ನಾಗೇಶ್ವರ/ಜಗೇಶ್ವರ (Nageswar/Jageswar)
ಯಾತ್ರಾಸ್ಟಳಗಳ ತವರೂರಾದ ಉತ್ತರಾಖಂಡದ ಅಲ್ಮೋಡಾ ಜಿಲ್ಲೆಯಲ್ಲಿರುವ ನಾಗೇಶ್ವರ ಅಥವಾ ಜಗೇಶ್ವರ ದೇವಾಲಯವು ಬಹು ಪುರಾತನವೂ, ಪ್ರಸಿದ್ದವೂ ಆದದ್ದು. ಭಾರತದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದೆನಿಸಿರುವ ಈ ಸ್ಥಳವು ಭಕ್ತರ ಪಾಲಿಗೆ ಪವಿತ್ರ ಸ್ಥಳವೆನಿಸಿದೆ. ಇದು ಒಂದು ದೇವಾಲಯವಾಗಿರದೆ ಸುಮಾರು 125 ಸಣ್ಣ ಪುಟ್ಟ ದೇವಾಲಯಗಳ ಸಮೂಹವಾಗಿದೆ. ದಟ್ಟ ಕಾನನದ ನಡುವೆ ಇರುವ ಈ ಸುಂದರ ಪ್ರದೇಶದ ಪಕ್ಕದಲ್ಲಿಯೇ ಜಟಗಂಗಾ ನದಿ ಹರಿಯುತ್ತದೆ. ಜಿಲ್ಲಾ ಕೇಂದ್ರ ಅಲ್ಮೋಡಾದಿಂದ 55 ಕಿ.ಮೀ. ದೂರದಲ್ಲಿರುವ, ಸಮುದ್ರ ಮಟ್ಟದಿಂದ ಸುಮಾರು 6150 ಅಡಿ ಎತ್ತರದಲ್ಲಿರುವ ಈ ಪ್ರದೇಶಕ್ಕೆ ದೇಶಾದ್ಯಂತದಿಂದ ಪ್ರವಾಸಿಗರು ಆಗಮಿಸುತ್ತಾರೆ.
Nageshwara/Jageshwara Jyotirlinga, Almora |
***
ದಾರುಕನೆಂಬ ರಕ್ಕಸನು ಸುಪ್ರಿಯ ಎಂಬ ಶಿವಭಕ್ತನೋರ್ವನನ್ನು ಬಂಧಿಸಿ ತನ್ನ ರಾಜಧಾನಿ ದಾರುಕಾವನದಲ್ಲಿರಿಸಿದ್ದನು. ಆ ದಾರುಕಾವನವು ದೇವದಾರು ವೃಕ್ಷಗಳಿಂದಾವೃತವಾಗಿದ್ದು ಅನೇಕ ಬಗೆಯ ಸರ್ಪಗಳೂ ಅಲ್ಲಿ ನೆಲೆಸಿದ್ದವು. ಅಲ್ಲಿನ ನಾಯಕನನ್ನು ಸರ್ಪಗಳ ರಾಜನೆಂದೂ ಕರೆಯುತ್ತಿದ್ದರು. ಸುಪ್ರಿಯನು ತಾನು ಬಂಧಿಯಾದ ಬಳಿಕ ಅಲ್ಲಿದ್ದ ಎಲ್ಲಾ ಖೈದಿಗಳನ್ನು ಹುರಿದುಂಬಿಸಿ ಶಿವ ನಾಮ ಸ್ಮರಣೆ ಮಾಡುವಂತೆ ಪ್ರೇರೇಪಿಸಿದನು. ಹಾಗೆ ಎಲ್ಲರೂ ಒಟ್ಟಾಗಿ ಶಿವ ಸ್ತುತಿ ಮಾಡಲು ಪರಮೇಶ್ವರನು ಸಂತೃಪ್ತನಾಗಿ ದಾರುಕನನ್ನು ಸಂಹಾರ ಮಾಡಿದನು. ಸುಪ್ರಿಯ ಮತ್ತಿತರೇ ಭಕ್ತರನ್ನು ಬಂಧನದಿಂದ ಬಿಡಿಸಿದರು. ಅವರೆಲ್ಲರೂ ಪರಮೇಶ್ವರನನ್ನು ಅಲ್ಲಿಯೇ ನೆಲೆಸುವಂತೆ ಬೇಡಿಕೊಂಡರು. ಅವರ ಆಶಯದಂತೆಯೇ ಈಶ್ವರನು ಅಲ್ಲಿ ಸರ್ಪಗಳ ರಾಜನಾಗಿ “ನಾಗೇಶ” ಎನ್ನುವ ಹೆಸರಿನಿಂದ ನೆಲೆಸಿದನು.
***
Nageshwara/Jageshwara Jyotirlinga temple, Almora |
ಶಿವನ ಧರ್ಮಪತ್ನಿಯಾದ ಸತೀ ದೇವಿಯು ದಕ್ಷರಾಜನ ಯಾಗದ ಸಮಯದಲ್ಲಿ ಸುಟ್ಟು ಬೂದಿಯಾದಾಗ ಶಿವನು ತನ್ನ ಪತ್ನಿಯ ಅಗಲಿಕೆಯಿಂದ ಹುಚ್ಚನಂತಾಗುತ್ತಾನೆ. ಆಗ ಪರಮೇಶ್ವರನು ಎಲ್ಲೆಲ್ಲೋ ಸುತ್ತತೊಡಗಿದ್ದನು. ಅದಾಗ ದಾರುಕಾವನದಲ್ಲಿಯೂ ಸುತ್ತುತ್ತಿದ್ದಾಗ ಅವನ ಬಟ್ಟೆ ಎಲ್ಲವೂ ಹರಿದು ಹೋಗಿ ಬೆತ್ತಲಾಗಿ ಬಿಟ್ಟಿದ್ದ. ಹಾಗೆ ಬೆತ್ತಲಾಗಿ ಹುಚ್ಚನಂತಿದ್ದ ಪರಮೇಶ್ವರನನ್ನು ನೋಡಿ ದಾರುಕಾವನದಲ್ಲಿ ಆಶ್ರಮ ಕಟ್ಟಿಕೊಂಡು ತಪಸ್ಸಾಚರಿಸುತ್ತಿದ್ದ ಋಷಿಮುನಿಗಳ ಧರ್ಮ ಪತ್ನಿಯರೆಲ್ಲಾ ಹೆದರಿ ಓಡಿದರು. ಹಾಗೇ ತಮ್ಮ ತಮ್ಮ ಪತಿಗಳಿಗೆ ಈ ವಿಚಾರವನ್ನು ತಿಳಿಸಿದರು. ಅದನ್ನು ಕೇಳಿ ಆ ಋಷಿಮುನಿಗಳು ಪರಮೇಶ್ವರನನ್ನು “ನಿನ್ನ ಲಿಂಗವು ಎಲ್ಲಾ ಕಡೆ ಚದುರಿದಂತೆ ಬಿದ್ದು ಹೋಗಲಿ!” ಎಂದು ಶಪಿಸಿದರು. ಆ ಶಾಪವು ಫಲಿಸಿ ಪರಮೇಶ್ವರನ ನೂರಕ್ಕೂ ಹೆಚ್ಚಿನ ಶಿವಲಿಂಗಗಳು ಅಲ್ಲಿ ಸ್ಥಾಪನೆಯಾದವು.
No comments:
Post a Comment