ಕನ್ನಡಿಗ ಸಂಚಾರಿ ವಿಜಯ್ ಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಂದು ಘೋಷಣೆಯಾಗಿದ್ದು ಅದರಲ್ಲಿ ಕ್ವೀನ್ ಚಿತ್ರದ ನಾಯಕಿ ಕಂಗನಾ ರನೌತ್ ಶ್ರೇಷ್ಠ ನಟಿ ಹಾಗೂ 'ನಾನು ಅವನಲ್ಲ ಅವಳು' ಕನ್ನಡ ಚಿತ್ರದ ನಾಯಕ ಸಂಚಾರಿ ವಿಜಯ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ್ದಾರೆ. 'ಹರಿವು' (ನಿರ್ಮಾಣ ಓಂ ಸ್ಟುಡಿಯೋ, ನಿರ್ದೇಶಕ: ಮಂಜುನಾಥ್ (ಮನ್ಸೋರೆ)) ಚಿತ್ರಕ್ಕೆ ಶ್ರೇಷ್ಠ ಕನ್ನಡ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಸಂಚಾರಿ ವಿಜಯ್ ಯಾರು?
ಅತ್ಯುತ್ತಮ ನಟ ಸಂಚಾರಿ ವಿಜಯ್ |
ಇಂದು ರಾಷ್ಟ್ರ ಪ್ರಶಸ್ತಿ ಗಳಿಸಿರುವ ಸಂಚಾರಿ ವಿಜಯ್ ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದವರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಎಂಬ ಗ್ರಾಮದವರಾದ ವಿಜಯ್ ಕಲಾಸಕ್ತಿ ತುಂಬಿದ ಕುಟುಂಬದಲ್ಲಿ ಬೆಳೆದವರು. ತಾಯಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರೆ ತಂದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಕಂಪ್ಯೂಟರ್ ಸೈನ್ಸ್ ಶಿಕ್ಷಣಕ್ಕೆಂದು ಬೆಂಗಳೂರು ದಾರಿ ಹಿಡಿದ ಅವರನ್ನು ಕಲೆಯ ಆಕರ್ಷಣೆ ಬಿಡಲಿಲ್ಲ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ವಿಜಯ್‌ಗೆ, ನೀನು ಇರಬೇಕಾದ ಜಾಗ ಇದಲ್ಲ ಎಂದು ರಂಗಭೂಮಿಯತ್ತ ಕರೆದುಕೊಂಡು ಹೋದ ಗೆಳೆಯ ರಂಗಪ್ಪ, ಅಲ್ಲಿ ಮಧುಸೂದನ್ ಎಂಬುವವರನ್ನು ಪರಿಚಯಿಸಿದರು.ಅವರಿಂದ ಕೇಶ್ರೀ ಅವರ ಪರಿಚಯ ಉಂಟಾಯಿತು.
ದರ್ಪಣ ತಂಡದ ಮೂಲಕ "ಸಾವು ಧ್ಯೇಯಕಿಲ್ಲ" ಎಂಬ ನಾಟಕದಲ್ಲಿ ಸೈನಿಕನ ಪಾತ್ರದಿಂದ ರಂಗಭೂಮಿಗೆ ಕಾಲಿಟ್ಟ ವಿಜಯ್ ನಂತರ ವಿವಿಧ ಪಾತ್ರಗಳಲ್ಲಿ ಪರಿಪಕ್ವಗೊಳ್ಳುತ್ತ ಬಂದರು. ಮುಂದೆ ಖ್ಯಾತ ನಿರ್ದೇಶಕರುಗಳಾದ ಮಾಲತೇಶ್ ಬಡಿಗೇರ್ , ಛಾಯಾ ಭಾರ್ಗವಿ ,ಮಂಜುನಾಥ ಬಡಿಗೇರ್ ,ಎಂ.ಸಿ.ಆನಂದ್ ,ಎಸ್. ಆನಂದ್ ,ಜೋಸೆಫ್ ಜಾನ್ ,ಮಹೇಶ್ ಪಲ್ಲಕ್ಕಿ ರವರಂತಹರೊಂದಿಗೆ ಅನುಭವವನ್ನು ಪಡೆದುಕೊಳ್ಳುತ್ತ 'ಸಂಚಾರಿಯ'ತ್ತ ಸಾಗಿದ ವಿಜಯ್ ಹೆಸರಾಂತ ನಿರ್ದೇಶಕಿ ಮಂಗಳ.ಎನ್ ರವರ ಗರಡಿಯಲ್ಲಿ ಅರಹಂತ ನಾಟಕದ ಖಾರವೆಲನಾಗಿ ಮುಖ್ಯ ಪಾತ್ರದಲ್ಲಿ ಗುರುತಿಸಿಕೊಂಡರು. ಅದಾದನಂತರ ವಿವಿಧ ಪಾತ್ರಗಳಿಗೆ ಜೀವ ತುಂಬುತ್ತಾ ಬಂದ ವಿಜಯ್ ಹೊಸ ಹೊಸ ಪ್ರಯತ್ನಗಳಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತ ಸಾಗುತ್ತಿರುವಾಗ ವಿಜಯ್ ರವರ ಪ್ರತಿಭೆಗೆ ಇನ್ನಷ್ಟು ಮೆರಗುಕೊಡಲು ಮಂಗಳ.ಎನ್ ರವರು ನಿರ್ದೇಶಕನಾಗುವ ಅವಕಾಶವನ್ನು 'ಪಿನೋಕಿಯೊ' ಎಂಬ ನಾಟಕದ ಮೂಲಕ ಕಲ್ಪಿಸಿದರು. ಕೊಟ್ಟ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ವಿಜಯ್ ವಿಸ್ಮಯಕಾರಿಯಾಗಿ ಪಿನೋಕಿಯೊ ವನ್ನು ರಂಗದ ಮೇಲೆ ತಂದರು. ಹೀಗೆ ಸಂಚಾರಿ ಥಿಯೇಟರ್ ನಲ್ಲಿ ಬೆಳೆದು ಬಂದ ವಿಜಯ್ ,"ಸಂಚಾರಿ ವಿಜಯ್" ಆಗಿ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ತನ್ನ ಬಾಲ್ಯದಿಂದಲೇ ಬಳುವಳಿಯಾಗಿ ಬಂದ ಕಲೆಯನ್ನು ಸತತವಾಗಿ ಪೋಷಿಸಿಕೊಂಡು ಬಂದ ವಿಜಯ್ ಡಿ ಡಿ 9 (ಚಂದನ) ದಲ್ಲಿ 'ನಗು ನಗುತಾ ನಲಿ' ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದಿನ ದಿನಗಳಲ್ಲಿ ಶ್ರೀನಗರ ಚಂದ್ರು ರವರ ನಿರ್ದೇಶನದ 'ಹೊಸ ಬಾಳಿಗೆ ನೀ ಜೊತೆಯಾದೆ', ಪೃಥ್ವಿ ಕುಲಕರ್ಣಿ ರವರ ನಿರ್ದೇಶನದ 'ಪಾರ್ವತಿ ಪರಮೇಶ್ವರ', 'ಪಾಂಡುರಂಗ ವಿಠಲ', ಪಂಚರಂಗಿ ಪೊಂ ಪೊಂ', ಗುರುರವರ ನಿರ್ದೇಶನದ 'ರೌರವ', ಸೇತುರಾಮ್ ರವರ ನಿರ್ದೇಶನದ 'ಅನಾವರಣ'ದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು.
ಮಂಜುನಾಥ್ ಮನ್ಸೂರ್ ಮತ್ತು ಸಂತೋಷ್ ಕೊಡೆನ್ಕೆರಿ ನಿರ್ದೇಶನದ 'ಹರಿವು', ಬಿ.ಸುರೇಶ್ ರವರ 'ಕವಲೊಡೆದ ದಾರಿ', ಅರವಿಂದ್ ಕುಪ್ಲಿಕರ್ ನಿರ್ದೇಶನದ ಟಿಕೆಟ್, Kಶ್ರೀ ರವರ ನಿರ್ದೇಶನದ 'ನೀವು ಸರದಿಯಲ್ಲಿದ್ದೀರಿ', ಗುರು ನಿರ್ದೇಶನದ 'ಮರ್ಡರ್', ಎಂಬ ಕಿರುಚಿತ್ರಗಳಲ್ಲಿ ನಟಿಸಿದ ವಿಜಯ್ ಎಂ.ಎಲ್.ಪ್ರಸನ್ನ ರವರ ನಿರ್ದೇಶನದ 'ರಂಗಪ್ಪ ಹೋಗ್ಬಿಟ್ನ', ರಘು ರಾಜ್ ರವರ ನಿರ್ದೇಶನದ 'ರಾಮ ರಾಮ ರಘುರಾಮ', ಎಂ.ಎಸ್.ರಮೇಶ್ ರವರ ನಿರ್ದೇಶನದ 'ವಿಲನ್' ಮತ್ತು 'ದಾಸ್ವಾಳ', ಪ್ರಕಾಶ್ ರಾಜ್/ರೈ ಅಭಿನಯಿಸಿ ನಿರ್ದೇಶಿಸುತ್ತಿರುವ ಮೂರು ಭಾಷೆಯ 'ಒಗ್ಗರಣೆ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ
ವಿಜಯ್, ಸಂಚಾರಿ ವಿಜಯ್ ಆದದ್ದೇಕೆ?
ರಂಗಾಯಣ ರಘು ಅವರ ಪತ್ನಿ ಎನ್.ಮಂಗಳ ಅವರ ಸಂಚಾರಿ ಥೀಯೇಟರ್ ತಂಡದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡು ಬಂದ ವಿಜಯ್'ಹೆಸರಿನ ಮುಂದೆ ಸಂಚಾರಿ ಎಂಬ ಪದವೂ ಅಂಟಿಕೊಂಡು ಇಂದು “ಸಂಚಾರಿ ವಿಜಯ್” ಆಗಿ ನಮ್ಮೆದುರಿಗಿದ್ದಾರೆ.
ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ
೧೯೬೭ರಿಂದ ಪ್ರಾರಂಭವಾದ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಇದುವರೆಗೂ ಇಬ್ಬರು ಕನ್ನಡಿಗರಿಗೆ ಲಭಿಸಿತ್ತು. ೧೯೭೫ರಲ್ಲಿ ಎಂ.ವಿ. ವಾಸುದೇವ ರಾವ್ (ಚೋಮನ ದುಡಿಯಲ್ಲಿನ ಚೋಮನ ಪಾತ್ರ), ೧೯೮೬ರಲ್ಲಿ ಚಾರುಹಸನ್ (ತಬರನ ಕತೆಯ ತಬರ ಶೆಟ್ಟಿಯ ಪಾತ್ರ) ಈ ಗೌರವಕ್ಕೆ ಪಾತ್ರರಾಗಿದ್ದರು.
ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ
೧೯೬೭ರಿಂದ ಪ್ರಾರಂಭವಾದ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಗೆ ಇದುವರೆಗೂ ಮೂವರು ಕನ್ನಡಿಗರು ಭಾಜನರಾಗಿದ್ದರು.೧೯೭೩ರಲ್ಲಿ ನಂದಿನಿ ಭಕ್ತವತ್ಸಲ (ಕಾಡುವಿನಲ್ಲಿನ ಕಮಲಿ ಪಾತ್ರ), ೨೦೦೪ರಲ್ಲಿ ತಾರಾ (ಹಸೀನಾ ಚಿತ್ರದಲ್ಲಿನ ಹಸೀನಾ ಪಾತ್ರ) ಹಾಗೂ ೨೦೦೭ರಲ್ಲಿ ಉಮಾಶ್ರೀ (ಗುಲಾಬಿ ಟಾಕೀಸ್ ನಲ್ಲಿನ ಗುಲಾಬಿ ಪಾತ್ರ) ಈ ಉನ್ನತ ಪುರಸ್ಕಾರಕ್ಕೆ ಪಾತ್ರರಾಗಿದ್ದರು.
No comments:
Post a Comment