿಯಿದೆ ಎನ್ನುವುದು ನಿಮಗೆಲ್ಲ ತಿಳಿದಿದೆ.

    ಇತ್ತೀಚೆಗಂತೂ ಯೂಟ್ಯೂಬ್‌ನಲ್ಲಿನ ಕೆಲವು ವೀಡಿಯೋಗಳನ್ನು ಕಂಡು ಆಶ್ಚರ್ಯಗೊಂಡಿದ್ದೇನೆ. ಈಗಷ್ಟೇ ಮಾ, ಪಪ್ಪಾ, ಮಮ್ಮಿ ಎನ್ನುವುದನ್ನು ಕಲಿತಿರುವ 2-3 ವರ್ಷದ ಮಕ್ಕಳೂ ಕೂಡ, "ಅಬ್ ಕೀ ಬಾರ್ ಮೋದಿ ಸರ್ಕಾರ್‌" ಎನ್ನುತ್ತಿವೆ. ಪ್ರಜಾಪ್ರಭುತ್ವದ ಶಕ್ತಿಯಿದು!

    ಒಳ್ಳೆಯ ದಿನಗಳು ಕೊನೆಗೂ ಎದುರಾಗಿವೆ. ನನ್ನ ಮೇಲೆ ನಂಬಿಕೆಯಿಟ್ಟವರಿಗೆ ನಾನು ನಿರಾಸೆ ಮೂಡಿಸುವುದಿಲ್ಲ. ಭಾರತ್ ಮಾತಾಕಿ ಜೈ.

No comments:

Post a Comment