ಹಿರಿಯ ಪತ್ರಕರ್ತ ಹಾಗೂ ಔಟ್ ಲುಕ್ ವಾರಪತ್ರಿಕೆ ಸಮೂಹ ಸಂಸ್ಥೆ ಸ್ಥಾಪಕ ಅಧ್ಯಕ್ಷ ವಿನೋದ್ ಮೆಹ್ತಾ ಅವರು ಭಾನುವಾರ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಾವಲ್ಪಿಂಡಿ(ಪಾಕಿಸ್ತಾನ)ಯಲ್ಲಿ ಫೆ.1, 1942ರಂದು ಜನಿಸಿದ ಮೆಹ್ತಾ ಅವರು ಔಟ್ ಲುಕ್ ಮ್ಯಾಗಜೀನ್ ನ ಸ್ಥಾಪಕ, ಸಂಪಾದಕರಾಗಿ ಹಾಗೂ ಮುಖ್ಯಸ್ಥರಾಗಿ 2012ರ ತನಕ ಕಾರ್ಯನಿರ್ವಹಿಸಿದರು.ದಿ ಇಂಡಿಪೆಂಡೆಂಟ್, ಡಬೋನೇರ್, ಸಂಡೇ ಅಬ್ಸರ್ವರ್, ಪಯನಿಯರ್, ಇಂಡಿಯನ್ ಪೋಸ್ಟ್ ಸೇರಿದಂತೆ ದೇಶದ ಪ್ರತಿಷ್ಠಿತ ದಿನಪತ್ರಿಕೆ ಮತ್ತು ವಾರಪತ್ರಿಕೆಗಳ ಸಂಪಾದಕರಾಗಿದ್ದ ವಿನೋದ್ ಮೆಹ್ತಾ ಹಿಂದಿ ಚಿತ್ರರಂಗದ ಪ್ರಬುದ್ಧ ನಟಿ ಮೀನಾಕುಮಾರಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುತ್ರ ಸಂಜಯ್‌ಗಾಂಧಿ ಅವರ ಜೀವನಚರಿತ್ರೆಯ ಪುಸ್ತಕ ಬರೆದು ಜನಪ್ರಿಯರಾಗಿದ್ದರು.
ದೇಶದ ಪ್ರಚಲಿತ ವಿದ್ಯಮಾನಗಳು, ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳ ಕುರಿತು ಮೆಹ್ತಾ ಅವರು ಖಡಕ್ ಆಗಿ ತಮ್ಮ ವಾದ ಮಂಡಿಸುತ್ತಿದ್ದರು.ದೇಶದ ಅನೇಕ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಉತ್ತಮ ಒಡನಾಟ ಹೊಂದಿದ್ದ ಮೆಹ್ತಾ ಅವರು ಮಾಧ್ಯಮ ಜಗತ್ತಿನ ದಿಗ್ಗಜರಲ್ಲಿ ಒಬ್ಬರಾಗಿ ಸದಾ ಕಾಲ ಸ್ಮರಿಸಲ್ಪಡುತ್ತಾರೆ.
ದಿನಾಂಕ ೦೫-೦೭-೨೦೧೪ರಂದು ಕನ್ನಡದ ಖ್ಯಾತ ಪತ್ರಿಕೆ ಪ್ರಜಾ ವಾಣಿಯಲ್ಲಿ ಪ್ರಕಟವಾದಾ ಅವರ ಲೇಖನವಿದು ಮೆಹ್ತಾ ನಿಧನದ ಈ ಸಮಯದಲ್ಲಿ ಅವರ ಈ ಲೇಖನವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆ ಹಿರಿಯ ಚೇತನಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು ಹಾರೈಸೋಣ.
***
Vinod Mehtha - February 01 - 1942 - March 08 - 2015 |
ಪ್ರಬಲ ನಾಯಕನ ಸುತ್ತ ಆಸೆಗಳು, ಭಯಗಳು
ನರೇಂದ್ರಮೋದಿ ಬಹಳ ಅದ್ದೂರಿಯಾಗಿ ಪ್ರಧಾನಿ ಪದವಿಯನ್ನು ಗೆದ್ದುಕೊಂಡಿದ್ದಾರೆ. ಅವರು ಇಷ್ಟೊಂದು ಭವ್ಯವಾಗಿ ಗೆದ್ದುಕೊಳ್ಳಲು ಸಾಧ್ಯವಾದದ್ದು ಜನರು ಅವರನ್ನು ಮನಮೋಹನ್ ಸಿಂಗ್ ಅವರಂತಲ್ಲದ ‘ಬಲಿಷ್ಠ ನಾಯಕ’ ಎಂದು ಭಾವಿಸಿದ್ದರಿಂದ.
ದೇಶಕ್ಕೆ ಈಗ ದೃಢ ನಿಶ್ಚಯವುಳ್ಳ ನಾಯಕತ್ವ ಬೇಕಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಇಂಥ ಅತೀ ಪ್ರಬಲ ನಾಯಕರು ಪ್ರಜಾಸತ್ತಾತ್ಮಕ ಮತ್ತು ಕಾನೂನುಬದ್ಧ ಆಡಳಿತಕ್ಕೆ ಅಪಾಯಕಾರಿಯಾಗಿಯೂ ಇರುತ್ತಾರೆ. ಪ್ರಬಲ ನಾಯಕನೊಬ್ಬ ಅಗತ್ಯವಿರುವುದನ್ನು ಮಾಡಿಯೇ ತೀರುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಮೋದಿ ಈ ವಿಷಯದಲ್ಲಿ ಈಗಾಗಲೇ ತಾವೇನು ಎಂಬುದನ್ನು ಸಾಬೀತು ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಅರಾಜಕತೆಯ ವಾತಾವರಣದಲ್ಲಿ ನ್ಯಾನೋ ಕಾರು ತಯಾರಿಕಾ ಘಟಕದ ಯೋಜನೆ ವಿಫಲವಾದಾಗ ರತನ್ ಟಾಟಾ ರಾತ್ರೋರಾತ್ರಿ ಅದನ್ನು ಗುಜರಾತ್ಗೆ ವರ್ಗಾಯಿಸಲು ತೀರ್ಮಾನಿಸಿದರು. ಮೋದಿ ಮೂರು–ನಾಲ್ಕು ದಿನಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬೇಕಿರುವ ಎಲ್ಲಾ ಪರವಾನಿಗೆಗಳನ್ನು ದೊರಕಿಸಿಕೊಂಡು ರತನ್ ಟಾಟಾ ಮೇಜಿನ ಮೇಲಿಟ್ಟರು. ಆದ್ದರಿಂದ ಸಹಜವಾಗಿಯೇ ರತನ್ ಟಾಟಾ ಮೋದಿಯವರ ದೊಡ್ಡ ಬೆಂಬಲಿಗರಲ್ಲಿ ಒಬ್ಬರಾದರು.
ಕಾಂಗ್ರೆಸ್ಸನ್ನು ಹೀನಾಯವಾಗಿ ಸೋಲಿಸಿರುವ ಮತದಾರರಿಗೆ ನರೇಂದ್ರ ಮೋದಿಯವರ ಗುಜರಾತ್ ಅಭಿವೃದ್ಧಿ ಮಾದರಿ ಮನಸ್ಸಿಗೆ ನಾಟಿದೆ.
ಆದರೆ ಈ ಅಭಿವೃದ್ಧಿಯನ್ನು ಸಾಧಿಸಿದ್ದು ಹೇಗೆ? ಯಾವ ನಾಯಕನೂ ಬಹಿರಂಗವಾಗಿ ‘ನಾನು ಎಲ್ಲಾ ಪ್ರಜಾಸತ್ತಾತ್ಮಕ ನೀತಿಗಳನ್ನು ಬದಿಗಿರಿಸಿ ದಿಢೀರ್ ಫಲಿತಾಂಶಗಳನ್ನು ನೀಡುತ್ತೇನೆ’ ಎಂದು ಹೇಳುವುದಿಲ್ಲ. ಆತ ಆರಂಭದಲ್ಲಿ ನಿಯಮಗಳನ್ನು ಅಕ್ಷರಶಃ ಪಾಲಿಸುವವನಂತೆ ನಟಿಸುತ್ತಾನೆ. ಕಾನೂನಿನ ಪರಿಧಿಯೊಳಗೇ ತನ್ನ ಕಾರ್ಯಸೂಚಿಯನ್ನು ಜಾರಿಗೆ ತರುವ ಭರವಸೆಗಳನ್ನು ನೀಡುತ್ತಾನೆ.
ಭಾರೀ ಜನಾದೇಶವನ್ನು ಪಡೆದಿರುವ ಮೋದಿ, ನಿಯಮಗಳನ್ನು ಬದಿಗಿರಿಸಿ ಮುಂದುವರಿಯುವ ಅಡ್ಡದಾರಿಗಳನ್ನು ಅವಲಂಬಿಸುವ ಪ್ರಲೋಭನೆಗೆ ಒಳಗಾಗಬಹುದು. ಹೀಗೆ ಮಾಡಿದ ಮೇಲೆ ‘ಕೆಲವು ನಿಯಮಗಳನ್ನು ಮುರಿದರೆ ಅದರಲ್ಲಿ ತಪ್ಪೇನೂ ಇಲ್ಲ.
ಕಾರ್ಯಸಾಧನೆಯಲ್ಲಿ ನಾನು ಚತುರ ಎಂಬ ಕಾರಣಕ್ಕಾಗಿ ನನಗೆ ಜನಾದೇಶ ದೊರೆತಿದೆ. ನೀವು ನನ್ನ ಕೆಲಸ ನೋಡಿ. ಅದನ್ನು ಹೇಗೆ ಮಾಡಿದೆ ಎಂಬ ಅನಗತ್ಯ ಪ್ರಶ್ನೆಗಳನ್ನು ಕೇಳಬೇಡಿ’ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳಲೂಬಹುದು.
ಇದನ್ನೆಲ್ಲಾ ಸಾರ್ವಜನಿಕರ ಸಮ್ಮತಿಯೊಂದಿಗೇ ಮಾಡಬಹುದು ಎಂಬುದು ಈ ಸನ್ನಿವೇಶದ ಭೀತಿದಾಯಕ ಆಯಾಮ. ಅಂದರೆ ಮೋದಿಯವರನ್ನು ಪ್ರಧಾನಿ ಪದವಿಗೆ ಏರಿಸಿದ ಮತದಾರರು ಆತ ಮಾಡಬಹುದಾದ ಈ ಬಗೆಯ ತಪ್ಪುಗಳನ್ನು ಕಡೆಗಣಿಸುವುದಕ್ಕೂ ಸಿದ್ಧರಾಗಿದ್ದಾರೆ. ನಿಯಮೋಲ್ಲಂಘನೆಗೆ ರಾಷ್ಟ್ರೀಯ ಹಿತಾಸಕ್ತಿಯ ಲೇಪವಿರುವಾಗ ಇದು ಸುಲಭವೂ ಹೌದು. ಇದು ಮತ್ತೆ ನಮ್ಮನ್ನು ಗುರಿ ಮತ್ತು ಮಾರ್ಗದ ಹಳೆಯ ಪ್ರಶ್ನೆಗೇ ತಂದು ನಿಲ್ಲಿಸುತ್ತದೆ. ಗುರಿ ಬಹಳ ಮುಖ್ಯ–ಹೌದು ಅದು ಮುಖ್ಯವೇ, ಅದನ್ನು ಯಾರು ನಿರಾಕರಿಸುತ್ತಾರೆ–ಆದ್ದರಿಂದ ಅದನ್ನು ಸಾಧಿಸುವ ಮಾರ್ಗದ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳಬೇಡಿ ಎಂಬ ತರ್ಕದೊಂದಿಗೆ ಎಲ್ಲವೂ ಆರಂಭವಾಗುತ್ತದೆ.
ರಾಷ್ಟ್ರೀಯ ಸಮ್ಮತಿಯೊಂದಿದೆ ಎಂದಾದಾಗ, ಮೋದಿ ಕಾನೂನುಗಳನ್ನು ಮೀರುವಾಗ, ಅದನ್ನು ಪ್ರಶ್ನಿಸಬೇಕಾದ ಪೌರ ಮತ್ತೆಲ್ಲೋ ನೋಡುತ್ತಾ ಅದನ್ನು ನಿರ್ಲಕ್ಷಿಸಿಬಿಡುತ್ತಾನೆ. ಕಾರಣ ಆತನಿಗೂ ಮೋದಿಯವರಂತೆ ಮಾರ್ಗಕ್ಕಿಂತ ಗುರಿಯೇ ಮುಖ್ಯ. ಕೆಲವು ಸಾವಿರ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂದಿದ್ದರೆ ಅವರನ್ನೊಂದು ಲಾರಿಯಲ್ಲಿ ತುಂಬಿಸಿ ದೂರ ಕೊಂಡೊಯ್ಯುವುದರಲ್ಲಿ ತಪ್ಪಿಲ್ಲ. ಅವರಿಗೆ ತಿನ್ನಲೊಂದಿಷ್ಟು ಆಹಾರ ಮತ್ತು ಸ್ವಲ್ಪ ಪರಿಹಾರವನ್ನು ಕೊಟ್ಟರೆ ಸಾಕು ಎಂಬ ನಿಲುವಿಗೆ ಪೌರನೂ ಬಂದುಬಿಟ್ಟಿರುತ್ತಾನೆ.
ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಬಹಳ ಜಾಗರೂಕತೆಯಿಂದ ಕಾಪಾಡಬೇಕು. ಪ್ರಧಾನಿ ಪದವಿಯಲ್ಲಿರುವ ಮೋದಿಯವರಿಗೆ ಬೇಕಿರುವುದು ತನ್ನ ಕಾರ್ಯಸಾಧನೆಗೆ ಅಗತ್ಯವಿರುವ ಅವಕಾಶ ಮಾತ್ರ. ಆದರೆ ದೇಶ ನಿರಂತರವಾಗಿ ಅಧಿಕಾರಕ್ಕಿರುವ ಲಕ್ಷ್ಮಣರೇಖೆಯನ್ನು ಮೋದಿಯವರಿಗೆ ನೆನಪಿಸುತ್ತಿರಬೇಕು.
ಗುಜರಾತ್‌ನಲ್ಲಿ ಈಗಾಗಲೇ ಸ್ವಜನಪಕ್ಷಪಾತದ ಬಂಡವಾಳಶಾಹಿ ಮಿತಿಮೀರಿದೆ. ಈ ಕುರಿತಂತೆ ದೇಶ ಎಚ್ಚರದಿಂದ ಇರಬೇಕು. ಎಲ್ಲಾ ಬಗೆಯ ಶೋಷಣೆ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವಿರುವ ದೇಶದ ಖನಿಜ ಸಂಪತ್ತಿನ ವಿಚಾರದಲ್ಲೂ ಇದೇ ಎಚ್ಚರವಿರಬೇಕು.
ಈ ಖನಿಜ ಸಂಗ್ರಹವಿರುವ ಭೂಮಿಯ ಮೇಲೆ ನಮ್ಮ ದೇಶದ ಬಡವರು ವಾಸಿಸುತ್ತಿದ್ದಾರೆ. ಖನಿಜಗಳನ್ನು ಹೊರತೆಗೆದು ಬಳಸುವುದಕ್ಕೆ ಅಲ್ಲಿ ಬದುಕುತ್ತಿರುವ ಹತ್ತಾರು ಸಾವಿರ ಪೌರರನ್ನು ನಿರ್ವಸಿತರನ್ನಾಗಿಸಬೇಕಾಗುತ್ತದೆ. ಪರಿಹಾರದ ವ್ಯವಸ್ಥೆಯೊಂದನ್ನು ರೂಪಿಸಿರುವುದರಿಂದ ಖನಿಜಯುಕ್ತ ಭೂಮಿಯ ಸ್ವಾಧೀನ ಕಾನೂನುಬದ್ಧ. ಜೊತೆಗೆ ನಾಗರಿಕ ಸಮಾಜವೂ ಸಾಕಷ್ಟು ಎಚ್ಚರದಿಂದ ಇರುವುದರಿಂದ ನಿರ್ವಸಿತರಾಗುವವರಿಗೆ ಸಲ್ಲಬೇಕಾದುದರಲ್ಲಿ ಶೇಕಡಾ 70ರಿಂದ 75ರಷ್ಟಾದರೂ ದೊರೆಯುತ್ತಿದೆ. ಒಂದೆರಡು ಪ್ರಕರಣಗಳಲ್ಲಿ ಸ್ಥಳೀಯರು ‘ನೀವೆಷ್ಟು ಹಣ ಕೊಡುತ್ತೀರಿ ಎಂಬುದು ನಮಗೆ ಮುಖ್ಯವಲ್ಲ. ನಾವು ಭೂಮಿ ಬಿಟ್ಟುಕೊಡುವುದಿಲ್ಲ’ ಎಂದಿದ್ದಾರೆ. ಇಂಥಲ್ಲಿ ಸರ್ಕಾರ ತಲೆಬಾಗಿ ಜನರ ಮಾತನ್ನು ಒಪ್ಪಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ಮೋದಿ ಏನು ಮಾಡುತ್ತಾರೆ?
ವಾಸ್ತವದಲ್ಲಿ ಇದು ಹೇಗೆ ಸಂಭವಿಸುತ್ತದೆ ಎಂಬುದನ್ನು ನಾನು ಹೇಳಲಾರೆ. ಆದರೆ ಪ್ರಬಲ ನಾಯಕನೊಬ್ಬ ನ್ಯಾಯಬದ್ಧ ಪರಿಹಾರವನ್ನು ಕೊಡದೆಯೇ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದರಲ್ಲಿ ರಾಷ್ಟ್ರೀಯ ಹಿತಾಸಕ್ತಿಯಿದೆ ಮತ್ತು ಅವರಿಗೆ ನ್ಯಾಯಬದ್ಧ ಪರಿಹಾರ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಬಲ್ಲ. ಉತ್ತಮ ಆಡಳಿತ, ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮತ್ತು ಶೀಘ್ರಗತಿಯ ಅನುಷ್ಠಾನಗಳು ಒಂದಕ್ಕೊಂದು ಹೊಂದಿಕೊಳ್ಳುವುದಿಲ್ಲ ಎಂದು ನನಗನ್ನಿಸಿಲ್ಲ. ಪ್ರಬಲ ನಾಗರಿಕ ಸಮಾಜ ಮತ್ತು ಪ್ರಜಾಪ್ರಭುತ್ವಗಳು ಪ್ರಗತಿಗೆ ಅಡ್ಡಿ ಎಂದು ನಂಬುವ ಪ್ರಬಲ ಚಿಂತನಾ ವಿಧಾನವೊಂದಿದೆ. ಯಶಸ್ವೀ ಪ್ರಧಾನಿಗೆ ವ್ಯವಸ್ಥೆಯನ್ನು ಹೇಗೆ ದುಡಿಸಿಕೊಳ್ಳಬೇಕು ಎಂಬುದರ ಅರಿವಿರಬೇಕು. ಅದೃಷ್ಟವಶಾತ್ ನರೇಂದ್ರ ಮೋದಿ ಅವರಿಗೆ ವ್ಯವಸ್ಥೆಯೊಳಗೇ ತನಗೆ ಬೇಕಿರುವುದನ್ನು ಸಾಧಿಸುವುದಕ್ಕೆ ಅಗತ್ಯವಿರುವ ಚಾತುರ್ಯವಿದೆ. ಆದರೆ ಇದು ನಿಧಾನಗತಿಯಲ್ಲಿ ನಡೆಯುವ ಕ್ರಿಯೆ ಎಂಬುದೂ ಅವರಿಗೆ ಗೊತ್ತಿದೆ.
ಶೀಘ್ರಗತಿಯಲ್ಲಿ ಕೆಲಸ ಮಾಡುವ ಪ್ರಸಿದ್ಧಿಯೊಂದಿಗೆ ಪ್ರಧಾನಿ ಪದವಿಗೆ ಏರಿರುವ ಮೋದಿಯವರಿಗೆ ಈ ಪ್ರಸಿದ್ಧಿಯನ್ನು ಉಳಿಸಿಕೊಳ್ಳಬೇಕೆಂಬ ಆಸೆಯೂ ಇರಬಹುದು. ವ್ಯವಸ್ಥೆಯೊಳಗೆಯೇ ತನಗೆ ಬೇಕಿರುವ ಕೆಲಸ ಮಾಡಿಸಿಕೊಳ್ಳಲು ಅವರಿಗೆ ಗೊತ್ತಿದೆ. ಇಂಥವರಿಗೆ ವ್ಯವಸ್ಥೆಯನ್ನು ಮೀರಿದರೆ ಆ ಕೆಲಸಗಳನ್ನು ಶೀಘ್ರಗತಿಯಲ್ಲಿ ಮಾಡಬಹುದು ಎಂಬುದೂ ತಿಳಿದಿರುತ್ತದೆ. ಇದೇ ಇಲ್ಲಿರುವ ಅಪಾಯ. ಹೊಸ ಪ್ರಧಾನಿ ಯಾವ ಹಾದಿಯನ್ನು ಆರಿಸಿಕೊಳ್ಳುತ್ತಾರೆ?
ತಮ್ಮ ಭಾಷಣಗಳಲ್ಲಿ ಮತ್ತೆ ಮತ್ತೆ ನನಗೆ ‘ಒಂದು ಅವಕಾಶ ಕೊಡಿ’ ಎಂದು ಮೋದಿ ಮತದಾರರನ್ನು ವಿನಂತಿಸಿದ್ದಾರೆ. ಮತದಾರರೀಗ ಅವರಿಗೂ ಒಂದು ಅವಕಾಶ ಕೊಟ್ಟಿದ್ದಾರೆ. ಮೋದಿ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇದನ್ನವರು ಜಾಣತನದಿಂದ ಬಳಸುತ್ತಾರೆಂದು ಭಾವಿಸೋಣ. ಅವರ ಟೀಕಾಕಾರರೂ ಅವರಿಗೆ ಶುಭವನ್ನೇ ಹಾರೈಸುತ್ತಾರೆ.
No comments:
Post a Comment